ಹಿಂದು ಸೇವಾ ಪ್ರತಿಷ್ಠಾನ – ಒಂದು ವಿನೂತನ ಪ್ರಯೋಗ

ಕರ್ನಾಟಕ ; ಸಂಸ್ಥೆಗಳು - 2 Comments
Issue Date : 10.10.2013

ಹಿಂದು ಸೇವಾ ಪ್ರತಿಷ್ಠಾನವು 1980ರಲ್ಲಿ ಪ್ರಾರಂಭವಾಗಿ ಈಗ 33ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಹುಟ್ಟು ಹಾಗೂ ಬೆಳೆದು ಬಂದ ದಾರಿಯ ಪುನರ್ಮನನವೇ ಒಂದು ರೋಚಕ ಅನುಭವ. ಅಷ್ಟೇ ಅಲ್ಲ, ಮುಂದಿನ ಪಯಣದ ವೇಗವನ್ನು ಹೆಚ್ಚಿಸುವ ಇಂಧನವೂ ಹೌದು.

ಹಿಂದು ಸಮಾಜದ ಸೇವೆ, ಜಾಗೃತಿ, ಸಂಘಟನೆಯನ್ನೇ ಉದ್ದೇಶವಾಗಿಟ್ಟು ಕೊಂಡು ನಿಷ್ಕಾಮಕರ್ಮಿ ದಿವಂಗತ ಅಜಿತ ಕುಮಾರರು ಸ್ಥಾಪಿಸಿದ ಪ್ರತಿಷ್ಠಾನ ಸಮಾಜದ ವಿಭಿನ್ನಕ್ಷೇತ್ರಗಳಲ್ಲಿ ಪ್ರವೇಶಿಸಿ ಗಣನೀಯ ಸಾಧನೆಗೈದಿದೆ. ವಿಶೇಷವಾಗಿ ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಸೇವಾವ್ರತಿಗಳಾಗಿ ತಮ್ಮ ಮನೆಯಷ್ಟೇ ಅಲ್ಲ ಜಿಲ್ಲೆಯನ್ನೂ ಬಿಟ್ಟು ಪ್ರತಿಷ್ಠಾನ ನಿಗದಿಪಡಿಸಿದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸೇವಾ ಕಾರ್ಯಕ್ಕೆ ಹೊಸ ಆಯಾಮವನ್ನು ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಸಾವಿರಾರು ಸೋದರ – ಸೋದರಿಯರು ತಮ್ಮ ಸ್ವಂತದ ಕೆಲಸಗಳನ್ನು ನಿಭಾಯಿಸುತ್ತಲೇ ಹಿಂದು ಸೇವಾ ಪ್ರತಿಷ್ಠಾನದ ಜೊತೆ ಕೈ ಜೋಡಿಸಿದ್ದಾರೆ. ಬಿಡಿಬಿಡಿ ವ್ಯಕ್ತಿಗಳು, ಸಂಸ್ಥೆಗಳು ಕೂಡ ಹಿಂದು ಸೇವಾ ಪ್ರತಿಷ್ಠಾನದ ಘನ ಉದ್ದೇಶವನ್ನರಿತು ಹೆಗಲನ್ನು ಜೋಡಿಸಿದ್ದಾರೆ.
1990ರಲ್ಲಿ ಸ್ಥಾಪಕ ನಿರ್ದೇಶಕ ಅಜಿತ ಕುಮಾರರ ನೇತೃತ್ವದಲ್ಲಿ ಹಿಂದು ಸೇವಾ ಪ್ರತಿಷ್ಠಾನದ ದಶಮಾನೋತ್ಸವದ ಪ್ರಾರಂಭೋತ್ಸವ ಸಿರ್ಸಿಯಲ್ಲಿ ನಡೆಯಿತು. ನಂತರ ಕರ್ನಾಟಕದ ನೂರಾರು ಗ್ರಾಮ, ನಗರ, ವನವಾಸಿ ಕ್ಷೇತ್ರಗಳಲ್ಲಿ ಸಭೆಗಳು, ಸೇವೆಗಾಗಿ ನಡಿಗೆ, ಶೋಭಾಯಾತ್ರೆ, ಬೀದಿನಾಟಕಗಳು ಲಾವಣಿಗಳ ಮೂಲಕ ಸೇವಾ ಜಾಗೃತಿ ಮಾಡಲು ಸಾಧ್ಯವಾಯಿತು.
ಹಿಂದು ಸಮಾಜದ ಸೇವೆಗಾಗಿ ಸಾವಿರಾರು ಸಂಖ್ಯೆಯಲ್ಲಿ (1300ಕ್ಕೂ ಹೆಚ್ಚು ಉತ್ತರ ಕನ್ನಡ ಜಿಲ್ಲೆಯಿಂದ) ಸೇವಾವ್ರತಿಗಳು ಬಂದಿರುವುದು ಅಭಿಮಾನದ ಸಂಗತಿ. ಸಮಾರಂಭದಲ್ಲಿ ಪಾಲ್ಗೊಂಡ ಸೇವಾವ್ರತಿಗಳ ತಂದೆ ತಾಯಿಗಳಿಗೆ ತಮ್ಮ ಮಕ್ಕಳ ಸಾಧನೆ ಕಂಡು, ಕೇಳಿ ಆನಂದವಷ್ಷೇ ಅಲ್ಲ. ಆಶ್ಚರ್ಯವೂ ಆಯಿತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದು ಸೇವಾ ಪ್ರತಿಷ್ಠಾನದ ಹೆಸರು ಮನೆ ಮಾತಾಯಿತು.
ದಶಮಾನೋತ್ಸವದ ಕೊನೆಯ ಕಾರ್ಯಕ್ರಮ ಬೆಂಗಳೂರಿನಲ್ಲಿನಿಶ್ಚಯವಾಗಿತ್ತು. ಆದರೆ ವಿಧಿಯ ಅಟ್ಟಹಾಸ. 1990ರ ಡಿ. 3ರಂದು ಅಜಿತ ಕುಮಾರರು ತಮ್ಮ ಮೂವರು ಸಹಕಾರಿಗಳೊಂದಿಗೆ ರಸ್ತೆ ಅಪಘಾತದಲ್ಲಿ ಅಕಾಲ ಮರಣಕ್ಕೆ ತುತ್ತಾದರು. ಆಧಾರಸ್ತಂಭವೇ ಕುಸಿದು ಹೋದಂತಾಗಿ ಹಿಂದು ಸೇವಾ ಪ್ರತಿಷ್ಠಾನದ ಕಥೆ ಮುಗಿದಂತೆಯೇ ಎಂದು ಅಭಿಮಾನಿಗಳಿಗೆ ಅನಿಸಿದ್ದರೆ ಆಶ್ಚರ್ಯವೇನಿಲ್ಲ. ಆದರೆ ಹಿಂದು ಸೇವಾ ಪ್ರತಿಷ್ಠಾನ ತತ್ವ ನಿಷ್ಠವಾಗಿ ಬೆಳೆದುದರಿಂದ ಈ ಆಘಾತದಿಂದ ಕೂಡಲೇ ಚೇತರಿಸಿಕೊಂಡು ಮೈಕೊಡವಿ ಎದ್ದು ನಿಂತಿತು.
ದಶಮಾನೋತ್ಸವದ ಕೊನೆಯ ಕಾರ್ಯಕ್ರಮ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಧ್ವಿ ಉಮಾಭಾರತಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದು ಕೊಟ್ಟರು, ಇವರು ಸೇವಾವ್ರತಿಗಳ ಕಾರ್ಯ, ಓಡಾಟ, ನೀಡುವ ಸಂಸ್ಕಾರದಿಂದ ಸಮಾಜದಲ್ಲಿ ಆಗುತ್ತಿರುವ ಪರಿವರ್ತನೆ ತಿಳಿದು ‘ಸೇವಾವ್ರತಿಗಳು ಎಂದರೆ ಚಲತೆ, ಫಿರತೆ, ಮಂದಿರ ಹೈ’ (ಓಡಾಡುವ ದೇವಸ್ಥಾನಗಳು) ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಮತಿ ರುಕ್ಮಿಣಿ ಶ್ರೀಕಂಠನ್ ಮತ್ತು ಶ್ರೀಮತಿ ಸೀತಾ ಶಿವರಾಮನ್ ನೀಡಿದ 29×90 ಅಡಿ ನಿವೇಶನದಲ್ಲಿ ಅಜಿತಶ್ರೀ ಕಟ್ಟಡ ಪ್ರವೇಶೋತ್ಸವ 1996ರಲ್ಲಿ ನಡೆಯಿತು. ದಿ. ಜಸ್ಟಿಸ್ ಡಿ.ಎಂ.ಚಂದ್ರಶೇಖರರವರ ಅಧ್ಯಕ್ಷತೆಯಲ್ಲಿ ಇತರ ಗಣ್ಯರನ್ನೊಳಗೊಂಡ ಪ್ರವೇಶೋತ್ಸವ ಸಮಿತಿಯು ಅತ್ಯಂತ ಯಶಸ್ವಿಯಾಗಿ ಈ ಕಾರ್ಯವನ್ನು ನೆರವೇರಿಸಿತು. ಕಟ್ಟಡ ನಿರ್ಮಾಣಕ್ಕಾಗಿ ಅನೇಕರು ಉದಾರ ಧನಸಹಾಯ ನೀಡಿದರು. ಅಲ್ಲದೇ ಒಂದು ಚದರ ಅಡಿಗೆ ರೂ 300ರಂತೆ ಕೂಪನ್ ಮೂಲಕ ಧನ ಸಂಗ್ರಹ ಮಾಡಲಾಯಿತು ಸಮಾಜದ ಕೊಟ್ಟಕೊನೆಯ (ಹಿಂದುಳಿದ ಪ್ರದೇಶದ, ಕೂಲಿ ಮಾಡುವ ಜನಗಳಿಂದಲೂ ಸಹ) ವ್ಯಕ್ತಿಗಳಿಂದಲೂ ಹಣ ಸಂಗ್ರಹ ಮಾಡುವ ಸಮಯದಲ್ಲಿ ಪ್ರತಿಷ್ಠಾನವನ್ನು ಪರಿಚಯಿಸಲಾಯ್ತು, ನಾವೆಲ್ಲ ಹಿಂದುಗಳು, ನಾವೆಲ್ಲ ಬಂಧುಗಳು ಎಂಬುದನ್ನು ಮನವರಿಕೆ ಮಾಡಿಕೊಡಲು ಸಾಧ್ಯವಾದ ಈ ಕಾರ್ಯಕ್ರಮವು ಐತಿಹಾಸಿಕವೆಂದರೆ ಉತ್ಟ್ರೇಕ್ಷೆಯಾಗಲಾರದು.
2005ರಲ್ಲಿ ಪ್ರತಿಷ್ಠಾನದ ರಜತ ಮಹೋತ್ಸವದ ನಿಮಿತ್ತ ಸಂಘಟನೆಗೆ ಶಕ್ತಿ ತುಂಬುವ ದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 2006ರ ಜನವರಿ 14ರ ಸಂಕ್ರಾಂತಿವರೆಗೆ 9 ತಿಂಗಳ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಪ್ರಾಂತಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಗಣ್ಯವ್ಯಕ್ತಿಗಳನ್ನೊಳಗೊಂಡ 140 ರಜತ ಮಹೋತ್ಸವ ಸಮಿತಿಗಳನ್ನು ರಚಿಸಿ, ಎಲ್ಲಾ ಕಾರ್ಯಕ್ರಮಗಳನ್ನೂ ಸಮಿತಿ ಅಡಿಯಲ್ಲೇ ನಡೆಸಲಾಯ್ತು.
33 ವರ್ಷಗಳಲ್ಲಿ 4250 ಜನ ಸೇವಾವ್ರತಿಗಳಾಗಿ ಬಂದಿದ್ದಾರೆ. ಈ ಪೈಕಿ 3750 ಜನ ಮಹಿಳೆಯರು. ಮೂರು ವರ್ಷಕ್ಕೆಂದು ಬಂದವರು ಕೆಲವರು 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲ ಪೂರ್ವ ಸೇವಾವ್ರತಿಗಳ ಸಹ ಮಿಲನ ಕಾರ್ಯಕ್ರಮ ಶಿಕಾರಿಪುರ, ಸಾಗರ, ಶಿರಸಿ, ಮಂಗಳೂರು, ಶಿರಾ, ಬೆಂಗಳೂರು, ಹೊನ್ನಾವರಗಳಲ್ಲಿ ನಡೆದಿದೆ. ಪೂರ್ವ ಸೇವಾವ್ರತಿಗಳಲ್ಲದೆ ಊರಿನ ಗಣ್ಯರು ಕೂಡ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರ ಅನುಭವ ಪ್ರೇರಣಾದಾಯಕವಾಗಿತ್ತು. ಸೇವಾವ್ರತಿಗಳ 40 ದಿನಗಳ ತರಬೇತಿ, ಇದೊಂದು ಜೀವನ ಶಿಕ್ಷಣ ಎಂದು ತಮ್ಮ ಅನುಭವದಿಂದ ಹೇಳಿದವರು ಅನೇಕರು.
ಸಾಮಾಜಿಕ ಸಾಮರಸ್ಯ
ಹಿಂದು ಸಮಾಜಕ್ಕೆ ಅಂಟಿರುವ ದೊಡ್ಡ ಕಳಂಕ ಅಸ್ಪೃಶ್ಯತೆ ಮತ್ತು ಜಾತೀಯತೆ. ಇವನ್ನು ದೂರಮಾಡಿ ಸಮಾಜದಲ್ಲಿ ಸಾಮರಸ್ಯ ತರುವ ದೃಷ್ಟಿಯಿಂದ 17 ಜಿಲ್ಲೆಗಳಲ್ಲಿ ವಿಚಾರ ಸಂಕಿರಣಗಳು ನಡೆದಿವೆ. ತುಮಕೂರು, ಮೈಸೂರು, ಮಂಗಳೂರು, ಉಡುಪಿ, ಪುತ್ತೂರು, ಭಾಲ್ಕಿ (ಬೀದರ್), ಗಂಗಾವತಿ, ರಾಯಚೂರುಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸಕಲ ಸಮಾಜದ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಅನೇಕ ದಲಿತ ಮುಖಂಡರು, ಸಾಮಾಜಿಕ ಸಂಘಟನೆಗಳು, ಈ ಕಾರ್ಯದ ಅವಶ್ಯಕತೆಯನ್ನು ಮನಗಂಡು ಇದೊಂದು ಚಳುವಳಿಯ ರೂಪದಲ್ಲಿ ಶೀಘ್ರವಾಗಿ ನಾವೆಲ್ಲರೂ ಕೂಡಾ ಮಾಡಬೇಕಾದ ಕಾರ್ಯವೆಂದು ತಿಳಿಸಿದರು. ಭಾಲ್ಕಿಯ ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಬೇರೆ ಬೇರೆ ಜಾತಿಯ ಮುಖಂಡರು ಸೇರಿದಂತೆ 160 ಜನ ಭಾಗವಹಿಸಿದ್ದರು. ಪೂಜ್ಯ ಶ್ರೀ ಶ್ರೀ ಪಟ್ಟದ ದೇವರು ಸ್ವಾಮೀಜಿಯವರು ಕಾರ್ಯಕ್ರಮದಲ್ಲಿ ಪೂರ್ತಿ ಇದ್ದು ಸಹಪಂಕ್ತಿ ಭೋಜನದಲ್ಲಿ ತಾವೇ ಎಲ್ಲರಿಗೂ ಊಟ ಬಡಿಸಿದಾಗ ಆದ ಆನಂದ ವರ್ಣಿಸಲಸದಳ. ಅನೇಕರ ಕಣ್ಣಲ್ಲಿ ಆನಂದ ಬಾಷ್ಪ ಹರಿಯುತ್ತಿತ್ತು. ಸಮಾರೋಪ ಭಾಷಣದಲ್ಲಿ ಸ್ವಾಮೀಜಿಯವರು ಮಾತನಾಡುತ್ತಾ 12ನೇ ಶತಮಾನದಲ್ಲಿ ಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಎಲ್ಲಾ ಜಾತಿಯವರು ಯಾವುದೇ ಭೇದವಿಲ್ಲದೇ ಪಾಳ್ಗೊಳ್ಳುತ್ತಿದ್ದುದನ್ನು ಕೇಳಿದ್ದೆ, ಓದಿದ್ದೆ. ಇಲ್ಲಿ ಇವತ್ತು ಅದೇ ರೀತಿಯ ಅನುಭವ ಮಂಟಪದಲ್ಲಿ ನಾನು ಪಾಲ್ಗೊಂಡಂತೆ ಅನಿಸುತ್ತದೆ ಎಂದರು.
ಸೇವೆ ಸಾಂಸ್ಥಿಕ ರೂಪ ತಾಳದೆ ಅದೊಂದು ಆಂದೋಲನವಾಗಬೇಕು; ಸಮಾನ ಮನಸ್ಕ ಸಂಸ್ಥೆಗಳು, ಸಂಘಟನೆಗಳು ಒಟ್ಟಾಗಬೇಕು. ಸಮನ್ವಯವಾಗಬೇಕು ಎಂಬ ಹಂಬಲದಿಂದ ನೂರಾರು ಸ್ವಯಂಸೇವಾ ಸಂಸ್ಥೆಗಳನ್ನು, ಸೇವೆಯಲ್ಲಿ ತೊಡಗಿರುವ ಬಿಡಿಬಿಡಿ ವ್ಯಕ್ತಿಗಳನ್ನು ಒಟ್ಟಾಗಿ ಸೇರಿಸುವ ಪ್ರಯತ್ನ ಸಾಗಿತ್ತು. ಅವರುಗಳನ್ನು ವಿಶೇಷವಾಗಿ ಆಮಂತ್ರಿಸಿ ಪ್ರತ್ಯೇಕ ಗೋಷ್ಠಿಯನ್ನು ಕೂಡ ಏರ್ಪಡಿಸಲಾಯಿತು. ಸೇವಾವ್ರತಿಗಳ ಸಂಖ್ಯೆ ಹೆಚ್ಚಿಸಬೇಕೆಂದು ವಿಶೇಷ ಪ್ರಯತ್ನ ಮಾಡಲಾಯಿತು. ಪರಿಣಾಮವಾಗಿ ಅಕ್ಟೋಬರ್ 1 ರಿಂದ ನವೆಂಬರ್ 10ರವರೆಗೆ ಮಂಗಳೂರಿನ ಸಂಘ ನಿಕೇತನದಲ್ಲಿ ನಡೆದ ಮಹಿಳಾ ಸೇವಾವ್ರತಿ ಶಿಬಿರದಲ್ಲಿ 160 ಸ್ಥಾನಗಳಿಂದ 255 ಜನ ಯುವತಿಯರು ತರಬೇತಿ ಪಡೆದುಕೊಂಡು ಕಾರ್ಯಕ್ಷೇತ್ರಕ್ಕೆ ತೆರಳಿದರು.
ಜನ ಸಂಪರ್ಕ ಅಭಿಮಾನ ಹಾಗೂ ಸೇವಾನಿಧಿ ಸಂಗ್ರಹ
ಡಿಸೆಂಬರ್ 2ರಿಂದ 16ರವರೆಗೆ ಪ್ರಾಂತದ ಎಲ್ಲ ಜಿಲ್ಲೆಗಳಲ್ಲಿ ಸೇವಾ ಸಂದೇಶ ತಲುಪಿಸುವ ಸಲುವಾಗಿ ನೂರಾರು ಗ್ರಾಮಗಳಲ್ಲಿ ಸಾವಿರಾರು ಕಾರ್ಯಕರ್ತರು ಈ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಮಾಜದ ಸಾಮಾನ್ಯ ಕೂಲಿಕಾರ ಮತ್ತು ರಿಕ್ಷಾ ಡ್ರೈವರ್ ಮೊದಲುಗೊಂಡು ಅತ್ಯಂತ ಪ್ರತಿಷ್ಠಿತ ವ್ಯಕ್ತಿಗಳನ್ನು ಸಂಪರ್ಕ ಮಾಡಲಾಯಿತು.
ಗ್ರಾಮಗಳು, ನಗರಗಳು ಸೇರಿದಂತೆ 1000 ಸ್ಥಾನಗಳಲ್ಲಿ ಒಂದು ಲಕ್ಷಕ್ಕೂ ಮೀರಿ ಜನ ಸಂಪರ್ಕ ಆಯಿತು. ಈ ಸಂದರ್ಭದಲ್ಲಿ ಸೇವೆಯ ಮಹತ್ವ, ಪ್ರತಿಷ್ಠಾನದ ಸೇವಾ ಕಾರ್ಯದ ಮಾಹಿತಿ ನೀಡಿ ಅವರುಗಳು ಯಾವರೀತಿಯಲ್ಲಿ ಪಾಲ್ಗೊಳ್ಳಬಹುದೆಂಬ ಬಗ್ಗೆ ತಿಳಿಸುವ ಪ್ರಯತ್ನ ಯಶಸ್ವಿಯಾಯಿತು. ಇದೇ ಸಂದರ್ಭದಲ್ಲಿ 10, 50, 100, 500, 1000 ರೂಪಾಯಿಗಳ ಕೂಪನ್‌ಗಳ ಮೂಲಕ ಸೇವಾ ನಿಧಿ ಸಂಗ್ರಹಿಸಲಾಯಿತು. ರಿಕ್ಷಾ ಡ್ರೈವರ್‌ಗಳು, ಕೂಲಿಕಾರರು ಸಹಿತ ಈ ನಿಧಿಗೆ ದೇಣಿಗೆ ನೀಡಿರುವುದು ವಿಶೇಷ, ಶಾಲಾ ಕಾಲೇಜುಗಳಲ್ಲಿ ಸಹ ವಿದ್ಯಾರ್ಥಿಗಳಿಂದ ನಿಧಿ ಸಂಗ್ರಹ ಮಾಡಲಾಯಿತು.
ರಜತ ಮಹೋತ್ಸವದ ಸಮಾರೋಪ ಸಮಾರಂಭವು 2006ರ ಜನವರಿ 22ರಂದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ನಡೆಯಿತು. 21ರಂದು ಪ್ರತಿಷ್ಠಾನದ ಪೂರ್ಣ ಪರಿಚಯ ಮಾಡಿಕೊಂಡುವಂತಹ ಸೇವಾ ದರ್ಶನ ಪ್ರದರ್ಶಿನಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನ, ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಿರುವ ಹಿರೇಮಗಳೂರು, ಧರ್ಮಸ್ಥಳ, ಬೆಂಗಳೂರಿನ ಸರ್ಕಲ್ ಮಾರಮ್ಮ ದೇವಸ್ಥಾನಗಳ ಪ್ರದರ್ಶಿನಿಯನ್ನು ಜೋಡಿಸಲಾಗಿತ್ತು. ಅದಲ್ಲದೆ ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆಯ ದೃಷ್ಟಿಯಿಂದ ಅರಣ್ಯ ಇಲಾಖೆಯನ್ನೂ ವ್ಯಸನ ಮುಕ್ತಿ, ಮಹಿಳಾ ಸ್ವಾವಲಂಬನೆ, ಗ್ರಾಮಾಭಿವದ್ಧಿಗೆ ಸಂಬಂಧಿಸಿದಂತೆ ಬೆಳ್ತಂಗಡಿಯ ನಾಗರಿಕ ಸೇವಾ ಸಮಿತಿಯನ್ನೂ ಜೋಡಿಸಿಕೊಳ್ಳಲಾಗಿತ್ತು. ಹುಬ್ಬಳ್ಳಿಯ ಸೇವಾ ಭಾರತಿ, ಬೀದರ್, ಗುಲ್ಬರ್ಗದ ಧರ್ಮ ಜಾಗರಣ ವೇದಿಕೆ, ನಂದಗೋಕುಲ, ಶ್ರೀ ದತ್ತ ಬಾಲಾಶ್ರಮ ಗಾಣಗಾಪುರ, ಮೈಸೂರಿನ ವಿಜಯ ಫೌಂಡೇಶನ್ ಇತ್ಯಾದಿ ಸಂಘಟನೆಗಳ ಪ್ರದರ್ಶನಿಯನ್ನೂ ಅಳವಡಿಸಲಾಗಿತ್ತು. ಏಕರಸ ಭಾರತ ಪುಸ್ತಕ ಕೂಡ ಬಿಡುಗಡೆಯಾಯಿತು.
ಹೀಗೆ ರಜತ ಮಹೋತ್ಸವ ಕೇವಲ ಪ್ರತಿಷ್ಠಾನದ ಒಂದು ಕಾರ್ಯಕ್ರಮವಾಗದೆ ಇಡೀ ಸಮಾಜವನ್ನು ಜೊತೆಗೂಡಿಸಿಕೊಂಡು ಸೇವೆಯನ್ನು ಆಂದೋಲನ ಮಾಡುವ ಒಂದು ವಿಶೇಷ ಪ್ರಯತ್ನವಾಯಿತು. ಹಿಂದು ಸೇವಾ ಪ್ರತಿಷ್ಠಾನದಡಿಯಲ್ಲಿ ಕೆಳಕಂಡಂತೆ ವಿವಿಧ ಪ್ರಕಲ್ಪಗಳು ಕಾರ್ಯನಿರ್ವಹಿಸುತ್ತಿವೆ.
* ಪ್ರಸನ್ನ ಆಪ್ತ ಸಲಹಾ ಕೇಂದ್ರ
ಅಂದು ಸರಳವಾಗಿದ್ದ – ಇಂದು ಬದುಕು ಸಂಕೀರ್ಣವಾಗುತ್ತಿದೆ. ಹೊಟ್ಟೆ ತುಂಬ ಅನ್ನ, ಮೈತುಂಬ ಬಟ್ಟೆ, ಪಾಲಿಗೆ ಬಂದದ್ದೇ ಪಂಚಾಮೃತ. ಎಲ್ಲಾ ದೇವರ ಆಟ ಎಂದು ತಿಳಿದು ನೆಮ್ಮದಿಯ ಬದುಕು ಸಾಗಿಸುತ್ತಿದ್ದ ಕಾಲ ದೂರವಾಗಿದೆ. ಇಂದಿನ ಜನಾಂಗ ಎಲ್ಲಕ್ಕಿಂತ ಮೊದಲು ಹಣ-ಅಂತಸ್ತು-ಸ್ಥಾನ-ಮಾನ-ಗೌರವಗಳನ್ನು ಸಂಪಾದಿಸಲು ಇಷ್ಟಪಡುತ್ತದೆ. ಇದರಿಂದಾಗಿ ಹೆಚ್ಚೆಚ್ಚು ಜನ ನಿರಾಶೆ, ಬೇಸರ, ದುಃಖ, ಆತಂಕ, ಕೋಪ, ತಾಪಗಳಿಗೆ ಒಳಗಾಗುತ್ತಿದ್ದಾರೆ. ಶೇ. 70ರಷ್ಟು ಜನ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಆರೋಗ್ಯ ಕೇಂದ್ರಗಳೆಲ್ಲವೂ ವಿವಿಧ ರೋಗಿಗಳಿಂದ ಗಿಜಿಗುಟ್ಟುತ್ತಿವೆ. ಬಹುತೇಕ ಜನರಿಗೆ ಮಾನಸಿಕ ನೆಮ್ಮದಿ ಮರೀಚಿಕೆಯಾಗುತ್ತಿದೆ. ಏನೋ ಸಾಲದು, ನನಗೆ ದೊರಕಿರುವುದು ಚೆನ್ನಾಗಿಲ್ಲ. ಭವಿಷ್ಯದಲ್ಲಿ ಕಷ್ಟನಷ್ಟಗಳೇ ಹೆಚ್ಚು. ನಾನು ವಿಫಲನಾಗಬಹುದು. ನನಗೆ ಯಾರೂ ಇಲ್ಲ ಎಂಬ ನಕಾರಾತ್ಮಕ ಆಲೋಚನೆಗಳೇ ಜನರ ಮನಸ್ಸನ್ನು ತುಂಬಿವೆ.
1979-80ರಲ್ಲಿ ಅಜಿತಕುಮಾರ್ ಅವರು ಈ ಸಮಸ್ಯೆಯ ಪರಿಹಾರಕ್ಕಾಗಿ, ಅಸಹಾಯಕರ ಮನಸ್ಸಿನಲ್ಲಿ ಭರವಸೆಯ ಮಿಂಚು ಮಿನುಗಲು, ಪ್ರಸನ್ನ ಚಿತ್ತರಾದವರ ಮನಸ್ಸು ಪ್ರಸನ್ನತೆಯಿಂದ ಅರಳಲು, ದುಃಖದಿಂದ ಕಪ್ಪಿಟ್ಟ ಮುಖದಲ್ಲಿ ನಗೆ ಮಲ್ಲಿಗೆ ಮೂಡಿಸಲು ಸ್ವಯಂಸೇವಕ ಪಡೆಯನ್ನು ತಯಾರು ಮಾಡಲು ನಿರ್ಧರಿಸಿದರು.
ಹೊಂಬೇಗೌಡ ಬಾಲಕಿಯ ಪ್ರೌಢಶಾಲಾ ಅಧ್ಯಾಪಕಿಯಾಗಿದ್ದ ಶ್ರೀಮತಿ ಎಂ.ಸಿ. ಪಂಕಜಾ ಅವರನ್ನು ಸಂಪರ್ಕಿಸಿದರು. ಆಪ್ತಸಲಹೆ ಹಾಗೂ ಸಮಾಧಾನ ನೀಡುವ ಆಪ್ತ ಸಮಾಲೋಚಕರ ತರಬೇತಿ ಕಾರ್ಯಕ್ರಮವನ್ನು ರೂಪಿಸಲು ಕೇಳಿಕೊಂಡರು. ಆಗ ನಿಮಾನ್ಸಿನ ಪ್ರಸಿದ್ಧ ವೈದ್ಯರನ್ನೊಳಗೊಂಡ ಪ್ರಸನ್ನ ಆಪ್ತ ಸಲಹಾ ಕೇಂದ್ರ ಪ್ರಾರಂಭವಾಯಿತು.
ಇದರ ಕಾರ‌್ಯದಿಂದಾಗಿ ಅಸಂಖ್ಯಾತ ಜನರು ಜೀವನದ ದುಃಖ ಮರೆತು ಒಳ್ಳೆಯ ಬಾಳು ಬಾಳುತ್ತಿದ್ದಾರೆ. ಈ ಕಾರ‌್ಯವನ್ನು ಗುರುತಿಸಿದ ರಾಜ್ಯ ಸರ್ಕಾರ ಶ್ರೀಮತಿ ಎಂ.ಸಿ.ಪಂಕಜಾ ಹಾಗೂ ಡಾ॥ಸಿ.ಆರ್. ಚಂದ್ರಶೇಖರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
* ಮಕ್ಕಳ ಮಾರ್ಗದರ್ಶಿ ಕೇಂದ್ರ
ಮಕ್ಕಳ ಮಾರ್ಗದರ್ಶಿ ಕೇಂದ್ರವು ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ತನ್ನ ಕಾರ‌್ಯಕ್ರಮಗಳನ್ನು ನಿರ್ವಹಿಸುತ್ತಾ ಬಂದಿದೆ. ಉಪಾಧ್ಯಾಯರುಗಳು, ಮಾತಾಪಿತರು, ವೈದ್ಯರು ಹಾಗೂ ಮಾನಸಿಕ ಕೇಂದ್ರಗಳು ಮಾನಸಿಕ ತೊಂದರೆ ಮತ್ತು ವಿದ್ಯಾಭ್ಯಾಸದ ಕೊರತೆಯಿರುವ ಮಕ್ಕಳನ್ನು ಗುರುತಿಸಿ ಕಳುಹಿಸಿದ ಮಕ್ಕಳಿಗೆ ಈ ಕೇಂದ್ರವು ಉಚಿತವಾಗಿ ಮಾರ್ಗದರ್ಶನ ನೀಡುತ್ತಾ ಬಂದಿದೆ. ಈ ಕೇಂದ್ರವು ಪ್ರತಿ ಶನಿವಾರ ಮಧ್ಯಾಹ್ನ 2 ರಿಂದ ಸಂಜೆ 5ರವರೆಗೂ ತನ್ನ ಕಾರ‌್ಯಕ್ರಮಗಳನ್ನು ನಿರ್ವಹಿಸುತ್ತದೆ. 2011-12ರ ಸಾಲಿನಲ್ಲಿ ಈ ಕೇಂದ್ರದಲ್ಲಿ ಸುಮಾರು 199 ಮಕ್ಕಳಿಗೆ ಡಾ॥ಮಾಲವಿಕಾ ಕಪೂರ್ ಇವರು ಸೂಕ್ತ ಮಾರ್ಗದರ್ಶನವನ್ನು ನೀಡಿದ್ದಾರೆ.
* ಅರುಣ ಚೇತನ
5.12.1987ರಂದು 5 ಮಕ್ಕಳಿಂದ ಪ್ರಾರಂಭವಾದ ಶಾಲೆಯಲ್ಲಿ ಪ್ರಸ್ತುತ 190 ಮಕ್ಕಳು ಸೇವೆಯನ್ನು ಪಡೆಯುತ್ತಿದ್ದಾರೆ. ಮೂಲ ಉದ್ದೇಶ ವಿಶೇಷ: ವಿಕಲಾಂಗ ಮಕ್ಕಳಿಗೆ ಶಿಕ್ಷಣ ನೀಡುವುದು, ಪೋಷಕರ ಹೊರೆಯನ್ನೂ ಕಡಿಮೆ ಮಾಡುವುದು, ಮಕ್ಕಳನ್ನೂ ಸ್ವಾವಲಂಬಿಯಾಗಿ ಜೀವನ ನಡೆಸಲು ಬೇಕಾದ ಎಲ್ಲಾ ಸೌಲಭ್ಯ ಮತ್ತು ಸೌಕರ್ಯಗಳನ್ನು ಒಂದೆಡೆಯಲ್ಲಿ ಒದಗಿಸುವುದು, ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಸುಮಾರು 44 ಜನ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶಾಲೆಯಲ್ಲಿ ದೈಹಿಕ ಚಿಕಿತ್ಸೆ (Physio Therapy) ವಾಕ್ ಚಿಕಿತ್ಸೆ (Speech Therapy) ಆಕ್ಯೂಥೆರಪಿ ಯೋಗ ಚಿಕಿತ್ಸೆ, ವಿಶೇಷ ಶಿಕ್ಷಣ (Non formal Special Education) ವೃತ್ತಿ ಪೂರ್ವ (Pre-Vocational) ಹಾಗೂ ವೃತ್ತಿಪರ ತರಬೇತಿ (Vocational Taining) ಸಂಗೀತ, ಹಾಡು, ನೃತ್ಯ ಮತ್ತು ಕ್ರೀಡೆಗಳಲ್ಲಿ ತರಬೇತಿ ನೀಡುತ್ತಿದೆ. ಮಕ್ಕಳಿಗೆ ಪೌಷ್ಠಿಕವಾದ ಆಹಾರ ಪಾನೀಯ ನೀಡಲಾಗುತ್ತಿದೆ.
ಕರ್ನಾಟಕ ಸರ್ಕಾರದ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ದಿನಾಂಕ 3.12.2011ರಂದು ಕಂಠೀರವ ಸ್ಟೇಡಿಯಂನಲ್ಲಿ ‘ವಿಶ್ವ ವಿಕಲ ಚೇತನದ’ ದಿನಾಚರಣೆಯಂದು ‘ಅರುಣ ಚೇತನ’ ಶಾಲೆಯು ವಿಕಲಚೇತನರ ಶ್ರೇಯೋಭಿವದ್ಧಿಗಾಗಿ ಸಲ್ಲಿಸುತ್ತಿರುವ ಉತ್ತಮ ಸೇವೆಯನ್ನು ಪರಿಗಣಿಸಿ ‘ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಿತು. ಇದಲ್ಲದೇ ಇಲ್ಲಿನ ಮಕ್ಕಳು ನೃತ್ಯ, ಕ್ರೀಡೆಗಳಲ್ಲಿಯೂ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
* ಯೋಗ ಭಾರತಿ
ಹಿಂದು ಸೇವಾ ಪ್ರತಿಷ್ಠಾನದ ಪ್ರಕಲ್ಪವಾದ ‘‘ಯೋಗಭಾರತಿ’’ಯಲ್ಲಿ ‘‘ಯೋಗಶ್ರೀ’’ ಒಂದು ಪ್ರಮುಖ ಯೋಗಕೇಂದ್ರ. ಇಲ್ಲಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಯೋಗ, ಧ್ಯಾನ, ಪ್ರಾಣಾಯಾಮ ಮತ್ತು ಇತರ ಚಟುವಟಿಕೆಗಳು ನಡೆಯುತ್ತಿವೆ. ‘ಯೋಗಶ್ರೀ’ಯ ಕಟ್ಟಡವಾಗಿ 15 ವರ್ಷಗಳಾದವು. ಭಗಿನಿ ವನಿತರವರು ಈ ಕೇಂದ್ರದ ಮಾರ್ಗದರ್ಶಕರಾಗಿದ್ದಾರೆ.
ಇಲ್ಲಿ ಯೋಗಶಿಕ್ಷಣ ಪಡೆದು ಶಿಕ್ಷಕ ಶಿಕ್ಷಕಿಯರಾಗಿ ಸೇವೆಸಲ್ಲಿಸುತ್ತಿರುವವರು ಸುಮಾರು 28 ಮಂದಿ ಇದ್ದಾರೆ. ‘ಯೋಗಸೌರಭ’ ಎಂಬ ಸಮಿತಿ ಇದೆ. ಇದರಲ್ಲಿ 45 ಮಂದಿ ಸದಸ್ಯರಿದ್ದಾರೆ. ಸಾವಿರಾರು ಜನ ಯೋಗಶಿಕ್ಷಣ ಪಡೆದಿದ್ದಾರೆ.
* ಪಂಚವಟಿ ಯೋಗಾನುಸಂಧಾನ ಕೇಂದ್ರ: ಮರಸೂರು ಗೇಟ್ (ಚಂದಾಪುರದ ಸಮೀಪ)
ಇಂದಿನ ಆಹಾರ ಪದ್ಧತಿ, ನಾವು ಬದುಕುತ್ತಿರುವ ರೀತಿಯಿಂದಾಗಿ ದಿನೇ ದಿನೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ನಮ್ಮ ಜೀವನ ಪದ್ಧತಿಯನ್ನೂ ಉತ್ತಮ ಪಡಿಸಿಕೊಳ್ಳಲು ನಮಗೆ ಯೋಗ ತುಂಬಾ ಅವಶ್ಯಕವಾಗಿದೆ ಅಂತೆಯೇ ಪಂಚವಟಿಯಲ್ಲಿ ನಿರಂತರವಾಗಿ ವಿವಿಧ ಶಿಬಿರಗಳ ಮೂಲಕ ಯೋಗಾಸನ, ಪ್ರಾಣಾಯಾಮ, ಧ್ಯಾನ, ಮೌನವ್ರತ, ಜಲನೇತಿ, ಸೂತ್ರನೇತಿ, ಉಡ್ಡಯಾನ ಬಂಧ ಮುಂತಾದ ತರಬೇತಿಗಳನ್ನು ನೀಡಲಾಗುತ್ತಿದೆ.
ಪಂಚವಟಿಯಲ್ಲಿನ ಔಷಧೀಯ ಗಿಡಗಳನ್ನೊಳಗೊಂಡ ಮನಸ್ಸಿಗೆ ಮುದನೀಡುವ ಲಲಿತವನ ವಿವಿಧ ಜೀವ ರಕ್ಷಕ ಔಷಧಿಗಳನ್ನು ಸಂರಕ್ಷಿಸಲಾಗುತ್ತಿದೆ.
* ಪರಿಸರ ಸಂರಕ್ಷಣೆ
ಪರಿಸರ ಸಂರಕ್ಷಣೆ – ಸಂಪರ್ವನೆಯ ಕಾರ‌್ಯದಲ್ಲಿ ಪಶ್ಚಿಮ ಘಟ್ಟದ ಮಣ್ಣಿನ ಮಕ್ಕಳು ತೊಡಗುವಂತೆ ಮಾಡಿರುವ ಸಂಘಟನೆ ವೃಕ್ಷಲಕ್ಷ ಅಂದೋಲನ. ಘಟ್ಟದುದ್ದಕ್ಕೆ ಸಂಪರ್ಕ ಜಾಲ ಹೊಂದಿರುವ ಏಕಮಾತ್ರ ಪರಿಸರ ಸಂಘಟನೆ ಇದು. ಹಿಂದು ಸೇವಾ ಪ್ರತಿಷ್ಠಾನ, ಆರೋಗ್ಯ ವಿಕಾಸ, ಸೇವಾಸಾಗರ – ಇವುಗಳ ಬೆಂಬಲದಲ್ಲಿ ಎತ್ತರಕ್ಕೆ, ವಿಸ್ತಾರವಾಗಿ ಬೆಳೆದ ವೃಕ್ಷಲಕ್ಷ ಆಂದೋಲನ ಸಾಗಿದ ದಾರಿ ಅನನ್ಯ, ವೈಶಿಷ್ಟ್ಯಪೂರ್ಣ.
* ಹಿಂದು ಜೀವನ ದೀಪಿಕಾ
ಹಿಂದುತ್ವದ ಉದಾತ್ತ ಪರಂಪರೆಯನ್ನು ಅನೇಕಾನೇಕ ಮಹತ್ತರ ವಿಚಾರಗಳನ್ನು ವಸುದೈವಕುಟುಂಬಕಮ್ ಎಂಬ ಋಷಿಗಳ ಆಶಯವನ್ನು ಸಾಕಾರಗೊಳಿಸಿದೆ ಭಾರತ. ಇವೆಲ್ಲವನ್ನೂ ಪ್ರತಿಯೊಬ್ಬರ ಮನೆಗೂ ಮುಟ್ಟಿಸಬೇಕೆಂಬ ಆಶಯದಿಂದ ಪ್ರಾರಂಭಿಸಿದ ಒಂದು ಕಿರು ಪ್ರಯತ್ನವೇ ಹಿಂದು ಜೀವನ ದೀಪಿಕಾ ಶಿಕ್ಷಣ ಯೋಜನೆ.
ಈ ಶಿಕ್ಷಣ ಯೋಜನೆ 1991ರಲ್ಲಿ ಪ್ರಾರಂಭವಾಯ್ತು ಇದು ಹೆಚ್ಚು ಜನರಿಗೆ ತಲುಪಿದಷ್ಟು ಹಿಂದುತ್ವದ ವೈಶಾಲ್ಯತೆ ಅರ್ಥವಾಗುತ್ತಾ ಹೋಗುತ್ತದೆ.
* ಸಮಗ್ರ ಶಿಶು ಶಿಕ್ಷಣ
ಶಿಕ್ಷಣ ಹುಟ್ಟಿನಿಂದ ಪ್ರಾರಂಭವಾದದ್ದು ಜೀವನದುದ್ದಕ್ಕೂ ಮುಂದುವರಿಯುತ್ತಿರುತ್ತದೆ. ಮಗುವಿನ ಗುಣ, ಸ್ವಭಾವಗಳು ತಾಯಿಯ ಆಶೋತ್ತರಗಳು ಮತ್ತು ನಿಲುವುಗಳನ್ನು ಹಾಗೂ ಆಕೆಯು ವಾಸಿಸುವ ಭೌತಿಕ ಪರಿಸರವನ್ನು ಅವಲಂಬಿಸಿರುತ್ತದೆ ಎಂಬುದು ಖಚಿತವಾದ ವಿಷಯ.
ಸಮಗ್ರ ಶಿಶು ಶಿಕ್ಷಣ ಪ್ರಾಂತದಲ್ಲಿ ಸುಮಾರು 46 ಕಡೆಗಳಲ್ಲಿದೆ. ಮಾತೃ ಮಂಡಳಿ, ಪಾಲಕರ ಸಭೆ ಹಾಗೂ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಮೂಲಕ ಶಿಶುಹಂತದಿಂದಲೇ ಸಂಸ್ಕಾರಯುತ ಶಿಕ್ಷಣ ನೀಡಿ ಮಗುವಿನ ಸಮಗ್ರ ಬೆಳವಣಿಗೆಗೆ ಶಿಶುಶಿಕ್ಷಕಿ ಸಹಾಯ ಮಾಡುತ್ತಾಳೆ. ವರ್ಷದಲ್ಲಿ ಎರಡುಬಾರಿ ಶಿಶು ಶಿಕ್ಷಕಿಯರಿಗೆ ಹಾಗೂ ತಾಯಂದಿರಿಗಾಗಿ ಸಮಗ್ರ ಶಿಶು ಶಿಕ್ಷಣ ಶಿಬಿರ ನಡೆಯುತ್ತದೆ. ಇದರಿಂದ ಶಿಕ್ಷಕಿಯರು ಉತ್ತಮ ರೀತಿಯಲ್ಲಿ ಶಿಶುಗಳ ಶಿಕ್ಷಣಕ್ಕೆ ಸಹಾಯ ಮಾಡಲು ಆನುಕೂಲವಾಗುತ್ತದೆ. ಸಮಗ್ರ ಶಿಶು ಶಿಕ್ಷಣಕ್ಕೆ ಪ್ರಾಂತ ಸಂಯೋಜಕಿಯಾಗಿ ಪ್ರತಿಷ್ಠಾನದ ಹಿರಿಯ ಸೇವಾವ್ರತಿ ಎಸ್. ವಿ.ಛಾಯಾ ಅವರು ಕಾರ‌್ಯನಿರ್ವಹಿಸುತ್ತಿದ್ದಾರೆ.
* ನೆಲೆ
ಆರೋಗ್ಯವಂತ ವ್ಯಕ್ತಿ ಎಂದರೆ, ಅಂಗಾಂಗಗಳು ಚೆನ್ನಾಗಿದ್ದು, ಆತ ಶಾರೀರಿಕ, ಬೌದ್ಧಿಕ, ಮಾನಸಿಕವಾಗಿಯೂ ಸುಸ್ಥಿತಿಯಲ್ಲಿರಬೇಕು. ಇದನ್ನೇ ಸಮಾಜಕ್ಕೆ ಹೋಲಿಸಿದಾಗ, ಸಮಾಜವು ಸುಸ್ಥಿತಿಯಲ್ಲಿ ಇದ್ದು, ಸಮಾಜದ ಎಲ್ಲ ಜನರೂ ಸುಖವಾಗಿರಬೇಕಾದರೆ ಬದುಕಲು ಕನಿಷ್ಠ ಅವಶ್ಯಕತೆಗಳಾದ ಆಹಾರ, ಬಟ್ಟೆ, ವಸತಿ, ಸಿಗುವಂತಾಗಬೇಕಲ್ಲವೆ? ನಾವೆಷ್ಟೇ ಮುಂದುವರೆಯುತ್ತಿದ್ದರೂ ಇಂದಿಗೂ ಕೋಟ್ಯಂತರ ನಮ್ಮ ಸಮಾಜ ಬಂಧುಗಳು ಹಸಿವಿನಿಂದ ಬಳಲುತ್ತಿದ್ದಾರೆ. ಹೊಟ್ಟೆಯ ಬಗ್ಗೆ ಚಿಂತಿಸಬೇಕಾದರೆ ಇನ್ನು ಬಟ್ಟೆ, ವಸತಿಯ ಮಾತೆಲ್ಲಿ? ಶಿಕ್ಷಣದ ಮಾತಂತೂ ದೂರವೇ ಉಳಿಯಿತು. ಇಂತಹ ತಂದೆ-ತಾಯಂದಿರ ಸಾವಿರಾರು ಮಕ್ಕಳು ಭಿಕ್ಷೆಬೇಡಿ, ಚಿಂದಿ ಆಯ್ದು ಜೀವನ ಸಾಗಿಸುತ್ತಿದ್ದಾರೆ, ಆದರೆ ಬಿಡುವಿಲ್ಲದ ತಮ್ಮ ತಮ್ಮ ಅವಸರದಲ್ಲಿ, ಕೆಲಸಗಳಲ್ಲಿ ತೊಡಗಿರುವ ಬೆಂಗಳೂರಿನ ಜನತೆ ಯೋಚಿಸಲು ಸಮಯವಾದರೂ ಎಲ್ಲಿ ದೊರೆಯುತ್ತೆ? ಆದರೂ ಅನುಕಂಪವಿರುವ ಸಾವಿರಾರು ಹೃದಯಗಳಂತೂ ಮಿಡಿಯುವುದು ನಿಶ್ಚಿತ, ಈ ಮಿಡಿತವೇ ‘ನೆಲೆ’ ಪ್ರಾರಂಭವಾಗಲು ಕಾರಣವೆನ್ನಬಹುದು.
ನೆಲೆ 13 ವರ್ಷಗಳ ಹಿಂದೆ ಹಿಂದು ಸೇವಾ ಪ್ರತಿಷ್ಠಾನದ ಪ್ರಕಲ್ಪವಾಗಿ ಪ್ರಾರಂಭವಾಯಿತು. ಪ್ರಾಯೋಗಿಕವಾಗಿ 15 ಗಂಡು ಮಕ್ಕಳಿಂದ ಆರಂಭವಾದ ‘‘ನೆಲೆ’’ ಇಂದು ಕರ್ನಾಟಕದಾದ್ಯಂತ 10 ಕೇಂದ್ರಗಳನ್ನು ಹೊಂದಿದ್ದು 300 ಬಾಲಕ, ಬಾಲಕಿಯರು ಆಶ್ರಯ ಪಡೆದಿದ್ದಾರೆ.
ಈ ಮಕ್ಕಳಲ್ಲಿ ಕಾಣುವ ಮೂರು ವಿಶೇಷ ಗುಣಗಳೆಂದರೆ, ಉತ್ತಮ ಶಾರೀರಿಕ ಕಸುವು, ಧೈರ್ಯ, ಸ್ಪಂದಿಸುವ ಮನಸ್ಸು. ನೆನಪಿನ ಶಕ್ತಿಯೂ ಕಡಿಮೆ ಏನಿಲ್ಲ. ಸುತ್ತಲ ಪರಿಸರದ ಕಾರಣದಿಂದಾಗಿ ಅವಕಾಶವಿಲ್ಲದಿರುವುದರಿಂದ ಗುಣಗಳನ್ನು ವ್ಯಕ್ತಪಡಿಸಲಿಕ್ಕೆ ಸಾಧ್ಯವಾಗುವುದಿಲ್ಲ, ಅವಕಾಶ ದೊರೆತರೆ ನಾವು ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸುತ್ತಿದ್ದಾರೆ ಈ ಮಕ್ಕಳು.
ಓದು, ಆಟ, ಚಿತ್ರಕಲೆ ಇತರೆ ವಿಷಯಗಳ ಜೊತೆಗೆ ‘ನೆಲೆ’ಯ ಒಳಗಿನ ವ್ಯವಸ್ಥೆಗಳಲ್ಲಿ ತೊಡಗಿಸಿಕೊಳ್ಳುವುದು, ಸ್ವಚ್ಛತೆ, ಅಡುಗೆ ಮಾಡುವುದು, ಭೇಟಿ ನೀಡುವವರ ಬಗ್ಗೆ ಕಾಳಜಿ, ಅವರಬಳಿ ಧೈರ್ಯವಾಗಿ ಮಾತನಾಡುವುದು, ಕ್ರಮೇಣ ಮಕ್ಕಳಲ್ಲಿ ಬದಲಾವಣೆಯ ಪ್ರಕ್ರಿಯ ಪ್ರಾರಂಭವಾಯಿತು. ‘ನೆಲೆ’ಗೆ ಒಮ್ಮೆ ಬೇಟಿ ನೀಡಿದವರು ಮತ್ತೊಮ್ಮೆ ಬರಬೇಕೆನ್ನುವ ಭಾವನೆಯೊಂದಿಗೆ ಹಿಂದಿರುಗುತ್ತಿದ್ದಾರೆ. ಬರುವ ದಾನಿಗಳು ಸಹ ವ್ಯವಸ್ಥೆಗೆ ಅಗತ್ಯವಿರುವ ವಸ್ತುಗಳನ್ನು ಪೂರೈಸುವುದರೊಂದಿಗೆ ಮಕ್ಕಳ ಬುದ್ಧಿ ಬೆಳವಣಿಗೆಗೆ ಅಗತ್ಯ ಸಂಗತಿಗಳ ಬಗ್ಗೆ ಗಮನ ನೀಡಿ ಭರ್ತಿ ಮಾಡಲು ಸಹಕಾರಿಗಳಾಗಿ ನಿಂತರು. ಭಜನೆ, ಹಾಡು, ಗಣಿತ, ವಿಜ್ಞಾನ ಪಠ್ಯೇತರ ವಿಷಯಗಳನ್ನು ಕಲಿಸುವುದು, ಮಕ್ಕಳ ಸಮಗ್ರ ವಿಕಾಸ ಆಗಬೇಕೆಂಬ ಭಾವನೆಯೊಂದಿಗೆ ಸಹಕಾರ ನೀಡುತ್ತಿರುವುದು ಗಮನಾರ್ಹ.
ಕಳೆದ ದಶಕದಲ್ಲಿ ಸಾವಿರಾರು ಸಹೃದಯ ಬಂಧುಗಳು ನೆಲೆಗೆ ಭೇಟಿ ನೀಡಿದ್ದಾರೆ. ಅವರೆಲ್ಲರ ಮನದಾಳದ ಸಂವೇದನಾಶೀಲತೆಯನ್ನು ಗುರುತಿಸಿ, ಅವರ ಸಮಯ, ಪ್ರತಿಭೆಗಳನ್ನು ‘ನೆಲೆ’ ವಿಕಾಸಕ್ಕೆ ಜೋಡಿಸಿಕೊಂಡಿದೆ. ಪ್ರತಿಯೊಂದು ನೆಲೆಗೆ ತನ್ನದೇ ಆದ ಹಿತೈಷಿಗಳು, ಸ್ವಯಂಸೇವಕರು, ದಾನಿಗಳ ಗುಂಪು ನಿರ್ಮಾಣವಾಗಿದೆ. ಇಂತಹ ಹತ್ತಾರು ಸಮಾನ ಮನಸ್ಕರನ್ನು ಕೂಡಿಸಿ ನೆಲೆ ಬಳಗ ರಚನೆಯಾಗಿದೆ. ಹನಿಹನಿಗೂಡಿದರೆ ಹಳ್ಳ ಎಂಬಂತೆ ಬಳಗದವರ ಒಂದೊಂದು ಸಲಹೆಯೂ ನೆಲೆಯ ಪ್ರಗತಿಯ ಹಾದಿಯಲ್ಲಿ ಮಹತ್ವದ್ದಾಗಿದೆ. ಇದು ನೆಲೆಯ ವಿಶೇಷ.
ಒಬ್ಬ ಈ ವರ್ಷ ಬಿ.ಕಾಂನಲ್ಲಿ ಶೇ.75 ಫಲಿತಾಂಶ ಪಡೆದರೆ ಇನ್ನೊಬ್ಬ ಶೇ. 67 ಫಲಿತಾಂಶ ಗಳಿಸಿದ್ದಾನೆ. ಈಗ ಶೇ.75 ಪಡೆದ ವಿದ್ಯಾರ್ಥಿ ಎಂ.ಕಾಂ. ಮಾಡುತ್ತಿದ್ದಾನೆ ಹಾಗೂ ಶೇ. 67 ಪಡೆದ ವಿದ್ಯಾರ್ಥಿ ಸಿ.ಎ. ಮಾಡುತ್ತಿದ್ದಾನೆ ಹಾಗೂ ಇನ್ನೊಬ್ಬಳು ಬಿ.ಕಾಂ. ದ್ವಿತೀಯ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ನೆಲೆಯ ಕಾರ್ಯ ನೋಡಿ ರಾಜ್ಯ ಸರ್ಕಾರವು ಕನ್ನಡ ರಾಜ್ಯಪ್ರಶಸ್ತಿ ನೀಡಿ ಗೌರವಿಸಿದೆ.
ನರೇಂದ್ರ ನೆಲೆಯಲ್ಲಿ ಹೊಲಿಗೆ ತರಬೇತಿಯಿಂದ ಮಾತೃಶಕ್ತಿ ಸ್ವಾವಲಂಬಿಯಾಗುತ್ತಿದೆ. 350ಕ್ಕಿಂತಲೂ ಹೆಚ್ಚು ಜನ ವಿವಿಧ ಕಡೆ ಕಾರ್ಯನಿರ್ವಹಿಸುವ ಮೂಲಕ, ಮನೆಯಲ್ಲೇ ಹೊಲಿಗೆ ಮಾಡುವ ಮೂಲಕ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ.
ಉಪೇಕ್ಷಿತ ಕಾಲೋನಿಗಳಲ್ಲಿ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುತ್ತಿದೆ. ಇಂಗ್ಲಿಷ್‌ನಲ್ಲಿ ಮಾತನಾಡಲು ತರಬೇತಿ ಹಾಗೂ ಬ್ಯೂಟಿಷಿಯನ್ ಕೋರ್ಸ್‌ಗಳನ್ನೂ ನಡೆಸುವ ಮೂಲಕ ಅವಕಾಶವಂಚಿತರಿಗೆ ಅವಕಾಶ ಕಲ್ಪಿಸಲಾಗುತ್ತಿವೆ.
* ಸೇವಾ ಕಿರಣ: ಸೇವಾಬಸ್ತಿಗಳಲ್ಲೊಂದು ಆಶಾ ಕಿರಣ
ಹಿಂದು ಸೇವಾ ಪ್ರತಿಷ್ಠಾನದ ಪ್ರಕಲ್ಪಗಳಲ್ಲಿ ಉಚಿತ ಮನೆಪಾಠ ಸಂಸ್ಕಾರ ನೀಡುವ ಸೇವಾಕಿರಣವೂ ಒಂದು ಕಳೆದ ನಾಲ್ಕು ವರ್ಷಗಳಿಂದ ಪ್ರತಿಷ್ಠಾನವು ಈ ಪ್ರಕಲ್ಪವನ್ನೂ ನಡೆಸುತ್ತಾ ಬಂದಿದೆ.
ಬೆಂಗಳೂರಿನಲ್ಲಿ ಗಗನ ಚುಂಬಿ ಕಟ್ಟಡಗಳ ಜೊತೆ ಜೊತೆಗೇ ಕೊಳಗೇರಿಗಳೂ ಬೆಳೆಯುತ್ತಿರುವುದು ಇನ್ನೊಂದು ವೈರುಧ್ಯ. ನಗರದಲ್ಲಿ ಶೇ. 18ರಷ್ಟು ಜನ ಶ್ರಮಿಕ ಕಾರ್ಮಿಕರು, ಛತ್ರಗಳಲ್ಲಿ ಕೆಲಸ ಮಾಡುವವರು ಈ ಕೊಳಗೇರಿಯಲ್ಲಿ ವಾಸಿಸುತ್ತಿದ್ದಾರೆ. ಅವರ ಮಕ್ಕಳಿಗೆ ಓದುವ ಆಸೆ ಇದ್ದರೂ ಅಧ್ಯಯನಕ್ಕೆ ಸೂಕ್ತ ವಾತಾವರಣ ಇಲ್ಲ. ಚಿಕ್ಕದಾದ ಮನೆಗಳು, ಇಕ್ಕಟ್ಟಾದ ವಾತಾವರಣ, ದುರ್ಬಲ ಆರ್ಥಿಕ ಪರಿಸ್ಥಿತಿ ಇವುಗಳಿಂದಾಗಿ ಅವರಲ್ಲಿ ಪ್ರತಿಭೆ ಸಾಮರ್ಥ್ಯಗಳಿದ್ದರೂ ಅವು ಮೊಳಕೆಯೊಡೆಯುತ್ತಲೇ ಕಮರಿ ಹೋಗುತ್ತಿವೆ. ಪರಿಣಾಮವಾಗಿ ಅವರೆಲ್ಲಾ ಬಾಲ್ಯದಲ್ಲೇ ದುಶ್ಚಟಗಳಿಗೆ ಬಲಿಯಾಗಿ ಸಮಾಜ ಘಾತುಕ ವ್ಯಕ್ತಿಗಳಾಗಿ ರೂಪುಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಇಂತಹ ಮಕ್ಕಳಿಗೆ ಆಶಾ ಕಿರಣವಾಗುವ ಉದ್ದೇಶದಿಂದ ಹಿಂದು ಸೇವಾ ಪ್ರತಿಷ್ಠಾನ ಸೇವಾ ಕಿರಣ ಯೋಜನೆಯನ್ನು ಪ್ರಾರಂಭಿಸಿದೆ. ಮಕ್ಕಳಿಗೆ ಸಂಸ್ಕಾರ ಮತ್ತು ಶಿಕ್ಷಣ ನೀಡುವ 30 ಕೇಂದ್ರಗಳು – ಶಾಲಾ ಅವಧಿಯ ನಂತರ 2 ಗಂಟೆಗಳ ಕಾಲ ಮನೆಪಾಠದ ರೀತಿಯಲ್ಲಿ ನಡೆಯುತ್ತಿವೆ. ಶಾಲೆಯ ಪಠ್ಯ ವಿಷಯಗಳಾದ ಭಾಷೆ, ವಿಜ್ಞಾನ, ಗಣಿತ, ಸಮಾಜದ ಜೊತೆಗೆ ಅವರ ವ್ಯಕ್ತಿತ್ವ ವಿಕಾಸಕ್ಕಾಗಿ ಬೌದ್ಧಿಕ ಮತ್ತು ಶಾರೀರಿಕ ಚಟುವಟಿಕೆಗಳೂ ನಡೆಯುತ್ತಿವೆ. ಹಾಡು, ಸಂಸ್ಕೃತ ಶ್ಲೋಕ, ಶರಣರ, ಸರ್ವಜ್ಞನ ವಚನಗಳು, ಮಹಾಪುರುಷರ ಕಥೆಗಳು, ಆಟ, ನೃತ್ಯ, ನಾಟಕಗಳನ್ನು ಕಲಿಸಲಾಗುತ್ತಿದೆ.
ಮಕ್ಕಳು ವ್ಯಸನ ಮುಕ್ತರಾಗುವಂತೆ ತಿಳಿವಳಿಕೆ ನೀಡಲಾಗುತ್ತಿದೆ ಹಾಗೂ ಮಕ್ಕಳು ಅರ್ಧದಲ್ಲಿಯೇ ಶಾಲೆ ಬಿಡದಂತೆ ಪೋಷಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಮಕ್ಕಳಲ್ಲಿ ಹಿಂಸಾ ಪ್ರವೃತ್ತಿ ಬೆಳೆಯದಂತೆ ತಡೆಯಲು ಶಿಸ್ತು, ಸಂಯಮ, ಪ್ರಾಮಾಣಿಕತೆ, ಸೇವಾಭಾವ ಇತ್ಯಾದಿ ಗುಣಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತ ಪ್ರತಿ ಕೇಂದ್ರದಲ್ಲೂ 20-25 ಮಕ್ಕಳಿಗೆ ಪಾಠದ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು ಸುಮಾರು 375 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಸುಮಾರು 300 ಕುಟುಂಬಗಳು ಸೇವಾ ಕಿರಣದ ಸಂಪರ್ಕದಲ್ಲಿದೆ.
ಪ್ರತಿ ಕೇಂದ್ರದಲ್ಲೂ ಓರ್ವ ಶಿಕ್ಷಕಿ, ಹತ್ತು ಕೇಂದ್ರಗಳಿಗೋರ್ವ ಮೇಲ್ವಿಚಾರಕರು ಹಾಗೂ ಒಟ್ಟಾರೆ ಯೋಜನೆಗೆ ಒಬ್ಬರು ಸಂಯೋಜಕರನ್ನೂ ತೊಡಗಿಸಲಾಗಿದೆ ಮತ್ತು ಅವರಿಗೆ ಅಗತ್ಯವಿರುವ ಕನಿಷ್ಠ ಬೋಧನಾ ಸಲಕರಣೆಗಳನ್ನೂ ಒದಗಿಸಲಾಗುತ್ತಿದೆ.
ಕಳೆದ ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಈ ಕೇಂದ್ರಗಳು ಕಾರ್ಯನಿರ್ವಹಿಸಿದ ಪರಿಣಾಮವಾಗಿ ಶಿಕ್ಷಕಿಯರಲ್ಲಿ ಹಾಗೂ ಮಕ್ಕಳಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬಂದಿದೆ. ಇದರಿಂದಾಗಿ ಈ ಕಾರ‌್ಯದ ಅಗತ್ಯತೆ ಎಷ್ಟಿದೆ ಎಂಬುದು ಗೊತ್ತಾಗಿದೆ. ಹಾಗೂ ಎಲ್ಲರಲ್ಲಿ ಆತ್ಮವಿಶ್ವಾಸ ಮೂಡಿದೆ.
* ಯೂತ್ ಫಾರ್ ಸೇವಾ
ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ನಿಸ್ವಾರ್ಥವಾಗಿ ಕೆಲಸ ಮಾಡ ಬಯಸುವ ಯುವಕರಿಗೆ ಅವಕಾಶ ಒದಗಿಸುವ ವೇದಿಕೆಯಾಗಿ ಏಪ್ರಿಲ್ 2007ರಲ್ಲಿ ಪ್ರಾರಂಭವಾದ ವೈಎಫ್‌ಎಸ್, ಹಿಂದು ಸೇವಾ ಪ್ರತಿಷ್ಠಾನದ ಪ್ರಕಲ್ಪಗಳಲ್ಲಿ ಒಂದು. ಸಕಾರಾತ್ಮಕ ಪರಿವರ್ತನೆಗಾಗಿ ಯುವಕರನ್ನು ಸಬಲೀಕರಿಸುವುದು ಇದರ ಉದ್ದೇಶ. ಇದರ ಗುರಿ ಸ್ವಯಂಸೇವಕರನ್ನು ಪ್ರೋತ್ಸಾಹಿಸಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುವುದು ಹಾಗೂ ಸ್ವಯಂಸೇವಕರಿಗೆ ಮತ್ತು ಸ್ವಯಂಸೇವಾ ಸಂಸ್ಥೆಗಳಿಗೆ ಮಧ್ಯದ ಕೊಂಡಿಯಾಗಿ, ಸಕಾಲಿಕ ತರಬೇತಿ ನೀಡಿ, ನಿರಂತರ ಚಟುವಟಿಕೆಗಳಲ್ಲಿ ತೊಡಗಿಸುವುದು.
ಶಿಕ್ಷಣ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ, ಈ ಮೂರು ಮುಖ್ಯ ಕ್ಷೇತ್ರಗಳಲ್ಲಿ ಕಾರ‌್ಯ ನಿರ್ವಹಿಸುತ್ತಿದೆ. ಅಗತ್ಯತೆಯನ್ನು ಗುರುತಿಸಿ – ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆಗಳು, ಸರ್ಕಾರೇತರ ಸ್ವಯಸೇವಾ ಸಂಸ್ಥೆಗಳು ಹಾಗೂ ಇನ್ನಿತರ ಕೆಲವು ಸಂಸ್ಥೆಗಳಲ್ಲಿ ಕಾರ‌್ಯ ನಿರ್ವಹಿಸುತ್ತಿದೆ.
ವೈಎಫ್‌ಎಸ್‌ನ ಕಾರ‌್ಯ ವೈಖರಿ ಹಾಗೂ ಅಂತಹ ಸಂಸ್ಥೆಗಳ ಅಗತ್ಯತೆಯನ್ನು ಗಮನಿಸಿ ಹಲವಾರು ಸಾಫ್ಟವೇರ್ ಕಂಪನಿಗಳು ತಮ್ಮ ‘ಸಾಮಾಜಿಕ ಹೊಣೆಗಾರಿಕೆ’ಯ (ಸಿಎಸ್‌ಆರ್) ಕಾರ‌್ಯಕ್ರಮದಡಿಯಲ್ಲಿ ವೈಎಫ್‌ಎಸ್‌ನೊಂದಿಗೆ ಸಹಯೋಗತ್ವವನ್ನು ಹೊಂದಿವೆ. ಇವು ತನ್ನ ಉದ್ಯೋಗಿಗಳನ್ನು ಸ್ವಯಂಸೇವಕರನ್ನಾಗಲು ಪ್ರೋತ್ಸಾಹಿಸುವುದರ ಮೂಲಕ ಆರ್ಥಿಕವಾಗಿ ಸಹಕರಿಸುತ್ತಿವೆ. ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತವಿರುವ ಸ್ವಯಂಸೇವಕರಿಗೆ ತರಬೇತಿ ನೀಡಿ, ಸೇವೆಯ ಅವಶ್ಯಕತೆಯುಳ್ಳ ಸ್ಥಳಗಳಿಗೆ ಅವರನ್ನು ಕಳುಹಿಸಲಾಗುತ್ತದೆ. ಸ್ವಯಂಸೇವಕರ ಸಮಯದ ಲಭ್ಯತೆ ಹಾಗೂ ಆಸಕ್ತಿಗನುಗುಣವಾಗಿ ವಿವಿಧ ರೀತಿಯ ಅವಕಾಶಗಳನ್ನು ಕಲ್ಪಿಸಲಾಗುತ್ತದೆ.
ಡಾಕ್ಟರ್‌ಗಳು ಹಾಗೂ ಸ್ವಯಂಸೇವಕರ ನೆರವಿನಿಂದ 11,000 ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ನಡೆಸಿತು. ‘ಡಾಕ್ಟರ್ ಫಾರ್ ಸೇವಾ’ವೇದಿಕೆಯಡಿ 67 ವೈದ್ಯರು, 31 ಆಸ್ಪತ್ರೆಗಳು ಹಾಗೂ 50 ವೈದ್ಯಕೇತರ ಸ್ವಯಂಸೇವಕರು ಸೇವೆ ಸಲ್ಲಿಸುತ್ತಿದ್ದಾರೆ.
ಪ್ರತಿಷ್ಠಾನದ ಪ್ರಾರಂಭದಿಂದಲೂ ಕುಲಪತಿಗಳಾಗಿ ಮಾರ್ಗದರ್ಶನ ಮಾಡುತ್ತಿರುವ ಉಡುಪಿಯ ಪೇಜಾವರ ಮಠದ ಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥಸ್ವಾಮೀಜಿ ಹಾಗೂ ಪ್ರತಿಷ್ಠಾನದ ಮಹಾಪೋಷಕರಾಗಿದ್ದ ಪೂಜ್ಯ ಶ್ರೀ ಶ್ರೀ ಬಾಲಗಂಗಧರನಾಥ ಸ್ವಾಮೀಜಿ ಯವರ ಉತ್ತರಾಧಿಕಾರಿಯಾಗಿರುವ ಪೂಜ್ಯ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಮಹಾ ಪೋಷಕರಾಗಿ ನಮ್ಮ ಕಾರ್ಯಕ್ಕೆ ಹೊಸ ಆಯಾಮ ನೀಡುತ್ತಿರುವುದು ನಮ್ಮೆಲರ ಸೌಭಾಗ್ಯವಾಗಿದೆ.
ಪ್ರತಿಷ್ಠಾನವು ತನ್ನ ಪಥದಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ದಾಟಿದ್ದರೂ, ಹಿಂದು ಸಮಾಜವನ್ನು ರಕ್ಷಿಸಲು ಹಿಂದೆಂದಿಗಿಂತಲೂ ಹೆಚ್ಚು ಸತರ್ಕವಾಗಿ, ಕ್ರಿಯಾಶೀಲರಾಗಬೇಕಾದ ಸನ್ನಿವೇಶ ಇಂದಿದೆ. ಈ ದೃಷ್ಟಿಯಿಂದ ಎಲ್ಲಾ ಸೇವಾವ್ರತಿಗಳು, ಆಡಳಿತ ಮಂಡಳಿಯವರು, ಪೂರ್ವ ಸೇವಾವ್ರತಿಗಳು, ಸಮಾಜದ ಸಮಾನ ಮನಸ್ಕ ಸಂಸ್ಥೆಗಳು ಸಮಾಜದ ಸೋದರ-ಸೋದರಿಯರು ಒಟ್ಟಾಗಿ ಹಿಂದು ಸೇವಾ ಪ್ರತಿಷ್ಠಾನದ ಕಾರ್ಯಕ್ಕೆ ಕೈಜೋಡಿಸಿ, ಹಿಂದು ಸಮಾಜಕ್ಕೆ ಹೊಸತಿರುವು, ಶಕ್ತಿ ನೀಡುವ ನಿಟ್ಟಿನಲ್ಲಿ ಮುಂದಡಿಯಿಡಬೇಕಾಗಿದೆ. ಇದಕ್ಕೆ ಸಮಾಜದ ಭಾಗವಾದ ನಾವು ಸಮಯದಾನ, ಸಂಪತ್ತು ದಾನ ಹಾಗೂ ಸದಸ್ಯದಾನ ಇವುಗಳಲ್ಲಿ ಒಂದನ್ನಾದರೂ ಮಾಡಿದಲ್ಲಿ ಈ ಆಂದೋಲನ ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

 ಶ್ರೀಧರಸಾಗರ

   

2 Responses to ಹಿಂದು ಸೇವಾ ಪ್ರತಿಷ್ಠಾನ – ಒಂದು ವಿನೂತನ ಪ್ರಯೋಗ

  1. Parameswara

    Sir My name is Parameswara M ,I want join Pranayama classes in marasooru gate when will be conducted and give the Phone number

  2. admin

    please contact mr.nagendra kamat, rashtrotthana yoga centre, 080 26612730

Leave a Reply