ಹೃದಯಂಗಮ ಕಲಾಸಾಧಕ ಸಂಗಮ

ಲೇಖನಗಳು - 0 Comment
Issue Date :

– ರೇಖಾ ಪ್ರೇಂಕುಮಾರ್

ಅ. 28, 29, 30ರಂದು ಹರಿಯಾಣ ರಾಜ್ಯದಲ್ಲಿ ನಡೆದ ಸಂಸ್ಕಾರ ಭಾರತಿಯ ಅಖಿಲ ಭಾರತೀಯ ಕಲಾ ಸಾಧಕ ಸಂಗಮ ಒಂದು ಅದ್ವಿತೀಯ ಯಶಸ್ವಿ ಸಂಗಮ ಎಂದೇ ಹೇಳಬಹುದು. ದೂರದ ಕಲಾಕ್ಷೇತ್ರಕ್ಕೆ ಹೊರಡುವ, ಹೊರಡಿಸುವ ತಯಾರಿ ಬಹುಶಃ ಯುದ್ಧಕ್ಕೆ ಸನ್ನದ್ಧರಾಗುವಷ್ಟೇ ಕಷ್ಟಕರ. ನಿಷ್ಠೆಯಿಂದ ಹೊರಟ ಕಲಾ ತಂಡಗಳು, ಹಲವರು 22 ರಂದು, 27 ರಂದು, ಕೆಲವರು 28ರ ಬೆಳಿಗ್ಗೆ ಹೀಗೆ ತಂಡೋಪತಂಡವಾಗಿ ಕುರುಕ್ಷೇತ್ರದ ಸಂಸ್ಕಾರ ಭಾರತಿಯ ಕರ್ಮಭೂಮಿ ಗೀತಾ ಶಾಲೆಗೆ ಬಂದಿಳಿದಾಯ್ತು. ಅಬ್ಬಾ! ಮೊದಲಿಗೆ ಬಂದವರೆಲ್ಲರಿಗೂ ವಸತಿ ವ್ಯವಸ್ಥೆಗೂ ಮೊದಲೇ ನಮ್ಮ ನಮ್ಮ ಮಧ್ಯಪ್ರದೇಶವನ್ನು ತುಂಬಿಸಲು ಸಜ್ಜಾಗಿದ್ದ ಅನ್ನಪೂರ್ಣಾ ಸಕಲರಿಗೂ ಅನ್ನಪೂರ್ಣೆಯಾಗಿ ಸಕಲ ವಿಧವಿಧ ಭಕ್ಷ್ಯಗಳನ್ನು ಉಣಿಸಿ ನಂತರ ಕಳುಹಿಸಿಕೊಟ್ಟಿದ್ದು ವಿಶೇಷವೇ ಸರಿ.

28ರ ಬೆಳಿಗ್ಗೆಯೇ ಸೊಗದಲ್ಲಿ ಸೊಗ ಕಾರ್ಯಕ್ರಮದ ಉದ್ಘಾಟನೆ. ವಿಶಿಷ್ಟವಾಗಿ ಮತ್ತು ವಿಶೇಷವಾಗಿ ಅಂದಿನ ಕಾಲಘಟ್ಟದಲ್ಲಿದ್ದಂತೆಯೇ ನೈಜವಾಗಿ ರೂಪುಗೊಂಡ ಐದು ಕುದುರೆಗಳ ಸಾರಥಿಯಾಗಿ ಕೃಷ್ಣ ಅರ್ಜುನನಿಗೆ ಕುರುಕ್ಷೇತ್ರದಲ್ಲಿ ಗೀತೋಪದೇಶ ನೀಡಿದಂಥ ಪ್ರದರ್ಶನದ ದಿವ್ಯ ರಥ. ಹರಿಯಾಣದ ಸಂಘಚಾಲಕರಾದ ಮೇಜರ್ ಕರ್ತಾರ್‌ಸಿಂಗ್‌ಜೀರವರಿಂದ ಪುಷ್ಪಾರ್ಚನೆಯೊಂದಿಗೆ ಅನಾವರಣಗೊಂಡಿತು.

ನಂತರ ವಾರಾಣಸಿಯ ಕೇಂದ್ರ ಆಯೋಜನಾ ಸಮಿತಿ ಸದಸ್ಯರಾದ ಕಲಾವಿದ ಸುನಿಲ್ ವಿಶ್ವಕರ್ಮರವರು ಹಾಗೂ ಅ.ಭಾ. ಸಹ ಸಂಯೋಜಕರಾದ ಚಿ.ಸು. ಕೃಷ್ಣಶೆಟ್ಟಿಯವರಿಂದ ಕಳೆದ ಒಂದು ವಾರದ ತಯಾರಿಯಲ್ಲಿ ನಡೆದ ಚಿತ್ರಕಲಾ ಹಾಗೂ ರಂಗೋಲಿಯ ಪ್ರದರ್ಶಿನಿ ಸಾಂಕೇತಿಕವಾಗಿ ಅತಿಥಿ ಗಣ್ಯರಿಂದ (ಕೇಂದ್ರ ಗೃಹಮಂತ್ರಿ ರಾಜನಾಥಸಿಂಗ್ ಹಾಗೂ ರಾ.ಅಧ್ಯಕ್ಷರಾದ ವಾಸುದೇವ ಕಾಮತರಿಂದ) ಉದ್ಘಾಟನೆಗೊಂಡಿತು.

ಸುಮಾರು 20, 25 ಕಲಾವಿದರಿಂದ ಕಳೆದ ಒಂದು ವಾರದಿಂದ ನಿರ್ಮಾಣಗೊಂಡ ಚಿತ್ರಕಲೆ ಹಾಗೂ ಭೂ ಅಲಂಕರಣ ರಂಗೋಲಿಯಂತೂ ಅದ್ವಿತೀಯ ಹಾಗೂ ಅನುಪಮ. ಭೂ ಅಲಂಕರಣ ಕೇವಲ ರಂಗೋಲಿಯ ಚಿತ್ತಾರವಾಗಿರದೇ ಮಹಾಭಾರತದ ಕುರುಕ್ಷೇತ್ರದ ಹಲವು ಪಾತ್ರಗಳಾಗಿ ಜೀವ ತಳೆದಿದ್ದು ವಿಶೇಷ. ಬುದ್ಧಿಯು ಸಾರಥಿಯಾಗಿ ಆತ್ಮನು ಸವಾರನಾಗಿ ಅವನ ಪಂಚೇಂದ್ರಿಯಗಳೆಂಬ ಕುದುರೆಗಳನ್ನು ಮನವೆಂಬ ಲಗಾಮು ಹಿಡಿದು ಪಳಗಿಸುವುದನ್ನು ರಂಗೋಲಿಯಲ್ಲಿ (18/20 ಅಡಿಗೂ ಹೆಚ್ಚು) ಹಿಡಿದಿಟ್ಟಿದ್ದು, ಆ ಕಲಾವಿದರಿಗೆ ಅವರೇ ಸಾಟಿ ಎನ್ನುವಂತಿತ್ತು. ಕೃಷ್ಣನಿಗೂ ಸಾವು ತಪ್ಪದೆ ಉಗರಿಗೆ ತಗುಲಿದ್ದ ಬಾಣದ ಚಿತ್ರ, ದ್ರೌಪದಿಯ ಆಲಾಪ, ದುರ್ಯೋಧನನ ನೀರಿನೊಳಗಿನ ಊರುಭಂಗ ಹೀಗೆ, ಕಣ್ಣಿಗೆ ಪಾತ್ರಗಳನ್ನು ಕಟ್ಟಿದಂತಹ ಅನುಭವ ಅದ್ವಿತೀಯ.

ಇಡೀ ದೇಶದ ವಿಶಿಷ್ಟ, ವಿಭಿನ್ನ ಕಲಾಪ್ರಕಾರಗಳು ಕೇವಲ ಕಲೆ ಮಾತ್ರವಲ್ಲ ಇಡೀ ದೇಶದ ಹಲವು ಸಮುದಾಯಗಳನ್ನು ಸಂಸ್ಕಾರಗಳ ಮೂಲಕ ಒಂದುಗೂಡಿಸುವ ಪ್ರಕ್ರಿಯೆ. ಅದು ವಸುಧೈವ ಕುಟುಂಬಕಂ ಎನ್ನುವಂತೆ ಸಾಧ್ಯವಾಗುವುದು ಬಹುಶಃ ಸಂಸ್ಕಾರ ಭಾರತಿಯಿಂದ ಮಾತ್ರ ಎಂದು ತಿಳಿಸಿದ ರಾಜನಾಥ್‌ಸಿಂಗ್‌ರವರು ಇದನ್ನು ಪ್ರಾರಂಭ ಮಾಡಿದ 93 ವರ್ಷದ ಮಾನನೀಯ ಬಾಬಾಜೀಯವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು. ವೇದಿಕೆಯಲ್ಲಿ ಸಂಸ್ಕೃತಿ ಸಚಿವೆ ಹಾಗೂ ಶಾಸಕರು, ಪದ್ಮಭೂಷಣ ಶ್ರೀಮತಿ ಪದ್ಮಾ ಸುಬ್ರಹ್ಮಣ್ಯಂ, ಪದ್ಮವಿಭೂಷಣ ಶ್ರೀಮತಿ ಸೋನಲ್ ಮಾನಸಿಂಗ್, ರಾ. ಅಧ್ಯಕ್ಷ ವಾಸುದೇವ ಕಾಮತ್‌ರು ಉಪಸ್ಥಿತರಿದ್ದರು. ನಮ್ಮ ಕರ್ನಾಟಕದ ತಿಪಟೂರಿನ ಕಲಾವಿದರಿಂದ ಧ್ಯೇಯಗೀತೆಯೊಂದಿಗೆ ಪ್ರಾರಂಭವಾದ ವೇದಿಕೆ ಕಾರ್ಯಕ್ರಮ ನಂತರ ಮೈಸೂರಿನ ಕಲಾವಿದರಿಂದ ಭರತನಾಟ್ಯ ಮತ್ತು ವಿವಿಧ ರಾಜ್ಯಗಳ ಕಥಕ್, ಓಡಿಸ್ಸಿ, ಕೂಚಿಪುಡಿ ನೃತ್ಯಗಳು, ಶ್ರೀಮತಿ ಸುಮೀತಾ ಶರ್ಮಾರ ನೃತ್ಯ ಸಮನ್ವಯದೊಂದಿಗೆ ಧ್ಯೇಯಗೀತೆಗೆ ಸುಮಾರು 120 ಕಲಾವಿದರು ಏಕಕಾಲದಲ್ಲಿ 30 ನಿಮಿಷಗಳ ಕಾಲ ಅಪೂರ್ವ ಪ್ರದರ್ಶನ ನೀಡಿದರು.

ಹಲವು ರಾಜ್ಯಗಳ ಹಲವು ಲೋಕನೃತ್ಯ ಪ್ರಕಾರಗಳು, ಶಾಸ್ತ್ರೀಯ ನೃತ್ಯ ಪ್ರಕಾರಗಳು ನಮ್ಮ ಕರ್ನಾಟಕ ರಾಜ್ಯದ ಭರತನಾಟ್ಯ (ಮೈಸೂರು, ಹುಬ್ಬಳ್ಳಿ) ಕರಾವಳಿಯ ಯಕ್ಷಗಾನ, ಆಂಧ್ರದ ಪೃಥ್ವಿರಾಜ ನಾಟಕ, ಧಮ್ಮ ಅಶೋಕ ನೃತ್ಯ ನಾಟಕವಂತೂ (ಹರಿಯಾಣ) ಕಳಿಂಗ ಯುದ್ಧವನ್ನೇ ಕಣ್ಮುಂದೆ ತಂದಂತೆ ಅಭಿನಯಿಸಿದರು. ತೆಲಂಗಾಣದ ‘ಅಂಬೇಡ್ಕರ್’ ನಾಟಕ, ಮನೋಜ್ ಜೋಷಿಯವರ ‘ಚಾಣಕ್ಯ’ ನಾಟಕ ಇಡೀ ಮೂರು ದಿನದ ಪ್ರಮುಖ ಕಾರ್ಯಕ್ರಮ ಎಂದೇ ಹೇಳಬಹುದು. ರಾತ್ರಿ 12.30ರ ನಂತರವೂ ನಡೆದ ಈ ನಾಟಕಕ್ಕೆ ಸುಮಾರು 2000 ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದು, ಪ್ರತಿ ಸಂಭಾಷಣೆಗೂ ಭರಪೂರ ಚಪ್ಪಾಳೆ ಬೀಳುತ್ತಿದ್ದುದು 1300 ವರ್ಷ ಹಳೆಯ ಕಾಲದ ಚಾಣಕ್ಯ ಇಂದಿಗೂ ಎಷ್ಟು ಪ್ರಸ್ತುತ ಎನಿಸಿದ್ದು ಸುಳ್ಳಲ್ಲ. ಪಂಜಾಬ್ ಪ್ರಾಂತ್ಯದ ವೀರ ಸಾವರ್ಕರ್ ನಾಟಕವೂ ಕೂಡ ಅಷ್ಟೇ ವಿಶಿಷ್ಟವಾಗಿದ್ದು ಜನಮೆಚ್ಚುಗೆ ಗಳಿಸಿತು.

‘ನಮಗೆ ಪ್ರಧಾನ ವೇದಿಕೆಯಲ್ಲಿ ಅವಕಾಶ ಇಲ್ಲದ್ದಿದ್ದರೇನಂತೆ ಪ್ರೇಕ್ಷಕರೆಲ್ಲಿದ್ದಾರೆ ಅಲ್ಲೇ ನಮ್ಮ ಪ್ರದರ್ಶನ’ ಎಂದು ಕಲಾವಿದರೇ ಅಲ್ಲಲ್ಲಿ ಇಡೀ ಮೂರು ದಿನಗಳು ತಮ್ಮ ತಮ್ಮ ವಿಶಿಷ್ಟ ಕಲಾ ಪ್ರದರ್ಶನ ನೀಡುತ್ತಿದ್ದುದು ಅತ್ಯಂತ ಸಂತೋಷ ತಂದಿತು. ತಮ್ಮ ತಮ್ಮ ಅಹಮ್ಮಿಕೆ ಬಿಟ್ಟು ಈ ರೀತಿ ಪ್ರದರ್ಶನಗೊಳ್ಳುವುದು ಕಲಾವಿದರಿಗೆ ಸಾಧ್ಯವಾಗುವುದು ಬಹುಶಃ ಈ ನಮ್ಮ ಸಂಸ್ಕಾರ ಭಾರತಿಯಲ್ಲಿ ಮಾತ್ರವೇನೋ! ಸಮಾನಾಂತರ ವೇದಿಕೆಗಳಲ್ಲಿ ಸಾಹಿತ್ಯ, ಸಂಗೀತ, ನೃತ್ಯ ಪ್ರಕಾರಗಳ ಪ್ರಾತ್ಯಕ್ಷಿಕೆ, ಸಂವಾದ, ಚರ್ಚೆ, ಕವಿಗೋಷ್ಠಿ ಹೀಗೆ ಆಯಾ ಪ್ರಕಾರಗಳ ವಿಶಿಷ್ಟ ತಜ್ಞರು ನಡೆಸಿಕೊಟ್ಟರು. ಪದ್ಮಭೂಷಣ ಶ್ರೀಮತಿ ಪದ್ಮಾ ಸುಬ್ರಹ್ಮಣ್ಯ ಅವರಂತೂ ಈ ವಯಸ್ಸಿನಲ್ಲೂ ನಾನೇನು ಕಡಿಮೆ ಎಂಬಂತೆ ಕೃಷ್ಣನ ವಿರಾಟರೂಪದರ್ಶನವನ್ನೇ ತೆರೆದಿಟ್ಟರು.

ರಾ.ಅಧ್ಯಕ್ಷ ವಾಸುದೇವ ಕಾಮತ್‌ರ ಸಾರಥ್ಯದಲ್ಲಿ ಅತಿದೊಡ್ಡ ಕ್ಯಾನ್‌ವಾಸಿನ ಮೇಲೆ ನಾಲ್ಕು ಜನ ಕಲಾವಿದರು ಕೃಷ್ಣನ ಚಿತ್ರವನ್ನು ಭಾಗವಾಗಿ ಬರೆದು ಒಂದುಗೂಡಿಸಿದ್ದು ಕಲಾವಿದರು ನಾವೆಲ್ಲಾ ಒಂದು ಎನ್ನುವಂತಿತ್ತು. ಪುರಿ ಜಗನ್ನಾಥನನ್ನು ಆರಾಧಿಸುವ ವಿಶಿಷ್ಟ ನೃತ್ಯ ಪ್ರಕಾರವನ್ನು ಪ್ರಸ್ತುತಪಡಿಸಿದ ಪುಟ್‌ಪುಟ್ಟ ಮಕ್ಕಳ ವೇಷಗಳು ಅತ್ಯಂತ ವೈಭವಯುತವಾಗಿ ಹಾಗೂ ವಿಶಿಷ್ಟವಾಗಿದ್ದು ಇಡೀ ಸಭಾಂಗಣವೇ ಎದ್ದುನಿಂತು ಚಪ್ಪಾಳೆಯ ಗೌರವ ಸೂಚಿಸಿದ್ದು ಅವಿಸ್ಮರಣೀಯ.
ಹರಿಯಾಣ ಪ್ರಾಂತ್ಯದ ಗ್ರಾಮದ ಕಲ್ಪನೆಯನ್ನು ಕಟ್ಟಿಕೊಟ್ಟದ್ದೊಂದು ವಿಶೇಷವೇ ಸರಿ. ಒಮ್ಮೆ ಒಳಗೆ ಹೋದರೆ ಅಲ್ಲಿಯ ಇಡೀ ಜನರ ಜೀವನಾಡಿ ಹೀಗೇ! ಎಂದು ಆಸ್ವಾದಿಸುವಂತೆ ಅಲ್ಲಿ ಲೋಕಮಾನ್ಯ ಜೀವನ, ಆಹಾರ, ಪರಿಕರಗಳನ್ನು ಪುನರ್‌ನಿರ್ಮಿಸಿ ನಮ್ಮನ್ನೆಲ್ಲದೇ ಲೋಕಕ್ಕೆ ಕೊಂಡೊಯ್ದಿದ್ದವರು.
ಹರಿಯಾಣದ ಮುಖ್ಯಮಂತ್ರಿ ಮನೋಹರಲಾಲ್‌ಜಿ ಹಾಗೂ ಪ್ರಸಿದ್ಧ ಸಿನಿಮಾ ದಿಗ್ದರ್ಶಕ ಸುಭಾಷ್ ಘಾಯ್‌ರವರು ಮುಖ್ಯ ಅತಿಥಿಯಾಗಿ ಸಮಾರೋಪ ಸಮಾರಂಭವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಕರ್ನಾಟಕ ಶಾಸ್ತ್ರೀಯ ಸಂಗೀತದ ಯಾವ ಪ್ರದರ್ಶನವೂ ಇರದಿದ್ದುದು ಒಂದು ಸಣ್ಣ ಬೇಸರದ ಸಂಗತಿ ಎನಿಸಿತ್ತು. (ಯಾಕೆಂದರೆ ಅದು ನನ್ನ ಕ್ಷೇತ್ರ ಎನಿಸಿಕೊಂಡದ್ದಿರಬಹುದೇನೋ!!)

ಒಟ್ಟಾರೆ ಮೂರು ದಿನಗಳು ಇಡೀ ದೇಶದ ಎಲ್ಲಾ ಪ್ರಕಾರಗಳ ಕಲಾವಿದರೂ ಒಟ್ಟುಗೂಡಿ ನಾವೆಲ್ಲಾ ಒಂದೇ ಎನ್ನುವ ಭಾವನೆಯನ್ನು ಮೇಳೈಸಲು ಸಾಧ್ಯವಾಗಿದ್ದು ಹರಿಯಾಣದ ಸಂಸ್ಕಾರ ಭಾರತಿಯ ಹಾಗೂ ಎಲ್ಲಾ ಆಯೋಜನಾ ಸಮಿತಿಯ ಹಾರ್ದಿಕ ಆತಿಥ್ಯದಿಂದ. ಎಲ್ಲವೂ ಅಚ್ಚುಕಟ್ಟು, ಅದ್ವಿತೀಯ, ಅವಿಸ್ಮರಣೀಯ.

   

Leave a Reply