ಸ್ವಾನುಭವ ಸತ್ಯ ಅರಿತಾಕೆ

ಕಥೆಗಳು - 0 Comment
Issue Date : 10.12.2015

ಅದು ಆಷಾಢದ ರಾತ್ರಿ. ದಟ್ಟ ಕತ್ತಲು. ಬೀಸುವ ಗಾಳಿ. ನಡುನಡುವೆ ಗುಡುಗು ಮಿಂಚು. ಅಗೋ ಬಿರುಸಿನ ಮಳೆಹನಿಗಳು ಬಿದ್ದೇಬಿಟ್ಟವು. ಕ್ಷಣಕ್ಷಣಕ್ಕೂ ರಭಸ ಹೆಚ್ಚಿತು. ಹದಿಹರೆಯದ ಹುಡುಗಿ ಒಬ್ಬಳೇ ನಡೆಯುತ್ತಿದ್ದಳು. ಆಕೆಯ ತಲೆತುಂಬಾ ತುಂಬಿದ್ದು ಒಂದೇ ಸಂಗತಿ. ತಂದೆ ಹೇಳಿದ ಮಾತು…. ‘ಮಗೂ ಪ್ರಪಂಚದ ಅನುಭವ ಪಡೆದರಷ್ಟೇ ಅನುಭವಕ್ಕೆ ದಕ್ಕುವುದು, ಮಾತ್ರವಲ್ಲ ಅದರ ಅರ್ಥ ಹೊಳೆಯುವುದು’. ನಿಜ, ಅದನ್ನು ಪಡೆಯಬೇಕೆಂದೇ ಹೊರಟವಳು ಅವಳು. ಆಶ್ರಮದಿಂದ ಆಕೆ ಹೊರಟದ್ದು ತಂದೆಗೆ ತಿಳಿದಿತ್ತು. ಆಕೆ ಬ್ರಹ್ಮಚಾರಿಣಿ. ಬ್ರಹ್ಮವಾದಿನಿಯಾಗಬಯಸಿದ್ದು ಅದಕ್ಕಾಗಿ ಸಾಧನೆ ಮಾಡುತ್ತಿದ್ದುದು ಇವೆಲ್ಲ ತೃಪ್ತಿ ತಂದಿತ್ತು. ಬೆಂಕಿಯ ಉಂಡೆಯಂತಿದ್ದ ಆಕೆಯ ಶಕ್ತಿಯ ಅರಿವಿತ್ತು. ಹಾಗೆಂದೇ ಆತ ನಿಶ್ಚಿಂತನಾಗಿದ್ದ.
  ಸುಮಾರು ರಾತ್ರಿ ಎರಡು ಪ್ರಹರ ಕಳೆದಿರಬಹುದು. ಮಳೆಹನಿಗಳು ನಿಂತಿರಲಿಲ್ಲ. ಯಾವುದೋ ಹಳ್ಳಿಯ ಬಳಿ ಬಂದಿದ್ದಳಾಕೆ. ರಾತ್ರಿ ಕಳೆಯಲು ಯಾವುದಾದರೂ ಮನೆ ಹುಡುಕುವುದು ಆಕೆಯ ಇಚ್ಛೆ. ಯಾವುದೋ ಮನೆ ಕಂಡಿತು. ಕದ ತಟ್ಟಿದಳು. ಬಾಗಿಲು ತೆರೆದ ಮನೆಯಾತ ಹರೆಯದ ಹುಡುಗಿಯನ್ನು ಕಂಡು ಅನುಮಾನಿಸಿದ. ಸಂಶಯ ಸುಳಿಯಿತು. ಯಾರೋ ಏನೋ, ಏಕೆ ಬಂದವಳೋ ಎಂದೆಲ್ಲ ಯೋಚಿಸಿದ. ರಾತ್ರಿ ಆದ್ದರಿಂದ ಆಕೆಯ ಮುಖವೂ ಕಾಣಿಸುತ್ತಿರಲಿಲ್ಲ. ಇನ್ನು ತೇಜಸ್ಸು ಗುರುತಿಸುವುದು ಎಲ್ಲಿಂದ? ನಿರ್ದಯವಾಗಿ ಬಾಗಿಲು ಹಾಕಿಬಿಟ್ಟ. ಹೀಗೆಯೇ ಹಲವು ಮನೆಗಳಲ್ಲಿ ನಡೆಯಿತು.
  ಆಕೆ ಒಂದು ನಿರ್ಧಾರಕ್ಕೆ ಬಂದಳು. ‘ಸದಾ ಭಗವಂತನ ಧ್ಯಾನ, ಪ್ರಾರ್ಥನೆ ಮಾಡುತ್ತಿದ್ದರೆ ಆತ ರಕ್ಷಣೆಗೆ ಬರುತ್ತಾನೆ. ಆತನೆಂದೂ ಕೈಬಿಡನು’. ಇದು ತಂದೆ ಪಾಠಮಾಡುವಾಗ ಹೇಳುತ್ತಿದ್ದ ಮಾತು. ಇದೇ ಸರಿ ಎಂದಾಕೆ ನಂಬಿದಳು. ನಂಬಿಕೆಯೇ ದೇವರು ತಾನೇ? ನಡೆಯುತ್ತಲೇ ವರುಣ ಸೂಕ್ತ ಪಠಿಸತೊಡಗಿದಳು. ಗಾಳಿ ಬೀಸತೊಡಗಿತು. ಮೋಡ ಚದುರತೊಡಗಿದವು. ನಕ್ಷತ್ರಗಳು ಮಿನುಗತೊಡಗಿದವು.
  ನಿಲ್ಲದೇ ನಡೆಯುತ್ತಿದ್ದ ಆಕೆ ಈಗ ಬಯಲೊಂದನ್ನು ತಲುಪಿದ್ದಳು. ಒಂದು ಕಡೆ ದಟ್ಟಕಾಡು, ಅದರಡಿಯಲ್ಲಿ ಹರಿವ ನದಿ. ಮಳೆಗಾಲವಾದ್ದರಿಂದ ತುಂಬು ಪ್ರವಾಹ. ಬೆಳಕೆಂದರೆ ನಕ್ಷತ್ರಗಳ ಬೆಳಕಷ್ಟೇ. ನಡುನಡುವೆ ಬರುವ ಮಿಂಚು. ಈಗ ವಿಷ್ಣುಸೂಕ್ತದ ನೆನಪು ಬಂತು. ಯಾವುದೋ ಮರ. ಇನ್ನು ನಡೆಯುವುದಾಗದು ಎಂದು ಅಲ್ಲೇ ಇದ್ದ ಕಲ್ಲುಹಾಸಿನ ಮೇಲೆ ಕುಳಿತಳು.
  ಮಳೆ ನಿಂತು, ಮೋಡ ಚದುರಿ ಆಕಾಶ ಶುಭ್ರವಾಗಿತ್ತು. ಅದೂ ದೇವನ ದಯೆ ಎಂದೇ ಆಕೆ ಭಾವಿಸಿದಳು. ಅಗ್ನಿಸೂಕ್ತದ ಸಾಲುಗಳು ನೆನಪಿಗೆ ಬಂದವು. ತನ್ನಿಂತಾನೇ ಮಂತ್ರಗಳು ಹೊರಟವು. ನಿಧಾನವಾಗಿ ಮೈಯೆಲ್ಲ ಬೆಚ್ಚಗಾಗ ತೊಡಗಿತು.
  ಸಪ್ತರ್ಷಿ ಮಂಡಲ, ಆಕರ್ಷಕ ಆಕಾಶಗಂಗೆ ಇಡೀ ಆಕಾಶ ಬೆಳಕಿನಿಂದ ತುಂಬಿತ್ತು. ಈಗ ಚಂದ್ರ ಕಾಣತೊಡಗಿದ್ದ. ನಿಧಾನವಾಗಿ ಬೀಸುವ ಗಾಳಿ. ಹೌದೋ ಅಲ್ಲವೋ ಎಂಬಂತೆ ಅಲ್ಲಾಡುವ ಮರದೆಲೆಗಳು. ಶ್ರುತಿಹಿಡಿವಂತೆ ಹರಿವ ನದಿ. ಒಳಹೊರಗೆಲ್ಲ ಯಾವುದೋ ದಿವ್ಯ ಆನಂದ ತಾನೇ ತಾನಾಗಿ ತುಂಬಿ ಬಂದಂತೆ, ಹೊರಗಿನ ಬೆಳಕೆಲ್ಲ ತನ್ನೊಳಗೆ ಬಂದು ತುಂಬಿದಂತೆ, ತನ್ನೊಳಗಿನ ಬೆಳಕೇ ಹೊರಗೆಲ್ಲ ಹರಡಿದ್ದಂತೆ. ಹೀಗೆಯೇ ಹಲವು ಚಿತ್ರವಿಚಿತ್ರ ಅನುಭವಗಳು. ಸನಿಹದ ಕಾಡಿನಿಂದ ಹೊಮ್ಮುವ ಯಾವುದೋ ಹಕ್ಕಿ, ಕೀಟಗಳ ಯಾವುದೋ ದನಿಗಳು. ಅದರಲ್ಲೇ ಓಂಕಾರದ ನಾದ! ನೋಡುತ್ತಾ ಕೇಳುತ್ತಾ ತನ್ನನ್ನೇ ತಾನು ಮರೆತಳು. ಅಬ್ಬಾ ಹಗಲಿನಂತೆಯೇ ರಾತ್ರಿ ಸಹ ಎಂಥ ಅದ್ಭುತ ಅನುಭವ ನೀಡುತ್ತಿದೆ. ಉಳಿದವರ ಪಾಲಿಗೆ ಅದು ರಾತ್ರಿ ಆದರೆ ಸಂಯಮಿಗೆ ಅದು ಹಗಲು.. ಅನುಭವದ ಆಳ ಅಗಲ ಹೆಚ್ಚಿದ ಅನುಭವ! ದಿವ್ಯಾನುಭವ!!
  ವ್ಯಕ್ತಿ ತನ್ನೊಳಗನ್ನು ತೆರೆದುಕೊಳ್ಳಲು ಸಾಧ್ಯವಾದರೆ ಹಲವು ವಿಸ್ಮಯಗಳು ಸಂಭವಿಸುತ್ತವೆ. ಕ್ರಿಯಾಶಕ್ತಿಯ ಅರಿವು ಮೂಡಿದರೆ ಮಾತ್ರ ಇದು ಸಾಧ್ಯ.
  ಈಗ ಅರುಣೋದಯವಾಗಿತ್ತು. ಆಗಲೇ ಹಲವು ಹಕ್ಕಿಗಳ ಮಂಗಲ ದನಿ. ಸೂರ್ಯ ನಿಧಾನವಾಗಿ ಮೇಲೇರಿ ಬರುತ್ತಿದ್ದ. ಕತ್ತಲೆಯ ಮೊತ್ತ ಕರಗಿತು. ಬೆಳಕಿನ ಮಳೆ ಎಲ್ಲೆಡೆ.. ಎಂಥ ಸುಂದರ, ಅದ್ಭುತ ಅನುಪಮ ದೃಶ್ಯ!
  ಒಮ್ಮೆ ರಾತ್ರಿ ಬಾಗಿಲು ತೆರೆಯದವರ ಕುರಿತು ಬೇಸರ ಮೂಡಿತ್ತು. ಸಿಟ್ಟು ಬಂದಿತ್ತು. ಈಗ ಅವರೆಲ್ಲರ ಕುರಿತು ಕೃತಜ್ಞತೆ ಮೂಡುತ್ತಿದೆ. ಹಾಗೆ ಅವರು ನಡೆಯದಿದ್ದರೆ ಕತ್ತಲಗರ್ಭದಲ್ಲಿ ಅಡಗಿರುವ ಬೆಳಕಿನ ಬೀಜ ಮೊಳೆಯುವ ಕ್ಷಣಕ್ಷಣದ ಅನಂತ ಅನುಭವ ಪಡೆಯಲು ಆಗುತ್ತಲೇ ಇರಲಿಲ್ಲ.
  ಅರಿವು ಇಲ್ಲದವರು ನಡೆವ ಪರಿಯ ಅರಿವಾಗುತ್ತಲೇ ಇರಲಿಲ್ಲ. ನಿಜ ಈ ಪ್ರಕೃತಿಯ ಅದ್ಭುತ ಮಾಂತ್ರಿಕ ಅಸ್ತಿತ್ವದ ಸಾಕ್ಷಾತ್ಕಾರವೇ ಆಗುತ್ತಿರಲಿಲ್ಲ. ಸ್ವಾನುಭವದ ಸತ್ಯ ತಿಳಿಯುತ್ತಲೇ ಇರಲಿಲ್ಲ.
  ತಂದೆ ಹೇಳಿದ ಮಾತು ಕೇಳಿ ಆಗ ಇದೇನು ಎಂಬ ಸಂಶಯ ಮೂಡಿದ್ದು ಈಗದು ದೂರವಾಗಿದೆ. ರಾತ್ರಿಯೆಲ್ಲ ಜತೆಗಿದ್ದ ದಿವ್ಯಶಕ್ತಿಯ ಕುರಿತು ವಿಶ್ವಾಸ ಬಲಗೊಂಡಿತ್ತು. ತನಗಾದ ಅನುಭವ ತಂದೆ ತಾಯಂದಿರ ಬಳಿ ಹಂಚಿಕೊಳ್ಳುವ ತವಕ ಆಕೆಗೆ. ಹೊತ್ತೇರುವ ಮೊದಲೇ ಆಶ್ರಮಕ್ಕೆ ಓಡಿ ಬಂದಿದ್ದಳಾಕೆ. ಎಂದಿಗಿಂತ ಇಂದು ಕಾಂತಿಯಿಂದ ಬೆಳಗುವ ಆಕೆಯನ್ನು ಕಂಡ ತಂದೆ ‘ಮಗೂ ನಿನಗೆ ಅರಿವಿನ ಆನಂದದ ಅರಿವಾಗಿದೆ’ ಎಂದು ಉದ್ಗರಿಸಿದ.
  ಆಕೆಯನ್ನು ಯಾರೆಂದುಕೊಂಡಿರಿ? ಬ್ರಹ್ಮರ್ಷಿ ಕುಣಿಗಾರ್ಗ್ಯನ ಪ್ರಿಯಪುತ್ರಿ ಸುಲಭಾಮೈತ್ರೇಯಿ.
 

   

Leave a Reply