ಸ್ವಂತ ಸಂಕಟ ಮರೆತ, ಸರ್ವರ ಸುಖ ಬೇಡಿದ

ಕಥೆಗಳು - 0 Comment
Issue Date : 16.02.2016

ಕತ್ತಲಮೊತ್ತ ಹೆಚ್ಚಾಗುತ್ತಲೇ ಇತ್ತು. ಅಮಾವಾಸ್ಯೆಯ ಸನಿಹದ ದಿನಗಳು ಬೇರೆ, ಕಾರ್ತೀಕ ಮಾಸ; ಹಾಗಾಗಿ ಕತ್ತಲಾಗುವುದು ಬಹುಬೇಗ. ತೀರ ಪರಿಚಯವಿರದ ಕಾಡುದಾರಿ ಅದು. ಮೂವರು ಹುಡುಗರು ಮಾತ್ರ. ಕೊನೆಯವ ದುರ್ಬಲ ದೇಹದವ. ಬೇಗ ನಡೆಯಲಾಗದೆ ಬಸವಳಿಯುತ್ತಿದ್ದ. ಬೆನ್ನಮೇಲೆ ಭಾರದ ಗಂಟು ಬೇರೆ.
‘‘ಮಾತಿನಿಂದಲೇ ಮರಳು ಮಾಡುತ್ತೀಯಲ್ಲ. ನಿನ್ನಿಂದ ಅಷ್ಟೇ ಆಗುವುದು. ಬುದ್ಧಿ ಬಲವೇ ಬಲವಲ್ಲ ತಿಳಿಯಿತೇ? ಅದಕ್ಕೆ ತಕ್ಕಂತೆ ಮೈಯಲ್ಲಿ ಕಸುವೂ ಇರಬೇಕು…ಬಾ ಬೇಗ ಬೇಗ.. ಕತ್ತಲಾಗುತ್ತದೆ’’. ಅಣ್ಣಂದಿರಿಬ್ಬರೂ ಹಂಗಿಸುತ್ತಲೇ ಅವಸರಿಸಿದರು.
‘‘ನಿಮಗಿಂತ ಸಣ್ಣವ, ಶಕ್ತಿಯೂ ಕಡಿಮೆ. ಇಷ್ಟೆಲ್ಲವೂ ಹೊರಲಾಗದು.. ಸ್ವಲ್ಪ ನೆರವೀಯಬಾರದೇ?’’ ಅಂಗಲಾಚಿದ ಕಿರಿಯ.
ಭಾರದ ವಸ್ತುಗಳನ್ನೆಲ್ಲಾ ತಮ್ಮನಿಗೆ ಹೊರಿಸಿ ಸೇಡು ತೀರಿಸಿಕೊಳ್ಳುವಂತೆ ಹೊರಿಸಿದ್ದ ಅಣ್ಣಂದಿರ ಕುಟಿಲತನದ ಅರಿವೂ ಆತನಿಗಿತ್ತು.
ಮೂವರೂ ವೇದವಿದರೇ. ಆದರೆ ಕಿರಿಯವನ ಪಾಂಡಿತ್ಯ ಮಿಗಿಲು. ಅರಳುಹುರಿದಂತೆ ತರ್ಕಬದ್ಧ ಪಟಪಟ ಮಾತನಾಡುವ ಆತನದು ತರ್ಕಬದ್ಧ ವಾದಸರಣಿ. ಸ್ಪಷ್ಟ ಉಚ್ಚಾರ, ಮನಮೋಹಕ ದನಿ ಇದರೊಡನೆ ಸಾಧನೆಯ ಬಲ. ಯಾವ ಸಭೆ ಗೋಷ್ಠಿಯಲ್ಲೂ ಈತನೇ ಎಲ್ಲರ ಕಣ್ಮಣಿ. ಹಾಗೆಂದೇ ಅಣ್ಣಂದಿರಲ್ಲಿ ಅಸೂಯೆ! ಅಹಂಕಾರದ ಮೊಟ್ಟೆಗಳು ಅವರು.
ದಟ್ಟಕಾಡು. ಅಂದಾಜಿನಲ್ಲಿ ನಡೆಯುತ್ತಿದ್ದರು. ಈ ತಮ್ಮ ತುಂಬಾ ಹಿಂದುಳಿದಿದ್ದ. ನಿಂತು ಕೂಗಿದರು. ಓಗೊಟ್ಟ ದನಿ ದೂರದಲ್ಲಿತ್ತು. ಸ್ವಲ್ಪ ಹೊತ್ತಿನಲ್ಲಿ ಕಾಲೆಳೆಯುತ್ತಾ ಬಂದ ಅವನಿಂದ ಒಂದೆರಡು ಗಂಟು ತೆಗೆದುಕೊಂಡ ಮೊದಲನೆಯವ. ಮತ್ತೆರಡು ಹೆಜ್ಜೆ ಹಾಕುವಾಗಲೇ ಅನಾಹುತ ನಡೆದುಬಿಟ್ಟಿತ್ತು. ನಡುವಿನವ ಒಂದು ಗಂಟು ತೆಗೆದುಕೊಳ್ಳುವಾಗ ಇದ್ದಕ್ಕಿದ್ದಂತೆ ಜಾರಿದ ಕೊನೆಯವ. ಅವನ ಕೈಯಲ್ಲಿದ್ದ ಗಂಟೂ ಕೆಳಗೆ ಬಿತ್ತು. ಎಲ್ಲದರ ಕೂಡಾ ಆತ ಬಿದ್ದಿದ್ದು ಒಂದು ದೊಡ್ಡ ಹೊಂಡಕ್ಕೆ! ಜಾರುತ್ತಲೇ ಆಸರೆಗಾಗಿ ಕೈಚಾಚಿದ. ಕತ್ತಲು, ಏನೂ ಕಾಣದು. ಆದರೂ ಯಾವುದೋ ಬಳ್ಳಿ ಹಿಡಿದ. ಕಲ್ಲು ಮಣ್ಣು ಉದುರಿದ ಸದ್ದು. ತುಂಬಾ ಆಳದ ಹಳೆಯ ಬಾವಿ ಇದ್ದಿರಬಹುದು ಎನಿಸಿತವನಿಗೆ. ಸದ್ಯ ನೀರಿರಲಿಲ್ಲ ಹಾಗಾಗಿ ಬದುಕಿದ್ದ! ಬಳ್ಳಿ ಹಿಡಿದು ತೂಗಾಡುತ್ತಾ ಕುಸಿದು ಬಿದ್ದ, ಗಿಡಗಂಟೆಗಳ ನಡುವೆ ಸಿಕ್ಕಿಬಿದ್ದಿದ್ದ. ಅಣ್ಣಂದಿರನ್ನು ಕೂಗಿ ಕರೆದ.
ಅವರೋ ಕೇಳಿದರೂ ಕೇಳದವರಂತೆ ನಡೆದುಬಿಟ್ಟರು. ತಮ್ಮನಿಲ್ಲದಿದ್ದರೆ ತಮ್ಮ ಹಿರಿಮೆಯ ದಾರಿ ಸುಗಮ ಎಂದವರು ಭಾವಿಸಿದರು! ಹೊಟ್ಟೆಕಿಚ್ಚಿನ ಮಹತ್ವ ಅದು.
ಕಿರಿಯವ ಹಾಗಲ್ಲ. ಅವರಿಗೆ ಕೇಳಿಸದಿರಬಹುದು ಎಂದು ಭಾವಿಸಿದ. ಹಾಗೆಂದೇ ಅವರನ್ನು ನಿಂದಿಸಲಿಲ್ಲ. ತನ್ನ ವಿಧಿಯನ್ನೇ ಹಳಿದುಕೊಂಡ.
ಆತ ಕೈಯಲ್ಲಿ ಹಿಡಿದ ಬಳ್ಳಿಯನ್ನು ಇನ್ನೂ ಬಿಟ್ಟಿರಲಿಲ್ಲ, ಅಂಥ ಅಪಾಯದ ಸನ್ನಿವೇಶದಲ್ಲೂ ಅದು ಸೋಮಲತೆಯೆಂದು ಗುರುತು ಹಿಡಿದ.
ಹಲವು ಸೂಕ್ತಗಳು ಒಂದರ ಹಿಂದೆ ಮತ್ತೊಂದರಂತೆ ನೆನಪಾದವು. ಆ ಸ್ಥಿತಿಯಲ್ಲೂ ಗಂಭೀರ ದನಿ ಅವನಿಂದ ಹೊರಟಿತು. ನಭಕ್ಕೆ ನೆಗೆದ ಶಬ್ದ ತರಂಗ ಕೇಳಿ ದೇವತೆಗಳೇ ಅವನೆದುರು ನಿಂತರು. ಎಲ್ಲೆಡೆ ಬೆಳಕು ಮೂಡಿತು.
ಕಾಯುವ ದೇವರೇ ಬಂದಮೇಲೆ ಕೇಳಬೇಕೇನು? ತನಗಾದ ನೊವನ್ನು ಲೆಕ್ಕಿಸದೇ ವೇದಮಂತ್ರಗಳನ್ನು ಹಾಡುತ್ತಿರುವ ಬಾಲಕನ ಶಕ್ತಿಗೆ ಮಾರುಹೋದರು ದೇವತೆಗಳು.
ಈ ಹುಡುಗನೂ ಸುಮ್ಮನಿರಲಿಲ್ಲ. ಸೋಮಲತೆಯು ಸುರಿಸಿದ ಆನಂದದ ರಸವನ್ನು ದೇವತೆಗಳಿಗೆ ಸಮರ್ಪಿಸಿದ. ‘ಅತತ್ತ ತನೂರ್ನ ತದಾಮೋ…’ ಎಂದು ಮೊದಲಾಗುವ ಋಗ್ವೇದ ಮಂತ್ರ ಹಾಡಿದ್ದು ಕೇಳಿ ದೇವತೆಗಳಿಗೆ ಅಮಿತಾನಂದವಾಯಿತು. ‘ಯೋಗದ ಅಗ್ನಿಯಿಂದ ಶುದ್ಧವಾಗದ ಜೀವಿಗಳಿಗೆ ಸೋಮ-ಆನಂದ ಸಿಗದು’ ಎಂಬ ವಿಶಿಷ್ಟಾರ್ಥ ಧ್ವನಿಸುವ ಮಂತ್ರ ಅದು. ಈಗಾಗಲೇ ’ಸೋಮ’ ಕುರಿತ ಒಂದು ಸಾವಿರಕ್ಕೂ ಹೆಚ್ಚು ಮಂತ್ರಗಳನ್ನು ಆತ ಹಾಡಿದ್ದ.
‘‘ಮಗೂ ನಿನ್ನ ‘ಶಕ್ತಿ’ಗೆ ನಾವು ಸಂತೃಪ್ತರು, ಏನು ಬೇಕು ಕೇಳು’’ ಇದು ದೇವತೆಗಳ ಒಕ್ಕೊರಲ ದನಿ.
‘ನನ್ನ ಮನದ ಭಾವ ನಿಮಗೇ ತಿಳಿದಿದೆಯಲ್ಲಾ’ ನಿರ್ಮಲ ಮನದ ಬಾಲಕನ ಮಾತು.
‘ವೀಣೆಯ ದನಿಯ ಅರಿವಿದ್ದರೂ ಅದರ ಅನುಭವ ಪಡೆಯಲು ಅದನ್ನು ಮೀಟಲೇ ಬೇಕಲ್ಲವೇ?’ ಅಗ್ನಿಯ ಮಾತು ಅರ್ಥಪೂರ್ಣವಾಗಿತ್ತು.
‘ಈ ಹಾಳು ಬಾವಿ ನೀರಿನಿಂದ ತುಂಬಿ ಹರಿಯಲಿ, ಎಂದೂ ಬತ್ತದ ಇಲ್ಲಿನ ನೀರು ಕುಡಿದವರಿಗೆ, ಮಿಂದವರಿಗೆ ಸೋಮಪಾನದ ಆನಂದ ಲಭಿಸಲಿ. ನನ್ನ ಅಣ್ಣಂದಿರಿಗೆ ಸದ್ಬುದ್ಧಿ ಬರಲಿ. ಅವರಿಗೂ ಸತ್ಯದ ಸಾಕ್ಷಾತ್ಕಾರವಾಗಲಿ’.
ತನ್ನ ಕೇಡುಬಯಸಿದ ಅಣ್ಣಂದಿರಿಗೂ ಒಳಿತಾಗಲಿ ಎಂದು ಮಾತ್ರವಲ್ಲ ಬತ್ತಿದ ಬಾವಿಯೊಂದು ಜೀವಜಲ ತುಂಬಿ ಹರಿಯಲೆಂದು ಬಯಸಿದ ಆ ಹುಡುಗ ಬುದ್ದಿಪಕ್ವತೆಯನ್ನು ಮೆರೆದಿದ್ದ. ಬಾವಿಯಿಂದ ಮೇಲೆತ್ತಿದ ದೇವತೆಗಳು ಆತನ ಬಯಕೆಯನ್ನು ಈಡೇರಿಸಿ ಮತ್ತಷ್ಟು ವಿದ್ಯಾರಹಸ್ಯವನ್ನು ಅರುಹಿದರು.
ತನ್ನ ಸಂಕಟವನ್ನು ಮರೆತು ಎಲ್ಲರ ಸುಖ ಬೇಡಿದ ಆ ಅಪ್ರತಿಮ ಬಾಲಕ ದೀರ್ಘತಮ ಋಷಿಕುಮಾರ ತ್ರಿತ. ಅವನೀಗ ಎಲ್ಲ ಬಗೆಯ ಶಕ್ತಿವಂತ!
ತಮ್ಮ ತಪ್ಪೊಪ್ಪಿಕೊಂಡು ತಮ್ಮನನ್ನು ಆಲಿಂಗಿಸಿದ ಏಕತ ಮತ್ತು ದ್ವಿತ.

   

Leave a Reply