ಸಾರ್ವಜನಿಕ ಕಾರ್ಯಕರ್ತ ಅಪ್ಪಾಸಾಹೇಬ

ಅಪ್ಪಾಸಾಹೇಬ-ಜಿಗಜಿನ್ನಿ-ಲೇಖನಗಳು - 0 Comment
Issue Date : 22.11.2014

ಸಾರ್ವಜನಿಕ ಕಾರ್ಯಕರ್ತ

ಶ್ರೀ ಅಪ್ಪಾಸಾಹೇಬರು ಸಾರ್ವಜನಿಕ ಕಾರ್ಯದಲ್ಲಿ ತಮ್ಮ ಪಾಲಿನ ಕೆಲಸ ಮಾಡಿದರು. ಶಹಾಪೂರ ನಗರ ಸಭೆಯಲ್ಲಿ ಚುನಾಯಿತ ಪ್ರತಿನಿಧಿಯಾಗಿ ಅವರು ಜನತೆಯ ಸೇವೆ ಮಾಡಿದರು. ನಿಃಪಕ್ಷಪಾತಿಗಳು, ಸ್ಪಷ್ಟವಕ್ತಾರರು ಮತ್ತು ನಿಶ್ಚಿತ ಅಭಿಪ್ರಾಯವುಳ್ಳವರು ಎಂದು ಸಾಂಗಲಿ ಸಂಸ್ಥಾನದಲ್ಲೆಲ್ಲ ಅವರ ಖ್ಯಾತಿ ಹರಡಿತ್ತು. ಸಂಘಚಾಲಕ ಜಿಗಜಿನ್ನಿ

ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಶ್ರೀ ಅಪ್ಪಾಸಾಹೇಬರು ಮಾಡಿದ ಕಾರ್ಯವು ಅತುಲನೀಯವಾಗಿದೆ. ಸರಕಾರ ಮತ್ತು ಸಮಾಜದ ಸಂದೇಹ ದೃಷ್ಟಿಯಿದ್ದಾಗ ಅವರು ಸಂಘ ನೌಕೆಯನ್ನು ಕುಶಲ ಕರ್ಣಧಾರನಂತೆ ಸರಿಯಾಗಿ ನಡೆಸಿದರು. ಮೊದಮೊದಲು ಶ್ರೀ ಅಪ್ಪಾಸಾಹೇಬರು ಸಂಘವನ್ನು ಬಿಡಲಿಲ್ಲ. ಈಗೀಗ ಸಂಘವು ಅವರನ್ನು ಬಿಡಲು ಸಿದ್ಧವಾಗಿರಲಿಲ್ಲ. ಇನ್ನೊಂದು ಸಂಘದೊಡನೆ ಅವರು ಏಕರೂಪವಾಗಿದ್ದರು. 1948 ರ ಸಂಕಟ ಕಾಲದಲ್ಲಿ ಶ್ರೀ ಅಪ್ಪಾಸಾಹೇಬರ ಮೇಲೆ ದೊಡ್ಡ ದಾಳಿಯಾಯಿತು. ಅದರೊಳಗಿಂದ ಅವರು ದೇವರ ದಯೆಯಿಂದಲೇ ಬದುಕಿದರೆಂದು ಹೇಳಬೇಕು. ಸರಕಾರವು ಸಂಘವನ್ನು ನಿಷೇಧಿಸಿದಾಗ ಅವರು ಜೈಲಿಗೆ ಹೋಗಬೇಕಾಯಿತು. ಆದರೆ ಇಂತಹ ವಿಪತ್ತುಗಳಿಗೆ ಹೆದರಿ ಹಿಂದೇಟು ಹಾಕುವಷ್ಟು ಶ್ರೀ ಅಪ್ಪಾಸಾಹೇಬರು ದುರ್ಬಲ ಮನಸ್ಸಿನವರಾಗಿರಲಿಲ್ಲ. ಸಂಘಕಾರ್ಯವನ್ನು ಮುಂದುವರೆಸಿದರು. ಸಂಘದ ಇತಿಹಾಸವು ಬರೆಯಲ್ಪಟ್ಟರೆ ಕರ್ನಾಟಕದಲ್ಲಿ ಶ್ರೀ ಅಪ್ಪಾಸಾಹೇಬರಿಗೇನೇ ಅಗ್ರಸ್ಥಾನ ಕೊಡಬೇಕಾಗುವುದು.

ಕರ್ಮಯೋಗಿ

ಸತತ ಕಾರ್ಯ ಮಾಡುವುದೊಂದೇ ಧ್ಯೇಯವನ್ನು ಶ್ರೀ ಅಪ್ಪಾಸಾಹೇಬರು ತಮ್ಮ ಮುಂದೆ ಇರಿಸಿದ್ದರು. ಅವರು ಫಲವನ್ನೆಂದಿಗೂ ಅಪೇಕ್ಷಿಸಲಿಲ್ಲ. ಗೀತೆಯ ಕರ್ಮಯೋಗವನ್ನು ಅವರು ಪೂರ್ತಿಯಾಗಿ ಆಚರಣೆಯಲ್ಲಿ ತಂದಿದ್ದರು. ಪ್ರಸಿದ್ಧಿ, ಪ್ರತಿಷ್ಠೆ, ಕೀರ್ತಿ ಇದಾವುದನ್ನೂ ಅವರು ಬಯಸಲಿಲ್ಲ. ದೇಹದ ದುರ್ಬಲತೆಯನ್ನೂ ಲೆಕ್ಕಿಸಲಿಲ್ಲ. ವಾದ-ವಿವಾದ ಅಥವಾ ಬುದ್ಧಿವಂತಿಕೆಯ ಪ್ರದರ್ಶನದ ಹವ್ಯಾಸಕ್ಕೆ ಅವರು ಬೀಳಲಿಲ್ಲ. ಅವರು ಅವಿರತವಾಗಿ ಕಾರ್ಯಮಾಡುತ್ತಿದ್ದರು. ಇಂಥ ಈ ಶ್ರೇಷ್ಠ ವ್ಯಕ್ತಿಯು ಪಾರ್ಥಿವ ದೇಹವನ್ನು ಬಿಟ್ಟುಹೋಯಿತು. ಮಾನವ ಶರೀರದ ಸಂಕುಚಿತ ಎಲ್ಲೆಗಳು ಅವರಿಗೆ ಬೇಡವಾದುವೇನೋ ! ಎಲ್ಲರ ಅಂತಃಕರಣದಲ್ಲಿ ಏಕಕಾಲಕ್ಕೆ ವಾಸಮಾಡುವ ಸಲುವಾಗಿ ಅವರು ಆ ದೇಹವನ್ನು ಬಿಟ್ಟರು. ಎಲ್ಲರ ಹೃದಯದಲ್ಲಿದ್ದುಕೊಂಡು ಮುಂಚಿನಂತೆಯೇ ಅವರು ಅಖಂಡ ಸ್ಪೂರ್ತಿಯನ್ನು ಕೊಡುವರೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.
ಸ್ನೇಹಿತರಿಗೆ ಅಡಚಣೆಯಲ್ಲಿದ್ದಾಗ ಹಣಕೊಡುವುದು ಅವರ ಸ್ವಭಾವವಾಗಿತ್ತು. ಸ್ನೇಹಿತರು ಹಣ ವಾಪಸು ಕೊಡಲು ತಪ್ಪಿದರೆ ಸ್ನೇಹ ಕೊನೆಗಾಣುವಂತೆ ಕಠೋರ ವ್ಯವಹಾರ ಮಾಡಲು ಅವರಿಗೆ ಮನಸ್ಸಾಗುತ್ತಿರಲಿಲ್ಲ. ಲೇವಾದೇವಿ ಹಲಕಾ ಮನುಷ್ಯನ ವ್ಯವಹಾರ. ಸ್ನೇಹವೇ ಮುಖ್ಯ ಎನ್ನುತ್ತಿದ್ದರು. ಅದಕ್ಕೆ ಉದಾಹರಣೆಯಾಗಿ ಒಂದು ಕಥೆ ಹೇಳುತ್ತಿದ್ದರು. 60 ರೂಪಾಯಿ ಸಾಲ ಮಾಡಿದವನೊಬ್ಬ ಸಾಲ ಕೊಟ್ಟ ತನ್ನ ಸ್ನೇಹಿತನಿಗೆ ಹೇಳಿದನಂತೆ, ಏನಯ್ಯಿ, ಅರವತ್ತು ಹೋಗಿ ಮೂವತ್ತಾಯಿತು. ಹತ್ತು ಕೊಡುವೆ, ಹತ್ತು ಕೊಡಿಸುವೆ. ಇನ್ನು ಹತ್ತರದೇನು ಮಹಾ ? ಸ್ನೇಹವೇ ಮುಖ್ಯವಲ್ಲವೇ ?
ಒಮ್ಮೆ ಬೆಳಗಾಂವಿಯ ತರುಣ ಸ್ವಯಂಸೇವಕರ ಸಲುವಾಗಿ ದಿನಾಲು ಒಂದರಂತೆ ಮಾ. ಶ್ರೀ ಯಾದವರಾವ್‌ಜೀಯವರ ಮೂರು ಬೌದ್ಧಿಕ್‌ಗಳ ಏರ್ಪಾಟಾಗಿತ್ತು. ಎಲ್ಲರೂ ಬೆಳಿಗ್ಗೆ 6 ಘಂಟೆಯ ಒಳಗಾಗಿಯೇ ಬೌದ್ಧಿಕ್ ಭವನಕ್ಕೆ ಬರಬೇಕೆಂದು ನಿಯಮವಿತ್ತು. ಸರಿಯಾಗಿ 6 ಘಂಟೆಗೆ ಬೌದ್ಧಿಕ್ ಆರಂಭವಾಗುತ್ತಿತ್ತು. ತಡಮಾಡಿ ಬಂದವರಿಗೆ ಒಳಗೆ ಪ್ರವೇಶವಿರಲಿಲ್ಲ. ಮಾ. ಶ್ರೀ ಅಪ್ಪಾಸಾಹೇಬರು ಬೌದ್ಧಿಕ ವರ್ಗಗಳಿಗೆ ಹೋಗುತ್ತಿದ್ದರು. ಒಂದು ದಿವಸ ಅವರಿಗೆ ಅಲ್ಲಿಗೆ ಹೋಗಲು 2-3 ನಿಮಿಷ ತಡವಾಯಿತು. ಬಾಗಿಲು ಮುಚ್ಚಿತ್ತು. ಮಾನನೀಯರು ಹೊರಗೇ ಒಂದು ಘಂಟೆಕಾಲ ಕೂತು ಬೌದ್ಧಿಕ್ ಕೇಳಿದರು. ಸಂಘದ ಸ್ವಯಂಪ್ರೇರಿತ ಅನುಶಾಸನದ ಪ್ರತ್ಯಕ್ಷ ಪಾಠವಿದಲ್ಲದೆ ಮತ್ತೇನು ?

– ಮಾ. ಶ್ರೀ ಅಪ್ಪಾಸಾಹೇಬರ ಶ್ರದ್ಧಾಂಜಲಿ ವಿಶೇಷಾಂಕ, ವಿಕ್ರಮ ವಿಜಯದಶಮಿ ವಿಶೇಷಾಂಕ 1956

   

Leave a Reply