ಹೆಸರಿಗೆ ವ್ಯತಿರಿಕ್ತ ಈ ರಜನಿ

ಮಹಿಳೆ ; ಲೇಖನಗಳು - 0 Comment
Issue Date : 30.4.2016

ಮಹಿಳೆಯರು ಛಾಪು ಮೂಡಿಸದ ಕ್ಷೇತ್ರ ಯಾವುದಿದೆ? ಬೇರೆ ಎಲ್ಲಾ ಹೋಗಲಿ, ತುಂಬಾ ಕ್ಲಿಷ್ಟವಾದ ಪತ್ತೇದಾರಿ ಕೆಲಸವನ್ನೂ ಮಹಿಳೆಯರು ಮಾಡಬಲ್ಲರು ಎಂದರೆ ನಂಬುತ್ತೀರಾ? ಹೌದು, ಮುಂಬೈ ವಾಸಿ ರಜನಿ ಪಂಡಿತ್ ಮಹಿಳೆ ಪತ್ತೇದಾರಿಕೆಯಲ್ಲೂ ಸೈ ಎನಿಸಿಕೊಳ್ಳಬಲ್ಲಳು ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಮಹಾರಾಷ್ಟ್ರದ ಥಾಣೆಯ ಪಹ್ಲಾಘರ್ ಎಂಬಲ್ಲಿ ಜನಿಸಿದ ಈಕೆಯ ತಂದೆ ಶಾಂತಾರಾಮ್ ಪಂಡಿತ್. ಮರಾಠಿ ಸಾಹಿತ್ಯವನ್ನು ಓದಿದ ರಜನಿಗೆ ಚಿಕ್ಕ ವಯಸ್ಸಿನಿಂದಲೂ ಪತ್ತೇದಾರಿಕೆಯಲ್ಲಿ ಎಲ್ಲಿಲ್ಲದ ಆಸಕ್ತಿ. ಮೊಟ್ಟಮೊದಲ ಬಾರಿಗೆ ಕಾಲೇಜಿನಲ್ಲಿ ಪತ್ತೇದಾರಿ ಕೆಲಸವೊಂದನ್ನು ಮಾಡುವ ಮೂಲಕ ಈ ಕ್ಷೇತ್ರದಲ್ಲೇ ಮುಂದುವರಿಯಬೇಕೆಂಬ ತನ್ನ ಆಸೆಯನ್ನು ವ್ಯಕ್ತಪಡಿಸಿದ್ದರು. ಹುಡುಗಿಯಾಗಿ ಅಂಥ ಅಪಾಯಕಾರಿ ಕೆಲಸಕ್ಕೆ ಹೋಗಬೇಡ ಎಂದು ಮನೆಯಲ್ಲಿ ಯಾರೊಬ್ಬರೂ ತಡೆಯಲಿಲ್ಲ. ಭಾರತದಲ್ಲಿ ಯಾವೊಬ್ಬ ಮಹಳೆಯೂ ಮಾಡಿರದ ಕೆಲಸವನ್ನು ಮಾಡುತ್ತಿರುವ ಬಗ್ಗೆ ತಂದೆ-ತಾಯಿಗೂ ಹೆಮ್ಮೆಯೇ. ಅವರ ಪ್ರೋತ್ಸಾಹದಿಂದಾಗಿ 25 ವರ್ಷಕ್ಕೇ ರಜನಿ ಡಿಟೆಕ್ಟಿವ್ ಸರ್ವಿಸ್ ಎಂಬ ಪತ್ತೇದಾರಿ ಸಂಸ್ಥೆಯೊಂದನ್ನು ಹುಟ್ಟುಹಾಕಿದರು ರಜನಿ. ಇದುವರೆಗೂ ಅವರು ಪರಿಹಾರ ಹುಡುಕಿದ ಪ್ರಕರಣಗಳು ಬರೋಬ್ಬರಿ 75,000. ಹಾಗೇ ಎರಡು ಪುಸ್ತಕವನ್ನೂ ಬರೆದ ಹೆಗ್ಗಳಿಕೆ ಇವರದು.
ಮೊದಲು ಅವರೊಬ್ಬರಿಂದ ಆರಂಭವಾದ ಈ ಸಂಸ್ಥೆಯಲ್ಲಿ ಇದೀಗ 30 ಕ್ಕೂ ಹೆಚ್ಚು ಪತ್ತೇದಾರರು ಕೆಲಸ ನಿರ್ವಹಿಸುತ್ತಿದ್ದಾರೆ. ಭಾರತದ ಅತ್ಯಂತ ಪ್ರಭಾವಶಾಲಿ ಪತ್ತೇದಾರರಲ್ಲಿ ರಜನಿ ಕೂಡ ಒಬ್ಬರಾಗಿರುವುದು ಅವರ ಬುದ್ಧಿಮತ್ತೆಗೆ ಸಾಕ್ಷಿಯಾಗುತ್ತದೆ. ಪ್ರತಿಯೊಂದು ಮಹತ್ವದ ವಿಷಯವನ್ನೂ ಕೌತುಕದ ಮತ್ತು ಸಂಶಯದ ಕಣ್ಣಲ್ಲೇ ನೋಡಿದರೆ ಸಾಕಷ್ಟು ಸತ್ಯಗಳು ಹೊರಬರುತ್ತವೆ ಎಂಬುದು ಅವರ ಅನುಭವದ ಮಾತು. ಅಷ್ಟೇ ಅಲ್ಲ, ಈ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಬೇಕಾದರೆ ನಾವು ನೋಡುವ ಯಾವ ವಸ್ತುವನ್ನೂ, ಸಂಬಂಧಿಸಿದ ವ್ಯಕ್ತಿಗಳ ಯಾವುದೇ ಮಾತನ್ನೂ ಕ್ಷುಲ್ಲಕ ಎಂಬಂತೆ ನೋಡುವಂತೆಯೇ ಇಲ್ಲ. ನಾವು ತೀರಾ ಗೌಣವೆಂದು ನಿರ್ಲಕ್ಷಿಸಿದ ವಿಷಯವೇ ನಮ್ಮ ತನಿಖೆಗೆ ಮಹತ್ವದ ಹಾದಿಯನ್ನು ತೋರಿಸಿಬಿಡಬಹುದು ಎಂಬುದು ಅವರ ಮಾತು.
ಹಾಗೆಯೇ ಎಷ್ಟೋ ಮನೆಗಳಲ್ಲಿ ಸಮಸ್ಯೆ ಇರುತ್ತದೆ. ಕೆಲವೊಮ್ಮೆ ಅವನ್ನು ಮನೆ ಜನರೇ ಬಗೆಹರಿಸಿಕೊಳ್ಳಬಹುದಾದರೂ, ಕೆಲವೊಮ್ಮೆ ಹೊರಗಿನವರ ಸಹಾಯ ಬೇಕಾಗುತ್ತದೆ. ಯಾವುದೋ ಕೊಲೆ, ದರೋಡೆ, ಆತ್ಮಹತ್ಯೆ ಹೀಗೆ ವ್ಯಕ್ತಿಯನ್ನು ಕ್ಷಣಹೊತ್ತು ಅಧೀರವಾಗಿಸುವ ಘಟನೆಗಳ ಹಿಂದೆ ಎಂಥೆಂಥದೋ ಕತೆಗಳಿರುತ್ತವೆ. ಅವುಗಳ ಬೆನ್ನತ್ತಿ ಹೋಗುವುದು ಒಂದು ರೋಚಕ ಅನುಭವವೇ. ಈ ಸಂದರ್ಭದಲ್ಲಿ ಪತ್ತೇದಾರರಾದವರು ತನ್ನ ಗುರುತನ್ನು ಅಗತ್ಯ ಇರುವವರಿಗಲ್ಲದೆ ಇನ್ಯಾರಿಗೂ ಹೇಳಿಕೊಳ್ಳುವಂತಿಲ್ಲ. ಗುಟ್ಟನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾದ ಕೆಲಸ… ಬಹುಶಃ ಅದಕ್ಕೇ ಇರಬೇಕು ಈ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ!
ಕೆಲವೊಮ್ಮೆ ಸಾವಿನೊಂದಿಗೆ ಮುಖಾಮುಖಿಯಾಗಿ ನಿಲ್ಲಬೇಕಾದ ಪರಿಸ್ಥಿತಿಯೂ ಬರಬಹುದು. ಅಂಥ ಸಂದರ್ಭದಲ್ಲಿ ಜೀವಕ್ಕಿಂತ ಸತ್ಯ ಮುಖ್ಯ ಎಂಬ ಭಾವ ಅವರಲ್ಲಿ ಮೂಡಬೇಕಾಗುತ್ತದೆ. ತನ್ನ ವೃತ್ತಿಯ ಘನತೆಯನ್ನು ಉಳಿಸುವುದಕ್ಕಾಗಿ ಅಂಥ ಸಂದರ್ಭದಲ್ಲಿ ಆತ ತನ್ನ ಪ್ರಾಣವನ್ನೂ ತ್ಯಾಗ ಮಾಡುವುದಕ್ಕೆ ಸಿದ್ಧವಾಗಬೇಕಾಗುತ್ತದೆ. ಹೀಗಿರುವಾಗ ಮಹಿಳೆಯರು ಇಂಥ ಕ್ಷೇತ್ರದಲ್ಲಿ ಸಾಧಿಸಬೇಕೆಂದರೆ ಎದುರಾಗುವ ತಾಪತ್ರಯಗಳು ನೂರಾರು. ಅಂಥವನ್ನೆಲ್ಲ ಮೀರಿ ನಿಲ್ಲುವುದು ಸುಲಭದ ಮಾತಲ್ಲ. ರಜನಿ ಪಂಡಿತ್ ನಿಸ್ಸಂದೇಹವಾಗಿ ಅದನ್ನು ಸಾಧಿಸಿದ್ದಾರೆ. ಮತ್ತು ಪತ್ತೇದಾರಿಕೆ ಕ್ಷೇತ್ರದಲ್ಲಿ ಮಹಿಳೆಯರೂ ಛಾಪು ಮೂಡಿಸಬಹುದಾದ ಸಾಧ್ಯತೆಗಳನ್ನು ದೃಢಪಡಿಸಿದ್ದಾರೆ.
ನನಗೆ ಜೀವನದಲ್ಲಿ ಯಾವ ಭಯವೂ ಇಲ್ಲ. ಪ್ರತಿ ಮನುಷ್ಯನೂ ಹೆದರುವುದು ಸಾವಿಗೆ ಮಾತ್ರ. ಅದು ಒಂದಲ್ಲ ಒಂದು ದಿನ ಬಂದೇ ಬರುತ್ತದೆ. ಬರಬೇಕೆಂದಾದರೆ ಸುಮ್ಮನೆ ಮನೆಯಲ್ಲಿ ಕುಳಿತಿದ್ದಾಗಲೂ ತಿರುಗುವ ಫ್ಯಾನ್ ತಲೆ ಮೇಲೆ ಬಿದ್ದೂ ಅದು ಬರಬಹುದು. ಹಾಗಿದ್ದಾಗ ಸಾವಿನ ಬಗ್ಗೆ ಭಯಪಡುವ ಅಗತ್ಯ ನನಗಂತೂ ಕಾಣುವುದಿಲ್ಲ ಎಂಬುದು ರಜನಿಯವರ ಧೈರ್ಯದ ಮಾತು.
ತಿಂಗಳಿಗೆ ಕನಿಷ್ಠವೆಂದರೂ 20 ಅಪರಾಧ ಪ್ರಕರಣಗಳನ್ನು ರಜನಿ ಮತ್ತವರ ತಂಡ ಪರಿಹರಿಸುತ್ತಿದೆ. ಎಷ್ಟೋ ಬಾರಿ ದುಡ್ಡಿನ ಆಮಿಷ ಬಂದರೂ, ಬೆದರಿಕೆಗಳು ಬಂದರೂ ಯಾವುದಕ್ಕೂ ಜಗ್ಗದೆ ಸತ್ಯಶೋಧನೆಯೊಂದೇ ತನ್ನ ಬದುಕಿನ ಗುರಿ ಎಂದುಕೊಂಡು ಅವರು ಕೆಲಸ ಮಾಡುತ್ತಿದ್ದಾರೆ. ಯಾವುದೇ ಪ್ರಕರಣಗಳಲ್ಲೂ ಹಾದಿ ತಪ್ಪಿ ಸುಳ್ಳು ಸತ್ಯವಾಗಿ, ಸತ್ಯ ಸುಳ್ಳಾಗುವ ಅಪಾಯವನ್ನು ತಪ್ಪಿಸಿದ್ದಾರೆ. ಅಂಥ ಸಂದರ್ಭದಲ್ಲಿ ತಮ್ಮ ಚಾಣಾಕ್ಷತನವನ್ನು ಉಪಯೋಗಿಸಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ಪತ್ತೆ ಮಾಡಿದ್ದಾರೆ.
ಯಾವುದೇ ಕಾರಣಕ್ಕೂ ನಿರಪರಾಧಿ ತಮ್ಮ ತಪ್ಪಿನಿಂದ ಬಳಲುವಂತಾಗಬಾರದು ಎಂಬ ಎಚ್ಚರಿಕೆಯನ್ನು ಪ್ರತಿ ಹೆಜ್ಜೆಯಲ್ಲೂ ಪಾಲಿಸುತ್ತಲೇ ಬಂದಿರುವ ರಜನಿ ತಮ್ಮ ಹೆಸರಿಗೆ ವ್ಯತಿರಿಕ್ತವಾಗಿ ಎಷ್ಟೋ ಜನರ ಕತ್ತಲಿಗೆ ಬೆಳಕಾಗಿದ್ದಾರೆ. ಹಾಗೆಯೇ ಪತ್ತೇದಾರಿಕೆಯಲ್ಲಿ ಆಸಕ್ತಿ ಹೊಂದಿದ ಎಷ್ಟೋ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಸತ್ಯಶೋಧನೆಯ ಪ್ರತಿ ಹೆಜ್ಜೆಯಲ್ಲೂ ಅವರಿಗೆ ಜಯ ದೊರಕಲಿ ಎಂಬುದು ಅವರ ಅಭಿಮಾನಿಗಳೆಲ್ಲರ ಹಾರೈಕೆ.

   

Leave a Reply