ಸಾತ್ವಿಕ ಶಕ್ತಿಯ ಶಾಪ

ಕಥೆಗಳು - 0 Comment
Issue Date : 03.11.2015

ಆಕೆಯ ಕಣ್ಣುಗಳು ಕೆಂಡದುಂಡೆಗಳಾಗಿದ್ದವು. ಸಿಟ್ಟು ನೆತ್ತಿಗೇರಿತ್ತು. ಗಂಡು ಸಂತತಿಯ ಮೇಲೆ ಇನ್ನಿಲ್ಲದ ಕೋಪ, ತಿರಸ್ಕಾರ ಮಡುಗಟ್ಟಿತ್ತು.
 ತನ್ನ ಬದುಕಿಗೇ ಕೊಳ್ಳಿಯಿಡಲು ಬಂದ ಆ ಧೂರ್ತನ ಹುಟ್ಟಡಗಿಸುವ ನಿರ್ಧಾರಕ್ಕೆ ಬಂದಿದ್ದಳಾಕೆ. ಉಪನಯನ ಸಂಸ್ಕಾರದಿಂದ ಸಂಪಾದಿಸಿದ ಶಕ್ತಿ ನೆರವಿಗೆ ಬಂದಿತ್ತು. ಪ್ರಖರ ತೇಜದ ಸೂರ್ಯನ ಎಡೆಬಿಡದ ಉಪಾಸನೆಯಿಂದ ಆಕೆ ಸೂರ್ಯನ ಪ್ರಭೆಯನ್ನೇ ಸೂಸುತ್ತಿದ್ದವಳು.
 ಹದಿನೈದು ಹದಿನಾರರ ಹರೆಯ ಉಕ್ಕುವ ತರುಣಿ. ಜತೆಯಲ್ಲಿ ದಿವಾಕರ ಕಿರಣ ಪ್ರಭಾಮಂಡಲ. ಹಿತಮಿತಮಿದು ಮಾತಿನ ಆಕೆ ತಾನಾಯಿತು ತನ್ನ ಕಠಿಣ ಅನುಷ್ಠಾನವಾಯಿತೆಂದು ಇದ್ದವಳು. ಆಶ್ರಮದ ಗಿಡಮರಬಳ್ಳಿ ಖಗಮಿಗಗಳ ಆರೈಕೆ, ಗೋಸಂತತಿಯ ಪಾಲನೆ, ಗುರುಕುಲಕ್ಕೆ ಬಂದುಹೋಗುವ ತಪಸಿಗಳ ಸೇವೆ ಇದೇ ಆಕೆಯ ಪ್ರಪಂಚ.
 ಸದಾ ಗುರುಕುಲಕ್ಕೆ ಬಂದು ಹೋಗುತ್ತಿದ್ದ ಆತ ಇಂದೂ ಬಂದಿದ್ದ. ಎಂದೂ ಮಾತಿಗಿಳಿಯದವನು ಇಂದು ಮಾತನಾಡಿಸಲು ಹವಣಿಸಿದ್ದ. ಕಂಡೂ ಕಾಣದಂತೆ, ಕೇಳಿಯೂ ಕೇಳದಂತೆ ಇದ್ದಳು. ಹತ್ತಿರ ಬಂದ ಆತ. ತಕ್ಷಣ ಅದರ ಹಿಂದಿನ ಉದ್ದೇಶದ ಅರಿವಾಯಿತು. ಹಾಗೆಂದೇ ಆಕೆಯ ಕೋಪ ಭುಗಿಲೆದ್ದಿದ್ದು.
 ಆತನನ್ನು ಆಕೆ ಬಲ್ಲವಳೇ. ಇಕ್ಷ್ವಾಕು ಪುತ್ರ. ಆದರೆ ಕ್ರೂರಿ. ಹಾಗೆಂದೇ ನಾಡಿನಿಂದ ಕಾಡಿಗಟ್ಟಿದ್ದ ತಂದೆ.
 ಮತ್ತಷ್ಟು ದುಷ್ಟರು ಅವನ ಜತೆಗೂಡಿದರು. ಮೊದಲೇ ಅವರು ರಾಕ್ಷಸರು. ಧೂರ್ತನ ಒಡನಾಟದಿಂದ ಮತ್ತಷ್ಟು ಕ್ರೌರ್ಯ ಹೆಚ್ಚಿತ್ತು. ದಟ್ಟಾರಣ್ಯದಲ್ಲಿ ಕಾಡು ಕಡಿದು ಪಟ್ಟಣ ಕಟ್ಟಿದರು. ದೈತ್ಯಗುರು ಅವರಿಗೂ ಆಚಾರ್ಯನಾದ.
 ಕಂಡವರನ್ನು ಕೊಲ್ಲುವ, ಸಾತ್ವಿಕರನ್ನು ಹಿಂಸಿಸುವ ಸಹಜ ಪ್ರವೃತ್ತಿಯ ಇಕ್ಷ್ವಾಕು ಪುತ್ರ ಈಗ ರಾಜನಾಗಿಬಿಟ್ಟಿದ್ದ. ಯೌವನ, ಸಂಪತ್ತು, ಅಧಿಕಾರ ಇದರೊಡನೆ ವಿವೇಕರಾಹಿತ್ಯ… ಅನಾಚಾರಕ್ಕೆ ಮಿತಿಯುಂಟೇ?
 ಈ ನಡುವೆ ಒಂದು ದಿನ ಆತನ ಮನದಲ್ಲಿ ದುರಾಲೋಚನೆಯೊಂದು ಮೂಡಿತ್ತು. ಅನುಪಮ ಶಕ್ತಿಸಂಪನ್ನೆ ಮಾತ್ರವಲ್ಲ ರೂಪವತಿ ಆಚಾರ್ಯ ಕುವರಿಯ ವೇದಾಧ್ಯಯನ ಶಕ್ತಿಯ ಅರಿವಿರದೆ ಆಕೆಯ ಕೆಣಕಿದ್ದ.
 ‘ಎಲಾ ದುಷ್ಟ, ನೀನು ಮಾತ್ರವಲ್ಲ ನಿನ್ನ ಪರಿವಾರ-ಪಟ್ಟಣ ಧೂಳು ಕವಿದು ನಾಶವಾಗಲಿ…’ ಆಕೆಗಾದ ತಾಪ ಶಾಪವಾಗಿ ಹೊರಹೊಮ್ಮಿತ್ತು. ಸಾತ್ವಿಕ ಶಕ್ತಿಯನ್ನು ತುಳಿದರೆ ಬಿಟ್ಟೀತೆ? ತೋರ ಮಾಣಿಕವಾದರೂ ಅನೀತಿವಂತರ ಪಾಲಿಗೆ ಭೂರಿ ಕೆಂಡವಾಗುವುದೇನೂ ಸುಳ್ಳಲ್ಲ.
 ವಾರವಿಡೀ ಸುರಿದ ಬಿಸಿಧೂಳಿನ ಮಳೆಯಲ್ಲಿ ಆ ಧೂರ್ತನ ಪಟ್ಟಣ ಮುಚ್ಚಿಹೋಯಿತು. ದುಷ್ಟರು ನಿರ್ನಾಮವಾದರು.
 ಆಕೆಯ ಕೋಪವಿನ್ನೂ ಆರಿರಲಿಲ್ಲ. ಆ ಧೂರ್ತ ಗಂಡು ತಾನೇ? ಆ ಸಂತತಿ ಇದ್ದರಲ್ಲವೇ ಅಬಲೆಯರ ಮೇಲೆ ಕೈಮಾಡುವುದು. ವಿಶ್ವದಲ್ಲಿ ಗಂಡುಸಂತತಿಯೇ ಇರದಂತೆ ಮಾಡಿದರೆ… ಇದ್ದವರೆಲ್ಲಾ ಹೆಣ್ಣಾಗಿಬಿಡಲಿ ಎಂದು ಶಪಿಸಿಬಿಡುವುದೇ ಸರಿ ಎಂಬ ಆಲೋಚನೆ ಬಂದಿತು. ಹಿಂದೆ ಶಿವೆ ಸಹ ಇಂಥದೇ ಶಾಪನೀಡಿದ್ದು ಸ್ಮರಣೆಗೆ ಬಂತು. ಅದು, ನಿಶ್ಚಿತ ಸ್ಥಳಕ್ಕೆ ಬಂದ ಪುರುಷರು ಹೆಣ್ಣಾಗಲಿ ಎಂಬ ಶಾಪವೆಂಬುದು ಆಕೆಗೆ ಸಿಟ್ಟಿನ ಭರದಲ್ಲಿ ಮರೆತುಹೋಗಿತ್ತು.
 ಇನ್ನೇನು ಅಂಥದೊಂದು ಶಾಪ ಆಕೆಯ ಬಾಯಿಂದ ಹೊರಬೀಳಬೇಕೆನ್ನು ವಷ್ಟರಲ್ಲಿ ‘ನಾರಾಯಣ ನಾರಾಯಣ’ ಎಂಬ ದನಿ ಕೇಳಿಸಿತು. ಅದು ಲೋಕೋಪಕಾರಿ ಲೋಕಸಂಚಾರಿ ನಾರದರ ನುಡಿ.
 ‘ಮಗೂ’ ನಾರದರ ಮಮತೆ ತುಂಬಿದ ಮಾತು ಸಿಟ್ಟಿನಿಂದ ಕುದಿಯುತ್ತಿದ್ದ ಆಕೆಯ ಮನಕ್ಕೆ ತಂಪೆರೆಯಿತು.
 ‘ಎಂಥ ಅನಾಹುತ ಮಾಡಿಬಿಡುತ್ತಿದ್ದಿ ಮಗೂ, ಪ್ರಕೃತಿ ಪುರುಷರಿಲ್ಲದೇ ಸೃಷ್ಟಿಯಿಲ್ಲ. ಅದಿಲ್ಲದೇ ಜಗವು ಚಲಿಸದು. ಹೆಣ್ಣೆಂದರೆ ಕ್ಷೇತ್ರ. ಗಂಡು ಸೃಷ್ಟಿಯ ಬೀಜರೂಪ. ಅದು ಮೊಳೆಯಲು ಬೆಳೆಯಲು ಕ್ಷೇತ್ರವೇ ಇಲ್ಲದಿದ್ದರೆ.. ಮೇಲಾಗಿ ಯಾರೋ ಒಬ್ಬ ಧೂರ್ತ ಮಾಡಿದ ತಪ್ಪಿಗೆ ಗಂಡುಸಂತತಿಯನ್ನೇ ಇಲ್ಲವಾಗಿಸಿದರೆ ಹೇಗೆ? ಅಪರಾಧ ಮಾಡಿದಾತನಿಗೆ ಮಾತ್ರವಲ್ಲ ಆತನ ಅನುಚರರಿಗೂ ತಕ್ಕ ಶಿಕ್ಷೆ ಈಗಾಗಲೇ ಆಗಿದೆಯಲ್ಲಾ..’ ನಾರದರ ಮಾತಿನಿಂದ ಆಕೆಯ ಮನ ಶಾಂತವಾಯಿತು.
 ‘ನಿನ್ನ ಸಾಧನೆಯನ್ನು ಮುಂದುವರೆಸು. ಸತ್ಯದ ಸಾಕ್ಷಾತ್ಕಾರ ಆಗುತ್ತದೆ. ನಿನ್ನ ಸಾಧನಾ ಸ್ಥಾನವಾದ ಈ ವನ ಮುಂದೆ ಅವತಾರ ಪುರುಷನ ಆವಾಸ ತಾಣವಾಗಲಿ’ ಹೀಗೆಂದು ಹರಸಿದ ಆಚಾರ್ಯರ ದನಿ ಆಕೆಗೆ ಮತ್ತಷ್ಟು ಚೈತನ್ಯ ತುಂಬಿತು.
 ಈ ಅನುಪಮ ಸಾಧಕಿ ಬೇರಾರೂ ಅಲ್ಲ. ಆಕೆ ಆಚಾರ್ಯ ಶುಕ್ರರ ಪುತ್ರಿ ಅರಜೆ. ಆ ಧೂರ್ತ ದಂಡನೆಂಬಾತ. ಆ ತಾಣ ಮುಂದೆ ದಂಡಕವನ ಎಂದು ಖ್ಯಾತವಾಯಿತು.  
 

   

Leave a Reply