ಸಲಹೆ ಯಾರೇ ಕೊಡಲಿ, ನಿರ್ಧಾರ ಮಾತ್ರನಿಮ್ಮದಾಗಿರಲಿ. . .

ಮಹಿಳೆ ; ಲೇಖನಗಳು - 0 Comment
Issue Date : 07.05.2016

– ಶಶಿ

ಅವಳು ನೀರಜಾ. ಓದಿದ್ದು ಡಿಗ್ರಿಯಾದರೂ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ. ಬುದ್ಧಿವಂತೆ, ಸದ್ಗುಣಿ, ರೂಪವತಿ. ಎಲ್ಲವೂ ಸರಿ. ಆದರೆ ಆಕೆಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಬರುವುದಿಲ್ಲ. ಯಾವುದೇ ಸಮಸ್ಯೆ ಎದುರಾದರೂ ತಕ್ಷಣವೇ ಒಂದು ಸೂಕ್ತ ಪರಿಹಾರ ಕಂಡುಕೊಂಡು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಆಕೆಗಿಲ್ಲ. ಅದೊಂದು ಕಾರಣಕ್ಕಾಗಿ ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಕಾದ ಪರಿಸ್ಥಿತಿ. ಅದರಲ್ಲೂ ಮದುವೆಯ ವಿಷಯ ಬಂದಾಗಲಂತೂ ಆಕೆಗೆ ಒಂದು ಸ್ಪಷ್ಟ ನಿರ್ಧಾರ ಕೈಗೊಳ್ಳುವುದು ತೀರಾ ಕಷ್ಟವೆನ್ನಿಸುತ್ತದೆ. ಅದಕ್ಕಾಗಿ ಆಕೆ ತನ್ನ ಸ್ನೇಹಿತರ ಮತ್ತು ಒಡಹುಟ್ಟಿದವರ ಸಹಾಯ ಬೇಡುತ್ತಾಳೆ. ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ಹೇಳುತ್ತಾರೆ. ಆಕೆಗೆ ಮತ್ತಷ್ಟು ಗೊಂದಲವಾಗುತ್ತದೆ. ಇದು ಒಬ್ಬ ನೀರಜಾಳ ಕತೆಯಲ್ಲ. ಬಹುಪಾಲು ಹುಡುಗಿಯರಿಗೆ ಮದುವೆಯ ವಿಷಯ ಬಂದಾಗ ಉಂಟಾಗುವ ಗೊಂದಲ ಇದೇ ರೀತಿ ಇರುತ್ತದೆ.
ಮದುವೆ ಎಂದ ಮೇಲೆ ಏನೋ ಒಂದು ನಿರ್ಧಾರ ತೆಗೆದುಕೊಂಡು ಸುಮ್ಮನಿರುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಮುಂದಿನ ಸಂಪೂರ್ಣ ಜೀವನವನ್ನು ಕಳೆಯಬೇಕಾದ ವ್ಯಕ್ತಿಯ ಬಗ್ಗೆ ಯೋಚಿಸದೇ ನಿರ್ಧಾರ ಕೈಗೊಳ್ಳುವುದು ಸರಿಯೂ ಅಲ್ಲ. ಹುಡುಗನ ಪೂರ್ವಾಪರ ತಿಳಿಯಬೇಕು, ಆತನ ಗುಣ-ಸ್ವಭಾವ, ಆದಾಯ, ಜವಾಬ್ದಾರಿಯನ್ನು ಹೊರುವ ಸಾಮರ್ಥ್ಯವುಳ್ಳವನೋ ಅಲ್ಲವೋ, ಕಷ್ಟ ಅರಿತುಕೊಳ್ಳುತ್ತಾನೋ ಇಲ್ಲವೋ, ತನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾನಾ ಇತ್ಯಾದಿ ಎಲ್ಲವನ್ನೂ ಯೋಚಿಸಿಯೇ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ಎಲ್ಲವುಗಳ ಬಗ್ಗೆ ಒಬ್ಬೊಬ್ಬರೂ ಒಂದೊಂದು ಸಲಹೆ ನೀಡುತ್ತಾರೆ. ಅವೆಲ್ಲವೂ ಸೇರಿ ಸ್ವಂತದ್ದೊಂದು ಸ್ಪಷ್ಟವಾದ ನಿರ್ಧಾರ ಕೈಗೊಳ್ಳುವುದು ನಿಜಕ್ಕೂ ಕಷ್ಟವೆನ್ನಿಸುತ್ತದೆ.
ಆದ್ದರಿಂದ ಕೆಲವು ಮಹತ್ವದ ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳುವಾಗ ಹತ್ತಾರು ಜನರ ಬಳಿ ಅದನ್ನು ಚರ್ಚೆ ಮಾಡಿ ಅವರ ಸಲಹೆಗಳನ್ನು ಸ್ವೀಕರಿಸಿ ನಿರ್ಧರಿಸುವ ಬದಲು ಆ ವಿಷಯವನ್ನು ನಿಮ್ಮ ಮನಸ್ಸಿನಲ್ಲೇ ಮಥಿಸಿಕೊಳ್ಳಿ. ನಾಲ್ಕೈದು ಜನರ ಸಲಹೆ ತೆಗೆದುಕೊಳ್ಳುವುದು ಖಂಡಿತ ತಪ್ಪಲ್ಲ. ಆದರೆ ಆ ಸಲಹೆ ನೀಡುವ ಜನರು ಒಳ್ಳೆಯವರೋ ಅಲ್ಲವೋ ಎಂಬುದು ನಿಮಗೆ ಗೊತ್ತಿರಬೇಕು. ಸಮರ್ಪಕ ವ್ಯಕ್ತಿಗಳು ನೀಡಿದ ಸಲಹೆಯನ್ನು ಸ್ವೀಕರಿಸಿ ಅದರ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುವ ಕೆಲಸ ಮಾತ್ರ ನಿಮ್ಮದು. ಏಕೆಂದರೆ ಎಷ್ಟೋ ವಿಷಯಗಳಲ್ಲಿ ನಿಮಗೆ ಕಂಡಿದ್ದಕ್ಕಿಂತ ಬೇರೆಯದೇ ಸತ್ಯವಿದ್ದಿರಬಹುದು. ನಾಲ್ಕೈದು ಜನರ ಸಲಹೆಯಿಂದಾಗಿ ಸತ್ಯ ಮತ್ತು ಸುಳ್ಳನ್ನು ಪರಾಮರ್ಶಿಸುವುದು ನಿಮಗೆ ಸುಲಭವಾಗಬಹುದು.
ಪ್ರತಿಯೊಂದರಲ್ಲೂ ಋಣಾತ್ಮಕ ಅಂಶಗಳೂ, ಧನಾತ್ಮಕ ಅಂಶಗಳೂ ಇವೆ. ಎಲ್ಲವೂ ಪರಿಪೂರ್ಣವಾಗಿರಬೇಕೆಂದಿಲ್ಲ. ಆ ಎಲ್ಲ ಅಂಶಗಳನ್ನೂ ಮನಗಂಡು ಜೊತೆಯಾಗಿ ಬದುಕುವುದಕ್ಕೆ ಈ ಹುಡುಗ ಸೂಕ್ತನೋ ಅಲ್ಲವೋ ಎಂಬ ನಿರ್ಧಾರವನ್ನು ಸ್ವತಃ ಹುಡುಗಿಯೇ ತೆಗೆದುಕೊಳ್ಳಬೇಕೇ ಹೊರತು ಹುಡುಗಿಯ ಪರವಾಗಿ ಇನ್ಯಾರೋ ಅಂಥ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ.
ತಮ್ಮ ಸಂಬಂಧಿಕರೆಂದೋ, ಪರಿಚಯಸ್ಥರೆಂದೋ ಹೇಳುತ್ತ ನಿಮ್ಮ ಮಗಳನ್ನು ಇದೇ ಹುಡುಗನಿಗೆ ಮದುವೆ ಮಾಡಿಕೊಡಿ ಎಂದು ಪೀಡಿಸುವವರೂ ಇರುತ್ತಾರೆ. ಇದರಲ್ಲಿ ಅವರ ವೈಯಕ್ತಿಕ ಹಿತಾಸಕ್ತಿಯೂ ಇದ್ದೀತು. ಹುಡುಗಿಗೆ ಇಷ್ಟವಿಲ್ಲದಿದ್ದರೂ ಸಂಬಂಧಿಕರು ಹೇಳುತ್ತಾರಲ್ಲ ಎಂಬ ಕಾರಣಕ್ಕೋ, ಅಪ್ಪ-ಅಮ್ಮನ ಒತ್ತಾಯಕ್ಕೋ ಹುಡುಗನನ್ನು ಒಪ್ಪಿಕೊಳ್ಳುವ ಎಷ್ಟೋ ಉದಾಹರಣೆಯನ್ನು ನಾವು ನೋಡುತ್ತೇವೆ. ಯಾವುದೇ ಒಂದು ವಿಷಯದಲ್ಲಿ ನಾವು ಸಲಹೆ ನೀಡಬಹುದೇ ಹೊರತು ನಿರ್ಧಾರವನ್ನೂ ನಾವೇ ಕೈಗೊಳ್ಳುವುದು ಸರಿಯಲ್ಲ ಎಂಬ ವಿಷಯ ಆ ಸಂಬಂಧಿಕರಿಗೆ ಎಂದಿಗೂ ಅರ್ಥವಾಗುವುದಿಲ್ಲ. ಪ್ರತಿ ದಿನವೂ ಪೀಡಿಸುವ ಅವರ ಸ್ವಭಾವದಿಂದ ರೋಸಿ ಹೋಗಿ ಒಂದೋ ಹುಡುಗಿ ಅವರು ಹೇಳಿದ ಹುಡುಗನನ್ನು ಒಪ್ಪಿಕೊಳ್ಳಬೇಕಾಗುತ್ತದೆ ಅಥವಾ ಆ ಸಂಬಂಧಿಕರೊಟ್ಟಿಗಿನ ಸಂಬಂಧವನ್ನೇ ಕಡಿದುಕೊಳ್ಳಬೇಕಾಗುತ್ತದೆ.
ಇಲ್ಲೆಲ್ಲ ಹುಡುಗಿಯ ವೈಯಕ್ತಿಕ ನಿರ್ಧಾರಕ್ಕಿಂತ ಹೆಚ್ಚಾಗಿ ಯಾರದೋ ಸಂತೋಷ, ಯಾರದೋ ವೈಯಕ್ತಿಕ ಹಿತಾಸಕ್ತಿಯೇ ಕೆಲಸ ಮಾಡುತ್ತದೆ. ಹೀಗಾಗಬಾರದೆಂದರೆ ಹುಡುಗಿಯರು ಸ್ವಂತ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಮರ್ಥರಾಗಬೇಕು. ಮದುವೆಯ ವಿಷಯ ಬಂದಾಗ ನಿರ್ಧಾರ ತನ್ನದು ಎಂಬುದನ್ನು ಗಟ್ಟಿಯಾಗಿ ಹೇಳಿ, ತನಗೆ ಇಷ್ಟವಿಲ್ಲದನ್ನು ಎಲ್ಲರೆದುರಲ್ಲೂ ವಿರೋಧಿಸುವ ಧೈರ್ಯ ಅವರಲ್ಲಿ ಮೂಡಬೇಕು. ಆಗ ಮಾತ್ರವೇ ತಮ್ಮ ಕೆಲಸವನ್ನೆಲ್ಲ ಬಿಟ್ಟು ಮತ್ತೊಬ್ಬರ ಬದುಕಿನ ಬಗ್ಗೆ ಯೋಚಿಸುವ, ತಮ್ಮ ಹಿತಾಸಕ್ತಿಗಾಗಿ ಮತ್ತೊಬ್ಬರ ಬದುಕನ್ನು ಬಲಿಕೊಡುವ ಜನರ ಸಂಖ್ಯೆ ಕಡಿಮೆಯಾಗುತ್ತದೆ. ಇಲ್ಲವೆಂದರೆ ಮಾಡದ ತಪ್ಪಿಗಾಗಿ ಮುಗ್ಧ ಹುಡುಗಿಯರು ಬಲಿಯಾಗಬೇಕಾಗುತ್ತದೆ.
ಸಲಹೆಯನ್ನು ನೂರು ಜನರೇ ಕೊಡಲಿ, ಆದರೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ನಿಮಗೇ ಇದೆ ಎಂಬುದು ನೆನಪಿರಲಿ. ಆ ಎಲ್ಲ ಸಲಹೆಗಳನ್ನೂ ಪರಿಗಣಿಸಿ ಕೊನೆಗೆ ನೀವು ಕಂಡುಕೊಂಡ ಸತ್ಯದ ಮೂಲಕವೇ ನಿರ್ಧಾರ ಕೈಗೊಳ್ಳುವಂಥ ಪ್ರಬುದ್ಧತೆ ಮತ್ತು ಬುದ್ಧಿಮತ್ತೆ ನಿಮ್ಮದಾಗಿರಲಿ. ಆಗ ಯಾವ ಸಂಬಂಧವೂ ಅಲ್ಪಾಯುಷಿಯಾಗುವುದಿಲ್ಲ.

   

Leave a Reply