ಹಿಂದು ಜೀವನದ ಒಂದು ಒಗಟು

ಲೇಖನಗಳು ; ಹೊ.ವೆ.ಶೇಷಾದ್ರಿ - 0 Comment
Issue Date : 30.05.2015

ವ್ಯಕ್ತಿ ವಂದ್ಯ ಸಮಾಜ ವರ್ಜ್ಯ – ಹೀಗೇಕೆ?

ಹಿಂದುವಿನ ಜೀವನ ಇದು ಒಂದು ವಿಚಿತ್ರ ಒಗಟಾಗಿದೆ.

ಲೋಕವಂದ್ಯ – ವ್ಯಕ್ತಿಗತವಾಗಿ
ಅವನ ವೇದಾಂತಕ್ಕೆ ಲೋಕದಾದ್ಯಂತ ಪೂಜ್ಯತೆ ಇದೆ. ಯೋಗ, ಪ್ರಾಣಾಯಾಮ, ಆಸನಗಳಲ್ಲಿ ಲೋಕಕ್ಕೆಲ್ಲ ಅವನೇ ಗುರು. ಭಗವದ್ಗೀತೆ-ಉಪನಿಷತ್ತುಗಳ ತವರಿನ ಮಗನೆಂದು ಅವನಿಗೆ ಅಸಾಮಾನ್ಯ ಗೌರವ. ವಿಜ್ಞಾನದ ಹೊಡೆತಕ್ಕೆ ಮಿಕ್ಕ ಮತ, ದರ್ಶನಗಳು ತತ್ತರಿಸಿ ಬಿದ್ದರೂ, ಅವನ ಧರ್ಮ, ದರ್ಶನಗಳು ಮಾತ್ರ ಅಚಲವಾಗಿ ನಿಂತಿವೆಯಲ್ಲ ಎಂದು ಲೋಕದ ಚಿಂತಕರೆಲ್ಲ ಅವನತ್ತ ಕಣ್ಣರಳಸಿ ನೋಡುತ್ತಾರೆ. ಸಿರಿ-ಸಮೃದ್ಧಿಗಳಲ್ಲಿ, ಭೋ-ವಿಲಾಸಗಳಲ್ಲಿ ಹೊರಳಾಡುವಂತಹರಿಗೂ ಇಂದು ಅವನ ಧರ್ಮದು ಹುಚ್ಚು ಹಿಡಿಯುತ್ತಿದೆ. ತಲೆ ಬೋಳಿಸಿ, ಕಾವಿ ಧರಿಸಿ, ಕೈಯಲ್ಲಿ ತಾಳ ಹಿಡಿದು ಅವನ ದೇವದೇವತೆಯರ ತೇರು ಎಳೆಯುತ್ತಾ, ಭಜನೆ ಮಾಡುತ್ತಾ ಹೋಗುತ್ತಾರೆ. ನಿಜಕ್ಕೂ ಹಿಂದು ಲೋಕಪೂಜ್ಯ, ಲೋಕವಂದ್ಯ, ಲೋಕಗುರು-ಸಂದೇಹವೇ ಇಲ್ಲ…
ಹೊರನಾಡುಗಳಲ್ಲಿ ಮಾತ್ರ ಅಲ್ಲ, ನಮ್ಮ ನಾಡಿನಲ್ಲೂ ಅಷ್ಟೆ, ಅವನ ಧರ್ಮದ ವೇದಾಂತಿಗಳನ್ನು, ಯೋಗಿಗಳನ್ನು, ಸಾಧುಸಂನ್ಯಾಸಿಗಳನ್ನು ಎಲ್ಲರೂ ಗೌರವಿಸುತ್ತಾರೆ. ಜಾತಿ-ಮತ-ಪಕ್ಷ-ಪ್ರಾಂತ ಯಾವ ಭೇದಗಳೂ ಅದಕ್ಕೆ ಅಡ್ಡಿ ಬರದು. ವಿದ್ವಾನ್ ಸರ್ವತ್ರ ಪೂಜ್ಯತೇ ಎನ್ನುವ ಮಾತು ನಿಜವೇ….
ಇದೆಲ್ಲ ಅವನ ಜ್ಞಾನಕ್ಕೆ, ಅವನ ಶೀಲಕ್ಕೆ, ಅವನ ಸಾಧನೆಗೆ, ಎಲ್ಲಕ್ಕಿಂತ ಮಿಗಿಲಾಗಿ ಅವನ ಪೂರ್ವಿಕರ ತಪಸ್ಸಿಗೆ ಸಲ್ಲುತ್ತಿರುವ ಗೌರವ, ಸಲ್ಲಬೇಕಾದ ಗೌರವವೇ……
ಇವೆಲ್ಲವೂ ಹಿಂದುವಿಗೆ ವ್ಯಕ್ತಿಗತವಾಗಿ ಸಲ್ಲುತ್ತಿರುವ ಘನತೆ, ಪೂಜ್ಯತೆ.

ಜನಾಂಗವಾಗಿ ? ತ್ಯಾಜ್ಯ !

ಆದರೆ ಒಂದು ಸಲ ಅವನು ಒಂದು ಜನಾಂಗವಾಗಿ, ಒಂದು ರಾಷ್ಟ್ರವಾಗಿ ಮಾತನಾಡತೊಡಗಿದೊಡನೆ ಇಡೀ ಚಿತ್ರವೇ ಬದಲಾಯಿಸುತ್ತದೆ! ಅವನ ವಿರುದ್ಧ ಜಗತ್ತಿನ ಮಹಾ ದೇಶಗಳೆಲ್ಲ ತಿರುಗಿ ಬೀಳುತ್ತವೆ. ಅವನನ್ನು ಜಾತೀಯ, ಯುದ್ಧಕೋರ ಎಂದೆಲ್ಲ ಧಿಕ್ಕರಿಸುತ್ತವೆ. ಅವನ ಜನಾಂಗದ ಸಂಘಟನೆಗಾಗಿ ಕೆಲಸ ಮಾಡುವ ಸಂಸ್ಥೆಗಳ ವಿರುದಧ ಪ್ರಚಾರದ ಬಿರುಗಾಳಿ ಎಬ್ಬಿಸುತ್ತವೆ. ಆ ದೇಶಗಳ ಕೈಗೊಂಬೆಗಳಾಗಿರುವ ಇಲ್ಲಿನ ಪಕ್ಷ-ಪಂಗಡಗಳಂತೂ ಅವನ ಸಾಮಾಜಿಕ ಸಂಘಟನೆಗಳ ವಿರುದ್ಧ ಸದಾ ವಿಷ ಕಾರುವಂತಹವೇ. ದೇಶದ ಇನ್ನು ಕೆಲವು ರಾಜಕೀಯ ಗುಂಪುಗಳಿಗೂ ಹಾಗೆಯೇ, ಹಿಂದು ಸಂಘಟನೆ ಎಂದರೆ ಬೆಂಕಿ. ಇಲ್ಲಿನ ಮುಸಲ್ಮಾನ, ಕ್ರೈಸ್ತ, ಕಮ್ಯುನಿಸ್ಟ್ ಶಕ್ತಿಗಳಿಗೂ ಅಷ್ಟೆ. ಅವುಗಳ ವಿರೋಧಕ್ಕೆ ಅದೇ ಮುಖ್ಯ ಗುರಿ.

ಹೊರದೇಶಗಳು ಅಥವಾ ಅಹಿಂದುಗಳು ಅಥವಾ ಹಿಂದು-ವಿರೋಧಿಯಾದ ಪಕ್ಷ ಪಂಗಡಗಳು ಹಾಗಿರಲಿ, ಹಿಂದುಗಳಲ್ಲೂ ಹಲವರು ಹಿಂದು ಸಂಘಟನೆಯ ಕಾರ್ಯ ಎಂದೊಡನೆ ಆಕ್ಷೇಪಿಸುತ್ತಾರೆ, ಟೀಕಿಸುತ್ತಾರೆ, ವಿರೋಧವನ್ನೂ ಮಾಡುತ್ತಾರೆ. ಅಂತಹ ಸಂಘಟನೆ ಸಂಕುಚಿತ, ಜಾತೀಯ ಎಂದೆಲ್ಲ ಮೂಗು ಮುರಿಯುತ್ತಾರೆ. ಹಿಂದುಗಳ ಸಂಘಟನೆ ಮಾಡಿದರೆ ಇಲ್ಲಿರುವ ಮುಸಲ್ಮಾನರ ಕ್ರೈಸ್ತರ ಗತಿ ಏನು? ಅವರನ್ನು ದೂರ ಇಡುವುದೆಂದರೆ ಅವರ ಬಗೆಗೆ ಅಸಹನೆ ತೋರಿಸಿದಂತಾಗಲಿಲ್ಲವೇ? ಅದು ಪರಮತಸಹನೆಯ ಹಿಂದುತ್ವಕ್ಕೇ ವಿರೋಧವಲ್ಲವೇ? ಇದು ದೇಶವನ್ನು ಒಡೆಯುವ ದಾರಿ ಅಲ್ಲವೇ? ಹೀಗೆಲ್ಲ ನೂರೆಂಟು ಪ್ರಶ್ನೆ ಕೇಳುತ್ತಾರೆ.
ಏನುದು ಒಗಟು?
ಏನಾಶ್ಚರ್ಯ! ಒಬ್ಬ ವ್ಯಕ್ತಿಯಾಗಿ ಹಿಂದುವು ಉತ್ತಮನಾದರೆ, ಆದರ್ಶನಾದರೆ ಅವನಂತಹ ಒಳ್ಳೆಯವನು ಇನ್ನೊಬ್ಬನಿಲ್ಲ, ಅವನು ಲೋಕ ವಂದ್ಯ. ಅದೇ ಅವನು ಒಂದು ಜನಾಂಗವಾಗಿ ಎದ್ದು ನಿಲ್ಲಬೇಕು, ಆದರ್ಶನಾಗಬೇಕು, ಎಂದೊಡನೆ ಅವನಂತಹ ದುಷ್ಟ ಇನ್ನೊಬ್ಬನಿಲ್ಲ, ಅವನನ್ನು ತುಳಿಯಲು ಲೋಕವೇ ಸಿದ್ಧ, ಅವನ ಜನರೇ ಸಿದ್ಧ! ವ್ಯಕ್ತಿಗತವಾಗಿ ಹಿಂದುವು ಉದಾರ, ವಿಶಾಲ ಮನಸ್ಸಿನವನು, ಶಾಂತಿಪ್ರಿಯ, ಪರಮತಸಹನೆ ಉಳ್ಳವನು, ದೇಶಭಕ್ತ-ಎಲ್ಲ. ಜನಾಂಗವಾಗಿ ಮಾತ್ರ ಸಂಕುಚಿತ, ಜಾತೀಯ, ಹಿಂಸಾವಾದಿ, ಅಸಹಿಷ್ಣು, ದೇಶಮುರುಕ! ಎಂದರೆ, ಹಿಂದುತ್ವದ ಎಲ್ಲ ಸದ್ಗುಣಗಳಿಗೆ ವಿರುದ್ಧ! ಒಟ್ಟಿನಲ್ಲಿ ವ್ಯಕ್ತಿಗತವಾಗಿ ಆದರ್ಶವೆನಿಸುವ ಹಿಂದುವು, ಒಂದು ಜನಾಂಗವಾಗಿ ಎದ್ದು ನಿಂತೊಡನೆ ನೀಚ ಹಿಂದುವೇ ಅಗುತ್ತಾನೆ!
ಸ್ವಲ್ಪ ಆಲೋಚಿಸಿದರೆ ಈ ವಿಚಿತ್ರಕ್ಕೆ ಕಾರಣಗಳೇನಿರಬಹುದೆಂದು ಊಹಿಸುವುದೇನೂ ಕಷ್ಟವಲ್ಲ.
ಹಿಂದುಗಳ ಒಗ್ಗಟ್ಟಿನಲ್ಲಿ ಅಡಗಿರುವ ಅನರ್ಥ
ಮೊದಲನೆಯದಾಗಿ, ಹಿಂದುಗಳಲ್ಲದವರಿಗೆ ಹಿಂದುವು ಒಂದು ಒಗ್ಗಟ್ಟಾದ ಜನಾಂಗವಾಗಿ ಎದ್ದು ನಿಂತೊಡನೆ ಅಷ್ಟೆಲ್ಲ ಕೆಟ್ಟವ ಏಕಾಗುತ್ತಾನೆ? ಏಕೆಂದರೆ, ಹಿಂದು ವ್ಯಕ್ತಿಯಲ್ಲಿಲ್ಲದ ಅನೇಕ ಹಾನಿಕರ ದುರ್ಗುಣಗಳು ಅವನಲ್ಲಿ ಸಂಘಟಿತನಾದಾಗ ಬೆಳೆಯುತ್ತವೆ. ಅವನಲ್ಲಿ ತಾನೊಂದು ಜನಾಂಗ ಎನ್ನುವ ಸ್ವಾಭಿಮಾನ ಬೆಳೆಯುತ್ತದೆ; ತನ್ನ ಜನಾಂಗದ ಹಿತದ ಕುರಿತಾಗಿ ಕಳಕಳಿ ಹುಟ್ಟುತ್ತದೆ; ತನ್ನ ಜನಾಂಗಕ್ಕೆ ಸ್ನೇಹಿತರು ಯಾರು, ವೈರಿಗಳು ಯಾರು ಎನ್ನುವ ತಾರತಮ್ಯ ಜ್ಞಾನ ಉದಯವಾಗುತ್ತದೆ; ತಾನು ಒಂದು ಜನಾಂಗವಾಗಿ ಒಗ್ಗಟ್ಟಿನಿಂದ ಬದುಕದಿದ್ದರೆ ವ್ಯಕ್ತಿಗತವಾಗಿಯೂ ಸುಖ-ಸಮ್ಮಾನ-ಸಂಸ್ಕೃತಿಗಳಿಂದ ಬದುಕಲು ಸಾಧ್ಯವಿಲ್ಲ ಎನ್ನುವ ಪ್ರಜ್ಞೆ ಎಚ್ಚರವಾಗುತ್ತದೆ; ತಾನು ಇಷ್ಟು ದಿನ ಒಂದು ಜನಾಂಗವಾಗಿ ನಡೆದುಕೊಳ್ಳದೆ ಇದ್ದುದರಿಂದಲೇ ತನ್ನ ಜನಾಂಗದಿಂದ 15-16 ಕೋಟಿ ಒಡೆದು ಬೇರೆಯಾಗುವಂತಾಯಿತು, ಹಿಂದು ವಿರೋಧಿ ಮತೀಯರಾದರು, ಅದರಿಂದಲೇ ದೇಶ ಒಡೆಯಿತು ಎನ್ನುವ ಇತಿಹಾಸದ ಪಾಠ ಅವನ ಕಿವಿಯಲ್ಲಿ ಮೊರೆಯತೊಡಗುತ್ತದೆ; ಇಂದು ಜಗತ್ತಿನಲ್ಲಾಗಲಿ, ತನ್ನ ತಾಯ್ನಾಡಿನಲ್ಲೇ ಆಗಲಿ ತನ್ನ ಧರ್ಮಕ್ಕೆ, ತನ್ನ ಜನಾಂಗಕ್ಕೆ ಆಗುತ್ತಿರುವ ಅನ್ಯಾಯ-ಅನಾಚಾರಗಳಿಗೆಲ್ಲ ತಾನು ಒಂದು ಜನಾಂಗವಾಗಿ ಸಂಘಟಿತನಾಗಿಲ್ಲ, ಸಮರ್ಥನಾಗಿಲ್ಲ, ಸ್ವಾಭಿಮಾನಿಯಾಗಿಲ್ಲ, ಎನ್ನುವುದೇ ಕಾರಣ, ಎನ್ನುವ ಸಾಮಾಜಿಕ ಪ್ರಜ್ಞೆ ಪ್ರಜ್ವಲವಾಗುತ್ತದೆ; ಈ ನಿಷ್ಠುರ ಜಗತ್ತಿನಲ್ಲಿ ವ್ಯಕ್ತಿಗತವಾದ ಒಳ್ಳೆಯತನ, ಜ್ಞಾನಶೀಲಗಳನ್ನು ಮೆಚ್ಚುವವರು ಒಂದು ಹಿಡಿಯಷ್ಟು ಸಾತ್ವಿಕರಿರಬಹುದು, ಆದರೆ ರಾಷ್ಟ್ರಗಳು ಸರಕಾರಗಳು ಗೌರವಿಸುವುದು ಸಾಮರ್ಥ್ಯ ಉಳ್ಳ ಜನಾಂಗಗಳನ್ನು ಮಾತ್ರ, ಎನ್ನುವ ವ್ಯಾವಹಾರಿಕ ವಿವೇಕ ಅವನಲ್ಲಿ ಮೂಡುತ್ತದೆ….
ತನ್ನ ಈ ಹೊಸ ಜ್ಞಾನೋದಯಕ್ಕೆ ತಕ್ಕಂತೆ, ವಿವೇಕದ ಧ್ವನಿಗೆ ತಕ್ಕಂತೆ, ಇತಿಹಾಸದ ಪಾಠಕ್ಕೆ ತಕ್ಕಂತೆ, ತಾನು ಇನ್ನು ಮುಂದೆ ನಡೆದುಕೊಳ್ಳುವೆ ಎನ್ನುವ ವೀರನಿಷ್ಠೆ ಅವನಲ್ಲಿ ಜಾಗೃತವಾಗುತ್ತದೆ; ಅಪಮಾನ-ಅನ್ಯಾಯ-ಅಕ್ರಮಣಗಳನ್ನು ಸಹಿಸದ ಕೆಚ್ಚು ಎಚ್ಚರವಾಗುತ್ತದೆ; ತನ್ನ ಪ್ರಾಚೀನ ವೀರರ ಪೌರುಷ-ಪರಾಕ್ರಮಗಳು ಅವನ ರಕ್ತದಲ್ಲಿ ಮತ್ತೊಮ್ಮೆ ಮೊರೆಯತೊಡಗುತ್ತವೆ; ತನ್ನ ದೇಶದೊಳಗಿನ, ಹೊರಗಿನ ವೈರಿಗಳಿಗೆ ಸೇರಿಗೆ ಸವ್ವಾಸೇರಾಗಿ ಎದ್ದು ನಿಲ್ಲುತ್ತಾನೆ…
ತನ್ನ ದರ್ಮ, ದರ್ಶನ ವ್ಯಕ್ತಿಗತವಾದುದು ಮಾತ್ರ ಅಲ್ಲ, ರಾಷ್ಟ್ರಜೀವನದ ಎಲ್ಲ ಮುಖಗಳಲ್ಲಿಯೂ ಅದರ ಹೊಳಪು ಮಿಂಚಬೇಕು ಎಂದು ಅವನಿಗೆ ಅನಿಸುತ್ತದೆ; ರಾಜಕೀಯ-ಆರ್ಥಿಕ-ಸಾಮಾಜಿಕ-ಶೈಕ್ಷಣಿಕ-ಕಾರ್ಮಿಕ ಎಲ್ಲ ರಂಗಗಳಲ್ಲಿಯೂ ತನ್ನ ವಿಶಿಷ್ಟ ಜೀವನದೃಷ್ಟಿಯನ್ನು ಸ್ಥಾಪಿಸಬಯಸುತ್ತಾನೆ; ಇಂದು ಆ ಎಲ್ಲ ಕ್ಷೇತ್ರಗಳಲ್ಲಿ ತಾವೇ ತಾವಾಗಿ ಮೆರೆಯುವ ಅರೆಬೆಂದ ಪಾಶ್ಚಾತ್ಯ ವಾದಗಳು-ವಿಧಾನಗಳಿಗಿಂತ ತನ್ನ ದರ್ಶನ-ವಿಧಾನಗಳಲ್ಲಿ ಎಷ್ಟೋ ಪಾಲು ಹೆಚ್ಚು ಸತ್ವ ಇದೆ, ಅವನ್ನು ಲೋಕದೆದುರಲ್ಲಿ ಮಂಡಿಸಬೇಕು ಎಂದು ಅವನಿಗೆ ಅನಿಸುತ್ತದೆ; ಒಂದು ಮಹಾ ವಿಶ್ವಧ್ಯೇಯದಿಂದ ಅವನು ಪ್ರೇರಿತನಾಗುತ್ತಾನೆ; ಅದನ್ನು ಲೋಕಕ್ಕೆ ತಿಳಿಸಲು ತಾನು ಸಮರ್ಥನಾಗಬೇಕಾದರೆ, ತಾನು ಒಂದು ಅಜೇಯ ಜನಾಂಗವಾಗಿ, ರಾಷ್ಟ್ರವಾಗಿ ನಿಂತಾಗಲೇ ಸಾಧ್ಯ, ಆಗಲೇ ಆ ವಿಚಾರಕ್ಕೆ ಮಾನವಕುಲದ ಕಣ್ಣಲ್ಲಿ ಬೆಲೆ ಬರುವುದು, ಎನ್ನುವ ನಿರ್ಧಾರಕ್ಕೆ ಬರುತ್ತಾನೆ.
ಹೊರಗಿನವರ ಕೋಪಕ್ಕೆ ಕಾರಣ
ಜಗತ್ತಿನಲ್ಲಿ ಇಂದು ತಾವೇ ತಾವಾಗಿ ಮೆರೆಯುತ್ತಿರುವ ರಾಷ್ಟ್ರಗಳಿಗೆ ಇವೆಲ್ಲ ಹಾನಿಕರವೇ, ಅನುಮಾನವೇ ಇಲ್ಲ! ಇನ್ನೊಂದು ರಾಷ್ಟ್ರ ತಮಗೆ ಸರಿಸಮನಾಗಿ, ತಮಗಿಂತ ಮಿಗಿಲಾಗಿ, ಎದ್ದು ನಿಲ್ಲುವುದು ಎಂದೆಂದಿಗೂ ಅವುಗಳಿಗೆ ಅಪ್ರಿಯವೇ. ಇದು ಇಂದು-ನಿನ್ನೆಯ ಕತೆಯಲ್ಲ, ಇದುವರೆಗಿನ ಪ್ರಪಂಚದ ಎಲ್ಲ ಮಹಾ ಬಲಾಢ್ಯ ರಾಷ್ಟ್ರಗಳೂ (ಬಡಪಾಯಿ ಹಿಂದುರಾಷ್ಟ್ರ ಒಂದು ಬಿಟ್ಟು) ಇದೇ ರೀತಿ ನಡೆದುಕೊಂಡಿವೆ. ಇಂದು ಹಿಂದುವು ಒಂದು ಜನಾಂಗವಾಗಿ ಎದ್ದು ನಿಂತಿಲ್ಲ, ಅವನ ಜನಾಂಗ ಹರಿದು ಹಂಚಿಹೋಗಿದೆ, ಅದರಲ್ಲಿ ಸ್ವಾಭಿಮಾನವಿಲ್ಲ, ಸಾಮರ್ಥ್ಯವಿಲ್ಲ, ಹೀಗಗಿ ಹೊರ ಬಲಾಢ್ಯ ದೇಶಗಳವರು ಅವುಗಳ ಲಾಭ ಪಡೆಯುತ್ತಿದ್ದಾರೆ. ಹಿಂದುವನ್ನು ಅವನ ದೇಶವನ್ನು, ತಮ್ಮ ಕೈಗೊಂಬೆಯಾಗಿ ಕುಣಿಸುತ್ತಿದ್ದಾರೆ. ತಮ್ಮ ಕಟಪುತಳಿ ಗುಂಪು-ಪಕ್ಷಗಳನ್ನು ಈ ದೇಶಗೊಳಗೇ ಕಟ್ಟಲು ಅವರಿಗೆ ಸಾಧ್ಯವಾಗಿದೆ. ಅವುಗಳ ಸಹಾಯದಿಂದ ನಾಳೆ ಇಡೀ ದೇಶವನ್ನೇ ತಮ್ಮ ಕಾಲ್ಕೆಳಗೆ ಹಾಕಿಕೊಳ್ಳಬಹುದೆಂದು ಹವಣಿಸುತ್ತಿದ್ದಾರೆ ಹಿಂದುವು ಸಮರ್ಥ ಜನಾಂಗವಾಗಿ ಎದ್ದು ನಿಂತಲ್ಲಿ ಇವೆಲ್ಲಕ್ಕೂ ಅವರು ಎಳ್ಳುನೀರು ಬಿಡಬೇಕಾಗುತ್ತದೆ. ಎಂತಹ ಅನರ್ಥ ಅದು! ವ್ಯಕ್ತಿಗತವಾಗಿ ಒಳ್ಳೆಯವನಾದ ಹಿಂದುವು ಜನಾಂಗವಾಗಿ ಎದ್ದು ನಿಂತೊಡನೆ ಕೆಟ್ಟವನಾಗುವ ಗುಟ್ಟು ಇದು!
ವೈರಿಗಳು ಮೆಚ್ಚುವ ನಮ್ಮ ಧರ್ಮನಿಷ್ಠೆ
ಇದಕ್ಕೊಂದು ಸ್ಫುಟ ನಿದರ್ಶನ ಬ್ರಿಟಿಷರ ಆಳ್ವಿಕೆಯದು. ವಿಕ್ಟೋರಿಯ ಮಹಾರಾಣಿಯ ಘೋಷಣಾಪತ್ರವು ಈ ದೇಶದ ಪ್ರಜೆಗಳಿಗೆಲ್ಲ ಅವರವರ ಮತ, ಪೂಜೆಗಳನ್ನು ನಿರ್ವಿಘ್ನವಾಗಿ ನೆರವೇರಿಸಿಕೊಂಡು ಹೋಗಬಹುದೆಂಬ ಸ್ವಾತಂತ್ರ್ಯವನ್ನು ಘೋಷಿಸಿತು. (ಅದರಂತೆ ಬ್ರಿಟಿಷರು ನಡೆದುಕೊಂಡುದೂ ನಿಜ). ಅದರಿಂದ ಹಿಂದುಜನ ಸಂತುಷ್ಟರಾದರು. ಬ್ರಿಟಿಷರ ವಿಶಾಲ ಮನಸ್ಸನ್ನು ಹೊಗಳಿ ಹಾಡಿ ಕೊಂಡಾಡಿದರು. ರಾಣಿ ವಿಕ್ಟೋರಿಯ ಎಂದರೆ ಭವಿಷ್ಯ ಪುರಾಣದಲ್ಲಿ ಹೇಳಿರುವ ಸಾಕ್ಷಾತ್ ದೇವಿ ವಿಕಟೇಶ್ವರಿಯೇ ಸರಿ ಎಂದೂ ದೇಶಭಕ್ತಿಯಿಂದ ಇಂಗ್ಲೆಂಡ್ ರಾಣಿಯನ್ನು ಕಂಡರು. ದೊಡ್ಡ ದೊಡ್ಡ ಹಿಂದು ಧರ್ಮ ಪಂಡಿತರೂ, ಭಕ್ತರೂ ಸಹ ಸಮಾಧಾನದ ನಿಟ್ಟುಸಿರಿಟ್ಟರು. ಅನೇಕರು ಬ್ರಿಟಿಷರಿಗೆ ಸಹಾಯ ಮಾಡಲೂ ಮುಂದಾದರು. ಅದಕ್ಕೆ ಮುಂಚೆಯೂ ಬ್ರಿಟಿಷರ ಈ ನೀತಿ ಅವರಿಗೆ ಸಾಕಷ್ಟು ಲಾಭ ತಂದುಕೊಟ್ಟಿತ್ತು. ಅಮೀಚಂದ್ ಮನೆತನ ಆ ದಿನಗಳಲ್ಲಿ ಧರ್ಮ, ದಾನ, ದೈವಭಕ್ತಿಗಳಿಗೆಲ್ಲ ದೊಡ್ಡ ಹೆಸರು. ಅವರು ಬ್ರಿಟಿಷರಿಗೆ ಕೋಟ್ಯಾಂತರ ರೂಪಾಯಿ ಸಾಲ ಕೊಟ್ಟರು. 1857 ರ ಸ್ವಾತಂತ್ರ್ಯ ಸಮರದಲ್ಲಿ ಕೆಲವು ಕೋಟೆಗಳ ರಹಸ್ಯಗಳನ್ನು ಅವರಿಗೆ ಮುಟ್ಟಿಸಿದರು. ತಾವು ಮಾಡುತ್ತಿರುವ ಈ ಕೆಲಸ ಘೋರ ದೇಶದ್ರೋಹ, ಧರ್ಮದ್ರೋಹ ಎಂದು ಅವರಿಗೆ ಒಂದಿಷ್ಟೂ ಅನಿಸಲಿಲ್ಲ. ತಾವು ಒಳ್ಳೆಯವರಾಗಿದ್ದೇವೆ, ಧರ್ಮಿಷ್ಠರಾಗಿದ್ದೇವೆ ಎನ್ನುವ ನಂಬಿಕೆಯೇ ಅವರಿಗೆ. ಬ್ರಿಟಿಷರೂ ನಮ್ಮ ಧರ್ಮನಿಷ್ಠೆಗೆ ಧಕ್ಕೆ ತಂದಿಲ್ಲ, ಅವರೂ ಒಳ್ಳೆಯವರೇ, ಅವರಿಗೆ ಸಹಾಯ ಮಾಡುವುದರಲ್ಲಿ ತಪ್ಪೇನು? ಇದು ಅವರ ಸರಳ ತರ್ಕ. ಶತ್ರುಗಳಿಗೂ ಇದೇ ತರ್ಕನೇ ಬಹು ಅಪ್ಯಾಯಮಾನವಾಗಿ ತೋರಿದ್ದರಲ್ಲಿ ಆಶ್ಚರ್ಯವೇನಿಲ್ಲ!
ಮುಂಚಿನಿಂದಲೂ ಇದೇ ಕತೆ. ಸೋಮನಾಥದ ಜ್ಯೋತಿರ್ಲಿಂಗವನ್ನು ಭಂಜಿಸಲು ಬಂದ ಘಸ್ನಿಯ ಮಹಮ್ಮದನಿಗೆ ರಾಜಸ್ಥಾನದ ಮರುಭೂಮಿಯಲ್ಲಿ ದಾರಿ ತೋರಿಸಲು ಮುಂದೆ ಬಂದವರು ಪರಮ ಶಿವಭಕ್ತರೇ! ಶಿವಾಜಿಯನ್ನು ನಾಶ ಮಾಡಲು ಔರಂಗಜೇಬನ ಪರವಾಗಿ ಬಂದ ರಾಜಾ ಜಯಸಿಂಹನೂ ಮಹಾ ಶಿವಭಕ್ತನೇ. ಜೌರಂಗಜೇಬನು ಪಟ್ಟಕ್ಕೇರಿದ ಹೊಸದರಲ್ಲಿ ತೀರ ಖಾಯಿಲೆಯಾಗಿ ಪ್ರಜ್ಞಾಶೂನ್ಯವಾಗಿ ಮಲಗಿದ್ದಾಗ ಅವನಿಗೆ ಗುಣವಾಗಲೆಂದು ವಿಶೇಷ ಹರಕೆ-ಪೂಜೆ ಸಲ್ಲಿಸಿದವರು ಕಾಶಿಯ ವಿಶ್ವನಾಥನ ಪೂಜಾರಿಗಳೇ. ಮುಂದೆ ಲಾರ್ಡ್ ಇರ್ವಿನನ (ವೈಸರಾಯ್) ರಥವನ್ನು ಕಾಶಿಯ ಮಹಾಬೀದಿಗಳಲ್ಲಿ ಎಳೆದವರೂ ಅವರೇ. ಇತ್ತ 1818 ರಲ್ಲಿ ಬ್ರಿಟಿಷರಿಗೂ ಹಿಂದುಗಳಿಗೂ ಪುಣೆಯಲ್ಲಿ ಕೊನೆಯ ಕಾಳಗ ನಡೆಯುತ್ತಿದ್ದಾಗ ಬ್ರಿಟಿಷರಿಗೆ ಗೆಲುವಾಗಲೆಂದು ದೇವಾಲಯಗಳಲ್ಲಿ ಪೂಜೆ ನಡೆಸಿದವರೂ ಹಿಂದು ಅರ್ಚಕರೇ
ಇಂದಿಗೂ ಅದೇ ಕತೆ
ಇಂದೂ ಮನೆಯಲ್ಲಿ, ಗುಡಿಯಲ್ಲಿ ಅನೇಕರು ಶ್ರದ್ಧಾವಂತ ಹಿಂದುಗಳೇ. ದೈವಭಕ್ತರು, ಪಾಪ ಭೀರುಗಳೇ. ಆದರೆ ಅವರು ಸಾರ್ವಜನಿಕವಾಗಿ ತಾವು ಹಿಂದು ಎನ್ನುವ ಉಚ್ಛಾರವನ್ನು ಮಾಡರು. ತಮ್ಮ ಜನಾಂಗದ ಕಾರ್ಯಕ್ಕಾಗಿ ಕಿರುಬೆರಳನ್ನೂ ಎತ್ತರು. ತಮ್ಮ ಧರ್ಮದ ಬಂಧುಭಗಿನಿಯರು ಅನ್ಯಮತಗಳಿಗೆ ಬಲಿಯಾಗುತ್ತಿರುವ ಬಗ್ಗೆ ಅವರಿಗೆ ಯಾವ ಚಿಂತೆಯೂ ಇಲ್ಲ. ಪ್ರತಿಯಾಗಿ ಮತಾಂತರ ಗೊಳಿಸುವ ಈಸಾಯಿ ಮತಪ್ರಚಾರಕ ಸಂಸ್ಥೆಗಳನ್ನು ಅವರು ಹೊಗಳಿ ಹಾಡುವುದೂ ಉಂಟು. ರಾಜಕೀಯದಲ್ಲಿಯೂ ಹಾಗೆಯೇ. ಧರ್ಮವನ್ನು ಅಫೀಮೆಂದು ಧಿಕ್ಕರಿಸಿ, ತಾವು ಅಧಿಕಾರಕ್ಕೆ ಬಂದ ಎಲ್ಲ ದೇಶಗಳಲ್ಲೂ ಧರ್ಮದ ವಿರುದ್ಧ ಕತ್ತಿ ಎತ್ತಿರುವ ಕಮ್ಯುನಿಸ್ಟರಿಗೂ ಅಂತಹವರ ಬೆಂಬಲ ಇಲ್ಲದಿಲ್ಲ. ಮುಸ್ಲಿಂ ಲೀಗಿನೊಂದಿಗೆ ಒಪ್ಪಂದಕ್ಕೆ ಬರುವ ಪಕ್ಷಕ್ಕೆ ಬೆಂಬಲ ಕೊಡಲು ಅವರಿಗೆ ಕೆಟ್ಟೆನಿಸುವುದಿಲ್ಲ. ಅದಾವುದಕ್ಕೂ, ತಾವು ವ್ಯಕ್ತಿಗತವಾಗಿ ಒಳ್ಳೆಯ ಹಿಂದುಗಳಾಗಿರುವುದಕ್ಕೂ ಪರಸ್ಪರ ಯಾವ ವಿಸಂಗತಿಯೂ ಇಲ್ಲವೆಂದೇ ಅವರ ಭಾವನೆ. ಆ ಎಲ್ಲ ಹಿಂದು ವಿರೋಧಿ ಪಕ್ಷಪಂಗಡಗಳಿಗೂ ಇದು ಒಪ್ಪಿಗೆಯೆ!
ಆದರೆ ಹಿಂದುವು ಈಗಿರುವಂತೆ ವ್ಯಕ್ತಿಗತವಾಗಿ ಒಳ್ಳೆಯನಾಗಿರುವುದು ಬಿಟ್ಟು ಸಂಘಟಿತವಾಗಿ ಒಂದು ಜನಾಂಗವಾಗಿ ಎದ್ದು ನಿಂತಲ್ಲಿ ಮಾತ್ರ ಅವೆಲ್ಲಕ್ಕೂ ನಿಜಕ್ಕೂ ಕೋಪ ಬರುತ್ತದೆ. ಅವು ಉಗ್ರ ವಿರೋಧ ಮಾಡುತ್ತವೆ, ಮಾಡುವುದು ಅವುಗಳ ಧರ್ಮವೇ! ಮಾಡದಿದ್ದರೆ ಅವುಗಳ ಅಸ್ತಿತ್ವಕ್ಕೆ ಸಂಚಕಾರ ಬರುತ್ತದೆ!
ವ್ಯಕ್ತಿಧರ್ಮದ ಉರುಳಲ್ಲಿ ಸಮಾಜ
ಹಿಂದುವು ಒಂದು ಸಮರ್ಥ ಜನಾಂಗವಾಗಿ ಎದ್ದು ನಿಲ್ಲುವ ಅನರ್ಥವನ್ನು ತಪ್ಪಿಸಬೇಕಾದರೆ ಇರುವ ಎಲ್ಲಕ್ಕಿಂತ ಪರಿಣಾಮಕಾರಿಯಾದ ಉಪಾಯ ಎಂದರೆ, ಅವನ ವಿಶಾಲ ಮನಸ್ಸಿನ ಉರುಳನ್ನೇ ಅವನ ಕೊರಳಿಗೆ ಬಿಗಿಯುವುದು! ಅವನ ಹೃದಯದ ತಂತಿಯನ್ನು ಮಿಡಿಯುವ ಪರಮತಸಹನೆ, ವಿಶಾಲದೃಷ್ಟಿ, ಶಾಂತಿ, ಅಹಿಂಸೆ, ದೇಶದ ಐಕ್ಯ, ಈ ಭಾವನೆಗಳನ್ನೇ ಅವನ ವಿರುದ್ಧ ತಿರುಗಿಸುವುದು. ತಾನು ಒಂದು ಜನಾಂಗವಾಗಿ ಮೈ ಕೊಡವಿ ನಿಂತೊಡನೆ ತನ್ನ ಈ ಎಲ್ಲ ಪವಿತ್ರ ಹಿಂದುತತ್ವಗಳಿಗೂ ಎರವಾಗವೆನೆಂಬ ಭೀತಿಯನ್ನು ಅವನಲ್ಲಿ ಹುಟ್ಟಿಸುವುದು; ಅವನಲ್ಲಿಯೇ ತಾನು ಜಾತೀಯ, ಸಂಕುಚಿತ, ಹಿಂಸಾವಾದಿ, ದೇಶ ಮುರುಕ ಎಲ್ಲ ಆಗುವುದಾಗಿ… ತಾನು ದೇಶದ್ರೋಹಿ, ಧರ್ಮದ್ರೋಹಿ, ಹಿಂದುದ್ರೋಹಿ ಆಗುವುದಾಗಿ ಸ್ವಖಂಡನೆಯ ಭಾವ ಹುಟ್ಟಿಸುವುದು; ಅವನ ವ್ಯಕ್ತಿಗತ ಹಿಂದುತ್ವದ ನಿಷ್ಠೆಯ ಶೂಲಕ್ಕೇ ಅವನ ಸಾಮಾಜಿಕ ಜೀವನವನ್ನು ಏರಿಸುವುದು!
ಹೋಗಲಿ ವೈರಿಗಳಿಗಂತೂ ತಂತಮ್ಮ ಸ್ವಾರ್ಥ ಸಾಧನೆಗಾಗಿ ಈ ರೀತಿಯ ತಂತ್ರ ಹೂಡುವುದು ಸರಿಯೆ. ಆದರೆ ಸ್ವತಹ ಹಿಂದುಗಳೂ ಏಕೆ ಇದೇ ಧ್ವನಿಯಲ್ಲಿ ಮಾತನಾಡಬೇಕು? ತಮ್ಮ ನಾಶಕ್ಕಾಗಿ ವೈರಿಗಳು ಎಸೆಯುವ ಗಾಳಕ್ಕೆ ಇವರಾಗಿ ಬಾಯೊಡ್ಡುವುದು ಏಕೆ? ತಮ್ಮ ಸಮಾಜದ ಆತ್ಮನಾಶ ಮಾಡಿಕೊಳ್ಳಬೇಕೆಂದು ಯಾವ ಹಿಂದುವೂ ಇಚ್ಚಿಸಲಾರ. ಇಚ್ಚಿಸದಿದ್ದರೂ ವರ್ತನೆ ಮಾತ್ರ ಹಾಗೆಯೇ ಇದೆ. ಇದಕ್ಕೆ ಕಾರಣವೇನು?
ಉಚ್ಚ ಮಟ್ಟ, ಕಮ್ಮಿ ಕಷ್ಟ
ಮೊದಲನೆಯ ಮತ್ತು ಬಹು ಮುಖ್ಯವಾದುದು; ವ್ಯಕ್ತಿಗತವಾಗಿ ಒಳ್ಳೆಯ ಹಿಂದು ಆಗಿರುವುದಕ್ಕಿಂತ ಸಾಮಾಜಿಕ ಹಿಂದು ಆಗುವುದು ಬಹು ಕಷ್ಟದ ಕೆಲಸ! ತನ್ನ ಜನಾಂಗಕ್ಕೆ ಒದಗುವ ಸಂಕಟ-ಸಮಸ್ಯೆ-ಸವಾಲುಗಳಿಗೆಲ್ಲ ಅವರು ಎದೆಗೊಡಬೇಕು, ಹೋರಾಡಲು ಸಿದ್ಧನಾಗಬೇಕು, ಅದಕ್ಕಾಗಿ ಅಲಸ್ಯ ಬಿಡಬೇಕು, ಸ್ವಾರ್ಥ ಬಿಡಬೇಕು, ಜಾತೀಯ ಸಂಕುಚಿತ ಎದೆಲ್ಲ ಅನಿಸಿಕೊಳ್ಳಲು ಸಿದ್ಧನಾಗಬೇಕು – ಒಟ್ಟಿನಲ್ಲಿ ಇಲ್ಲದ ತಾಪತ್ರಯ! ವ್ಯಕ್ತಿಗತವಾಗಿ ಒಳ್ಳೆಯ ಹಿಂದು ಆಗಿರುವುದರಲ್ಲಿ ಯಾವ ಚಿಂತೆಯೂ ಇಲ್ಲ, ಯಾವ ಕಷ್ಟವೂ ಇಲ್ಲ, ಯಾರ ವಿರೋಧವೂ ಇಲ್ಲ.
ಉದಾಹರಣೆಗೆ: ಮಾತೃಭೂಮಿಯ ಕೆಲವು ಭಾಗಗಳನ್ನು ಶತ್ರುಗಳು ಆಕ್ರಮಿಸಿದರು, ತೀರ್ಥಕ್ಷೇತ್ರಗಳು ಭ್ರಷ್ಟವಾದವು, ದೇವಾಲಯಗಳು ಧ್ವಂಸವಾದವು ಎಂದು ಎಣಿಸೋಣ (ಎಣಿಸುವದೇನು, ಈಗಾಗಲೇ ಅಂತಹವು ಬೇಕಾದಷ್ಟಿವೆ!) ಆಗ ಹಿಂದುವು ಒಂದು ಜನಾಂಗವಾಗಿ, ಒಂದು ಸಮಗ್ರ ದೇಶದ ಸಂತಾನವಾಗಿ ಯೋಚಿಸಿದರೆ ಅವನು ಆ ಪವಿತ್ರ ಕ್ಷೇತ್ರಗಳನ್ನು ಬಿಡಿಸಿಕೊಳ್ಳಬೇಕೆಂದು ಅನಿಸುತ್ತದೆ. ಅದಕ್ಕಾಗಿ ಅವನು ಜನಜಾಗೃತಿ, ಅದಕ್ಕಿಂತ ಮುಖ್ಯವಾಗಿ ಸರಕಾರದ ಜಾಗೃತಿ, ಎಲ್ಲವನ್ನೂ ಮಾಡಬೇಕಾಗುತ್ತದೆ. ಸರಿ, ಅದರಲ್ಲಿ ರಾಜಕೀಯವೂ ಬರುತ್ತದೆ. ಇದೆಲ್ಲ ಕಷ್ಟ, ಬಹು ಕಷ್ಟ. ಅದೇ, ವ್ಯಕ್ತಿಗತವಾಗಿ ಒಳ್ಳೆಯ ಹಿಂದುವಾಗಿರುವುದು ಬಹು ಸುಲಭ. ದೇವರು ಆ ಯಾತ್ರಾ ಸ್ಥಳದಲ್ಲಿ, ಆ ದೇವಾಲಯದಲ್ಲಿ ಮಾತ್ರವೇ ಇಲ್ಲ. ಬೇರೆ ತೀರ್ಥಗಳಿಗೆ, ಗುಡಿಗಳಿಗೆ ಹೋದರಾಯಿತು. ನಮ್ಮ ದೇಶದಲ್ಲಿ ಇಂದಿಗೂ ಅವೇನೂ ಕಡಿಮೆ ಏನಿಲ್ಲ. ಅಷ್ಟೇಕೆ ಮನೆಯಲ್ಲೇ ದೇವಗೃಹವಿದ್ದೇ ಇದೆ. ಕೊನೆಗೆ ಶ್ರೀ ಶಂಕರಾಚಾರ್ಯರು ಹೇಳಿಯೇ ಇದ್ದಾರೆ: ತೀರ್ಥ ಪರಂ ಕಿಂ ಸ್ವಮನೋ ವಿಶುದ್ಧಂ ಎಲ್ಲಕ್ಕಿಂತ ಪವಿತ್ರವಾದ ತೀರ್ಥ ಯಾವುದು? ನಮ್ಮ ಮನಸ್ಸೇ ! ಅದಂತೂ ನಮ್ಮಲ್ಲೇ (?) ಇರುವಂತಹದೇ! ಈ ರೀತಿ ಹಿಂದುವು ವ್ಯಕ್ತಿಗತನಾದಷ್ಟೂ ಅವನ ಮನಸ್ಸೂ ವಿಶಾಲವಾಗುತ್ತದೆ. ಉಚ್ಛ ತತ್ಸಜ್ಞಾನದ ಮಟ್ಟಕ್ಕೆ ಏರುತ್ತದೆ, ಸ್ವಂತಕ್ಕೆ ಕಷ್ಟವೂ ಕಡಿಮೆಯಾಗುತ್ತದೆ.
ಆಧುನಿಕರ ಆಕ್ಷೇಪ
ಎರಡನೆಯ ಕಾರಣ ಒಂದಿದೆ. ಅದು ಈ ರೀತಿ ಕಷ್ಟ ತಪ್ಪಿಸಿಕೊಳ್ಳಲು ಉಪಾಯದಿಂದ ಬಂದುದಲ್ಲ. ಸಮಾಜದ ಸಮಸ್ಯೆ-ಸವಾಲುಗಳನ್ನು ಎದುರಿಸಲಾರದ ಹೇಡಿತನದಿಂದ ಬಂದುದಲ್ಲ. ಸ್ವಾರ್ಥವನ್ನು ಬಿಟ್ಟು ತ್ಯಾಗಕ್ಕೆ ಪೌರುಷಕ್ಕೆ ಸಿದ್ಧವಾಗಲಾರದ ಸೋತ ಮನಸ್ಸಿನಿಂದ ಬಂದಂತಹುದಲ್ಲ. ಇದಕ್ಕೆ ತೀರ ವಿರುದ್ಧ. ಅವರಲ್ಲಿ ಸಮಾಜಕ್ಕಾಗಿ ತಳಮಳ ಇದೆ, ಸವಾಲುಗಳನ್ನು ಎದುರಿಸುವ ಕೆಚ್ಚಿದೆ, ಎಲ್ಲ ಇದೆ. ಅಂತಹವರೂ ಅನೇಕರು ಹಿಂದು ಜನಾಂಗದ ಸಂಘಟನೆ ಎಂದರೆ ಮೈಮೇಲೆ ಹಾವು ಹರಿದಂತೆ ಹಾರುತ್ತಾರೆ. ತಾವು ವೈಯಕ್ತಿಕವಾಗಿ ಒಳ್ಳೆಯ ಹಿಂದಗಳಾಗಿ ಇರುತ್ತೇವೆ, ಆದರೆ ಸಾರ್ವಜನಿಕ ಜೀವನದಲ್ಲಿ ಬೇರಬೇರೆ ಸಿದ್ಧಾಂತಗಳನ್ನು ಸ್ವೀಕರಿಸುತ್ತೇವೆ ಎನ್ನುತ್ತಾರೆ. ಸಾರ್ವಜನಿಕ ಜೀವನದಲ್ಲಿ ಹಿಂದುತ್ವದ ಸ್ಪರ್ಶವೂ ಬೇಡ, ಎನ್ನುತ್ತಾರೆ. ಇದೇನು ಆಶ್ಚರ‌್ಯ ಎನ್ನಿಸಬಹುದು ನಮಗೆ. ಆದರೆ ಇದು ನಿಜ. ಅವರು ಆ ರೀತಿ ಹೇಳುವುದಕ್ಕೆ ಒಂದು ಬಲವಾದ ಕಾರಣವೂ ಇದೆ. ಹಿಂದುತ್ವದಲ್ಲಿ ಸಮಾಜದ ಸಮಸ್ಯೆಗಳನ್ನು – ಅದೂ ಇಂದಿನ ಯಂತ್ರ ನಾಗರಿಕತೆಯ ಸಂಕೀರ್ಣ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಇಲ್ಲ, ಅದಕ್ಕೆ ಬೇಕಾದ ವ್ಯಾಪಕವಾದ ಜೀವನ ಸಿದ್ಧಾಂತವಿಲ್ಲ, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುತ್ವದ ಆಧಾರದ ಮೇಲೆ ಜನಸಾಮಾನ್ಯರ ಬದುಕನ್ನು ಉನ್ನತಗೊಳಿಸಲು ಸಾಧ್ಯವಿಲ್ಲ ಎನ್ನುವ ಅವರ ದೃಢವಾದ ನಂಬಿಕೆಯೇ ಅದಕ್ಕೆ ಕಾರಣ. ಆ ಎಲ್ಲ ಕ್ಷೇತ್ರಗಳಲ್ಲಿ ಇಂದು ಸರ್ವಮಾನ್ಯವಾದ ರಾಜಕೀಯ ಸ್ವಾತಂತ್ರ್ಯ ಸಮಾನತೆ, ಬಂಧುತ್ವ, ಶೋಷಣೆ ಇಲ್ಲದ ಆರ್ಥಿಕ ವ್ಯವಸ್ಥೆ, ಮೇಲು-ಕೀಳು ಭಾವಕ್ಕೆ ಎಡೆ ಇಲ್ಲದ ಸಾಮಾಜಿಕ ನ್ಯಾಯ – ಇತ್ಯಾದಿ ಇವೆಲ್ಲವೂ ಪಾಶ್ಚಾತ್ಯರ ಅಮೂಲ್ಯ ಕಾಣಿಕೆಗಳು, ಅವುಗಳನ್ನೇ ನಾವೂ ಮೈಗೂಡಿಸಿಕೊಂಡರೆ ಮಾತ್ರ ನಾವು ಉದ್ಧಾರವಾಗಬಲ್ಲೆವು, ಅದು ಬಿಟ್ಟು ನಮ್ಮದೆಂಬ ಒಣ ಅಭಿಮಾನದಿಂದ ಹಿಂದುತ್ವಕ್ಕೆ ನೇತುಹಾಕಿಕೊಂಡರೆ ನಾವು ಜಗತ್ತಿನಲ್ಲಿ ಹಿಂದೆ ಬೀಳುವುದು, ನಾಶ ಹೊಂದುವುದು ಖಚಿತ; ಇದು ಅವರ ಪ್ರಾಮಾಣಿಕವಾದ ಅಭಿಮತ.
ಶೂನ್ಯ ಮನಸ್ಸು, ಭೂತದ ಮನೆ
ಇಂದಂತೂ ಆರ್ಥಿಕ ಮನೋಭಾವ ಬಹು ತೀವ್ರವಾಗಿದೆ. ಬಡತನದ ಬೇಗೆಯೂ ಹಬ್ಬಿದೆ. ಅದರ ಬಗ್ಗೆ ಪ್ರಚಾರ, ಘೋಷಣೆಗಳ ಧೂಳೂ ಸಾಕಷ್ಟು ಎದ್ದಿದೆ. ಆದರೆ ಆ ಸಮಸ್ಯೆಯನ್ನು ಬಗೆಹರಿಸುವುದು ಹಿಂದುತ್ವದಿಂದ ಆಗುವ ಕೆಲಸ ಅಲ್ಲ, ಬಡಜನೋದ್ಧಾರದ ಪ್ರೇರಣೆಯೂ ಅದರಲಿಲ್ಲ, ಆ ವಿಧಾನವೂ ಅದಕ್ಕೆ ಗೊತ್ತಿಲ್ಲ, ಆ ರೀತಿಯ ಚರಿತ್ರೆ-ಪರಂಪರೆಗಳೂ ಅದಕ್ಕಿಲ್ಲ ಎನ್ನುವುದು ಅನೇಕ ವಿದ್ಯಾವಂತ ಹಿಂದುಗಳ ಮನೋಭಾವ ಆಗಿದೆ. ಹಿಂದೆ ಯುರೋಪಿನಲ್ಲಿ, ಈಸಾಯಿ ಮತ ದರ್ಶನಗಳಿಂದ ಜನಸಾಮಾನ್ಯರ ಆರ್ಥಿಕದಾಸ್ಯ ಪರಿಹಾರವಾಗದು, ಪ್ರಜಾತಂತ್ರವೂ ಸೋತಿದೆ, ಎಂಬುದನ್ನು ಕಂಡ ವಿದ್ಯಾವಂತರು ಕಮ್ಯುನಿಸಂಗೆ ಶರಣಾದರು. ಇಂದು ನಮ್ಮ ದೇಶದಲ್ಲಿ ಅದೇ ಪ್ರಕ್ರಿಯೆ ಪ್ರಾರಂಭವಾಗಿದೆ. ಹಿಂದುತ್ವಕ್ಕೆ ಆ ವ್ಯಾಪಕ ದರ್ಶನ ಇಲ್ಲ, ಪ್ರಜಾತಂತ್ರವೂ ಸೋತಿದೆ, ಆದ್ದರಿಂದ ಕಮ್ಯುನಿಸಮೇ ಗತಿ, ಎನ್ನುವ ಮನೋಭಾವ ಅನೇಕ ವಿದ್ಯಾವಂತರಲ್ಲಿ ಬಲಿಯುತ್ತಿದೆ.
ಕೆಲವು ದಿನಗಳ ಹಿಂದೆ ರಾಮಕೃಷ್ಣಾಶ್ರಮದ ಸ್ವಾಮಿಗಳೊಬ್ಬರು ಭೇಟಿಯಾಗಿದ್ದಾಗ ಒಂದು ವಿಚಿತ್ರ ಸುದ್ದಿ ಹೇಳಿದರು: ಬಂಗಾಲದ ಅವರ ಆಶ್ರಮದ ಮಹಾವಿದ್ಯಾಲಯಗಳಲ್ಲಿ, ವಿದ್ಯಾರ್ಥಿ ಗೃಹಗಳಲ್ಲಿ, ಓದಿ ಬೆಳೆದು ನಂತರ ಬೇರೆ ಬೇರೆ ಮಹಾವಿದ್ಯಾಲಯಗಳಲ್ಲಿ ಅಧ್ಯಾಪಕರಾದಂತಹರೇ ಈಗ ನಕ್ಸಲೀಯರಾಗಿದ್ದಾರೆ! ಅದರ ಅರ್ಥವೂ ಅಷ್ಟೆ. ವ್ಯಕ್ತಿಗತವಾಗಿ ಹಿಂದು ದರ್ಶನ-ಧರ್ಮಗಳ ಸಂಸ್ಕಾರ ಸಿಕ್ಕಿದ ಮೇಲೆಯೂ ಸಾಮಾಜಿಕ ಜೀವನದ ಸಮಸ್ಯೆ-ಸವಾಲುಗಳನ್ನು ಎದುರಿಸಲು ಬೇಕಾದ ಹಿಂದು ಸಾಮಾಜಿಕ ತತ್ವಜ್ಞಾನದ ಅರಿವು ನಿಷ್ಠೆ ಅವರಲ್ಲಿ ಬೆಳೆದಿರಲಿಲ್ಲ. ತಮ್ಮ ಸುತ್ತಮುತ್ತ ಕಾಣುವ ಯಾವ ತತ್ವದಲ್ಲೂ ಸಾಮಾಜಿಕ ನ್ಯಾಯ, ಆರ್ಥಿಕ ಸಮತೆಗಳನ್ನು ತಂದುಕೊಡುವ ಸತ್ವವನ್ನು ಅವರು ಕಾಣಲಿಲ್ಲ. ಅವರ ಮನಸ್ಸಲ್ಲಿ ಶೂನ್ಯ ಆವರಿಸಿತು. ಆ ಜಾಗದಲ್ಲಿ ಚೀನೀಭೂತ ಬಂದು ಕುಣಿಯತೊಡಗಿತು. ಕೊನೆಗೆ ಅವರ ವ್ಯಕ್ತಿಗತ ಹಿಂದುತ್ವವೂ ಮಣ್ಣುಪಾಲಾಯಿತು. ತಾವು ಕಲಿತ ಆಶ್ರಮದ ವಿದ್ಯಾಲಯಗಳ ಮೇಲೆ ದಾಳಿ ಮಾಡುವ ಸ್ಥಿತಿಗೂ ಬಂದರು.
ಯಾರಿಗೂ ಬೇಡದ ಸಾಮಾಜಿಕ ಮುಖ
ಜೊತೆಗೆ ಹಿಂದುಧರ್ಮದ ಸಾಮಾಜಿಕ ಮುಖ ಎಂದೊಡನೆ ಇಂದಿನ ಜಾತಿಭೇದ, ಅಸ್ಪಶ್ಯತೆ, ಮಠ ಮಂದಿರಗಳಲ್ಲಿನ ಅನಾಚಾರ ಇವೇ ಕಣ್ಣಿಗೆ ಕಟ್ಟುತ್ತವೆ. ಆದ್ದರಿಂದ ಹಿಂದುಧರ್ಮವು ಸಮಾಜದಲ್ಲಿ ಅನ್ಯಾಯ, ಶೋಷಣೆ, ಬೇಧಭಾವಗಳನ್ನು ಎತ್ತಿಹಿಡಿಯುವಂತಹದು, ಇಂದಿನ ಎಲ್ಲ ಪ್ರಗತಿಪರ ಭಾವನೆಗಳಿಗೂ ವಿರುದ್ಧವಾದುದು, ಅದನ್ನು ರಾಷ್ಟ್ರಜೀವನದಿಂದ ದೂರ ಇಟ್ಟಷ್ಟೂ ಕ್ಷೇಮ, ಎನ್ನುವ ಕಲ್ಪನೆಯೂ ಆಧುನಿಕ ವಿದ್ಯಾವಂತರ ಮನಸ್ಸಿನಲ್ಲಿದೆ.
ಎಂದರೆ ವ್ಯಕ್ತಿಗತವಾಗಿ ಹಿಂದುತ್ವ ಒಳ್ಳೆಯದು, ಆದರೆ ಸಾಮಾಜಿಕವಾಗಿ ಅನಿಷ್ಟಕರ ಎನ್ನುವುದೇ ಅವರ ನಿಷ್ಕರ್ಷೆ. ಇಂಗ್ಲಿಷ್ ಕಾದಂಬರಿಕಾರ ಆರ್.ಎಲ್. ಸ್ಟೀವನ್ಸನ್‌ನ ಒಂದು ಪ್ರಸಿದ್ಧ ಕಾದಂಬರಿಯ ಪಾತ್ರಗಳಲ್ಲಿ ಹೇಳಬೇಕಾದರೆ, ವ್ಯಕ್ತಿಗತ ಹಿಂದುವು ಡಾ॥ಜೆಕಿಲ್, ಸಾಮಾಜಿಕ ಹಿಂದುವು ಮಿ. ಹೈಡ್. (ಒಬ್ಬನೇ ವ್ಯಕ್ತಿಯ ಎರಡು ವ್ಯಕ್ತಿತ್ವಗಳ ಪರಮಸಾತ್ವಿಕನಾದ ಡಾ॥ಜೆಕಿಲ್ ಮತ್ತು ಮಹಾನೀಚನಾದ ಮಿ. ಹೈಡ್ – ತಾಕಲಾಟದ ಚಿತ್ರಣ – ಆ ಕಾದಂಬರಿ)
ಒಟ್ಟಿನಲ್ಲಿ ಹಿಂದುವು ಸಾಮಾಜಿಕ ವ್ಯಕ್ತಿಯಾಗುವುದನ್ನು ವೈರಿಗಳಂತೆಯೇ ಸ್ವತಃ ಹಿಂದುಗಳೂ ನಾನಾ ಕಾರಣಗಳಿಗಾಗಿ ವಿರೋಧಿಸುತ್ತಾರೆ. ಅವನು ಸಾಮಾಜಿಕ ವ್ಯಕ್ತಿ ಆಗದೆ ಒಂದು ಸಶಕ್ತ ಸಮಾಜವಾಗಿ ಎದ್ದು ನಿಲ್ಲುವಂತಿಲ್ಲ, ಅವನು ಹಾಗೆ ಎದ್ದು ನಿಲ್ಲದೆ ಅವನ ಸಮಾಜವೇ ಉಳಿಯುವಂತಿಲ್ಲ, ಅವನ ಸಮಾಜ ಉಳಿಯದೆ ಅವನು ಹಿಂದು ವ್ಯಕ್ತಿಯಾಗಿಯೂ ಉಳಿಯಲಾರ, ಅವನ ವ್ಯಕ್ತಿಗತ ಒಳ್ಳೆಯತನವೂ ಉಳಿಯದು.
ನಿಜರೂಪ ಬೆಳಗಲಿ
ಈ ವಿಚಿತ್ರ ವಿಪತ್ಕರ ಸಂದಿಗ್ಧದಿಂದ ಹೊರಬರುವ ಮಾರ್ಗ ಒಂದೇ: ಹಿಂದು ಸಮಾಜ ಪುರುಷನಾಗಿ ಎದ್ದು ನಿಲ್ಲಲು ಅವನ ಮನಸ್ಸಿನಲ್ಲಿರುವ ಅಡ್ಡಿಆತಂಕಗಳನ್ನೆಲ್ಲ ದೂರಮಾಡುವುದು. ವ್ಯಕ್ತಿಗತವಾಗಿ ಒಳ್ಳೆಯವರಾದ, ಶ್ರದ್ಧಾವಂತರಾದ ಆದರೆ ಸಾಮಾಜಿಕವಾಗಿ ನಿಷ್ಕ್ರಿಯರಾದ, ಪೌರುಷಹೀನರಾದ, ಸ್ವಾರ್ಥನಿಷ್ಠರಾದ ಜನರಲ್ಲಿ ಮತ್ತೊಮ್ಮೆ ಕ್ರಿಯಾಚೇತನ, ಪೌರುಷ, ತ್ಯಾಗ ಭಾವನೆಗಳನ್ನು ನಿರ್ಮಿಸುವುದು; ವಿದ್ಯಾವಂತ ಯುವಕರಲ್ಲಿ ಹಿಂದು ದರ್ಶನದ ಮೇಲೆ ಬೌದ್ಧಿಕ ನಿಷ್ಠೆ ಬೆಳೆಸುವುದು; ಅವರಿಗೆ ಹಿಂದು ಚಿಂತನ ಧಾರೆಯಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಉದಾತ್ತವಾದ ವಿಚಾರಭಂಡಾರವಿದೆ, ಇಂದಿರನ ಅರೆಬೆಂದ ಪಾಶ್ಚಾತ್ಯವಾದಗಳಿಗಿಂತ ಅತಿ ವ್ಯಾಪಕವಾದ ಮಾನವಹಿತದ ಜ್ಞಾನ, ಪ್ರೇರಣೆಗಳು ಅದರಲ್ಲಿ ಅಡಗಿವೆ, ಇಂದು ಕಾಣುವ ಹಿಂದುತ್ವದ ಸಾಮಾಜಿಕ ಮುಖ ಅದರ ವಿರೂಪವಾದ ಮುಖ ಅಷ್ಟೆ, ಹಿಂದೊಮ್ಮೆ ಬೆಳಗಿದ್ದ ಅದರ ನಿಜವಾದ ಮುಖ ಇಂದಿನ ಎಲ್ಲ ಆಧುನಿಕ ಮಹಾ ಸಮಾಜಗಳಿಗಿಂತ ಹೋಲಿಕೆಗೂ ನಿಲುಕದಷ್ಟು ಉಜ್ವಲವಾಗಿತ್ತು, ಸುಂದರವಾಗಿತ್ತು, ಲೋಕಕ್ಕೆಲ್ಲ ಮಾದರಿಯಾಗಿತ್ತು ಎಂಬುದನ್ನು ತಿಳಿಸಿಕೊಡುವುದು; ಒಬ್ಬ ವಿದ್ಯಾರ್ಥಿ ಹೆಚ್ಚು ಏಕಾಗ್ರತೆಯಿಂದ ವಿದ್ಯಾ ಸಾಧನೆ ಮಾಡಬೇಕಾದರೆ, ಒಬ್ಬ ಕಾರ್ಮಿಕ ಹೆಚ್ಚಿನ ಕರ್ತವ್ಯನಿಷ್ಠೆಯಿಂದ ದುಡಿಯಬೇಕಾದರೆ, ಒಬ್ಬ ಉತ್ಪಾದಕ ಹೆಚ್ಚು ಜನಹಿತ ಪ್ರಜ್ಞೆಯಿಂದ ನಡೆಯಬೇಕಾದರೆ, ಒಬ್ಬ ರೈತ ಹೆಚ್ಚಿನ ಹುಮ್ಮಸ್ಸಿನಿಂದ ಬೆಳೆ ತೆಗೆಯಬೇಕಾದರೆ, ಒಬ್ಬ ಅಧ್ಯಾಪಕ ಹೆಚ್ಚಿನ ಕಳಕಳಿಯಿಂದ ಕಲಿಸಬೇಕಾದರೆ, ಒಬ್ಬ ಸೈನಿಕ ಹೆಚ್ಚು ಹೆಚ್ಚು ಕಲಿತನಗಳಿಂದ ಕಾದಬೇಕಾದರೆ, ಒಬ್ಬ ವರ್ತಕ ಹೆಚ್ಚು ಪ್ರಾಮಾಣಿಕನಾಗಿ ವ್ಯವಹರಿಸಬೇಕಾದರೆ, ಕೊನೆಗೆ ಒಬ್ಬ ರಾಜಕಾರಣಿ ದೇಶಹಿತವೊಂದನ್ನೇ ಕಣ್ಮುಂದೆ ಇಟ್ಟು ರಾಜಕೀಯ ನಡೆಸುವಂತಾಗಬೇಕಾದರೆ, ಅಷ್ಟೇಕೆ ಈ ನಾಡಿನ ಪ್ರತಿಯೊಬ್ಬ ಮಗನೂ ಮಗಳೂ ತನ್ನ ಪವಿತ್ರ ತಾಯ್ನಾಡಿನ ಮೇಲಿನ ಪ್ರೀತಿ-ಭಕ್ತಿಗಳಿಂದ, ತನ್ನ ಜನಾಂಗದ ಏಕತೆಯ ಅರಿವಿನಿಂದ, ತನ್ನ ಉನ್ನತ ಜೀವನಾದರ್ಶಗಳ ಮೇಲಿನ ಅಭಂಗ ನಿಷ್ಠೆಯಿಂದ ದುಡಿಯಲು, ಅಗತ್ಯ ಬಿದ್ದಲ್ಲಿ ದುಡಿಯಲು, ಸಿದ್ಧವಾಗಬೇಕಾದರೆ ಹಿಂದುತ್ವವೊಂದೇ ಆ ಚೈತನ್ಯವನ್ನು ಉಸುರಬಲ್ಲದು ಎಂಬುದನ್ನು ಮನಗಾಣಿಸಬೇಕು. ಅಷ್ಟು ಮಾತ್ರವಲ್ಲ, ಜಾತಿ ವೈಮನಸ್ಯ, ಅಸ್ಪಶ್ಯತೆ, ಧರ್ಮದ ಹೆಸರಲ್ಲಿ ನಡೆಯುವ ಇತರ ಅನ್ಯಾಯ-ಅನಾಚಾರಗಳು ಇವೆಲ್ಲ ನಮ್ಮ ಮೂಲ ಹಿಂದು ಚೇತನಕ್ಕೆ ವಿರುದ್ಧವಾದುವು; ನಿಸ್ವಾರ್ಥ ಪ್ರೇಮ, ದೀನದಲಿತರ ಉದ್ಧಾರ, ಜೀವಮಾತ್ರದ ಸುಖ, ಸಮಾಜದಲ್ಲಿ ಸಾಮರಸ್ಯ, ಉನ್ನತ ಮಾನವೀ ಮೌಲ್ಯಗಳ ಪೋಷಣೆ-ಇವೇ ಎಂದಿನಿಂದಲೂ ಹಿಂದು ಚೇತನದ ಮೂಲ ಸ್ವಭಾವ ಎಂಬುದನ್ನು ತೋರಿಸಿಕೊಡಬೇಕು.
ಇವೆಲ್ಲ ಆಗಬೇಕು ಸರಿಯೆ. ಆದರೆ ಹೇಗೆ? ಯಾರಿಂದ?
ಈ ವಿಚಾರ ಸರಿ ಎಂದು ಭಾವಿಸುವವರಿಂದ, ಈ ವಿಚಾರವನ್ನು ತಮ್ಮ ಬಾಳಿನ ಗುರಿಯಾಗಿ ಸ್ವೀಕರಿಸುವವರಿಂದ, ತಮ್ಮ ಈ ಗುರಿಯ ಭವ್ಯತೆಗೆ ತಕ್ಕಂತೆ ಭವ್ಯ ತ್ಯಾಗಕ್ಕೆ ಪೌರುಷಕ್ಕೆ ಸಿದ್ಧರಾಗುವವರಿಂದ, ಅಂತಹವರ ನಿಷ್ಠೆ-ಶ್ರಮಗಳಿಂದ, ಸಮಾಜದ ಎಲ್ಲ ಸ್ತರಗಳ ಜನರಲ್ಲಿ ಅವರು ತೋರುವ ನಿರ್ಮಲ ಪ್ರೀತಿ-ಸೇವೆಗಳಿಂದ, ಅವರು ನಿರ್ಮಿಸುವ ಜನಜಾಗೃತಿಯಿಂದ ಜನ ಸಂಘಟನೆಯಿಂದ, ಒಂದೇ ಶಬ್ದದಲ್ಲಿ-ಅಂತಹರ ಜೀವನದ ಜೀವಂತ ಮೇಲ್ಪಂಕ್ತಿಯಿಂದ!

– ಹೊ.ವೆ. ಶೇಷಾದ್ರಿ

   

Leave a Reply