ಸಾಮಾನ್ಯ ಜನರ ದನಿಯಾದ ಬಸವಣ್ಣ – ನಾರಾಯಣಗುರು

ಲೇಖನಗಳು ; ಸಂತ ಪರಂಪರೆ - 0 Comment
Issue Date : 27.11.2014

ಸಾಮಾಜಿಕ ಪರಿವರ್ತನೆ ಬಹಳ ಕಷ್ಟ ಸಾಧ್ಯವಾದ ಸಂಗತಿ. ಅದರಲ್ಲೂ ಮನಸ್ಸುಗಳನ್ನು ಬೆಸೆಯುವ ಸಾಮಾಜಿಕ ಸಾಮರಸ್ಯದ ಕೆಲಸ ಇನ್ನೂ ಕಠಿಣವಾದದ್ದು. ಈ ದಿಕ್ಕಿನಲ್ಲಿ ನೂರಾರು ಮಹಾಪುರುಷರು ಬಾರತದ ಇತಿಹಾಸದುದ್ದಕ್ಕೂ ಕಾಣಲು ಸಿಗುತ್ತಾರೆ. ಅವರು ಬಾಳಿದ್ದರಿಂದ ನಮ್ಮ ಇಂದಿನ ಬಾಳು ಹಸನಾಗಿದೆ. ಇಂದಿಗೂ ಅಂದಿಗೂ ಪರಿಸ್ಥಿತಿಯಲ್ಲಿ ಏನೂ ಬಹಳ ಅಂತರವಿಲ್ಲ. ಇಂದಿಗೂ ಸಾಮರಸ್ಯದ ಅಗತ್ಯ ಬಹಳ ಇದೆ. ಇಂದಿನ ಸಂತ ಶಕ್ತಿ ಸಾಮರಸ್ಯ ಮರು ಸ್ಥಾಪನೆಯ ಕೆಲಸವನ್ನು ಸೂಕ್ತವಾಗಿ ನಿಭಾಯಿಸಲ್ಲದು. ಅದಕ್ಕೆ ಸೂಕ್ತವಾದ ಮಾರ್ಗದರ್ಶೀ ವ್ಯಕ್ತಿತ್ವಗಳು ಹತ್ತಿರದ ಇತಿಹಾಸದಿಂದ ನಮಗೆ ಬೇಕು. ಈ ದಿಕ್ಕಿನಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಕ್ರಾಂತಿರೂಪ ನೀಡಿದ ಇಬ್ಬರ ಸ್ಮರಣೆ ಪ್ರೇರಣೆ ಇಲ್ಲಿದೆ.
ಕರ್ನಾಟಕ
12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರ ಕಲ್ಯಾಣದ ಕ್ರಾಂತಿಯು ಕರ್ನಾಟಕದಲ್ಲಿ ಸಾಮಾಜಿಕ ಸಾಮರಸ್ಯದ ಒಂದು ಶುಭಾರಂಭವನ್ನು ಸೃಷ್ಟಿ ಮಾಡಿತು ಅಂದರೆ ತಪ್ಪಲ್ಲ. ಹಾಗೆ ರಾಮಾನುಜಾಚಾರ್ಯರು ಈ ದಿಕ್ಕಿನಲ್ಲಿ ವಿಶೇಷ ಪ್ರಯತ್ನ ಮಾಡಿದ್ದವರು. ಶಂಕರಾಚಾರ್ಯರದ್ದು ಸಹ ಒಂಡೆರಡು ಉದಾಹರಣೆಗಳು ಸಿಗುತ್ತವೆ. ಆದರೆ ಅವರ ಗಮನ ಹೆಚ್ಚು ತಾತ್ವಿಕ, ಸೈದ್ಧಾಂತಿಕ, ಆಧ್ಯಾತ್ಮಿಕ ಸ್ವರೂಪದಲ್ಲಿತ್ತು. ಹಿಂದು ಧರ್ಮದ ಸಿದ್ಧಾಂತ ಮತ್ತು ನಡವಳಿಕೆ ಭಾಗದಲ್ಲಿ ಹೆಚ್ಚಿನ ವೈಚಾರಿಕ ಮತ್ತು ವ್ಯಾವಹಾರಿಕ ಸ್ವರೂಪ ನೀಡಿದವರು ಬಸವಣ್ಣನವರು. ಅವರ ಅನೇಕ ನಿಲುವುಗಳು ಅತ್ಯಂತ ವಾಸ್ತವಿಕತೆಯ ಗಟ್ಟಿ ನೆಲದಿಂದ ಕೂಡಿದ್ದವು. ಸಾಮರಸ್ಯಕ್ಕಾಗಿಯೇ ಮೈವೆತ್ತು ಬಂದಂತೆ, ಬದುಕಿದವರು ಅವರು.

ಕ್ತಿಭಂಡಾರಿ ಬಸವಣ್ಣನವರು ನೆಲವೊಂದೆ ಹೊಲೆಗೇರಿ ಶಿವಾಲಯಕ್ಕೆ, ಜಲವೊಂದೇ ಶೌಚ ಮಜ್ಜನಕ್ಕೆ, ಕುಲವೊಂದೇ ತನ್ನ ತಾನರಿದಂಗೆ ಎಂದು ಜಾತಿ-ಕುಲ ಕಲ್ಪನೆಯನ್ನು ಬದಿಗೆ ಸರಿಸಿದರು. ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ಅಹಂಕಾರವನ್ನು ತೊರೆದು, ವಿನಮ್ರತೆಯನ್ನು ತಂದರು. ಕಾಯಕವೇ ಕೈಲಾಸ ಎಂಬ ಕಾಯಕ ತತ್ವದ ಮೂಲಕ ಎಲ್ಲ ವೃತ್ತಿ ಜನರಲ್ಲಿ ಸಮಾನ ಭಾವ, ವೃತ್ತಿಗೌರವದ ಅತ್ಯುನ್ನತ ವೌಲ್ಯ ಜಾರಿಗೆ ತಂದರು. ಎಲ್ಲರೂ ಕೆಲಸ ಮಾಡಬೇಕು ಮತ್ತು ಅದರಲ್ಲಿ ಭೇದಭಾವ ಎಣಿಸುವುದು ದೇವರಿಗೆ ಮಾಡುವ ಅಪಚಾರ ಎಂದು ಜನಮಾನಸದಲ್ಲಿ ತಂದರು. ಲಿಂಗ ದೀಕ್ಷೆ ಮೂಲಕ ಸಮಾನ ಉಪಾಸನೆ ಮತ್ತು ದೈವದ ಕಲ್ಪನೆ ಜಾರಿಗೆ ತಂದರು. ಕೆಟ್ಟದ್ದನ್ನು ತಿನ್ನುವವಿನನ್ನು ಕೆಟ್ಟವನು ಎಂದು ಕರೆದು, ಆಹಾರ ವಿಹಾರಗಳಲ್ಲಿ ಸಾತ್ವಿಕತೆಯನ್ನು ಜಾರಿಗೆ ತಂದರು. ದಾಸೋಹ ಅವರದ್ದೇ ವಿಶಿಷ್ಟ ಚಿಂತನೆ. ಒಳ ಹೊರ ಎಲ್ಲ ರೀತಿಯಿಂದಲೂ ಸ್ವಚ್ಛತೆಯನ್ನು ಪ್ರತಿಪಾದಿಸಿ ಶುಚಿತ್ವಕ್ಕೆ ಸಮಗ್ರ ಕಲ್ಪನೆ ಕೊಟ್ಟರು. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಈ ರೀತಿಯಲ್ಲಿ ಅತ್ಯಂತ ಸರಳವಾಗಿ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಧರ್ಮದ ಹತ್ತು ಲಕ್ಷಣಗಳನ್ನು ಜನರಿಗೆ ಮನವರಿಕೆ ಮಾಡಿದರು. ಅನುವ ಮಂಟಪದ ಮೂಲಕ ಜನಸಾಮಾನ್ಯರಲ್ಲಿ ವೈಚಾರಿಕ ತಾತ್ವಿಕ ಮಟ್ಟವನ್ನು ಬೃಹದಾಕಾರವಾಗಿ ಬೆಳೆಸಿದರು. ಅವರು ಮತ್ತು ಅವರ ಸಮಕಾಲೀನರ ಮೂಲಕ ರಚಿತವಾದ ವಚನ ಸಾಹಿತ್ಯವು ಶರಣರ ದೊಡ್ಡ ಕೊಡುಗೆ. ಕನ್ನಡ ಭಾಷೆಯ ಅನನ್ಯ ಗುರುತು ಎಂದರೆ ವಚನಗಳೇ. ಆಗಿನ ಕಾಲದಲ್ಲಿ ಯಾರೂ ಊಹಿಸಲಾಗದ ರೀತಿಯ ಅಂತರ್ಜಾತೀಯ ವಿವಾಹವನ್ನು ಜಾರಿಗೆ ತರಲು ಯತ್ನಿಸಿದವರು ಬಸವಣ್ಣನವರು. ಶಿವಶರಣ ಚಳವಳಿಯನ್ನು ತಮ್ಮ ಸುತ್ತ ವ್ಯಕ್ತಿ ಕೇಂದ್ರಿತವಾಗಿ ಮಾಡಿಕೊಳ್ಳಲಿಲ್ಲ. ಸಮಾನ ಗೌರವಾದರ ನೀಡುವ ಮೂಲಕ ಅನೇಕ ಸಾಧಕರನ್ನು ಬೆಳಕಿಗೆ ತಂದು, ಸಮಾಜಕ್ಕೆ ಪರಿಚಯಿಸಿದರು. ಇನ್ನೊಂದು ರೀತಿಯಲ್ಲಿ, ಶೋಷಿತರಾಗಿದ್ದ ಮಹಿಳೆಯರಿಗೆ ಆದ್ಯತೆ ನೀಡಿದರು. ಸಂಸಾರ ರಥದಲ್ಲಿ ಇಬ್ಬರ ಪಾತ್ರದ ಕುರಿತು ಸ್ಪಷ್ಟತೆ ನೀಡಿದರು. ಅನೇಕ ಶಿವಶರಣೆಯರು ಇವರ ಪ್ರೋತ್ಸಾಹದಿಂದ ಮುಂದೆ ಬಂದರು, ವಚನಗಳ ರಚನೆ ಮಾಡಿದರು. ಸಮಾಜಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದರು.
ಕರ್ನಾಟಕದಲ್ಲಿ ಬಸವಣ್ಣನವರು ನಡೆಸಿದ ಸಾಮರಸ್ಯ ಪ್ರಯತ್ನಗಳ ಬಗ್ಗೆ ಒಂದಲ್ಲ, ಹಲವು ದಿನಗಳ ನಿರಂತರ ಗೋಷ್ಠಿ ನಡೆಸಿದರೂ ಮುಗಿಯದಷ್ಟು ಅಂಶಗಳಿವೆ. ಸದ್ಯಕ್ಕೆ ಪ್ರಮುಖ ಅಂಶಗಳನ್ನು ಮಾತ್ರ ತಮ್ಮ ಗಮನಕ್ಕೆ ತರಲಾಗಿದೆ.
ಕೇರಳ

 ಸ್ವಾಮಿ ವಿವೇಕಾನಂದರು ತಮ್ಮ ಬಾರತ ಪರಿಕ್ರಮ ಸಮಯದಲ್ಲಿ ಕೇರಳಕ್ಕೆ ಹೆಜ್ಜೆ ಇಟ್ಟಾಗ ಜಾತಿ ಪದ್ಧತಿಯ ವಿಚಿತ್ರ ಸ್ಥಿತಿಯನ್ನು ಕಂಡರು. ವರ್ಣ-ಜಾತಿಗಳಿಗೆ ತಕ್ಕಂತೆ ಅವರವರ ನಡುವೆ ನಡೆದಾಡುವಾಗ ಇರಬೇಕಾದ ಅಂತರ; ಯಾವುದೋ ಒಂದು ಜಾತಿಯವನು ತನ್ನತ್ತ ಬರುತ್ತಿರುವದನ್ನು ಸೂಚಿಸುವದಕ್ಕಾಗಿ ಎತ್ತಿಗೆ ಕಟ್ಟಿದ ಹಾಗೆ ಗಂಟೆ ಕಟ್ಟಿಕೊಂಡು ಓಡಾಡಬೇಕೆಂಬುದು; ಇಂತಹ ಜಾತಿಯವನು ಉಗುಳು ನೆಲಕ್ಕೆ ಬೀಳಬಾರದೆಂದು ಸದಾ ಕೊರಳಿಗೆ ತೆಂಗಿನ ಚಿಪ್ಪನ್ನು ಕಟ್ಟಿಕೊಂಡು ಹೋಗಬೇಕೆಂಬುದು; ಇನ್ನೊಂದು ಜಾತಿಯವನು ಬೆನ್ನಿಗೆ ಪೊರಕೆಯನ್ನು ಕಟ್ಟಿಕೊಂಡು ತನ್ನ ಪಾದದ ಗುರುತು ಇಲ್ಲದಂತೆ ಗುಡಿಸಿಕೊಂಡು ಹೋಗುವುದು; ಯಾರೋ ಒಬ್ಬ ರಸ್ತೆಯಲ್ಲಿ ಬಂದರೆ ಅವನ ನೆರಳು ಇನ್ನೊಬ್ಬ ಮೇಲ್ಜಾತಿಯವನ ಮೇಲೆ ಬೀಳಬಾರದು ಎಂದು ಮರ ಹತ್ತಿ ಕುಳಿತುಕೊಳ್ಳುವುದು ಇತ್ಯಾದಿ ಇನ್ನೂ ಅನೇಕ ಚಿತ್ರ-ವಿಚಿತ್ರವಾದ ಪದ್ಧತಿಗಳನ್ನು ಕಂಡರು. ಅದಕ್ಕಾಗಿ ಅವರು ಕೇರಳವನ್ನು ಒಂದು ಹುಚ್ಚಾಸ್ಪತ್ರೆ (ಲುನ್ಯಾಟಿಕ್ ಅಸ್ಸೈಲಂ) ಎಂದು ಕರೆದಿದ್ದರು. ಅಂತಹ ಕೇರಳವು, ಇಂದು ಸಾಮಾಜಿಕವಾಗಿ, ಅದರಲ್ಲೂ ವಿಶೇಷವಾಗಿ ಈಳವ ಜನಾಂಗವು ಪರಿವರ್ತನೆ ಹೊಂದುವುದರಲ್ಲಿ ಪ್ರಮುಖ ಪಾತ್ರ ವಹಿಸಿದವರು ಶ್ರೀ ನಾರಾಯಣ ಗುರುಗಳು. ಕೇರಳದ ಹಿಂದೂ ಸಮಾಜದಲ್ಲಿ ಪ್ರಮುಖವಾಗಿ ಬ್ರಾಹ್ಮಣ, ನಾಯರ್, ಈಳವ, ಹರಿಜನ-ಗಿರಿಜನ ಎಂದು ಜಾತಿಗಳನ್ನು ಗುರುತಿಸಬಹುದು. ಭಾರತವನ್ನು ಕ್ರೈಸ್ತ ಮತ ಪ್ರವೇಶ ಮಾಡಿದ್ದು ಕೇರಳದ ಮೂಲಕವೇ. ಇಂದಿಗೂ ಕೇರಳದಲ್ಲಿ ಕ್ರೈಸ್ತರಾಗಿ ಮತಾಂತರಗೊಂಡಿರುವುದು ಹೆಚ್ಚು. 1860ರ ಕ್ಷಾಮ ಸಂದರ್ದಲ್ಲಿ ಕ್ರೈಸ್ತ ಮಿಷನರಿಗಳು ಕೇವಲ 2 ಸೇರು ಅಕ್ಕಿಗಾಗಿ ಕುಟುಂಬಗಳನ್ನು ಮತಾಂತರ ಮಾಡಿದ್ದು ಇದೆ. 1816-1891ರವರೆಗೆ ಹಿಂದುಗಳ ಸಂಖ್ಯೆ 9.52% ಇಳಿದಿತ್ತು. ಅದೇ ಸಮಯದಲ್ಲಿ ಕ್ರೈಸ್ತರ ಸಂಖ್ಯೆ 8.23%ರಷ್ಟು ಹೆಚ್ಚಾಗಿತ್ತು. ದೇವಸ್ಥಾನಗಳ ಸಂಖ್ಯೆ ಲೆಕ್ಕ ಹಾಕಿದಾಗ ಅದೇ ಅವಧಿಯಲ್ಲಿ 12,600 ದೇವಸ್ಥಾನಗಳು ಕಡಿಮೆಯಾದವು. ಒಂದು ಉಲ್ಲೇಖದ ಪ್ರಕಾರ ಒಂದೇ ದಿನ ನಾಲ್ಕು ಸಾವಿರ ಜನ ಹಿಂದುಗಳು ಕ್ರೈಸ್ತರಾಗಿ ಮತಾಂತರಗೊಂಡು, ತಾವೇ ಪೂಜಿಸುತ್ತಿದ್ದ ಮಂದಿರಗಳನ್ನು ನೆಲಸಮ ಮಾಡಿದ್ದರು. ನಾರಾಯಣ ಗುರುಗಳ ಜನ್ಮವಾಗಿದ್ದು ಇಂತಹ ಕಾಲಘಟ್ಟದಲ್ಲಿ. ಜಾತಿ ಪದ್ಧತಿಯಿಂದಾಗಿ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಬಂಧುಗಳ ಸ್ಥಿತಿ ದಯನೀಯವಾಗಿತ್ತು. ಅದೇ ಜನ ಮುಸ್ಲಿಮರಾಗಿ, ಕ್ರೈಸ್ತರಾಗಿ ಮತಾಂತರಗೊಂಡಾಗ ಅವರಿಗೆ ಸಾಮಾಜಿಕ ಮಾನ್ಯತೆ ಸಿಗುತ್ತಿತ್ತು. ಇದು ವಿಚಿತ್ರವಾದರೂ, ಈ ಬಗ್ಗೆ ಯಾವ ಹಿಂದುವಿಗೂ ಖೇದವಿರಲಿಲ್ಲ. ಅದರಿಂದಾಗಿ ಮತಾಂತರ ದೊಡ್ಡ ಪ್ರಮಾಣದಲ್ಲಿ ನಡೆದಿತ್ತು. ಆದರೂ ಹಿಂದೂ ಸಮಾಜ ಎಚ್ಚೆತ್ತಿರಲಿಲ್ಲ. ತನ್ನ ಅನುಯಾಯಿಗಳನ್ನು ನಿರಂತರ ಕಳೆದುಕೊಳ್ಳುತ್ತಾ ಇದ್ದರೂ ಅದನ್ನು ತಡೆಯುವ ಮನಸ್ಸುಗಳಾಗಲಿ ಅಥವಾ ನೇತೃತ್ವವಾಗಲಿ ಅಲ್ಲಿರಲಿಲ್ಲ.

ನಾರಾಯಣ ಗುರುಗಳ ಹುಟ್ಟಿದ್ದು ಕೇರಳದ ತಿರುನಂತಪುರದ ಹತ್ತಿರದ ಚೆಂಪುಜಂತಿ ಗ್ರಾಮದಲ್ಲಿ . 1854ರ ಆಗಸ್ಟ್ 20ರ ಸ್ವಾತಿ ತಿರು ನಕ್ಷತ್ರದಲ್ಲಿ ಜನಿಸಿದರು. ಇಂತಹ ಒಬ್ಬ ಸಂತನನ್ನು ಈ ಜಗತ್ತಿಗೆ ಕರೆತಂದು ಪರಿಚಯಿಸಿಕೊಟ್ಟವರು ತಂದೆ ನಾದನಾಸನ್, ತಾಯಿ ಕುಟ್ಟಿ. ಸಂಸ್ಕೃತ, ಆಯುರ್ವೇದ, ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಪಾಂಡಿತ್ಯವಿದ್ದ ವಿದ್ಯಾವಂತ ಸುಸಂಸ್ಕೃತ ಮನೆತನ ಅವರದು. ನಾರಾಯಣ ಗುರುಗಳ ವೌನ ಕ್ರಾಂತಿ ಬಹಳ ವಿಶಿಷ್ಟವಾದುದು. ಅದಕ್ಕಾಗಿ ಅವರು ಸಾಮರಸ್ಯದ ಹರಿಕಾರರಾಗಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಯಾರನ್ನೂ ಬೈಯಲಿಲ್ಲ. ಯಾರನ್ನೂ ತೆಗಳಲಿಲ್ಲ. ಯಾರಿಗೂ ಬೆಣ್ಣೆ ಹಚ್ಚಲಿಲ್ಲ. ಯಾರ ಕಡೆಯೂ ಕೆಂಗಣ್ಣು ಬೀರಲಿಲ್ಲ. ಶಾಂತವಾಗಿ ಪರಿಸ್ಥಿತಿಯನ್ನು ಅರಿತುಕೊಂಡು, ತಮಗೆ ಏನು ಆಗಬೇಕಾಗಿದೆಯೋ ಅದನ್ನು ತಮ್ಮ ನಡೆಯ ಮೂಲಕ, ಮೃದು ಮಾತುಗಳ ಮೂಲಕ ಮಾಡಿ ತೋರಿದರು. ಒರು ಜಾತಿ, ಒರು ಮತಂ, ಒರು ದೈವಂ ಇದು ಅವರ ಜೀವನದ ನಂಬಿಕೆಯ ನುಡಿ.

ಶ್ರೀ ನಾರಾಯಣ ಗುರುಗಳು ತಮ್ಮ ಸಮಾಜ ಬಂಧುಗಳ ದಯನೀಯ ಸ್ಥಿತಿಗೆ ಬೇರೆ ಯಾರನ್ನೂ ಹೊಣೆ ಮಾಡಲಿಲ್ಲ. ಅವರೊಳಗಿನ ಧರ್ಮ ಪ್ರಜ್ಞೆಯನ್ನು ಆತ್ಮ ಗೌರವವನ್ನು ಸ್ವಾಭಿಮಾನವನ್ನು ಎಚ್ಚರಿಸುವಂತೆ ಮಾಡಿದರು. ಅವರ ವೃತ್ತಿ, ಪ್ರವೃತ್ತಿ ಮತ್ತು ಮಾನಸಿಕತೆಗಳಲ್ಲಿ ಬದಲಾವಣೆ ತಂದರು. ತೆಂಗು ಈಚಲು ತಾಳೆ ಮರಗಳಿಂದ ಮದ್ಯ ಬಟ್ಟಿ ಇಳಿಸುವ ತಮ್ಮ ಕುಲಕಸುಬು ಬಿಡುವಂತೆ ಮನ ಒಲಿಸಿದರು. ಕುಡಿತ ಬಿಡುವಂತೆ ಮಾಡಿದರು. ಆರ್ಥಿಕವಾಗಿ ಕೃಷಿ ವ್ಯಾಪಾರ ಮುಂತಾದವುಗಳ ಕಡೆ ಗಮನವಹಿಸುವಂತೆ ಮಾಡಿದರು. ಶಿಕ್ಷಣದ ಕಡೆ ಒತ್ತು ನೀಡಿದರು. ಶ್ರೀ ನಾರಾಯಣ ಗುರುಗಳು ತಮ್ಮ ಈಳವ ಜನಾಂಗದ ಏಳಿಗೆಗೆ ಮಾತ್ರ ಶ್ರಮಿಸಿದರು ಎನ್ನುವುದು ಅವರ ಜೀವನ ಸಾಧನೆಯನ್ನು ಸಂಕುಚಿತಗೊಳಿಸಿದ ಹಾಗೆ ಆಗುತ್ತದೆ. ವಾಸ್ತವವಾಗಿ ಅವರದ್ದು ವಿಶಾಲ ಮನಸ್ಸು. ಮೇಲ್ವರ್ಗ ಎನಿಸಿಕೊಂಡವರ ಬಗ್ಗೆಯೂ ಅವರಿಗೆ ಪ್ರೀತಿಯಿತ್ತು. ವಾಸ್ತವವಾಗಿ ಅವರು ಇಡೀ ಹಿಂದು ಸಮಾಜದ ಬಗ್ಗೆ ದುಡಿದವರು. ಇಂದು ಹೇಗೆ ಕನಕದಾಸರು, ಡಾ॥
ಶ್ರೀ ನಾರಾಯಣ ಗುರುಗಳು ದೇವಸ್ಥಾನಗಳಲ್ಲಿ ಸಾಮಾನ್ಯರಿಗೆ ಪ್ರವೇಶ ನೀಡದಿರುವ ಬಗ್ಗೆ ಚಳುವಳಿ ಹೂಡಲು ಹೋಗಲಿಲ್ಲ. ಕನಕದಾಸರಂತೆ ತಾವಿರುವ ಕಡೆ ದೇವರನ್ನು ಆವಾಹಿಸಿದರು. ಸಮುದ್ರ ತೀರದಲ್ಲಿ ಶಿವಲಿಂಗ ಸ್ಥಾಪಿಸಲು ಹೊರಟಾಗ, ಮೇಲ್ವರ್ಗ ಎಂದು ಕರೆದುಕೊಂಡ ಗುಂಪು, ನಮ್ಮ ಶಿವನನ್ನು ನೀವು ಹೇಗೆ ಸ್ಥಾಪಿಸುವಿರಿ? ಎಂದು ಕೇಳಿದರು. ಶಿವ ಕೇವಲ ಮೇಲ್ವರ್ಗ ಎನಿಸಿಕೊಂಡವರ ದೈವ, ಅವನಿಗೆ ಪೂಜಿಸುವ ಹಕ್ಕು ಕೆಳವರ್ಗ ಎಂದು ಬಾವಿಸಿದವರಿಗೆ ಇಲ್ಲ ಎಂದುಕೊಂಡಿದ್ದರು. ಇವರ್ಯಾರ ಹಂಗು ಬೇಡವೆಂದು ಶ್ರೀ ನಾರಾಯಣ ಗುರುಗಳು ಸಮುದ್ರ ತೀರದಲ್ಲಿ ಮರಳಿನಿಂದ ಮಾಡಿದ ಶಿವಲಿಂಗವನ್ನು ಪೂಜಿಸಿದರು. ಆಗ ಅವರು ‘‘ಇದು ಬ್ರಾಹ್ಮಣರ ಶಿವಲಿಂಗವಲ್ಲ. ಇದು ಈಳವರಿಗೆ ಶಿವಲಿಂಗ. ಅವರ ಪೂಜೆ ಅವರು ಮಾಡಿಕೊಳ್ಳಲಿ, ಬಿಡಿ’’

ಎಂದು ಶಾಂತವಾಗಿ ಉತ್ತರಿಸಿದ್ದರು. ನಾರಾಯಣಗುರುಗಳು ಸ್ಥಾಪಿಸಿದ ಶಾಲೆಗಳಲ್ಲಿ ಹರಿಜನ ಹುಡುಗರಿಗೆ ವಿದ್ಯಾಭ್ಯಾಸದ ಸೌಕರ್ಯ ಒದಗಿಸಿದರು. ಆಳ್ವಾಯಿಯಿಲ್ಲಿನ ವಸತಿ ಶಾಲೆಯಲ್ಲಿ ಪಾಕಶಾಲೆ ನಡೆಸುತ್ತಿದ್ದವರು, ಊಟ ಬಡಿಸುತ್ತಿದ್ದವರು ಅವರೇ ಆಗಿದ್ದರು. ಈಳವ ಮತ್ತು ಹರಿಜನ ಸಮೂಹದ ನಡುವೆ ಸಾಮರಸ್ಯ ತರಲು ಅವರು ಸಹಭೋಜನದ ಮೂಲಕ ಪ್ರಯತ್ನ ನಡೆಸಿದರು. ಈಳವ ಜನಾಂಗದಲ್ಲಿನ ಸಾತ್ವಿಕತೆಯನ್ನು ಹೆಚ್ಚಿಸುವ ಸಲುವಾಗಿ ಪೂಜೆ, ಭಜನೆ, ಹೋಮ, ಸಾಮೂಹಿಕ ಧ್ಯಾನ ಇವುಗಳನ್ನು ಕೈಗೊಂಡರು. ಶಿವಗಿರಿ ಮುಂತಾದ ಕಡೆಗಳಲ್ಲಿ ಶಿವಲಿಂಗ ಸ್ಥಾಪಿಸಿ, ಅಲ್ಲಿ ಕೆಲವು ಪದ್ಧತಿಗಳನ್ನು ರೂಪಿಸಿದರು. ಸ್ವಚ್ಛತೆ, ಸುಂದರ ವಾತಾವರಣ ನಿರ್ಮಾಣ, ಗಿಡ ಮರಗಳಿಂದ ಕೂಡಿದ ಪ್ರಕೃತಿ ರಮಣೀಯತೆ ಇರುವ ಕಡೆ ಸಹಜವಾಗಿ ಭಕ್ತಿಭಾವ ಬಂದು ಭಗವಂತನಿಗೆ ಶರಣಾಗುವ ರೀತಿಯಲ್ಲಿನ ದೇವಸ್ಥಾನಗಳನ್ನು ನಿರ್ಮಿಸಿದರು.
ಧಾರ್ಮಿಕ ಪಠಣ, ಸಂಸ್ಕೃತ ಕಲಿಕೆಯ ಪಾಠಶಾಲೆ, ವೇದ ಅಧ್ಯಯನ, ಆಯುರ್ವೇದ, ಜ್ಯೋತಿಷ್ಯ ಕಲಿಕೆ ಇವುಗಳ ಮೂಲಕ ತಮ್ಮ ಅನುಯಾಯಿಗಳನ್ನು ಪ್ರಾಚೀನ ಜ್ಞಾನ ಂಡಾರಕ್ಕೆ ತೆರೆದುಕೊಳ್ಳುವಂತೆ ಮಾಡಿದರು. ಅವರು ಯಾವುದೇ ಕ್ಷಣವೂ ಸಹಿತ ಯಾರ ಮೇಲೂ ಆಕ್ರೋಶ, ದ್ವೇಷ, ಕೋಪ ತಾಪಗಳ ಪ್ರಯೋಗ ಮಾಡಲಿಲ್ಲ. ಸಂಪೂರ್ಣ ಶಾಂತಚಿತ್ತರಾಗಿ, ತಮಗೆ ಬೇಕಾದ ಪರಿವರ್ತನೆಗೆ ಪ್ರಯತ್ನ ನಡೆಸಿದರು.
ದಕ್ಷಿಣದಲ್ಲಿ ಪ್ರತಿಪಾದಿತವಾದ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಹೀಗೆ ಮೂರು ವಿಚಾರಗಳ ಪ್ರತಿಪಾದನೆ ಮಾಡಿದ ಮೂವರು ಯತಿಗಳನ್ನು ಆಚಾರ್ಯತ್ರಯರು ಎನ್ನುತ್ತೇವೆ. ಜ್ಞಾನ, ತಪಸ್ಸು, ಸಾಧನೆ, ಭಾವನೆ, ಸಮಗ್ರ ದೃಷ್ಟಿ, ಸಾತ್ವಿಕತೆ ಎಲ್ಲಾ ದೃಷ್ಟಿಗಳಿಂದ ನಾರಾಯಣ ಗುರುಗಳೂ ಶಂಕರ, ರಾಮಾನುಜ, ಮಧ್ವರ ಸಾಲಿಗೆ ಸೇರಿಸಬಲ್ಲ ಸೂಕ್ತ ದ್ರಷ್ಟಾರರೇ. ಶ್ರೀ ನಾರಾಯಣ ಗುರುಗಳನ್ನು ಸೇರಿಸಿಕೊಂಡು ಆಚಾರ್ಯ ಚತುಷ್ಟಯರು ಎಂದು ಗೌರವಿಸಿದೆವಾದರೆ, ಹಿಂದೆ ನಡೆಸಿದ ಬೇದಬಾವಗಳಿಗೆ ಪ್ರಾಯಶ್ಚಿತ್ತ ಮಾಡಿಕೊಂಡಂತೆ ಆದೀತು. ಅಂತಹ ಮನೋವಿಶಾಲತೆಗೆ ನಮ್ಮ ಹಿಂದು ಸಮಾಜ ಮುಖ್ಯವಾಗಿ ಅದರ ಸಂತ ಮಹಂತ ಮಠಾಧಿಪತಿಗಳು ಸಿದ್ಧರಿದ್ದಾರೆಯೇ? ಆಗ ನಮ್ಮನ್ನು ತಡೆಯುವ ಶಕ್ತಿ ಜಗತ್ತಿನಲ್ಲಿ ಇರಲಾರದು.

– ಅರುಣ್ ಕುಮಾರ್
   ಹುಬ್ಬಳ್ಳಿ

 

 

   

Leave a Reply