ಸುಗಂಧ ಪತ್ರೆಗಳು

ಧಾರ್ಮಿಕ - 1 Comment
Issue Date : 19.09.2014

ಶ್ರಾವಣಭಾದ್ರಪದ ಬಂತೆಂದರೆ ಹಬ್ಬಗಳ ಸಾಲು. ಮಂಗಳ ಗೌರಿ, ವರಮಹಾಲಕ್ಷ್ಮಿ, ಗೌರಿ ಗಣಪತಿ ಹಬ್ಬಗಳು ಹೀಗೆ ದಿನಕ್ಕೊಂದು ವಿಶೇಷ. ಪರಮಾತ್ಮನಿಗೆ ನಾವು ಬೆಳೆದುದನ್ನು ಅಥವ ನಮಗೆ ದೊರೆತುದನ್ನು ನಿವೇದಿಸಿ, ನಂತರ ನಾವು ಉಪಯೋಗಿಸುವುದು ನಮ್ಮಲ್ಲಿ ಮೊದಲಿನಿಂದ ಬಂದ ಸಂಪ್ರದಾಯ. ಎಲ್ಲ ಉತ್ತಮವಾದ ವಸ್ತುಗಳು ಮೊದಲು ಅವನಿಗೆ ಅರ್ಪಿಸಲ್ಪಡಬೇಕು. ಪರಮಾತ್ಮನೇ ಗೀತೆಯಲ್ಲಿ ಹೇಳಿರುವಂತೆ,
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ
ತದಹಂ ಭಕ್ತ್ವುಪಹೃತಮಶ್ನಾಮಿ ಪ್ರಿಯತಾತ್ಮನಃ॥
ಭಕ್ತಿಯಿಂದ ಕೊಡಲ್ಪಟ್ಟ ಪತ್ರೆ, ಪುಷ್ಪ, ಹಣ್ಣು, ನೀರು ಎಲ್ಲವನ್ನೂ ಅವನ್ನು ಪ್ರತಿಗ್ರಹಿಸುತ್ತಾನೆ. ಆದ್ದರಿಂದಲೇ ನಮ್ಮ ಪೂಜೆಗಳಲ್ಲಿ ಈ ಎಲ್ಲವನ್ನೂ ದೇವರಿಗೆ ಅರ್ಪಿಸುತ್ತೇವೆ.
ದೇವರಿಗೆ ಅರ್ಪಿಸುವ ಪತ್ರೆಗಳಲ್ಲಿ ಕೆಲವು ಸುಗಂಧಮುಕ್ತವಾಗಿದ್ದರೆ, ಕೆಲವು ನಿರ್ಗಂಧವಾಗಿಯೂ, ಹಾದಿ ಬೀದಿಯಲ್ಲಿ ಸಿಕ್ಕುವಂತಹವೂ ಆಗಿರುತ್ತವೆ. ಕೆಲವು ದೇವರಿಗೆ ಕೆಲಕೆಲವು ವಿಶೇಷ ಪತ್ರೆಗಳೂ ಹೇಳಲ್ಪಟ್ಟಿವೆ. ಬಣ್ಣ ಬಣ್ಣದ ಹೂವುಗಳ ನಡುವೆ ಈ ಹಸಿರು ಬಣ್ಣದ ಪತ್ರೆಗಳು ಪರಮಾತ್ಮನ ಮೇಲೆ ಅದ್ಭುತವಾದ ಸೌಂದರ್ಯವನ್ನು ಮೂಡಿಸಿ, ನಮ್ಮನ್ನು ಭಾವನಾಲೋಕಕ್ಕೆ ಒಯ್ಯುತ್ತವೆ. ಪ್ರಾಕೃತಿಕವಾಗಿ ಸಿಗುವ ಈ ಪತ್ರೆಗಳು ನಮ್ಮ ಭಕ್ತಿಯನ್ನು ತೋರಿಸಲು, ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ’ ಉಪಯುಕ್ತವಾಗಿವೆ.
ಪತ್ರವೆಂಬ ಪದವು ‘ಪತತಿ – ಪತ್‌ಲ್ಪ್ ಗತೌ’ ಎಂಬ ಧಾತುರೂಪವು. ಪತತಿಯೆಂದರೆ ಬೀಳುತ್ತದೆಯೆಂದು ಅರ್ಥ. ಚಳಿಗಾಲದಲ್ಲಿ ಉದುರುವ ಅಥವಾ ಹಣ್ಣಾಗಿ ಉದುರುವ ಈ ಪ್ರಾಕೃತಿಕ ಘಟನೆಯಿಂದ ಈ ಹೆಸರು ಬಂದಿರುವುದು. ಸುಗಂಧ ದ್ರವ್ಯಗಳಿಂದ ಮನುಷ್ಯರ ಅಂಗಗಳ ಮೇಲೆ ಬರೆಯುವ ಚಿತ್ರವೂ ‘ಪತ್ರಾವಳಿ’ಯೆಂದು ಕರೆಯಲ್ಪಡುತ್ತದೆ. ಅದ್ದರಿಂದ ಪತ್ರದಲ್ಲಿ ಸುಗಂಧಯುಕ್ತವಾಗಿರುವುದನ್ನು ಇದು ಸೂಚಿಸುತ್ತದೆ. ಕೆಲವು ಪತ್ರೆಗಳು ಆಕಾರದಿಂದ, ಕೆಲವು ಸುಗಂಧದಿಂದ ಆಕರ್ಷಿಸುತ್ತವೆ. ದೇವರ ಪೂಜೆಯಲ್ಲಿ ಬಳಸುವ ಸುಗಂಧಯುಕ್ರವಾದ ಪ್ರಮುಖ ಪತ್ರೆಗಳು ಇವು:-
1. ತುಳಸಿ:- ಪೂಜೆಯಲ್ಲಿ ಅತ್ಯಂತ ಪ್ರಮುಖವಾದ ಪತ್ರೆಯಿದು. ತುಲಾಂಸಾದೃಶ್ಯಂಸ್ಯತಿ’ ಅಂದರೆ ಇದಕ್ಕೆ ಹೋಲಿಕೆಯೇ ಇಲ್ಲವೆಂದು ಗಿಡದ ಹೆಸರೇ ಹೇಳುತ್ತದೆ. ಅಮೃತ ಮಥನ ಸಂದರ್ಭದಲ್ಲಿ ಸಮುದ್ರದಿಂದ ಹುಟ್ಟಿದ ಸಸ್ಯವೆಂದು ಇದನ್ನು ಹೇಳುತ್ತಾರೆ. ಇಡೀ ವಿಶ್ವದಲ್ಲಿಯೇ ಇದು ಅಸಮಾನವೆನಿಸಿದೆ. ‘ಯಸ್ಯಾ ದೇವ್ಯಾಃ ತುಲಾ ನಾಸ್ತಿ ವಿಶ್ಲೀಷು ಸಕಲೇಷು ಚ ತುಲಸೀ ತೇನ ವಿಖ್ಯಾತಾ’ ಎಂಬ ಪುರಾಣವಚನವಿದೆ. ತುಲಸಿಯ ಗಿಡವನ್ನು ನೆಡುವುದು, ನೀರೆರೆದು ಪೋಷಿಸುವುದು,ಅದು ಚೆನ್ನಾಗಿ ಬೆಳೆಯಲು ಸಹಾಯ ಮಾಡುವುದು, ಅದನ್ನು ನೋಡುವುದು, ಸ್ಪರ್ಶಿಸುವುಸು, ಧ್ಯಾನ, ನಮಸ್ಕಾರ, ಅರ್ಚನೆ ಹೀಗೆ ಅಷ್ಟವಿಧ ಸೇವೆಯು ಪಾಪನಾಶನವು. ಚಾತುರ್ಮಾಸ್ಯಾದ ನಾಲ್ಕು ತಿಂಗಳು ಶ್ರೀ ಮಹಾವಿಷ್ಣುವಿನ ಸಾಂನಿಧ್ಯವು ಇಲ್ಲಿ ಇರುತ್ತದೆ. ಅಷ್ಟೇ ಅಲ್ಲದೆ, ‘ಪುಷ್ಕರಾದ್ಯಾನಿ ತೀರ್ಥಾನಿ ಗಂಗಾಯಾಃಸರಿತಸ್ತಥಾ ವಾಸುದೇವಾದಯೋ ದೇವಾಃ ವಸಂತಿ ತುಲಸೀದಲೇ’ ಎಂದು ಎಲ್ಲ ತೀರ್ಥಗಳೂ ಇವರಲ್ಲಿ ಇರುತ್ತದೆಂದು ಹೇಳುತ್ತಾರೆ. ಆರೋಗ್ಯ ದೃಷ್ಟಿಯಿಂದಲೂ ತುಲಸೀ ಶ್ರೇಷ್ಠವಾದುದು. ಹಿಂದೆ ಎಲ್ಲರ ಮನೆಯಲ್ಲಿಯೂ ತುಲಸೀ ಕಟ್ಟಿ ಇರುತ್ತಿತ್ತು.
ತುಲಸಿಗೆ ‘ಸುರಸಾ’ ಎಂಬ ಹೆಸರೂ ಇದೆ. ‘ಶೋಭನೋ ರಸೋ ಯಸ್ಯಾಃ ಇದರ ರಸವು ಶುಭಕರವಾದುದು. ಬಹುಮಂಜರಿಯೆಂದರೂ ಇದೆ. ತುಲಸಿಯಲ್ಲಿ ಫಲಪುಷ್ಪಗಳಿಲ್ಲದಿದ್ದರೂ ಬಹಳವಾದ ತೆನೆಗಳು ಮತ್ತು ದಳಗಳು ಇರುತ್ತವೆ. ವಿಷ್ಣವು ತುಲಸೀದಲ ಮಾಲಾ ಪ್ರಿಯನು. ಗಣಪತಿಗೆ ತುಲಸಿ ನಿಷಿದ್ಧವೆನ್ನುತ್ತಾರೆ.
2. ಮರುಗ :- ಹಿತವಾದ ಸುವಾಸನೆಯುಳ್ಳ ಈ ಸಣ್ಣ ಗಿಡದಲ್ಲಿ ಸಣ್ಣ ಸಣ್ಣ ಎಲೆಗಳು ಸುತ್ತೆಲ್ಲ ಸುಗಂಧವನ್ನು ಹರಡುತ್ತದೆ. ಸಂಸ್ಕೃತದಲ್ಲಿ ಇದನ್ನು ‘ಮರುವಶ’, ಪಿಂಡೀತಶ, ಶ್ವಸನ, ಶರಹಾಟಕ, ಶಲ್ಯ, ಮದನ, ಸಮೀರಣ, ಪ್ರಸ್ಥ ಪುಷ್ಪ, ಷಣಿರ್ಜಕ, ಜಂಬೀರ ಮುಂತಾಗಿ ಅನೇಕ ಹೆಸರುಗಳಿಂದ ಸಂಬೋಧಿಸುತ್ತಿದ್ದರೆಂದು ಅಮರಕೋಶದಿಂದ ತಿಳಿದು ಬರುತ್ತದೆ. ಮುಳ್ಳುಗಳಿಂದ ಕೂಡಿದ, ಮರುಗ, ಬಿಳಿಯ ಮರುಗ, ಹೀಗೆ ಇದರಲ್ಲಿ ಬೇರೆ ಬೇರೆಯ ಬಗೆಗಳಿದ್ದವು. ಪ್ರಸ್ಥಪುಷ್ಪವೆಂಬ ಇದರ ಹೆಸರು ಇದು ಬೆಟ್ಟದ ಮೇಲೆ ಬೆಳೆಯುತ್ತ್ತಿತ್ತೆಂದೂ, ‘ಮರುವಶ’ ಎಂಬುದರಿಂದ ಮರುಭೂಮಿಯಲ್ಲೂ ಬೆಳೆಯುತ್ತದೆಂದೂ ತೊರಿಸುತ್ತದೆ. ಅಷ್ಟು ವ್ಯಾಪಕವಾಗಿ ಇದು ಬೆಳೆಯುತ್ತಿತ್ತು. ಇದರ ವಾಸನೆಗೆ ಹಾವುಗಳು ಬರುತ್ತಿದ್ದವೆಂದು ಫಣಿಜ್ಝಶವೆಂಬ ಹೆಸರು ಸೂಚಿಸುತ್ತದೆ. ಆದ್ದರಿಂದಲೇ ಬೆಟ್ಟದಂತಹ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದಿರಬಹುದು. ಫಣಿಜ್ವರವು ಬಿಳಿಯ ಮರುಗವೆಂದು ಕಿಟ್ಟಲ್ ಕೋಶ ಹೇಳುತ್ತದೆ. ಎಲ್ಲ ವ್ರತಗಳ ಪತ್ರೆ ಪೂಜೆಯಲ್ಲಿಯೂ ಇದರ ಬಳಕೆ ಹಿಂದೆಯೇ ಇತ್ತು. ಈಗಲೂ ಇದೆ.
3. ಮಾಚಿಪತ್ರೆ:- ಸೇವಂತಿಗೆ ಗಿಡದ ಎಲೆಗಳಂತೆಯೇ ಇರುವ ಈ ಸುಗಂಧಪತ್ರ ಅದರಂತೆಯೇ ನೆಲದ ಮೇಲೆ ಹರಡುತ್ತ ಬೆಳೆಯುತ್ತದೆ. ಸಂಸ್ಕೃತದಲ್ಲಿ ಇದಕ್ಕೆ ‘ಗ್ರಂಥಿ ಪರ್ಣ’ ಎಂದು ಹೆಸರು. ‘ಗ್ರಂಥೌ ಪರ್ಣಾನಿ ಅಸ್ಸಾ’ ಅಂದರೆ ಗಿಣ್ಣುಗಳಲ್ಲಿ ಎಲೆಗಳು ಬರುತ್ತವೆಂದು ಇದರ ಅರ್ಥ. ಈ ಪತ್ರೆ ಅಯುರ್ವೇದದಲ್ಲಿಯೂ ಪ್ರಸಿದ್ಧವಾದುದು. ಇದರ ರಸವನ್ನು ಹೊಟ್ಟೆಯಲ್ಲಿರುವ ಜಂತುಹುಳಗಳಿಗೆ ಔಷಧವಾಗಿ ಬಳಸುತ್ತಿದ್ದರು.
4. ದವನ:- ಇದು ಅತ್ಯಂತ ಪರಿಮಳಯುಕ್ತವಾದ ಪುಟ್ಟಗಿಡ. ಇದನ್ನು ‘ಹಬ್ಬದ ಹೂವು’ಎಂದೇ ಕರೆಯುತ್ತಾರೆ. ಜಾತ್ರೆಗಳಲ್ಲಿ, ದೇವರ ರಥೋತ್ಸವಗಳಲ್ಲಿ ಬಾಳೆಹಣ್ಣಿಗೆ ದವನ ಕಡ್ಡಿಯನ್ನು ಚುಚ್ಚಿ ರಥದ ಮೇಲಕ್ಕೆ ಎಸೆಯುತ್ತಾರೆ. ದವನದಲ್ಲಿ ಊರದವನ, ಕಾಡು ದವನ, ದವನ ಮಲ್ಲಿಗೆ ಮುಂತಾದ ಭೇದಗಳಿವೆಯೆಂದು ಹೇಳುತ್ತಾರೆ. ಚೈತ್ರ ಶುದ್ಧ ಹುಣ್ಣಿಮೆಯಂದು ಬಹಳ ರಥೋತ್ಸವಗಳು ಜರುಗುವುದರಿಂದ. ಆ ದಿನವನ್ನು ದವನದ ಹುಣ್ಣಿಮೆಯೆಂದೇ ಕರೆಯುತ್ತಾರೆ. ಅಂದು ದೇವರಿಗೆ ದವನದ ಪೂಜೆ ಬಹಳ ಪ್ರಶಸ್ತವಾದುದು. ಚೈತ್ರ ಶುದ್ಧ ಬಿದಿಗೆಯಂದು ಶಿವಗೌರಿಯರನ್ನು, ಷಷ್ಠಿಯಂದು ಸ್ಕಂದನ ಪೂಜೆಯನ್ನು, ಚತುರ್ದಶಿಯಂದು ಶಿವನನ್ನು, ಪಂಚಮಿಯಲ್ಲಿ ಅನಂತನಾಗನನ್ನು, ಸಪ್ತಮಿಯಲ್ಲಿ ಸೂರ್ಯನನ್ನು, ನವಮಿಯಂದು ದೇವಿಯನ್ನು ಪೂಜಿಸುವಾಗ ದವನವನ್ನು ವಿಶೇಷವಾಗಿ ಬಳಸುತ್ತಾರೆ. ವಸಂತದಲ್ಲಿ ದವನ ಚಿಗುರಿ ಹೊಸದಾದ ಪರಿಮಳದಿಂದ ಕೂಡಿರುವುದು ಇದಕ್ಕೆ ಕಾರಣವಿರಬಹುದು. ದಮನಶಾರೋಪಣವು ಶಿವನಿಗಂತೂ ಅತಿಪ್ರಿಯವೆನ್ನಲಾಗಿದೆ.
ಅಡು ಭಾಷೆಯಲ್ಲಿ ಇದನ್ನು ಜವನವೆಂದೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಇದಕ್ಕೆ ಅಜಜಟಿ, ಋಷಿಪುತ್ರಿ, ದಮನ ಮತ್ತು ದಮನಕವೆಂಬ ಹೆಸರುಗಳು ಕಂಡುಬರುತ್ತದೆ. ಕಾಡಿನ ವಾತಾವರಣದಲ್ಲಿ ಇದು ಸಮೃದ್ಧವಾಗಿ ಬೆಳೆಯುತ್ತಿದ್ದಿರಬಹುದು.
5. ಕಾಮಕಸ್ತೂರಿ:- ಸ್ಪಲ್ಪ ಕಪ್ಪಾದ ಎಲೆಗಳುಳ್ಳ (ಕೃಷ್ಣ ತುಳಸಿಯಂತೆ), ಈ ಗಿಡ ತನ್ನ ಸುವಾಸನೆಯಿಂದ ಮನಸ್ಸಿನ ಕಾಮನೆಯನ್ನು ಕೆರಳಿಸುತ್ತದಂತೆ. ಸಂಸ್ಕೃತದಲ್ಲಿ ಇದಕ್ಕೆ ಕಠಿಂಜರ ಅಥವ ಪರ್ಣಾಸವೆಂದು ಹೆಸರು ‘ಕಠಿನಂ ಜರಯತಿ’ ಎಂದರೆ ಎಂತಹ ಕಠಿನ ಮನಸ್ಕರನ್ನೂ ಬದಲಾಯಿಸುವ ವಿಶಿಷ್ಟ ಸುಗಂಧವುಳ್ಳ ಗಿಡವಿದು. ಕಠಿಂಜರವೆಂದರೆ ತುಲಸಿಯೆಂದೂ ಕೆಲವರು ಅಭಿಪ್ರಾಯ ಪಡುತ್ತಾರೆ. ‘ಪರ್ಣಾನಿ ಅಸ್ಸತಿ’ ಎಂಬುದು ಪರ್ಣಾಸವೆಂಬ ಪದದ ಅರ್ಥ. ಇದರಲ್ಲಿ ಬಹಳ ಎಲೆಗಳೇ ಇರುವುದರಿಂದ, ಅಥವ ಎಲೆಗಳೇ ಪ್ರಧಾನವಾಗಿ ಬೇರೆ ಹೂವು ಅಥವ ಹಣ್ಣುಗಳಿಲ್ಲದುದರಿಂದ ಇದು ಪರ್ಣಾಸವು. ಇತ್ತೀಚೆಗೆ ಈ ಗಿಡ ಅಳಿವಿನ ಅಂಚಿನಲ್ಲಿರುವಂತೆ ಕಾಣುತ್ತಿದೆ. ಮೊದಲು ಮನೆ ಮನೆಗಳಲ್ಲಿ ಬೆಳೆಯುತ್ತಿದ್ದ ಈ ಗಿಡದ ಎಲೆಗಳು ಪೂಜೆಗೆ ಮತ್ತು ಹಾರಗಳಲ್ಲಿ ನಡು ನಡುವೆ ಬೆರೆಸುವುದಕ್ಕೆ ಬಹಳ ಉಪಯೋಗವಾಗುತ್ತಿತ್ತು.
6. ಕಸ್ತೂರಿ ಪತ್ರೆ:- ಮುಳ್ಳು ಜಾಜಿಯೆಂದೂ ಇದನ್ನು ಕೆಲವರು ಹೇಳುತ್ತಾರೆ. ಇದರಲ್ಲಿ ದುಂಡಾಗಿ ಹಳದಿ ಹೂವುಗಳೂ ಬಿಡುತ್ತವೆ. ಇದರ ಕಾಯಿಗಳು ಬಹಳ ಅಂಟಾಗಿದ್ದು ಗೊಂದಿನಂತೆ ಹಿಂದೆ ಉಪಯೋಗವಾಗುತ್ತಿದ್ದವು. ಬಹಳ ಮುಳ್ಳುಗಳಿರುವ ಈ ಗಿಡದ ಪತ್ರೆ ಮತ್ತು ಪುಷ್ಪಗಳೆರಡೂ ಪೂಜೆಗೆ ಉಪಯೋಗಿಸಲ್ಪಡುತ್ತಿದ್ದವು. ಸುಗಂಧದ ಮೂಲಕ ತನ್ನ ಇರವನ್ನು ಎಂತಹ ಘನ ನಿಬಿಡ ಗಿಡಗಳ ಗುಂಪಿನಲ್ಲಿಯೂ ತೋರಿಸಿಕೊಡಬಲ್ಲ ಗಿಡವಿದು.
7. ಪಚ್ಚೆ ತೆನೆ: – ಇಂದಿಗೂ ಕಾಣಬರುವ ಸುಗಂಧಯುಕ್ತ ಪತ್ರೆಗಳಲ್ಲಿ ಇದೂ ಒಂದು. ಇದನ್ನು ಪಚ್ಚೆ ಗಿಡವೆಂದೂ ಕರೆಯುತ್ತಾರೆ. ದೇವರ ಕಣಿಕವೆಂಬುದು ಇದರ ಸಂಸ್ಕೃತ ನಾಮಧೇಯವು. ಕಣಿಕವೆಂದರೆ ತೆನೆ .‘ಶಣೋ ವಿದ್ಯತೇ ಅಸ್ಸ’- ಅದರಲ್ಲಿ ಬೀಜದ ಕಣಗಳು ಇರುತ್ತವೆ. ಈ ಪಚ್ಚೆತೆನೆ ದೇವರಿಗೆ ಮಾತ್ರ ಸೀಮಿತವಾಗಿರುವುದರಿಂದ, ಆಹಾರಾದಿಗಳಲ್ಲಿ ಬಳಸಲ್ಪಡದೆ ಇರುವುದಿಂದ ಇದನ್ನು ದೇವಕಣಿಶವೆಂದು ಕರೆದಿರಬಹುದು.
8. ಪನ್ನೀರೆಲೆ:- ಇತ್ತೀಚೆಗೆಬಹಳ ಕಾಣಿಸಿಕೊಳ್ಳುವ ಸುಗಂಧ ಪತ್ರವೆಂದರೆ ಪನ್ನೀರೆಲೆ. ಗುಲಾಬಿಯ ಜೊತೆಗೆ ಒಂದು ಎಲೆಯನ್ನು ಸೇರಿಸಿ ಕೋಟಿಗೆ ಸಿಕ್ಕಿಸಿಕೊಳ್ಳುವುದರಿಂದ ಹಿಡಿದು, ಎಲ್ಲ ರೀತಿಯ ಪುಷ್ಪಾಲಂಕಾರಗಳಲ್ಲಿ ಇದರ ಪಾತ್ರ ಹಿರಿದು. ತನ್ನದೇ ಆದ ಹಿತವಾದ ಸುಗಂಧ ಮತ್ತು ಉಳಿದ ಸುಗಂಧ ಪತ್ರೆಗಳಿಗಿಂತ ಅಗಲವಾದ ಮತ್ತು ಸುಂದರವಾದ ಇದರ ಆಕಾರ ಜನಪ್ರಿಯತೆಗೆ ಕಾರಣವಾಗಿರಬಹುದು. ಬಹಳ ಹಿಂದೆ ಇದು ಭಾರತದಲ್ಲಿ ಇರಲಿಲ್ಲವೆಂದು ತೋರುತ್ತದೆ. ಇದರ ಸಂಸ್ಕೃತ ನಾಮಧೇಯ ಲಭ್ಯವಾಗಲಿಲ್ಲ.
ಹೀಗೆ ಅನೇಕ ಸುಗಂಧಯುಕ್ತವಾದ ಪತ್ರೆಗಳು ದೇವರ ಪೂಜೆಗೆಂದೇ ಬೆಳಸಲ್ಪಡುತ್ತಿದ್ದವು. ಹಾರಗಳ ಮಧ್ಯೆ, ಬಣ್ಣ ಬಣ್ಣದ ಹೂಗಳಿಗೆ ಶೋಭೆಯನ್ನು ಕೊಡಲು ಮತ್ತು ಅದರ ಮಾದಕತೆ – ಮೋಹಕತೆಗಳು ವರ್ಧಿಸುವಂತೆ ಮಾಡಲು ಈ ಸುಗಂಧ ಪತ್ರೆಗಳು ಬಹಳ ಅವಶ್ಯಕ. ಈ ದೃಷ್ಟಿಯಿಂದ ಇವುಗಳಿಂದ ಆರ್ಥಿಕಲಾಭವೂ ಇದೆ. ಈ ರೀತಿಯ ಪತ್ರೆಗಳ ಪಟ್ಟಿಯಲ್ಲಿ ಗಮನಿಸಬೇಕಾದ ಮತ್ತೊಂದು ಸುವಾಸನಾ ಸಸ್ಯವೆಂದರೆ ಲಾಮಂಚ.
9. ಲಾಮಂಚ: – ಭಾರತದಲ್ಲಿ ಬಹಳ ಕಾಲದಿಂದ ಪ್ರಸಿದ್ಧಿಯಲ್ಲಿದ್ದ ಸಸ್ಯವಿದು. ಲಾಮಚ, ಲಾಮಚ್ಚ, ಲಾಮಜ್ಜ, ಲಾಮಜ್ಜಕ,ಲಾಮಂಚ, ಲಾವಂಚ ಮುಂತಾದ ಅನೇಕ ಹೆಸರುಗಳಿಂದ ಬೇರೆ ಬೇರೆ ಪ್ರದೇಶಗಳಲ್ಲಿ ಕರೆಯಲ್ಪಡುತ್ತಿದ್ದ ಈ ಸಸ್ಯ ವ್ಯಾಪಕವಾಗಿ ಭಾರತದಲ್ಲಿ ಬೆಳೆಯುತ್ತಿತ್ತು. ಕೊಳದ ಸಮೀಪದಲ್ಲಿ ತಾನೇತಾನಾಗಿ ವಿರಾಜಿಸುತ್ತಿದ್ದ ಈ ಹುಲ್ಲಿನಂತಹ ಸಸ್ಯವನ್ನು ‘ಕೊಳವೇರ್’ ಎಂದು ತಮಿಳುನಾಡಿನಲ್ಲಿ ಕರೆಯುತ್ತಿದ್ದರು. ಸಂಸ್ಕೃತದಲ್ಲಿ ಉಣೀರ, ಅಭಯ, ನಲದ ಮತ್ತು ಲಾಮಜ್ಜಕಗಳೆಂಬ ಹೆಸರು ಈ ಸಸ್ಯಕ್ಕೆ ಇದ್ದುದಾಗಿ ಕಂಡುಬರುತ್ತದೆ. ಇದರಲ್ಲಿ ಔಷಧೀಯ ಗುಣಗಳಿರುವುದರಿಂದ ‘ಲಾತಿ ದೋಷಾನ್’ ಎಂದೂ ‘ಲಾ ಮಜ್ಜೋ ಸಾರೋ ಅಸ್ಸಾ’ ಎಂದೂ ಇದರ ಅರ್ಥವು ಹೇಳಲ್ಪಟ್ಟಿದೆ. ಇದು ಹುಲ್ಲಿನಂತೆ ಇದ್ದು, ಇದರ ಬೇರು ಸುವಾಸನಾಯುಕ್ತವಾಗಿರುತ್ತದೆ. ಈ ಹುಲ್ಲನ್ನು ಬೀಸಣಿಕೆಯಾಗಿ ಬಳಸುತ್ತಿದ್ದರು.
10. ಲವಂಗ ಪತ್ರೆ: ಇದೂ ಕೂಡ ಹುಲ್ಲಿನಂತೆಯೇ ಇರುವ ಪತ್ರೆ. ಇದನ್ನು ಲವಂಗ ಮಾಸರಿ ಹುಲ್ಲು ಎಂದೂ ಕರೆಯುತ್ತಾರೆ. ಲಾಮಂಚವೇ ಲವಂಗದ ಹುಲ್ಲೆಂದೂ ಕೆಲವರು ಹೇಳುತ್ತಾರೆ.
ಈ ರೀತಿ ನೈಸರ್ಗಿಕ ಸುವಾಸನೆಯುಳ್ಳ ಅನೇಕ ಪತ್ರೆಗಳು ನಮ್ಮ ಉತ್ಸಾಹವನ್ನು ವರ್ಧಿಸುತ್ತ ಉಪಯುಕ್ತವಾಗಿವೆ. ಸುವಾಸಿತವಲ್ಲದ ಕೆಲವು ಪತ್ರೆಗಳನ್ನೂ ಪೂಜೆಯಲ್ಲಿ ಬಳಸುವುದುಂಟು. ಗಣಪತಿ ಪೂಜೆಯಲ್ಲಂತೂ ಪತ್ರೆ ಮತ್ತು ಗರಿಕೆಯ ಪೂಜೆ ವಿಶೇಷ. ಅವನಿಗೆ 21 ಎಂಬ ಸಂಖ್ಯೆ ಬಲು ಪ್ರಿಯ. ಬೃಹತೀ, ಬಿಲ್ವ, ದತೂರ, ಬದರೀ, ಅಪಾಮಾರ್ಗ, ಚೂತ, ಕರವೀರ, ವಿಷ್ಣುಕ್ರಾಂತ, ದಾದಿಮೀ. ಸಿಂಧುವಾರ, ಜಾಜಿ, ಶಮೀ, ಅರಳಿ, ಅರ್ಕ, ಶ್ರೀಗಂಧ, ಜಂಬೀರ, ಅಮಲಕ, ನಿರ್ಗುಂಧೀ, ಭೃಂಗರಾಜ, ಜಪಾ, ಚಂಪಕ, ಜಾತೀ, ಶಮಲ ಮುಂತಾದ ಅನೇಕ ಪತ್ರೆಗಳ ಹೆಸರು ಬೇರೆ ಬೇರೆ ವ್ರತ ಪೂಜಾದಿಗಳ ಸಂದರ್ಭಗಳಲ್ಲಿ ಬರುತ್ತದೆ. ಈಶ್ವರನಿಗೆ ಬಿಲ್ವ ಪತ್ರೆ, ವಿಷ್ಣುವಿಗೆ ತುಳಸಿ, ಗಣಪತಿಗೆ ದೂರ್ವೆ, ಸೂರ್ಯನಿಗೆ ಎಕ್ಕ ಹೀಗೆ ಕೆಲವು ಪತ್ರೆಗಳು ವಿಶೇಷ ಸ್ಥಾನವನ್ನು ಪಡೆಯುತ್ತವೆ. ದೇವಿಯರ ಪೂಜೆಯಲ್ಲಿ ಸುಗಂಧ ಪತ್ರೆಗಳಿಗೇ ಪ್ರಾಧಾನ್ಯ. ಒಟ್ಟಿನಲ್ಲಿ ನೈಸರ್ಗಿಕವಾಗಿ ಬೆಳೆಯುವ ಫಲ- ಪುಷ್ಪ- ಪತ್ರೆಗಳಿಂದ ಪರಮಾತ್ಮನನ್ನು ಅರ್ಚಿಸಿ ಸುಖಿಗಳಾಗೋಣ.

ಡಾ.ಎಸ್.ಹೇಮಲತಾ

   

1 Response to ಸುಗಂಧ ಪತ್ರೆಗಳು

  1. Pushpalatha

    Hello.

    If possible please put picture of all these plants.

Leave a Reply