ಸೂತಪುರಾಣಿಕರು

ಚಿಂತನ - 0 Comment
Issue Date : 08.05.2015

 ಜನಸಾಮಾನ್ಯರಿಗೂ ಸಂಸ್ಕೃತಿ ಶಿಕ್ಷಣ ನೀಡುವ ಮಾಧ್ಯಮ ಎಂದರೆ ‘ಪುರಾಣ ಪ್ರವಚನ’. ಯಜ್ಞಯಾಗ ನಡೆದಾಗ ಇಂಥ ಪ್ರವಚನಗಳು ಸಾಮಾನ್ಯವಾಗಿ ರುತ್ತಿದ್ದವು. ವೇದವೇದಾಂತಗಳು ನಿರೂಪಿಸುವ ‘ಧರ್ಮ’ವನ್ನು ಈ ಪುರಾಣಗಳು ಎಲ್ಲರಿಗೂ ಅರ್ಥವಾಗುವಂತೆ ಸರಳ ಉದಾಹರಣೆಗಳ ಮೂಲಕ ಹೇಳುತ್ತಿದ್ದುದು ಅರ್ಥಪೂರ್ಣ. ಸೂತಪುರಾಣಿಕರೆಂದೇ ಖ್ಯಾತರಾದ ಪುರಾಣ ಪ್ರವಚನಕಾರರು ಎಲ್ಲರ ಮಾನ್ಯತೆ ಗಳಿಸಿದವರು.

 ಪಂಚವಿಂಶ ಬ್ರಾಹ್ಮಣದ ಪ್ರಕಾರ ಈ ಸೂತರಾಜನೊಡನೆ ಇದ್ದ ಅಷ್ಟವೀರರಲ್ಲಿ ಒಬ್ಬ. ರಾಜನ ಹನ್ನೊಂದು ರತ್ನಗಳಲ್ಲಿ ಈತನೊಬ್ಬ. ಯಜುರ್ವೇದದ ಶತರುದ್ರೀಯ ನಿರೂಪಿಸುವಂತೆ ಸೂತನೆಂದರೆ ‘ರಾಜಕೃತ್’ (ರಾಜನನ್ನು ಆರಿಸುವವ ಎಂಬರ್ಥ ದಲ್ಲಿ) ರಾಜನ ತಮ್ಮನ ಅನಂತರದ ಸ್ಥಾನ ಈತನದು.

 ಸ್ಥಪತಿ (ಮುಖ್ಯ ರಾಜ್ಯಪಾಲ ಅಥವಾ ರಾಜ್ಯಪಾಲ)ಗೆ ಸೂತನು ಸಮಾನನು. ಗ್ರಾಮಣಿ (ಹಳ್ಳಿಯ ಮುಖ್ಯಸ್ಥ) ಗಿಂತ ಹಿರಿಯ. ಪೃಥುರಾಜನು ನಡೆಸಿದ ಅಶ್ವಮೇಧದಿಂದ ಸೂತನು ಹುಟ್ಟಿರುವನು ಎಂದು ವಾಯು ಮತ್ತು ಬ್ರಹ್ಮಾಂಡ ಪುರಾಣಗಳಲ್ಲಿ ಉಲ್ಲೇಖ ಇದೆ. ಶತರುದ್ರೀಯವು ‘ಅಹಂತ್ಯ’ ಮತ್ತು ‘ಅಹಂತ್ವ’ ಎಂಬ ಶಬ್ದಗಳನ್ನು ಸೂತನಿಗೆ ಬಳಸಿದೆ. ಇವು ಅಹನ್ಯ – ಕೊಲ್ಲ ತಕ್ಕವನಲ್ಲ ಎಂಬುದಕ್ಕೆ ಸಮಾನ ಎಂಬುದನ್ನು ಗಮನಿಸಬೇಕು. ಪುರಾಣ ಪ್ರವಚನಕಾರರಾದ ಸೂತರು ಒಂದು ರೀತಿಯಲ್ಲಿ ನೋಡಿದರೆ ಪರಂಪರೆಗಳ ಪಾಲಕರು! ನಮ್ಮ ಪ್ರಾಚೀನ ಜ್ಞಾನಪರಂಪರೆಯನ್ನು ಕಥೆ ಉಪಕಥೆಗಳ ಮೂಲಕ ಸಮೃದ್ಧಗೊಳಿಸಿದರು. ಗಾಯನದ ಮೂಲಕ ಕೆಲವು ವೇಳೆ ಸಾಭಿನಯದಿಂದ ಸಾಮಾನ್ಯರಿಗೂ ತಲುಪಿಸುವ ಬಹುದೊಡ್ಡ ಕಾರ್ಯವನ್ನು ಪರಂಪರಾಗತವಾಗಿ ಮಾಡುತ್ತಾ ಬಂದವರು ಇವರು.

 ಅನಾದಿಕಾಲದಿಂದಲೂ ಪುರಾಣಪರಂಪರೆಯು ಕಥಾಕಥನದ ಮೂಲಕವಾಗಿ ಯೇ ಹರಿದುಬಂದಿದೆ. ಕಾಲದಿಂದ ಕಾಲಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಅದನ್ನು ಹಾಡುವವನ ಶಕ್ತಿ ಯೋಗ್ಯತೆಗೆ ಅನುಗುಣವಾಗಿ ಬದಲಾಗುತ್ತಲೂ ಬಂದಿರುವ ಪರಂಪರೆ ಇದು. ನಿರೂಪಣಾ ಶೈಲಿ ಬದಲಾಗಿದೆಯೇ ಹೊರತು ಮೂಲಸಂಗತಿ ಬದಲಾಗಿಲ್ಲ  ಎಂಬುದು ಗಮನಿಸಬೇಕಾದ ಸಂಗತಿ.

 ಸಹಜವಾಗಿಯೇ ಈ ಪುರಾಣಪ್ರವಚನಕಾರರು ತಮ್ಮ ಜ್ಞಾನಸಂಪತ್ತು ಮತ್ತು ಅಲೌಕಿಕ ನಿರೂಪಣಾ ಸಾಮರ್ಥ್ಯದಿಂದ ಎಲ್ಲರ ಗೌರವಾದರಗಳಿಗೆ ಪಾತ್ರವಾಗಿದ್ದರು. ಸ್ಕಾಂದ ಪುರಾಣದ ರೇವಾಖಂಡದಲ್ಲಿ ಬರುವ ಸತ್ಯನಾರಾಯಣ ವ್ರತ ಕಥೆಯಲ್ಲಿ ಇದಕ್ಕೆ ಪೂರಕ ಮಾತುಗಳಿವೆ. ಊರಿಂದೂರಿಗೆ ಸಂಚಾರ ಮಾಡುತ್ತಾ ಇರುವ ಇವರು ಒಮ್ಮೆ ನೈಮಿಷಾರಣ್ಯಕ್ಕೆ ಬರುತ್ತಾರೆ. ಅಲ್ಲಿ ಶೌನಕಾದಿ ಮುನಿಗಳು ಪರಿಷತ್ತಿನ ರೂಪದಲ್ಲಿ ಸೇರಿರುತ್ತಾರೆ. ಸೂತಪುರಾಣಿಕರ ಬರವನ್ನು ಕಂಡ ಶೌನಕಾದಿ ಮುನಿಗಳು ಅವರನ್ನು ಬಹುಗೌರವದಿಂದ ಬರಮಾಡಿಕೊಂಡು ಸತ್ಕರಿಸುತ್ತಾರೆ. ಈ ವಿವರಗಳು ಸೂತಪುರಾಣಿಕರ ಗೌರವ ಸ್ಥಾನಮಾನವನ್ನು ಸೂಚಿಸುತ್ತವೆ.

 ಈಗಲೂ ಹರಿಕಥಾಕಾಲಕ್ಷೇಪ, ಪುರಾಣ ಪ್ರವಚನಗಳು ಈ ಪರಂಪರೆಯನ್ನೇ ನೆನಪಿಸುತ್ತವೆ. ಚಾತುರ್ಮಾಸ ವ್ರತವೆಂದು ಆಚರಿಸುವ ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ ಅವಧಿಯಲ್ಲಿ ಪುರಾಣ ಪರವಚನಗಳು ವಿಶೇಷವಾಗಿ ನಡೆಯುತ್ತವೆ. ಆಗ ಸೂತಪುರಾಣಿಕರು ಮಾಡುತ್ತಿದ್ದ ಈ ಕಾರ್ಯವನ್ನು ಈಗ ಪುರಾಣಪ್ರವಚನಕಾರರು ಮಾಡುತ್ತಿದ್ದಾರೆ.

ಒಲ್ಲನೆನದಿರು ಬಾಳನ್, ಒಲವದೇನೆನ್ನದಿರು 

 ಉಲ್ಲಾಸಕೆಡೆಮಾಡು ನಿನ್ನನದನಿತು

 ನಿಲ್ಲು ಕೆಚ್ಚೆದೆಯಿಂದಲಿ ನ್ಯಾಯಗಳನಳಿಸೆ ಎಲ್ಲಕಂ ಸಿದ್ಧನಿರು- ಮಂಕುತಿಮ್ಮ.

   

Leave a Reply