ಸರ್ಕಾರ ಐದು ವರ್ಷ ಪೂರೈಸುವ ಲಕ್ಷಣ ಕಾಣಿಸುತ್ತಿಲ್ಲ

ರಾಜ್ಯ ರಾಜಕೀಯ - 0 Comment
Issue Date : 25.11.2013

 

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಬಿಜೆಪಿಯೇ ಮೂಲ ಕಾರಣ ಹೊರತು ಬೇರೇನೂ ಅಲ್ಲ. ಬಿಜೆಪಿಯ ಆಂತರಿಕ ಕಲಹದಿಂದ ರಾಜನೀತಿಯ ಪ್ರಜ್ಞೆಯಿಲ್ಲದವರು ಧ್ವನಿಯೆತ್ತುವುದಕ್ಕೆ ಇದೊಂದು ಸುಲಭ ದಾರಿ ಆಯಿತಷ್ಟೆ. 2018ರ ವಿಧಾನ ಸಭೆ ಚುನಾವಣೆಯಲ್ಲಿ ನಾವು ಸೋಲುವುದು ಖಚಿತ; ಆದ್ದರಿಂದ ಈಗಲೇ ಅಧಿಕಾರದಾಹವನ್ನು ತೀರಿಸಿಕೊಂಡರಾಯಿತು ಎನ್ನುವ ಭ್ರಮೆಯಲ್ಲಿ ಕಾಂಗ್ರೆಸ್ ಇದೆ.
ಭಾರತೀಯರಿಗೆ ಎರಡು ಹೊತ್ತು ಊಟ ಇಲ್ಲದಿದ್ದರೂ ಚಿಂತೆ ಇಲ್ಲ. ಆದರೆ ಭಾರತದ ಧಾರ್ಮಿಕ ಮನೋಭಾವವನ್ನು ಅರೆಕ್ಷಣವೂ ಬಿಟ್ಟಿರಲಾರರು. ಏಕೆಂದರೆ ಭಾರತ ನಿಂತಿರುವುದು ಧರ್ಮ, ಸಂಸ್ಕೃತಿಗಳ ಆಧಾರ ಸ್ತಂಭದ ಮೇಲೆ. ಇಂತಹ ಧರ್ಮ, ಸಂಸ್ಕೃತಿಯನ್ನು ನಾಶ ಮಾಡಲು ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ. ಹೀಗಾಗಿ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೊಗೆಯಲು ಬಹಳ ಸಮಯ ಬೇಕಾಗುವುದಿಲ್ಲ. ಅಹಂಕಾರವಿದ್ದಲ್ಲಿ ಅವಿವೇಕತನ ತಾನಾಗಿಯೇ ಬರುತ್ತದೆ. ಅವಿವೇಕತನ ಇದ್ದಾಗ ಆಡಳಿತ ವ್ಯವಸ್ಥೆ ದಾರಿ ತಪ್ಪುವುದು ಸಹಜ.
ಜನರ ಧಾರ್ಮಿಕ ನಂಬಿಕೆಗಳನ್ನು ಕಿತ್ತೊಗೆಯಲು ಮುಂದಾದ ಸರ್ಕಾರದ ವಿರುದ್ಧ ಈಗ ಎಲ್ಲೆಡೆ ಆಕ್ರೋಶ ಕೇಳಿಬರುತ್ತಿದೆ. ಜನರ ಧಾರ್ಮಿಕ ನಂಬಿಕೆಗಳಿಗೆ ‘ವೌಢ್ಯತನ’ ಎಂದು ಕರೆದು ಸಮಾಜದ ಜನರನ್ನು ಅಮಾಯಕರನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಸರ್ಕಾರ ಕೈ ಹಾಕಿದೆ. ಸರ್ಕಾರ ಕೈ ಹಾಕಿರುವುದು ಹುತ್ತಕ್ಕೆ ಎಂಬುದನ್ನು ಮರೆಯಬಾರದು. ಯಾವ ಯಾವ ಹುತ್ತದಲ್ಲಿ ಯಾವ ಯಾವ ಕ್ರಿಮಿಕೀಟಗಳಿವೆ ಎಂಬುದು ಮೊದಲೇ ಗೊತ್ತಿರುವುದಿಲ್ಲ. ಕಚ್ಚುವ ಕ್ರಿಮಿಕೀಟಗಳಿಗೆ ಮುಖ್ಯಮಂತ್ರಿಯಾದರೇನು, ಪ್ರಧಾನ ಮಂತ್ರಿಯಾದರೇನು, ರಾಷ್ಟ್ರಪತಿಯಾದರೇನು – ಕಚ್ಚುವುದೇ ಅವುಗಳ ಸ್ವಭಾವ. ಈ ವಿಚಾರವನ್ನು ಅಹಂಕಾರದಿಂದ ಮೆರೆಯುವ ರಾಜಕಾರಣಿಗಳು, ಮಂತ್ರಿಗಳು, ಸಾಹಿತಿಗಳು, ಇತಿಹಾಸಕಾರರು, ಸಂಶೋಧಕರು, ಬುದ್ಧಿಜೀವಿಗಳು ಮರೆಯದಿರುವುದು ಸೂಕ್ತ ಮತ್ತು ಅಗತ್ಯ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕಿರುವುದು ‘ಮಂಗನ ಕೈಯಲ್ಲಿ ಮಾಣಿಕ್ಯ’ ಕೊಟ್ಟಂತಾಗಿದೆ, ಅಷ್ಟೆ.
ಇತ್ತೀಚೆಗೆ ಐರ್ಲೆಂಡ್ ದೇಶದಲ್ಲಿ ನಡೆದ ದಿ.ಡಾ.ಸವಿತಾ ಹಾಲಪ್ಪನವರ ಪ್ರಕರಣವನ್ನು ಯಾರೂ ಮರೆಯುವಂತಿಲ್ಲ. ಅನೇಕ ದೇಶದವರು ಐರ್ಲೆಂಡ್ ಸರ್ಕಾರದ ವಿರುದ್ಧ ಥೂ, ಛೀಮಾರಿ ಹಾಕಿದ ನಂತರ ಅಲ್ಲಿಯ ಸರ್ಕಾರ ಎಚ್ಚೆತ್ತುಕೊಂಡು ಕಾನೂನು ತಿದ್ದುಪಡಿಗೆ ಮುಂದಾಯಿತು. ಇದೇ ತರಹ ಕರ್ನಾಟಕದ ಸರ್ಕಾರದ ವಿರುದ್ಧ ಧಾರ್ಮಿಕ ಭಾವನೆಯುಳ್ಳವರಿಂದ ‘ಕರ್ನಾಟಕ ಸರ್ಕಾರ ಬದಲಾವಣೆಗೆ ಒತ್ತಾಯ’ ಎಂಬ ಶಿರೋನಾಮದ ಮೂಲಕ ಹೋರಾಟ ಪ್ರಾರಂಭಿಸುವ ದಿನ ದೂರವಿಲ್ಲ. ಅಲ್ಲಿಯತನಕ ನೋವನ್ನು ತಡೆಯುವ ತಾಳ್ಮೆಯ ಶಕ್ತಿಯನ್ನು ದೇವರು ಕರುಣಿಸಲೆಂದು ಬೇಡುವುದು ನಮ್ಮ ಕೆಲಸ.
ಈಗಾಗಲೇ ಕಾಂಗ್ರೆಸ್ ವಲಯದಲ್ಲೇ ಮುಖ್ಯಮಂತ್ರಿ ಬದಲಾವಣೆಗೆ ಆಗ್ರಹಿಸಿ ಹೈಕಮಾಂಡ್‌ಗೆ ವರದಿ ಕಳುಹಿಸಿರುವ ಸಾಧ್ಯತೆಗಳಿವೆ. ಮುಂದಿನ ಮುಖ್ಯಮಂತ್ರಿಯ ನಾಮಕರಣ ಪ್ರಕ್ರಿಯೆಯನ್ನೂ ಈಗಾಗಲೇ ಹೈಕಮಾಂಡ್ ಕೈಗೊಂಡಿರಬಹುದು! ಮುಂದಿನ ಮುಖ್ಯಮಂತ್ರಿಯ ಹೆಸರು ಮಾತ್ರ ಗೌಪ್ಯವಾಗಿರುತ್ತದೆ. ಅದು ಕಾಂಗ್ರೆಸ್ ಸಂಸ್ಕೃತಿ! ಜೊತೆಗೆ ಇದುವರೆಗಿನ ಕಾಂಗ್ರೆಸ್ ಇತಿಹಾಸ ಹೇಳುವುದೂ ಅದನ್ನೇ.
ಸಂವಿಧಾನ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಧಾರ್ಮಿಕ ನಂಬಿಕೆಗಳನ್ನು ಇಟ್ಟುಕೊಳ್ಳುವ ಹಕ್ಕು ಹಿಂದುಗಳು ಸೇರಿದಂತೆ ಎಲ್ಲರಿಗೂ ಇದೆ. ಹೀಗಿರುವಾಗ ಸಿದ್ದರಾಮಯ್ಯ ಸರ್ಕಾರ ಕೇವಲ ಒಂದು ಕೋಮಿನ ಜನರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡಿದರೆ ಅದು ಸಂವಿಧಾನ ವಿರೋಧಿಯಾಗದೆ? ಧಾರ್ಮಿಕತೆಯ ನೋವನ್ನು ಅನುಭವಿಸುತ್ತಿರುವವರು ತಕ್ಷಣ ಹೋರಾಟಕ್ಕೆ ಮುಂದಾದರೆ ಕರ್ನಾಟಕ ಸರ್ಕಾರ ಬದಲಾವಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಜನಸ್ಪಂದನ

  • ಹೆಚ್.ಬಿ.ಸಿದ್ದಪ್ಪ,ಪಾವಗಡ

 

 

   

Leave a Reply