ಸಭೆ ಸಂಘ ವಿರೋಧಿಗಳದು – ಲಾಭ ಸಂಘದ್ದು!

ಚಂದ್ರಶೇಖರ ಭಂಡಾರಿ - 0 Comment
Issue Date : 06.06.2016

….ಆದರೆ ಒಂದು ಕಡೆ ಸರಕಾರದ ದಮನಕಾರಿ ಕ್ರಮಗಳು, ಇನ್ನೊಂದು ಕಡೆ ಸಂಘ ವಿರೋಧಿಗಳು ಸೃಷ್ಟಿಸಲು ಪ್ರಯತ್ನಿಸಿದ ಭ್ರಮಾಜಾಲ, ಇದಾವುದರಿಂದಲೂ ಸತ್ಯಾಗ್ರಹದ ವ್ಯಾಪಕತೆ, ಉತ್ಸಾಹ ಇವುಗಳ ಮೇಲೆ ಕಿಂಚಿತ್ತೂ ಪರಿಣಾಮ ಬೀರಲಿಲ್ಲ. ಸ್ವಯಂಸೇವಕರಷ್ಟೇ ಅಲ್ಲ, ಜನರು ಸಹ ಅದರಿಂದ ಪ್ರಭಾವಿತರಾಗಲೇ ಇಲ್ಲ.
ಸಭೆ ಸಂಘ ವಿರೋಧಿಗಳದು – ಲಾಭ ಸಂಘದ್ದು
ಮದ್ರಾಸ್‌ನಲ್ಲಿ ಸ್ಥಾನೀಯ ಕಾಂಗ್ರೆಸ್ ನಾಯಕರು ಸಂಘ ವಿರೋಧದ ವಾತಾವರಣ ಸೃಷ್ಟಿಸುವ ಸಲುವಾಗಿ ಅಲ್ಲಲ್ಲಿ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಿದ್ದರು. ಅದಕ್ಕಾಗಿ ಏನೇನೋ ಕಸರತ್ತು ನಡೆಸಿದರು. ಅದರೆ ಆ ಸಭೆಗಳ ಒಟ್ಟು ಪರಿಣಾಮವಾದುದು ಅವರ ಉದ್ದೇದ್ಧೇಶಕ್ಕೆ ಉಲ್ಟಾ ಆಗಿಯೇ. ಓರ್ವ ಶಾಸಕ ಕೆ.ಸುಬ್ರಹ್ಮಣ್ಯಂ ಎಂಬುವರು ಒಂದು ಸಭೆಯಲ್ಲಿ ಸ್ವತಃ ‘ಸಂಘ ಮುರ್ದಾಬಾದ್’ ಎಂಬ ಘೋಷಣೆಯನ್ನು ಜನರಿಂದ ಹಾಕಿಸಲು ಪ್ರಯತ್ನಿಸಿದರು. ಅದರೆ ಸಭೆಯಲ್ಲಿದ್ದವರು ಅದನ್ನು ಪ್ರತಿಭಟಿಸಿ ಅವರ ಭಾಷಣವೇ ಮುಂದುವರಿಯದಂತೆ ತಡೆಯೊಡ್ಡಿದ್ದರು. ಪೊಲೀಸರು ಏನೇನೋ ಪ್ರಯತ್ನ ಮಾಡಿದರೂ ಅಂದು ಸಭೆ ಮುಂದುವರಿಸಲು ಸಾಧ್ಯವೇ ಆಗಲಿಲ್ಲ. ಮುಂದೆ ಕೆಲವು ದಿನಗಳ ನಂತರ ದಿ. 16.1.1949ರಂದು ಪುನಃ ಕಾಂಗ್ರೆಸ್ ವತಿಯಿಂದ ಸಭೆಯ ಏರ್ಪಾಡಾದಾಗ, ಅದರಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಂಗ್ರೆಸ್ ನ ಅಖಿಲ ಭಾರತೀಯ ಅಧ್ಯಕ್ಷ ಸ್ವತಃ ಪಟ್ಟಾಭಿ ಸೀತಾರಾಮಯ್ಯ ಅವರು, ಹಿಂದಿನ ಬಾರಿಯ ಅನುಭವದ ಹಿನ್ನೆಲೆಯಲ್ಲಿ ಸಂಘದ ಉಲ್ಲೇಖ ಮಾಡದಿರುವುದು ಶ್ರೇಯಸ್ಕರ ಎಂದು ಬಗೆದು ಪೂರಾ ಎಚ್ಚರವಹಿಸಿದರು.
ಕರ್ನಾಟಕದಲ್ಲೂ ಸಂಘವಿರೋಧಿಗಳು ಸಭೆಗಳನ್ನು ಏರ್ಪಡಿಸಿದ್ದಾಗ, ಅವರಿಗೆ ಅನುಮತಿ ನೀಡುವ ಮೊದಲು ಪೊಲೀಸ್ ಅಧಿಕಾರಿಗಳು ಸಭೆಯ ಕಾರಣದಿಂದಾಗಿ ಊರಲ್ಲೇನಾದರೂ ಗೊಂದಲದ ವಾತಾವರಣ ಸೃಷ್ಟಿಯಾದಲ್ಲಿ, ಅದರ ಹೊಣೆಯೆಲ್ಲವೂ ನಿಮ್ಮದೇ ಎಂಬುದು ಗೊತ್ತಿರಲಿ ಎಂಬ ಎಚ್ಚರಿಕೆಯ ಷರತ್ತು ವಿಧಿಸುತ್ತಿದ್ದರು.
ಆ ದಿನಗಳಲ್ಲಿ ವಾತಾವರಣ ಹೇಗಿರುತ್ತಿತ್ತೆಂದರೆ, ಅಂತಹ ಸಭೆಗಳಿಗೆ ಜನರು ಹೋಗುತ್ತಿದ್ದುದೇ ಕಡಿಮೆ. ಧಾರವಾಡದಲ್ಲಿ ಅಂತಹ ಸಭೆಯೊಂದನ್ನು ಏರ್ಪಡಿಸಲಾಗಿತ್ತು. ಭಾರೀ ಅಬ್ಬರದ ಪ್ರಚಾರದೊಂದಿಗೆ ಯೋಜಿತವಾಗಿದ್ದ ಈ ಸಭೆ ನಡೆಯಲಿದ್ದುದು ನಗರಸಭೆಯ ಪುರಭವನದಲ್ಲಿ. ಆದರೆ ಸಭೆಯನ್ನು ವ್ಯವಸ್ಥಾಪಕರು ಕೊನೆ ಗಳಿಗೆಯಲ್ಲಿ ರದ್ದುಪಡಿಸಿದರು. ಕಾರಣವೆಂದರೆ ಅದರಲ್ಲಿ ಪಾಲ್ಗೊಳ್ಳಲು ಬಂದವರು ಕೇವಲ ಎಂಟು ಮಂದಿ. ಮುಂದೆ ವಿದ್ಯಾರ್ಥಿಗಳ ಸಲುವಾಗಿ ಬೇರೊಂದು ಸಭೆಯನ್ನು ಏರ್ಪಡಿಸಲಾಯಿತು. ಅದರಲ್ಲೂ ಸುಮಾರು ನೂರರಷ್ಟು ಮಾತ್ರ ಇದ್ದರು. ಮೂರನೇ ಸಭೆಯನ್ನು ಏರ್ಪಡಿಸುವ ವಿಚಾರವೂ ನಡೆದಿತ್ತು. ಅದರೆ ಅಷ್ಟರಲ್ಲಿ ಜನರು ತಾವೇ ಮುಂದೆ ಬಂದು ಬೇರೊಂದು ಸಭೆ ಏರ್ಪಡಿಸಿ ಸಂಘ ವಿರೋಧಿಗಳನ್ನೇ ತರಾಟೆಗೆ ತೆಗೆದುಕೊಂಡರು.
ಗುಜರಾತ್‌ನಲ್ಲೂ ಜಾತೀಯತಾ ವಿರೋಧಿ ದಿನ ಇತ್ಯಾದಿ ಹೆಸರಲ್ಲಿ ಇದೇ ವಿಧದ ಪ್ರಯತ್ನಗಳನ್ನು ನಡೆಸಲಾಗಿತ್ತು. ಅದರೆ ಯಾವುದೇ ಸಭೆಯಲ್ಲೂ 50-60ಕ್ಕಿಂತ ಹೆಚ್ಚು ಜನರಿರುತ್ತಿರಲಿಲ್ಲ.
ಪಂಜಾಬಿನಲ್ಲೂ ಇಂತಹ ಪ್ರಯತ್ನಗಳಾಗಿದ್ದವು. ಜ್ಞಾನಿ ಗುರುಮುಖ ಸಿಂಹರಂತಹ ಹಿರಿಯ ನಾಯಕರೇ ತಮ್ಮೆಲ್ಲ ಪ್ರಭಾವ ಬಳಸಿ ಅದನ್ನು ಯಶಸ್ವಿಗೊಳಿಸಲು ಮುಂದಾಗಿದ್ದರೂ, ಸಾರ್ವಜನಿಕರು ಸಂಘವನ್ನೇ ಬೆಂಬಲಿಸುತಿದ್ದುದು ಅವರಿಗೆ ಅನುಭವವಾಯಿತು. ಅವರು ಏರ್ಪಡಿಸುತಿದ್ದ ಮೆರವಣಿಗೆಗಳಲ್ಲಿ ಭಾಗವಹಿಸುತಿದ್ದ ಜನರೂ ಸಂಘದ ಪರವಾಗಿ ಘೋಷಣೆಗಳನ್ನೂ ಹಾಕುತ್ತಿದ್ದುದು ಅವರಿಗೆ ಭಾರೀ ಕಿರಿಕಿರಿಯುಂಟು ಮಾಡಿತ್ತು.
ಶಿಮ್ಲಾದ ಒಂದು ಸಭೆಯಲ್ಲಿ ಸಂಘವನ್ನು ಕಟುವಾಗಿ ಟೀಕಿಸಲು ಆರಂಭಿಸಿದ ಓರ್ವ ಕಾಂಗ್ರೆಸ್ ನಾಯಕನನ್ನು ಜನರು ತಾವೇ ಹೊಡೆದು ಅಟ್ಟಿದರು. ಲೂಧಿಯಾನದಲ್ಲಿ ಸಮಾಜವಾದಿ ಮತ್ತು ಕಮ್ಯುನಿಸ್ಟ್ ನಾಯಕರು ಸಭೆ ಏರ್ಪಡಿಸಿದಾಗ, ಜನರ ಮನೋಭಾವನೆಗಳ ಹಿನ್ನೆಲೆಯಲ್ಲಿ ಪೊಲೀಸರೇ ಅವರಿಗೆ ಹಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದ್ದರು. ಹಾಂಸಿ ಮತ್ತು ಭಿವಾನಿಯಲ್ಲಿ ಪಶ್ಚಿಮ ಪಂಜಾಬದಿಂದ ಬಂದ ನಿರಾಶ್ರಿತ ಬಂಧುಗಳು ಸಂಘ ವಿರೋಧಿಗಳನ್ನು ಚೆನ್ನಾಗಿ ಥಳಿಸಿ ಸರಿದಾರಿಗೆ ಬರುವಂತೆ ಮಾಡಬೇಕಾಯಿತು. ಕೆಲವು ಕಡೆಗಳಲ್ಲಂತೂ ಸಭೆಗೆ ಮುಖ್ಯವಕ್ತಾರರಾಗಿ ಬಂದವರೇ ಸಂಘದ ಪರವಾಗಿ ಮಾತಾಡಿದುದೂ ಉಂಟು.
ಜನವಿರೋಧದಿಂದಾಗಿ ಸಭೆ ಬರ್ಖಾಸ್ತ್
ಡಿಸೆಂಬರ್ 27ರಂದು ಅಕೋಲಾದ ಗಾಂಧಿ ಮೈದಾನದಲ್ಲಿ ಒಂದು ಸಾರ್ವಜನಿಕ ಸಭೆ. ಸಂಘದ ವಿರೋಧಕ್ಕಾಗಿಯೇ ಅದನ್ನು ಏರ್ಪಡಿಸಲಾಗಿದ್ದುದು ಊರಿಗೆಲ್ಲ ತಿಳಿದಿದ್ದ ಸಂಗತಿ. ಗಲಭೆಯಾಗಬಹುದೆಂಬ ನಿರೀಕ್ಷೆ ಪೊಲೀಸರಿಗಿತ್ತು. ಅದಕ್ಕಾಗಿ ಹೆಚ್ಚಿನ ಎಚ್ಚರವಹಿಸಿ ಬಂದೋಬಸ್ತ್ ಮಾಡಿದ್ದರು.
ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿದ್ದವರು ಉತ್ತರ ಪ್ರದೇಶದ ಸಂಸದೀಯ ಕಾರ್ಯದರ್ಶಿ ಕುಖ್ಯಾತ ಗೋವಿಂದ ಸಹಾಯ್ ಮತ್ತು ಅಕೋಲಾದ ಕಾಂಗ್ರೆಸ್ ಕಾರ್ಯದರ್ಶಿ ವಿನಯ ಕುಮಾರ್ ಅವರು. ಯೋಜನೆಯಂತೆ ವಿನಯಕುಮಾರ್ ಅವರು ಸಂಘದ ವಿರುದ್ಧ ಕೆಟ್ಟ ಭಾಷೆಯಲ್ಲಿ ಮಾತಾಡಿ ಕೊನೆಯಲ್ಲಿ ತಾನು ಹೇಳಿದುದು ಪೂರಾ ತಪ್ಪೆಂದು ಯಾರೇ ‘ತಾಯಿಗೆ ಹುಟ್ಟಿದ ಮಗ’.
ಅದರಕ್ಕೂನು ಸಾಬೀತುಪಡಿಸಿದಲ್ಲಿ ತಾನು ತನ್ನ ಹೆಸರನ್ನು ಬದಲಿಸಿಕೊಳ್ಳುವೆ ಎಂಬ ಸವಾಲೆಸೆದರು. ಅದನ್ನು ಕೇಳಿದ ಓರ್ವ ಯುವಕ ಮುಂದೆ ಬಂದು, ‘ನಾನು ಸಾಬೀತುಪಡಿಸುವೆ’ ಎಂದು ಸವಾಲು ಸ್ವೀಕರಿದ. ಕೂಡಲೇ ಪೊಲೀಸರು ಅವನ ಮೇಲೆರಗಿ ಬಾಯಿ ಮುಚ್ಚಿಸಲು ಪ್ರಯತ್ನಿಸಿದರು. ಆಗ ಜನರು ಉದ್ರಿಕ್ತ್ತರಾಗಿ ‘ಅವನಿಗೆ ಮಾತಾಡಲು ಅವಕಾಶ ಕೊಡಿರಲ್ಲ. ಅವನನ್ನೇಕೆ ತಡೆಯುತ್ತೀರಿ’ ಎಂದು ವೇದಿಕೆಯ ಮೇಲಿದ್ದವರಿಗೆ ಪ್ರಶ್ನಿಸತೊಡಗಿದರು. ಸಭೆಯ ವಾತಾವರಣ ಸಹಜವಾಗಿ ಬಿಸಿಯಾಯ್ತು. ಪೊಲೀಸರಿಂದ ಲಾಠಿಚಾರ್ಜ್ ಶುರುವಾಯ್ತು. ಪರಿಣಾಮವಾಗಿ ‘ಧಿಕ್ಕ್ಕಾರವಿರಲಿ’, ‘ಧಿಕ್ಕ್ಕಾರವಿರಲಿ’ ಎಂಬ ಘೋಷಣೆಗಳ ಗೌಜಿನಲ್ಲಿ ಸಭೆಯೇ
ಬರ್ಖಾಸ್ತ್‌ಗೊಂಡಿತು.
ಭೂಗತ ಹೋರಾಟ
ಆ ದಿನಗಳಲ್ಲಿ ಸರಕಾರ, ಕಾಂಗ್ರೆಸ್, ಸೋಶಿಯಲಿಸ್ಟ್ ಮತ್ತು ಕಮ್ಯುನಿಸ್ಟ್ ಇವರೆಲ್ಲರ ಶಕ್ತಿ ಸಂಘದ ಮತ್ತು ಅದು ನಡೆಸುವ ಸತ್ಯಾಗ್ರಹದ ಕಡು ವಿರೋಧದಲ್ಲಿ ತೊಡಗಿತ್ತು. ಸಭೆಗಳು, ಸಮ್ಮೇಳನಗಳು ಮತ್ತು ಕಿರುಹೊತ್ತಿಗೆಗಳ ಮೂಲಕ ಜನರಲ್ಲಿ ಭ್ರಮೆ ಮೂಡಿಸುವುದರಲ್ಲೆ ಅವರೆಲ್ಲ ಮಗ್ನರಾಗಿದ್ದರು. ಅವರಿಂದ ಪ್ರಭಾವಿತರಾಗಿ ಹಲವಾರು ಪತ್ರಿಕೆಗಳೂ ಸಂಘ ವಿರೋಧಿ ಕೆಟ್ಟ ಸುದ್ದಿ, ಲೇಖನಗಳ ಪ್ರಕಟನೆಯಲ್ಲಿ ನಿರತವಾಗಿದ್ದವು. ಎಲ್ಲರಿಗೂ ಇದ್ದ ಲಕ್ಷ್ಯ ಒಂದೇ-ಸಂಘದ ಸತ್ಯಾಗ್ರಹಕ್ಕೆ ಸಮಾಜದ ಸಮರ್ಥನೆ ಏನೂ ಇಲ್ಲವೆಂಬುದನ್ನು ಜನಮನದಲ್ಲಿ ಬಿಂಬಿಸಬೇಕೆನ್ನುವುದು. ಸಾವಿರಾರು ಸ್ವಯಂಸೇವಕರು ಕ್ಷಮೆ ಕೇಳಿ ಮನೆಗೆ ಮರಳುತಿದ್ದಾರೆ, ಎಲ್ಲ ಕಡೆಗಳಲ್ಲೂ ಜನರು ಸತ್ಯಾಗ್ರಹವನ್ನು ವಿರೋಧಿಸುತಿದ್ದಾರೆ, ಸತ್ಯಾಗ್ರಹಿಗಳಾಗಬೇಕಾದವರು ಕಷ್ಟಪಟ್ಟು ಹುಡುಕಿದರೂ ಸಂಘದವರಿಗೆ ಸಿಗುವುದಿಲ್ಲ, ಕೆಲವು ಸ್ವಯಂಸೇವಕರು ತಾವೇ ಹೇಳಿಕೆ ನೀಡುವ ಮೂಲಕ ಸಂಘದ
ಅಧಿಕಾರಿಗಳ ಪೊಳ್ಳುತನವನ್ನು ಬಯಲುಗೊಳಿಸುತ್ತಿದ್ದಾರೆ – ಇತ್ಯಾದಿಯೇ ಅವರ ಪ್ರಚಾರದ ಸರಕು. ಹೀಗಾಗಿ ಸತ್ಯಾಗ್ರಹದ ಯಥಾರ್ಥ ಮಾಹಿತಿ ಸ್ವಯಂಸೇವಕರಿಗೆ ಮತ್ತು ಸಾರ್ವಜನಿಕರಿಗೂ ಸಿಗುವಂತೆ ಮಾಡಲು ಸಂಘದ ವತಿಯಿಂದಲೇ ಚಕ್ರ ಮುದ್ರಿತ ಕರಪತ್ರಗಳು (ಸೈಕ್ಲೋಸ್ಟೈಲ್) ಮತ್ತು ಇನ್ನಿತರ ಮುದ್ರಿತ ಸಾಹಿತ್ಯಗಳನ್ನು ತಲಪಿಸುವ ವ್ಯವಸ್ಥೆ ಕೈಗೊಳ್ಳಲಾಯಿತು. ಈ ಕರಪತ್ರಗಳು ಬಹುಬೇಗನೆ ಜನಪ್ರಿಯವಾದವು. ಕಾರಣವೆಂದರೆ ಸತ್ಯಾಗ್ರಹಕ್ಕೆ ಸಂಬಂಧಿಸಿದ ವಿದ್ಯಮಾನಗಳ ಅಗೋಚರ ಮುಖ-ಅದೇ ಯಥಾರ್ಥವಾದುದು-ಅವುಗಳಿಂದ ಜನರ ಅರಿವಿಗೆ ಬರತೊಡಗಿತು. ಆದರೆ ಸಮಸ್ಯೆಯಾಗಿದ್ದುದು ಈ ಕರಪತ್ರಗಳ ತಯಾರಿ ಮತ್ತು ಹಂಚುವಿಕೆ. ಅದು ಸುಲಭವಿರಲಿಲ್ಲ. ಹೆಜ್ಜೆಹೆಜ್ಜೆಯಲ್ಲೂ ಬಂಧನದ ಅಪಾಯ ಒಳಗೊಂಡಿದ್ದ ಕೆಲಸವಾಗಿತ್ತದು. ಇವೆರಡೂ – ತಯಾರಿ ಮತ್ತು ವಿತರಣೆ – ಭಾರೀ ಎಚ್ಚರದಿಂದ ಮಾಡಬೇಕಾಗಿದ್ದ ಸವಾಲುಗಳಾಗಿದ್ದವು.
ಸತ್ಯಾಗ್ರಹಕ್ಕಾಗಿ ಸಿದ್ಧತೆ ಆರಂಭವಾದಾಗಲೇ ಅದರ ಕುರಿತು ಪ್ರಚಾರವೂ ಅಷ್ಟೇ ಮಹತ್ವದ್ದೆನಿಸಿದುದರಿಂದ, ಅದನ್ನೂ ಗಂಭೀರವಾಗಿ ತಿಳಿದು ಒಟ್ಟು ಯೋಜನೆಯ ಅತ್ಯಗತ್ಯದ ಭಾಗವಾಗಿಯೇ ಅದನ್ನು ಮಾಡಲಾಗಿತ್ತು. ಸತ್ಯಾಗ್ರಹದ ಯಶಸ್ಸು ಅದನ್ನು ಅವಲಂಬಿಸಿದೆ ಎನ್ನುವುದನ್ನು ಅಲ್ಲಗಳೆಯುವಂತಿರಲಿಲ್ಲ. ಭೂಗತ ಸಾಹಿತ್ಯದ ತಯಾರಿ ಮತ್ತು ವಿತರಣೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದುದು ಈ ಕಾರಣಕ್ಕಾಗಿ.
ಸತ್ಯಾಗ್ರಹ ಆರಂಭವಾದಂತೆಯೇ ದೇಶಾದ್ಯಂತ ಕರಪತ್ರಗಳು ಮತ್ತು ಭಿತ್ತಿಪತ್ರಗಳೂ ಎಲ್ಲೆಲ್ಲೂ ಕಾಣಿಸತೊಡಗಿದವು. ಅವುಗಳ ವಿತರಣೆ ಅತ್ಯಂತ ಸುವ್ಯವಸ್ಥಿತವಾಗಿ ನಡೆಯುತ್ತಿತ್ತು. ಸರಕಾರಿ
ಅಧಿಕಾರಿಗಳು ತಮ್ಮ ಕಚೇರಿಗೆ ತಲಪಿದಾಗ ಅವರಿಗೆ ತಮ್ಮ ಮೇಜಿನ ಮೇಲೆ ಅಥವಾ ಕೊಠಡಿಯ ಬಾಗಿಲಲ್ಲೆ ಕಣ್ಣಿಗೆ ಬೀಳುತಿದ್ದುದು ಈ ಕರಪತ್ರಗಳು. ಆಶ್ಚರ್ಯವೆಂದರೆ ಪೊಲೀಸ್ ಠಾಣೆಗಳಿಗೂ ಅವು ತಲಪುತಿದ್ದುದು. ಆದರೆ ಅಲ್ಲಿಗೆ ಬಂದುದು ಹೇಗೆ, ಯಾರಿಂದ ಎಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಸ್ವಾರಸ್ಯದ ಸಂಗತಿಯೆಂದರೆ ಕಛೇರಿಯಲ್ಲಿ ಅತ್ಯುನ್ನತ ಅಧಿಕಾರಿಯಿಂದ ಮೊದಲ್ಗೊಂಡು ಕೊನೆಯ ಚಪ್ರಾಸಿಯವರೆಗೆ ಎಲ್ಲರೂ – ಯಾರದೋ ಕಿತಾಪತಿ ಇದು ಎಂದು ಕೋಪ, ಮುನಿಸು ತೋರಿಸಿಕೊಂಡರೂ-ಆಸಕ್ತಿಯಿಂದ ಓದುತಿದ್ದರು ಎಂಬುದೂ ಅಷ್ಟೇ ಸತ್ಯ. ಪುಸ್ತಕಾಲಯಗಳು, ವಾಚನಾಲಯಗಳು, ಗಣ್ಯನಾಗರಿಕರು, ಸಾಮಾಜಿಕ ಮತ್ತು ರಾಜಕೀಯ ನಾಯಕರು ಮೊದಲಾದವರ ಮನೆಗಳು – ಇವೆಲ್ಲ ಕಡೆಗಳಿಗೆ ಈ ಸಾಮಗ್ರಿ ಸುಯೋಜಿತವಾಗಿ ತಲಪುತ್ತಿತ್ತು. ಮುಖ್ಯವಾಗಿ ಈ ಹಂಚುವಿಕೆಯ ಕೆಲಸ ಮಾಡುತಿದ್ದವರು ಬಾಲ ಸ್ವಯಂಸೇವಕರು ಮತ್ತು ಸಂಘದ ಮನೆಗಳಲ್ಲಿನ ಮಾತಾ ಭಗಿನಿಯರು. ಅವರೆಲ್ಲ ಈ ಕೆಲಸದಲ್ಲಿ ಹೆಚ್ಚಿನ ಕುಶಲತೆ ರೂಢಿಸಿಕೊಂಡಿದ್ದರು. ಈ ಗುಂಪಿನಲ್ಲಿದ್ದವರ ಸಾಹಸ, ಕಲ್ಪನಾವಿಲಾಸ, ಯೋಜನೆಯ ಚುರುಕುತನ ಮತ್ತು ಕಾರ್ಯಸಾಧನೆಯಲ್ಲಿ ಅದ್ಭುತವಾದ ನಿಷ್ಠೆ, ಇವು ಸತ್ಯಾಗ್ರಹದ ಸಮಗ್ರತೆಗೆ ವಿಶೇಷ ಮೆರಗು ಕೊಡುವಂತಾದುದು ಸ್ವಾಭಾವಿಕ.
ಭಿತ್ತಿಪತ್ರಗಳು ಸಾರ್ವಜನಿಕ ಸ್ಥಳಗಳಲ್ಲಿ, ವಿದ್ಯುತ್ ಕಂಬಗಳಲ್ಲಿ, ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ, ಸರಕಾರಿ ಕಚೇರಿಗಳಲ್ಲಿ, ಅಷ್ಟೇಕೆ ಪೊಲೀಸ್ ಠಾಣೆಗಳಲ್ಲೂ ಅದೆಷ್ಟು ಎತ್ತರದಲ್ಲಿ ಅಂಟಿಸಲಾಗುತ್ತಿತ್ತೆಂದರೆ ಅದನ್ನು ಹಚ್ಚಿರುವವರು ಯಾರು, ಅವರಿಗೆ ಹೇಗೆ ಸಾಧ್ಯವಾಯಿತು ಇವೇ ಜನರು ಪರಸ್ಪರ ಚರ್ಚಿಸುವ ವಿಷಯಗಳಾಗುತಿದ್ದವು. ಅವುಗಳನ್ನು ಕಿತ್ತು ಹಾಕಬೇಕಾದರೂ ಪೊಲೀಸರು ಎತ್ತರದ ಏಣಿಗಳನ್ನು ತರಬೇಕಾಗುತ್ತಿತ್ತು. ಅದಕ್ಕಿಂತ ಮೊದಲೇ ಜನರು ಅದನ್ನು ಓದಿಯಾಗುತ್ತಿದ್ದ ಕಾರಣದಿಂದ ಅದರ ಉದ್ದೇಶವಂತೂ ಪೂರ್ಣಗೊಂಡಿರುತ್ತಿತ್ತು. ಜತೆಯಲ್ಲಿ ಜನರಿಗೊಂದು ಮನರಂಜನೆಯ ಸಂಗತಿಯಾಗುತಿದ್ದುದು ಅದನ್ನು ಕಿತ್ತು ಹಾಕಲು ಪೊಲೀಸರು ಪಡುತಿದ್ದ ಕಷ್ಟ, ಫಜೀತಿ ಇವು.
ಭೂಗತ ಕಾರ್ಯಕರ್ತರು ಎದುರಿಸುತ್ತಿದ್ದ ಸವಾಲುಗಳು, ಅಪಾಯಗಳು, ಮತ್ತು ಅದಕ್ಕಾಗಿ ಅವರು ಎಸಗುತ್ತಿದ್ದ ಸಾಹಸ ಇತ್ಯಾದಿ ಕುರಿತು ಉದಾಹರಣಾರ್ಥ ಕೆಲವು ನಮೂನೆಗಳು:
n ಪುಣೆಯಲ್ಲಿ ಶನಿವಾರವಾಡದ ಗೋಡೆಗಳಲ್ಲಿ ಅಂಟಿಸಲಾಗಿದ್ದ 40‘ ಹಿ 30‘ ಗಾತ್ರದ ಭಿತ್ತಿಚಿತ್ರಗಳು ಊರಿನ ಜನರಿಗೆಲ್ಲ ಆಕರ್ಷಣೆಯ ಸಂಗತಿಯಾದವು. ಸಾವಿರಾರು ಜನರು ತಾವು ಅದನ್ನು ನೋಡಿದುದಷ್ಟೇ ಅಲ್ಲ , ತಮಗೆ ತಿಳಿದ ಇತರರಿಗೂ ಅದರ ಬಗ್ಗೆ ಹೇಳಿದ ಕಾರಣದಿಂದಾಗಿ ನಗರದ ಬೇರೆ ಭಾಗಗಳಿಂದಲೂ ಜನರು ಬಂದು ಅದನ್ನು ನೋಡಿದರು. ಈ ಮಾಹಿತಿ ಪೊಲೀಸರಿಗೆ ಗೊತ್ತಾದ ಮೇಲೂ ಅದನ್ನು ಕೀಳುವುದು ಅವರಿಗೆ ಕಠಿಣವಾದ ಕೆಲಸವಾಯ್ತು. ಕೊನೆಯಲ್ಲಿ ಉದ್ದನೆಯ ಗಳಗಳಲ್ಲಿ ಉರಿಯುವ ಕೊಳ್ಳಿಯಿರಿಸಿ ಅವುಗಳನ್ನು ಅವರು ಸುಟ್ಟರು. ಈ ದೃಶ್ಯವೂ ಸಾವಿರಾರು ಜನರಿಗೆ ಮನರಂಜನೆಯ ಒಂದು ಸಂಗತಿಯಾಯ್ತೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವಿಲ್ಲ. ಒಟ್ಟಿನಲ್ಲಿ ತಮ್ಮನ್ನು ತಾವು ಸುಟ್ಟುಕೊಂಡು ಉರಿಯುತ್ತಿರುವಾಗಲೂ ಆ ಭಿತ್ತಿಪತ್ರಗಳು ಸತ್ಯಾಗ್ರಹದ ಸಂದೇಶವನ್ನು ಸಾವಿರಾರು ಜನರಿಗೆ ತಲಪಿಸಿ, ತಮ್ಮ ಅಲ್ಪ ಕಾಲಾವಧಿಯ ಅಸ್ತಿತ್ವವನ್ನು ಸಾರ್ಥಕಗೊಳಿಸಿಕೊಂಡವು.

   

Leave a Reply