‘ಹರಿಕಥೆ’ ನನ್ನ ವಿಕಾಸಕ್ಕೆ ಪೂರಕ

ಲೇಖನಗಳು ; ಸಂದರ್ಶನಗಳು - 0 Comment
Issue Date :

-ಗುರುಪ್ರಸಾದ್, ಸಂಸ್ಕಾರ ಭಾರತೀ, ತುಮಕೂರು

ಬಹಳಷ್ಟು ಮಕ್ಕಳು ಸಂಗೀತ-ಭರತನಾಟ್ಯದ ಕಡೆ ಒಲವಿಟ್ಟಿರುವಾಗ ನಿಮಗೆ ಹರಿಕಥೆಯಲ್ಲಿ ಹೇಗೆ ಮನಸ್ಸಾಯ್ತು?
ಕನ್ನಡ ಸಂಸ್ಕೃತಿಯಲ್ಲಿ ಹರಿಕಥೆ ವಿಶೇಷವಾದ ಮತ್ತು ನಶಿಸಿಹೋಗುತ್ತಿರುವ ಒಂದು ಅಪೂರ್ವ ಕಲೆ. ಹರಿಕಥೆ ವಿಶಿಷ್ಟವಾಗಿದ್ದು ಧಾರ್ಮಿಕ ಭಾವದಿಂದ ಕೂಡಿದೆ.ಮೂಲತಃ ನಮ್ಮ ಮನೆಯಲ್ಲೇ ರಾಮಕೃಷ್ಣ ಆಶ್ರಮದಂತೆ ನಿರಂತರ ಪೂಜಾ ಕಾರ‌್ಯಗಳನ್ನು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ದಿನಂಪ್ರತಿ ಭಜನೆ, ದೇವರನಾಮ, ದೇವರ ಕಥಾವಳಿಗಳನ್ನು ಹಾಡಿಕೊಂಡು ಪೂಜಿಸುತ್ತೇವೆ. ಹರಿಕಥಾ ವಿದ್ವಾನ್ ಅಚ್ಯುತದಾಸರ ಹರಿಕಥೆಗಳನ್ನು ಚಿಕ್ಕಂದಿನಿಂದಲೂ ಕೇಳಿಕೊಂಡು ಬೆಳೆಯುತ್ತಿದ್ದೇನೆ. ಭರತನಾಟ್ಯಕ್ಕೆ ನಾನು ಸೇರಿಕೊಂಡಿದ್ದೆ.ಆದರೆ ಕೆಲಕಾಲದ ನಂತರ ನಿರಂತರವಾಗಿ ಹೋಗಲಾಗಲಿಲ್ಲ. ವೇ.ಬ್ರ. ವಿದ್ವಾನ್‌ಡಾ॥ವಾಸುದೇವಾಚಾರ್ಯರ ಬಳಿ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದೇನೆ. ಹರಿಕಥೆಗೆ ಸಂಗೀತ ಅವಶ್ಯ ಮತ್ತು ಪೂರಕ.ಹಾಗಾಗಿ ಕಥೆ ಹೇಳುವ ಈ ಕಲೆ ನನಗೆ ಬಹುವಾಗಿ ಹಿಡಿಸಿತು.

ನಿಮಗೆ ಈ ಕಲೆಯಲ್ಲ್ ಆಸಕ್ತಿ ಹೇಗೆ ಬಂತು? ಇದರ ಹಿಂದಿನ ಸ್ಫೂರ್ತಿ ಯಾರು?
ನನಗೆ ನನ್ನ ತಾಯಿಯೇ ಸ್ಫೂರ್ತಿ. ನನ್ನೊಳಗಿರುವ ಪ್ರತಿಭೆಯನ್ನು ಗುರುತಿಸಿ ಅವರೇ ಸಣ್ಣವಯಸ್ಸಿನಿಂದಲೂ ನನಗೆ ಪ್ರೇರಣೆಯಾಗಿ ನಿಂತು ಮಾರ್ಗದರ್ಶಕರಾಗಿದ್ದಾರೆ.ಸಣ್ಣವಳಿದ್ದಾಗಿನಿಂದಲೂ ನನಗೆ ಭಕ್ತಿಗೀತೆಗಳನ್ನು ಹೇಳಿಕೊಟ್ಟು ಬಹಳಷ್ಟು ಕಾರ‌್ಯಕ್ರಮಗಳಲ್ಲಿ ಹಾಡಿಸುತ್ತಿದ್ದರು. ಸುಮಾರು 9 ವರ್ಷಗಳ ಹಿಂದೆ ತುಮಕೂರಿನ ಹಿರೇಮಠದಲ್ಲಿ ಒಬ್ಬರು ಹರಿಕಥೆ ನಡೆಸಿ ಕೊಟ್ಟರು. ನಂತರ ಅವರಿಗೆ ಮಾನ್ಯ ಸ್ವಾಮೀಜಿಗಳು ಶಾಲು ಹೊದಿಸಿ ಆಶೀರ್ವದಿಸಿದರು.ಅದು ನನ್ನ ಮನಸ್ಸಿನ ಮೇಲೆ ಪ್ರಭಾವವನ್ನು ಬೀರಿತು. ನನ್ನ ಅಜ್ಜಿ ಮನೆಯಲ್ಲಿ ದಿನವೂ ದೇವಿ ಮಹಾತ್ಮೆಯನ್ನು ಹೇಳುತ್ತಾರೆ. 2012ರಲ್ಲಿ ಹಿರೇಮಠದಲ್ಲಿ ಹರಿಕಥಾ ಸಪ್ತಾಹ ಜರುಗಿತು.ಅಲ್ಲಿ ನಾನು ದಿನವೂ ಮನೆಯಲ್ಲಿ ಕೇಳುತ್ತಿದ್ದ ದೇವಿ ಮಹಾತ್ಮೆಯನ್ನು ಕಥೆಯ ರೂಪದಲ್ಲಿ ಹೇಳಿದೆ.ಅದು ಅಲ್ಲಿದ್ದ ಶ್ರೀ ಶಿವಾನಂದ ಶಿವಾಚಾರ‌್ಯ ಸ್ವಾಮೀಜಿಗಳಿಗೆ ಹಾಗೂ ಹರಿಕಥಾ ವಿದ್ವಾನ್ ಶ್ರೀ ಲಕ್ಷ್ಮಣದಾಸರಿಗೆ ಬಹುವಾಗಿ ಹಿಡಿಸಿತು. ನಾಂದಿ ಮತ್ತು ಮಂಗಳ ಸೇರಿಸಿ ಬಿಟ್ಟರೆ ನೀನು ಮಾಡಿದ್ದು ಹರಿಕಥೆಯೇ ಎಂದು ನನ್ನನ್ನು ಆಶೀರ್ವದಿಸಿ ಪ್ರೋತ್ಸಾಹಿಸಿದರು. ಅದು ನನ್ನ ಮೊದಲ ಕಾರ‌್ಯಕ್ರಮ. ನಂತರದಲ್ಲಿ ಕರ್ನಾಟಕ ಕಲಾಶ್ರೀ ವಿದ್ವಾನ್‌ಎಂ.ಕೆ.ಮೋಹನ್‌ಕುಮಾರ್‌ರವರ ಬಳಿ ಶಾಸ್ತ್ರೀಯ ಹರಿಕಥೆ ಅಭ್ಯಾಸ ಮಾಡುತ್ತಿದ್ದೇನೆ.
ನಿಮ್ಮ ಕುಟುಂಬದಲ್ಲಿ ಈ ಮೊದಲು ಯಾರಾದರೂ ಹರಿಕಥೆ ಕಾರ‌್ಯಕ್ರಮ ಮಾಡುತ್ತಿದ್ದರಾ?
ಇಲ್ಲ. ನಮ್ಮ ಮನೆಯ ಮಟ್ಟಿಗೆ ಹರಿಕಥಾ ವಿದ್ವಾಂಸರ ಆಡಿಯೋ ಕೆಸೆಟ್‌ಗಳನ್ನು ಹಾಕಿಕೊಂಡು ಕೇಳುತ್ತಿದ್ದೆವು. ಅಷ್ಟು ಬಿಟ್ಟರೆ ನಮ್ಮ ಮನೆಗೆ ಹರಿಕಥೆಯ ಪರಿಚಯ ಅಷ್ಟಿರಲಿಲ್ಲ.

ಕಾರ‌್ಯಕ್ರಮಗಳಿಗೆ ತಯಾರಿ ಹೇಗಿರುತ್ತದೆ?
ನಮ್ಮ ಪೂಜ್ಯ ಗುರುಗಳಾದ ವಿದ್ವಾನ್ ಶ್ರೀ ಎಂ.ಕೆ.ಮೋಹನ್‌ಕುಮಾರ್‌ರವರು ಅಕ್ಕರೆಯಿಂದ ನನಗೆ ಹರಿಕಥೆಯನ್ನು ಹೇಳಿಕೊಡುತ್ತಿದ್ದಾರೆ.ವೃತ್ತಿಯಲ್ಲಿರುವ ಅವರು ಮನೆಗೆ ಬರುವುದೆ ರಾತ್ರಿ 9 ಗಂಟೆಗೆ. 9 ಗಂಟೆಯ ನಂತರ ನಾನು ಅವರ ಮನೆಗೆ ಹೋಗಿ ಅಭ್ಯಾಸ ಮಾಡುತ್ತೇನೆ. ಅವರು ಹೇಳಿಕೊಡುವ ಪಾಠಗಳನ್ನು ಕ್ಯಾಮರಾದಲ್ಲಿರೆ ಕಾರ್ಡ್ ಮಾಡಿಕೊಂಡು ಮನೆಯಲ್ಲಿ ಅಭ್ಯಾಸ ಮಾಡುತ್ತೇನೆ. ಯಾವ ಭಾಗವನ್ನು ಹೇಗೆ ಹೇಳಬೇಕು, ಯಾವುದರ ಅರ್ಥ ಏನು ಎಂದು ಬಿಡಿಸಿ ಹೇಳಿಕೊಡುತ್ತಾರೆ. ಪೂರ್ಣಕಥೆ ಮನನವಾಗುವುದರಿಂದ ಕಾರ‌್ಯಕ್ರಮಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಒಮ್ಮೆ ಪ್ರಾರಂಭಿಸಿದರೆ ಸರಾಗವಾಗಿ ಕಥೆ ಮುಂದೆ ಹೋಗುತ್ತದೆ.

ಇದುವರೆವಿಗೂ ಎಷ್ಟು ಕಾರ‌್ಯಕ್ರಮಗಳನ್ನು ನಡೆಸಿಕೊಟ್ಟಿದ್ದೀರಿ ಮತ್ತು ಯಾವ ಯಾವ ಕಥೆಗಳನ್ನು ಹೇಳಿದ್ದೀರಿ?
ಇದುವರೆವಿಗೂ ಸುಮಾರು 160ಕ್ಕೂ ಹೆಚ್ಚು ಕಾರ‌್ಯಕ್ರಮಗಳನ್ನು ರಾಜ್ಯದ 22 ಜಿಲ್ಲೆಗಳಲ್ಲಿ ನಡೆಸಿಕೊಟ್ಟಿದ್ದೇನೆ. ಗುರುಗಳ ಬಳಿ ಶ್ರೀನಿವಾಸ ಕಲ್ಯಾಣ, ಭಕ್ತ ಸುಧಾಮ, ಭೂಕೈಲಾಸ, ಕಟೀಲು ದುರ್ಗಾಪರಮೇಶ್ವರಿ ವೈಭವ, ಸುಂದರ ಕಾಂಡ ಮತ್ತು ಭಕ್ತ ಪ್ರಹ್ಲಾದ ಕಥೆಗಳನ್ನು ಕಲಿತು ಕಾರ‌್ಯಕ್ರಮ ಕೊಡುತ್ತಿದ್ದೇನೆ. 25.12.16ರಂದು ಬಾಗಲಕೋಟೆ ಜಿಲ್ಲೆಯ ಮಧುರಖಂಡಿಯಲ್ಲಿ ಬಸವತತ್ವ ಮತ್ತು ಬಸವಣ್ಣನವರ ಜೀವನಚರಿತ್ರೆಯನ್ನು ಹರಿಕಥೆಗೆ ಅಳವಡಿಸಿ ಕಾರ‌್ಯಕ್ರಮವನ್ನು ನಡೆಸಿ ಕೊಟ್ಟಿದ್ದೇನೆ. ಪೂಜ್ಯ ಸ್ವಾಮೀಜಿಯವರು ‘ಶರಣ ಕಥಾರತ್ನ’ ಎಂಬ ಬಿರುದು ನೀಡಿ ಆಶೀರ್ವದಿಸಿ ಕಳುಹಿಸಿದರು.

ಹರಿಕಥೆಯ ಅಭ್ಯಾಸದ ಜೊತೆಗೆ ಶಾಲಾ ಅಭ್ಯಾಸ ಹೇಗೆ ಸಾಗಿದೆ?
ಮೊದಲಿನಿಂದಲೂ ನನಗೆ ಓದಿನಲ್ಲಿ ಹೆಚ್ಚು ಆಸಕ್ತಿ. ಚಿಕ್ಕವಯಸ್ಸಿನಿಂದಲೂ ಶಾಲೆಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸುತ್ತಾ ಬರುತ್ತಿದ್ದೇನೆ. ಮುಖ್ಯವಾಗಿ ನಾನು ಹರಿಕಥೆ ಪ್ರಾರಂಭಿಸಿದ ಮೇಲೆ ನನ್ನ ವಿದ್ಯಾಭ್ಯಾಸ ಇನ್ನಷ್ಟು ಸುಧಾರಿಸಿದೆ. ನೆನಪಿನ ಶಕ್ತಿ ಹೆಚ್ಚಾಗಿದೆ. ಇಲ್ಲಿ ಬಹು ದೊಡ್ಡ ಕಥೆಗಳನ್ನು, ವೃತ್ತಾಂತಗಳನ್ನು ನೆನಪಿನಲ್ಲಿಟ್ಟು ಕೊಳ್ಳಬೇಕಾಗುವುದರಿಂದ ಶಾಲೆಯ ಪಾಠಗಳು ಅತಿ ಚಿಕ್ಕವು ಎಂದು ಭಾಸವಾದವು. ಯಾವುದನ್ನೂ ಬಾಯಿಪಾಠ ಮಾಡದೇ ನೇರ ಅರ್ಥಮಾಡಿಕೊಳ್ಳುವುದರಿಂದ ಎಲ್ಲವೂ ಸುಲಭವಾದವು. ನಾನು ನನ್ನ ಗೆಳೆಯರಿಗೆ ಮತ್ತು ಅವರ ಪೋಷಕರಿಗೂ ಇದನ್ನೇ ಹೇಳುತ್ತೇನೆ. ನನ್ನಿಷ್ಟವಾದ ಕಲೆಯನ್ನು ಅಳವಡಿಸಿಕೊಂಡಿರುವುದರಿಂದ ನನಗೆ ಓದಿಗೆ ಇನ್ನಷ್ಟು ಸಹಾಯವಾಗಿದೆಯೇ ವಿನಃ ತೊಂದರೆ ಎಳ್ಳಷ್ಟೂ ಆಗಿಲ್ಲ.

ಹರಿಕಥಾ ಪ್ರಕಾರದಲ್ಲಿ ನಿಮ್ಮ ಮುಂದಿನ ಯೋಜನೆಗಳು?
ಈಗ ಸದ್ಯದಲ್ಲಿ ಹರಿಕಥೆಯನ್ನು ಕನ್ನಡ ಭಾಷಾವಲಯದಲ್ಲಷ್ಟೆ ನಾವು ಕಾಣುತ್ತಿದ್ದೇವೆ. ನಂತರದ ದಿನಗಳಲ್ಲಿ ಈ ಪ್ರಕಾರವನ್ನು ಸಂಸ್ಕೃತ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲೂ ಮಾಡುವುದರ ಮೂಲಕ ಹರಿಕಥಾ ಪ್ರಕಾರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯಬೇಕೆಂದು ಆಸೆಯಿದೆ. ಹಾಗಾಗಿ ಸಂಸ್ಕೃತ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳ ಅಧ್ಯಯನ ಪ್ರಾರಂಭಿಸಿದ್ದೇನೆ. ಇದಕ್ಕೆ ನನ್ನ ಕುಟುಂಬದ ಸಂಪೂರ್ಣ ಬೆಂಬಲ ದೊರಕಿದೆ.

ಹರಿಕಥೆ ಬಿಟ್ಟು ಬೇರೆ ಯಾವ ವಿಷಯದಲ್ಲಿ ನಿಮಗೆ ಆಸಕ್ತಿಯಿದೆ?
ಪಾಠಕ್ಕೆ ಪೂರಕವಾದ ವಿಷಯಗಳಲ್ಲಿ ನನಗೆ ಆಸಕ್ತಿ ಹೆಚ್ಚು.ರಾಷ್ಟ್ರೀಯ ಮಕ್ಕಳ ವಿಜ್ಞಾನ ಪರಿಷತ್ತು ಗೋಕಾಕ್‌ನಲ್ಲಿ ನಡೆಸಿದ ಬಾಲ ವಿಜ್ಞಾನಿ ಕಾರ‌್ಯಕ್ರಮದಲ್ಲಿ ಜಾಗತಿಕ ತಾಪಮಾನದ ಬಗ್ಗೆ ವ್ಯವಸಾಯದ ಮೂಲಕ ಪರಿಹಾರವನ್ನು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದ್ದೇನೆ. ಅದಕ್ಕೆ ನನಗೆ ಬಹುಮಾನ ಕೂಡ ಬಂದಿದೆ. ಇದಲ್ಲದೆ KLE ಸಂಸ್ಥೆ ನಡೆಸುವ ಬಾಲ ವಿಜ್ಞಾನಿ ಸ್ಪರ್ಧೆಯಲ್ಲಿ ಪೈಥಾಗೊರಸ್ ಪ್ರಮೇಯದ ಆಧಾರಿತ applied mathematics ವಿಷಯದಲ್ಲಿ ಪ್ರಮೇಯ ಮಂಡನೆ ಮಾಡಿದ್ದಕ್ಕೆ ಪ್ರಥಮ ಬಹುಮಾನ ದೊರಕಿದೆ. ವಿಜ್ಞಾನ, ಗಣಿತ ಮತ್ತು ಕನ್ನಡ ಸಾಹಿತ್ಯ ನನ್ನ ಅಚ್ಚುಮಚ್ಚಿನ ವಿಷಯಗಳು.

ಸಾಮಾಜಿಕ ಮಟ್ಟದಲ್ಲಿ ಜನ ನಿಮ್ಮನ್ನು ಹಾಗೂ ನಿಮ್ಮ ಕಲೆಯನ್ನು ಹೇಗೆ ಗುರುತಿಸುತ್ತಿದ್ದಾರೆ?
ಕಳೆದ 4 ವರ್ಷಗಳ ಮುಂಚೆ ನಾನೊಬ್ಬ ಸಾಧಾರಣ ವಿದ್ಯಾರ್ಥಿಯಾಗಿದ್ದೆ. ಆದರೆ ಈಗ ರಾಜ್ಯಾದ್ಯಂತ ಜನ ಮತ್ತು ಸಂಘಸಂಸ್ಥೆಗಳು ನನ್ನನ್ನು ಗುರುತಿಸಿ, ಕಲಾಶ್ರೀ ಪ್ರಶಸ್ತಿ, ಗಣರಾಜ್ಯೋತ್ಸವ ಪ್ರಶಸ್ತಿ, ಶ್ರೀರಾಮ ಸೇವಾರತ್ನ, ಅಸಾಧಾರಣ ಪ್ರತಿಭೆ, ಕೀರ್ತನ ಕಿಶೋರಿ, ಶಿವಕಥಾ ಕಲಾಚತುರೆ ಮುಂತಾದ ಪ್ರಶಸ್ತಿ ಮತ್ತು ಬಿರುದುಗಳಿಂದ ಸನ್ಮಾನಿಸಿ ಪ್ರೋತ್ಸಾಹಿಸುತ್ತಿದೆ. ಸಂಯುಕ್ತ ಕರ್ನಾಟಕ ಪತ್ರಿಕೆಯ ಶ್ರೀ ಜಿ. ಇಂದ್ರಕುಮಾರ್‌ಅವರು ನನ್ನ ಬಗ್ಗೆ ಅವರ ಪತ್ರಿಕೆಯಲ್ಲಿ ಅಂಕಣ ಬರೆದ ಮೇಲೆ ನನ್ನ ಕಾರ‌್ಯಕ್ರಮಗಳ ಸಂಖ್ಯೆ ಹೆಚ್ಚಾಗಿದೆ. ಮುಖ್ಯವಾಗಿ ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಕಾರ‌್ಯಕ್ರಮಗಳನ್ನು ಕೊಟ್ಟಿದ್ದೇನೆ. ಹೋದ ಕಡೆಯಲ್ಲೆಲ್ಲಾ ನನಗೆ ಆದರಪೂರ್ವಕ ಸ್ವಾಗತ ಕೊಡುತ್ತಿದ್ದಾರೆ.ಹರಿಕಥೆಯಿಂದ ನನ್ನ ಸಾಮಾಜಿಕ ಜವಾಬ್ದಾರಿ ಮತ್ತು ಆತ್ಮವಿಶ್ವಾಸ ಹೆಚ್ಚಿದೆ. ಮೊದಲು ನಾನು ಹರಿಕಥೆಗೆ ಸಂಭಾವನೆ ಪಡೆಯುತ್ತಿರಲಿಲ್ಲ. ಪೂಜ್ಯ ಗುರುಗಳ ಒತ್ತಾಯದ ಮೇರೆಗೆ ಈಗ ಸಂಭಾವನೆ ಪಡೆಯುತ್ತಿದ್ದೇನೆ. ಪ್ರಾಯೋಜಕರು ಎಷ್ಟು ಕೊಟ್ಟರೂ ಅದನ್ನು ಸ್ವೀಕರಿಸುತ್ತೇನೆ. ಆ ಹಣವನ್ನು ನನ್ನ ಕುಟುಂಬದ ಆಸೆಯಂತೆ ಬಡ ವಿದ್ಯಾರ್ಥಿಗಳ ಶಾಲಾ ಮತ್ತು ಪರೀಕ್ಷಾಶುಲ್ಕಕ್ಕಾಗಿ ವಿನಿಯೋಗಿಸುತ್ತಿದ್ದೇನೆ.

ನಿಮ್ಮ ಹರಿಕಥಾಜೀವನದಲ್ಲಿ ನಡೆದ ಅವಿಸ್ಮರಣೀಯ ಘಟನೆ?
ಕಳೆದ ವರ್ಷ ಚಂದನ ವಾಹಿನಿಯಲ್ಲಿ ಕಾರ‌್ಯಕ್ರಮಕ್ಕೆ ಆಮಂತ್ರಣ ನೀಡಿದ್ದರು. ಮುಂಚಿತವಾಗಿಯೇ 90 ನಿಮಿಷಗಳಿಗೆ ಸಿದ್ದವಾಗಿ ಬರುವಂತೆ ತಿಳಿಸಿದ್ದರು. ಅದರಂತೆ ನಾನು ನಿಗದಿಯಾದ 90 ನಿಮಿಷಗಳಿಗೆ ವ್ಯವಸ್ಥಿತಳಾಗಿ ಹೋಗಿದ್ದೆ. ಆದರೆ ಕಡೆಯ ಬದಲಾವಣೆಯಲ್ಲಿ ನನಗೆ 26 ನಿಮಿಷಗಳ ಅವಧಿ ನೀಡಲಾಯ್ತು. ಶ್ರೀನಿವಾಸ ಕಲ್ಯಾಣಕ್ಕೆ ಕಡಿಮೆ ಎಂದರೂ 2 ಘಂಟೆ ಅವಧಿ ಬೇಕು. 26 ನಿಮಿಷದಲ್ಲಿ ಹೇಗೆ ಮಾಡುವುದು ಎಂದು ಯೋಚಿಸುತ್ತಾ ಕಾರ‌್ಯಕ್ರಮ ಪ್ರಾರಂಭಿಸಿದೆ.ಸರಿಯಾಗಿ 25 ನಿಮಿಷಕ್ಕೆ ಮುಗಿಸಿದೆ. ಕಾರ‌್ಯಕ್ರಮದ ನಿರ್ದೇಶಕರು ಬಹಳ ಸಂತೋಷದಿಂದ ಅಭಿನಂದಿಸಿದರು. ಕಥೆಯು ಸಂಪೂರ್ಣ ಮನನವಾಗಿದ್ದರಿಂದ ಎಲ್ಲಿ ಎಷ್ಟು ಹೇಳಬೇಕೆಂಬುದನ್ನು ನಿರ್ಧರಿಸಿ ಕಾರ‌್ಯಕ್ರಮ ಕೊಟ್ಟೆ. ಇದು ಒಂದು ಅವಿಸ್ಮರಣೀಯ ಘಟನೆ.

ಭವಿಷ್ಯದಲ್ಲಿ ಏನಾಗ ಬಯಸುತ್ತೀರಿ?
ನನಗೆ ವಿಜ್ಞಾನಕ್ಷೇತ್ರದಲ್ಲಿ ಅತೀ ಹೆಚ್ಚಿನ ಆಸಕ್ತಿ ಇದೆ. ಮುಂದೆ ವೈದ್ಯೆಯಾಗಬೇಕೆಂಬ ಹಂಬಲವಿದೆ. ವೈದ್ಯೆಯಾಗಿ ನಂತರ IAS ಪರೀಕ್ಷೆ ತೆಗದುಕೊಂಡು ದೇಶಸೇವೆ ಮಾಡಬೇಕೆಂಬ ಆಸೆಯಿದೆ.

   

Leave a Reply