ಹೆಮ್ಮೆಯ ಸಹಸ್ರಮಾನ ವರ್ಷಾಚರಣೆಯ ಯಶಸ್ಸಿಗೆ ಭೈಯಾಜಿ ಜೋಶಿ ಕರೆ

ಭಾರತ ; ಲೇಖನಗಳು - 0 Comment
Issue Date : 21.10.2014

ಚೋಳ ಚಕ್ರವರ್ತಿ 1ನೇ ರಾಜೇಂದ್ರ ಪಟ್ಟಾಭಿಷೇಕಕ್ಕೆ ಸಾವಿರ ವರ್ಷ
ಲಕ್ನೋ,ಅ.20
ಭಾರತದ ಸುಪ್ರಸಿದ್ಧ ಚೋಳ ರಾಜವಂಶದ ಹೆಸರಾಂತ ಚಕ್ರವರ್ತಿ ಒಂದನೇ ರಾಜೇಂದ್ರನ ಪಟ್ಟಾಭಿಷೇಕದ ಸಹಸ್ರಮಾನ ವರ್ಷಾಚರಣೆಯು ನಮಗೆಲ್ಲರಿಗೆ ಭಾರೀ ಹೆಮ್ಮೆಯ ಮತ್ತು ಸ್ಪೂರ್ತಿದಾಯಕ ಸಂಗತಿಯಾಗಿದೆ ಎಂದು ಆರೆಸ್ಸೆಸ್ ಸರಕಾರ್ಯವಾಹ ಭಯ್ಯೆಜಿ ಜೋಶಿ ಹೇಳಿದ್ದಾರೆ.
ಭಾನುವಾರ ಅವರು ಇಲ್ಲಿ ಆರೆಸ್ಸೆಸ್ ಅಖಿಲ ಭಾರತೀಯ ಕಾರ್ಯಕಾರಿ ಮಂಡಳದ ಬೈಠಕ್‌ನಲ್ಲಿ ಮಾತನಾಡುತ್ತಿದ್ದರು.
ಸಾಮಾನ್ಯ ಶಕೆ 1014ರಲ್ಲಿ ಪಟ್ಟಾಭಿಷಿಕ್ತನಾದ ಚಕ್ರವರ್ತಿ ಒಂದನೇ ರಾಜೇಂದ್ರ ತನ್ನ ಸಾಮ್ರಾಜ್ಯವನ್ನು ಗಂಗಾನದಿ ತಟದಿಂದ ಇಡೀ ದಕ್ಷಿಣ ಭಾರತಕ್ಕೆ ಮಾತ್ರವಲ್ಲ ಶ್ರೀಲಂಕಾ, ಲಕ್ಷದ್ವೀಪ, ಮಾಲ್ದೀವ್ಸ್, ಲಾವೋಸ್, ಕಾಂಬೋಡಿಯಾ ಮತ್ತು ವಿಯಟ್ನಾಂಗೂ ವಿಸ್ತರಿಸಿದ್ದ. ಆತನ ಉತ್ತಮ ಆಡಳಿತ ನಿರ್ವಹಣೆ ಮತ್ತು ಸುಸಂಘಟಿತ ಸೇನಾ ಪಡೆಯ ಕಾರಣದಿಂದಾಗಿ ಆತನ ಆಡಳಿತದಲ್ಲಿ ಈ ಇಡೀ ಪ್ರದೇಶದಲ್ಲಿ ವ್ಯಾಪಾರ, ವಾಣಿಜ್ಯ, ಕಲೆ, ಸಂಸ್ಕೃತಿ, ವಾಸ್ತುಶಿಲ್ಪ, ಶಿಲ್ಪಕಲೆಗಳು ಪ್ರವರ್ಧಮಾನ ಬಂದಿದ್ದವು.
ಆತನ ಕಾಲದಲ್ಲಿ ಸಾಹಿತ್ಯ ಮತ್ತು ಜ್ಞಾನಾನ್ವೇಷಣೆ ಕೂಡ ವೃದ್ಧಿಸಿತ್ತು. ಸಂಸ್ಕೃತ ಮತ್ತು ತಮಿಳಿನಲ್ಲಿ ಅನೇಕ ಗ್ರಂಥಗಳು ರಚನೆಯಾಗಿದ್ದವು. ಆತನ ಆಳ್ವಿಕೆಯಲ್ಲಿ ಅನೇಕ ಭವ್ಯ ದೇವಸ್ಥಾನಗಳು ಮತ್ತು ಸ್ತುಪಗಳು ಭಾರತ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದಲ್ಲಿ ನಿರ್ಮಾಣವಾಗಿವೆ.
ಅವೆಲ್ಲ ನಮ್ಮ ಜೀವನ ಸಂಸ್ಕೃತಿ ಪರಂಪರೆಯ ಸಂಕೇತಗಳಾಗಿ ರಾರಾಜಿಸುತ್ತಿವೆ. ಸಂಸ್ಕೃತ ಮತ್ತು ತಮಿಳಿನಲ್ಲಿ ಬರೆದಿರುವ 21 ತಾಮ್ರದ ಶಾಸನಗಳಲ್ಲಿ ಇದು ದೃಢಪಟ್ಟಿದೆ. ಆ ಶಾಸನಗಳನ್ನು ನೆದರ್ ಲ್ಯಾಂಡ್ಸ್‌ನ ಲೀಡೆನ್ ವಿಶ್ವವಿದ್ಯಾಲಯದಲ್ಲಿ ಸಂರಕ್ಷಿಸಿಡಲಾಗಿದೆ.
ನಮ್ಮ ವಾಯುವ್ಯ ಗಡಿಯಲ್ಲಿ ಮಹಮ್ಮದ್ ಘಜನಿಯ ದಾಳಿ ಮತ್ತು ಯೂರೋಪ್ ಅರಬ್ ಸಂಘರ್ಷದ ಕಾಲದಲ್ಲಿ ಚಕ್ರವರ್ತಿ ಒಂದನೇ ರಾಜೇಂದ್ರ ಶಾಂತಿ, ಸಮೃದ್ಧಿಯನ್ನು ನೆಲೆಗೊಳಿಸಲು ಮತ್ತು ಇಡೀ ಆಗ್ನೇಯ ಏಶ್ಯಾ ಪ್ರದೇಶದಲ್ಲಿ ಅಡೆತಡೆ ರಹಿತ ವ್ಯಾಪಾರ ವ್ಯವಹಾರ ನಡೆಯುವಂತೆ ಸ್ಥಿರ ಆಡಳಿತವನ್ನು ಒದಗಿಸಿದ್ದ. ವ್ಯಾಪಾರ ವೃದ್ಧಿಗಾಗಿ ಆತ ಚೀನಾದಲ್ಲಿ ರಾಜತಾಂತ್ರಿಕ ದೂತವಾಸವನ್ನು ಸ್ಥಾಪಿಸಿದ್ದ.
ವೇದಗಳು ಮತ್ತು ಇತರ ಗ್ರಂಥಗಳ ಅಧ್ಯಯನಕ್ಕಾಗಿ ಎನ್ನಯರಿಂನಲ್ಲಿ ವಿಶ್ವವಿದ್ಯಾಲಯವೊಂದನ್ನು ಆತ ಸ್ಥಾಪಿಸಿದ್ದ. ರಾಜಕೀಯ ಸ್ಥಿರತೆಯನ್ನು ಕಾಪಾಡಿಕೊಂಡುದರ ಜೊತೆಗೆ ಸಾಂಸ್ಕೃತಿಕ ಏಕತೆ ಮತ್ತು ಭಾವನಾತ್ಮಕ ಸಮಗ್ರತೆಯನ್ನು ಉತ್ತೇಜಿಸುವುದಕ್ಕಾಗಿ ಆತ ತನ್ನ ಸೇನಾಧಿಪತಿ ಆರ್ಯನ್ ರಾಜರಾಜನ್‌ನನ್ನು ಪವಿತ್ರ ಗಂಗಾಜಲವನ್ನು ತರಲು ಕಳುಹಿಸಿ ಅದನ್ನು ಭವ್ಯವಾಗಿ ಸ್ವಾಗತಿಸಿದ. ಅದನ್ನು ಕಾವೇರಿ ಜಲದಲ್ಲಿ ಮಿಶ್ರಗೊಳಿಸಿ ಭವ್ಯ ಸರೋವರವೊಂದನ್ನು ನಿರ್ಮಿಸಿದ. ಆ ಕಾರಣದಿಂದ ಆತ ಗಂಗೈಕೊಂಡಚೋಳನ್ (ಗಂಗೆಯನ್ನು ತಂದ ಚೋಳ) ಎಂಬ ಹೆಸರು ಪಡೆದ.
ತಮ್ಮ ಇತಿಹಾಸದ ಅಂತಹ ವೈಭವದ ಕಾಲವನ್ನು ಸ್ಮರಿಸಿಕೊಳ್ಳುವುದು ರಾಷ್ಟ್ರೀಯ ಪುನರುತ್ಥಾನಕ್ಕಾಗಿ ಶ್ರಮಿಸುವಲ್ಲಿ ಸ್ಪೂರ್ತಿದಾಯಕವಾಗಲಿದೆ. ಸ್ವಯಂಸೇವಕರು ಸಹಿತ ಭಾರತದ ಎಲ್ಲಾ ಜನರು ಭಾರತ ಮತ್ತು ಜಗತ್ತಿಗೆ ಚೋಳ ಚಕ್ರವರ್ತಿ ರಾಜೇಂದ್ರನ ಸಾಧನೆಗಳನ್ನು ನೆನಪಿಸಬೇಕು ಮತ್ತು ಈ ಸಂಬಂಧದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮತ್ತು ಬೆಂಬಲ ನೀಡುವಂತೆ ಮಾಡಬೇಕು. ಅಂತಹ ವಿಶಾಲ ಪ್ರದೇಶದಲ್ಲಿ ಸರ್ವತೋಮುಖ ಏಳಿಗೆಯೊಂದಿಗೆ ಉದಾರ ಆಡಳಿತ ನೀಡಿದ ಚಕ್ರವರ್ತಿ ರಾಜೇಂದ್ರನ ಗುಣಗಾನವಾಗಬೇಕು ಎಂದರು.

 

   

Leave a Reply