ಹೀಗಿದ್ದರು ನಮ್ಮ ಹೆಚ್‍.ಎಸ್‍. ನಾರಾಯಣನ್‍

ಸ್ಮರಣೆ - 0 Comment
Issue Date : 28.01.2016

ನಮ್ಮ ಸಂಸ್ಕೃತಿಯಲ್ಲಿ ಪ್ರತಿೂಂದು ವ್ಯಕ್ತಿಯನ್ನೂ ದೈವತ್ವಕ್ಕೇರಿಸುತ್ತೇವೆ. ಜ್ಞಾನ ನೀಡುವ ಗುರುವನ್ನು ತ್ರಿಮೂರ್ತಿಗಳಿಗೆ ಹೋಲಿಸಿದರೆ ಜೀವ ರಕ್ಷಿಸುವ ವೈದ್ಯರನ್ನು ಸ್ಥಿತಿಕರ್ತನಾದ ನಾರಾಯಣನಿಗೆ ಹೋಲಿಸುತ್ತೇವೆ. ವೈದ್ಯ ನೀಡುವ ಔಷಧಿ ನಮಗೆ ಕೇವಲ ಘನ, ದ್ರವ ಪದಾರ್ಥವಲ್ಲ ಅದು ಗಂಗೆಗೆ ಸಮಾನ. ಅದಕ್ಕಾಗೇ ‘ಔಷಧಂ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋ ಹರಿಃ’ ಎಂದದ್ದು.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆಯಲ್ಲಿ ಮನೋವಿಜ್ಞಾನ ಪ್ರಾಧ್ಯಾಪಕರಾಗಿದ್ದ ಡಾ. ನಾರಾಯಣ್ ಅವರು ನೂರಾರು ವಿದ್ಯಾರ್ಥಿಗಳಿಗೆ ನೈಜವೈದ್ಯರಾಗುವ ಮಾರ್ಗ ತೋರಿದವರು.
ಅವರು ವೈದ್ಯರಾದದ್ದೇ ಸಮಾಜ ಸೇವೆಗೆ. ಹಣ ಸಂಪಾದನೆ ಅವರ ಕನಸು ಮನಸ್ಸಿನಲ್ಲೂ ಸುಳಿಯಲಿಲ್ಲ. ಮಾಗಡಿ ಬಳಿಯ ಹಳ್ಳಿಯೊಂದರಲ್ಲಿ ಜನಿಸಿದ ಅವರು ತನ್ನ ಸೋದರಿಗೆ ಸೂಕ್ತ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ದೊರೆಯದೆ ಅಸುನೀಗಿದ್ದು ನಾರಾಯಣ್ ಅವರಿಗೆ ಬಾಳಿನ ಗುರಿ ನಿರ್ಧರಿಸುವಂತೆ ಮಾಡಿತು. ‘ನನ್ನ ತಂಗಿಗೆ ಆದ ದುರಂತ ಮತ್ತಾರಿಗೂ ಆಗಬಾರದು. ನೊಂದವರ ಕಣ್ಣೀರೊರೆಸುವುದೇ ನನ್ನ ಜೀವನದ ಧ್ಯೇಯ’ ಎಂದು ಅಂದೇ ಸಂಕಲ್ಪ ಮಾಡಿದರು. ಆ ಸಂಕಲ್ಪದಂತೆ ಅಂತಿಮ ಶ್ವ್ವಾಸದವರೆಗೆ ನಡೆದುಕೊಂಡರು.
ಡಾ. ಹೆಚ್.ಎಸ್.ನಾರಾಯಣ್ ರವರ ಧರ್ಮಪತ್ನಿ ಶ್ರೀಮತಿ ಶ್ಯಮಂತಾ ಅವರು ನನ್ನ ಬಳಿ ಹೇಳಿದ ಈ ಘಟನೆಯೊಂದು ಈ ಮೇಲಿನ ಮಾತಿಗೆ ಸಾಕ್ಷಿಯಾಗಿದೆ. ಅಂದೊಂದು ದಿನ ರಾತ್ರಿ ಹನ್ನೊಂದು ಘಂಟೆ ಮೀರಿದೆ. ಕಡುಕತ್ತಲು. ಸೋನೆಮಳೆ. ರಸ್ತೆಯೆಲ್ಲಾ ನಿರ್ಜನ. ಮನೆ ಬಾಗಿಲು ತಟ್ಟಿದ ಶಬ್ದ. ಶಬ್ದ ಜೋರಾಗುತ್ತಾ ಬಂತು. ಶ್ಯಮಂತಾ ಅವರು ಎದ್ದು ಬಂದು ಬಾಗಿಲು ತೆಗೆದರು. ಎದುರಲ್ಲಿ ಓರ್ವ ವೃದ್ಧರು ದೀನರಾಗಿ ನಿಂತಿದ್ದಾರೆ. ‘ಅಮ್ಮಾ, ನನ್ನ ಮಗಳಿಗೆ ತುಂಬಾ ಹುಷಾರಿಲ್ಲ. ಅವಳ ಸ್ಥಿತಿ ಕಂಡು ನಮಗೆಲ್ಲಾ ತುಂಬಾ ಗಾಬರಿಯಾಗಿದೆ. ಡಾಕ್ಟರು ಬಂದು ನೋಡಿದರೆ ನಮಗೆ ಸಮಾಧಾನ. ಡಾಕ್ಟರಿಗೆ ತಿಳಿಸಮ್ಮಾ’ ಎಂದು ಬೇಡಿಕೊಂಡರು. ಆದರೆ ಸ್ವತಃ ನಾರಾಯಣ್‌ರವರೇ ಅನಾರೋಗ್ಯದಿಂದ ಮಲಗಿದ್ದಾರೆ. ಆಗತಾನೇ ಅವರಿಗೆ ನಿದ್ರೆ ಹತ್ತಿದೆ. ಅವರನ್ನು ಎಬ್ಬಿಸಿ ಕಳಿಸುವುದಾದರೂ ಹೇಗೆ? ಶ್ಯಮಂತಾ ಅವರು ‘ನೋಡಿಪ್ಪಾ, ಡಾಕ್ಟರೇ ಹುಷಾರಿಲ್ಲದೆ ಮಲಗಿದ್ದಾರೆ. ಬೇಕಾದರೆ ಅವರು ಹುಷಾರಾದ ನಂತರ ಬಂದು ನೋಡುತ್ತಾರೆ. ಈಗ ಮಾತ್ರ ತೊಂದರೆ ಕೊಡಬೇಡಿಪ್ಪಾ’ ಎಂದರು.
ಅರೆಬರೆ ಎಚ್ಚರವಿದ್ದ ಡಾ. ನಾರಾಯಣ್‌ರವರಿಗೆ ಮನೆಗೆ ಯಾರೋ ಬಂದಿರುವಂತೆ ಅನ್ನಿಸಿತು. ಕೂಡಲೇ ‘ಶ್ಯಮಂತಾ ಏನದು ಶಬ್ದ? ಯಾರದು ಬಂದಿರುವುದು’ ಎಂದು ಕೇಳಿದರು. ಆಗ, ಆಕೆ ‘ಯಾರೋ ಮುದುಕರು. ಅವರ ಮಗಳಿಗೆ ಹುಷಾರಿಲ್ಲವಂತೆ. ಈಗ ನೀವು ಹೋಗುವ ಸ್ಥಿತಿಯಲ್ಲಿ ಇಲ್ಲ, ಸುಮ್ಮನೆ ಮಲಗಿ’ ಎಂದರು. ಹೆಂಡತಿಯ ಮಾತು ಕೇಳಿದ ನಾರಾಯಣ್ ‘ನೋಡು ಶ್ಯಮಂತಾ, ಪಾಪ, ಅವರ ಮಗಳಿಗೆ ಅದೇನು ಖಾಹಿಲೆಯೋ? ಈ ನಡುರಾತ್ರಿ ಹುಡುಕಿಕೊಂಡು ಬಂದಿದ್ದಾರೆ. ನಿಜ ನನಗೆ ಜ್ವರ ಸುಡುತ್ತಿದೆ. ಆದರೆ ನೀನೀಗ ನನ್ನನ್ನು ಹೋಗಲು ಬಿಟ್ಟರೆ ನಾಳೆ ನಾನು ಪೂರ್ಣ ಗುಣ ಹೊಂದಿರುತ್ತೇನೆ. ಇಲ್ಲವಾದಲ್ಲಿ ಇನ್ನೊಂದು ದಿನವಾದರೂ ನನ್ನ ಜ್ವರ ವಾಸಿಯಾಗದು’ ಎಂದು ತಾವು ಹೋಗುವ ನಿರ್ಧಾರವನ್ನು ತಿಳಿಸಿದರು. ಕೂಡಲೇ ಆಕೆ ಡಾಕ್ಟರ ವೈದ್ಯಕೀಯ ಕಿಟ್‌ನ್ನು ರೆಡಿಮಾಡಿ, ಅವರನ್ನು ವೃದ್ಧರೊಂದಿಗೆ ಕಳಿಸಿಕೊಟ್ಟರು. ಮರುದಿನ ನಾರಾಯಣರ ಜ್ವರ ಹಾರಿಹೋಗಿತ್ತು ಎಂದು ಹೇಳಬೇಕಿಲ್ಲ.
1970ರಲ್ಲಿ ನಾನು ಬೆಂಗಳೂರು ದಕ್ಷಿಣ ಭಾಗದ ಸಂಘದ ಪ್ರಚಾರಕನಾಗಿದ್ದೆ. ಆಗ ಅವರು ಮಾನಸಿಕ ಆರೋಗ್ಯ ಆಸ್ಪತ್ರೆಯ ನಿಲಯ ವೈದ್ಯಧಿಕಾರಿಗಳಾಗಿದ್ದರು (್ಕ). ಆಸ್ಪತ್ರೆಯ ಅವರಣದಲ್ಲಿದ್ದ ಅವರ ಮನೆಯ ಹಿಂಭಾಗದಲ್ಲಿ ಸೇವಕರಿಗಾಗಿ ಪುಟ್ಟ ಕೊಠಡಿ. ಅದರಲ್ಲಿ ಡಾಕ್ಟರ್ ಮನೆ ಸೇವಕರಾರೂ ಇರುತ್ತಿರಲಿಲ್ಲ. ಆದರೆ ರೋಗಿಗಳ ಕಡೆ ಬಂಧುಗಳಿಗೆ ಆ ಕೊಠಡಿ ಮೀಸಲು. ಅವರ ಮನೆಯಲ್ಲಿ ಇದ್ದವರು ಮಕ್ಕಳಾದ ಮೈತ್ರೇಯಿ ಮತ್ತು ನರೇಂದ್ರ, ಸೇರಿ ನಾಲ್ಕೇ ಜನ. ಆದರೆ ಅಡಿಗೆ ಮಾತ್ರ ಆರೆಂಟು ಮಂದಿಗೆ. ಎಷ್ಟೋ ದಿನ ನಡುರಾತ್ರಿಯಲ್ಲಿ ಶ್ಯಮಂತಾರವರನ್ನು ಎಬ್ಬಿಸಿ, ರೋಗಿಯನ್ನು ಕರೆತಂದವರಿಗೂ ಅಡಿಗೆ ಮಾಡಿಸಿ ಊಟ ಹಾಕಿಸಿದ್ದೂ ಇದೆ.
ಡಾ. ನಾರಾಯಣ್, ಬಾಲ್ಯದಲ್ಲೇ, ಮಾಗಡಿಯಲ್ಲಿ ಸಂಘದ ಸ್ವಯಂಸೇವಕ ರಾದವರು. ಬೆಂಗಳೂರಿನ ಜಯನಗರ ಭಾಗದ ಸಂಘಚಾಲಕರಾಗಿದ್ದವರು. ಸಂಘದ ಬಗ್ಗೆ ಅತೀವ ನಿಷ್ಠೆ. ದೇಶದ ಎಲ್ಲ ಖಾಹಿಲೆಗಳಿಗೆ, ಸಂಘದ ವಿಚಾರಧಾರೆಯೇ ಪರಮೌಷಧ ಎಂದು ಆಗಾಗ್ಗೆ ಹೇಳುತ್ತ್ತಿದ್ದರು. ಅದನ್ನು ಬಲವಾಗಿ ನಂಬಿದ್ದರು ಕೂಡ.
ಮಾನಸಿಕವಾಗಿ ಅಸ್ವಸ್ಥರಾಗಿದ್ದ ಕಿಶೋರರನ್ನು ತಂದೆ ತಾಯಿ ಚಿಕಿತ್ಸೆಗಾಗಿ ಅವರ ಬಳಿ ಕರೆತಂದಾಗ ಅವರು ಕೇವಲ ಆಪ್ತ ಸಲಹೆ ಮತ್ತು ಔಷಧಿಯೊಂದಿಗೆ ಅವರನ್ನು ಕಳಿಸುತ್ತಿರಲಿಲ್ಲ. ಅವರ ಆಪ್ತಸಲಹೆಯಲ್ಲಿ ಬಹು ಮುಖ್ಯ ಭಾಗ ಆ ಕಿಶೋರನನ್ನು ಅವರ ಮನೆಗೆ ಹತ್ತಿರವಿರುವ ಸಂಘದ ಶಾಖೆಗೆ ಕಳುಹಿಸುವುದಾಗಿತ್ತು. ‘ಸಂಘದ ಶಾಖೆಗೆ ಅವನನ್ನು ಕಳುಹಿಸಿ, ಅವರ ಮನೋವೈಕಲ್ಯ ದೂರವಾಗುತ್ತದೆ’ ಎಂದು ಸ್ಪಷ್ಟವಾಗಿ ಹೇಳುತ್ತಿದ್ದರು.
ಡಾ. ನಾರಾಯಣ್, 88 ವಸಂತಗಳನ್ನು ಪೂರೈಸಿ ಇದೇ ಜ.10ರಂದು ಬೆಳಗಿನ ಜಾವ ವೈಕುಂಠವಾಸಿಗಳಾದರು. ಅವರ ಮನೆಯ ಮುಂದೆ ನೆರೆದಿದ್ದ ಜನಸಮೂಹ, ಅವರು ಬಾಳಿದ ರೀತಿಗೆ, ಇಂದಿನ, ಮುಂದಿನ ಎಲ್ಲ ವೈದ್ಯ ವೃತ್ತಿಯವರಿಗೆ ಅವರ ಬದುಕು ಒಂದು ಮೇಲ್ಪಂಕ್ತಿ ಎಂಬುದಕ್ಕೆ ಸಾಕ್ಷಿಯಾಗಿತ್ತು.

   

Leave a Reply