ಸರಳ, ಸಜ್ಜನ ಬಿ.ಎನ್‍.ಶ್ರೀ.

ಸ್ಮರಣೆ - 0 Comment
Issue Date : 06.02.2016

ದಾನಕ್ಕಿಂತ ಮಿಗಿಲಾದ ಧರ್ಮವಿಲ್ಲ, ತೆಗೆದುಕೊಳ್ಳುವುಕ್ಕೆ ಮಾತ್ರ ಕೈಯೊಡ್ಡುವನು ಅತಿನೀಚ. ಮತ್ತೊಬ್ಬರಿಗೆ ಕೊಡುವುದಕ್ಕೆ ಯಾರು ಕೈಯನ್ನು ಎತ್ತುತ್ತಾರೋ ಅವರು ಮಾತ್ರ ಅತ್ಯುತ್ತಮರು, ಅರ್ಧ ಹೊಟ್ಟೆ ತುಂಬಿದರೂ ಚಿಂತೆಯಿಲ್ಲ ಕೊನೆಯ ಚೂರು ರೊಟ್ಟಿಯನ್ನ್ನಾದರೂ ಹಸಿದವನಿಗೆ ನೀಡಿ, ಇತ್ಯಾದಿ ನುಡಿಮುತ್ತುಗಳು ನಮ್ಮ ಧರ್ಮದ ಸಾರ.
ಮೇಲಿನ ವಾಕ್ಯಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಜೀವನ ಪೂರ್ಣ ಅದೇ ಪಥದಲ್ಲಿ ನಡೆದು ಈಗ ನಮ್ಮೊಂದಿಗಿಲ್ಲದ ಆದರ್ಶ ವ್ಯಕ್ತಿ ಬಿ.ಎನ್.ವಿ.
ಸುಬ್ರಮಣ್ಯಂ. ಬಡತನದಲ್ಲಿ ಬೆಳೆದು ಬಂದರೂ ಸೋಲೊಪ್ಪಿಕೊಳ್ಳದೆ ಸವಾಲಾಗಿ ಸ್ವೀಕರಿಸಿ ಅದನ್ನು ಮೆಟ್ಟಿ ಆರ್ಥಿಕ ಮತ್ತು ವೈಚಾರಿಕ ಶ್ರೀಮಂತಿಕೆಯನ್ನು ತನ್ನದನ್ನಾಗಿ ಮಾಡಿಕೊಂಡ ಅಪರೂಪದ ವ್ಯಕ್ತಿಗಳಲ್ಲಿ ಸುಬ್ರಮಣ್ಯಂ ಒಬ್ಬರು. ಧರ್ಮಮಾರ್ಗದಲ್ಲಿ ಸಂಪಾದಿಸಿದ ಧನದ ಸ್ವಲ್ಪವನ್ನಾದರೂ ನಮಗೆ ಆಶ್ರಯ ನೀಡಿದ ಸಮಾಜಕ್ಕೆ ಅರ್ಪಿಸುವುದೂ ಧರ್ಮಮಾರ್ಗ. ಇದನ್ನು ಚಾಚೂ ತಪ್ಪದೆ ಪಾಲಿಸಿ, ಸಂಪಾದಿಸಿದ ಹೆಚ್ಚು ಭಾಗವನ್ನು ಸಮಾಜಕ್ಕೆ ಅರ್ಪಿಸಿದ ಸರಳ ಸಜ್ಜನ ಶ್ರೇಷ್ಠ ವ್ಯಕ್ತಿ ಬಿ.ಎನ್.ವಿ.ಯವರು.
‘ಅನ್ನೇನ ಕ್ಷಣಿಕಾ ತೃಪ್ತಿ: ಯವಜ್ಜೀವಂ ಚ ವಿದ್ವಯಾ‘ (ಅನ್ನ ಕ್ಷಣಿಕ ತೃಪ್ತಿ ನೀಡುತ್ತದೆ ವಿದ್ಯೆ ಜೀವನಪೂರ್ಣ ತೃಪ್ತಿ ನೀಡುತ್ತದೆ) ಎಂಬ ಸೂಕ್ತಿಗೆ ತಕ್ಕಂತೆ ಜೀವನಪೂರ್ಣ ತೃಪ್ತಿ ನೀಡುವ ವಿದ್ಯಾದಾನಕ್ಕಾಗಿ ಜ್ಯೋತಿ ವಿದ್ಯಾ ಕೇಂದ್ರವನ್ನು ಸ್ಥಾಪಿಸಿ ಅತಿ ಬೇಡಿಕೆ ಇರುವ ಶಾಲೆಯನ್ನಾಗಿ ಪರಿವರ್ತಿಸಿದರು. ಮಾತ್ರವಲ್ಲ ಉನ್ನತ ವಿದ್ಯೆ ನೀಡಲು ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದರು. ಇದೆಲ್ಲವನ್ನು ಶೃಂಗೇರಿ ಜಗದ್ಗುರುಗಳಿಗೆ ಸಮರ್ಪಿಸುವುದಾಗಿ ಘೋಷಿಸಿದ್ದೂ ಅವರ ತ್ಯಾಗಬುದ್ದಿಯ ಸಂಕೇತ. ಶ್ರೀಯುತರು 1985ರಿಂದ ಇಂದಿನ ತನಕ ತಮ್ಮ ನಿವಾಸದಲ್ಲಿ 35-40 ವಿದ್ಯಾರ್ಥಿಗಳಿಗೆ ಉಚಿತ ವೇದಪಾಠ ಮತ್ತು ವಸತಿ ಭೋಜನದ ವ್ಯವಸ್ಥೆಯನ್ನು ಮಾಡಿ ಸಹಸ್ರಾರು ಯುವಕರನ್ನು ವೇದ ಪಂಡಿತರನ್ನಾಗಿ ಮಾಡಿದ್ದಾರೆ. ಕೃಷ್ಣ ಯಜುರ್ವೇದದ ಕನ್ನಡದ 10 ಅವತರಣಿಕೆ ಹೊರತಂದಿದ್ದಾರೆ. 11ನೆಯದು ತಯಾರಾಗುತ್ತಿದೆ.
ಆಶ್ರಯರಹಿತ ಮತ್ತು ಬಡ ಹೆಣ್ಣುಮಕ್ಕಳಿಗೆ ಆಶ್ರಯತಾಣವಾಗಿ ಡಿ.ವಿ.ಜಿ. ರಸ್ತೆಯಲ್ಲಿರುವ ‘ಅಬಲಾಶ್ರಮ’ದ ಅಧ್ಯಕ್ಷರಾಗಿ ಯೋಗ್ಯ ಮಾರ್ಗದರ್ಶನ ನೀಡುತ್ತಿದ್ದರು. ಹಲವಾರು ಹೆಣ್ಣುಮಕ್ಕಳಿಗೆ ಯೋಗ್ಯ ವರನನ್ನು ಹುಡುಕಿ ವಿವಾಹ ಏರ್ಪಟ್ಟಾಗ ಸ್ವತಃ
ಬಿ.ಎನ್.ವಿ. ದಂಪತಿಗಳು ಕನ್ಯಾದಾನ ಮಾಡಿದ್ದಾರೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷರಾಗಿ ಕಳೆದ 10-15 ವರ್ಷಗಳಿಂದ ಸಮಾಜದ ಏಳಿಗೆಗೆ ದುಡಿದಿದ್ದಾರೆ. ಅಲ್ಲಿಯೂ ಸಹ ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳಿಗೆ ‘ವಿದ್ಯಾವಾಹಿನಿ’ ಎಂಬ ವಸತಿ ಗೃಹ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದಾರೆ.
ಮರಣಾನಂತರ ನಡೆಯುವ ಉತ್ತರಕರ್ಮಾದಿಗಳಿಗೆ ಅನುಕೂಲವಾಗುವಂತೆ ಚಾಮರಾಜಪೇಟೆಯ ಕೆಂಪಾಂಬುಧಿ ಕೆರೆಯ ಬದಿಯಲ್ಲಿ ‘‘ಕರ್ಮಾಂತರ ವನ’ ಎಂಬ ವ್ಯವಸ್ಥೆಯ ನಿರ್ಮಾಣ ಮಾಡಿದ್ದಾರೆ.
ಜನವರಿ 30 ಶನಿವಾರದಂದು ಬೆಳಗಿನ ಜಾವ
5 ಗಂಟೆಗೆ ಶ್ರೀಯುತರು ಸ್ವರ್ಗಸ್ಥರಾದರೆಂದು ತಿಳಿಸಲು ವಿಷಾದವಾಗುತ್ತದೆ. ಬಿ.ಎನ್.ವಿ.ಯವರಿಗೆ ಸದ್ಗತಿ ಸಿಗುವ ಅರ್ಹತೆ ಇದ್ದೇ ಇದೆ. ಅವರು ಮತ್ತೊಮ್ಮೆ ಹುಟ್ಟಿಬಂದು ಧರ್ಮಕಾರ್ಯಗಳನ್ನು ಮುಂದುವರಿಸಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ.

   

Leave a Reply