ಸದ್ದು ಗದ್ದಲವಿಲ್ಲದ ಪ್ರೇರಣಾ ಸಾಂಘಿಕ್

ಜಿಲ್ಲೆಗಳು ; ಶಿವಮೊಗ್ಗ - 0 Comment
Issue Date : 12.03.2014

ಮಂಗಳೂರಿನಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ವಿಭಾಗ ಸಾಂಘಿಕ್ ಹೊಸ ವಿಕ್ರಮ ಸಾಧಿಸಿದ್ದು ಇತಿಹಾಸ. ನಿಮ್ಮ ತಾಲೂಕಿನಲ್ಲೂ ಇಂಥ ಪ್ರಯತ್ನ ಯಾಕೆ ಮಾಡಬಾರದು ಎಂದು ಪ್ರಶ್ನೆ ಮಾಡಿದವರು ಹಿರಿಯರು. ಹಿರಿಯರ ಅಪೇಕ್ಷೆಯನ್ನು ಸೂಚನೆ ಎಂದರಿತು ಪಾಲಿಸುವುದು ಸಂಘ ಕಲಿಸಿದ ಪಾಠ. ಆಗಲ್ಲ ಅನ್ನಬಾರದು. ಗರ್ವ ಇರುವವರು, ಛಲ ಇರುವವರು ಯಾಕಾಗಲ್ಲ ಅಂತ ಯೋಚಿಸಬೇಕು ಮತ್ತು ಸವಾಲು ಸ್ವೀಕರಿಸಬೇಕು.
ಬೈಠಕ್ ಸೇರಿದರು. ಗುರಿ ನಿಶ್ಚಯವಾಯಿತು. ವಿಧಿ- ನಿಷೇಧಗಳು ಚರ್ಚೆ ಆದವು. ಕರಪತ್ರ ಬೇಡ. ಜಾಹೀರಾತು ಬೇಡ. ಮೈಕ್ ಅನೌನ್ಸ್‌ಮೆಂಟ್ ಬೇಡ… ಬೇಡಗಳ ಪಟ್ಟಿಯೇ ದೊಡ್ಡದು. ಮನೆ ಮನೆಗಳ ಸಂಪರ್ಕ, ಮನ ಮನಗಳ ಬೆಸುಗೆ ಅದೊಂದೇ ದಾರಿ.

ಸೂರುಜೀ ಬರ್ತಾರೆ!
ಈ ಎರಡೇ ಶಬ್ದಗಳು ಕೆಲಸಕ್ಕೆ ಇನ್ನಷ್ಟು ವೇಗ ನೀಡಿದವು. ಶಿವಮೊಗ್ಗ ವಿಭಾಗದಲ್ಲಿ ಸಂಘ ಬೀಜವನ್ನು ಬಿತ್ತಿ ಬೆಳೆದವರು ಕೃ. ಸೂರ್ಯನಾರಾಯಣರಾಯರು. ಎಂಭತ್ತರ ಆಜುಬಾಜಿನ ವಯಸ್ಸಿನ ಹಿರಿಯ ಕಾರ್ಯಕರ್ತರೆಲ್ಲ ಅವರ ನಿಕಟ ಸಂಪರ್ಕದಲ್ಲಿ ಬೆಳೆದವರು. ನಮಗಿಂತ ಹತ್ತು ಹದಿನೈದು ವರ್ಷ ಹಿರಿಯರು. ಅವರೇ ಬರ್ತಾರೆ ಅಂದಮೇಲೆ ನಮ್ಮದೇನು ಮಹಾ ವಯಸ್ಸು… ಎಂದು ಹಿರಿಯರೂ ಕೆಲಸಕ್ಕೆ ತೊಡಗಿಕೊಂಡರು. ಕಿರಿಯರು ಧುಮುಕಿದರು. ಹಿರಿಯರು ಬಿಲ್ಲು ಆದರೆ ಕಿರಿಯರು ಬಾಣ ಆದರು.

ನಾಲ್ಕೇ ತಿಂಗಳು – ಸವಾಲು ಅನೇಕ…
ತೀರ್ಥಹಳ್ಳಿ ಆಡಳಿತಾತ್ಮಕವಾಗಿ ಒಂದೇ ತಾಲೂಕು. ಆದರೆ ಸಂಘ ತನ್ನ ಅನುಕೂಲಕ್ಕೆ ತಕ್ಕಂತೆ 3 ಭಾಗ ಮಾಡಿದೆ – ತೀರ್ಥಹಳ್ಳಿ, ಕಮ್ಮರಡಿ ಮತ್ತು ಕೋಣಂದೂರು. ಅತಿ ಮಳೆ ಬೀಳುವ ಪ್ರದೇಶ ಇದು. ತೀರ್ಥಹಳ್ಳಿಯ ನಿವಾಸಿಗಳೇ ತಮಾಷೆಯಾಗಿ ಆಡೋದಿದೆ – ನಮ್ಮದು ಚಾತುರ್ಮಾಸ್ಯ ಯೋಜನೆ – ನಾಲ್ಕು ತಿಂಗಳು ಮಳೆ, ನಾಲ್ಕು ತಿಂಗಳು ಅಡಿಕೆ ಬೇಸಾಯ ಮತ್ತು ಕೊಯ್ಲು , ಇನ್ನು ನಾಲ್ಕು ತಿಂಗಳು ಮದುವೆ, ಉಪನಯನ ಮುಂತಾದ ಸಮಾರಂಭಗಳು. ಹಾಸ್ಯಪ್ರಜ್ಞೆಯ ತೀರ್ಥಹಳ್ಳಿಗರು ವಾಸ್ತವವನ್ನೂ ತಮಾಷೆಯಾಗಿಯೇ ಸ್ವೀಕರಿಸುತ್ತಾರೆ.
ಅತಿವೃಷ್ಟಿ ಕಾರಣಕ್ಕೆ ಮರದಲ್ಲಿ ಅಡಿಕೆ ಉಳಿದಿಲ್ಲ. ಉಳಿದಿದ್ದನ್ನು ಕೊಯ್ಯಲು ಆಳುಗಳು ಸಿಗಲ್ಲ. ಆದರೆ ಛಲಬಿಡದ ಸಾಹಸಿಗಳು ತಿಂಗಳನ್ನು ದಿನಗಳಲ್ಲಿ , ದಿನಗಳನ್ನು ಗಂಟೆಗಳಲ್ಲಿ ಭಾಗಿಸಿದರು. ಮನೆಗಿಷ್ಟು, ಸಂಘಕಾರ್ಯಕ್ಕಿಷ್ಟು ಎಂದು ಹಂಚಿದರು. ಕೆಲವರು ಮನೆಯನ್ನೇ ಮರೆತರು.

ಸಂಖ್ಯೆ ಎಷ್ಟಾಗುತ್ತೆ?
1995ರಲ್ಲಿ ಒಂದು ಕಾರ್ಯಕ್ರಮ. ಸಂಖ್ಯೆ ಒಂದು ಸಾವಿರ ದಾಟಿತ್ತು. ಈಗ ಕನಿಷ್ಠ ಮೂರು ಸಾವಿರವಾದರೂ ಆಗಬೇಕು. 7 ಹೋಬಳಿಗಳು, 40 ಮಂಡಲಗಳು. ಎಲ್ಲಾ ಕಡೆಗಳಲ್ಲೂ ತಂಡಗಳು ಸಿದ್ಧವಾದವು. ಬೈಠಕ್‌ಗಳು ನಡೆದವು. ಕಾರ್ಯಯೋಜನೆ, ಕಾರ್ಯಪಡೆ ಸಿದ್ಧವಾಯಿತು.

ಫೆಬ್ರವರಿ 9: ಮೊದಲ ಪರೀಕ್ಷೆ

ಅಂದು ತಾಲೂಕಿನಾದ್ಯಂತ ಮಹಾ ಸಂಪರ್ಕ ಅಭಿಯಾನ. ಬೆಳಗಿನಿಂದಲೇ ಮನೆ – ಮನೆ ಭೇಟಿ, ಶುಲ್ಕ ಸಂಗ್ರಹ. ಸುಮಾರು 250 ಕಾರ್ಯಕರ್ತರು ತಾಲ್ಲೂಕಿನಾದ್ಯಂತ ಓಡಾಡಿದರು. 2,800 ಸ್ವಯಂಸೇವಕರಿಂದ ಶುಲ್ಕ ಸಂಗ್ರಹ. ಮತ್ತೆ ಒಂದೆರಡು ದಿನಗಳಲ್ಲಿ ಇದು 4,500ಕ್ಕೆ ಏರಿತು. ಶುಲ್ಕ ನೀಡಿದವರೆಲ್ಲ ಗಣವೇಷ ಖರೀದಿಸಬೇಕು. ಕಾರ್ಯಕ್ರಮಕ್ಕೆ ಸ್ವಂತ ಖರ್ಚಿನಲ್ಲಿ ಬರಬೇಕು. ಚಲೇ… ಚಲೇ… ಹಮ್ ಸಾಥ್ ಚಲೇ… ನಿಶಿದಿನ ಅವಿರತ ಚಲೇ… ಚಲೇ… ಕಾರ್ಯಕರ್ತರು ನಡೆದೇ ನಡೆದರು.

ನಮಗೇನೂ ಕೆಲಸ ಇಲ್ವಾ?
ಇದು ತಾಯಂದಿರ ಪ್ರಶ್ನೆ. ನಿಮ್ಮ ಮನೆಯ ಗಂಡಸರನ್ನೆಲ್ಲಾ ಗಣವೇಷದಲ್ಲಿ ಹೊರಡಿಸಿ. ಅಷ್ಟೇನಾ..? ತೀವ್ರ ಅಸಮಾಧಾನದ ನಿಟ್ಟುಸಿರು. ಇನ್ನೇನ್ಮಾಡ್ತೀರಾ..? ಬಂದವರಿಗೆಲ್ಲಾ ಊಟ ಬಡಿಸ್ತೀವಿ. ಸಿಹಿ ತಯಾರು ಮಾಡಿ ಹಂಚ್ತೀವಿ. ಸಂಚಲನ ದಾರಿಯಲ್ಲಿ ರಂಗೋಲಿ ಬಿಡಿಸಿ, ಭಗವಾಧ್ವಜಕ್ಕೆ ಹೂವೆರಚಿ ಸ್ವಾಗತ ಮಾಡ್ತೀವಿ. ಮನೆ ಮನೆಗಳಿಂದ ಕೊಬ್ಬರಿ ಮಿಠಾಯಿ ಸಿದ್ಧವಾಗಿ ಬಂದವು. ಉಂಡವರಿಗೆ ಸಂತೃಪ್ತಿ. ಬಡಿಸಿದವರಿಗೆ ಧನ್ಯತೆ. ರಸ್ತೆ ತುಂಬಾ ರಂಗವಲ್ಲಿಗಳು. ಹೆಣ್ಮಕ್ಕಳು ಸೆರಗು ಕಟ್ಟಿ ಓಡಾಡಿ ಸಂಭ್ರಮಿಸಿದರು. ಭಗವಾಧ್ವಜಕ್ಕೆ ಪುಷ್ಪಾರ್ಚನೆ ಮಾಡಿದರು. ಮಗ ಕೃಷ್ಣ ಆದರೆ ತಾಯಿ ಯಶೋದೆ ಆದಳು. ದೇವಕಿ ಆದಳು. ಕೃಷ್ಣನ ಕೈ ಹಿಡಿದ ಅಕ್ಕ ರಾಧೆ ಆದಳು. ಮಗ ಶಿವಾಜಿ ವೇಷ ಧರಿಸಿದ. ತಾಯಿ ಜೀಜಾಬಾಯಿ. ಅದೆಷ್ಟು ವಿವೇಕಾನಂದರು, ಒನಕೆ ಓಬವ್ವ, ಝಾನ್ಸಿ ರಾಣಿಯರು. ಮಕ್ಕಳು ಮಹಾಪುರುಷರಾದರೆ, ವೀರವನಿತೆಯರಾದರೆ ಹೆತ್ತಬ್ಬೆಯ ಕಂಗಳಲ್ಲಿ ಧನ್ಯತೆಯ ಭಾವ.

ಆಕರ್ಷಕ ಸಂಚಲನ
ಒಂದೆಡೆಯಿಂದ ಹೊರಟ ಸಂಚಲನ ಎರಡು ಭಾಗವಾಗಿ ವಿರುದ್ಧ ದಿಕ್ಕಿನಲ್ಲಿ ಸಾಗಿ ನಗರದ ಗಾಂಧಿಚೌಕದಲ್ಲಿ ಒಂದುಗೂಡಿ ಮುನ್ನಡೆದ ಸುಂದರ ದೃಶ್ಯನ್ನು ನೋಡಿ ಅನೇಕ ಕಂಗಳು ಆನಂದ ಬಾಷ್ಪ ಸುರಿಸಿದವು.

60 ವಯಸ್ಸು ಮೀರಿದ ಅನೇಕ ಹಿರಿಯರೂ ಸಂಚಲನದಲ್ಲಿ ಉತಾಹ್ಸದಿಂದ ಭಾಗವಹಿಸಿದ್ದರು.

ಸುಂದರ ವೇದಿಕೆ – ಸುಶ್ರಾವ್ಯ ಗೀತೆ
ಭೋರ್ಗರೆವ ಶರಧಿಯ ನಡುವೆ ತಲೆಯೆತ್ತಿದ ಬಂಡೆಯನ್ನೇರಿ ನಿಂತ ವಿವೇಕಾನಂದರ ಭವ್ಯ ಭಾವಚಿತ್ರದ ಹಿನ್ನೆಲೆ; ಒಂದುಗೂಡಿ ಬನ್ನಿ ನಾಡಸೇವೆಗೆ… ಧ್ಯೇಯವಾಕ್ಯ; ಸುಶ್ರಾವ್ಯ ಗೀತೆ – ಅಸದಳ ಕಾರ್ಯವ ಸಾಧಿಸಿ ತೋರುವ ಯುವ ಮನಸುಗಳೇ ಮೇಲೇಳಿ… ಶಂಕರ ಮಧ್ವರ ಕನಕ ನಾರಾಯಣ ಗುರು ಬುದ್ಧ ಬಸವಾದಿಗಳ ಜೀವನಾದರ್ಶಗಳ ಪ್ರೇರಣೆ ಪಡೆಯುವ ಕರೆ. ಸ್ವಾಮಿ ವಿವೇಕಾನಂದರಂದಂತೆ ಸೇವೆ ಮತ್ತು ತ್ಯಾಗದ ಪಥದಲ್ಲಿ ನಿರಂತರ ಮುನ್ನಡೆವ ಕರೆ.

ಅಚ್ಚುಕಟ್ಟಾದ ವ್ಯವಸ್ಥೆ

  • ಸಂಚಲನದಲ್ಲಿ ಭಾಗವಹಿಸಿದವರಿಗೆಲ್ಲ ಬಾಯಾರಿಕೆ ನೀಗಲು ಕಿತ್ತಳೆ ಹಣ್ಣು , ನೀರಿನ ಪ್ಯಾಕೆಟ್ ನೀಡಲಾಗಿತ್ತು. ಕಾರ್ಯಕ್ರಮದ ಕೊನೆಗೆ ವಿಕಿರಕ್ಕಿಂತ ಮೊದಲು ಮೈದಾನದಲ್ಲಿ ಒಂದೂ ಕಸ ಉಳಿಯದಂತೆ ನೋಡಿಕೊಳ್ಳಲು ಸೂಚನೆ ನೀಡಲಾಯಿತು. ಎರಡೇ ನಿಮಿಷದಲ್ಲಿ ಸೂಚನೆ ಅಕ್ಷರಶಃ ಪಾಲನೆಯಾಯ್ತು. ಸಾವಿರಾರು ಹಣ್ಣು , ನೀರಿನ ಪ್ಯಾಕೆಟ್ ವಿತರಣೆಯಾಗಿದ್ದರೂ ಒಂದೇ ಒಂದು ಕಸ ಕಾಣಿಸದು. ಕಾರ್ಯಕ್ರಮದ ಮೊದಲಲ್ಲಿ ಹೇಗೆ ಸ್ವಚ್ಛವಾಗಿತ್ತೋ ಹಾಗೆಯೇ ಕಾರ್ಯಕ್ರಮದ ನಂತರವೂ ಮೈದಾನ ಸ್ವಚ್ಛ ಸುಂದರವಾಗಿತ್ತು.
  • 75ರ ಹರೆಯದ ಯಕ್ಷಗಾನದ ಮೇರು ಕಲಾವಿದ ಸೂರಿಕುಮೇರಿ ಗೋವಿಂದಭಟ್ಟರು ಗಣವೇಷ ಧರಿಸಿ ವಯಸ್ಸು ಮರೆತರು. ಕಾರ್ಯಕ್ರಮ ಪೂರ್ತಿ ಭಾಗವಹಿಸಿದರು.
  • ವಿವಿಧ ವೃತ್ತಿಯ, ಪ್ರವೃತ್ತಿಯ ಜನರು ಪ್ರೇರಣಾ ಸಾಂಘಿಕ್‌ನಲ್ಲಿ ಭಾಗವಹಿಸಿ ಪ್ರೇರಣೆ ಪಡೆದರು.
  • ತೀರ್ಥಹಳ್ಳಿಯ ಸ್ಥಳೀಯ ‘ಛಲಗಾರ’ ಪತ್ರಿಕೆಯ ಮಾರ್ಚ್ 1ರ ಸಂಚಿಕೆಯಲ್ಲಿ ‘ಆರೆಸ್ಸೆಸ್‌ಗೆ ಆರೆಸ್ಸೆಸ್ಸೇ ಸಾಟಿ’ ಎಂಬ ಶೀರ್ಷಿಕೆಯ ಸಂಪಾದಕೀಯ ಬರೆದು ಸಂಘವನ್ನು ಪ್ರಶಂಸಿಸಿತು. ಪ್ರಚಾರವಿಲ್ಲದೆಯೂ ಸಂಘಟನೆ ಸಾಧ್ಯವೆಂಬುದನ್ನು ಸಂಘ ಪರಿಣಾಮಕಾರಿಯಾಗಿ ತೋರಿಸಿದೆ ಎಂದು ಆ ಪತ್ರಿಕೆ ಬರೆದಿದೆ.

ತೀರ್ಥಹಳ್ಳಿಯಲ್ಲಿ ಕೃ. ಸೂರ್ಯನಾರಾಯಣರಾವ್ ಪ್ರತಿಪಾದನೆ

ಹಿಂದೂ ವಿಚಾರಧಾರೆಯಿಂದ ಮಾತ್ರ ದೇಶದ ಉಳಿವು
ತೀರ್ಥಹಳ್ಳಿ: ಪ್ರಸ್ತುತ ದಿನದಲ್ಲಿ ಹಿಂದೂ ವಿಚಾರಧಾರೆಯಿಂದ ಮಾತ್ರ ದೇಶ ಉಳಿಯಬಲ್ಲದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಕೃ. ಸೂರ್ಯನಾರಾಯಣರಾವ್ ಪ್ರತಿಪಾದಿಸಿದರು.
ಕರ್ನಾಟಕದಲ್ಲಿ ಆರ್‌ಎಸ್‌ಎಸ್ ಸಂಘಟಿಸಿದ ಯಾದವರಾವ್ ಜೋಶಿ ಅವರ 100ನೇ ಜನ್ಮ ವರ್ಷಾಚರಣೆ ಅಂಗವಾಗಿ ತಾಲೂಕು ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಪದವಿಪೂರ್ವ ಕಾಲೇಜಿನ ಸಮೀಪದ ಸಾರ್ವಜನಿಕ ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹಿಂದೂ ಸಮಾಜ ಯಾರಿಗೂ ಕೇಡು ಬಯಸುವುದಿಲ್ಲ. ನಾವು ಸಂಘಟಿತರಾದರೆ ಯಾರಿಗೂ ತೊಂದರೆಯಿಲ್ಲ. ಸರ್ವೇ ಜನಾಃ ಸುಖಿನೋ ಭವಂತು ಎನ್ನುವ ಧರ್ಮ ನಮ್ಮದು ಎಂದು ಹೇಳಿದರು. ಇಂಗ್ಲೆಂಡಿನ ಆರ್ಥಿಕ ವ್ಯವಸ್ಥೆ ನಮ್ಮ ದೇಶದಿಂದ ಅವರು ಕೊಳ್ಳೆ ಹೊಡೆದ ಸಂಪತ್ತಿನ ಮೇಲೆ ನಿಂತಿದೆ ಎಂದು ಹೇಳಿದ ಅವರು, ಸ್ವಾಮಿ ವಿವೇಕಾನಂದರ ಒಂದೊಂದು ಶಬ್ದಗಳೂ ಚೈತನ್ಯದಾಯಕ, ನಮ್ಮ ಎಲ್ಲ ಹೋರಾಟಗಾರರೂ, ಕ್ರಾಂತಿಕಾರಿಗಳೂ ವಿವೇಕ ಮತದಿಂದ ಸ್ಫೂರ್ತಿಗೊಂಡಿದ್ದಾರೆ ಎಂದು ಹೇಳಿದರು. ಪ್ರಸ್ತುತ ನಡೆಯುತ್ತಿರುವ ದೇಶವಿರೋಧಿಚಟುವಟಿಕೆಗಳನ್ನು ನಾವು ವಿರೋಧಿಸುತ್ತೇವೆ. ದೇಶಕ್ಕಾಗಿ ತ್ಯಾಗ ಮಾಡಲು ಯುವಕರು ಸಿದ್ಧರಿರಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ಪ್ರಾಂತ ಸಂಘಚಾಲಕ ಮ.ವೆಂಕಟರಾಮು, ತೀರ್ಥಹಳ್ಳಿಯ ಆರ್‌ಎಸ್‌ಎಸ್ ಪ್ರಮುಖರಾದ ಚಕ್ಕೋಡಬೈಲು ಬೆನಕ ಭಟ್, ಎಂ. ಶಿವಸ್ವಾಮಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ 3 ಸಾವಿರಕ್ಕೂ ಅಧಿಕ ಗಣವೇಷಧಾರಿಗಳ ಆಕರ್ಷಕ ಪಥಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಪ್ರಚಾರರಹಿತ ಕಾರ್ಯಕ್ರಮ: ಸಂಘದ ಈ ಕಾರ್ಯಕ್ರಮಕ್ಕೆ ಯಾವುದೇ ಪ್ರಚಾರ ಮಾಡಿರಲಿಲ್ಲ. ಬ್ಯಾನರ್, ಫ್ಲೆಕ್ಸ್, ಆಮಂತ್ರಣ ಪತ್ರಿಕೆ ಯಾವುದನ್ನೂ ಮುದ್ರಿಸಿರಲಿಲ್ಲ. ಧ್ವನಿವರ್ಧಕದ ಮೂಲಕ ಪ್ರಚಾರವನ್ನೂ ಮಾಡಿರಲಿಲ್ಲ. ಸಂಘದ ಕಾರ್ಯಕರ್ತರು ತಾಲ್ಲೂಕಿನಾದ್ಯಂತ ಮನೆಮನೆಗಳಿಗೆ ತೆರಳಿ ವೈಯಕ್ತಿಕ ಸಂಪರ್ಕದ ಮೂಲಕವೇ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದ್ದರು. ಸದ್ದು ಗದ್ದಲವಿಲ್ಲದ, ಪ್ರಚಾರರಹಿತ ಕಾರ್ಯಕ್ರಮ ಇದಾಗಿತ್ತು. ಆದರೂ 3 ಸಾವಿರಕ್ಕೂ ಹೆಚ್ಚು ಗಣವೇಷಧಾರಿ ಸ್ವಯಂಸೇವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.

 

   

Leave a Reply