ಸುಸಂಸ್ಕೃತ ಜೀವನಕ್ಕೆ ಗುರುಕುಲ ಮಾದರಿ

ಲೇಖನಗಳು - 0 Comment
Issue Date :

ಶ್ರೀಮತಿ ಶಾರ್ವರಿ ಶ್ಯಾಮ ಕಾನತ್ತಿಲ – 

ಗುರುಕುಲದ ಪೂರ್ವಛಾತ್ರೆ

 1999ರ ದಿನಗಳು….. ಮೂರ್ಕಜೆಯ ಒಂದು ಹಳೆಯ ಮನೆಯ ಪರಿಸರವದು. ಅಲ್ಲಿ ಇಲ್ಲಿ ಕುಳಿತು  ತಮ್ಮ ತಂದೆ ತಾಯಿಯರನ್ನು, ಮನೆ ಮಂದಿಯನ್ನು ನೆನೆಯುತ್ತಾ ಕಣ್ಣೀರಿಡುತ್ತಿದ್ದ ಒಂದಷ್ಟು ಪುಟ್ಟ ಪುಟ್ಟ ಬಾಲಕಿಯರು, ನಾನು ಹೊತ್ತು ನನ್ನ ಮನೆಯಲ್ಲಿ ಇರುತ್ತಿದ್ದರೆ. ಎಂದು ಯೋಚಿಸುತ್ತಾ ಶಾಲೆ-ಮನೆ, ಅಪ್ಪ-ಅಮ್ಮ, ಆ ನನ್ನ ಗೆಳತಿಯರು, ಅವರೊಂದಿಗಿನ ಆಟ-ಪಾಠ,  ಅಹಾ….. ಎಂತಹ ಸುಂದರ ದಿನಗಳು. ಎಂಬಿತ್ಯಾದಿ ನೆನಪುಗಳ ಸಾಲಿನಲ್ಲಿ ಕಣ್ಣಹನಿಗಳು ಮೂಡುತ್ತಿದ್ದವು. ಆಗ ಒಬ್ಬೊಬ್ಬರನ್ನು ಸಮಾಧಾನಿಸಲು ಧಾವಿಸುತ್ತಿದ್ದ ಅಕ್ಕಂದಿರು. ನಾನು ಮತ್ತು ನನ್ನಂತಹ ಹತ್ತಾರು ಬಾಲಕಿಯರ ಗುರುಕುಲ ಜೀವನದ ಪ್ರಾರಂಭದ  ದಿನಗಳು ಹೀಗಿದ್ದವು.

ಕಾಕಸ್ನಾನಂ ಬಕಧ್ಯಾನಂ ಶ್ವಾನನಿದ್ರಾ ತಥೈವ ಚ
ಅಲ್ಪಾಹಾರೀ ಗೃಹತ್ಯಾಗೀ ಷಡೇತೆ ವಿದ್ಯಾರ್ಥಿಲಕ್ಷಣಂ ॥

ಎಂಬಂತೆ ವಿದ್ಯಾರ್ಥಿಜೀವನದ ಮಹತ್ವದ ಅರಿವು ಇಲ್ಲಿ ಮೂಡಿತು. ಆರುವರ್ಷಗಳ ಸಮರಸತೆಯ ಸಂಘಜೀವನ ಪೂರ್ಣಜೀವನಕ್ಕೆ ಭದ್ರವಾದ ಅಡಿಪಾಯವನ್ನೊದಗಿಸಿದೆ.

 ಆರು ಸಂವತ್ಸರಗಳ ಆ ಜೀವನದಿಂದ ಹೊರಬಂದ ನನಗೆ ಗುರುಕುಲ ಶಿಕ್ಷಣದ ಮೌಲ್ಯದ ಅರಿವಾಯಿತು. ಅಲ್ಲಿ ಸ್ವಾವಲಂಬಿಯಾಗಿ ಬದುಕಿ, ಇಲ್ಲಿನ ಪರಾವಲಂಬೀ ಜೀವನ ವಿಸ್ಮಯವನ್ನೇ ನೀಡಿದೆ. ಅತ್ತ, ಪರೀಕ್ಷೆಯ ಭಯವಿಲ್ಲದ ಕೃತಿರೂಪದ ಸಾಮರ್ಥ್ಯಗಳಿಕೆಯ ಗುರುಕುಲ; ಇತ್ತ ಪರೀಕ್ಷೆಗಳೇ ಕಲಿಕೆಯ ಜೀವಾಳ, ಪರೀಕ್ಷೆಯ ಫಲಿತಾಂಶವೇ ಜೀವನಸಾಫಲ್ಯವೆಂಬ ಕಲ್ಪನೆಯ ಇಂದಿನ ಸಾಮಾನ್ಯ ಶಿಕ್ಷಣರಂಗ ಇವೆರಡರ ವ್ಯತ್ಯಾಸ ತಿಳಿದುಬಂದಿದೆ. ಇಂದಿಗೆ ನಾನು ನನ್ನ ಸಹಪಾಠಿಗಳೆಲ್ಲರ ಅನುಭವದಂತೆ; ವಿದೇಶಗಮನೇ ವಿದ್ಯಾ ಪರಾ ದೇವತಾ- ಎಂಬ ಮಾತಿನಂತೆ, ಗುರುಕುಲದಲ್ಲಿ ಕಲಿತ ವಿದ್ಯೆ, ವಿವಿಧ ಭಾಷೆಗಳು, ಆಧುನಿಕ ಭಾಷಾ ಶಿಕ್ಷಣ ಪಡೆದವರನ್ನೂ ನಾಚಿಸುವಂತಿದೆ. ಸರ್ವ ರಂಗಗಳಲ್ಲೂ ಯತ್ ಕಿಂಚಿತ್ ನ್ಯೂನತೆಯೂ ಬರದಂತೆ ಸಾಗಿತ್ತು ಎಂಬುದು ಸಾಕಾರಗೊಂಡಿದೆ. ಗುರುಕುಲದಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ  ಪಾಂಡಿತ್ಯವಲ್ಲದಿದ್ದರೂ ವ್ಯವಹಾರಜ್ಞಾನ ಪಡೆದುದರ ಫಲವಾಗಿ, ಪರವೂರಿನಲ್ಲಿ ವಾಸಿಸುತ್ತಿರುವ ನನಗೆ ಸ್ಥಳೀಯರೊಂದಿಗೆ ವ್ಯವಹರಿಸಲು ಅನುಕೂಲವಾಗುತ್ತಿದೆ.

 ಇಂದು ನಾನು ಒಬ್ಬಳು ತಾಯಿಯಾಗಿ ಗುರುಕುಲ ಶಿಕ್ಷಣದ ಪ್ರೇರಣೆಯಿಂದ ನನ್ನ ಮಗನನ್ನು ಒಂದು ಸಾಂಪ್ರದಾಯಿಕ ಪದ್ಧತಿಯ ಶಾಲೆಗೆ ಕಳುಹಿಸುತ್ತಿರುವೆ.

 ಇಂದು ಗುರುಕುಲ ಬಹಳಷ್ಟು ಬೆಳೆದಿದೆ. ವಿದ್ಯಾರ್ಥಿಗಳಿಗೆ ಇನ್ನಷ್ಟು ಮತ್ತಷ್ಟು ಜ್ಞಾನವಿಸ್ತಾರಕ್ಕೆ, ವ್ಯಕ್ತಿತ್ವ ವಿಕಸನಕ್ಕೆ ಹೊಸಹೊಸ ಆಯಾಮಗಳು ಇವೆ. ಇದಕ್ಕಿಂತಲೂ ಮಿಗಿಲಾಗಿ ಕೇವಲ ಹತ್ತನೆಯ ತರಗತಿಯ ಶಿಕ್ಷಣಕ್ಕೆ ತತ್ಸಮಾನವಾಗಿದ್ದ ಶಿಕ್ಷಣ ವ್ಯವಸ್ಥೆ, ಮುಂದುವರಿದು ಪದವಿ ಮಟ್ಟದವರೆಗೆ ಬೆಳೆದಿರುವುದು ಸಂತಸದ ವಿಚಾರ. ಇಂದಿನ ಸಮಾಜಕ್ಕೆ ಇಂತಹ ಗುರುಕುಲಗಳ ಆವಶ್ಯಕತೆ ಇದೆ ಎನ್ನುವುದಕ್ಕೆ ಇದೇ ಸಾಕ್ಷಿ. ಗುರುಕುಲದಿಂದ ಹೊರಬಂದ ವಿದ್ಯಾರ್ಥಿಗಳು ತಾವು, ತಮ್ಮ ಜೀವನ ಎಂದು ತಮ್ಮ ಪಾಡಿಗೆ ತಾವಿರದೆ, ತಮ್ಮ ಮನೆ, ತಮ್ಮ ಪರಿಸರಗಳಲ್ಲೂ ಗುರುಕುಲದ ಆದರ್ಶಗಳನ್ನು ಬಿಂಬಿಸಿ, ಪುಟ್ಟ ಪುಟ್ಟ ಗುರುಕುಲಗಳನ್ನು ರೂಪಿಸುತ್ತಿರುವುದು ಸಂತೋಷದ ವಿಚಾರವಾಗಿದೆ.ಇದು ಗುರುಕುಲದ ಆಶಯವೂ ಹೌದು.

 ಅಂತೂ ಮೈತ್ರೇಯೀ ಗುರುಕುಲದಲ್ಲಿ ಒಬ್ಬ ವಿದ್ಯಾರ್ಥಿನಿಯಾಗಿ ಸೇರಿದ ನಾನು ಹಾಗೂ ನನ್ನಂತಹ ಹಲವಾರು ಬಾಲಕಿಯರಿಗೆ ಗುರುಕುಲ ಒಂದು ನಿರ್ದಿಷ್ಟವಾದ ಗುರುತನ್ನು (ಐಡೆಂಟಿಟಿ) ಜೊತೆಗೆ ಗುರಿಯನ್ನೂ ತೋರಿಸಿಕೊಟ್ಟಿದೆ.

 

   

Leave a Reply