ಹೆಣ್ಣು: ಅಮೂಲ್ಯ ಹೊನ್ನು!

ಬೋಧ ಕಥೆ - 0 Comment
Issue Date : 13.04.2015

ಅಪರಿಮಿತ ‘ಪರಿಜ್ಞಾನ’ ವೇದರಾಶಿಯ ಬಹುಮೂಲ್ಯ ಋಚೆಗಳಲ್ಲಿ ಹಲವು ‘ಬ್ರಹ್ಮವಾದಿನಿ’ಯ ಹೆಸರಲ್ಲಿರುವುದು ಸ್ತ್ರೀ ಸಂಕುಲದ ಸಾಧನೆಗೆ ಉದಾಹರಣೆ. ಶ್ರೇಷ್ಠತೆ ಹಾಗೂ ಸಂಪೂರ್ಣತೆಗೆ ಮತ್ತೊಂದು ಹೆಸರೆನಿಸಿದ ‘ಭೂಮನ್’ ಈ ಮಹಿಳೆಯ ಅಂತಃಸತ್ವ ಎಂಬುದನ್ನು ನಾವು ಗಮನಿಸಬಹುದಾಗಿದೆ.
ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುವ ಒಂದು ಸಂವಾದ ಬಹು ವಿಶಿಷ್ಟವಾದುದು. ಯಾಜ್ಞವಲ್ಕ್ಯ ಅಮಿತ ತೇಜಸ್ಸಿನ ಋಷಿ. ಆತನ ಪತ್ನಿಯರು ಈರ್ವರು, ಮೈತ್ರೇಯೀ ಹಾಗೂ ಕಾತ್ಯಾಯನೀ. ಆತ ಇಹಪ್ರಪಂಚದಿಂದ ಮುಕ್ತನಾಗಬಯಸಿದ. ತನ್ನೆಲ್ಲ ಸಂಪತ್ತನ್ನು ಈರ್ವರಿಗೂ ಸಮನಾಗಿ ಹಂಚಲು ಮುಂದಾದ. ಅದನ್ನು ತನಗೆ ಬೇಡ ಎಂದ ಮೈತ್ರೇಯೀ ‘ಯಾವುದರಿಂದ ನಿತ್ಯತೆಯನ್ನು ಪಡೆಯಲಾರೆನೋ ಅದನ್ನು ಪಡೆಯುವುದರಿಂದ ಲಾಭವಾದರೂ ಏನು?’ಎನ್ನುತ್ತಾಳೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಈ ಪ್ರಶ್ನೆಯೇ ಆಕೆಯನ್ನು ನಿತ್ಯಳನ್ನಾಗಿ ಮಾಡಿದೆ! ಈ ಸಂವಾದಲ್ಲಿ ಮತ್ತೆ ಮತ್ತೆ ಬರುವ ಮಾತೆಂದರೆ (ಬ್ರಹ್ಮಜ್ಞಾನವನ್ನು ಕುರಿತು) ‘ಇದು ನಿತ್ಯ, ಇದು ಬ್ರಹ್ಮ, ಇದೇ ಸರ್ವಸ್ವ!’
ಸದ್ಯೋವಧು ಹಾಗೂ ಬ್ರಹ್ಮವಾದಿನಿಯ ಅಪೂರ್ವ ಸಮ್ಮಿಲನವನ್ನು ನಾವಿಲ್ಲಿ ಕಾಣಬಹುದು. ಆ ಪರಂಪರೆ ಈ ಕಾಲದವರೆಗೂ ಹರಿದು ಬಂದಿರುವುದನ್ನು ಶ್ರೀರಾಮಕೃಷ್ಣರ ಪತ್ನಿ ಮಾತ್ರವಲ್ಲ, ಎಲ್ಲರ ತಾಯಿ ಎನಿಸಿದ ಶ್ರೀಮಾತೆ ಎಂದು ಎಲ್ಲರ ಗೌರವಕ್ಕೆ ಪಾತ್ರರಾದ ಶ್ರೀ ಶಾರದಾಮಣಿದೇವಿಯವರ ವ್ಯಕ್ತಿತ್ವದಲ್ಲಿ ಗುರುತಿಸಬಹುದಾಗಿದೆ. ‘ಅರಿವು’ ಉಂಟಾದ ಮೇಲೆ ಎಲ್ಲವೂ ತನ್ನಿಂತಾನೆ ತಿಳಿಯುತ್ತದೆ. ಅದರಂತೆ ನೋಡುತ್ತಾರೆ, ಆಡುತ್ತಾರೆ, ಮಾಡುತ್ತಾರೆ ಹಾಗೂ ನಡೆಯುತ್ತಾರೆ ಎಂಬುದಕ್ಕೆ ಶ್ರೀಮಾತೆ ಒಂದು ಉತ್ತಮ ಉದಾಹರಣೆ. ತಾವೇ ಸ್ವತಃ ಶಿಕ್ಷಕಿಯರಾದ ಬ್ರಹ್ಮವಾದಿನಿಯರನ್ನು ಉಪಾಧ್ಯಾಯಾ, ಉಪಾಧ್ಯಾಯೀ, ಆಚಾರ್ಯಾ ಎಂದು ಕರೆಯಲಾಗುತ್ತಿತ್ತು ಎಂದು ಪ್ರಸಿದ್ಧ ವೈಯಾಕರಣಿ ಆಚಾರ್ಯ ಪಾಣಿನಿ ಹೇಳಿದ್ದಾನೆ. ಭಟ್ಟೋಜಿ ದೀಕ್ಷಿತ ತನ್ನ ಸಿದ್ಧಾಂತಕಾಮುದಿ ಎಂಬ ವ್ಯಾಕರಣ ಗ್ರಂಥದಲ್ಲಿ ‘ಯಾತು ಸ್ವಯಂ ಏವ ಅಧ್ಯಾಪಿಕಾ’ ಎಂದು ಉಪಾಧ್ಯಾಯಾ – ಉಪಾಧ್ಯಾಯೀ – ಉಪಾಧ್ಯಾಯಾನೀ ಎಂಬ ಶಬ್ದಗಳ ವ್ಯಾಖ್ಯಾನ ಮಾಡಿದ್ದಾನೆ.
ವಾಸುದೇವ ದೀಕ್ಷಿತ ಸಿದ್ಧಾಂತ ಕೌಮುದೀ ಗ್ರಂಥದ ವ್ಯಾಖ್ಯಾನಕಾರ. ‘ಬಾಲ ಮನೋರಮಾ’ ಆತನ ವ್ಯಾಖ್ಯಾನ. ಅದರಲ್ಲಿ ಭಟ್ಟೋಜಿ ದೀಕ್ಷಿತನ ಮಾತನ್ನು ಸಮರ್ಥಿಸಿದ್ದಾೆ.
ಆಚಾರ್ಯ ಪಾಣಿನಿ, ಆಚಾರ್ಯ ಪತಂಜಲಿ ಈರ್ವರೂ ವೇದಕಾಲೀನ ಬ್ರಹ್ಮವಾದಿನಿಯರ ಕುರಿತು ಅವರಿಗಾಗಿಯೇ ಪ್ರತ್ಯೇಕ ಹೆಸರು ಇಡುವಷ್ಟು ಅವರು ವಿದ್ವತ್ತನ್ನು ಪಡೆದವರು ಎನ್ನುತ್ತಾರೆ.
‘ಕಠ’ ಶಾಖಾದ್ಯಾಯಿಗಳನ್ನು ‘ಕಠೀ’, ಋಗ್ವೇದಾದ್ಯಾಯಿಗಳನ್ನು ‘ಬಹವ್ರಚಾ’, ‘ಅಪಿಶಾಲಿ’ಯ ವ್ಯಾಕರಣ ಅಧ್ಯಯನ ಮಾಡುತ್ತಿದ್ದ ಮಹಿಳೆಯರನ್ನು ‘ಅಪಿಶಾಲೀ’, ಕಾಶಕೃತ್ಸ್ನ ಮೀಮಾಂಸದ ಅಭ್ಯಾಸಿಗಳನ್ನು ‘ಕಾಶಕೃತ್ಸ್ನಾ’ ಎಂದೂ ಕರೆಯುತ್ತಿದ್ದರು. ಓದಮೇಧ್ಯಾ ಎಂಬ ಆಚಾರ್ಯೆ ತನ್ನ ಪಾಂಡಿತ್ಯದಿಂದ ಪ್ರಸಿದ್ಧಳು. ಆಕೆಯ ಶಿಷ್ಯೆಯರನ್ನು ‘ಓದಮೇಧಾ’ ಎಂದು ಕರೆಯಲಾಗುತ್ತಿತ್ತು. ಈ ಎಲ್ಲಾ ನಿದರ್ಶನಗಳು ಸ್ತ್ರೀಯರೂ ಸಹ ಪುರುಷರಷ್ಟೇ ವಿದ್ವತ್ತು, ಸಾಮರ್ಥ್ಯ ಪಡದವರಾಗಿದ್ದರೆನ್ನಲು ಸಾಕು! ಆಕೆ ಕೇವಲ ಹೆಣ್ಣಲ್ಲ; ಜಗದ ಕಣ್ಣು ಮಾತ್ರವಲ್ಲ; ಅಮೂಲ್ಯ ಹೊನ್ನು!

   

Leave a Reply