ಸಿಡಿದ ಕ್ರಾಂತಿಯ ಕಿಡಿ ಖುದಿರಾಮ ಬೋಸ್ – 1908

ಇತಿಹಾಸ ; ಲೇಖನಗಳು - 0 Comment
Issue Date : 30.05.2016

-ಸಿ.ಎಸ್‍.ಶಾಸ್ತ್ರೀ

ಭಾರತದಲ್ಲಿ ಬ್ರಿಟಿಷರು ಹಂತ ಹಂತವಾಗಿ ಬೆಳೆದು ಅವರ ಸಾಮ್ರಾಜ್ಯಶಾಹೀ ಪ್ರಭಾವವನ್ನು ದೇಶದಾದ್ಯಂತ ವಿಸ್ತರಿಸುವಲ್ಲಿ ಸಫಲರಾದಾಗ, ರಾಷ್ಟ್ರಪ್ರೇಮೀ ದೇಶಬಂಧುಗಳು ಮಾತೃಭೂಮಿಯ ದಾಸ್ಯವಿಮೋಚನೆಗಾಗಿ ಕ್ರಾಂತಿಕಾರೀ ಮಾರ್ಗ ಕೈಕೊಂಡರು. 1905ರಲ್ಲಿ ಕರ್ಜನ್ ಬಂಗಾಳದ ವಿಭಜನೆ ಮಾಡಿದಾಗ, ಅದರ ವಿರುದ್ಧ ದೇಶದಾದ್ಯಂತ ಚಳುವಳಿಗಳಾದವು. 1908ರ ವೇಳೆಗೆ ಕ್ರಾಂತಿಕಾರೀ ಬಂಗಾಳೀ ತರುಣರು ಪ್ರತೀಕಾರದ ಮಾರ್ಗ ಅನುಸರಿಸಿದರು. ಆಗ ಬ್ರಿಟಿಷ್ ಸಿ.ಐ.ಡಿ.(Criminal Inteligence Dept.) ವಿಭಾಗದವರು ಕ್ರಾಂತಿಕಾರೀ ಚಟುವಟಿಕೆಗಳನ್ನು ಅಮೂಲಾಗ್ರವಾಗಿ ಹತ್ತಿಕ್ಕಲು ಹೆಣಗಾಡಿದರು. ಆ ಕ್ರಾಂತಿಯ ಒಂದು ಸ್ಫೋಟ ನಡೆಸಿದವನೇ ಖುದಿರಾಮ್ ಬೋಸ್(1889-1908).

arsid2372845 ಖುದಿರಾಮ್ ಬೋಸ್1889ರ ದಶಂಬರ 3ರಂದು ಮಿಡ್ನಾಪುರದ ಸಮೀಪದ ಬರ್ಬಲಾಬಮ್ ಎಂಬಲ್ಲಿ ತ್ರೈಲೋಕ್ಯನಾಥ್ ಬೋಸ್ ಮತ್ತು ಲಕ್ಷ್ಮಿಪ್ರಿಯದೇವಿಯರ ಮಗನಾಗಿ ಜನಿಸಿದ. ಚಿಕ್ಕಂದಿನಿಂದಲೇ ಸಾಹಸ ಪ್ರವೃತ್ತಿ ಹಾಗೂ ಹಿಡಿದ ಕೆಲಸ ಬಿಡದ ಹಠಮಾರಿತನ ಅವನದಾಗಿತ್ತು. ಅವನು 8ನೇ ತರಗತಿಯ ತನಕ ವಿದ್ಯಾಭ್ಯಾಸ ಮಾಡಿದ, 1905ರ ಬ್ರಿಟಿಷ್ ವಿರೋಧೀ ಆಂದೋಲನದಲ್ಲಿ ಭಾಗವಹಿಸುತ್ತಾ ಕ್ರಾಂತಿಕಾರೀ ಚಿಂತನೆಗಳ ಪ್ರಭಾವಕ್ಕೆ ಒಳಗಾದ. ಆಮೇಲೆ, ವಿದ್ಯಾಭ್ಯಾಸ ತ್ಯಜಿಸಿ ಸತ್ಯೇಂದ್ರನಾಥ್ ಅವರ ಸಂಪರ್ಕಕ್ಕೆ ಒಳಗಾಗಿ ನೇಯ್ಗೆ ಕಾರ್ಖಾನೆಯಲ್ಲಿ ಕೆಲಸ ಪ್ರಾರಂಭಿಸಿದ. ಅದು ಕ್ರಾಂತಿಕಾರೀ ಸ್ವಾತಂತ್ರ್ಯ ಹೋರಾಟಗಾರರ ತಾಣವಾಗಿತ್ತು. ಅಲ್ಲಿ ಯುವಕರಿಗೆ ಹೋರಾಟದ ತರಬೇತಿ ನೀಡಲಾಗುತ್ತಿತ್ತು. 1906ರಲ್ಲಿ ಕ್ರಾಂತೀಯ ಸಾಹಿತ್ಯವನ್ನು ವಿತರಿಸುತ್ತಿದ್ದಾಗ ಅವನನ್ನು ಪೊಲೀಸರು ಬಂಧಿಸಿದರು. ಅಮೇಲೆ, ನ್ಯಾಯಾಧೀಶರು ವಿಚಾರಣೆ ನಡೆಸಿ ಅವನಿಗೆ ಛಡಿ ಏಟಿನ ಶಿಕ್ಷೆ ವಿಧಿಸಿದ್ದರು. ಆಗಲೂ, ‘ವಂದೇ ಮಾತರಂ’ ‘ಭಾರತ್ ಮಾತಾಕೀ ಜೈ’ಎಂದು ಏಟಿನ ಮಧ್ಯೆಯೂ ದನಿಯೆತ್ತಿ ದೇಶಪ್ರೇಮ ಪ್ರಕಟಿಸಿದ್ದ. ಕ್ರಾಂತಿಕಾರೀ ಚಿಂತನೆಗಳ ಪ್ರಭಾವಕ್ಕೆ ಒಳಗಾದ ಅವನು ‘ಜುಗಾಂತರ್’ಗುಪ್ತ ಸಂಘಟನೆಗೆ ಸೇರಿ ಬ್ರಿಟಿಷ್ ಆಳ್ವಿಕೆಯಿಂದ ಭಾರತದ ವಿಮೋಚನೆಗಾಗಿ ಪಣತೊಟ್ಟ. 1907 ದಶಂಬರದಲ್ಲಿ ಬಂಗಾಳದ ಲೆಫ್ಟಿನೆಂಟ್ ಗವರ್ನರ್ ಎಂಡ್ರೂ ಫ್ರೇಜರ್ ಪ್ರಯಾಣಿಸುವ ರೈಲುಗಾಡಿಯನ್ನು ಸ್ಫೋಟಿಸುವ ಒಂದು ಪ್ರಯತ್ನವು ವಿಫಲವಾಯಿತು. ‘ಡಾಕ್ಸಾ ಅನುಶೀಲನ ಸಮಿತಿ’ ಯು ಕಾರ್ಯಪ್ರವೃತ್ತವಾಗಿ, ಡಾಕ್ಸಾ ಮ್ಯಾಜಿಸ್ಟ್ರೇಟ್ ಬಿ.ಸಿ. ಎಲೆನ್‌ರಿಗೆ ಗುಂಡಿಕ್ಕಲಾಯಿತು. 1908 ರ ಎಪ್ರಿಲ್ 11ರಂದು ಚಂದ್ರನಗೋರ್ ಮೇಯರ್‌ನ ಹತ್ಯೆಯ ಪ್ರಯತ್ನವಾಯಿತು. ಹಿಂದೆ ಬಂಗಾಳದಲ್ಲಿದ್ದ ‘ದುಷ್ಟಾಗ್ರೇಸರ’ ನೆಂದು ಹೆಸರುವಾಸಿಯಾದ ಮ್ಯಾಜಿಸ್ಟ್ರೇಟ್, ಕಿಂಗ್ಸ್ ಪೊರ್ಡ್‌ರ ಹತ್ಯೆಗೆ ಬಿಹಾರದ ಮುಜಾಫರ್ ನಗರದಲ್ಲಿ ಪ್ರಯತ್ನಿಸಲು ತಂತ್ರ ರೂಪಿಸಲಾಯಿತು. ಆಗ ಕಿಂಗ್ಸ್ ಫೋರ್ಡ್ ಅಲ್ಲಿ ಜಿಲ್ಲಾ ನ್ಯಾಯಾಧೀಶನಾಗಿ ಕಾರ್ಯನಿರ್ವಹಿಸುತ್ತಿದ್ದ. ಖುದೀರಾಮ್ ಬೋಸ್‌ಮತ್ತು ಪ್ರಫುಲ್ಲಾ ಚಾಕೀಯವರನ್ನು ಆ ಕಾರ್ಯಕ್ಕೆ ನಿಯೋಜಿಸಲಾಯಿತು.ಆ ಅಪಾಯಕಾರೀ ಕೆಲಸವನ್ನು ಅವರು ಸಂತೋಷದಿಂದಲೇ ಒಪ್ಪಿಕೊಂಡರು! ದೇಶಕ್ಕಾಗಿ ಯಾವುದೇ ಸಾಹಸಕ್ಕೆ ಜೀವದ ಹಂಗು ತೊರೆದು ಅವರು ತಯಾರಾಗಿದ್ದರು! 1908ರ ಎಪ್ರಿಲ್ 30ರ ರಾತ್ರಿ (ಗುರುವಾರ, 8-30)ಮುಜಾಫರ್ ನಗರದಲ್ಲಿ ಕಿಂಗ್ಸ್‌ಫೋರ್ಡ್ ಸಂಚರಿಸುವುದಾಗಿದ್ದ ಸಾರೋಟಿನ ಮೇಲೆ ಬಾಂಬೆಸೆದರು. ಅವರು ಮೊದಲೇ ಅಲ್ಲಿಗೆ ಬಂದು ಮರಗಳ ಮಧ್ಯೆ ಮರೆಮಾಡಿಕೊಂಡಿದ್ದರು. ಕಿಂಗ್ಸ್‌ಫೋರ್ಡ್‌ನ ಅದೃಷ್ಟವೋ ಎಂಬಂತೆ, ಅದನ್ನು ಅವನ ಬದಲಾಗಿ ಸಾಗುತ್ತಿದ್ದ ಇಬ್ಬರು ಆಂಗ್ಲ ಮಹಿಳೆಯರು (Mis. Kenedy and Miss Grace Kennedy) ಸಾವಿಗೀಡಾದರು. ಕಿಂಗ್ಸ್‌ಫೋರ್ಡ್ ಮೇಲಿನ ಗುರಿ ತಪ್ಪಿದರೂ, ಅದು ಭಾರತದಲ್ಲಿಯ ಬ್ರಿಟಿಷ್ ಸಾಮ್ರಾಜ್ಯದ ನಿಲುವನ್ನೇ ಅಲುಗಾಡಿಸಿತು. ಅದು ಅಷ್ಟೊಂದು ಬಲಶಾಲಿಯಲ್ಲದ ಕೈಬಾಂಬ್ ಆದರೂ ಭೀತಿ ಭಯಂಕರವಾಗಿತ್ತು!
ಭಾರತೀಯರ ಪಾಲಿಗೆ ‘ದುಷ್ಟ’ ನಾಗಿದ್ದ ಕಿಂಗ್ಸ್‌ಫೋರ್ಡ್‌ಗೆ
ಜೀವಬೆರಿಕೆಯಿತ್ತು. ಅದರಿಂದಾಗಿ ಇಬ್ಬರು ಪೊಲೀಸರನ್ನು ಅವರ ಬೆಂಗಾವಲಾಗಿ ನೇಮಿಸಲಾಗಿತ್ತು.(Tehsildar Khan and Faiyazuddin). ಏಪ್ರಿಲ್ 30ರ ರಾತ್ರೆ, ಇಬ್ಬರು ಬಂಗಾಳೀ ಯುವಕರು ಅವರ ಕಣ್ಣಿಗೆ ಬಿದ್ದಿದ್ದರು. ಆಗ ಅವರನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು. ಆಮೇಲೆ, ರಾತ್ರಿ ಸುಮಾರು 8-30ಕ್ಕೆ ಬಾಂಬ್ ಸ್ಫೋಟವಾದಾಗ ಅವರಿಬ್ಬರು ಓಡಿಹೋಗುವುದನ್ನು ಆ ಬೆಂಗಾವಲಿನ ಪೊಲೀಸರು ಕಂಡಿದ್ದರು. ಆ ಘಟನೆಗೆ ಅವರೇ ಮುಖ್ಯ ಸಾಕ್ಷಿಯಾಗಿದ್ದರು. ಬಾಂಬೆಸೆತದ ಸುದ್ದಿಯಾದೊಡನೆಯೇ ಮುಜಾಫರ್ ನಗರದ ಪೊಲೀಸ್ ಸೂಪರಿಂಟೆಂಡೆಂಟ್‌ಎಲ್ಲಾ ಕಡೆಗಳಲ್ಲೂ ಅಪರಾಧಿಗಳ ಶೋಧಕಾರ್ಯ ಕೈಗೊಂಡರು. ಆ ಅಪರಾಧಿಗಳನ್ನು ಬಂಧಿಸಲು ಸಹಕರಿಸುವವರಿಗೆ ರೂ. 5000ದ ಬಹುಮಾನವನ್ನೂ ಘೋಷಿಸಲಾಯಿತು. ಮತ್ತೆರಡು ದಿನಗಳ ಒಳಗಾಗಿ, ಪೊಲೀಸರಾದ ಫತೇಸಿಂಗ್ ಮತ್ತು ಶಿಯೋಸಿಂಗ್ ಖುದಿರಾಂನನ್ನು ಮುಜಾಫರ್ ನಗರದಿಂದ 25 ಮೈಲು ದೂರದಲ್ಲಿ ಒಂದು ದಿನಸಿ ಅಂಗಡಿಯ ಸಮೀಪ ಬಂಧಿಸಿದರು. ಅವನಿಂದ ಎರಡು ಪಿಸ್ತೂಲುಗಳನ್ನೂ, ಮದ್ದುಗುಂಡುಗಳನ್ನೂ ವಶಪಡಿಸಿಕೊಳ್ಳಲಾಯಿತು. ಆಮೇಲೆ, ಅವನನ್ನು ಮುಜಾಫರ್ ನಗರಕ್ಕೆ ತರಲಾಯಿತು. ಅಲ್ಲಿ ವಿಚಾರಣೆಯಲ್ಲಿ ಖುದಿರಾಮ್ ತಪ್ಪೊಪ್ಪಿಗೆಯ ಹೇಳಿಕೆ ನೀಡಿದ. ಖುದಿರಾಮ್ ಕಲ್ಕತ್ತಾದಿಂದ ಅವನ ಸ್ನೇಹಿತ ದಿನೇಶ್‌ಚಂದ್ರರಾಯ್ (ಪ್ರಫುಲ್ಲಾ ಚಾಕಿ)ಯೊಡನೆ ಕಿಂಗ್ಸ್‌ಫರ್ಡ್ ಹತ್ಯೆಗಾಗಿ ಮುಜಾಫರ್ ನಗರಕ್ಕೆ ಬಂದುದಾಗಿ ಹೇಳಿದ. ಇನ್ನೊಂದೆಡೆ, ಪೊಲೀಸ್ ಸಬ್‌ಇನ್‌ಸ್ಪೆಕ್ಟರ್, ನಂದಲಾಲ್ ಬ್ಯಾನರ್ಜಿ ಮೇ 1ರಂದು ಮುಜಾಫರ್ ನಗರದಿಂದ ರೈಲು ಪ್ರಯಾಣ ಮಾಡುವಾಗ ಓರ್ವ ಬಂಗಾಳೀ ಯುವಕನನ್ನು ಕಂಡು ಸಂಶಯಗ್ರಸ್ತನಾದ. ಅವನೂ ಅದೇ ಬೋಗಿಯಲ್ಲಿ ಪ್ರಯಾಣಮಾಡುತ್ತಿದ್ದ. ಅವನೊಡನೆ ಮಾತು ಪ್ರಾರಂಭಿಸಿ ವಿಷಯ ಸಂಗ್ರಹಿಸುತ್ತಿದ್ದಾಗ, ಕೂಡಲೇ ಅವನು ಹೊರನಡೆದ. ಪುನಃ ಆ ಯುವಕ ಒಳಗೆ ಬಂದಾಗ ಪೊಲೀಸ್ ಅಧಿಕಾರಿ ವರಿಷ್ಠರಿಗೆ ವಿಷಯ ತಿಳಿಸಿದಾಗ ಆ ಯುವಕನನ್ನು ಬಂಧಿಸಲು ಆಜ್ಞಾಪಿಸಿದರು. ಅದನ್ನರಿತ ಅವನು ರೈಲ್ವೇ ಫ್ಲಾಟ್‌ಪಾರ್ಮಿಗೆ ಹಾರಿದ. ಆ ಯುವಕ ತಪ್ಪಿಸಿಕೊಳ್ಳಲು ಅಲ್ಲಿ ಮಹಿಳೆಯರ ಕೊಠಡಿಯತ್ತ ನುಗ್ಗಿದ. ಅಲ್ಲಿಗೆ ಧಾವಿಸಿ ಅವನನ್ನು ಹಿಡಿಯುವ ಪ್ರಯತ್ನಮಾಡಿದಾಗ, ಅವನು ಪಿಸ್ತೂಲಿನಿಂದ ಪೊಲೀಸರತ್ತ ಗುಂಡು ಹಾರಿಸಿದ! ಆದರೆ, ಅದು ಗುರಿ ತಪ್ಪಿತು. ಇನ್ನೇನು, ಅವನನ್ನು ಹಿಡಿಯಲು ಯತ್ನಿಸಿದಾಗ ಅವನು ಅದೇ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಮಾಡಿದ! ಅವನ ಪ್ರಾಣಪಕ್ಷಿ ಹಾರಿಹೋಯಿತು! ಆ ಧೀರ ಬಂಗಾಳೀ ಯುವಕನೇ ಪ್ರಫುಲ್ಲಾ ಚಾಕಿ (ದಿನೇಶ್‌ಚಂದ್ರ ರಾಯ್). ಅವನ ಮೃತದೇಹವನ್ನು ನೋಡಿದ ಪೊಲೀಸರು, ಮುಜಾಫರ್ ನಗರದಲ್ಲಿ ಬಾಂಬೆಸೆದ ದಿನ ನೋಡಿದುದು ಅವನನ್ನೇ ಎಂದು ಸಾಕ್ಷಿ ನುಡಿದರು. ಆಮೇಲೆ, ಖುದಿರಾಮ್ ಬೋಸ್ ಕೂಡಾ ಅವನನ್ನು (ಮೃತನಾದ) ದಿನೇಶ್‌ಚಂದ್ರ ರಾಯ್ ಎಂದೇ ಗುರುತಿಸಿದ.

arsid2372845 ಬ್ರಿಟಿಷರು ಖುದಿರಾಮ್ ವಿರುದ್ಧ ಇಪ್ಪತ್ತನಾಲ್ಕು ಸಾಕ್ಷಿಗಳನ್ನು ಕಲೆಹಾಕಿದರು. ಆಮೇಲೆ ದೋಷಾರೋಪಣೆ ಪಟ್ಟ ಸಲ್ಲಿಸಿ ವಿಚಾರಣೆ ಪ್ರಾರಂಭವಾಯಿತು. 1908 ಜೂನ್ 13ರಂದು ನ್ಯಾಯಾಧೀಶ ಕಾರ್ನ್‌ಡಫ್ ಗಲ್ಲು ಶಿಕ್ಷೆಯ ತೀರ್ಮಾನ ನೀಡಿದರು. ಇದನ್ನು ಪ್ರಶ್ನಿಸಿ ಖುದಿರಾಮ್ ಕಲ್ಕತ್ತಾ ಉಚ್ಚನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ, ಜುಲೈ 13ರಂದು ಅಲ್ಲಿ ತಿರಸ್ಕೃತವಾಗಿ ಕೆಳಗಿನ ನ್ಯಾಯಾಲಯದ ತೀರ್ಮಾನವನ್ನೇ ಎತ್ತಿಹಿಡಿಯಲಾಯಿತು. 1908ರ ಅಗೋಸ್ತು 11ರಂದು ಖುದಿರಾಮ್ ಬೋಸ್‌ಗೆ ಗಲ್ಲುಶಿಕ್ಷೆಯನ್ನು ಜಾರಿಗೊಳಿಸಲಾಯಿತು. ಅವನ ಕೊನೆಯ ಮಾತೇ ‘‘ವಂದೇ ಮಾತರಂ’’. ಹತ್ತೊಂಬತ್ತು ವರ್ಷದ ಬಿಸಿರಕ್ತದ ಆ ತರುಣ ಕ್ರಾಂತೀಯ ಪಥ ತುಳಿದು ತಾಯ್ನಾಡಿಗಾಗಿ ತ್ಯಾಗಮಾಡಿದ ನಿಸ್ವಾರ್ಥ ಸಾಹಸ, ಮುಂದೆ ಅನೇಕರಿಗೆ ಮಾದರಿಯಾಯಿತು. ದೇಶದ್ರೋಹಿಗಳನ್ನೇ ಹುತಾತ್ಮರಾಗಿ ಕಾಣುವ ಈ ದಿನಗಳಲ್ಲಿ ಖುದಿರಾಮ್‌ನ ದೇಶಪ್ರೇಮ ತ್ಯಾಗ-ಬಲಿದಾನಗಳನ್ನು ಎಲ್ಲಿ ಕಾಣಲಿ? ನಮ್ಮ ಯುವಕರಿಗೆ ಆ ರಾಷ್ಟ್ರಭಕ್ತಿಯ ಉದಾತ್ತ ಧ್ಯೇಯಗಳನ್ನು ಬೋಧಿಸುವ ಬದಲಾಗಿ ರಾಷ್ಟ್ರದ್ರೋಹೀ ನಡೆಯನ್ನು ತೋರಿಸುವ ವಿದ್ಯಾಕೇಂದ್ರಗಳೂ, ಪ್ರಾಧ್ಯಾಪಕರೂ, ಸ್ವಾರ್ಥಸಾಧನೆಯ ರಾಜಕಾರಣಿಗಳೂ ಸತತ ಪ್ರಯತ್ನ ಮಾಡುವಾಗ,ಭಾರತಮಾತೆಯ ರಕ್ಷಣೆಗಾಗಿ ರಟ್ಟೆಬಲದ ರಾಷ್ಟ್ರಪ್ರೇಮಿಗಳು ರೂತಾಳಲು-ಅಖಂಡ ‘ಭರತವರ್ಷ’ದ ಮರುಸ್ಥಾಪನೆಯಾಗಲೀ.

   

Leave a Reply