ಹಿಂದೂ ಜಾಗೃತಿಯ ಪರಿಣಾಮ-ಚುನಾವಣಾ ಫಲಿತಾಂಶ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 30.05.2016

– ರಮೇಶ್‍ ಪತಂಗೆ

ಐದು ರಾಜ್ಯಗಳ ಚುನಾವಣೆಗಳ ಫಲಿತಾಂಶ ಹೊರಬಿದ್ದನಂತರ ಕಾಂಗ್ರೆಸ್ ಪಕ್ಷಕ್ಕೆ ಏನಾದೀತು ? ನಿಜವಾಗಿಯೂ ಭಾರತವು ಕಾಂಗ್ರೆಸ್‌ಮುಕ್ತವಾದೀತೇ ? ಎಂಬ ಚರ್ಚೆ ಶುರುವಾಗಿದೆ. ಅಸ್ಸಾಮ, ಪ. ಬಂಗಾಳ, ತಮಿಳುನಾಡು ಮತ್ತು ಕೇರಳದಲ್ಲಿ ಕಾಂಗ್ರೆಸ್ಸಿಗೆ ಅಪೇಕ್ಷಿತ ಯಶಸ್ಸು ಸಿಗದಿರುವುದು, ಈ ಚರ್ಚೆಗೆ ಕಾರಣ. ಅಸ್ಸಾಮಿನಲ್ಲಿ ಹದಿನೈದು ವರ್ಷ ಅಧಿಕಾರದಲ್ಲಿದ್ದ ತರುಣ್ ಗೊಗೊಯೀ ಸರ್ಕಾರ ಹೋಗಿ ಅಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಪ. ಬಂಗಾಳ ಮತ್ತು ತಮಿಳುನಾಡಿನಲ್ಲಿ ಮತ್ತೊಮ್ಮೆ ಮಮತಾ ಬ್ಯಾನರ್ಜಿ ಮತ್ತು ಜಯಲಲಿತಾ ಅಧಿಕಾರಕ್ಕೆ ಬಂದಿದ್ದಾರೆ. ಇವೆರಡೂ ರಾಜ್ಯಗಳಲ್ಲಿ ಕಾಂಗ್ರೆಸ್ಸು 44 ಮತ್ತು 8 ಸ್ಥಾನಗಳನ್ನು ಗಳಿಸಿದೆ. ಕೇರಳದಲ್ಲಿ ಅವರ ಅಧಿಕಾರ ಹೋಗಿದೆ. ಪಾಂಡಿಚೆರಿಯಲ್ಲಿ ಕಾಂಗ್ರೆಸ್ಸು ತನ್ನ ಸ್ಥಾನ ಉಳಿಸಿಕೊಂಡಿದೆ.
ಚುನಾವಣೆಗಳ ಸೋಲು-ಗೆಲವುಗಳಿಂದ ಅಖಿಲ ಭಾರತೀಯ ಪಕ್ಷದ ಭವಿಷ್ಯವನ್ನು ಪ್ರಶ್ನಿಸುವುದು ಸರಿಯಲ್ಲ. ಏಕೆಂದರೆ ಚುನಾವಣೆಯ ಸಫಲತೆ ಅಥವಾ ವಿಫಲತೆಯು ಮುಖ್ಯವಾಗಿ ಚುನಾವಣೆಗಳ ವ್ಯೆಹರಚನೆ, ಮಿತ್ರಪಕ್ಷಗಳ ಆಯ್ಕೆ, ಯೋಗ್ಯ ವಿಷಯಗಳ ಆಯ್ಕೆ, ಚುನಾವಣೆಗಳ ಪ್ರಾದೇಶಿಕ ನೇತೃತ್ವ ಇವುಗಳನ್ನು ಅವಲಂಬಿಸಿದೆ. ಬಿಜೆಪಿಯು ಈ ವಿಷಯದಲ್ಲಿ ದಿಲ್ಲಿ ಮತ್ತು ಬಿಹಾರದಲ್ಲಿ ತಪ್ಪು ಮಾಡಿದ್ದರಿಂದ ಅವರು ಅದರ ಪರಿಣಾಮಗಳನ್ನು ಅನುಭವಿಸಬೇಕಾಯಿತು. ಕಾಂಗ್ರೆಸ್ಸು ಅಸ್ಸಾಮ, ಕೇರಳ, ಬಂಗಾಳದಲ್ಲಿ ಇದೇ ತಪ್ಪು ಮಾಡಿತು. ಅದರ ಪರಿಣಾಮ ಗೋಚರಿಸುತ್ತಿದೆ. ಈ ಪರಾಭವದ ಬಗ್ಗೆ ಯೋಚಿಸುವುದೆಂತು, ಇದು ಕಾಂಗ್ರೆಸ್ಸಿನ ಪ್ರಶ್ನೆ. ಅವರಿಗೆ ಬೇಕಿಲ್ಲದ ಸಲಹೆ ನೀಡಿ ಉಪಯೋಗವಿಲ್ಲ. ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಹೇಳಿದರು, ‘‘ನಾವು ಪರಾಭವದ ಚಿಕಿತ್ಸೆ ಮಾಡೋಣ ಮತ್ತು ಜನಸೇವೆಗೆ ಹಿಂದಿಗಿಂತಲೂ ಅಧಿಕ ಹುಮ್ಮಸ್ಸಿನಿಂದ ಕೆಲಸ ಮಾಡೋಣ.’’ ಇನ್ನೊಬ್ಬ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳುತ್ತಾರೆ, ‘‘ಆತ್ಮಚಿಂತನವು ಹಳೆಯಕಾಲದ ವಿಷಯವಾಗಿದ್ದು, ಈಗ ಕಾಯಕದ ವೇಳೆ ಬಂದಿದೆ… ಈಗ ಸರ್ವೋಚ್ಚ ನಾಯಕರು ನಿಷ್ಕರ್ಷೆ ತೆಗೆದು ಆ ನಿಟ್ಟಿನಲ್ಲಿ ಅವಶ್ಯಕ ಕೃತಿ ಮಾಡುವ ವೇಳೆ ಬಂದಿದೆ.’’ ದಿಗ್ವಿಜಯ ಸಿಂಗ್ ಹೇಳಿದರು, ‘‘ಚುನಾವಣೆಗಳ ಫಲಿತಾಂಶ ನಿರಾಶಾದಾಯಕವಾಗಿದ್ದರೂ ಅನಪೇಕ್ಷಿತವೇನಲ್ಲ. ಈಗ ಪಕ್ಷವು ಭಾರೀ ಶಸ್ತ್ರಕ್ರಿಯೆಗೆ ಎದುರಾಗಬೇಕು.’’ ಕಾಂಗ್ರೆಸ್ ಪಕ್ಷದ ನಾಯಕರು ಅವಶ್ಯಕ ಬದಲಾವಣೆ ಮಾಡಿಕೊಂಡು, ಅದನ್ನು ಒಂದು ಸಮರ್ಥ ಪಕ್ಷವಾಗಿ ಕಟ್ಟುವರೆಂದು ಅಪೇಕ್ಷಿಸಲು ಅಡ್ಡಿಯಿಲ್ಲ, ಕಾರಣ ಅದಿಲ್ಲದೆ ಸಂಸದೀಯ ಪ್ರಜಾತಂತ್ರ ನಡೆಯಲಾರದು.
ಸಂಸದೀಯ ಪ್ರಜಾತಂತ್ರದಲ್ಲಿ ವಿರೋಧಿ ಪಕ್ಷವಿಲ್ಲದೆ ಆಡಳಿತಕ್ಕೆ ಏನೂ ಅರ್ಥವಿಲ್ಲ. ಮುಖ್ಯವಾಗಿ ಪ್ರಜಾತಂತ್ರೀಯ ಆಡಳಿತದ ಪರಿಕಲ್ಪನೆ ಬಂದಿದ್ದಾದರೂ ರಾಜಸತ್ತೆಯ ನಿರಂಕುಶ ಅಧಿಕಾರವನ್ನು ನಿಯಂತ್ರಿಸುವುದಕ್ಕಾಗಿಯೇ. ಅಧಿಕಾರದ ಅನೇಕ ಗುಣಧರ್ಮಗಳಿವೆ. ಅಧಿಕಾರವು ಭ್ರಷ್ಟಗೊಳಿಸುವುದಲ್ಲದೆ, ಅಧಿಕಾರ ಮೆರೆಯುವವರ ಮನಸ್ಸಿನಲ್ಲಿ ಸರ್ವಾಧಿಕಾರದ ಭಾವನೆಯನ್ನು ಮೂಡಿಸುತ್ತದೆ. ನಾನು ಸರ್ವಸತ್ತಾಧೀಶನು, ನನ್ನ ಮೇಲೆ ಯಾರೂ ಕೈಮಾಡಲಾರರು, ಎಂಬ ಭಾವನೆ ಸತ್ತಾಧೀಶರ ಮನಸ್ಸಿನಲ್ಲಿ ಮೂಡುವುದುಂಟು. ಇದರಿಂದ ಪ್ರಜಾಪೀಡನೆಗೆ ಅವಕಾಶವಾಗುತ್ತದೆ. ಅರಸೊತ್ತಿಗೆಯಲ್ಲಾಗುವುದು, ಸೈನ್ಯಶಾಹಿಯಲ್ಲಾಗುವುದು, ಪ್ರಜಾತಂತ್ರದಲ್ಲೂ ಆಗಬಲ್ಲದು. ಜಯಲಲಿತಾ ಆಡಳಿತ ಇದಕ್ಕೆ ಜೀವಂತ ಉದಾಹರಣೆಯಾಗಿದೆ. ಹಾಗೆಂದೇ ತಾನು ಶಾಶ್ವತವಾಗಿ ಅಧಿಕಾರದಲ್ಲಿರುವವನಲ್ಲ, ನಾಳೆ ಜನತೆ ನನ್ನನ್ನು ಅಧಿಕಾರದಿಂದ ಇಳಿಸೀತು ಎಂಬ ನಿರಂತರ ಭೀತಿಯು ಅಧಿಕಾರ ಚಲಾಯಿಸುವವರ ಮನಸ್ಸಿನಲ್ಲಿರಬೇಕು. ಇದಕ್ಕಾಗಿ ವಿರೋಧಿ ಪಕ್ಷ ಬೇಕಾಗುತ್ತದೆ. ಅದು ಸಶಕ್ತವಾಗಿರಬೇಕು. ಪ್ರಬಲ ವಿರೋಧಿ ಪಕ್ಷವೇ ಜನರ ಸ್ವಾತಂತ್ರ್ಯದ ಭರವಸೆಯಾಗಿರುತ್ತದೆ. ಇದಕ್ಕಾಗಿ ಕಾಂಗ್ರೆಸ್‌ಮುಕ್ತ ಭಾರತವಲ್ಲ, ಕಾಂಗ್ರೆಸ್‌ಯುಕ್ತ ಭಾರತವಿರಬೇಕು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಭಾರೀ ಒಳ್ಳೆಯ ಯಶಸ್ಸು ಗಳಿಸಿದೆ. ಇದಕ್ಕೆ ಮುಂಚೆ ದಿಲ್ಲಿ ಮತ್ತು ಅನಂತರ ಬಿಹಾರ ರಾಜ್ಯದಲ್ಲಿ ಬಿಜೆಪಿಯು ಸೋಲುಣ್ಣಬೇಕಾಯಿತು. ಇದರಿಂದ ಉನ್ಮತ್ತ ಟೀಕಾಕಾರರಿಗೆ ಬಿಜೆಪಿಯನ್ನು ಟೀಕಿಸಲು ವಿಷಯ ಸಿಕ್ಕಿತು. ಮೋದಿ ಅಲೆ ಮುಗಿದಿದೆ, ಪರಾಭವಕ್ಕೆ ಅಮಿತ್ ಶಾ, ನರೇಂದ್ರ ಮೋದಿ ಮತ್ತು ಅರುಣ್ ಜೇಟ್ಲಿ ಹೊಣೆಗಾರರು, ಎಂದು ಅರುಣ್ ಶೌರಿ ಶೋಧನೆ ಮಾಡಿದರು. ಈಗ ಬಿಜೆಪಿಗೆ ದೊರಕಿದ ಯಶಸ್ಸಿಗೆ ಅರುಣ್ ಶೌರಿ ಪ್ರತಿಕ್ರಿಯೆ ಏನಿರಬಹುದು ?
ಈ ಚುನಾವಣೆಗಳಲ್ಲಿ ಬಿಜೆಪಿಯ ಯಶಸ್ಸು ಭಾರತದ ರಾಜಕಾರಣದ ಮೇಲೆ ಬಹು ಮಹತ್ವದ ಪರಿಣಾಮ ಬೀರಬಹುದು. 2014ರ ಚುನಾವಣಾ ಫಲಿತಾಂಶಗಳಿಗೆ ಭಾಷ್ಯ ಮಾಡುತ್ತ ಲಂಡನ್ನಿನ ಗಾರ್ಡಿಯನ್ ಪತ್ರಿಕೆ ಹೇಳಿತು, ಭಾರತವು ನೈಜ ಅರ್ಥದಲ್ಲಿ ಸ್ವತಂತ್ರಗೊಳ್ಳುತ್ತಿದೆ, ಭಾರತದಿಂದ ಇಂಗ್ಲಿಷರ ಆಡಳಿತ ನೈಜ ಅರ್ಥದಲ್ಲಿ ಹೋಗಿದೆ. ಗಾರ್ಡಿಯನ್ ಹೇಳದಿರಬಹುದು, ಆದರೆ ಅದು ಹೇಳಬೇಕಾಗಿದ್ದೆಂದರೆ, 67 ವರ್ಷಗಳ ಬಳಿಕ ಭಾರತದ ಹಿಂದೂ ಮತದಾರರು ಈಗ ರಾಜಕೀಯ ದೃಷ್ಟಿಯಿಂದ ಜಾಗೃತರಾಗುತ್ತಿದ್ದಾರೆ. ಹಿಂದೂ ಸಮಾಜವನ್ನು ಸಾಮಾಜಿಕ ದೃಷ್ಟಿಯಿಂದ ಜಾಗೃತಗೊಳಿಸುವ ಕಾರ್ಯವನ್ನು ಅನೇಕ ಶೇಷ್ಠ ಪುರುಷರು ಮಾಡಿದ್ದಾರೆ. ಅದರಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರರ ಹೆಸರು ಹೇಳಲಡ್ಡಿಯಿಲ್ಲ. ಈ ಜಾಗೃತಿಯು ಮುಖ್ಯವಾಗಿ ಸಾಮಾಜಿಕ ದೋಷಗಳ ಕುರಿತಾಗಿತ್ತು. ಎರಡನೆಯ ರೀತಿಯ ಜಾಗೃತಿಯ ಅವಶ್ಯಕತೆಯೂ ಇತ್ತು. ಈ ಜಾಗೃತಿಯು ರಾಜಕಾರಣ, ಸತ್ತಾಕಾರಣ ಮತ್ತು ಅದರಲ್ಲಿ ನಮ್ಮ ಸಹಭಾಗಿತ್ವಕ್ಕೆ ಸಂಬಂಧಿಸಿತ್ತು. ಈ ಜಾಗೃತಿಯ ಶ್ರೇಯಸ್ಸು ವಿಶ್ವ ಹಿಂದು ಪರಿಷದ್, ಭಾರತೀಯ ಜನತಾ ಪಕ್ಷ ಹಾಗೂ ಇತರ ಸಂಘಟನೆಗಳಿಗೆ ಸಲ್ಲಬೇಕು. ಅಸ್ಸಾಮ ಮತ್ತು ಕೇರಳದ ಚುನಾವಣೆಯ ಫಲಿತಾಂಶಗಳು ಈ ಜಾಗೃತಿಯ ಪ್ರವಾಹ ಹೇಗಿದೆಯೆಂದು ಹೇಳುತ್ತವೆ.
ಅಸ್ಸಾಮಿನಲ್ಲಿ ಬಾಂಗ್ಲಾದೇಶಿ ಮುಸಲ್ಮಾನರ ಭಾರೀ ನುಸುಳುವಿಕೆ ನಡೆಯುತ್ತಿದೆ. ಇದರಿಂದ ಅಸ್ಸಾಮಿನ ಜನಸಂಖ್ಯೆಯಲ್ಲಿ ಮುಸಲ್ಮಾನರ ಪ್ರಮಾಣವು 34 ಶೇಕಡಾ ಆಗಿದೆ. ಇದೊಂದು ರೀತಿಯ ಆಕ್ರಮಣವೇ ಆಗಿದೆ. ಈ ಆಕ್ರಮಣವನ್ನು ‘ಡಿಮೊಗ್ರಾಫಿಕ್ ಅಗ್ರೆಶನ್’ ಎನ್ನುತ್ತಾರೆ. ಜನಸಂಖ್ಯೆಯ ಈ ಆಕ್ರಮಣದಿಂದಾಗಿ ಅಸ್ಸಾಮಿನ ಹಿಂದೂ ಜೀವನಕ್ಕೆ ಅಪಾಯವಾಗುತ್ತಿದೆ. ಈ ವಿಷಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದ ಮೂರು ದಶಕಗಳಿಂದ ಚಳವಳಿ ನಡೆಸುತ್ತಿದೆ.
ಬಾಂಗ್ಲಾದೇಶಿ ನುಸುಳುಕೋರರನ್ನು ತಡೆಗಟ್ಟಬೇಕು, ಅವರನ್ನು
ಹೊರಗಟ್ಟಬೇಕು ಹಾಗೂ ಅಸ್ಸಾಮನ್ನು ನುಸುಳುವಿಕೆ ಮುಕ್ತ ಗೊಳಿಸಬೇಕು. ಬಾಂಗ್ಲಾದೇಶಿಗಳು ಮುಸಲ್ಮಾನರಾಗಿರುವುದರಿಂದ ಮುಸಲ್ಮಾನಪ್ರೇಮಿ ಜಾತ್ಯತೀತ ಮಂದಿ ಅದರ ವಿರುದ್ಧ ಕೂಗೆಬ್ಬಿಸಿದರು. ಪ. ಬಂಗಾಳದ ಕಮ್ಯುನಿಸ್ಟ್ ಸರ್ಕಾರವು ನುಸುಳುಕೋರರಿಗೆ ಎಲ್ಲ ರೀತಿಯ ಸಹಾಯ ಮಾಡಿತು, ಕಾಂಗ್ರೆಸ್ ಸಹ ಹಾಗೆಯೇ ಮಾಡಿತು. ನುಸುಳುಕೋರರು ತಮ್ಮದೇ ಮತದಾರರೆಂದು ಅವರನ್ನು ಸಂರಕ್ಷಿಸುವುದು ಕಾಂಗ್ರೆಸ್ಸಿನ ನಿಲುವಾಯಿತು. ಈ ಚುನಾವಣೆಯಲ್ಲಿ 38 ಶೇಕಡಾ ಮುಸಲ್ಮಾನರು ಕಾಂಗ್ರೆಸ್ಸಿಗೆ ಮತದಾನ ಮಾಡಿದರು, ಹಿಂದುಗಳು ಕಾಂಗ್ರೆಸ್ಸಿಗೆ ಬೆನ್ನುತಿರುಗಿಸಿದರು.
ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಶ್ರೇಯಸ್ ಸರದೇಸಾಯಿ ಮತ್ತು ಧ್ರುಬಾ ಪ್ರಿತಮ್ ಶರ್ಮಾ ಅವರ ಒಂದು ಲೇಖನವಿದೆ. ಅವರು ಹೇಳುತ್ತಾರೆ, ‘‘63 ಶೇಕಡಾ ಹಿಂದೂ ಮತದಾರರು ಬಿಜೆಪಿಗೆ ಮತದಾನ ಮಾಡಿದರು. 2014ರ ಲೋಕಸಭಾ ಚುನಾವಣೆಯಲ್ಲಿ 58 % ಹಿಂದೂ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದರೆ, ಈಗ 5% ಏರಿಕೆಯಾಗಿದೆ. ಮತದಾನಕ್ಕೆ ಹೊರಬಿದ್ದ ಹಿಂದೂ ಮತದಾರರ ಸಂಖ್ಯೆಯಲ್ಲೂ ಇಂತಹ ಭಾರೀ ಏರಿಕೆಯಾಗಿದೆ.’’ ಲೇಖಕರ ಅಭಿಪ್ರಾಯದಂತೆ 2009ರಲ್ಲಿ
66% ಹಿಂದೂ ಮತದಾರರು ಮತದಾನಕ್ಕೆ ಹೊರಬಿದ್ದಿದ್ದರೆ, 2016ರಲ್ಲಿ 86% ಹಿಂದುಗಳು ಮತದಾನಕ್ಕೆ ಹೊರಬಿದ್ದರು.
ಅಸ್ಸಾಮಿನಲ್ಲಿ ಬಾಂಗ್ಲಾದೇಶಿ ನುಸುಳುವಿಕೆಯು ಜ್ವಲಂತ ಸಮಸ್ಯೆಯಾಗಿರುವಂತೆಯೇ ಇನ್ನೊಂದು ಸಮಸ್ಯೆಯು ಬಂಗಾಳಿ ಭಾಷಿಗರದು. ಅಸ್ಸಾಮಿ ಭಾಷಿಗರು ಮತ್ತು ಬಂಗಾಳಿ ಭಾಷಿಗರಲ್ಲಿ ಸಂಘರ್ಷವಿರುತ್ತದೆ. ಆದರೆ ಈ ಸಲ ಅಸ್ಸಾಮಿ ಮತ್ತು ಬಂಗಾಳಿ ಜನ ಭಾಷೆಯ ಸಮಸ್ಯೆ ಬದಿಗಿಟ್ಟರು, ಹಿಂದೂ ಅಸ್ತಿತ್ವದ ಸಮಸ್ಯೆಯು ಮುಖ್ಯವೆಂದು ಭಾವಿಸಿದರು. ಹೀಗಾಗಿ ಅಸ್ಸಾಮಿನ ಅಸ್ಸಾಮಿ ಮತ್ತು ಬಂಗಾಳಿ ಭಾಷಿಗರು ಹಿಂದುಗಳೆಂದು ಮತದಾನ ಮಾಡಿದರು. ಇದರಿಂದ ಬಂಗಾಳದ ಮುಂದಿನ ಚುನಾವಣೆಗಳ ಮೇಲೆ ಪರಿಣಾಮವಾಗದಿರದು. ಮಮತಾ ಬ್ಯಾನರ್ಜಿಯೂ ಮುಸ್ಲಿಂ ಮತಬ್ಯಾಂಕಿನ ರಾಜಕೀಯ ಮಾಡುತ್ತಾರೆ. ಎಲ್ಲಿಯವರೆಗೆ ಹಿಂದುವು ನಿದ್ದೆಯಲ್ಲಿರುವನೋ, ಅಲ್ಲಿಯವರೆಗೆ ಮುಸ್ಲಿಂ ಮತಬ್ಯಾಂಕಿನ ರಾಜಕೀಯ ಯಶಸ್ವಿಯಾದೀತು, ಆದರೆ ಆತ ಎಚ್ಚತ್ತುಕೊಂಡಾಗ ರಾಜಕಾರಣದ ಗುಜರಾತ್ ಆದೀತು ಅಥವಾ ಅಸ್ಸಾಮ ಆದೀತು. ಹಾಗೆಂದೇ ಬಂಗಾಳವೂ ಇಂದಲ್ಲ ನಾಳೆ ಈ ಹಾದಿ ಹಿಡಿಯದಿರದು.
ಕೇರಳದ ಚುನಾವಣೆಯ ಫಲಿತಾಂಶವೂ ಹೀಗೆಯೇ ಮಹತ್ವದ್ದಾಗಿತ್ತು. ಅಲ್ಲಿ ಮೂರು ಮೈತ್ರಿಕೂಟಗಳಿದ್ದವು. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್, ಕಮ್ಯುನಿಸ್ಟ್ ನೇತೃತ್ವದ ಲೆಫ್ಟ್ ಡೆಮೊಕ್ರಟಿಕ್ ಫ್ರಂಟ್ ಮತ್ತು ಬಿಜೆಪಿ ನೇತೃತ್ವದ ನ್ಯಾಶನಲ್ ಡೆಮೊಕ್ರಟಿಕ್ ಅಲಾಯನ್ಸ್. ಇವುಗಳಲ್ಲಿ ತುಲನೆಯಲ್ಲಿ ಬಿಜೆಪಿಯ ರಂಗ ಹೊಸದಾಗಿತ್ತು. ಬಿಜೆಪಿಯ ಈ ರಂಗವು ಕಾಂಗ್ರೆಸ್ಸಿನ ಎಂದರೆ ಯುಡಿಎಫ್‌ನ 26 ಸ್ಥಾನಗಳನ್ನು ನುಂಗಿತು, ಎಂದರೆ ಯುಡಿಎಫ್‌ನ 26 ಉಮೇದ್ವಾರರು ಬಿಜೆಪಿಯ ರಂಗದಿಂದಾಗಿ ಬಿದ್ದರು. ಯುಡಿಎಫ್‌ನ 7% ಮತಗಳು ಕಡಿಮೆಯಾದವು. ಬಿಜೆಪಿ ರಂಗಕ್ಕೆ ಈ ಸಲ 16% ಮತಗಳು ದೊರಕಿದವು. ಎಂದರೆ ಕೇರಳದಲ್ಲಿ ರಾಜಕೀಯ ದೃಷ್ಟಿಯಿಂದ ಹಿಂದುವು ಈಗ ಜಾಗೃತನಾಗಿದ್ದು, ಆತ ಬಿಜೆಪಿ ರಂಗವನ್ನು ಬೆಂಬಲಿಸುತ್ತಿದ್ದಾನೆ. 16% ಮತಗಳು ಬಹುದೊಡ್ಡ ರಾಜಕೀಯ ಶಕ್ತಿಯಾಗಿದೆ. ಮುಂದಿನ ಚುನಾವಣೆಯಲ್ಲಿ ಈ ಶಕ್ತಿಯು ಕೇರಳದ ಅನೇಕ ಗುಂಪುಗಳನ್ನು ತನ್ನತ್ತ ಆಕರ್ಷಿಸದಿರದು. ಬಿಜೆಪಿಯ ಮತಗಳ ಅಂಕಿಸಂಖ್ಯೆಗಳಲ್ಲೂ ಇಂತಹದೇ ಭಾರೀ ಹೆಚ್ಚಳವಾಗಿದೆ. ಕೇರಳದ ಚುನಾವಣೆಯ ಅಂಕಿಸಂಖ್ಯೆಗಳು ಪ್ರಕಟವಾಗಿದ್ದು, ಕೇರಳದ ಕ್ರೈಸ್ತರು ಯುಡಿಎಫ್‌ಅನ್ನು ಬೆಂಬಲಿಸಿದ್ದು ಗೋಚರಿಸುತ್ತದೆ. ಕ್ರೈಸ್ತಬಾಹುಳ್ಯದ ಎರ್ನಾಕುಲಮ್, ಇಡುಕಿ, ಕೊಟ್ಟಾಯಮ್ ಜಿಲ್ಲೆಗಳಲ್ಲಿ ಯುಡಿಎಫ್‌ಗೆ ಧಾರಾಳ ಮತಗಳು ದೊರಕಿವೆ, ಸ್ಥಾನಗಳೂ ಲಭಿಸಿವೆ. ಆದರೆ ತ್ರಿಶೂರ್‌ನ ಹಿಂದೂ ಮತದಾರರು ಕಾಂಗ್ರೆಸ್ಸನ್ನು ಬೆಂಬಲಿಸಿಲ್ಲ. ತಿರುವನಂತಪುರಮ್‌ನ ಜಿಲ್ಲೆಯಲ್ಲೂ ಈ ಸಲ ಬಿಜೆಪಿಯನ್ನು ಹಿಂದುಗಳು ಬೆಂಬಲಿಸಿದ್ದಾರೆ.
ಅಸ್ಸಾಮಿನಲ್ಲಿ ನುಸುಳುಕೋರರ ಸಮಸ್ಯೆಯನ್ನು ಸರ್ಬಾನಂದ ಸೋನೋವಾಲರು ಎಂದರೆ ಬಿಜೆಪಿಯು ಹೇಗೆ ಬಗೆಹರಿಸುವುದೆಂದು ದೇಶವಿಡೀ ಅತ್ತ ನೋಡುತ್ತಿದೆ. ಮುಖ್ಯವಾಗಿ ಈ ಸಮಸ್ಯೆ ಬಹು ತೊಡಕಿನದ್ದಾಗಿದೆ. ವಿರೋಧಿ ಪಕ್ಷದಲ್ಲಿ ಕುಳಿತು ನುಸುಳುಕೋರರನ್ನು ಹೊರಗಟ್ಟಿ ಎಂದು ಹೇಳುವುದೇನೋ ಸುಲಭ, ಆದರೆ ಅಧಿಕಾರಕ್ಕೆ ಬಂದನಂತರ ಅದನ್ನು ಜಾರಿಗೊಳಿಸುವಲ್ಲಿ ವಿವಿಧ ರೀತಿಯ ಅಡಚಣೆಗಳು ಎದುರಾಗುತ್ತವೆ. ಬಾಂಗ್ಲಾದೇಶಿ ನುಸುಳುಕೋರರು ಬಾಂಗ್ಲಾದೇಶದಿಂದ ಬರುತ್ತಾರೆ. ಅವರು ಮುಸಲ್ಮಾನರು. ಅವರು ವಿದೇಶಿ ನಾಗರಿಕರಾಗಿದ್ದಂತೆ ಭಾರತದಲ್ಲಿರುವ ಮುಸಲ್ಮಾನರ ಧರ್ಮಬಂಧುಗಳು. ಮುಸಲ್ಮಾನ ಧರ್ಮಶಾಸ್ತ್ರದಂತೆ ಎಲ್ಲ ಮುಸಲ್ಮಾನರೂ ಒಂದಾಗಿದ್ದಾರೆ. ಅವರಿಗೆ ದೇಶದ ಗಡಿಗಳಿಲ್ಲ. ಅದನ್ನು ‘ಮುಸ್ಲಿಂ ಉಮ್ಮಾ’ ಎನ್ನುತ್ತಾರೆ. ಹೀಗಾಗಿ ಬಾಂಗ್ಲಾದೇಶಿ ಮುಸಲ್ಮಾನರಿಗೆ ಕೈಹಚ್ಚುವುದೆಂದರೆ ದೇಶದ ಮುಸಲ್ಮಾನರಿಗೆ ಕೈಹಚ್ಚಿದಂತೆಯೇ ಆಗುತ್ತದೆ. ದೇಶದ ಮುಸಲ್ಮಾನರು ಇದಕ್ಕೆ ವಿರುದ್ಧ ಯಾವ ಪ್ರತಿಕ್ರಿಯೆ ನೀಡುವರೆಂದು ಎಚ್ಚರಿಕೆಯಿಂದ ನೋಡಬೇಕಾಗುತ್ತದೆ.
ಇನ್ನೊಂದು ಸಮಸ್ಯೆ ಬಾಂಗ್ಲಾದೇಶದ್ದು. ಬಾಂಗ್ಲಾದೇಶವು ಇಂದು ಒಂದು ಸ್ವತಂತ್ರ, ಸರ್ವಭೌಮ ದೇಶವಾಗಿದೆ. ಭಾರತಕ್ಕೆ ನುಸುಳಿರುವ ಬಾಂಗ್ಲಾದೇಶಿ ಜನರ ಗುಂಪುಗಳು ಆ ದೇಶಕ್ಕೆ ಮರಳುತ್ತಿದ್ದರೆ ಆ ದೇಶದ ಪ್ರತಿಕ್ರಿಯೆ ಏನಿದ್ದೀತು ? ಅದು ಅಸ್ಸಾಮ ಮತ್ತು ಬಾಂಗ್ಲಾದೇಶದ ಸಮಸ್ಯೆಯಾಗದು; ಅದು ಭಾರತ ಮತ್ತು ಬಾಂಗ್ಲಾದೇಶದ ಸಮಸ್ಯೆಯಾಗುತ್ತದೆ. ಅದಕ್ಕೆ ಅಂತಾರಾಷ್ಟ್ರೀಯ ಪರಿಮಾಣಗಳಿವೆ. ಎರಡು ದೇಶಗಳ ರಾಜಕೀಯ ಸಂಬಂಧಗಳನ್ನು ವೈಷಮ್ಯದಿಂದ ಬೆಳೆಸಬೇಕೇ ಅಥವಾ ಸೌಹಾರ್ದದಿಂದಲೋ ಎಂಬ ಪ್ರಶ್ನೆಯಿದು. ಈಗಾಗಲೇ ಜಾತ್ಯತೀತ ಮಂದಿ ಬಿಜೆಪಿಯ ಪ್ರತಿಮೆಯನ್ನು ಮುಸ್ಲಿಂವಿರೋಧಿಯಾಗಿ ಮಾಡಿದ್ದಾರೆ. ಆದ್ದರಿಂದ ಬಿಜೆಪಿಯು ಬಹು ಎಚ್ಚರಿಕೆಯಿಂದ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಹೆಜ್ಜೆಯಿಡಬೇಕಾಗುತ್ತದೆ. ದೇಶೀ ಮುಸಲ್ಮಾನ ಮತ್ತು ವಿದೇಶಿ ಮುಸಲ್ಮಾನ ಎಂದು ಭೇದವೆಣಿಸಬೇಕಾಗುತ್ತದೆ. ದೇಶೀ ಮುಸಲ್ಮಾನರು ನಮ್ಮವರು ಮತ್ತು ವಿದೇಶಿ ಮುಸಲ್ಮಾನರು ಪರಕೀಯರೆಂದು ಸ್ಪಷ್ಟೀಕರಿಸಬೇಕಾಗುತ್ತದೆ.
ಈ ಸಮಸ್ಯೆಯ ಇನ್ನೂ ಒಂದು ಮುಖವಿದ್ದು, ಅದನ್ನೂ ಕುಶಲತೆಯಿಂದ ಉಪಯೋಗಿಸಿಕೊಳ್ಳಬೇಕು. ಅದೆಂದರೆ ಬಾಂಗ್ಲಾದೇಶವು ಭಾರತದಲ್ಲಿ ವಿಲೀನಗೊಳ್ಳಬೇಕು; ಒಂದು ರಾಜ್ಯವೆಂದು ಭಾರತೀಯ ಒಕ್ಕೂಟದಲ್ಲಿ ಸೆರಿಕೊಳ್ಳಬೇಕು. ಬಾಂಗ್ಲಾದೇಶವು ಭಾರತದ ಭಾಗವಾಯಿತೆಂದರೆ ನುಸುಳುಕೋರರ ಸಮಸ್ಯೆ ಕೊನೆಗೊಂಡೀತು. ಏನಿದ್ದರೂ ಬಾಂಗ್ಲಾದೇಶವು ಕೃತ್ರಿಮ ದೇಶವಾಗಿದೆ. ಹಿಂದೆ ಅದು ಪೂರ್ವ ಪಾಕಿಸ್ತಾನವಾಗಿತ್ತು. ಪಶ್ಚಿಮ ಪಾಕಿಸ್ತಾನವು ಅದರ ಮೇಲೆ ಅತ್ಯಾಚಾರವೆಸಗಿದ್ದರಿಂದ ಅಲ್ಲಿ ಗೃಹಯುದ್ಧ ನಡೆಯಿತು, ಬಾಂಗ್ಲಾದೇಶ ಸ್ವತಂತ್ರವಾಯಿತು. ಈ ಕೃತ್ಯ ಮಾಡಿದ್ದು ಭಾರತೀಯ ಸೈನ್ಯವೇ. ಅದರ ಭಾಷೆ ಬಂಗಾಳಿ, ಅದರ ಸಂಸ್ಕೃತಿ ಬಂಗಾಳಿ. ಭಾರತದ ಒಂದು ರಾಜ್ಯವೆಂದು ಅದರ ಅಸ್ತಿತ್ವವುಂಟಾದರೆ, ಆಗ ಸರ್ಕಾರ ಬಾಂಗ್ಲಾದೇಶೀಯರದ್ದೇ ಆಗಿರುವುದು. ಒಂದು ರಾಜ್ಯವಾಗುವುದರಿಂದ ಅದರ ಅಭಿವೃದ್ಧಿಯ ಹೊಣೆಯು ಇಡೀ ಭಾರತದ್ದಾಗಿರುವುದು. ಈ ದೃಷ್ಟಿಯಿಂದಲೂ ಅಸ್ಸಾಮ ಮತ್ತು ಕೇಂದ್ರ ಸರ್ಕಾರಗಳು ಆಲೋಚಿಸಬೇಕು.

   

Leave a Reply