ಸೆರೆಮನೆಗಳ ದುಃಸ್ಥಿತಿ

ಚಂದ್ರಶೇಖರ ಭಂಡಾರಿ ; ಲೇಖನಗಳು - 0 Comment
Issue Date : 23.07.2016

ದಾಲ್‌ನಲ್ಲಿ ಹುಳು
ರಾಜಾಸ್ಥಾನದ ಝಂಝಂ ಸೆರೆಮನೆ ಸಾಕ್ಷಾತ್ ನರಕವೇ ಆಗಿತ್ತೆನ್ನಬಹುದು, ರೋಗಿಗಳಿಗೆ ಚಿಕೆತ್ಸೆಯ ವ್ಯವಸ್ಥೆಯೇ ಅಲ್ಲಿರಲಿಲ್ಲ. ಅನೇಕ ಸತ್ಯಾಗ್ರಹಿಗಳಿಗೆ ಕಜ್ಜಿರೋಗ ಅಂಟಿಕೊಂಡಿತ್ತು. ಅಷ್ಟಾದರೂ ಸ್ನಾನಕ್ಕಾಗಿ ಅವರಿಗೆ ಅನುಮತಿ ಇರಲಿಲ್ಲ. ಸಣ್ಣ ಸಣ್ಣ ಕೊಠಡಿಗಳಲ್ಲಿ ಮೂವತ್ತರಷ್ಟು ಸತ್ಯಾಗ್ರಹಿಗಳನ್ನು ತುಂಬಿಸಲಾಗಿತ್ತು. ಶರೀರಬಾಧೆ ತೀರಿಸಿಕೊಳ್ಳಬೇಕಾಗುತ್ತಿದ್ದುದು ಅಲ್ಲೇ. ರಾತ್ರಿ ಹೊತ್ತು ಬೆಳಕು ಕೇಳುವಂತೆಯೇ ಇರಲಿಲ್ಲ. ಊಟಕ್ಕಾಗಿ ನೀಡಲಾಗುತ್ತಿದ್ದ ರೋಟಿಯಲ್ಲಿ ಕಲ್ಲು ಇದ್ದಲ್ಲಿ, ದಾಲ್‌ನಲ್ಲಿ ಹುಳಗಳು ತೇಲುತ್ತಿದ್ದುದು ಮಾಮೂಲಿ.

ಅವರು ಬದುಕಿದ್ದುದು ಹೇಗೆ?
ಗ್ವಾಲಿಯರ್‌ನ ಕೇಂದ್ರಿಯ ಕಾರಾಗೃಹಕ್ಕೆ ಸಂದರ್ಶಕರಾಗಿ ಹೋಗಿದ್ದವರು ಅಂದಿನ ಮಧ್ಯಭಾರತದ ಸಂಸದ ಶ್ರೀ ಆನಂದಬಿಹಾರಿ ಮಿಶ್ರ ಅವರು. ತಮ್ಮ ವರದಿಯಲ್ಲಿ ಅವರು ಬರೆದಿದ್ದದು ಹೀಗೆ: ‘‘ನಾನು ಸತ್ಯಾಗ್ರಹಿಗಳ ಬ್ಯಾರಕ್ ಪ್ರವೇಶಿಸಿದಾಗ ನನಗನಿಸಿದುದು, ಪ್ರತ್ಯಕ್ಷ ರೌರವ ನರಕವನ್ನೇ ನಾನು ಕಾಣುತ್ತಿದ್ದೆನೇನೋ ಎಂದು. ಪ್ರತಿಯೊಂದು ಬ್ಯಾರಕ್‌ನಲ್ಲೂ ಶೌಚಾಲಯದ ದುರ್ಗಂಧ ತುಂಬಿಕೊಂಡಿತ್ತು. ಕೋಣೆ ತುಂಬ ಸೊಳ್ಳೆೆಗಳು ಗುಂಯ್‌ಗುಡುತ್ತಿದ್ದವು. ಇಲ್ಲಿರುವ ಕೈದಿಗಳು ಇನ್ನೂ ಜೀವಿತರಾಗಿದ್ದಾರೆ ಎಂಬುದೇ ನನಗೆ ಅಚ್ಚರಿ ನೀಡಿದ ಸಂಗತಿ. ಹಗಲು ಹೊತ್ತಿನಲ್ಲಿ ಬ್ಯಾರಕ್‌ಗಳಿಗೆ ಬೀಗ ತಗಲಿಸಲಾಗಿತ್ತು…….ನಾನು ಪ್ರಶ್ನಿಸಿದ ಮೇಲೆೆ ಜೈಲು ಅಧಿಕಾರಿಗಳೂ ಒಪ್ಪಿಕೊಂಡಿದ್ದೇನೆಂದರೆ, ಹಗಲಿನಲ್ಲಿ ಮಧ್ಯಾಹ್ನ ಎರಡು ಘಂಟೆಗೊಮ್ಮೆ ಮೊದಲ ಬಾರಿ ಬೀಗ ತೆಗೆದು ಕೈದಿಗಳಿಗೆ ಶೌಚಾಲಯಕ್ಕೆ ಹೋಗಲು ಹಾಗೂ ಮುಖ, ಕೈಕಾಲು ತೊಳೆಯಲು ಅವಕಾಶ ಕೊಡಲಾಗುತ್ತಿದೆ. ಅಲ್ಲಿ ಕುಡಿಯುವ ನೀರು ಸಹ ಬೇಕೆನಿಸುವಷ್ಟಿಲ್ಲ, ಇದ್ದುದೂ ಮಲಿನ. ನಾವು ಹೋದ ಮೇಲಷ್ಟೇ ಅವರಿಗೆ ಮಧ್ಯಾಹ್ನದ ಊಟ ನೀಡಲಾಯಿತು. ಅದರಲ್ಲಿ ಕೊಡಲಾಗಿದ್ದ 4-4 ರೋಟಿಗಳು ಅರೆಬೆಂದಂತಹವು ಮತ್ತು ಹಳಸಿದ್ದವು. ನಾನು ಸ್ವತಃ ತಿಂದು ನೋಡಿದ್ದೇನೆ. ಅಷ್ಟೇ ಅಲ್ಲ, ನನ್ನ ಜತೆ ಬಂದಿದ್ದ ಸೆರೆಮನೆ ಮಹಾನಿರೀಕ್ಷಕರಿಗೂ ಅದನ್ನು ತಿನಿಸಿದ್ದೇನೆ. ಅದರಲ್ಲಿ ಮರಳು ಸೇರಿತ್ತು. ದಾಲ್ ಅಮೇದ್ಯಕ್ಕಿಂತ ಕೆಟ್ಟದಾಗಿ ಕಾಣಿಸುತ್ತಿತ್ತು. ಅನ್ನವಿದ್ದುದು ಕಲ್ಲುಮಿಶ್ರಿತ ಕಪ್ಪು ಬಣ್ಣದ್ದು. ಇಷ್ಟು ಕೆಟ್ಟ ಆಹಾರ ನಾನು ಎಲ್ಲೂ ಕಂಡಿಲ್ಲ.’’
‘‘ಕಾಯಿಲೆಗೊಂಡವರಿಗೆ ಔಷಧಿ ಇಲ್ಲ: ಕೇಳುವವರೂ ಇಲ್ಲ. ಎರಡನೇ ಮಹಡಿಯಲ್ಲಿ ಒಬ್ಬ ರೋಗಿ ಅತಿ ಶೋಚನೀಯ ಸ್ಥಿತಿಯಲ್ಲಿ ಬಿದ್ದಿರುವುದನ್ನು ನಾನು ಕಂಡೆ. ಅವನ ಜತೆಗಾರರೆಲ್ಲರೂ ಬೀಗ ಜಡಿಯಲಾಗಿದ್ದ ಕೊಠಡಿಯೊಳಗಿದ್ದರು. ಆ ಒಂಟಿ ಬಡಪಾಯಿ ಬಾಗಿಲ ಬಳಿ ಹಸಿವು, ನೀರಡಿಕೆಯಿಂದ ಪೀಡಿತನಾಗಿ, ಔಷಧಿ ಇಲ್ಲದೆ, ಕೇವಲ ಭಗವಂತನ ಕೃಪೆಯಿಂದ ಮಾತ್ರ ಇನ್ನೂ ಉಸಿರಾಡಿಕೊಂಡಿದ್ದ…. ಅಲ್ಲಿಂದ ಹೊರಟು ಬರುವಾಗ ಸೆರೆಮನೆಯಲ್ಲಿದ್ದ ಇತರ ಕೈದಿಗಳ ಭೋಜನದ ನಿರೀಕ್ಷಣೆಯನ್ನು ಮಾಡಿಬಂದೆ. ಇವೆರಡರಲ್ಲೂ ಭೂಮ್ಯಾಕಾಶದಷ್ಟು ಅಂತರವಿರುವುದು ನಮಗೆ ಗೋಚರಿಸಿತು…ಇದರಿಂದ ನಾನು ನಿಷ್ಕರ್ಷಿಸಿರುವ ಸ್ಪಷ್ಟ ಅಭಿಪ್ರಾಯವೆಂದರೆ ಸಂಘದ ಕೈದಿಗಳಿಗೆ ಯಾತನೆ ನೀಡಬೇಕೆನ್ನುವ ದುರುದ್ದೇಶದಿಂದಲೇ ಅತಿ ಯೋಜನಾಪೂರ್ವಕವಾಗಿ ಇದೆಲ್ಲವನ್ನು ಮಾಡಲಾಗಿದೆ.’’

ನಾಲ್ವರಿಗೆ ಒಂದು ರಜಾಯೀ
ಆ ದಿನಗಳಲ್ಲಿ ಪಂಜಾಬ ಪ್ರಾಂತ ಕಾರ್ಯವಾಹರಾಗಿದ್ದ ಶ್ರೀ ಧರ್ಮವೀರ ಅವರು ಅಲ್ಲಿನ ಸೆರೆಮನೆಗಳ ಬಗ್ಗೆ ನೀಡಿರುವ ವರದಿಯಲ್ಲಿ ಹೇಳಿರುವ ಮಾಹಿತಿ: ‘‘ಬೋಸ್ಟಲ್ ಸರೆಮನೆಯಲ್ಲಿ ಅವಕಾಶವಿರುವುದು 600 ಕೈದಿಗಳಿಗೆ ಆದರೆ ಅಲ್ಲಿ ತುಂಬಿಸಲಾಗಿದ್ದುದು 1350 ಸತ್ಯಾಗ್ರಹಿಗಳನ್ನು. ಅತ್ಯಂತ ಕೊರತೆಯಾಗಿದ್ದುದು ನೀರಿಗೆ. ಕೆಲವೊಮ್ಮೆ ಕೈದಿಗಳಿಗೆ 20-20 ಘಂಟೆಗಳ ಕಾಲ ಕುಡಿಯಲು ಒಂದು ಹನಿ ನೀರು ಸಹ ಸಿಗುತ್ತಿರಲಿಲ್ಲ. ಮೈ ಕೊರೆಯುವ ಚಳಿಯಲ್ಲೂ ಸುಮಾರು ಎರಡು ತಿಂಗಳ ತನಕ 4-4, 5-5 ಸತ್ಯಾಗ್ರಹಿಗಳು ಹೊದ್ದುಕೊಳ್ಳಲು ಒಂದು ರಜಾಯಿ ಹಂಚಿಕೊಳ್ಳಬೇಕಾಗುತ್ತಿತ್ತು. ಎಲ್ಲರೂ ಅದರೊಳಗೆ ತೂರಿಕೊಂಡು ಕಷ್ಟಪಟ್ಟು ಮಲಗಬೇಕಾಗಿ ಬರುತ್ತಿತ್ತು. ಅಷ್ಟು ಕೈದಿಗಳಿಗಾಗಿ ಇದ್ದ ಶೌಚಾಲಯಗಳು ಒಟ್ಟು ಇಪ್ಪತ್ತನಾಲ್ಕು, ಎಂದರೆ ಸುಮಾರು ಅರವತ್ತು ಮಂದಿಗೆ ಒಂದರಂತೆ. ಹೀಗಾಗಿ ಪ್ರಾತಃಕಾಲ ಐದರಿಂದ ಆರಂಭಿಸಿ ಮಧ್ಯಾಹ್ನ ಹನ್ನೊಂದರವರೆಗೆ ಅದರ ಮುಂದೆ ಸಾಲುಗಟ್ಟಿ ನಿಲ್ಲಬೇಕಾದ ಅನಿವಾರ್ಯತೆ. ಈ ಶೌಚಾಲಯಗಳೂ ಇರುತ್ತ್ತಿದ್ದುದು ಅತಿ ಕೊಳಕಾಗಿ. ಸಾಕಷ್ಟು ನೀರಿರದ ಕಾರಣ ಮಲ ತುಂಬಿಕೊಂಡೇ ಇರುತ್ತಿದ್ದವು ಅವು. ಈ ಅಸ್ವಚ್ಛತೆಯಿಂದಾಗಿ ಕಾಯಿಲೆ ಹೆಚ್ಚುತ್ತಿದ್ದುದು ಸಹಜ. ಇನ್ನು ಕಾಯಿಲೆ ಯಾವುದೇ ಇರಲಿ, ಎಲ್ಲದಕ್ಕೂ ಒಂದು ರಾಮಬಾಣದಂತಹ ಔಷಧಿ ‘ಮಿಕ್ಸಚರ್ ನಂ..28’ – ದಿನಗಳೆದಂತೆ ಹೆಚ್ಚೆಚ್ಚು ನೀರು ಸೇರಿಸಿ ಕೊಡಲಾಗುತ್ತಿದ್ದುದು ಅದನ್ನೇ. ಭೋಜನ ಕಳಪೆ ಎಂಬುದಂತೂ ಬೇರೆ ಮಾತು. ಅದು ಒಂದೇ ನಿಗದಿತ ಸಮಯದಲ್ಲಿ ಎಂದೂ ಸಿಗುತ್ತಿರಲಿಲ್ಲ. ಮಧ್ಯಾಹ್ನ ಮೂರರಿಂದ ನಾಲ್ಕರ ಒಳಗೆ ಸಿಕ್ಕಲ್ಲಿ ಅದೇ ಪುಣ್ಯ. ರಾತ್ರಿಯದಂತೂ ಮಧ್ಯರಾತ್ರಿ ಎರಡು ಘಂಟೆಯವರೆಗೆ ಕಾಯಬೇಕಾಗುತ್ತಿದ್ದುದು ಮಾಮೂಲಿ.’’
‘‘ಜಾಲಂಧರ್‌ನಲ್ಲಿ ಸತ್ಯಾಗ್ರಹಿಗಳಿಂದ ಹುಲ್ಲು ಕಾಳು ಪ್ರತ್ಯೇಕಿಸುವ ಕೆಲಸ ಮಾಡಿಸಲಾಗುತ್ತಿತ್ತು. ಧರ್ಮಶಾಲಾ ಸೆರೆಮನೆಯಲ್ಲಿ ಕಾಳು ಬೀಸಿ ಹಿಟ್ಟು ಮಾಡುವ ಕೆಲಸ ಕೊಟ್ಟಲ್ಲಿ, ಭಟಿಂಡಾದಲ್ಲಿ ಮೆಣಸು ಪುಡಿ ಮಾಡುವ ಅಥವ ಮಣ್ಣು ಅಗೆಯುವ ಕೆಲಸ ಕೊಡಲಾಗುತ್ತಿತ್ತು. ಹಿಸ್ಸಾರ್ ಸೆರೆಮನೆಯಲ್ಲಿ ಇಂತಹ ಕೆಲಸ ಮಾಡಲು ಸತ್ಯಾಗ್ರಹಿಗಳು ಒಪ್ಪದಿದ್ದಾಗ ಅವರಿಗೆ ಬೇಡಿಗಳನ್ನು ತೊಡಿಸಲಾಗಿತ್ತು. ಭಟಿಂಡಾದಲ್ಲಿ ಒಮ್ಮೆ ಬೂಟುಕಾಲಿನಿಂದ ಒದೆಯಲಾಗಿತ್ತು. ಇದೇ ಕಾರಣಕ್ಕಾಗಿ ಪಟಿಯಾಲ ಸೆರೆಮನೆಯಲ್ಲಿ ಬಾಲಕರಿಗೆ ದಂಡಗಳಿಂದ ಹೊಡೆಯಲಾಗಿತ್ತು. ಅಷ್ಟೇ ಅಲ್ಲ, ಕೆಲವು ಕಿಶೋರರಿಗೆ ಅವರ ಕಾಲುಗಳ ನಡುವೆ ಡಬ್ಬಗಳನ್ನಿರಿಸಿ ಅವರು ಮೊಣಕಾಲುಗಳನ್ನು ಅಲ್ಲಾಡಿಸದಂತೆ ಮಾಡಿ ಹೊಡೆಯಲಾಗುತ್ತಿತ್ತು.’’

ಪಾರಿವಾಳದ ಗೂಡಿನಂತೆ
ಇನ್ನೋರ್ವ ನಿಷ್ಪಕ್ಷ ಸಂದರ್ಶಕ ಠಾಕುರದಾಸ ಭಾರ್ಗವ ಅವರು ಹಿಸ್ಸಾರನ ಬೋಸ್ಟಲ್‌ಜೈಲ್‌ನ ಸಂದರ್ಶನದ ನಂತರ ನೀಡಿದ ವರದಿಯಲ್ಲಿ ಹೇಳಿದುದು : ‘‘ಈ ಸೆರೆಮನೆ ಜಾನುವಾರು ದೊಡ್ಡಿಗಿಂತಲೂ ನಾಲಾಯಕು. ಇದೊಂದು ಪಾರಿವಾಳದ ಗೂಡಿನಂತಿದೆ. ಇಲ್ಲಿನ ಕೈದಿಗಳನ್ನು ಹಿಸ್ಸಾರ್‌ನ ಗೋ ಶಾಲೆಯಲ್ಲಿರಿಸಿದ್ದರೂ ಅದೆಷ್ಟೋ ವಾಸಿ ಎನ್ನಲು ಏನೂ ಅಡ್ಡಿಯಿಲ್ಲ.’’ (‘ದೈನಿಕ ವೀರ ಭಾರತ’)

ನರಕ ಸದೃಶ ಹಿಸ್ಸಾರ ಸೆರೆಮನೆ
ಜಾಲಂಧರನ ದೈನಿಕ ಮಿಲಾಪ ಪತ್ರಿಕೆಯು ‘ಹಿಸ್ಸಾರ್ ಜೇಲ್ ಕರ್ಬಲಾ ಬನಗಯಾ’ ಎಂಬ ಶೀರ್ಷಿಕೆಯಡಿ ಒಂದು ಲೇಖನದ ಮೂಲಕ ಅಲ್ಲಿನ ಕೈದಿಗಳು ಅನುಭವಿಸುತ್ತಿದ್ದ ಕಷ್ಟಗಳು ಕಣ್ಣಿಗೆ ಕಟ್ಟುವಂತಹ ಕತೆ ಪ್ರಕಟಿಸಿತ್ತು. ಅದರ ಬಗ್ಗೆ ಇನ್ನೊಂದು ಪತ್ರಿಕೆ ದೈನಿಕ ‘ಪ್ರತಾಪ’ ತನ್ನ 16 ಏಪ್ರಿಲ್ 1949ರ ಸಂಚಿಕೆಯಲ್ಲಿ ಹೇಳಿದುದು ಇಲ್ಲಿದೆ. ‘‘ಹಿಸ್ಸಾರ್ ಸೆರೆಮನೆಯ ಅವಸ್ಥೆ ನೋಡುವಂತಿದೆ. ನೀರಿಗೆ ಭಾರೀ ಅಭಾವ. ಒಂದು ದಿನವಂತೂ ಎಲ್ಲರಿಗೂ ಸಿಕ್ಕಿದ್ದುದು ಒಂದು ಲೋಟದಷ್ಟು ಮಾತ್ರ ನೀರು. ತಮ್ಮೆಲ್ಲ ಅಗತ್ಯಗಳನ್ನೂ ಅಷ್ಟರಲ್ಲೇ ಎಲ್ಲಾ ಕೈದಿಗಳು ಪೂರೈಸಿಕೊಳ್ಳಬೇಕಾಗಿದ್ದ ಅನಿವಾರ್ಯತೆ ಅಂದು. ಒಮ್ಮೆಯಂತೂ ಮೂರು ದಿನಗಳ ಕಾಲ ಕೈದಿಗಳಿಗೆ ಸ್ನಾನದ ಭಾಗ್ಯವೇ ಸಿಗಲಿಲ್ಲ. … ಅಲ್ಲಿ ಸೇರಿಸಲಾಗಿದ್ದ ಸತ್ಯಾಗ್ರಹಿಗಳ ಸಂಖ್ಯೆ ಹೆಚ್ಚಿದ್ದುದರಿಂದಾಗಿ ಅವರ ವಸತಿಗಾಗಿ ಬಟ್ಟೆಯ ಡೇರೆಗಳನ್ನು ಹಾಕಲಾಗಿದೆ. ಅವುಗಳಲ್ಲಿ ಬಿಸಿಲಿನಿಂದ ರಕ್ಷಣೆ ಸಾಧ್ಯವೇ ಇಲ್ಲ. ಗಾಳಿ ಬೀಸಿದಲ್ಲಿ ಅವು ಹಾರಿಯೇ ಹೋಗುತ್ತವೆ. ಹೀಗಾಗಿ ಮಧ್ಯಾಹ್ನದ ಬಿಸಿಲಿನಲ್ಲಿ ಕೈದಿಗಳು ಸುಡಲ್ಪಡುತ್ತಿದ್ದಾರೆ. ಸೆರೆಮನೆಯೊಳಗೆ ಸರ್ಪಗಳು ಹರಿದಾಡುತ್ತಿವೆ. ಪ್ರತಿದಿನವೆಂಬಂತೆ ಒಂದೆರಡಾದರೂ ಕಾಣಿಸುತ್ತವೆ. ಬೆಳಕು ಹೆಸರಿಗಷ್ಟೇ ಇದೆ.’’

ಐವತ್ತರಲ್ಲಿ ನೂರೈವತ್ತು
ಬಿಹಾರ ಪ್ರಾಂತದ ಮುಂಗೇರನ ನಿವಾಸಿ ಶ್ರೀ ಸಾಧನಚಂದ್ರ ಸೆನ್ ಅವರು ಸ್ವಾನುಭವದಿಂದ ಹೇಳಿದುದು : ‘‘ಸೆರೆಮನೆಯಲ್ಲಿ ನಮ್ಮನ್ನು ವಾರ್ಡ್
ಕ್ರ.9ರಲ್ಲಿ ಇರಿಸಲಾಗಿತ್ತು. ಅದರಲ್ಲಿ ಇರಬಹುದಾದವರು ಕೇವಲ 50 ಮಾತ್ರ. ಆದರೆ ನಾವಿದ್ದವರು ನೂರೈವತ್ತು. ಆ ಕೊಠಡಿಯಲ್ಲಿ ನಾವೆಲ್ಲರೂ ಆರಾಮವಾಗಿರುವುದಂತೂ ಸಾಧ್ಯವೇ ಇರಲಿಲ್ಲ. ರಾತ್ರಿಹೊತ್ತು ಕೂತಲ್ಲೇ ನಿದ್ದೆ ಮಾಡುವುದನ್ನು ನಾವು ರೂಢಿಸಿಕೊಂಡಿದ್ದೆವು.’’ ’

   

Leave a Reply