ಸಮಾಜವನ್ನು ನಮ್ಮ ಕುಟುಂಬದಂತೆ ಬಲಪಡಿಸಿ: ಭಾಗವತ್

ಪ್ರಚಲಿತ - 0 Comment
Issue Date : 14.04.2015

ರಿದ್ದಿಪುರ (ಮಹಾರಾಷ್ಟ್ರ): ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಅಮರಾವತಿ ಜಿಲ್ಲೆಯ ಪ್ರಸಿದ್ಧ ರಿದ್ದಿಪುರ ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ರಿದ್ದಿಪುರ ಗ್ರಾಮವು ಮಹಾನುಭಾವ ಪಂಥದ ಸ್ಥಾಪಕ ಚಕ್ರಧರಸ್ವಾಮಿ ಅವರು ಮರಾಠಿಯಲ್ಲಿ ಮೊದಲ ಪುಸ್ತಕ ರಚಿಸಿದ ಸ್ಥಳವೆಂದು ಖ್ಯಾತವಾಗಿದೆ.
ಭಾರತದ ಶಕ್ತಿ ಇರುವುದೇ ಆಧ್ಯಾತ್ಮಿಕತೆಯಲ್ಲಿ. ಹಿಂದು ಸಂಸ್ಕೃತಿಯನ್ನು ಒಂದು ವಾಕ್ಯದಲ್ಲಿ ವಿವರಿಸಬಹುದು. ಆದರೆ ಅದನ್ನು ಪ್ರತಿನಿತ್ಯ ನಮ್ಮ ಜೀವನದಲ್ಲಿ ಪಾಲಿಸುವುದು ಅಷ್ಟು ಸುಲಭವಲ್ಲ. ಒಂದು ಪಂಥವನ್ನು ಗುರುತಿಸಲು ಹಿಂದು ಸಮಾಜಕ್ಕೆ 800 ವರ್ಷಗಳಷ್ಟು ದೀರ್ಘಕಾಲ ಬೇಕಾಯಿತು. ಇದರಿಂದಾಗಿ ಸಮಾಜಕ್ಕೆ ಭಾರೀ ನಷ್ಟವೇ ಆಗಿದೆ ಎಂದು ಸರಸಂಘಚಾಲಕರಾದ ಮೋಹನ್‌ಭಾಗವತ್ ವಿಷಾದಿಸಿದರು.
ಎಲ್ಲ ಪಂಥಗಳು ಜನರಿಗೆ ತಿಳಿಸುವುದು ಒಳ್ಳೆೆಯ ಸಂಗತಿಗಳನ್ನೇ. ಇಡೀ ಜಗತ್ತು ಭಾರತದತ್ತ ಭಾರೀ ನಿರೀಕ್ಷೆಯಿಂದ ನೋಡುತ್ತಿದೆ. ಭಾರತ ಮಾತ್ರ ಜಗತ್ತಿನ ಗೌರವ ಹಾಗೂ ಶಕ್ತಿಯನ್ನು ಹೆಚ್ಚಿಸಬಲ್ಲದು. ನಮ್ಮ ಸಮಾಜವನ್ನು ನಾವು ನಮ್ಮ ಕುಟುಂಬದಂತೆ ಬಲಪಡಿಸಬೇಕು ಎಂದವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಇಡೀ ರಿದ್ಧಿಪುರ ಗ್ರಾಮವನ್ನು ರಂಗೋಲಿ, ತಳಿರುತೋರಣಗಳಿಂದ ಅಲಂಕರಿಸಲಾಗಿತ್ತು. ಅಖಿಲ ಭಾರತ ಮಹಾನುಭಾವ ಪರಿಷತ್ ಮತ್ತು ರಿದ್ದಿಪುರದ ಜನರು ಭಾಗವತ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಸುತ್ತಮುತ್ತಲಿನ ಗ್ರಾಮದ ಸಾವಿರಾರು ಜನರು ಭಾಗವತ್ ಅವರ ಮಾತುಗಳನ್ನು ಕೇಳಲು ಜಮಾಯಿಸಿದ್ದರು. ರಿದ್ದಿಪುರಕ್ಕೆ ಭಾಗವತ್ ಅವರ ಭೇಟಿ ಐತಿಹಾಸಿಕವಾದುದು ಎಂದು ಮಹಾನುಭಾವ ಪಂಥದ ಸಂತರು ಉದ್ಗರಿಸಿದರು. ಆರೆಸ್ಸೆಸ್ ಮತ್ತು ನಮ್ಮ ಪಂಥ ಎರಡರ ಉದ್ದೇಶವೂ ಒಂದೇ ಆಗಿದೆ. ಆರೆಸ್ಸೆಸ್ ಜೊತೆ ಗುರುತಿಸಿಕೊಳ್ಳಲು ನಮಗೆ ಹೆಮ್ಮೆ ಎನಿಸಿದೆ ಎಂದು ಪಂಥದ ಪ್ರಮುಖ ಸಂತರಾದ ಕರಂಜೇಕರ್ ಬಾಬಾ ಅವರು ಅಭಿಪ್ರಾಯಪಟ್ಟರು.

   

Leave a Reply