‘ಹಿಂದೂ ಧರ್ಮ ಸಂಪೂರ್ಣ ಮಾನವತೆಯ ಪ್ರತಿನಿಧಿ’

ಕೊಪ್ಪಳ - 0 Comment
Issue Date : 29.01.2014

ಗಂಗಾವತಿ: ಹಿಂದು ಧರ್ಮವು ಯಾವುದೇ ಒಂದು ದೇಶ ಹಾಗೂ ಪಂಥದ್ದಾಗಿರುವುದಿಲ್ಲ. ಅದು ಮಾನವತೆಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಸರ್ವ ಧರ್ಮದವರೂ ರಾಷ್ಟ್ರೀಯತೆ ಎನ್ನುವ ಏಕತೆಯಲ್ಲಿ ಬದುಕಿದಾಗ ವಿಶ್ವವು ಸುಂದರವಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ನೀಲಕಂಠಪ್ಪ ನಾಗಶೆಟ್ಟಿ ಹೇಳಿದ್ದಾರೆ. ಅವರು ಇಲ್ಲಿನ ಗಾಂಧಿನಗರದಲ್ಲಿರುವ ವಿವೇಕಾನಂದ ಗ್ರಂಥಾಲಯದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯೋದ್ಯಮಿ ಸಿಂಗನಾಳ ವಿರುಪಾಕ್ಷಪ್ಪ ಮಾತನಾಡಿ, ಭಾರತೀಯ ಆಧ್ಯಾತ್ಮಿಕ ಸಂದೇಶಗಳನ್ನು ವಿಶ್ವದೆಲ್ಲೆಡೆ ಪ್ರಚಾರಮಾಡುತ್ತಾ ತಮ್ಮ ಶ್ರೇಷ್ಠ ಜೀವನ ಸಾಗಿಸಿದ ವಿವೇಕಾನಂದರು ವಿಶ್ವಮಾನವರಾದರು. ಅವರ ಸಂದೇಶಗಳು ನಮಗೆಲ್ಲಾ ದಾರಿ ದೀಪವಾಗಿವೆ ಎಂದರು. 150ನೇ ಜಯಂತಿ ನಿಮಿತ್ತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಗಣ್ಯರು ವಿತರಿಸಿದರು.

ಯುವ ಮುಖಂಡರಾದ ಅಮರಜ್ಯೋತಿ ವೆಂಕಟೇಶ, ಸುರಕ್ಷಾ ಸಂಸ್ಥೆಯ ವಿನಯ ಪಾಟೀಲ್, ವಕೀಲರಾದ ಸುರೇಶ ಸಮಗಂಡಿ, ರಾಘು ಕಟ್ಟಿಮನಿ, ರಾಘವೇಂದ್ರ ದಾವಣಗೆರೆ, ಹುಸೇನಪ್ಪ ಪೂಜಾರ, ಕಾರ್ಯಕ್ರಮದ ಆಯೋಜಕರಾದ ಸಂಗಮೇಶ ಅಯೋಧ್ಯಾ ಚಂದ್ರು, ಚಿದಾನಂದ, ಸಂತೋಷ, ವರ್ತಕ ಸಿದ್ದು ಗೋಲ್ಡ್ ಇನ್ನಿತರರು ಸೇರಿದಂತೆ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಶಿಕ್ಷಕರು, ಹಿರಿಯರು ಭಾಗವಹಿಸಿದ್ದರು. (ವರದಿ: ಸಂಗಮೇಶ ಅಯೋಧ್ಯಾ)

   

Leave a Reply