ಸಿರಿಧಾನ್ಯಗಳ ಸಿರಿ ನಮಗೆ ಸರಿಯೇ?

ಲೇಖನಗಳು - 0 Comment
Issue Date :

-ಡಾ. ಶ್ರೀವತ್ಸ ಭಾರದ್ವಾಜ್

ಮನುಷ್ಯನಿಗೆ ಯಾವ ಆಹಾರ ಒಳ್ಳೆದು ಎಂಬ ಯಕ್ಷ ಪ್ರಶ್ನೆಗೆ ಹಲವರು ಹಲವಾರು ರೀತಿಯಲ್ಲಿ ಉತ್ತರಿಸಲು ಪ್ರಯತ್ನಿಸಿದ್ದಾರೆ. ಕೆಲವರು ಹಸಿ ತರಕಾರಿ ಎಂದರೆ ಕೆಲವರು ಬೇಯಿಸಿದ ತರಕಾರಿ ಎನ್ನುತ್ತಾರೆ. ಹಣ್ಣುಗಳು ಎಂದರೆ ಧಾನ್ಯಗಳು; ಸಸ್ಯಾಹಾರವೆಂದರೆ ಮಾಂಸಾಹಾರ ಎನ್ನುತ್ತಾರೆ. ಈ ಚರ್ಚೆಗೆ ಹೊಸದಾಗಿ ಸೇರಿರುವುದು ಅಕ್ಕಿ-ಗೋದಿಗಳ ಪರ್ಯಾಯವಾಗಿ ಸಿರಿಧಾನ್ಯಗಳು (ಸಾಮೆ, ಸಜ್ಜೆ, ನವಣೆ, ಹಾರ್ಕ, ಊದಲು ಮುಂತಾದವು). ಮನುಷ್ಯನಿಗೆ ಸಿರಿಧಾನ್ಯ ಪರಮ ಆಹಾರ ಎಂದು ಹೊಸತಾದ ಅಭಿಪ್ರಾಯ ಮೂಡಿದೆ. ಸಿರಿಧಾನ್ಯಗಳು ಸರ್ವರೋಗ ನಿವಾರಕ ಹಾಗು ನಿಯಂತ್ರಕ, ಮನುಕುಲಕ್ಕೆ ಅಮೃತವಿದ್ದಂತೆ ಎಂದು ಹೇಳಲಾಗುತ್ತಿದೆ. ಈ ಸಿರಿಧಾನ್ಯಗಳ ಸಿರಿ ನಿಜಕ್ಕೂ ಮನುಕುಲಕ್ಕೆ ಸರಿಯೇ ಎಂದು ತಿಳಿಯಬೇಕಾಗಿದೆ.

ಡಾಕ್ಟರೇ! ಸಿರಿಧಾನ್ಯ ತಿನ್ನಲು ಪ್ರಾಂಭಿಸಿದ ಮೇಲೆ ನನ್ನ ತೂಕ ಗಮನೀಯವಾಗಿ ಇಳಿದಿದೆ. ಆದರೆ ನನಗೀಗ ಮೂಲವ್ಯಾಧಿಯ ಸಮಸ್ಯೆ ಶುರುವಾಗಿದೆ. ಏನು ಮಾಡಲಿ? ಎಂದು ಯುವಕನೊಬ್ಬನು ನನ್ನಲ್ಲಿ ಹೇಳಿದ. ನಮ್ಮಲ್ಲಿ ಹಲವರು ಸಿರಿಧಾನ್ಯಗಳ ಬಗ್ಗೆ ಕೇಳಿದ ಕೂಡಲೆ ತಮ್ಮ ಮನೆಗಳಲ್ಲಿ ಅಕ್ಕಿ ಮತ್ತು ಗೊಧಿಯನ್ನು ಸಂಪೂರ್ಣವಾಗಿ ನಿಶೇಧಿಸಿ ಸಿರಿಧಾನ್ಯಗಳನ್ನೇ ಮುಖ್ಯ ಆಹಾರವೆಂದು ತಿನ್ನುತ್ತಿದ್ದಾರೆ. ಸಂಪೂರ್ಣ ಆಹಾರವು ಯಾವುದೋ ಒಂದು ವಿಧವಾದ ಆಹಾರ ವರ್ಗದಿಂದ ದೊರೆಯುವುದಿಲ್ಲ. ಆಹಾರದಲ್ಲಿ ಅತಿ ಶ್ರೇಷ್ಠ ಆಹಾರ ಯಾವುದೆನ್ನುವ ವಾದವು ದೇವರಲ್ಲಿ ಅತಿ ಶಕ್ತಿಯುತ ದೇವರು ಯಾರು? ಎಂದು ಕೇಳಿದಂತಾಗುತ್ತದೆ. ಪರಿಪೂರ್ಣ ಅಥವ ಸಮತೋಲಿತ ಆರೋಗ್ಯಕರ ಆಹಾರವನ್ನು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. ಇದು ನಾವಿರುವ ಸ್ಥಳ, ಋತುಮಾನ ಹಾಗೂ ದೇಹ ಪ್ರಕೃತಿಗೆ ಹೊಂದಿಕೊಂಡು ಬದಲಾಗುತ್ತದೆ. ಆಹಾರದಲ್ಲಿ ಎಷ್ಟು ಸತ್ತ್ವವಿದೆ ಎಂಬುದು ಎಷ್ಟು ಮುಖ್ಯವೋ ಅದಕ್ಕಿಂತ ಮುಖ್ಯ ಆ ಆಹಾರವನ್ನು ಜೀರ್ಣಿಸುವ ಸಾಮರ್ಥ್ಯ ನಮಗೆ ಇದೆಯೇ ಎನ್ನುವುದು. ಎಳನೀರನ್ನೂ ಜೀರ್ಣಿಸಲು ಸಾಧ್ಯವಾಗದವನಿಗೆ ಅಮೃತ ಕುಡಿಸಿದರೇನು ಪ್ರಯೋಜನ?

 ಖಂಡಿತವಾಗಿಯೂ ಸಿರಿಧಾನ್ಯಗಳಲ್ಲಿ ಹಲವಾರು ಒಳ್ಳೆಯ ಗುಣಗಳಿವೆ. ಆದರೆ ಸಿರಿಧಾನ್ಯಗಳೇ ಸರ್ವಶ್ರೇಷ್ಠ ಆಹಾರ ಎನ್ನುವುದು ಪ್ರಶ್ಣಾರ್ಹವಾಗಿದೆ. ನಮ್ಮ ಆರೋಗ್ಯವನ್ನು ಕಾಪಾಡಬೇಕಾದರೆ ಪ್ರತಿ ಋತುಮಾನಕ್ಕೂ ನಮ್ಮ ಆಹಾರಕ್ರಮ ಬದಲಾಗಬೇಕು. ಹೊಸದಾದ ಊರಿಗೆ ಹೋದರೆ ಅಲ್ಲಿಯ ಮಳೆ ಹಾಗೂ ಹವೆಗೆ ಸರಿಯಾಗಿ ಬೆಳೆದಿರುವ ಬೆಳೆಗಳಿಂದ ತಯಾರಿಸಿದ ಆಹಾರವನ್ನು ಸೇವಿಸುವುದು ಉತ್ತಮ. ಉದಾಹರಣೆಗೆ ನಮ್ಮಲ್ಲಿನ ಸಾಂಪ್ರದಾಯಿಕ ಆಹಾರವನ್ನು ನೋಡಿದರೆ-ಕರಾವಳಿ ಪ್ರದೇಶದಲ್ಲಿ ಕೆಂಪು ಕಜೆಕುಚ್ಚಿಲಕ್ಕಿ (ಕುಸುಬ್ಲಕ್ಕಿ), ಮೈಸೂರು-ಬೆಂಗಳೂರಿನಲ್ಲಿ ರಾಗಿ, ಉತ್ತರಭಾರತದಲ್ಲಿ ಜವೆಗೋಧಿ, ಮಲೆನಾಡಿನಲ್ಲಿ ಅಕ್ಕಿ, ಉತ್ತರ ಕರ್ನಾಟಕದಲ್ಲಿ ಜೋಳ, ಸಜ್ಜೆ, ನವಣೆಗಳು ಬಳಕೆಯಾಗುತ್ತಿವೆ.

 ಇನ್ನು ಸಿರಿಧಾನ್ಯ ತಿನ್ನುವುದರಿಂದ ಯಾವುದೇ ರೀತಿಯಲ್ಲಿ ಆರೋಗ್ಯಕ್ಕೆ ಹಾನಿ ಇಲ್ಲ ಎನ್ನುವುದು ತಪ್ಪು. ಸಿರಿಧಾನ್ಯಗಳನ್ನು ಮಿತಿಮೀರಿ ಬಳಸಿದರೆ ದೇಹದಲ್ಲಿನ ಬೊಜ್ಜು ಅತಿಯಾಗಿ ಕರಗುತ್ತದೆ. ಸಂಧಿಗಳ ಮಧ್ಯವಿರುವ ಸ್ನಿಗ್ಧಾಂಶ ಒಣಗಿ ಸಂಧಿಗಳಲ್ಲಿ ನೋವು ಹೆಚ್ಚಾಗುವ ಸಾಧ್ಯತೆ ಇದೆ. ಇದರ

ಅತಿಯಾದ ಬಳಕೆಯಿಂದ ಮೂಳೆಗಳು ದುರ್ಬಲವಾಗುವ ಸಾಧ್ಯತೆ ಇದೆ. ಥೈರೋಯ್ಡ್ ಗ್ರಂಥಿಯ ಸಮಸ್ಯೆಯೂ ಕಂಡುಬರಬಹುದು. ಸಿರಿಧಾನ್ಯಗಳನ್ನು ತಿನ್ನುವಾಗ ನೀರಿನ ಪ್ರಮಾಣ ಕಡಿಮೆಯಾದಲ್ಲಿ ಅಜೀರ್ಣ, ಮಲಬದ್ಧತೆ, ಮೂಲವ್ಯಾಧಿ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಸಿರಿಧಾನ್ಯಗಳನ್ನು ಮಾತ್ರ ಅತಿಯಾಗಿ ಸೇವಿಸದೆ, ಮಿತಿಯನ್ನರಿತು ಇತರ ಎಲೆ-ಕಾಂಡ-ಬೇರು-ಹಣ್ಣು-ಹೂವು-ಬೀಜಗಳಿಂದ ತಯಾರಿಸಿದ ಆಹಾರದೊಂದಿಗೆ ತಿಂದರಷ್ಟೆ ಸಂಪೂರ್ಣ ಆಹಾರ ಎಂದು ಪರಿಗಣಿಸಲಾಗುತ್ತದೆ.

 ಸಿರಿಧಾನ್ಯಗಳನ್ನು ಸೇವಿಸಲೇ ಬೇಕು ಎಂದಿರುವವರು-

  • ಸಿರಿಧಾನ್ಯಗಳನ್ನು ಬೇಯಿಸುವ ಮುನ್ನ ನೀರಲ್ಲಿ ನೆನೆಸಿದರೆ ಒಳ್ಳೆದು.
  • ಸಿರಿಧಾನ್ಯಗಳನ್ನು ಜೀರ್ಣಿಸಲು ಚೆನ್ನಾಗಿ ಬಿಸಿನೀರು ಕುಡಿಯಬೇಕಾಗುತ್ತದೆ.
  • ತಿಂದು ಅಭ್ಯಾಸವೇ ಇಲ್ಲದಿದ್ದವರು ಯಾವುದಾದರೊಂದು ಸಿರಿಧಾನ್ಯವನ್ನು ಸ್ವಲ್ಪ ಸೇವಿಸಿ, ಕ್ರಮೇಣ ಅದರ ಪ್ರಮಾಣವನ್ನು ಹೆಚ್ಚಿಸಬಹುದು.
  • ಸಿರಿಧಾನ್ಯಗಳನ್ನು ಸೇವಿಸುವಾಗ ಮರೆಯದೆ ಸೊಪ್ಪು ಹಾಗೂ ನೀರು- ನಾರುಯುಕ್ತ ತರಕಾರಿಯನ್ನು, ಹಣ್ಣು ಹಂಪಲು ತಿನ್ನಿರಿ.

 

   

Leave a Reply