ಹಿಂದೂ ಕುಟುಂಬ ವ್ಯವಸ್ಥೆ

ಲೇಖನಗಳು - 0 Comment
Issue Date :

-ಅಲಕಾ ಇನಾಂದಾರ್

ಮಾನವ ಸಂಘಜೀವಿ. ಸಮೂಹದಲ್ಲಿ  ವಾಸಿಸುವುದು ಅವನಿಗೆ ಇಷ್ಟವಾಗುತ್ತದೆ. ಈ ಕಾರಣದಿಂದ ಜೀವನಕ್ಕೆ ಎಲ್ಲೆಲ್ಲಿ ಅನುಕೂಲವಾದ ಭೂಮಿ, ವಾತಾವರಣ ಇರುವುದೋ ಅಲ್ಲೆಲ್ಲಾ ಮಾನವನು ಸಹಜೀವನವನ್ನು ಪ್ರಾರಂಭಿಸಿದ. ಸಹಜೀವನಕ್ಕಾಗಿ ಪರಸ್ಪರ ಅವಲಂಬನೆ ಹಾಗೂ ಸಹಕಾರದ ಅವಶ್ಯಕತೆಯಿದೆ. ಇದರಿಂದ ಮಾನವನ ಜೀವನದ ವಿಕಾಸವಾಗುತ್ತದೆ. ಈ ಒಂದು ವಿಕಾಸದ ಯಾತ್ರೆಯನ್ನು ‘ಸಂಸ್ಕೃತಿ’ ಎಂದು ಕರೆಯುತ್ತಾರೆ.

ವಿಶ್ವದಲ್ಲಿ ಅನೇಕ ಸ್ಥಾನಗಳಲ್ಲಿ ವಿವಿಧ ಸಂಸ್ಕೃತಿಗಳ ಉಗಮವಾಯಿತು. ಹಾಗೂ ಅದರ ವಿಕಾಸ ಹಾಗು ಅವಸಾನವಾಯಿತು. ಆದರೆ ಭಾರತದಲ್ಲಿ ಯಾವ ಸಂಸ್ಕೃತಿಯ ಉಗಮವಾಗಿಯೋ ಅಂತಹ ಹಿಂದು ಸಂಸ್ಕೃತಿಯು ಅಖಂಡವಾಗಿ, ಅವಿಚ್ಛಿನ್ನವಾಗಿ ಪ್ರವಾಹದಂತೆ ಅನಾದಿಕಾಲದಿಂದಲೂ ಇಂದಿಗೂ ಸಜೀವವಾಗಿ ಓತಪ್ರೋತವಾಗಿ ಹರಿಯುತ್ತಿದೆ. ಈ ಸಂಸ್ಕೃತಿಯ ನಿರಂತರೆತೆಗೆ ಕಾರಣ ಇಲ್ಲಿಯ ಜೀವನ ಪದ್ಧತಿ. ಅದು ಋಷಿ ಮುನಿಗಳ ಚಿಂತನೆ ಮತ್ತು ಅನುಭವಗಳ ಸಿದ್ಧಿಯಿಂದ ಭದ್ರ ಬುನಾದಿ ಹೊಂದಿದೆ. ಸ್ವಾರ್ಥರಹಿತವಾಗಿ ಕೇವಲ ಸಮಾಜದ ಹಿತವನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಕ್ಕಿಂತ ಕರ್ತವ್ಯವೇ ಮುಖ್ಯ ಎಂಬ ಭಾವನೆಯನ್ನು ಈ ಸಂಸ್ಕೃತಿ ನೀಡಿದೆ. ಇದೇ ಹಿಂದೂ ಸಂಸ್ಕೃತಿಯಾಗಿದೆ. ಎಲ್ಲಿಯೂ ಅಧಿಕಾರದ ಬಗ್ಗೆ ಚರ್ಚಿಸಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದಲ್ಲಿ ಅಧಿಕಾರಕ್ಕಾಗಿ ಕಚ್ಚಾಟ, ಅಧಿಕಾರವನ್ನು ಬೇಡುವ ಪ್ರಮೇಯವೇ ಬರುವುದಿಲ್ಲ. ಅಧಿಕಾರದ ನಿರ್ವಹಣೆಗಾಗಿ ನಮ್ಮನ್ನು ನಾವೇ ಸಿದ್ಧ ಮಾಡಿಕೊಳ್ಳಬೇಕು. ಸ್ತ್ರೀಯಾಗಲಿ ಪುರುಷನಾಗಲಿ ಎಲ್ಲಿಯತನಕ ಅವರಿಗೆ ಅವರ ಸಾಮರ್ಥ್ಯದ ಅರಿವಿರುವುದಿಲ್ಲವೋ ಅಲ್ಲಿಯವರೆಗೂ ಅಧಿಕಾರದ ಕೂಗು ನಿರರ್ಥಕವಾಗುತ್ತದೆ. ಈಗೀಗ ಅಧಿಕಾರದ ಬಗ್ಗೆ ಬಹು ಚರ್ಚೆಯಾಗುತ್ತಿದೆ. ಮಕ್ಕಳ ಅಧಿಕಾರವಿರಬಹುದು, ಮಹಿಳೆಯರ ಅಧಿಕಾರವಿರಬಹುದು. ಇವುಗಳ ರಕ್ಷಣೆಗಾಗಿ ಆಯೋಗಗಳ ರಚನೆಯಾಗುತ್ತಿದೆ. ಸಮಾಜದ ಪ್ರತಿಯೊಂದು ವರ್ಗಕ್ಕೂ ಈ ರೀತಿಯ ಅಧಿಕಾರದ ಯೋಚನೆ ಬಂದರೆ ಪ್ರತಿಯೊಬ್ಬ ವ್ಯಕ್ತಿಗೂ ಅನ್ಯ ವ್ಯವಸ್ಥೆಯನ್ನು ಮಾಡಬೇಕಾಗಬಹುದು! ನಮ್ಮ ಜೀವನ ಪದ್ಧತಿಯಲ್ಲಿ ನಾವು ಕರ್ತವ್ಯದ ಬಗ್ಗೆ ಹೇಳುತ್ತೇವೆಯೆ ಹೊರತು ಅಧಿಕಾರದ ಬಗ್ಗೆಯಲ್ಲ. ಮಕ್ಕಳಿಗೆ ತಮ್ಮ ತಂದೆ ತಾಯಿಯ ಮೇಲೆ ಅಧಿಕಾರವಿದೆ. ಆದರೆ ಮಾತಾ ಪಿತೃಗಳು ತಮ್ಮ ಮಾತೃಧರ್ಮ ಮತ್ತು ಪಿತೃಧರ್ಮವನ್ನು ಎಲ್ಲಿಯವರೆಗೂ ಪಾಲಿಸುತ್ತಿರುತ್ತಾರೋ ಅಲ್ಲಿಯವರೆಗೂ ಮಕ್ಕಳಿಗೆ ತಮ್ಮ ಪಾಲನೆ ಪೋಷಣೆಯ ಅಧಿಕಾರ ತನ್ನಿಂದತಾನೆ ಸಿಗುತ್ತದೆ. ಈ ರೀತಿಯ ಜೀವನ ಪ್ರನಾಳಿಯ ಆರಂಭ ಪರಿವಾರದ ಮೂಲಕ ಆಗುತ್ತದೆ. ಹಾಗೂ ಪರಿವಾರದ ಆರಂಭ ಗೃಹಸ್ಥಾಶ್ರಮದ ಮೂಲಕ ಆಗುತ್ತದೆ. ಹಾಗಾಗಿ 16 ಸಂಸ್ಕಾರಗಳಲ್ಲಿ ಅತ್ಯಂತ ಮಹತ್ವಪೂರ್ಣ ಸ್ಥಾನ ವಿವಾಹ ಸಂಸ್ಕಾರಕ್ಕೆ ದೊರೆತಿದೆ.

 ಜೀವನದ ಅಂತಿಮ ಗುರಿಯೇ ಮೋಕ್ಷ. ಆದರೆ ಇಂದಿನ ವಿದ್ಯಾರ್ಥಿಗಳನ್ನು ಕೇಳಿದರೆ ಅವರು ಕೇವಲ ಭೌತಿಕವಾದ ಗುರಿಯನ್ನು (ಇಂಜಿನಿಯರ್, ಡಾಕ್ಟರ್, ಐಎಎಸ್ ಆಫೀಸರ್, ಸಿಎಂ ಆಗುವ ಗುರಿಯನ್ನು) ಇಟ್ಟುಕೊಂಡಿರುತ್ತಾರೆ. ಒಬ್ಬ ಒಳ್ಳೆಯ ವ್ಯಕ್ತಿಯಾಗಿ ತನ್ನ ಜೀವನವನ್ನು ಸಮಾಜದ ಒಳಿತಿಗಾಗಿ ಬದುಕಬೇಕೆಂಬ ಇಚ್ಛೆಯನ್ನು  ಸಾಮಾನ್ಯವಾಗಿ ಯಾವೊಬ್ಬ ವಿದ್ಯಾರ್ಥಿಯು ಹೇಳುವುದಿಲ್ಲ. ನಮ್ಮ ಸಂಸ್ಕೃತಿಯು ಈ ಎಲ್ಲಾ ಭೌತಿಕ ವಿಷಯಗಳನ್ನು ಮೀರಿ ಮೋಕ್ಷ ಪ್ರಾಪ್ತಿಯೇ ಗುರಿ ಎಂಬುದನ್ನು ತಿಳಿಸಿದೆ. ನಾಲ್ಕು ಪುರುಷಾರ್ಥಗಳನ್ನು ಸಾಧಿಸಲು ನಮ್ಮ ಋಷಿ ಮುನಿಗಳು, ದಾರ್ಶನಿಕರು ಚಿಂತನೆಯನ್ನು ಮಾಡಿ ನಾಲ್ಕು ಆಶ್ರಮಗಳನ್ನು ಸೂಚಿಸಿದ್ದಾರೆ.

ಬ್ರಹ್ಮಚರ್ಯ ಆಶ್ರಮ

ಇದು ವೈಯಕ್ತಿಕ ಜೀವನದ ಬುನಾದಿಯಾಗಿದೆ. ಈ ಬುನಾದಿಯನ್ನು ಗಟ್ಟಿಗೊಳಿಸಲು ನಮ್ಮ ಶರೀರ, ಬುದ್ಧಿ ಹಾಗೂ ಮನಸ್ಸಿನ ವಿಕಾಸವಾಗುವುದು ಅವಶ್ಯಕವಾಗಿದೆ. ಶಾರೀರಿಕವಾಗಿ ಬಲ ಸಂವರ್ಧನೆ, ಜ್ಞಾನ ಸಂಪಾದನೆ ಹಾಗೂ ಸಂಸ್ಕಾರಯುತವಾಗಿ ಮನಸ್ಸನ್ನು ಗಟ್ಟಿಗೊಳಿಸುತ್ತದೆ. ಹಾಗಾಗಿ ದೀಪವು ಈ ಆಶ್ರಮದ ಪ್ರತೀಕವಾಗಿದೆ. ದೀಪವು ಉರಿಯುತ್ತಾ ಕಾಂತಿಯುಕ್ತವಾಗುತ್ತದೆ.

ಗೃಹಸ್ಥಾಶ್ರಮ

 ಇದು ಜೀವನದ 2ನೆಯ ಆಶ್ರಮ. ವ್ಯಕ್ತಿಯೊಬ್ಬನೇ ಕರ್ತವ್ಯದ ಚಾಲನೆ ಮಾಡಲು ಸಾಧ್ಯವಿಲ್ಲ. ಪತಿ-ಪತ್ನಿ ಇಬ್ಬರೂ ಸೇರಿ ಈ ಆಶ್ರಮದ ಕರ್ತವ್ಯಗಳನ್ನು ನಿಭಾಯಿಸಬೇಕಾಗುತ್ತದೆ. ವಟವೃಕ್ಷ ಈ ಆಶ್ರಮದ ಪ್ರತೀಕ. ವಟವೃಕ್ಷ ಹೇಗೆ ಎಲ್ಲರಿಗೂ ಆಶ್ರಯ ನೀಡುತ್ತದೆಯೋ ಅದೇ ರೀತಿಯಲ್ಲಿ ಆಶ್ರಯವನ್ನು ನೀಡಿ ದೇವಋಣ, ಪಿತೃಋಣ ಹಾಗೂ ಋಷಿಋಣಗಳಿಂದ ಮುಕ್ತರಾಗಬಹುದು.

 ವಾನಪ್ರಸ್ಥಾಶ್ರಮ

 ಇದು ಮೂರನೆಯದು. ಪ್ರಾಪಂಚಿಕ ಸುಖಭೋಗಗಳಿಂದ ನಿಧಾನವಾಗಿ ಮುಕ್ತಿಯನ್ನು ಹೊಂದುತ್ತಾ ಇಹದಿಂದ ಹೊರಬರುವ ಸಮಯವಾಗಿರುತ್ತದೆ. ಪಾರಿವಾರಿಕ ಕರ್ತವ್ಯಗಳನ್ನು ನಿಭಾಯಿಸಿದ ನಂತರ ಸಾಮಾಜಿಕ ಕಾರ್ಯಗಳಿಗೆ ಪ್ರಾಮುಖ್ಯತೆಯನ್ನು ಕೊಡಬೇಕು. ಸಮಾಜಮುಖಿ ಜೀವನವನ್ನು ನಡೆಸಬೇಕು. ಯಜ್ಞಕುಂಡವೇ ಇದರ ಪ್ರತೀಕ. ಭೌತಿಕ ಆಸೆ ಆಕಾಂಕ್ಷೆಗಳನ್ನು ಈ ಯಜ್ಞಕುಂಡದಲ್ಲಿ ಆಹುತಿ ನೀಡಿ, ಮೋಹ ಮಾಯೆಗಳಿಂದ ಬಿಡುಗಡೆ ಹೊಂದಿ ಸಮಾಜದ ಸಮೃದ್ಧಿಯುತ್ತ ಚಿತ್ತ ಹರಿಸಬೇಕು. ಹಾಗೂ ಯಜ್ಞಕುಂಡದಲ್ಲಿ ಉರಿಯುವ ಜ್ವಾಲೆಯಂತೆ ತನ್ನ ವ್ಯಕ್ತಿತ್ವವನ್ನು ತೇಜಸ್ವಿಗೊಳಿಸಬೇಕು.

ಸಂನ್ಯಾಸಾಶ್ರಮ

 ನಾಲ್ಕನೆಯ ಆಶ್ರಮವೇ ಸಂನ್ಯಾಸಾಶ್ರಮ. ಜೀವನದ ಸಂಧ್ಯಾಕಾಲದಲ್ಲಿ ಆಧ್ಯಾತ್ಮಿಕತೆಗೆ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಇದರ ಪ್ರತೀಕವೇ ಕಮಲ ಪುಷ್ಪ. ಕೆಸರಿನೊಳಗಿನ ಕಮಲದಂತೆ ಪವಿತ್ರವಾದ ಜೀವನವನ್ನು ನಡೆಸುವ ಸಮಯ. ಕಠೋರ ಪರಿಶ್ರಮದಿಂದ ಆಧ್ಯಾತ್ಮಿಕ ಸಾಧನೆಯನ್ನು ಮಾಡುತ್ತಾ ಪರಮಾತ್ಮನಲ್ಲಿ ಲೀನವಾಗುವುದು.

 ನಾಲ್ಕು ಆಶ್ರಮಗಳಲ್ಲಿ ಗೃಹಸ್ಥಾಶ್ರಮಕ್ಕೆ ಬಹಳ ಮಹತ್ವವಿದೆ. ಉಳಿದ ಮೂರು ಆಶ್ರಮದಲ್ಲಿ ಜೀವನವನ್ನು ನಡೆಸುವಂತಹವರಿಗೆ ಆಶ್ರಮ ಆಧಾರವನ್ನು ನೀಡುವುದು ಗೃಹಸ್ಥಾಶ್ರಮಿಯ ಜವಾಬ್ದಾರಿಯಾಗಿರುತ್ತದೆ. ಹಾಗಾಗಿ ‘ಧನ್ಯೋ ಗೃಹಸ್ಥಾಶ್ರಮಃ’ ಎಂಬ ಉಕ್ತಿ ಪ್ರಸಿದ್ಧವಾಗಿದೆ. ಉಳಿದ ಮೂರು ಆಶ್ರಮಗಳಲ್ಲಿ ಜೀವನ ನಡೆಸುವಂತಹವರು ವ್ಯಕ್ತಿಗತವಾಗಿ ಕರ್ತವ್ಯದ ಪಾಲನೆಯನ್ನು ಮಾಡಬಹುದು. ಆದರೆ ಗೃಹಸ್ಥನಾದವರು ಪತಿ-ಪತ್ನಿ ಇಬ್ಬರೂ ಸೇರಿ ತಮ್ಮ ಕರ್ತವ್ಯದ ಪಾಲನೆ ಮಾಡಬೇಕಾಗುತ್ತದೆ. ಹಾಗಾಗಿ ವಿವಾಹ ಸಂಸ್ಕಾರಕ್ಕೆ ಮಹತ್ವಪೂರ್ಣ ಸ್ಥಾನವನ್ನು ನೀಡಲಾಗಿದೆ. ಈಗಾಗಲೇ ತಿಳಿಸಿದಂತೆ ಪಿತೃಋಣ, ದೇವಋಣ, ಋಷಿಋಣದಿಂದ ಮುಕ್ತರಾಗಲು ಈ ವಿವಾಹವೆಂಬ ಸಂಸ್ಕಾರ ಅಗತ್ಯವಾಗಿದೆ. ದಂಪತಿಗಳಿಬ್ಬರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಿ ಈ ಋಣಗಳಿಂದ ಮುಕ್ತರಾಗಬಹುದು. ಇದನ್ನು ಹಣದಿಂದ ತೂಗಲು ಸಾಧ್ಯವಿಲ್ಲ. ನಮ್ಮ ಜೀವನ ಪದ್ಧತಿಯಲ್ಲಿ ಎಲ್ಲೆಡೆಯೂ ಕೇವಲ ಕರ್ತವ್ಯದ ಚರ್ಚೆಯಾಗಿದೆ. ಹಿಂದು ಸಂಸ್ಕೃತಿಯಲ್ಲಿ ವ್ಯಕ್ತಿ ಹಾಗೂ ಸಮಾಜದ ಹಿತ ಒಂದಕ್ಕೊಂದು ಪೂರಕವಾಗಿದೆ. ಪ್ರತಿ ವ್ಯಕ್ತಿಯೂ ತನ್ನ ಕರ್ತವ್ಯದ ಪಾಲನೆ ಮಾಡಿದಾಗ ತನ್ನ ಹಕ್ಕಿಗಾಗಿ ಜಗಳ ಮಾಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ವೈಯಕ್ತಿಕ ವಿಕಾಸದ ಜೊತೆ ಸಮಾಜದ ಹಿತವನ್ನು ಗಮನದಲ್ಲಿಟ್ಟುಕೊಂಡಾಗ, ವೈಯಕ್ತಿಕ ಜೀವನವೂ ಸಮೃದ್ಧವಾಗುತ್ತದೆ ಹಾಗೂ ಸಮಾಜವೂ ಉನ್ನತ ಮಟ್ಟಕ್ಕೇರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಸಂಕಲ್ಪಿಸಿದಂತೆ ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳಿಂದ ಜೀವನವನ್ನು ನಡೆಸಬೇಕಾಗಿದೆ.

 ಜೀವನದ ಆಧಾರವೇ ಧರ್ಮ. ಪ್ರತಿ ವ್ಯಕ್ತಿಯೂ ಧರ್ಮದ ಆಧಾರದಲ್ಲಿಯೇ ವ್ಯವಹಾರವನ್ನು ಮಾಡಬೇಕು. ಧರ್ಮಾನುಸಾರವಾಗಿಯೇ ಹಣವನ್ನು ಸಂಪಾದಿಸಬೇಕು. ನಮ್ಮ ಸಂಸ್ಕೃತಿಯಲ್ಲಿ ಸಂಪತ್ತಿಗೆ ಯೋಗ್ಯವಾದ ಸ್ಥಾನವನ್ನು ಕೊಡಲಾಗಿದೆ. ಸಂಪತ್ತನ್ನು ತ್ಯಾಜ್ಯವೆಂದು ಹೇಳುವುದಿಲ್ಲ. ಸಮೃದ್ಧಿ ಎನ್ನುವುದು ಸಂಪತ್ತಿನ ಮೂಲಕ ತೋರ್ಪಡುತ್ತದೆ. ಆದರೆ (ಧನವು) ಸಂಪತ್ತೇ ಎಲ್ಲವೂ ಅಲ್ಲ. ಯಾವುದೇ ರೀತಿಯಲ್ಲಾದರೂ ಹಣ ಸಂಪಾದನೆ ನಮಗೆ ಸ್ವೀಕಾರವಿಲ್ಲ. ಹಣ ಸಂಪಾದನೆ ಮಾಡುವಾಗ ಬೇರೆಯವರನ್ನು ನೋಯಿಸಿ ನಾಶಮಾಡದೇ ಸಂಪಾದಿಸಿದಾಗ ಮಾತ್ರ ಸಮೃದ್ಧಿಯುಂಟಾಗುತ್ತದೆ. ಇದೇ ರೀತಿ ನಮ್ಮ ಆಸೆ ಆಕಾಂಕ್ಷೆಗಳನ್ನು ಪೂರ್ಣಗೊಳಿಸಿಕೊಳ್ಳುವುದನ್ನು ಪುರುಷಾರ್ಥವೆನ್ನುತ್ತೇವೆೆ. ಆದರೆ ನಮ್ಮ ಆಸೆ ಆಕಾಂಕ್ಷೆಗಳನ್ನು ಪೂರ್ಣಗೊಳಿಸಿಕೊಳ್ಳಲು ಬೇರೆಯವರ ಉಪಭೋಗಗಳಿಗೆ ತೊಂದರೆಅನ್ಯಾಯವಾಗಬಾರದು.

 ವಿವಾಹವೆಂದರೆ ಒಂದು ವಿಶೇಷ ಜವಾಬ್ದಾರಿಯ ನಿರ್ವಹಣೆ. ವಿವಾಹದ ಸಮಯದಲ್ಲಿ ಪತಿ-ಪತ್ನಿ ಧರ್ಮೇಚ, ಅರ್ಥೇಚ, ಕಾಮೇಚ ನಾತಿ ಚರಾಮಿ ಎಂಬ ವಚನವನ್ನು ಪರಸ್ಪರ ಮಾಡುತ್ತಾರೆ. ವಿವಾಹವೆನ್ನುವುದು ಕೇವಲ ಇಬ್ಬರು ವ್ಯಕ್ತಿಗಳನ್ನು ಜೋಡಿಸುವ ಕಾರ್ಯಕ್ರಮವಲ್ಲ. ಅದು ಎರಡು ಪರಿವಾರಗಳನ್ನು ಜೋಡಿಸುವ ಒಂದು ಸಂಸ್ಕಾರ. ಹಾಗಾಗಿ ವಧು-ವರನ ಪರಿವಾರದ ಎಲ್ಲಾ ಬಾಂಧವರ ಉಪಸ್ಥಿತಿ ಅವಶ್ಯಕವಾಗಿರುತ್ತದೆ. ವಧುವಿನ ತಂದೆ ತನ್ನ ಮಗಳನ್ನು ಆ ಇಡೀ ವರನ ಪರಿವಾರಕ್ಕೆ ಒಪ್ಪಿಸುತ್ತಾನೆ. ಎರಡೂ ಪರಿವಾರಗಳನ್ನು ಜೋಡಿಸುವಂತಹ ಒಂದು ಜವಾಬ್ದಾರಿ ಆ ನವದಂಪತಿಗಳದು. ಪತಿ-ಪತ್ನಿಯ ನಡುವೆ ಪರಸ್ಪರ ವಿಶ್ವಾಸ, ನಂಬಿಕೆ, ಸ್ನೇಹ, ಕ್ಷಮಾಗುಣ, ಪ್ರೀತಿ ಅವರ ಸಂಬಂಧವನ್ನು ಸಧೃಡಗೊಳಿಸುತ್ತದೆ. ವಿವಾಹವೆಂಬುದು ಒಂದು ತೋರಿಕೆಯ ಸಮಾರಂಭವಲ್ಲ. ಇದು ನಮ್ಮ ಸಮಾಜ ವ್ಯವಸ್ಥೆಯ ಒಂದು ಭದ್ರ ಬುನಾದಿ. ದಂಪತಿಗಳು ಪರಿವಾರ ವ್ಯವಸ್ಥೆಯ ಮಹತ್ವಪೂರ್ಣ ಭಾಗವಾಗಿರುತ್ತಾರೆ.

  ನನಗೆ ಒಂದು ಸಣ್ಣ  ಘಟನೆ ನೆನಪಿಗೆ ಬರುತ್ತಿದೆ. 2000 ಇಸವಿಯಲ್ಲಿ ಸಂಘಟನೆಯ ಕಾರ್ಯದ ನಿಮಿತ್ತ ಅಮೆರಿಕೆಗೆ ಹೋಗಿದ್ದೆ. ಆ ದಿನ ನ್ಯೂಯಾರ್ಕ್ ವಿಮಾನ ನಿಲ್ದಾಣದಿಂದ ಲಗಾವಾಡಿಯ ವಿಮಾನ ನಿಲ್ದಾಣದವರೆಗೆ ಟ್ಯಾಕ್ಸಿಯಲ್ಲಿ ಹೋಗಬೇಕಾಯಿತು. ಆ ಟ್ಯಾಕ್ಸಿಯ ಚಾಲಕ ಅಮೆರಿಕನ್ ಕ್ರಿಶ್ಚಿಯನ್ ಅಗಿದ್ದ. ಸಂಜೆ 5.00 ಗಂಟೆಯ ಸಮಯ. ನ್ಯೂಯಾರ್ಕ್ ನಗರದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಟ್ಯಾಕ್ಸಿ ನಿಧಾನವಾಗಿ ಇಂಚಿಂಚು ಚಲಿಸುತ್ತಿತ್ತು. ಡ್ರೈವರ್ ಪದೇ ಪದೇ ಹಿಂತಿರುಗಿ ನೋಡುತ್ತಿದ್ದ. ಕೊನೆಗೆ ನಾನೇ ಅವನು ತಿರುಗಿ ನೋಡುತ್ತಿರುವ ಕಾರಣವನ್ನು ಕೇಳಿದೆ. ಆಗ ಅವನು ನೀವು ಭಾರತದವರೇ ಎಂದು ಪ್ರಶ್ನಿಸಿದ? ನಾನು ಅಭಿಮಾನದಿಂದ ಹೌದು, ನಾನು ಭಾರತದವಳು ಎಂದು ಉತ್ತರಿಸಿದೆ. ಹೌದು, ನಾನು ಮೊದಲೇ ನಿಮ್ಮನ್ನು ಗುರುತಿಸಿದ್ದೆ ಎಂದಾಗ ನಾನು, ಹೌದು ನಾನು ಧರಿಸಿರುವ ಈ ಸೀರೆಯಿಂದ ಗುರುತಿಸಿರುವೆಯಲ್ಲವೇ? ಎಂದು ಪ್ರಶ್ನಿಸಿದೆ. ಆದರೆ ಅವನು ನೀವು ಧರಿಸಿರುವ ಸೀರೆಯಿಂದಲ್ಲ, ನಿಮ್ಮ ಕತ್ತಿನಲ್ಲಿ ಧರಿಸಿರುವ ಆಭರಣದಿಂದ ಎಂದ. ಇದು ಮಹಿಳೆ ವಿವಾಹಿತೆ ಎಂಬುದನ್ನು ಸೂಚಿಸುತ್ತದೆ ಎಂಬ ಮಾತು ಕೇಳಿ ಸಹಜವಾಗಿ ಹಿಂದಿನದನ್ನು ಏನು ಮಾಡಿದಿರಿ ಎಂದು ಪ್ರಶ್ನಿಸಿದ? ಅವನ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಲು ಕೆಲವು ಕ್ಷಣ ಬೇಕಾಯಿತು. ನಂತರ ನಗುತ್ತಾ, ನಮಗೆ ಆ ರೀತಿಯ ತೊಂದರೆ ಬರುವುದಿಲ್ಲ. ಭಾರತೀಯ ಮಹಿಳೆಯರು ಜೀವನದಲ್ಲಿ ಒಂದು ಬಾರಿ ಮಾತ್ರ ಮದುವೆಯಾಗುತ್ತಾರೆ. ಆಭರಣದ Design ಬದಲಾಯಿಸುತ್ತಾರೆ. ಆದರೆ ಪತಿಯನ್ನಲ್ಲ ಎಂದುತ್ತರಿಸಿದೆ. ಹಾಗಾದರೆ ನೀವು ಮದುವೆಯಾಗಿ ಎಷ್ಟು ವರ್ಷವಾಯಿತು? ಎಂಬ ಪ್ರಶ್ನೆಗೆ ನಾನು 22 ವರ್ಷವೆಂದು ತಿಳಿಸಿದೆ. ಅವನು ಕಾರ್‌ನ ಬ್ರೇಕ್ ಹಾಕಿ ಹಿಂದೆ ತಿರುಗಿ ಆಶ್ಚರ್ಯದಿಂದ, you mean you are bearing the same man from 22 years?  ಎಂದ. ನಾನು ಶಾಂತಳಾಗಿ ಉತ್ತರಿಸಿದೆ – He is also bearing me.

 ಯಾವುದೇ ಒಬ್ಬ ವ್ಯಕ್ತಿ ಪರಿಪೂರ್ಣನಾಗಿರುವುದಿಲ್ಲ. ಸಾಮಾನ್ಯ ಜೀವನದಲ್ಲಿ ಗುಣ-ದೋಷಗಳಿಂದ ಕೂಡಿರುವ ವ್ಯಕ್ತಿಗಳು ಪರಸ್ಪರ ಸಂಭಾಳಿಸುತ್ತ ಇಡೀ ಜೀವನವನ್ನು ಒಟ್ಟಿಗೆ ಕಳೆಯುವ ವಚನ ಕೊಟ್ಟಿರುತ್ತಾರೆ. ಹಾಗೆಯೇ ಅದನ್ನು ನಿಭಾಯಿಸುತ್ತಾರೆ. ನಂತರ ನಮ್ಮ ಚರ್ಚೆ ಭಾರತದ ಪರಿವಾರದ ವ್ಯವಸ್ಥೆಯ ಬಗ್ಗೆ ನಡೆಯಿತು. ಕೇವಲ 22 ವರ್ಷದ ದಾಂಪತ್ಯ ವಿಶೇಷ ಅಲ್ಲ. ಭಾರತದಲ್ಲಿ ಅನೇಕರು 35/40 ವರ್ಷಗಳ ಯಶಸ್ವೀ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ. ನಾವು ಜನ್ಮ ಜನ್ಮಾಂತರದಲ್ಲೂ ಒಟ್ಟಿಗೆ ಸಾಗಬೇಕೆಂದು ಅಪೇಕ್ಷಿಸುತ್ತೇವೆ. ಭಾರತೀಯ ಸಂಸ್ಕೃತಿಯಲ್ಲಿ ವಿವಾಹವೆನ್ನುವುದು ಒಂದು ಪವಿತ್ರ ಬಂಧನ.

 ಈ ದಿನಗಳಲ್ಲಿ ಪರಿವಾರ ವ್ಯವಸ್ಥೆಯಲ್ಲಿ ವಿಶೇಷವಾಗಿ ಸ್ತ್ರೀಯರಿಗೆ ಅನ್ಯಾಯವಾಗುತ್ತಿದೆ ಎಂಬ ಗುಲ್ಲು ಕೇಳಿಬರುತ್ತಿದೆ. ಆದರೆ ಪ್ರತಿ ವ್ಯವಸ್ಥೆಯಲ್ಲಿಯೂ ಎಲ್ಲರೂ ತಮ್ಮ ತಮ್ಮ ಕರ್ತವ್ಯ ನಿಭಾಯಿಸಬೇಕಾಗುತ್ತದೆ. ಕಾರ್ಯವಿಭಜನೆಯಲ್ಲಿ ಸಮಾನತೆಯ ವಿಚಾರ ಗೌಣವಾಗುತ್ತದೆ, ಸಮರಸತೆಗೆ ಮಹತ್ವವಿರುತ್ತದೆ. ಎಲ್ಲರೂ ಒಂದೇ ರೀತಿಯ ಕಾರ್ಯಮಾಡಲಾಗುವುದಿಲ್ಲ. ಪರಸ್ಪರ ಪೂರಕವಾಗಿದ್ದಾಗ ಮಾತ್ರ ಸಹಜೀವನ ಸಾಧ್ಯ. ಪರಿಣಾಮವಾಗಿ ಕುಟುಂಬವೂ ಉಳಿಯುತ್ತದೆ, ಕುಟುಂಬದ ಬುನಾದಿಯ ಮೇಲೆ ಸಮಾಜವು ಸುಭದ್ರವಾಗಿ, ಸದೃಢವಾಗಿ ಸಂರಕ್ಷಿತವಾಗಿರುತ್ತದೆ. ವಿಚಿತ್ರವೆಂದರೆ ಪಾಶ್ಚಿಮಾತ್ಯರ ಭೋಗವಾದೀ ಚಿಂತನೆ ತಲುಪಿಲ್ಲದ ಪ್ರದೇಶಗಳಲ್ಲಿ ಇಂದಿಗೂ ಪರಿವಾರಗಳು ಸುಚಾರು ರೂಪದಲ್ಲಿ ಬೆಳೆದುಬಂದಿದೆ. ಕುಟುಂಬ ವ್ಯವಸ್ಥೆ ಬಲವಾಗಿದ್ದಾಗ ಅನಾಥಾಶ್ರಮ, ವೃದ್ಧಾಶ್ರಮಗಳ ಅವಶ್ಯಕತೆಯೇ ಇರುವುದಿಲ್ಲ. ಹಣವೇ ಪ್ರಧಾನ ಎಂಬ ಇಂದಿನ ಜೀವನಶೈಲಿಯಿಂದಾಗಿ ಗ್ರಾಮೀಣ ಜನತೆಯು ನಗರಗಳಿಗೆ ವಲಸೆ ಹೋಗತೊಡಗಿದ್ದಾರೆ. ದೊಡ್ಡದೊಡ್ಡ ನಗರಗಳಲ್ಲಿ ಪುಟ್ಟಪುಟ್ಟ ಕುಟುಂಬಗಳು ರೂಪುಗೊಂಡಿವೆ. ಆರ್ಥಿಕ ಕಾರಣದಿಂದ ಕುಟುಂಬವನ್ನು, ಮಕ್ಕಳನ್ನು ಸರಿಯಾಗಿ ಗಮನಿಸದೆ ಉದ್ಯೋಗ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸೂಕ್ತವಯಸ್ಸಿನಲ್ಲಿ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸುವ ಗುರುತರ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆಧುನಿಕರೆಂದುಕೊಳ್ಳುವವರು ಡಿಂಕ್ ಫ್ಯಾಮಿಲಿ (Double income no kids) ಎಂದು ಜಂಭಕೊಚ್ಚಿಕೊಳ್ಳುವುದು ಕೇಳಿಬರತೊಡಗಿದೆ. ಪರಿಣಾಮವಾಗಿ ಮುಂದಿನ ಪೀಳಿಗೆ ನಿರ್ಮಾಣಗೊಳ್ಳುತ್ತಿಲ್ಲ. ಇರುವ ಮಕ್ಕಳಲ್ಲೂ ಪರಿವಾರದ ಕಲ್ಪನೆ ಮಾಯವಾಗತೊಡಗಿದೆ. ವ್ಯಕ್ತಿ ಸ್ವಾತಂತ್ರ್ಯ,  ಸ್ತ್ರೀ-ಪುರುಷ ಸಮಾನತೆಯ ಕೂಗಿನಲ್ಲಿ ನಮ್ಮ ಸಂಸ್ಕೃತಿಯ ವಿಶೇಷವಾದ ಪರಿವಾರ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಚಿಹ್ನೆ ಏಳತೊಡಗಿದೆ. ಈ ಕುರಿತು ಚಿಂತನೆ, ಪರಿಹಾರ, ಕಾರ್ಯಾನ್ವಯನ ನಡೆಯಬೇಕು. ಇದು ಎಲ್ಲರ, ವಿಶೇಷವಾಗಿ ಮನೆಯ ಮಹಿಳೆಯ ಜವಾಬ್ದಾರಿ. ಏಕೆಂದರೆ ಎಲ್ಲರನ್ನೂ ಜತೆಗೊಯ್ಯುವುದು ಮಹಿಳೆಯ ದೈವದತ್ತ ಗುಣವಾಗಿದೆ. ಇತ್ತೀಚೆಗೆ ನೈತಿಕ ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ಚರ್ಚೆಗಳು ಕೇಳಿಬರುತ್ತಿದೆ. ಆದರೆ ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಶಿಕ್ಷಣ ಮತ್ತು ಸಂಸ್ಕಾರಗಳು ಚಿಕ್ಕಂದಿನಿಂದಲೇ ದೊರೆಯುತ್ತಿದ್ದುದು ನಮಗೆಲ್ಲರಿಗೂ ತಿಳಿದ ವಿಷಯವಾಗಿದೆ.

 ಹೀಗೆ, ಮಕ್ಕಳಿಂದಾರಂಭಿಸಿ ಮನೆಮಂದಿಗೆಲ್ಲಾ ಅಷ್ಟೇ ಏಕೆ ಸುತ್ತಲಿನ ಸಮಾಜ, ಪರಿಸರ ಪೋಷಕ ಚಿರಪುರಾತನ ನಿತ್ಯನೂತನ ಕುಟುಂಬ ವ್ಯವಸ್ಥೆಯನ್ನು ಮತ್ತೊಮ್ಮೆ ಸದೃಢಗೊಳಿಸಬೇಕಾದುದು ಇಂದಿನ ಕಾಲದ ಕರೆಯಾಗಿದೆ.

ಅನುವಾದ : ಅರ್ಚನಾ ಫಡಕೆ

 

   

Leave a Reply