ಸಮಾಜದ ಸಹಯೋಗದೊಂದಿಗೆ ಸ್ವಯಂಸೇವಕರ ಸತ್ಕಾರ್ಯ

ಲೇಖನಗಳು - 0 Comment
Issue Date :

ಡಿ.17ರಂದು ತ್ರಿಪುರ ರಾಜ್ಯದ ಅಗರ್ತಲಾದಲ್ಲಿ ಸರಸಂಘಚಾಲಕ
ಮೋಹನ್‌ಜೀ ಭಾಗವತ್ 
ಅವರ ಮಾರ್ಗದರ್ಶನ

 ಭಾರತೀಯ ಸಭ್ಯತೆಯನ್ನು ಅನುಸರಿಸುವವನು ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಒಂದೇ ಸಮಯದಲ್ಲಿ ಸಾಧಿಸುವವನು. ಎಲ್ಲವನ್ನೂ ಜೋಡಿಸಿಕೊಂಡು ಮುಂದುವರೆಯುವವನು. ಇಂಥ ಧರ್ಮದ ಸಾರವನ್ನುವನ್ನು ಕಾಲಕಾಲಕ್ಕೆ ವಿಶ್ವಕ್ಕೆ ಪಸರಿಸಬೇಕು. ನಮ್ಮದು ಪುರಾತನ ರಾಷ್ಟ್ರ. ನಾವು ಧರ್ಮ ಎಂದಾಗ ಅದರರ್ಥ ಇಂಗ್ಲೀಷಿನ ರಿಲಿಜನ್ ಅಲ್ಲ. ವಿವಿಧ ಭಾಷೆಗಳು, ಪ್ರಾಂತಗಳು ಭಾರತದಲ್ಲಿ ಅನೇಕ ವರ್ಷಗಳಿಂದ ಇವೆ. ಭಾರತವರ್ಷ ಮೊದಲಿನಿಂದಲೂ ಏಕತೆಯಿಂದ ಆದ ವಿವಿಧತೆಯ ದೇಶ. ಆದ್ದರಿಂದಲೇ ಇಲ್ಲಿರುವ ನಾವೆಲ್ಲರೂ ವಿವಿಧತೆಯನ್ನು ಗೌರವಿಸುತ್ತ, ಸಾಮೂಹಿಕತೆಯನ್ನು ಗೌರವಿಸುತ್ತ ಎಲ್ಲರೂ ಸತ್ಯ, ಎಲ್ಲವೂ ಸತ್ಯ ಎನ್ನುತ್ತೇವೆ. ಯುಗಾನುಕೂಲ ಚಿಂತನೆಗಳೊಂದಿಗೆ ಜೊತೆಜೊತೆಯಾಗಿ ಹೋಗೋಣ, ಒಂದಾಗಿ ಹೋಗೋಣ. ಇದೇ ಸನಾತನ ಧರ್ಮ ಜಗತ್ತಿಗೆ ಕೊಡುವಂಥದ್ದು, ಮತ್ತು ಇದರಿಂದ ಕಳೆದುಹೋಗಿರುವ ಸಂತುಲಿತವಾದ ಚಿಂತನೆಯನ್ನು ಜಗತ್ತು ಮತ್ತೆ ಪಡೆಯಬೇಕು.

ನಮ್ಮ ಸಂತುಲನವನ್ನು ಉಳಿಸಿಕೊಂಡು, ಜಗತ್ತಿಗೆ ಹೊಸದನ್ನು ಕೊಡುತ್ತ, ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡುವ ಪ್ರಯೋಗವೇ ಧರ್ಮ. ಈ ಪ್ರಯೋಗ ಚಿರಂತನವಾದುದು. ಇದರ ಅಗತ್ಯ ಎಂದೂ ಕಡಿಮೆಯಾಗುವುದಿಲ್ಲ. ಸೃಷ್ಟಿ ಇರುವವರೆಗೆ ಧರ್ಮವಿರುತ್ತದೆ ಮತ್ತು ಅಲ್ಲಿಯ ತನಕ ಭಾರತ ಕೊಡುತ್ತಿರಬೇಕು. ಅಕಸ್ಮಾತ್ ಭಾರತ ತನ್ನ ಈ ಕರ್ತವ್ಯ ಮಾಡದಿದ್ದರೆ ತಪ್ಪು ಯಾರದ್ದು?

 ಈ ದೇಶದ ಮೂಲನಿವಾಸಿ ಹಿಂದು, ನಾವಿಲ್ಲಿ ಪರಂಪರೆಯಿಂದ ನಡೆದುಕೊಂಡು ಬಂದಿದ್ದೇವೆ. ಎಲ್ಲರೂ ಭಾರತಕ್ಕೆ ಬರುತ್ತಾರೆ, ನೆಲೆಸುತ್ತಾರೆ. ಭಾರತ ಸರ್ಕಾರವೂ ಕೂಡ ಇಲ್ಲಿಗೆ ಬರಲು ಒಪ್ಪಿಗೆ ನೀಡಿದೆ. ಏಕೆಂದರೆ ಇದು ಹಿಂದುದೇಶ. ಇಲ್ಲಿ ಯಾವ ಯಾವ ಕಾಲದಲ್ಲಿ ಹಿಂದು ಪ್ರಬಲನಾಗಿದ್ದನೋ ಹಿಂದು ಸಮಾಜ ಬಹುಸಂಖ್ಯಾತವಾಗಿತ್ತೋ ಆಗ ದೇಶ ಒಂದಾಗಿತ್ತು. 15.8.1947ರ ಮೊದಲು ಭಾರತದ ನಕ್ಷೆ ಬೇರೆ ಇತ್ತು. ಆಗ ಭಾರತ ಕಾಬೂಲ್‌ನಿಂದ ಬರ್ಮಾವರೆಗೆ ಒಂದೇ ದೇಶವಾಗಿತ್ತು. ಆದರೆ ಅಷ್ಟು ದೊಡ್ಡ ದೇಶ ಇಂದು ಚಿಕ್ಕದಾಗಿದೆ. ಹಿಂದುಗಳ ಸಂಖ್ಯೆ ಎಲ್ಲಿ ಕಡಿಮೆಯಾಯಿತೋ, ಯಾವಾಗ ಹಿಂದುಗಳ ಬಲವು ಕಡಿಮೆಯಾಯಿತೋ ಆಗ ಆ ಪ್ರದೇಶಗಳು ಕೇವಲ ಹಿಂದುಗಳಿಂದ ಮಾತ್ರವಲ್ಲ ದೇಶದಿಂದಲೇ ದೂರವಾದವು. ಭಾರತದ ವಿಭಜನೆಯಾಯಿತು.

 ನಮ್ಮ ಇತಿಹಾಸದ, ಸಂಸ್ಕೃತಿಯ ಮೂಲಗಳನ್ನು ನಾವು ಹುಡುಕುವ ಮೊಹೆಂಜೋದಾರೋ, ಹರಪ್ಪಗಳೆಲ್ಲ ಇಂದಿನ ಪಾಕಿಸ್ತಾನದಲ್ಲಿವೆ. ನಮ್ಮೆಲ್ಲರಮೂಲಭಾಷೆ, ದೇವಭಾಷೆ ಸಂಸ್ಕೃತದ ವ್ಯಾಕರಣವನ್ನು ರಚಿಸಿದ ಪಾಣಿನಿ ಇದ್ದದ್ದು ಇಂದಿನ ಪಾಕಿಸ್ತಾನದಲ್ಲಿ. ಇಂದು ಅವರು ನಾವು ಇಸ್ಲಾಮಿಕ್ ರಾಷ್ಟ್ರ ಎಂದು ಕರೆದುಕೊಂಡರೆ ಅವರ ಇತಿಹಾಸ ಕೇವಲ 70 ವರ್ಷ. ಅವರೇನಾದರೂ ತಮ್ಮ ಪೂರ್ವಜರ ಇತಿಹಾಸ ಬರೆಯಬೇಕೆಂದರೆ ಅವರು ಬರೆಯಬೇಕಾದ್ದು ಹಿಂದುಗಳ ಇತಿಹಾಸವನ್ನೇ.

 ನಮ್ಮದು ಹಿಂದುರಾಷ್ಟ್ರ. ವೇದಗಳು ನಮ್ಮ ಹಿಂದು ಪರಂಪರೆಯಲ್ಲಿಯೇ ಬಂದದ್ದು. ನಮ್ಮ ಪೂಜಾಪದ್ಧತಿಯು ಯಾವುದೇ ಇರಲಿ, ನಾವೆಲ್ಲರೂ ಹಿಂದು ಪೂರ್ವಜರ ಸಂತತಿಯವರು, ನಮ್ಮದು ಹಿಂದು ಪೂರ್ವಜರ ರಕ್ತ. ನಾವು ಭಾರತ ಮಾತೆಯ ಮಕ್ಕಳು. ನಮ್ಮಲ್ಲಿ ಅನೇಕ ಭಾಷೆ, ಪ್ರಾಂತ, ಜಾತಿಗಳು ಇವೆ. ಸ್ವಾಮಿ ವಿವೇಕಾನಂದರು ಹೇಳುತ್ತಿದ್ದಂತೆ – ಯಾವುದೇ ಜಾತಿ, ಪ್ರಾಂತದವನಾದರೂ ಅವನು ಭಾರತದವನು. ಯಯಾತಿಯು ತ್ರಿಪುರಕ್ಕೆ ಬಂದಿದ್ದನು. ಅವನಾದರೋ ಕುರುದೇಶದವನು. ಇಡೀ ಭಾರತ ನಮ್ಮದು. ಇಲ್ಲಿಯ ವಿವಿಧತೆಯು ಏಕತೆಯಿಂದಲೇ ಹೊಮ್ಮಿದೆ. ವಿವಿಧವಾಗಲು ಇಲ್ಲಿಯ ಮಾನ್ಯತೆ ಇದೆ. ನಮ್ಮ ಸಂಸ್ಕೃತಿ ಒಂದಾಗಿರುವುದನ್ನು ಅನೇಕವಾಗಿ ನೋಡಿ ಸಂಭ್ರಮಿಸಲು ಅವಕಾಶವನ್ನೀಯುತ್ತದೆ. ಈ ಎಲ್ಲ ವಿವಿಧತೆಗಳ ನಡುವೆಯೂ ನಾವೆಲ್ಲ ದೇಶವಾಸಿಗಳು ಸಹೋದರರಾಗಿದ್ದೇವೆ. ನಮ್ಮ ಮೇಲೆ ಸನಾತನ ಸಂಸ್ಕೃತಿಯ ಪ್ರಭಾವವಿದೆ. ಜೈನ, ಬೌದ್ಧ, ಸಿಖ್ಖ, ಆರ್ಯಸಮಾಜೀ, ಸನಾತನಿ, ಚಾರ್ವಾಕ ಎಲ್ಲರೂ, ಎಲ್ಲವೂ ಒಂದರಿಂದಲೇ ಹೊಮ್ಮಿದೆ ಎಂದು ಹೇಳುತ್ತಾರೆ. ಮತಭೇದವಿದೆ. ಆದರೆ ಎಲ್ಲವೂ ಒಂದೇ ಕಡೆ ಹೋಗುತ್ತದೆ. ಆದರೆ ನಮ್ಮ ಆಚರಣೆ ಹೇಗಿರಬೇಕು ಎಂಬ ವಿಷಯದಲ್ಲಿ ಗೊಂದಲವಿದೆ. ಹಾಗಿದ್ದರೆ ನಡೆಯುವ ಹಾದಿ ಹೇಗಿರಬೇಕು?

 ಅದಕ್ಕೆ ನಮ್ಮಲ್ಲಿ ಹೇಳಿದರು- ಸತ್ಯದ ಮಾರ್ಗದಲ್ಲಿ ನಡೆ. ಅಹಿಂಸೆಯನ್ನು ಪಾಲಿಸು. ಅಸ್ತೇಯವ್ರತವನ್ನು ನಡೆಸು, ಅಪರಿಗ್ರಹವಿರಲಿ, ಸಂಯಮದ ವ್ರತವನ್ನು ನಿನ್ನದನ್ನಾಗಿ ಮಾಡಿಕೋ. ಸಂತೋಷ-ಸಂತೃಪ್ತಿಯಿಂದಿರು, ದುರಾಸೆ ಪಡಬೇಡ, ಲೋಭ ಬೇಡ, ಮೋಹ ಬೇಡ, ಮುಕ್ತನಾಗು. ಸಂತೋಷಕ್ಕಾಗಿ ಸ್ವಾಧ್ಯಾಯವನ್ನು ಮಾಡು. ಅದಕ್ಕಾಗಿ ತಪಶ್ಚರ್ಯೆ, ಸತ್ಯದ ಉಪಾಸನೆಗಳನ್ನು ಮಾಡು. ನಿನ್ನ ವಿಕಾಸ ಸತ್ಯದಿಂದ ತನ್ಮಯವಾಗಿರುವುದೇ ಆಗಿದೆ. ಉಪಭೋಗ, ಜೀವನದ ಉದ್ದೇಶವಲ್ಲ.

 ಎಲ್ಲ ಪಂಥಗಳ ಮತ್ತು ಸಂಪ್ರದಾಯಗಳ ಅಭಿಪ್ರಾಯದಲ್ಲಿ ಇದೇ ಸನಾತನ ಧರ್ಮ. ಈ ಸನಾತನ ಧರ್ಮವನ್ನು ಜಗತ್ತು ಹಿಂದು ಎಂದು ಗುರುತಿಸುತ್ತದೆ ಮತ್ತು ಇದನ್ನು ಪಾಲಿಸುವವರನ್ನು ಹಿಂದು ಸಮಾಜವೆಂದು ಕರೆಯುತ್ತದೆ. ಸನಾತನ ಧರ್ಮದ ಆಧಾರದಲ್ಲಿ ರಚಿತವಾದ ಇದೇ ಚಿಂತನೆ ಎಲ್ಲ ಭಾಷೆ, ವರ್ಗ, ಜಾತಿ, ಮತಪಂಥಗಳಲ್ಲಿ ವ್ಯಾಪ್ತವಾಗಿದೆ. ಇದೇ ಹಿಂದು ಸಂಸ್ಕೃತಿ. ಇದರ ವಾರಸುದಾರರು ನಾವು.

 ಕೆಲವರು ಈ ವಿಷಯವನ್ನು ಮರೆತಿದ್ದಾರೆ, ಆದರೆ ಆಚರಣೆಯಲ್ಲಿಟ್ಟುಕೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ ಸಾಚಾರ್ ಸಮಿತಿಯ ವಿಚಾರವನ್ನು ಸಂಘ ವಿರೋಧಿಸಿತ್ತು. ಕಾಂಗ್ರೆಸ್‌ನಲ್ಲಿದ್ದ ರಾಜ್ಯಸಭಾ ಸದಸ್ಯರೊಬ್ಬರು ಭೇಟಿಯಾಗಿ ಭಾರತದ ಮುಸಲ್ಮಾನರೂ ಹಿಂದುಗಳೇ. ಅವರು ಯಾವುದೋ ಆಮಿಷಕ್ಕೋ, ಬಲಾತ್ಕಾರದಿಂದಲೋ ಮುಸಲ್ಮಾನರಾಗಿಬಿಟ್ಟರು. ಅವರ ಪೂಜಾ ಪದ್ಧತಿ ಬೇರೆಯಾಗಿದೆ, ಭಾರತೀಯರಂತೆ ಸಂಗೀತ ಹಾಡುವಂತಿಲ್ಲ, ಆದರೆ ಕವಾಲಿ ನಡೆಸುತ್ತಾರೆ. ಇವೆಲ್ಲವೂ ಬೇರೆ ಯಾವ ದೇಶದಲ್ಲಿಯೂ ನಡೆಯುವುದಿಲ್ಲ. ಅವರಿಗೆ ಈ ಮಾಹಿತಿ ತಿಳಿದಿಲ್ಲ. ಅವರೂ ಈ ದೇಶದ ನಿವಾಸಿಗಳೆಂದು ಅವರಿಗೆ ಒಮ್ಮೆ ತಿಳಿದರೆ ಯಾವುದೇ ಗಲಾಟೆಗಳೇ ಇರುವುದಿಲ್ಲ ಎಂದರು. ಅದಕ್ಕೆ ನಾನು ಹೇಳಿದ್ದು- ನಾವು ಹಿಂದುಗಳಾದ್ದರಿಂದ ನಮಗೆ ಎಲ್ಲರ ಉನ್ನತಿ, ವಿಕಾಸಗಳೂ ಅವಶ್ಯಕ. ನಾವು ಯಾರನ್ನೂ ವಿರೋಧಿಸುವವರಲ್ಲ. ಯಾರ ಬಗೆಗೂ ದ್ವೇಷವಿಲ್ಲ. ವಿಶ್ವದ ಕಲ್ಯಾಣ ಬಯಸುವವರು ನಾವು. ಸಂಘಸ್ಥಾಪನೆ ಮಾಡಿದ ಡಾ.ಜೀ ಇದನ್ನೇ ಹೇಳುತ್ತಿದ್ದರು. ಆದರೆ ಮುಸಲ್ಮಾನರು ಇದನ್ನು ಒಪ್ಪುತ್ತಿಲ್ಲ. ನೀವವರನ್ನು ಒಪ್ಪಿಸಿ. ನಾವು ನಮ್ಮ ವಿರೋಧವನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು.

 ನಮ್ಮೆಲ್ಲ ಮತ-ಪಂಥ-ಭಾಷೆ-ಪ್ರಾಂತಗಳನ್ನು ಜೋಡಿಸುವ ಸೂತ್ರವೇ ಹಿಂದುತ್ವ. ಹಿಂದು ಎಂಬುದು ಇಸಂ ಅಲ್ಲ,  ಅದೊಂದು ಜೀವನ ಪದ್ಧತಿ. ಆ ಹಿಂದುತ್ವವನ್ನು ಗೌರವಿಸುತ್ತ, ಅರ್ಥೈಸಿಕೊಳ್ಳುತ್ತ, ಹಿಂದುತ್ವವನ್ನು ಆಚರಣೆಗೆ ಒಟ್ಟಾಗಿ ತರುವ ಅವಶ್ಯಕತೆಯಿದೆ. ಸ್ವಾರ್ಥ-ದ್ವೇಷಗಳನ್ನು ಮರೆತು ಎಲ್ಲರ ಒಳಿತಿಗಾಗಿ ಈ ಪ್ರಾಚೀನ ರಾಷ್ಟ್ರದ ಏಳಿಗೆಗಾಗಿ, ವೈಭವಕ್ಕಾಗಿ, ಏಕತೆಗಾಗಿ, ಅಖಂಡತೆಗಾಗಿ ದುಡಿಯುವ ಸಂಕಲ್ಪ ತೆಗೆದುಕೊಳ್ಳಬೇಕಿದೆ. ಅದಕ್ಕಾಗಿ ಸಂಘ ಹಿಂದುಗಳನ್ನು ಸಂಘಟಿಸುವ ಕಾರ್ಯಮಾಡುತ್ತಿದೆ. ಎಲ್ಲ ಹಿಂದುಗಳನ್ನು ಆಹ್ವಾನಿಸುತ್ತದೆ. ಯಾವುದೇ ಕಾರಣಕ್ಕೂ ಅವನ ಮತ, ಪಂಥ, ಭಾಷೆ, ಪ್ರಾಂತ, ರಾಜಕೀಯ ಪಕ್ಷಗಳನ್ನು ಕೇಳದೇ, ಅವನಿಗೆ ಹಿಂದುತ್ವವನ್ನು ನೆನಪು ಮಾಡಿಕೊಟ್ಟು, ಭಾರತಮಾತೆಯ ಭಕ್ತಿ ಕಲಿಸಿಕೊಟ್ಟು ಅವನನ್ನು ಯೋಗ್ಯತಾ ಸಂಪನ್ನನಾಗಿ ಮಾಡಿ, ಆ ಗುಣವನ್ನು ಸಮಾಜದ ಉತ್ಥಾನಕ್ಕೆ ಬಳಸು ಎಂಬ ಪ್ರೇರಣೆ ನೀಡುತ್ತದೆ. ಶಾಖೆಯಲ್ಲಿ ಪ್ರತಿದಿನ 1 ಗಂಟೆ, ತನ್ನ ಸಮಯವನ್ನು ನೀಡಿ ದೇಶದ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿಕೊಡುವುದೇ ಸಂಘದ ಕೆಲಸವಾಗಿದೆ.

 ಮೈದಾನಕ್ಕೆ ಬಂದು ಸಮಾಜದ ಎಲ್ಲರೊಡನೆ ಬೆರೆಯುತ್ತ, ಒಟ್ಟಿಗೆ ಕೆಲಸ ಮಾಡುತ್ತ, ಶರೀರ-ಬುದ್ಧಿ-ಮನಸ್ಸುಗಳನ್ನು ಒಂದೆಡೆಗೆ ತಂದು ಬುದ್ಧಿಯ ಗುಣವನ್ನು ಹೆಚ್ಚಿಸಿಕೊಳ್ಳುತ್ತ, ದೇಶದ ವಿಚಾರಗಳನ್ನು ಅರಿಯುತ್ತ, ದೇಶದ ಬಗೆಗೆ ಗೌರವನ್ನು ಹೆಚ್ಚಿಸಿಕೊಂಡು, ದೇಶಭಕ್ತಿಯನ್ನು ಹೃದಯದಲ್ಲಿ ತುಂಬಿಕೊಂಡು ಕೆಲಸ ಮಾಡುವುದನ್ನೇ ಸಂಘ ಹೇಳಿಕೊಡುತ್ತಿದೆ. ಎಲ್ಲಕ್ಕೂ ಒಂದು ಅಭ್ಯಾಸ ಬೇಕು. ಅಭ್ಯಾಸವಿಲ್ಲದಿದ್ದಲ್ಲಿ ಎಲ್ಲವೂ ಕಷ್ಟವೇ. (ಉದಾ: ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವನು ರೈಲ್ವೇ ಹಳಿಯ ಮೇಲೆ ಮಲಗಿ ಸಾಯುವುದಾಗಿ ಹೇಳಿದ. ಕೈಯಲ್ಲಿ ಊಟದ ಡಬ್ಬಿಯಿತ್ತು. ಡಬ್ಬಿ ಏತಕ್ಕೆ ಎಂದರೆ ರೈಲು ತಡವಾದರೆ, ಹಸಿವಿನಿಂದ ಸಾಯಲೇನು?! ಎಂದನು) ದಿನವೂ ಒಟ್ಟಿಗೆ ಕಲೆಯುವುದನ್ನು ಅಭ್ಯಾಸ ಮಾಡಬೇಕು.

ಸಮಾಜದಲ್ಲಿ ಏನೇನೇ ತೊಂದರೆಗಳಿದ್ದರೂ ಕೂಡ ಅವುಗಳನ್ನು ಸರಿಪಡಿಸಲು ಸ್ವಯಂಸೇವಕ ಯತ್ನಿಸುತ್ತಾನೆ. ಸಂಘ ಏನನ್ನೂ ಮಾಡುವುದಿಲ್ಲ. ಸ್ವಯಂಸೇವಕ ಎಲ್ಲವನೂ ಮಾಡುತ್ತಾನೆ. ಸ್ವಯಂಸೇವಕ ಯಾವುದೇ ಕೆಲಸವನ್ನಾದರೂ ನಿಸ್ಸಂಕೋಚವಾಗಿ ಸ್ವಾರ್ಥರಹಿತನಾಗಿ ಮಾಡುತ್ತಾನೆ. ಸಮಾಜದ ಹಿತ ಅವನಿಗೆ ಮುಖ್ಯ. ಸ್ವಾವಲಂಬನೆ, ಶಿಕ್ಷಣ, ಆರೋಗ್ಯ, ರಕ್ಷಣೆ, ಹೀಗೆ ಅನ್ಯಾನ್ಯ ಪ್ರಕಾರದ 1,70,000 ಸೇವಾಕಾರ್ಯಗಳನ್ನು ಪರಿಶ್ರಮಪೂರ್ವಕವಾಗಿ ಸರ್ಕಾರದ ಸಹಕಾರ ಬಯಸದೇ ಸಮಾಜದ ಹಿತಕ್ಕಾಗಿ ಮಾಡುತ್ತಿದ್ದಾರೆ. ಅವಶ್ಯಕತೆ ಇದ್ದರೆ ಸಮಾಜದಿಂದ ಪಡೆಯುತ್ತಾರೆ. ಹಣದ ಅಭಾವವು ಅವರಿಗಿರುವುದಿಲ್ಲ, ಧನದ ಪ್ರಭಾವವೂ ಅವರ ಮೇಲಿರುವುದಿಲ್ಲ.

 ಹಿಂದು ಸಂಘಟನೆಯ ಒಂದು ಚಿಕ್ಕ ದೃಶ್ಯ ಇಂದು ದೇಶದಲ್ಲಿ ಕಾಣಸಿಗುತ್ತಿದೆ. ಶಾಖೆಗೆ ಬಂದರೆ ಏನೂ ಸಿಗುವುದಿಲ್ಲ, ಬದಲಿಗೆ ನಾವೇ ಏನನ್ನಾದರೂ ಕೊಡಬೇಕಾಗುತ್ತದೆ. ಎಲ್ಲ ಕ್ಷೇತ್ರಗಳಲ್ಲಿಯೂ ಕಾರ್ಯ ಮಾಡುವಂಥ ಕಾರ್ಯಕರ್ತರನ್ನು, ತಮ್ಮ ಜೀವನವನ್ನೇ ದೇಶಕ್ಕಾಗಿ ನೀಡಿರುವಂಥ ಕಾರ್ಯಕರ್ತರನ್ನು ಸಂಘ ನಿರ್ಮಿಸಿದೆ. ಇದು ಭಾರತ ಮಾತೆಯ ಭಕ್ತಿಯ ಪ್ರಭಾವ. ಇದು ನಮ್ಮ ಸತ್ವದ ಪ್ರಭಾವ. ಸ್ನೇಹ-ವಿಶ್ವಾಸಗಳ ಪ್ರಭಾವ. ಇದು ಭಗವಂತನ ಕೃಪೆಯಿಂದ ನಡೆದಿದೆ.

 ದ್ರೌಪದಿಯ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಯುದ್ಧ ಮಾಡಬೇಕಾಗಿದ್ದವನು ಅರ್ಜುನ. ಭಗವಂತನೇನಾದರೂ ಒಮ್ಮೆ ಕಣ್ಣು ಬಿಟ್ಟಿದ್ದಿದ್ದರೆ ಅವರೆಲ್ಲರೂ ಭಸ್ಮವೇ ಆಗಿಬಿಡುತ್ತಿದ್ದರು. ಆದರೆ ಯಾರಿಂದ ಆ ಕೆಲಸ ಆಗಬೇಕಿತ್ತೋ ಅವರೇ ಆ ಕಾರ್ಯಕ್ಕೆ ಮುಂದಾಗಲಿ ಎಂದು ಭಗವಂತ ಅರ್ಜುನನಿಗೆ ಸಾರಥಿಯಾದ, ಸ್ವತಃ ತಾನೇ ಯುದ್ಧ ಮಾಡಲಿಲ್ಲ. ಅನೇಕ ಜನರು ಸರ್ಕಾರದ ಸಹಾಯವನ್ನೇ ಕೇಳದೆ ತಮ್ಮ ಕರ್ತವ್ಯವೆಂದು ಸಮಾಜಕ್ಕಾಗಿ ಕಾರ್ಯನಿರ್ವಹಿಸುತ್ತಾರೆ. ಅಜೀಂ ಪ್ರೇಮ್‌ಜೀ ಕೋಟ್ಯಂತರ ರೂಪಾಯಿಗಳನ್ನು ಸಮಾಜದ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಾರೆ. ನಾಗಪುರದ ಶಿಕ್ಷಕರೊಬ್ಬರು ತಮ್ಮ ವೃತ್ತಿಯನ್ನು ಬಿಟ್ಟು ಸಮಾಜಸೇವೆಗಿಳಿದರು. ಇದರಿಂದ ನಿಮಗೆ ಏನು ಸಿಗುತ್ತದೆ ಎಂದು ಕೇಳಿದಾಗ ನನಗೆ ಸಂತೋಷ ಸಿಗುತ್ತದೆ ಎನ್ನುತ್ತಾರೆ. ಇಂದು ಭಾರತದಲ್ಲಿ ಇಂಥ ಜನರು ಹೆಚ್ಚಿದ್ದಾರೆ. ಕೆಟ್ಟ ಕೆಲಸ ಮಾಡುವವರು ಕಡಿಮೆ ಇದ್ದಾರೆ.

ನಾವು ನಮ್ಮ ವಿಶ್ವಾಸವನ್ನು ಹೆಚ್ಚಿಸುವಂಥ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಮತ್ತು ಅಂಥವರ ಸಂಖ್ಯೆ ಸಮಾಜದಲ್ಲಿ ಹೆಚ್ಚಬೇಕು. ಅದಕ್ಕೆ ಒಂದೇ ಮಾರ್ಗ – ಸಂಘದ ಶಾಖೆ. ಸ್ವಯಂಸೇವಕ ದೇಶಕ್ಕಾಗಿ ಬಾಳುತ್ತಾನೆ ಮತ್ತು ಅವಶ್ಯಕತೆ ಬಿದ್ದರೆ ದೇಶಕ್ಕಾಗಿ ಸಾಯುವುದಕ್ಕೂ ಸಿದ್ಧನಾಗಿರುತ್ತಾನೆ. ಅಂಥ ಗುಣವಂತ, ಪ್ರಭಾವೀ, ತನ್ನೆಲ್ಲ ಜನರನ್ನು ಪ್ರೇರಿಸಬಲ್ಲ ವ್ಯಕ್ತಿಯನ್ನು ನಿರ್ಮಿಸುವುದಕ್ಕೆ ಶಾಖೆಯನ್ನು ಬಿಟ್ಟು ಬೇರಾವ ವಿಧಾನವೂ ಇಲ್ಲ. ಮತ್ತು ಇದು ಸಮಾಜದ ಸಹಾಯವಿಲ್ಲದೇ ಆಗದು, ಭಾರತದ ನಿರ್ಮಾಣವಾಗದು. ಸಮಾಜದ ಜವಾಬ್ದಾರಿ ಇರುವವರು ಮಾತ್ರ ಬದಲಾವಣೆ ತರಬಲ್ಲರು.

ನಿರೂಪಣೆ : ಮಾ.ಚಂ. ನಾಗರಾಜ

 

   

Leave a Reply