ಹೆಣ್ಣು: ಸಂಸ್ಕೃತಿ ಸಾಕ್ಷಾತ್ಕಾರದ ಕಣ್ಣು

ಧಾರ್ಮಿಕ - 0 Comment
Issue Date : 06.04.2015

 ಪರಮಸುಂದರ ಮಾತ್ರವಲ್ಲ ಪರಮ ಗೌರವಾಸ್ಪದವಾದ ಹೆಣ್ಣಿನ ಸ್ವರೂಪ ಎಂದರೆ ‘ಪತ್ನಿ’. ಈ ಶಬ್ದದ ಮೂಲ ಅರ್ಥ ಎಂದರೆ ಪತಿಯ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವವಳು. ಅಷ್ಟೇ ಅದಕ್ಕೆ ಪ್ರೇರಣೆ ಮತ್ತು ಒತ್ತಾಸೆ ನೀಡುವವಳು. ಈ ಮಾತನ್ನು ಹೇಳಿದವನು ಪ್ರಸಿದ್ಧ ವೈಯಾಕರಣಿ ಪಾಣಿನಿ. ಹಾಗೆಂದೇ ಪತ್ನಿಯನ್ನು ‘ಸಹಧರ್ಮಿಣಿ’ ಎಂದು ಕರೆದರು ನಮ್ಮ ಋಷಿಗಳು.
 ಆಕೆಯ ಗೌರವವನ್ನು ಇಮ್ಮಡಿಗೊಳಿಸಲೆಂದೇ ನಮ್ಮ ಋಷಿಗಳು ‘ಮಾತೃವತ್ ಪರದಾರೇಷು..’ ಆಕೆಯನ್ನು ‘ತಾಯಿ’ಯಂತೆ ಕಂಡು ಆದರಿಸಿ ಎಂದು ಆದೇಶಿಸಿದರು.
 ಮನುವಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಒಬ್ಬ ಆಚಾರ್ಯ ಅಥವಾ ವೇದ ಪಂಡಿತ ಘನತೆಯಲ್ಲಿ ಹತ್ತು ಉಪಾಧ್ಯಾಯರನ್ನು (ಅಂದರೆ ಆಚಾರ್ಯರನ್ನು) ಮೀರಿಸುತ್ತಾನೆ . ತಂದೆಯು ಆ ತೆರನ ನೂರು ಆಚಾರ್ಯರಿಗಿಂತ ಮಿಗಿಲು. ಆದರೆ ಒಬ್ಬ ಮಾತೆಯು ಆ ರೀತಿಯ ಸಹಸ್ರ ತಂದೆಯರನ್ನೂ ಮೀರಿಸುವವಳು’ ಎನ್ನುತ್ತಾನೆ.
 ಈ ಹೆಣ್ಣು ಖಂಡಿತಾ ಸಾಮಾನ್ಯಳಲ್ಲ. ಆಕೆಯು ಕೌಟುಂಬಿಕತೆ ಹಾಗೂ ಆಧ್ಯಾತ್ಮಿಕತೆ ಇವೆರಡರ ಅನುರೂಪ ಸಾಮರಸ್ಯದ ಸಂಕೇತ. ಇವೆರಡು ಆದರ್ಶಗಳು ನಿತ್ಯ ನೂತನ ಮಾತ್ರವಲ್ಲ ಚಿರಂತನ ಸಹ. ಒಂದು ಇನ್ನೊಂದನ್ನು ಎಂದೂ ಅಡಗಿಸಿಲ್ಲ.
 ಕುಟುಂಬದಲ್ಲಿ ಇರುವ ಹೆಣ್ಣು ಆಧ್ಯಾತ್ಮಿಕ ಸಾಧನೆ ಹೇಗೆ ಮಾಡಬಲ್ಲಳು ಎಂದು ಪ್ರಶ್ನಿಸುವವರೂ ಇದ್ದಾರೆ. ನಿಜ, ಆದರೆ ಅವರಿಗೆ ಭಾರತೀಯ ಸಂಸ್ಕೃತಿ ಪರಂಪರೆಯ ಸಾಮಾನ್ಯ ಜ್ಞಾನವೂ ಇಲ್ಲವೆಂಬುದು ಸತ್ಯ.
 ಏಕತೆ – ಸಮಾನತೆ, ಉದಾತ್ತತೆ – ಪರಿಪೂರ್ಣತೆ, ಸ್ವಚ್ಛತೆ – ಸಂಪೂರ್ಣತೆ ಈ ತತ್ತ್ವಗಳಿಂದ ಭಾರತೀಯ ಮಹಿಳೆಯರು ಸ್ಫೂರ್ತಿಗೊಂಡಿದ್ದಾರೆ. ಮಹಿಳೆ ಎಂಬ ಪದಗಳಲ್ಲಿ ಮಹಿ ಮತ್ತು ಇಳೆ ಎಂಬ ಸಂಸ್ಕೃತ ಪದಗಳು ಒಂದಕ್ಕೊಂದು ಬೆಸೆದಿವೆ ಎನ್ನುತ್ತಿದ್ದ ಓರ್ವ ಹರಿದಾಸರು ಎರಡೂ ಪದಗಳಿಗೆ ಅರ್ಥ ‘ಭೂಮಿ’ ಎಂಬುದು ವಿಶೇಷ ಎನ್ನುತ್ತಿದ್ದರು. ಅವರು ಹೇಳುತ್ತಿದ್ದ ಈ ಉದಾಹರಣೆಯಲ್ಲಿ ನಾವು ವ್ಯಾಕರಣಾಂಶಗಳನ್ನು ಗಮನಿಸದೇ ಅದರೊಳಗಿನ ಅಂತರಾರ್ಥವನ್ನು ಗಮನಿಸಬೇಕು. ಭೂಮಿಯಂತಹ ಸಹನೆ, ಭೂಮಿಯಂತಹ ಹಿರಿದಾದ ಮನೋಧರ್ಮ – ಎಲ್ಲರನ್ನೂ, ಏನು ತಪ್ಪೆಸಗಿದವರನ್ನೂ ಸಮಾನವಾಗಿ ಕಾಣುವ ಮನೋಧರ್ಮ. ಈ ತೆರನ ಹಲವು ಗುಣಗಳನ್ನು ನಾವು ಗ್ರಹಿಸಬೇಕು.
 ಶ್ರೇಷ್ಠತೆ ಹಾಗೂ ಸಂಪೂರ್ಣತೆ ಈ ಗುಣವು ನಮ್ಮ ನಾಡಿನ ಸ್ತ್ರೀಯರ ಅಂತಃಸತ್ವ, ಬಾಳಿನ ಆಳ ಅಗಲವನ್ನು ಸರ್ವಸ್ಪರ್ಶಿಯಾಗಿ ತಲುಪಲು ಇದು ತುಂಬಾ ಸಹಕಾರಿ. ಲೌಕಿಕ ಮತ್ತು ಅಲೌಕಿಕ ಎರಡೂ ವಿಷಯಗಳಲ್ಲಿನ ಸಾಧನೆಗೆ ಇರುವ ಎರಡು ದಾರಿಗಳೆಂದರೆ ಸಂಸಾರಿ ಮತ್ತು ಸನ್ಯಾಸಿ ವರ್ಗ. ಹೆಣ್ಣಿಗೂ ಸಹ ‘ಸದ್ಯೋವಧು’ ಮತ್ತು ‘ಬ್ರಹ್ಮವಾದಿನಿ’ ಎಂಬ ಎರಡು ದಾರಿಗೆ ಅವಕಾಶ ಕಲ್ಪಿಸಲಾಗಿದೆ.
 ಸದ್ಯೋವಧು ಸಂಸಾರಿ, ಆಕೆಗೆ ತನ್ನ ಮನೆ – ಕುಟುಂಬ ಸಾಧನಾ ಭೂಮಿ (ಸೀತೆ, ಸಾವಿತ್ರಿ, ಅನಸೂಯೆ ಇತ್ಯಾದಿ ಉದಾ). ಬ್ರಹ್ಮವಾದಿನಿ ಸನ್ಯಾಸಿಯಂತೆ. ಆದರೆ ಇವರಲ್ಲಿ ಗೃಹಿಣಿಯರೂ ಇದ್ದರೆಂಬುದು ಗಮನಾರ್ಹ (ಶ್ರೀಮಾತೆ ಶಾರದಾ ದೇವಿ ಈ ಎರಡೂ ವರ್ಗದ ಸಮ್ಮಿಲನ!). ಇವರ ಗುರಿಯೂ ಆತ್ಮ ಸಾಕ್ಷಾತ್ಕಾರ, ಆದರೆ ದಾರಿ ಮಾತ್ರ ಬೇರೆ! ಈ ಸಂಸ್ಕೃತಿ ಹೆಣ್ಣನ್ನು ಸಂಸ್ಕೃತಿಯ ಸಾಕ್ಷಾತ್ಕಾರದ ಕಣ್ಣು ಎಂದದ್ದು ಯಥಾರ್ಥ.

 

   

Leave a Reply