ಹೆಣ್ಣು: ಜಗದ ಕಣ್ಣು

ಧಾರ್ಮಿಕ - 0 Comment
Issue Date : 06.04.2015

ಕೌಟುಂಬಿಕ ಜೀವನ ಮತ್ತು ಆಧ್ಯಾತ್ಮಿಕತೆ ಇವೆರಡೂ ಹೊಂದಾಣಿಕೆ ಆಗಲಾರದ ಸಂಗತಿಗಳು ಎಂದು ಹಲವರು (ಈಚಿನ ‘ವಿದ್ಯಾವಂತರು’) ಭಾವಿಸಿರುವುದುಂಟು. ಆದರೆ ಭಾರತೀಯ ವೇದ ಸಂಪತ್ತು ಇದನ್ನು ಒಪ್ಪದು.
 ಕೌಟುಂಬಿಕ ಜೀವನದಲ್ಲಿರುವ ‘ಸದ್ಯೋವಧು’ ಸಂಸಾರಿ ನಿಜ. ಹಾಗೆಯೇ ತಪಸ್ವಿನಿಯಾದ ‘ಬ್ರಹ್ಮವಾದಿನಿ’ಯ ಸಂಸಾರ ಕೇವಲ ಒಂದು ಮನೆ ಮಾತ್ರವಲ್ಲ. ಆಕೆಯ ಆದರ್ಶ ಸತ್ಯ – ಬ್ರಹ್ಮಜ್ಞಾನ ಪ್ರಾಪ್ತಿ. ಆಕೆಯ ಜೀವನದ ಗುರಿ ಆಧ್ಯಾತ್ಮಿಕ ಕಲ್ಯಾಣ ಪ್ರಾಪ್ತಿ. ಸದ್ಯೋವಧು ತನ್ನ ಕುಟುಂಬ (ಆಕೆಗೆ ಅದೇ ಸಮಗ್ರ ಸಂಸಾರ. ಸಂಸಾರ ಎಂದರೆ ವಿಶ್ವ!)ವನ್ನು ಈ ನೆಲೆಯಲ್ಲಿ ನೋಡಿದರೆ ಇವೆರಡೂ ಒಂದಕ್ಕಿಂತ ಒಂದು ಕೀಳು ಎಂದಲ್ಲ. ಇವರೀರ್ವರ ಸ್ಥಾನವೂ ಸಮಾನ ಗೌರವಾಸ್ಪದವೇ!
 ಬ್ರಹ್ಮವಾದಿನಿಯರು ಸಂಸಾರ ವಿಮುಖರಾಗಿ ಸಂನ್ಯಾಸ ಸ್ವೀಕರಿಸಿ ಎಲ್ಲೋ ಕಾಡಿನಲ್ಲಿ ವಾಸಿಸಬೇಕಾಗಿರಲಿಲ್ಲ. ಬೆಟ್ಟದ ಗುಹೆಯೊಂದರಲ್ಲಿ ತಪಸ್ಸು ಮಾಡಬೇಕೆಂದು ವಿಧಿಸಲಿಲ್ಲ. ಎಷ್ಟೋ ಬ್ರಹ್ಮವಾದಿನಿಯರು ವಿವಾಹಿತರೇ ಇದ್ದರು. ಸದ್ಯೋವಧುಗಳಲ್ಳೂ ಬಹುತೇಕರು ಆಧ್ಯಾತ್ಮಿಕ ಪ್ರವೃತ್ತಿಯುಳ್ಳವರಾಗಿದ್ದರು. ತಮ್ಮ ಬಿಡುೇ ಇಲ್ಲದ ಪ್ರಾಪಂಚಿಕ ಕೆಲಸ ಕಾರ್ಯಗಳ ನಡುವೆಯೂ ಆಧ್ಯಾತ್ಮಿಕ ಪರಿಪೂರ್ಣತೆಗಾಗಿಯೂ ಸಾಧನೆ ನಡೆಸಿದ್ದಾರೆ. ಮಾತ್ರವಲ್ಲ ಆತ್ಮ ಸಾಕ್ಷಾತ್ಕಾರವನ್ನೂ ಪಡೆದಿದ್ದಾರೆ.
 ಕೌಟುಂಬಿಕತೆ ಮತ್ತು ಆಧ್ಯಾತ್ಮಿಕತೆ ಈ ಎರಡೂ ಆದರ್ಶಗಳ ಸಮ್ಮಿಲನವೇ ಭಾರತೀಯ ಮಹಿಳೆ ಎಂದರೂ ತಪ್ಪಾಗದು. ಇವು ಭಾರತೀಯ ಸ್ತ್ರೀತ್ವದ ಪ್ರೇರಕ ಶಕ್ತಿಗಳು. ಋಗ್ವೇದದಲ್ಲಿ ಇಪ್ಪತ್ತೇಳು ಪ್ರಸಿದ್ಧ ಬ್ರಹ್ಮವಾದಿನಿಯರ ಮಂತ್ರಗಳು (ಅವರು ಕಂಡ, ಕೇಳಿಸಿಕೊಂಡ ಭಗವಂತನ ಮಾತುಗಳು) ಕಂಡುಬರುತ್ತವೆ. ಇವರು ಪ್ರಸಿದ್ಧರು. ಇವರಲ್ಲದೇ ಇನ್ನೂ ಹಲವರು ಇದ್ದಿರಬಹುದು. ಇವರಲ್ಲಿ ಹಲವರು ವಿವಾಹಿತರು! ಅವರ ಮಂತ್ರಗಳಲ್ಲಿ ಇಹವನ್ನೇ ಪರವಾಗಿ ಅರಳಿಸಬಲ್ಲ ಪತಿ ಪ್ರೇಮ – ಆತ ಸದಾ ಪ್ರೀತಿಸುವವನಾಗಿರಬೇಕು, ಸುಖದಾಯಕ ಸಂಪದ್ಭರಿತ ಗೃಹಜೀವನ, ಸವತಿಯರು ಇರುವಂತಿರಬಾರದು, ಮನೆಯ ಎಲ್ಲ ಸದಸ್ಯರೂ ಸ್ನುಷಾ – ಸೊಸೆಯನ್ನು ಪ್ರೀತಿ ಗೌರವದಿಂದ ಾಣುವುದರಿಂದಲೇ ಸುಖ ಸಮೃದ್ಧಿ ಹೀಗೆ ಹಲವು ಆಸೆ ಆಕಾಂಕ್ಷೆಗಳ ಸ್ಪಷ್ಟ ನಿವೇದನೆಯನ್ನು ಕಾಣಬಹುದಾಗಿದೆ.
 ಗಾರ್ಗಿವಾಚಕ್ನವೀ, ವಡವಾಪ್ರಾಥಿಥೇಯಿ, ಸುಲಭಾ ಮೈತ್ರೇಯಿ ಇವರ ಹೆಸರುಗಳು ಋಗ್ವೇದದ ಆಶ್ವಲಾಯನ ಹಾಗೂ ಸಾಂಖ್ಯಾಯನರ ಸೂತ್ರಗಳಲ್ಲಿ ಕಾಣಬಹುದಾಗಿದೆ. ಘೋಷಾ, ಗೋಧಾ, ವಿಶ್ವವಾರಾ, ಅಪಾಲಾ, ಬ್ರಹ್ಮಜಯಾ ಇಂದ್ರಾಣೀ, ಇಂದ್ರಮಾತಾ, ಸರಮಾ, ರೋಮಶಾ, ಊರ್ವಶೀ, ಲೋಪಾಮುದ್ರಾ, ಯಮೀ, ನಾರೀ, ವಾಕ್. ಶ್ರದ್ಧಾ, ಮೇಧಾ, ದಕ್ಷಿಣಾರಾತ್ರೀ, ಸೂರ್ಯಾ, ಸಾವಿತ್ರೀ ಹೀಗೆ ಬೃಹದ್ದೇವಾದಲ್ಲಿ ಶೌನಕನು ಪಟ್ಟಿ ಮಾಡುತ್ತಾನೆ.
 ಬೃಹದಾರಣ್ಯಕ ಉಪನಿಷತ್ತಿನಲ್ಲಿ ವಾಚಕ್ನು ಮುನಿಯ ಮಗಳಾದ ಗಾರ್ಗಿಯ ಸಂವಾದ ಎರಡು ಕಡೆ ಕಾಣಬಹುದು. ಪತ್ನಿ ಎಂದರೆ ಪತಿಯ ಅರ್ಧಭಾಗ! ಸ್ವಾತಿ ಮಳೆ ಹನಿಯು ಮುತ್ತಾಗುವುದು ಚಿಪ್ಪಿನೊಳಗೆ ಸೇರಿದಾಗ ಮಾತ್ರ ಎಂಬ ಸುಂದರ ಉಪಮೆಯು ಇದನ್ನು ನಿರೂಪಿಸುವ ಪರಿ ಅನನ್ಯ.
 ಯಾಜ್ಞವಲ್ಕ್ಯನ ಪತ್ನಿಯರಾದ ಮೈತ್ರೇಯಿ ಮತ್ತು ಕಾತ್ಯಾಯನಿಯರು ಪತಿಯೊಡನೆ ನಡೆಸಿದ ಸಂವಾದ ಬೃಹದಾರಣ್ಯಕದ ಸಾರವತ್ತಾದ ಭಾಗಗಳಲ್ಲಿ ಒಂದು. ಹೆಣ್ಣು ಕೇವಲ ಹೆಣ್ಣಲ್ಲ ಜಗದ ಕಣ್ಣು ಎಂಬುದು ಇಲ್ಲಿ ವ್ಯಕ್ತವಾಗಿರುವ ಅಂಶ.

   

Leave a Reply