ಸಾರ್ಥಕತೆ ಮೆರೆದವರಿಗೆ ಅಭಿನಂದನೆ

ಮೈಸೂರು - 0 Comment
Issue Date : 20.04.2015

ಜೈ ಹಿಂದ್ – ನೈಜ ನಾಯಕರಿಗೆ ನಮನ, ಸಂಗೀತ ಸಂಜೆ  

ಮೈಸೂರು: ದೇಶಭಕ್ತಿ ಮೆರೆದ ಜನ, ಗ್ರಹಣದ ದಿನವೆಂದರೆ ಮನೆಯೊಳಗೆ ಸೇರುವುದನ್ನು ಕಾಣುತ್ತೇವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಮೈಸೂರಿನ ಕಲಾಮಂದಿರದ ಸಭಾಂಗಣ ದೇಶಭಕ್ತ ಹಾಗೂ ಕಲಾರಾಧಕರಿಂದ ತುಂಬಿತುಳುಕುತಿತ್ತು. ಇಡೀ ಆವರಣ ಭಾರತಮಾತೆಯ ಸುಪುತ್ರರಿಗೆ ಗೌರವ ಸಲ್ಲಿಸುವ ಕ್ಷಣಕ್ಕೆ ಕಾತರವಾಗಿತ್ತು. ಜೈ ಹಿಂದ್ – ನೈಜ ನಾಯಕರಿಗೆ ನಮನ ಹಾಗೂ ಸಂಗೀತ ಸಂಜೆ ಕಾರ್ಯಕ್ರಮವನ್ನು ಜಿ ಎಸ್ ಎಸ್ ಫೌಂಡೇಶನ್, ಕೌಟಿಲ್ಯ ವಿದ್ಯಾಸಂಸ್ಥೆ, ವಿಜಯವಿಠ್ಠಲ ವಿದ್ಯಾಸಂಸ್ಥೆ ಹಾಗೂ ಇತರ ಸಂಘಟನೆಗಳ ಸಹಕಾರದೊಂದಿಗೆ ಏ.4 ರಂದು ಆಯೋಜಿಸಲಾಗಿತ್ತು.
ರಾಷ್ಟ್ರ ಧ್ವಜಾರೋಹಣವನ್ನು ಅಮರ ಯೋಧ ಶಫೀಕ್ ಮೊಹಮದ್ ಖಾನ್ ಘೋರಿಯವರ ಧರ್ಮ ಪತ್ನಿ ಶ್ರೀಮತಿ ಸಲ್ಮಾ ಶಫೀಕ್‌ರವರು ನಡೆಸಿಕೊಟ್ಟರು. ಅನಂತರ ನಡೆದದ್ದು ರಾಷ್ಟ್ರಗೀತೆಯ ಮೂಲಕ ಭಾರತಮಾತೆಗೆ ವಂದನೆ. ಇದಕ್ಕೂ ಮುನ್ನ ಮೈಸೂರಿನ ಕರ್ನಾಟಕ ಪೊಲೀಸ್ ವಾದ್ಯವೃಂದ, ಎನ್.ಸಿ.ಸಿ. ಸ್ಕೌಟ್ಸ್ ಅಂಡ್ ಗೈಡ್ಸ್‌ರವರಿಂದ ಪಥಸಂಚಲನ.
ನಾಡಗೀತೆಯ ನಂತರ ಸಮಾಜದ ನಿಜವಾದ ನಾಯಕರಾದ ಸೈನಿಕರು, ಆರಕ್ಷಕರು, ಶಿಕ್ಷಕರು ಹಾಗೂ ಕಲಾವಿದರನ್ನು ಗಣ್ಯರ ನುಡಿನಮನ ಹಾಗೂ ಸಂಗೀತ ಸುಧೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಸ್ಮರಿಸಿಕೊಳ್ಳಲಾ ಯಿತು. ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ 2001 ರಲ್ಲಿ ನಡೆದ ‘ಆಪರೇಷನ್ ರಕ್ಷಕ್’ ಕಾರ್ಯಾಚರಣೆಯ ಮುಂದಾಳತ್ವ ವಹಿಸಿ, ಶತ್ರುಗಳ ಗುಂಡಿಗೆ ಎದೆಯೊಡ್ಡಿ ವೀರಮರಣವನ್ನಪ್ಪಿದ ಮೈಸೂರಿನ ಹೆಮ್ಮೆಯ ಸೈನಿಕ ಮೇಜರ್ ಶಫೀಕ್ ಮೊಹಮದ್ ಖಾನ್ ಘೋರಿ ಅವರ ಪತ್ನಿ ಸಲ್ಮಾ ಶಫೀಕ್ ಹಾಗೂ 2003 ರಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಪಾಯಿ ಕೊಳ್ಳೆಗಾಲದ ಸಕ್ರಿಯಾ ನಾಯಕ್ ಅವರ ಪತ್ನಿ ಜ್ಯೋತಿ ಬಾಯಿ ಸಕ್ರಿಯಾ ನಾಯಕ್ ಅವರನ್ನು ಅಭಿನಂದಿಸುವ ಮೂಲಕ ವೀರಯೋಧರನ್ನು ಸ್ಮರಿಸಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಮೈಸೂರಿನ ‘ಕಲಿಯುವ ಮನೆ’ ಶಾಲೆಯಲ್ಲಿ ವಿಶೇಷ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಎಂ. ಅನಂತನಾಗ್, ನಗರ ಸಂಚಾರ ವಿಭಾಗದ ಎ.ಎಸ್.ಐ. ಎಂ.ಜಿ. ರಮೇಶ್ ಹಾಗೂ ಬಡತನದಿಂದ ವಿದ್ಯಾಭ್ಯಾಸ ಮುಂದುವರಿಸಲಾಗದಿದ್ದರೂ ಚಿತ್ರ ಕಲೆಯಲ್ಲಿ ಸಾಧನೆ ಮೆರೆದಿರುವ ಕೊಡಗಿನ ಸತ್ಯನ್ (ಭಾರತ-ಭಾರತಿ ಪುಸ್ತಕಗಳ ಮುಖಪುಟ ಚಿತ್ರಕಲಾವಿದ) ಅವರನ್ನು ಸನ್ಮಾನಿಸುವ ಮೂಲಕ ಸಮಾಜದ ನಿಜವಾದ ನಾಯಕರಿಗೆ ನಮನ ಸಲ್ಲಿಸಿದ್ದು ಅರ್ಥಪೂರ್ಣವೆನಿಸಿತು.
ಜಿ.ಎಸ್.ಎಸ್. ಫೌಂಡೇಶನ್‌ನ ಸಂಸ್ಥಾಪಕ ಡಿ. ಶ್ರೀಹರಿ, ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರ್ ಪತ್ರಿಕೆಯ ಪ್ರಧಾನ ಸಂಪಾದಕ ಕೆ.ಬಿ. ಗಣಪತಿ, ವಿಜಯ ವಿಠ್ಠಲ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್, ಕೌಟಿಲ್ಯ ವಿದ್ಯಾಲಯದ ಅಧ್ಯಕ್ಷ ಆರ್. ರಘು, ಅಮೋಘ ವಾಹಿನಿ ಮುಖ್ಯಸ್ಥರಾದ ಬಿಳಿಗಿರಿ ರಂಗನಾಥ, ಜಾಗೋ ಭಾರತ್ ಕಾರ್ಯಕ್ರಮದ ರೂವಾರಿ, ಚಕ್ರವರ್ತಿ ಸೂಲಿಬೆಲೆಯವರು ಈ ಕಾರ್ಯಕ್ರಮದಲ್ಲಿ ಪಾಲುಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಭಿನವ್ ಖರೆ, ಡಿ.ಸಿ.ಪಿ. ವಿನಾಯಕ್ ಪಾಟೀಲ್, ರಘುಲೀಲಾ ಸಂಗೀತ ಶಾಲೆಯ ಶ್ರೀಮತಿ ಸುನೀತಾ ಚಂದ್ರಶೇಖರ್, ಜ್ಞಾನಸೇವಾ ಐಟಿಐ ನ ವೇಣುಗೋಪಾಲ್, ಸ್ಪಿರಿಟ್ ಈವೆಂಟ್ಸ್‌ನ ಅಜಯ್ ಶಾಸ್ತ್ರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಸನ್ಮಾನ ಸಮಾರಂಭದ ನಂತರ ರಘುಲೀಲಾ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಹೊರಹೊಮ್ಮಿದ ದೇಶಭಕ್ತಿ ಸಾರುವಂತಹ ಚಲನಚಿತ್ರ ಗೀತೆಗಳು ಕಿಕ್ಕಿರಿದಿದ್ದ ಜನರಲ್ಲಿ ದೇಶಭಕ್ತಿಯ ಸಂಚಲನ ಮೂಡಿಸಿದವು. ಶ್ರೀಮತಿ ಹೆಚ್.ಆರ್. ಲೀಲಾವತಿಯವರು ರಚಿಸಿರುವ ‘‘ಸದಾ ಮಿನುಗುತಿರಲಿ ಬೆಳಕು ಭಾರತಮಾತೆ ಕಣ್ಣುಗಳಲ್ಲಿ’’ ಗೀತೆಯನ್ನು ಅವರ ಉಪಸ್ಥಿತಿಯಲ್ಲಿಯೇ ಹಾಡುವ ಸಂದರ್ಭದಲ್ಲಿ ಹಣತೆಗಳನ್ನು ಬೆಳಗಿಸಿದ್ದು ಆಕರ್ಷಕವಾಗಿತ್ತು. ಪ್ರಖ್ಯಾತ ಗೀತೆಗಳಾದ ‘‘ಭಾರತ ಭೂಶಿರ ಮಂದಿರ ಸುಂದರಿ’’, ‘‘ಏ ಮೇರೆ ವತನ್ ಕೆ ಲೋಗೋ’’, ‘‘ಹಿಂದುಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು’’, ‘‘ಈ ದೇಶ ಚೆನ್ನ’’, ‘‘ಉಳುವಾ ಯೋಗಿಯ ನೋಡಲ್ಲಿ’’, ‘‘ನಿತ್ಯೋತ್ಸವ’’, ‘‘ವಂದೇ ಮಾತರಂ’’ ಮುಂತಾದ ಗೀತೆಗಳನ್ನು ಉತ್ತಮ ಪಕ್ಕವಾದ್ಯದೊಂದಿಗೆ ಹಾಡುವ ಮೂಲಕ ಕಲಾರಸಿಕರನ್ನು ರಂಜಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ‘‘ಮೈಸೂರು ಮಿತ್ರ’’ ಹಾಗೂ ಸ್ಟಾರ್ ಆಫ್ ಮೈಸೂರು ಪತ್ರಿಕೆಯ ಪ್ರಧಾನ ಸಂಪಾದಕ ಕೆ.ಬಿ. ಗಣಪತಿ ಅವರು ಸೇವೆ ಮಾಡಿದವರನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಕರ್ತವ್ಯ. ಅಂತೆಯೇ ದೇಶ ಹಾಗೂ ಸಮಾಜದಲ್ಲಿ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ಗೌರವಿಸುವುದರೊಂದಿಗೆ ಸಂಗೀತದ ಮೂಲಕ ವೀರಯೋಧರಿಗೆ ನಮನ ಸಲ್ಲಿಸುತ್ತಿರುವುದು ಅಭಿನಂದನಾರ್ಹ ಎಂದು ಪ್ರಶಂಸಿಸಿದರು. ಶ್ರೀಮತಿ ಗೀತಾಶ್ರೀಹರಿ ಸ್ವಾಗತಿಸಿದರು. ಜಿ.ಎಸ್.ಗಣೇಶ್ ವಂದಿಸಿದರು.

   

Leave a Reply