ಸಮಾನತೆ ಮತ್ತು ಸಾಮರಸ್ಯ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 07.05.2016

-ರಮೇಶ್‍ ಪತಂಗೆ

ಸಮತೆ (ಸಮಾನತೆ) ಮತ್ತು ಸಾಮರಸ್ಯ ಇವೆರಡು ಶಬ್ದಗಳ ಬಗ್ಗೆ ದೇಶದಲ್ಲಿ ಬಹಳ ಚರ್ಚೆ ನಡೆಯುತ್ತಿದೆ. ಸಾಮರಸ್ಯ ಎಂಬ ಶಬ್ದಬಳಕೆಯು ಸಂಘ ವಿಚಾರಧಾರೆಯಿಂದ ಬಂದಿದ್ದು, ಈ ಕಾರಣಕ್ಕೆ ಅದು ಸಮತೆಗೆ ವಿರುದ್ಧವಾಗಿದೆ, ಎಂದು ಕೆಲವರು ತೀರ್ಮಾನಿಸಿದ್ದಾರೆ. ಸಂಘ ಏನೇ ಹೇಳಿದರೂ ಅದಕ್ಕೆ ವಿಪರೀತ ಅರ್ಥ ಕಲ್ಪಿಸುವುದು ಕೆಲವರ ವೈಚಾರಿಕ ಚಾಳಿಯಾಗಿದೆ. ಅವರು ಸಮಾಜದಲ್ಲಿ ಭ್ರಮೆ ಹರಡಲು ಒಂದಷ್ಟು ಮಟ್ಟಿಗೆ ಯಶಸ್ವಿಯಾಗಬಹುದು. ಆದ್ದರಿಂದ ಸಾಮರಸ್ಯ ಎಂದರೇನು? ಸಮತೆಯೊಂದಿಗೆ ಅದರ ಸಂಬಂಧವೇನು? ಸಮತೆಯ ನಿರ್ದಿಷ್ಟ ಅರ್ಥವೇನು? ಈ ವಿಷಯದ ಕುರಿತು ಚರ್ಚಿಸುವುದು ಬಹು ಅವಶ್ಯಕ.
ಚರ್ಚೆಗಳು ಪರಿಕಲ್ಪನೆಯ ಅರ್ಥಬೋಧೆಗಾಗಿ ನಡೆದಲ್ಲಿ ಅವು ವಿಧಾಯಕವಾಗುವವು. ಅಲ್ಲದೆ ಚರ್ಚೆಗಳನ್ನು ಮನಸ್ಸಿನಲ್ಲಿ ಕೆಲ ಪೂರ್ವಗ್ರಹಗಳನ್ನಿಟ್ಟು, ಅಜ್ಞಾನವಿಟ್ಟುಕೊಂಡು ಮಾಡುವಾಗ ಅವು ಒಂದೋ ನಿಷ್ಫಲವಾಗುತ್ತವೆ ಅಥವಾ ಕೆಟ್ಟ ಪರಿಣಾಮವುಂಟುಮಾಡುತ್ತವೆ. ಆದ್ದರಿಂದ ವಿಚಾರವಂತರು ಚರ್ಚಿಸುವಾಗ ಶಕ್ಯವಾದಷ್ಟೂ ಅದಕ್ಕೆ ವಿಧಾಯಕ ರೂಪ ನೀಡಲು ಪ್ರಯತ್ನಿಸಬೇಕು. ರಾಜಕೀಯ ಉದ್ದೇಶದಿಂದ ಮಾಡುವ ಚರ್ಚೆಯನ್ನು ಬಹು ನಿಕೃಷ್ಟವೆಂದು ಪರಿಗಣಿಸಬೇಕು, ಅಲ್ಲದೆ ವೈಚಾರಿಕ ಕ್ಷೇತ್ರದಲ್ಲಿ ಅದಕ್ಕೆ ಯಾವ ಮಹತ್ವವನ್ನೂ ನೀಡಬಾರದು.
ಸಮತಾಯುಕ್ತ ಸಮಾಜಜೀವನಕ್ಕಾಗಿ ಡಾ. ಅಂಬೇಡ್ಕರರು ಜೀವನವಿಡೀ ಸಂಘರ್ಷ ಮಾಡಿದರು. ‘ಸ್ವಾತಂತ್ರ್ಯ, ಸಮತೆ ಮತ್ತು ಬಂಧುತ್ವವು ನನ್ನ ಜೀವನದ ತತ್ವತ್ರಯಿಗಳಾಗಿದ್ದು, ಅದನ್ನು ನಾನು ಫ್ರೆಂಚ್ ರಾಜ್ಯಕ್ರಾಂತಿಯಿಂದೇನೂ ಪಡೆದಿಲ್ಲ; ನನ್ನ ಗುರು ಭಗವಾನ್ ಗೌತಮ ಬುದ್ಧರ ಬೋಧನೆಗಳಿಂದ ನಾನು ಅದನ್ನು ಪಡೆದಿದ್ದೇನೆ’’ ಎಂದು ಬಾಬಾಸಾಹೇಬರು ಹೇಳುತ್ತಿದ್ದರು. ಮುಂದೆ ಅವರು ಹೇಳುತ್ತಿದ್ದರು, ಸ್ವಾತಂತ್ರ್ಯ ಮತ್ತು ಸಮತೆಗಳಿಗಿಂತಲೂ ನಾನು ಬಂಧುತ್ವಕ್ಕೆ ಅತ್ಯಧಿಕ ಮಹತ್ವದ ಸ್ಥಾನ ನೀಡುವೆ. ಬಂಧುಭಾವನೆಯೇ ಧರ್ಮ, ಇದು ಅವರ ಮಾತಿನ ಆಶಯವಾಗಿದೆ. ಅವರು ಹೇಳುತ್ತಿದ್ದರು, ಪೂರ್ಣ ಸ್ವಾತಂತ್ರ್ಯವು ಸಮತೆಯನ್ನು ನಾಶಗೊಳಿಸುತ್ತದೆ ಹಾಗೂ ಪೂರ್ಣ ಸಮತೆಯು ಸ್ವಾತಂತ್ರ್ಯವನ್ನು ನಾಶಗೊಳಿಸುತ್ತದೆ. ಸಮತೆ ಮತ್ತು ಸ್ವಾತಂತ್ರ್ಯಗಳ ಅನುಭವ ಪಡೆಯಬೇಕಾದರೆ ಮತ್ತು ಅವು ಸ್ಥಿರಗೊಳ್ಳಬೇಕಾದರೆ, ಸಮಾಜದಲ್ಲಿ ಬಂಧುಭಾವನೆ ಬೆಳೆಯಬೇಕು. ಸಂವಿಧಾನ ಸಮಿತಿಯಲ್ಲಿ ತಮ್ಮ ಕೊನೆಯ ಭಾಷಣದಲ್ಲಿ ಅವರು ಹೇಳಿದ್ದರು, ಭಾರತದ ಪ್ರತಿಯೊಬ್ಬ ನಾಗರಿಕನೂ ಇತರರೊಂದಿಗೆ ಖಾಸಾ ಸೋದರನಿಗಿಂತಲೂ ಅಧಿಕ ಪ್ರೇಮದಿಂದ ವರ್ತಿಸಬೇಕು. ಈ ಬಂಧುಭಾವನೆಯೇ ನಮ್ಮನ್ನು ಒಂದಾಗಿಡುವುದು.
ಸ್ವಾತಂತ್ರ್ಯ ಮತ್ತು ಸಮತೆಗಳನ್ನು ಕಾಯ್ದೆ ಮಾಡಿ ನೀಡಲು ಸಾಧ್ಯವಿಲ್ಲ. ನಮ್ಮ ಸಂವಿಧಾನದ ಮೂಲಭೂತ ಅಧಿಕಾರಗಳಲ್ಲಿ
ಸ್ವಾತಂತ್ರ್ಯ ಮತ್ತು ಸಮತೆ ಸೇರಿವೆ. ಸಂವಿಧಾನದಲ್ಲಿ ಸೇರಿಕೊಂಡಿರುವುದರಿಂದ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಏನೋ ನಿರ್ಬಂಧಗಳು ಬಂದಿದ್ದರೆ ಅಥವಾ ವ್ಯಕ್ತಿಯೊಂದಿಗೆ ಸಮತೆಯ ವ್ಯವಹಾರ ನಡೆಯದಿದ್ದರೆ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ನ್ಯಾಯ ಯಾಚಿಸಬಹುದು. ಸ್ವಾತಂತ್ರ್ಯ ಮತ್ತು ಸಮತೆಗಳ ಅನುಭವ ನೀಡುವಂತೆ ಸಂವಿಧಾನವು ನಿರ್ಬಂಧಿಸಿದೆ. ಆದರೆ ನಮ್ಮ ಸಂವಿಧಾನದಲ್ಲಿ ಬಂಧುತ್ವವನ್ನು ಒಂದು ಮೂಲಭೂತ ಅಧಿಕಾರವೆಂದು ನೋಂದಾಯಿಸಿಲ್ಲ. ಕಾರಣ ಅದು ಹಕ್ಕು ಅಥವಾ ಅಧಿಕಾರವಾಗಲು ಸಾಧ್ಯವಿಲ್ಲ. ಬಂಧುತ್ವವು ಮಾನಸಿಕ ಭಾವನೆಯಾಗಿದೆ. ಅದು ಮನಸ್ಸಿನ ಒಂದು ಅವಸ್ಥೆ. ಭಾವನಾತ್ಮಕ ದೃಷ್ಟಿಯಿಂದ ನಾನು ಇನ್ನೊಬ್ಬನನ್ನು ನನ್ನಂತೆಯೇ ಕಾಣುವುದು ಮಾನಸಿಕ ವ್ಯವಹಾರವಾಯಿತು. ಬಂಧುತ್ವದ ಮಾನಸಿಕ ವ್ಯವಹಾರವನ್ನು ಜಗತ್ತಿನ ಯಾವುದೇ ಕಾಯ್ದೆಯು ಜಾರಿಗೊಳಿಸಲಾರದು.
ಬಂಧುತ್ವದ ಇನ್ನೊಂದು ಹೆಸರೇ ಸಾಮರಸ್ಯ. ಬಂಧುತ್ವ ಅಥವಾ ಸಾಮರಸ್ಯವು ಸ್ವಾತಂತ್ರ್ಯ ಮತ್ತು ಸಮತೆಯ ಭರವಸೆ ನೀಡಬಲ್ಲದು. ಸಾಮರಸ್ಯ ಮತ್ತು ಬಂಧುತ್ವ ಇವುಗಳಲ್ಲಿ ಯಾವುದೇ ರೀತಿಯ ದ್ವೈತ್ವವಿಲ್ಲ, ಯಾವುದೇ ರೀತಿಯ ಸಂಘರ್ಷವಿಲ್ಲ. ಡಾ. ಅಂಬೇಡ್ಕರರು ‘ಭಗವಾನ್ ಗೌತಮ ಬುದ್ಧ ಮತ್ತು ಅವನ ಧಮ್ಮ’ ಎಂಬ ಗ್ರಂಥವನ್ನು ಬರೆದಿದ್ದಾರೆ. ಈ ಗ್ರಂಥದ (ತೃತೀಯ ಖಂಡ) ಮರಾಠಿ ಅನುವಾದದ ಎರಡು ವಚನಗಳು ಸಾಮರಸ್ಯದ ದೃಷ್ಟಿಯಿಂದ ಮಹತ್ವದ್ದಾಗಿವೆ. ಭಗವಾನ್ ಗೌತಮ ಬುದ್ಧರು ಸಮತೆಯ ಕುರಿತಾಗಿ ಹೇಳಿದ್ದನ್ನು ಬಾಬಾಸಾಹೇಬರು ಬರೆಯುತ್ತಾರೆ, ‘‘ಜಾತಿ ವಿಷಮತೆ, ಉಚ್ಚತೆ, ನೀಚತೆಯ ಭೇದಭಾವವಿರಲು ಸಾಧ್ಯವಿಲ್ಲ, ಎಲ್ಲರೂ ಸಮಾನರು- ಇತರರಂತೆಯೇ ನಾನು, ನಮ್ಮಂತೆಯೇ ಇತರರು, ಎಂಬ ವಿಚಾರದಿಂದ ಇತರರೊಂದಿಗೆ ಸಮರಸವಾಗಿ’’. ಭಗವಾನ್ ಗೌತಮ ಬುದ್ಧರು ಈ ರೀತಿಯ ಅನೇಕ ಉಪದೇಶಗಳನ್ನು ನೀಡಿದ್ದಾರೆ. ಅವರು ಗೃಹಸ್ಥಾಶ್ರಮಕ್ಕೆ ಹತ್ತು ಸಾಮರಸ್ಯಸೂತ್ರಗಳನ್ನು ಹೇಳಿದ್ದು, ಅವು ಹೀಗಿವೆ-
1) ತಾರುಣ್ಯದಲ್ಲಿ ಪರಿಶ್ರಮ ಮತ್ತು ಸನ್ಮಾರ್ಗದಿಂದ ಹಣ ಸಂಪಾದಿಸದಿದ್ದರೆ ವೃದ್ಧಾಪ್ಯದಲ್ಲಿ ಪಶ್ಚಾತ್ತಾಪಪಡಬೇಕಾದೀತು. ಹಣದ ಅಭಾವದಿಂದ ವೃದ್ಧಾಪ್ಯದಲ್ಲಿ ದುರವಸ್ಥೆಯಾಗುತ್ತದೆ.
2) ಎಲ್ಲ ರೀತಿಯಿಂದ ಅನುಕೂಲತೆಯಿದ್ದಾಗ, ಸಾಧನಗಳಿದ್ದಾಗ ಶಿಕ್ಷಣ ಪಡೆಯದಿದ್ದರೆ ಮುಂದೆ ಜೀವನವಿಡೀ ಅಳುತ್ತ ಕೂರಬೇಕಾದೀತು, ಪಶ್ಚಾತ್ತಾಪಪಡಬೇಕಾದೀತು, ಆದರೆ ಹೋದ ಕಾಲವು ಮತ್ತೆ ಮರಳಿ ಬರದು.
3) ಹಿಂದೆ ಎಂದೋ ಸುಳ್ಳಾಟಗಳನ್ನು ಮಾಡಿದ್ದರೆ, ಬೈದಾಡಿದ್ದರೆ, ತುಂಟಾಟ ಮಾಡಿದ್ದರೆ ವೃದ್ಧಾಪ್ಯದಲ್ಲಿ ದುಃಖ ಅನುಭವಿಸಬೇಕಾದೀತು, ಪಶ್ಚಾತ್ತಾಪಪಡಬೇಕಾದೀತು.
4) ತಾರುಣ್ಯದಲ್ಲಿ ಅನೇಕ ಪ್ರಾಣಿಗಳನ್ನು ಕೊಂದಿದ್ದರೆ ಅಥವಾ ಕ್ರೂರವಾಗಿ ನಡೆಸಿಕೊಂಡಿದ್ದರೆ, ವೃದ್ಧಾಪ್ಯದಲ್ಲಿ ಹಿಂದೆ ಮಾಡಿದ್ದ ಕರ್ಮಗಳ ನೆನಪುಗಳು ಕಾಡಿಸಿ ದುಃಖವಾಗುತ್ತಿರುತ್ತದೆ.
5) ತನ್ನ ಹೆಂಡತಿಯನ್ನು ಬಿಟ್ಟು ಇತರ ಸ್ತ್ರೀಯರ ಸಹವಾಸ ಮಾಡಿದರೆ ಅದರ ಪರಿಣಾಮ ಕೆಟ್ಟದಾದೀತು ಹಾಗೂ ವೃದ್ಧಾಪ್ಯದಲ್ಲಿ ಈ ಕರ್ಮಗಳು ಕಂಗೆಡಿಸುವವು.
6) ಮನೆಯಲ್ಲಿ ಆಹಾರ, ವಸ್ತ್ರ ಧಾರಾಳವಾಗಿದ್ದರೂ ಅದರಲ್ಲಿ ಒಂದಷ್ಟೂ ದಾನಧರ್ಮ ಮಾಡದಿದ್ದರೆ ವೃದ್ಧಾಪ್ಯದಲ್ಲಿ ಮನಸ್ಸು ಖಿನ್ನವಾಗುತ್ತದೆ.
7) ತಾರುಣ್ಯದಲ್ಲಿ ತಂದೆತಾಯಿಯರನ್ನು ತಿರಸ್ಕಾರದಿಂದ ನಡೆಸಿಕೊಂಡರೆ ವೃದ್ಧಾಪ್ಯದಲ್ಲಿ ತಮ್ಮ ಪಾಲಿಗೂ ಅದೇ ಅವಸ್ಥೆಯುಂಟಾಗುವ ಅಪಾಯವಿದ್ದು, ಅಂತಹ ಸಮಯದಲ್ಲಿ ಪಶ್ಚಾತ್ತಾಪಪಟ್ಟು ಉಪಯೋಗವಿಲ್ಲ.
8) ತಂದೆಯು ತನ್ನ ಮಕ್ಕಳನ್ನು ಚೆನ್ನಾಗಿ ನಡೆಸಿಕೊಳ್ಳುತ್ತಾನೆ, ಅವುಗಳ ಬಗ್ಗೆ ಕಾಳಜಿ ವಹಿಸುತ್ತಾನೆ, ಸದುಪದೇಶ ನೀಡುತ್ತಾನೆ, ಆದರೆ ತಾರುಣ್ಯದಲ್ಲಿ ಅತ್ತ ನಿರ್ಲಕ್ಷ್ಯ ಮಾಡಿದರೆ ವೃದ್ಧಾಪ್ಯದಲ್ಲಿ ಪಶ್ಚಾತ್ತಾಪವಾದೀತು.
9) ತಾರುಣ್ಯದಲ್ಲಿ ಸಾಧು-ಸಂತರ ಉಪದೇಶಗಳನ್ನು ಪಾಲಿಸಬೇಕು, ಅವರನ್ನು ಆದರಿಸಬೇಕು, ಹೀಗೆ ಮಾಡದಿದ್ದರೆ ಮುಂದೆ ಪಶ್ಚಾತ್ತಾಪವುಂಟಾದೀತು.
10) ತಾರುಣ್ಯದಲ್ಲಿ ತಪಶ್ಚರ್ಯೆ ಎಂದರೆ ಏನೋ ಸಾಧಿಸಲು ಕಾಯಾ, ವಾಚಾ, ಮನಸಾ ಪರಿಶ್ರಮ ಮಾಡಬೇಕಾಗುತ್ತದೆ. ಅದನ್ನು ಮಾಡದಿದ್ದರೆ ವೃದ್ಧಾಪ್ಯದಲ್ಲಿ ದುಃಖ ಅನುಭವಿಸಬೇಕಾಗುತ್ತದೆ.
ಬೇರೆ ಮಾತುಗಳಲ್ಲಾದರೆ, ಭಗವಾನ್ ಬುದ್ದ ಏನು ಅಥವಾ ಬಾಬಾಸಾಹೇಬರೇನು ಇಬ್ಬರೂ ಮಾನವಧರ್ಮವನ್ನು ಹೇಳುತ್ತಾರೆ. ಸಮಸ್ತ ‘ಮಾನವ’ರೂ ಈ ವಿಷಯದಲ್ಲಿ ಸಮಾನರಾಗಿದ್ದಾರೆ. ಅವರಲ್ಲಿ ಯಾವುದೇ ರೀತಿಯ ಭೇದಭಾವ ಮಾಡಬಾರದು. ಅಷ್ಟೇಕೆ ಜಡ ಅಥವಾ ಚೇತನ ಸ್ವರೂಪದಲ್ಲಿ ಸರ್ವ ಪ್ರಾಣಿಮಾತ್ರರೂ ಮನುಷ್ಯರಂತೆಯೇ ಇರುತ್ತವೆ. ಅವುಗಳಿಗೂ ಸುಖ-ದುಃಖಗಳ ಸಂಜ್ಞೆಯಿರುತ್ತದೆ. ಮನುಷ್ಯನು ಅದನ್ನು ಮಾತಿನಿಂದ ವ್ಯಕ್ತಪಡಿಸುತ್ತಿದ್ದರೆ, ಇತರ ಪ್ರಾಣಿಗಳಿಗೆ ಮಾತನಾಡಲು ಬರುತ್ತಿಲ್ಲ. ಹಾಗೆಂದೇ ಮನುಷ್ಯಪ್ರಾಣಿಯು ಶ್ರೇಷ್ಠನಾಗಿರುವುದರಿಂದ ಅವನು ಸಮಸ್ತರ ಬಗ್ಗೆಯೂ ಆಲೋಚಿಸಬೇಕು.
ಈಗ ಸಮತೆಯ ಅರ್ಥಕ್ಕೆ ಸಂಬಂಧಿಸಿ ಸ್ವಲ್ಪ ಯೋಚಿಸಬೇಕು. ಆಧುನಿಕ ಕಾಲದಲ್ಲಿ ಸಮತೆಯ ವಿಚಾರದ ದೃಷ್ಟಿಯಿಂದ ಅಮೆರಿಕದ ಸ್ವಾತಂತ್ರ್ಯದ ಘೋಷಣಾಪತ್ರದಲ್ಲಿನ ‘ಎಲ್ಲ ಮಾನವರೂ ಹುಟ್ಟಿನಿಂದ ಸಮಾನರು’ ಎಂಬ ವಾಕ್ಯಕ್ಕೆ ಬಹಳ ಮಹತ್ವ ಬಂದಿದೆ. ಎಲ್ಲ ಮಾನವರೂ ಹುಟ್ಟಿನಿಂದ ಸಮಾನರಾಗಿರುವುದರಿಂದ ಅಸಮಾನತೆಯನ್ನು ನಿರ್ಮಿಸುವ ಮನುಷ್ಯನಿರ್ಮಿತ ಕಾಯ್ದೆ ಅಥವಾ ಧರ್ಮವು ಹೇರಿದ ಕಾಯ್ದೆಗಳು ಅಸಿಂಧುವೆನಿಸುತ್ತವೆ. ಕಾಯ್ದೆಯೆದುರು ಎಲ್ಲ ಮನುಷ್ಯರೂ ಸಮಾನರು, ಇದು ಸಮತೆಯ ವಿಷಯದಲ್ಲಿ ಎರಡನೆಯ ನಿಯಮವೆನಿಸುತ್ತದೆ. ಹುಟ್ಟಿನಿಂದ ಎಲ್ಲ ಮನುಷ್ಯರೂ ಸಮಾನರಾಗಿದ್ದರೂ, ಗುಣದಿಂದ, ಸಾಮರ್ಥ್ಯದಿಂದ, ಕ್ಷಮತೆಯಿಂದ ಎಲ್ಲ ಮಾನವರೂ ಸಮಾನರಲ್ಲ. ಇದರಿಂದ ಒಂದು ವಿರೋಧಾಭಾಸ ತಯಾರಾಗುತ್ತದೆ. ಅದರಿಂದ ಮಾರ್ಗ ಶೋಧಿಸುವಲ್ಲಿ, ಕಾಯ್ದೆಯೆದುರು ಎಲ್ಲರೂ ಸಮಾನರಾಗಿದ್ದರೂ ಅಸಮಾನ ಮತ್ತು ಸಮಾನ ಜನರಿಗೆ ಒಂದೇ ರೀತಿಯ ಕಾಯ್ದೆ ಜಾರಿಗೊಳಿಸಲು ಆಗುತ್ತಿಲ್ಲ. ಹಾಗೆ ಮಾಡಿದಲ್ಲಿ ಕ್ಷಮತೆಯಲ್ಲಿ ದೊಡ್ಡವರಾಗಿರುವವರು ಅಸಮಾನ ಜನರಿಗೆ ಮುಂದೆ ಬರಲು ಬಿಡಲಾರರು. ಇಂತಹ ಪರಿಸ್ಥಿತಿಯಲ್ಲಿ ಜೀವನ ಸಂಘರ್ಷದಲ್ಲಿ ಸಾಮರ್ಥ್ಯವಂತನು ಉಳಿಯುವನು. ಈ ತತ್ವವು ಮಾನ್ಯವಾಗಿದ್ದಂತಿತ್ತು. ಇದನ್ನು ಸೋಶಿಯಲ್ ಡಾರ್ವಿನಿಸಂ ಎನ್ನುತ್ತಾರೆ. ಸೋಶಿಯಲ್ ಡಾರ್ವಿನಿಸಂ ಮಾನ್ಯಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಅಸಮಾನ ಜನರೊಂದಿಗೆ ಬೇರೆಯೇ ರೀತಿಯಲ್ಲಿ ವ್ಯವಹರಿಸಬೇಕಾಗುತ್ತದೆ. ಸಮತೆಯ ತತ್ವವನ್ನು ಎಲ್ಲ ಮನುಷ್ಯರೂ ಸಮಾನರೆಂದು ಪರಿಗಣಿಸಿ ಜಾರಿಗೊಳಿಸಲು ಸಾಧ್ಯವಿಲ್ಲ. ದುರ್ಬಲ ಜನರಿಗಾಗಿ ವಿಶೇಷ ರೀತಿಯ ಸಂರಕ್ಷಣಾತ್ಮಕ ವ್ಯವಸ್ಥೆ ಮಾಡಬೇಕಾಗುತ್ತದೆ. ಅವರೊಂದಿಗೆ ಬೇರೆಯೇ ರೀತಿಯಿಂದ ವ್ಯವಹರಿಸಬೇಕಾಗುತ್ತದೆ. ಕ್ಷಮತೆಯಲ್ಲಿ ಸಮಾನರಾದ ಜನರಿಗೆ ಒಂದು ನಿಯಮವಿದ್ದರೆ, ಅದೇ ನಿಯಮವನ್ನು ಕ್ಷಮತೆಯಿಂದ ವಿಷಮ ಜನರಿಗೂ ಅನ್ವಯಿಸಲು ಸಾಧ್ಯವಿಲ್ಲ.
ಎಲ್ಲರನ್ನೂ ಸಮಾನ ಮಟ್ಟಕ್ಕೆ ತರಲು ಸಕಾರಾತ್ಮಕ ಭೇದಭಾವ ಮಾಡಬೇಕಾಗುತ್ತದೆ. ನಮ್ಮ ಸಂವಿಧಾನವು ಅದಕ್ಕೆ ಅನುಮತಿ ನೀಡಿದೆ. ಅಲ್ಲದೆ ಸಾಮಾಜಿಕ ನ್ಯಾಯದ ಬಗ್ಗೆ ಯೋಚಿಸಿದರೆ ಅದು ನ್ಯಾಯಸಂಗತವಾಗಿದೆ. ಹಾಗೆಂದೇ ಸಮತೆ ನಿರ್ಮಿಸಲು ಕ್ಷಮತಾಯುಕ್ತ ಜನರಿಗಾಗಿ ಹಾಗೂ ತುಲನೆಯಲ್ಲಿ ದುರ್ಬಲವಿರುವ ಜನರಿಗಾಗಿ ಬೇರೆ ಬೇರೆಯೇ ರೀತಿಯ ನಿಯಮಗಳನ್ನು ಮಾಡಬೇಕಾಗುತ್ತದೆ. ಸಕಾರಾತ್ಮಕ ಭೇದಭಾವ ಮಾಡಬೇಕಾಗುತ್ತದೆ. ಸಮತೆಯ ಕುರಿತು ಭಾಷಣ ಮಾಡುವುದೇನೋ ಸುಲಭ, ಆದರೆ ಈ ರೀತಿಯಾಗಿ ಅದನ್ನು ಜಾರಿಗೊಳಿಸುತ್ತಲೇ, ಸಮಾಜದಲ್ಲಿ ಅನೇಕ ರೀತಿಯ ತಪ್ಪುತಿಳಿವಳಿಕೆ ಅಥವಾ ಮನಃಸ್ತಾಪ ಬೆಳೆಯತೊಡಗುತ್ತದೆ. ಅದರಿಂದ ಪಾರಾಗುವ ಬಗೆ ಹೇಗೆ ? ‘ಸಾಮರಸ್ಯ’ವೇ ಅದಕ್ಕೆ ಪರಿಹಾರವಾಗಿದೆ.
ಸಮಸ್ತ ಸಮಾಜ ನನ್ನದು, ಸಮಾಜದ ಎಲ್ಲರೂ ನನ್ನ ಆತ್ಮೀಯರು, ಸ್ವಕೀಯರು ಎಂಬ ಭಾವನೆ ಎಲ್ಲರ ಮನಸ್ಸಿನಲ್ಲಿಯೂ ಮೂಡಿಬಂದರೆ, ಸಮಾಜದ ದುರ್ಬಲ ಘಟಕಗಳಿಗೆ ಬೇರೆಯೇ ನಿಯಮ ಹಾಗೂ ಬೇರೆಯೇ ವ್ಯವಸ್ಥೆ ಏಕೆ ಮಾಡಬೇಕೆಂದು ತಿಳಿಯಲು ಕಠಿಣವಾಗದು. ಅದಕ್ಕಾಗಿ ಸಮಗ್ರ ಸಮಾಜದ ಬಗ್ಗೆ ಸಮರಸ ಭಾವನೆ ಮನಸ್ಸಿನಲ್ಲಿರಬೇಕು. ಸಾಮರಸ್ಯ (ಸಮರಸತೆ) ಎಂಬ ಶಬ್ದಬಳಕೆಯನ್ನು ಪಂ. ದೀನದಯಾಳ್ ಉಪಾಧ್ಯಾಯರು ಮೊಟ್ಟಮೊದಲು ಏಕಾತ್ಮ ಮಾನವ ದರ್ಶನ ಎಂಬ ಪ್ರಬಂಧದಲ್ಲಿ ತಂದಿದ್ದಾರೆ. ಅವರು ಹೇಳಿದ್ದರ ಸಾರಾಂಶವೆಂದರೆ, ‘‘ಮನುಷ್ಯನು ಏಕಾಕಿ ಪ್ರಾಣಿಯಾಗಿರದೆ ಆತ ಅನೇಕಾಂಗಿ ಪ್ರಾಣಿಯಾಗಿದ್ದಾನೆ. ಏಕಕಾಲಕ್ಕೇ ಯಾರದೋ ಮಗ, ಸೋದರ, ಚಿಕ್ಕಪ್ಪ, ಮಾವ, ತಂದೆ, ಪತಿ, ಇಂತಹ ವಿವಿಧ ಸಂಬಂಧಗಳಲ್ಲಿ ಬೆಸೆದುಕೊಂಡಿದ್ದಾನೆ. ಅದೇ ವೇಳೆಗೆ ಕುಟುಂಬ, ಕುಲ, ಗ್ರಾಮ, ಸಮಾಜ, ದೇಶ ಮತ್ತು ವಿಶ್ವ ಇವುಗಳೊಂದಿಗೂ ಜೋಡಿಸಿಕೊಂಡಿದ್ದಾನೆ. ಮನುಷ್ಯನು ವಿಶ್ವದ ಅವಿಭಾಜ್ಯ ಘಟಕನಾಗಿದ್ದಾನೆ. ಮನುಷ್ಯ ಜೀವನವು ಪರಸ್ಪರಾವಲಂಬಿ, ಪರಸ್ಪರಪೂರಕ ಮತ್ತು ಪರಸ್ಪರಾನುಕೂಲವಾಗಿರ
ಬೇಕಾಗುತ್ತದೆ. ‘‘ಈ ರೀತಿಯಾಗಿದ್ದರೇನೇ ಮನುಷ್ಯ ಜೀವನ ಸುಖಿಯಾದೀತು. ಇದನ್ನು ಸಾಮರಸ್ಯ ಎನ್ನುತ್ತಾರೆ. ಮನುಷ್ಯ ಮನುಷ್ಯರೊಳಗಿನ ಸಮತೆಯು ವೈಶ್ವಿಕವಾಗಿರುವಂತೆಯೇ, ಮನುಷ್ಯನಿಗೆ ಸಂಬಂಧಿಸಿ ಸಾಮರಸ್ಯವೂ ವೈಶ್ವಿಕವಾಗಿದೆ. ಅಲ್ಲದೆ ಸಾಮರಸ್ಯವು ಸಮತೆ ಮತ್ತು ಸ್ವಾತಂತ್ರ್ಯಗಳ ಬಗ್ಗೆ ಶಾಶ್ವತ ಭರವಸೆ ನೀಡುವಂತಹದ್ದೂ ಆಗಿದೆ. ಇದಕ್ಕಾಗಿ ಸಮರಸಭಾವನೆ ಮೂಡಿಸಲು ಎಲ್ಲ ಸ್ತರಗಳಲ್ಲೂ ಸತತವಾಗಿ ಪ್ರಯತ್ನಿಸುತ್ತಿರಬೇಕಾಗಿದೆ. ಬಾಬಾಸಾಹೇಬರ ಜನ್ಮದಿವಸವನ್ನು ಕೇಂದ್ರ ಸರ್ಕಾರವು ‘ಸಾಮರಸ್ಯ ದಿವಸ’ವೆಂದು ಘೋಷಿಸಿ ಒಂದು ಸೂಕ್ತ ಹೆಜ್ಜೆಯಿಟ್ಟಿದೆ, ಎನ್ನಬಹುದು.

   

Leave a Reply