ಸೋಮಾರಿತನ ತರುವ ಸಂಕಟ

ಆರೋಗ್ಯ ; ಲೇಖನಗಳು - 0 Comment
Issue Date : 14.5.2016

ಕೆಲವರಿಗೆ ಆರೋಗ್ಯದ ವಿಷಯದಲ್ಲಿ ಇರುವ ಭಾವವನ್ನು ನಿರ್ಲಕ್ಷ್ಯ ಎಂದರೆ ಸರಿಯೋ ಅಥವಾ ಅದನ್ನು ಸೋಮಾರಿತನ ಎನ್ನಬೇಕೋ ಎಂಬುದೇ ತಿಳಿಯುವುದಿಲ್ಲ. ಸಾಕಷ್ಟು ಅನುಕೂಲವಿದ್ದರೂ ಬೇಕಾಗಿದ್ದನ್ನು ತಿನ್ನುವುದಕ್ಕೂ ಕೆಲವರಿಗೆ ಸೋಮಾರಿತನ. ಅದರಲ್ಲೂ ತಂದೆ-ತಾಯಿ
ಗಳಿಂದ ದೂರವಿದ್ದು, ಪಿಜಿಯಲ್ಲೋ, ಬಾಡಿಗೆ ಮನೆಯಲ್ಲೋ ವಾಸಿಸುವವರಿಗಂತೂ ಅಡುಗೆ ಮಾಡುವುದೆಂದರೆ ಎಲ್ಲಿಲ್ಲದ ಅಲರ್ಜಿ. ಅಂಥವರೆಲ್ಲ ದುಡ್ಡುಕೊಟ್ಟರೆ ಸುಲಭವಾಗಿ ಸಿಗುವ ಬಗೆ ಬಗೆಯ ತಿಂಡಿಗಳ ಮೊರೆ ಹೋಗುತ್ತಾರೆ. ಎಷ್ಟೇ ಒಳ್ಳೆಯ ಹೊಟೇಲ್ ಆದರೂ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ದಿನದ ಒಂದು ಗಂಟೆಯನ್ನು ಅಡುಗೆ ಮನೆಯಲ್ಲಿ ಕಳೆಯಲಾರದ ಸೋಮಾರಿತನದಿಂದ ದೇಹಕ್ಕಂಟುವ ಕಾಯಿಲೆಗಳು ಅಷ್ಟಿಷ್ಟಲ್ಲ.
ನಮ್ಮ ದೇಹವನ್ನು ನಾವು ಹೇಗೆ ಸಾಕಿಟ್ಟುಕೊಳ್ಳುತ್ತೇವೆಯೋ ಹಾಗೆಯೇ ಅದು ನಮ್ಮ ಆರೋಗ್ಯವನ್ನು ನೋಡಿಕೊಳ್ಳುತ್ತದೆ. ದೇಹದ ಸ್ವಾಸ್ಥ್ಯಕ್ಕೆ ಅಗತ್ಯವಾದ ಆಹಾರವನ್ನು ನಾವು ಸೇವಿಸುತ್ತಿದ್ದರೆ ದೇಹದ ಎಲ್ಲಾ ಅವಯವಗಳೂ ಆರೋಗ್ಯವಂತವಾಗಿದ್ದು ಮನುಷ್ಯ ಮಾನಸಿಕವಾಗಿಯೂ ನೆಮ್ಮದಿಯಿಂದಿರುವಂತೆ ಮಾಡುತ್ತದೆ. ನಾವು ಸೇವಿಸುವ ಆಹಾರವೇ ಉತ್ತಮವಾಗಿಲ್ಲದಿದ್ದರೆ ಕ್ರಮೇಣ ದೇಹ ಸೂಕ್ಷ್ಮವಾಗುವುದಕ್ಕೆ ತೊಡಗುತ್ತದೆ. ಸಣ್ಣ ಪುಟ್ಟ ಅಲರ್ಜಿಯನ್ನೂ ನಮ್ಮ ಬಳಿ ಸಹಿಸಿಕೊಳ್ಳಲಾಗದ ಮಟ್ಟಿಗೆ ದುರ್ಬಲರಾಗಬೇಕಾಗುತ್ತದೆ.
ದೋಸೆ, ಇಡ್ಲಿ, ಅವಲಕ್ಕಿ, ಚಪಾತಿ, ಅನ್ನ ಇವನ್ನೆಲ್ಲ ಮಾಡಿಕೊಳ್ಳುವುದು ಕಷ್ಟದ ಕೆಲಸವೇ ಅಲ್ಲ. ದಿನದ ಒಂದೇ ಒಂದು ಗಂಟೆಯನ್ನು ಅಡುಗೆ ಮನೆಗೆಂದು ಮೀಸಲಿಟ್ಟರೆ ಸಾಕು. ತರಕಾರಿ, ಹಣ್ಣುಗಳನ್ನು ಕತ್ತರಿಸಿಕೊಂಡು ತಿನ್ನುವುದಕ್ಕೂ ಸೋಮಾರಿತನವಾದರೆ ಅದನ್ನು ಹಾಗೆಯೇ ತೊಳೆದು ತಿಂದುಬಿಡಿ. ದೂರದ ಹೊಟೇಲ್‌ಗಳಿಗೆ ಟ್ರಾಫಿಕ್‌ನಲ್ಲೂ ಧೂಳು ತಿನ್ನುತ್ತ ಗಾಡಿ ಓಡಿಸುವುದಕ್ಕೆ ಇರುವ ಸಹನೆಯನ್ನು ಮನೆಯಲ್ಲಿ ಅರ್ಧ ಗಂಟೆ ಅಡುಗೆ ಮಾಡುವಲ್ಲಿ ತೋರಿಸುವುದಕ್ಕಾಗುವುದಿಲ್ಲವೇ?
ಪ್ರತಿದಿನವೂ ಎಣ್ಣೆ ಜಿಡ್ಡಿನ ಪದಾರ್ಥ ತಿನ್ನುವುದರಿಂದ ನಮ್ಮ ಆಯಸ್ಸಿನ ಒಂದೊಂದು ವರ್ಷವೂ ಕಡಿಮೆಯಾಗುತ್ತ ಬರುತ್ತದೆ. ಮಸಾಲೆ ಪದಾರ್ಥಗಳ ಕಾಣಿಕೆಯೂ ಇದರಲ್ಲಿ ಇಲ್ಲದಿಲ್ಲ. ನಾಲಿಗೆಯ ಚಪಲವನ್ನು ನಿಯಂತ್ರಿಸುವುದು ಕಷ್ಟವೆಂಬುದು ನಿಜ. ತಿಂಗಳಿಗೊಮ್ಮೆಯೋ, ಎರಡು ತಿಂಗಳಿಗೊಮ್ಮೆಯೋ ಹೊರಗೆ ತಿನ್ನುವುದರಿಂದ ಸಮಸ್ಯೆಯೇನಿಲ್ಲ. ಆದರೆ ಪ್ರತಿ ದಿನವೂ ಹೊರಗಿನ ತಿಂಡಿ ಸೇವಿಸುವುದು ಖಂಡಿತ ಒಳ್ಳೆಯದಲ್ಲ. ಪ್ರತಿ ದಿನವೂ ಅಂಥ ಆಹಾರ ಸೇವನೆಯಿಂದ ಮನುಷ್ಯನ ಯಕೃತ್ತು ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತದೆ. ಹಾಗಾದಲ್ಲಿ ಮನುಷ್ಯ ಅರ್ಧ ಸತ್ತಂತೆಯೇ. ಏಕೆಂದರೆ ನಾವು ತಿನ್ನುವ ಪ್ರತಿಯೊಂದು ಆಹಾರವೂ ಯಕೃತ್ತಿನ ಮೂಲಕವೇ ಹಂಚಿಕೆಯಾಗುತ್ತದೆ. ಯಕೃತ್ತು ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಹಾಗೆ ನೋಡಿಕೊಳ್ಳಬೇಕಾದರೆ ನಾವು ತಿನ್ನುವ ಆಹಾರದ ಬಗ್ಗೆ ಕಾಳಜಿ ಅಗತ್ಯ. ಆಹಾರ ಸೇವನೆಯೂ ಒಂದು ಯಜ್ಞವಾದರೆ ಮಾತ್ರ ಅದು ಸಾಧ್ಯ.

   

Leave a Reply