ಸವಾಲಿಗೆ ಪ್ರತಿಸವಾಲ್ !

ಕಿರಿಯರ ಲೋಕ - 0 Comment
Issue Date : 18.04.2016

ವರದಾಪುರದ ಅರಸ ವೀರರಾಜನ ಮಗ ಧೀರಸೇನ. ಹೆಸರಿಗೆ ತಕ್ಕಂತೆ ಧೀರ ಮಾತ್ರನಲ್ಲ, ಜಾಣನೂ ಹೌದು. ಮಗನಿಗೆ ಯುಕ್ತ ವಯಸ್ಸಿಗೆ ಮದುವೆ ಮಾಡಬೇಕೆಂದು ತಂದೆಯ ಬಯಕೆ. ಅದಕ್ಕೆ ಸರಿಯಾಗಿ ಸಿರಿವಂತ, ರಾಜಮನೆತನದ, ಸುಂದರ ಕನ್ಯೆಯರ ತಂದೆತಾಯಿಯರು ಮದುವೆ ಮಾಡಿಕೊಡಲು ಸಾಲುಗಟ್ಟಿ ನಿಂತಿದ್ದರು. ಆದರೆ ಧೀರಸೇನನಿಗೆ ತನ್ನ ಪತ್ನಿ ತನ್ನೊಡನೆ ದೇಶವನ್ನು ಆಳುವ ಜಾಣ್ಮೆ ಹೊಂದಿರಬೇಕೆಂಬ ಆಸೆ. ಹೀಗಾಗಿ ತನ್ನ ವಧುವನ್ನು ತಾನೇ ಹುಡುಕುವುದಾಗಿ ನಿರ್ಧರಿಸಿದ.
ಸರಿ, ಜಾಣ್ಮೆ ಪರೀಕ್ಷಿಸಲು ಸವಾಲೊಂದನ್ನು ಒಡ್ಡಿದ ಧೀರಸೇನ. ಚಿಕ್ಕ ಮಡಕೆಯೊಂದನ್ನು ಕೊಟ್ಟು ಷರತ್ತನ್ನು ವಿಧಿಸಿದ. ಈ ಮಡಕೆಯಷ್ಟು ಮಾತ್ರ ತರಕಾರಿ ಬಳಸಿ, ಅದರಲ್ಲೇ ಅಡುಗೆ ಮಾಡಿ ತನ್ನ ಸೈನ್ಯಕೆಲ್ಲಾ ಊಟ ಬಡಿಸುವವಳು ತನ್ನ ಭಾವೀ ಪತ್ನಿ ಎಂದು ಡಂಗುರ ಸಾರಿದ.ಸುದ್ದಿ ರಾಜ್ಯದಲೆಲ್ಲಾ ಹಬ್ಬಿತು.ಎಲ್ಲರಿಗೂ ರಾಜಕುಮಾರನ ಪತ್ನಿಯಾಗುವ ಆಸೆಯೇನೋ ಇತ್ತು, ಆದರೆ, ಅಷ್ಟು ಸ್ವಲ್ಪ ತರಕಾರಿಯಿಂದ ಸಾವಿರಾರು ಜನರ ಸೈನ್ಯಕ್ಕೆ ಅಡುಗೆ ಮಾಡಿ ಬಡಿಸುವುದಾದರೂ ಹೇಗೆ? ನೂರಾರು ಹುಡುಗಿಯರು ಈ ವಿಚಿತ್ರ ಸವಾಲು ಕೇಳಿ, ಅಸಾಧ್ಯದ ಕೆಲಸ ಎಂದು ನಿರಾಶೆಗೊಂಡು ಪ್ರಯತ್ನಿಸಲೇ ಹೋಗಲಿಲ್ಲ. ಮಡಕೆ ಹೊತ್ತು ಸೇವಕರು ಹಳ್ಳಿಯಿಂದ ಹಳ್ಳಿಗೆ ಸುತ್ತಿದರು.
ವರದಾಪುರದ ಉತ್ತರ ದಿಕ್ಕಿನಲ್ಲೊಂದು ಪುಟ್ಟ ಹಳ್ಳಿ. ಕುಡಿಯುವ ನೀರಿಲ್ಲದೇ ಹಳ್ಳಿಯ ಜನ ತೊಂದರೆ ಅನುಭವಿಸುತ್ತಿದ್ದರು. ದೂರದಲ್ಲಿದ್ದ ಅರಸನಿಗೆ ಇದು ತಿಳಿದೇ ಇರಲಿಲ್ಲ. ಊರ ಪಟೇಲನಿಗೆ ಇದೇ ದೊಡ್ಡ ಚಿಂತೆಯಾಗಿತ್ತು. ಪಟೇಲನ ಮಗಳು ಗಂಗಾ. ಆಕೆ ನೋಡಲು ಅಂಥ ಚೆಲುವೆಯಲ್ಲ, ಆದರೆ ಒಳ್ಳೆಯ ಗುಣ ಬುದ್ಧಿವಂತಿಕೆಯಿಂದಾಗಿ ಎಲ್ಲರ ಕಣ್ಮಣಿ. ಮಡಕೆ ಹೊತ್ತು ಸೇವಕರು ಸುಸ್ತಾಗಿ ಈ ಹಳ್ಳಿಯಲ್ಲಿ ತಂಗಿದಾಗ ಧೀರಸೇನನ ವಿಚಿತ್ರ ಸವಾಲಿನ ಬಗ್ಗೆ ಗಂಗಾಳಿಗೆ ತಿಳಿಯಿತು.ರಾತ್ರಿಯಿಡೀ ಯೋಚಿಸಿ ಮರುದಿನ ಸೇವಕರೆದುರು ನಿಂತು ನನಗೆ ರಾಜಕುಮಾರನ ಷರತ್ತಿಗೆ ಒಪ್ಪಿಗೆಯಿದೆ.ಆದರೆ ನನಗೆ ಒಂದು ತಿಂಗಳು ಸಮಯ ಬೇಕು. ಎಂದಳು.ಅಲೆದೂ ಅಲೆದೂ ಸುಸ್ತಾಗಿದ್ದ ಸೇವಕರು ಸಂತಸದಿಂದ ಕೂಡಲೇ ಧೀರಸೇನನಿಗೆ ವಿಚಾರ ತಿಳಿಸಿ ಒಪ್ಪಿಗೆ ಪಡೆದು ಮಡಕೆಯನ್ನು ಆಕೆಗೆ ನೀಡಿ ಮರಳಿದರು.
ಗಂಗಾ ತಮ್ಮ ಕೈತೋಟದಲ್ಲಿದ್ದ ಕುಂಬಳಕಾಯಿ ಬಳ್ಳಿಯ ಹೀಚು ಕಾಯಿ ಹುಡುಕಿದಳು. ಅದಕ್ಕೆ ಈ ಮಡಕೆಯನ್ನು ಬೋರಲು ಹಾಕಿದಳು. ದಿನವೂ ಬಳ್ಳಿಗೆ ಮಣ್ಣು ,ನೀರು, ಗೊಬ್ಬರದ ಆರೈಕೆ ನಡೆಯಿತು. ಬಳ್ಳಿ ಎಲ್ಲೆಡೆ ಹಬ್ಬಿದರೆ ಕಾಯಿ ಮಡಕೆಯೊಳಗೆ ಚೆನ್ನಾಗಿ ಬೆಳೆಯಿತು.ತಿಂಗಳ ಹೊತ್ತಿಗೆ ಮಡಕೆಯ ಕಂಠದ ತನಕ ಕಾಯಿ ಬೆಳೆದಿತ್ತು. ಸರಿ, ನಿಧಾನವಾಗಿ ಬಳ್ಳಿಯಿಂದ ತೊಟ್ಟು ಬೇರೆ ಮಾಡಿದಳು ಗಂಗಾ.ಸಮಯಕ್ಕೆ ಸರಿಯಾಗಿ ರಾಜಧಾನಿಯಿಂದ ಸೇವಕರು ಬಂದರು.ಅವರ ಕೈಗೆ ಮಡಕೆಯಿಟ್ಟು ರಾಜಕುಮಾರನಿಗೆ ಸಂದೇಶ ಕಳಿಸಿದಳು ಗಂಗಾ.ನಿಮ್ಮ ಸವಾಲಿನ ಮೊದಲ ಭಾಗದಂತೆ ಮಡಕೆಯ ತುಂಬಾ ತರಕಾರಿ ಸಿದ್ಧವಿದೆ.ಆದರೆ ಎರಡನೇ ಭಾಗದಂತೆ ಮಡಕೆಯಲ್ಲೇ ಅಡುಗೆ ಮಾಡಬೇಕಿರುವುದರಿಂದ ದಯಮಾಡಿ ಮಡಕೆ ಒಡೆಯದಂತೆ ಕುಂಬಳಕಾಯಿಯನ್ನು ತೆಗೆದುಕೊಟ್ಟರೆ ಸೈನ್ಯಕ್ಕೆಲ್ಲಾ ಊಟ ಬಡಿಸುವ ವ್ಯವಸ್ಥೆ ಮಾಡುತ್ತೇವೆ.ಒಂದೊಮ್ಮೆ ಈ ಕೆಲಸ ಸಾಧ್ಯವಾಗದಿದ್ದಲ್ಲಿ ನಮ್ಮ ಹಳ್ಳಿಯ ಎಲ್ಲಾ ಒಣಗಿರುವ ಖಾಲಿ ಮಡಕೆಗಳಿಗೂ ನೀರು ತುಂಬಿಸುವ ಹೊಣೆ ನಿಮ್ಮದು. ನಿಮ್ಮ ಸವಾಲಿಗೆ ಉತ್ತರಿಸಿದ್ದೇವೆ, ನಮ್ಮ ಪ್ರತಿಸವಾಲನ್ನು ಸ್ವೀಕರಿಸಿ.
ಯಾರೋ ಹಳ್ಳಿ ಹುಡುಗಿ ಎಂದು ನಿರ್ಲಕ್ಷಿಸಿದ್ದ ಧೀರಸೇನನಿಗೆ ಕಾಯಿ ತುಂಬಿದ್ದ ಮಡಕೆ, ಅದರೊಂದಿಗಿದ್ದ ಸಂದೇಶ ಕಂಡು ಆಶ್ಚರ್ಯ! ಅಧಿಕಾರಿಗಳನ್ನು ಕರೆದು ವಿಚಾರಿಸಿದಾಗ ಆ ಹಳ್ಳಿಯ ನೀರಿನ ಕೊರತೆ ಬೆಳಕಿಗೆ ಬಂತು. ಕೂಡಲೇ, ಸ್ವಲ್ಪವೂ ಮಡಕೆ ಒಡೆಯದಂತೆ ಕುಂಬಳಕಾಯಿಯನ್ನು ತೆಗೆದುಕೊಡುವುದಂತೂ ಅಸಾಧ್ಯದ ಮಾತು. ಹಾಗಾಗಿ ನಿಮ್ಮ ಊರಿನ ಎಲ್ಲಾ ಮಡಕೆಗಳಿಗೂ ನೀರು ತುಂಬಿಸುವ ಹೊಣೆ ಸ್ವೀಕರಿಸಿದ್ದೇವೆ. ಹಾಗೆಯೇ ನಮ್ಮ ರಾಣಿಯಾಗಲು ನಿಮ್ಮ ಒಪ್ಪಿಗೆ ಇದೆಯೇ? ಎಂಬ ಮರು ಸಂದೇಶ ಗಂಗಾಳಿಗೆ ಸೇರಿತು.
ಇದಾಗಿ ತಿಂಗಳಲ್ಲಿ ಗಂಗಾಳ ಮದುವೆ ಧೀರಸೇನನೊಂದಿಗೆ ನಡೆದು ಆಕೆ ಯುವರಾಣಿಯಾದಳು.ಆ ಹಳ್ಳಿಗೆ ದೊಡ್ಡ ಕೆರೆ, ಇಂಗುಹೊಂಡ ಕಟ್ಟಿಸಿ ನೀರಿನ ವ್ಯವಸ್ಥೆ ಮಾಡಲಾಯಿತು.ರಾಜ್ಯಕ್ಕೆ ಸಮರ್ಥ ಯುವ ರಾಣಿ ಸಿಕ್ಕರೆ, ಹಳ್ಳಿಗೆ ನೀರಿನ ಸಮಸ್ಯೆ ಬಗೆಹರಿಯಿತು.

   

Leave a Reply