ಹೊಟ್ಟೆ ಪಾಡಿಗಾಗಿ…

ಯುವ - 0 Comment
Issue Date : 23.04.2015

ಕೆಲ ದಿನಗಳ ಹಿಂದೆ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿ ಸುತ್ತಿದ್ದೆ. ಮಾರ್ಗ ಮಧ್ಯದ ನಿಲ್ದಾಣವೊಂದರಲ್ಲಿ ರೈಲು ನಿಂತುಕೊಂಡಾಗ ಭಿಕ್ಷೆ ಬೇಡುವ ಹೆಂಗಸೊಬ್ಬಳು ನಾವು ಕುಳಿತ ಬೋಗಿಯನ್ನೇರಿದಳು. ಆಕೆ ಬಗಲಿಗೆ ನೇತು ಹಾಕಿಕೊಂಡಿದ್ದ ಜೋಳಿಗೆಯೊಂದರಲ್ಲಿ ಸುಮಾರು ಒಂದು ವರ್ಷದ ಮಗು ಹಾಯಾಗಿ ಮಲಗಿ ನಿದ್ರಿಸುತ್ತಿತ್ತು. ಆಕೆ ಕೆಲವು ಕರುಣಾಭರಿತ ಹಳೆಯ ಕನ್ನಡ ಚಿತ್ರಗೀತೆಗಳನ್ನು ಹಾಡುತ್ತ ಎಲ್ಲರೆದುರು ನಿಂತು ಭಿಕ್ಷೆಯನ್ನು ಬೇಡುತ್ತಿದ್ದಳು. ಕೆಲವರು ಭಿಕ್ಷೆಯನ್ನು ನೀಡಿದರೆ ಇನ್ನು ಕೆಲವರು ಕಿಟಕಿಯಿಂದ ಆಚೆ ನೋಡುತ್ತ ಕುಳಿತರು. ನಂತರ ಆ ಹೆಂಗಸು ಮುಂದಿನ ಬೋಗಿಗೆ ಹೋದಳು. ನಾಲ್ಕು ಗಂಟೆಗಳ ಪ್ರಯಾಣವನ್ನು ಮುಗಿಸಿ ರೈಲಿನಿಂದ ನಾವು ಇಳಿದಾಗ ಆ ಭಿಕ್ಷೆ ಬೇಡುವ ಹೆಂಗಸು ಬೇರೊಂದು ಬೋಗಿಯಿಂದ ಇಳಿದಳು. ಆಕೆಯ ಜೋಳಿಗೆಯಲ್ಲಿನ ಮಗು ಆಗಲೂ ಕೂಡ ಗಾಢವಾಗಿ ನಿದ್ರಿಸುತ್ತಿತ್ತು. ನನ್ನನ್ನು ಕಾಡಿದ ಪ್ರಶ್ನೆಯೆಂದರೆ, ಅಷ್ಟೊಂದು ಜನಜಂಗುಳಿ, ಗಲಾಟೆಗಳ ಮಧ್ಯದಲ್ಲಿಯೂ  ಆ ಮಗು ಮಿಸುಕಾಡದೇ ಅಷ್ಟೊಂದು ಗಾಢವಾಗಿ ನಿದ್ರಿಸಲು ಹೇಗೆ ಸಾಧ್ಯ? ಅದೂ ಸುಮಾರು ನಾಲ್ಕು ಗಂಟೆಗಳಿಂದ. ಹಸುಳೆಗಳನ್ನು ಎತ್ತಿಕೊಂಡು ಭಿಕ್ಷೆ ಬೇಡುವ ಅನೇಕ ಹೆಂಗಸರನ್ನು ನಾವು ನೋಡುತ್ತೇವೆ. ಆದರೆ ಮಕ್ಕಳು ಸದಾ ಮಲಗಿಯೇ ಇರುವುದನ್ನು ಕಾಣುತ್ತೇವೆ. ಅಪರೂಪಕ್ಕೆ ಒಮ್ಮೆ ಎಂಬಂತೆ ಎಚ್ಚರಗೊಂಡಿರುವ ಮಕ್ಕಳು ನಮ್ಮ ಕಣ್ಣಿಗೆ ಬೀಳುತ್ತವೆ.
 ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣಗಳು, ರೇಲ್ವೆ ನಿಲ್ದಾಣ, ದೇವಸ್ಥಾನ, ಟ್ರ್ಯಾಫಿಕ್ ಸಿಗ್ನಲ್, ಮನೆಯ ಸುತ್ತಮುತ್ತ ಹೀಗೆ ಅನೇಕ ಸ್ಥಳಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳನ್ನು ಜೋಳಿಗೆಯಲ್ಲಿ ಹಾಕಿಕೊಂಡು ಹೆಂಗಸರು ಭಿಕ್ಷೆ ಬೇಡುತ್ತಿರುತ್ತಾರೆ. ಜಗದ ಗೊಡವೆ ಇಲ್ಲದೇ ಅವರ ಜೋಳಿಗೆಯಲ್ಲಿನ ಮಕ್ಕಳು ಸುಖವಾಗಿ ಮಲಗಿ ನಿದ್ರಿಸುತ್ತಿರುತ್ತವೆ. ಆ ಹಸುಳೆಗಳ ತಾಯಂದಿರು ಯಾವ ಕಿರಿಕಿರಿ ಇಲ್ಲದೇ ಭಿಕ್ಷಾಟನೆಯಲ್ಲಿ ತೊಡಗಿಕೊಂಡಿರುತ್ತಾರೆ. ಇತ್ತೀಚೆಗೆ ಈ ಕುರಿತಂತೆ ವಾಟ್ಸ್-ಆಪ್ ಒಂದರಲ್ಲಿ ಬಂದ ವೀಡಿಯೋ ಒಂದರಿಂದ ಈ ಬಗ್ಗೆ ಮಾಹಿತಿ ದೊರೆತಿತ್ತು. ಹೊಟ್ಟೆ ಹೊರೆಯಲು ಭಿಕ್ಷುಕರೂ ಕೂಡ ಹೈಟೆಕ್ ಉಪಾಯಗಳನ್ನು ಕಂಡುಕೊಂಡಿದ್ದಾರೆ ಎನ್ನಿಸಿತು. ಭಿಕ್ಷೆ ಬೇಡುವಾಗ ತಮ್ಮ ಕೈಯ್ಯಲ್ಲೊಂದು ಮಗುವಿದ್ದರೆ ಭಿಕ್ಷೆ ನೀಡುವವರ ಮನ ಕರಗುವುದಂತೂ ಖಂಡಿತ. ಆದರೆ ಸದಾ ಅಳುವ ಕಿರಿಕಿರಿ ಮಾಡುವ ಮಗುವೊಂದು ಕೈಯ್ಯಲ್ಲಿದ್ದರೆ ಮಗುವನ್ನು ಸುಧಾರಿಸುವುದರಲ್ಲಿಯೇ ಆಕೆಯ ವೇಳೆ ವ್ಯಯವಾಗುತ್ತದೆ. ಆದ್ದರಿಂದ ಮಗು ಕಿರಿಕಿರಿ ಮಾಡದೇ ಸದಾ ಮಲಗಿರಲು ಮಾರ್ಗವೊಂದನ್ನು ಇವರು ಕಂಡು ಹಿಡಿದಿರುತ್ತಾರೆ.  ಮಗುವಿಗೆ ಮದ್ಯವನ್ನು ಕುಡಿಸುವುದು,  ನಿದ್ರೆ ಬರಿಸುವ ಚುಚ್ಚುಮದ್ದುಗಳನ್ನು ಕೊಡುವುದು, ಔಷಧ ಅಂಗಡಿಗಳಲ್ಲಿ ಸಿಗುವ ಕೆಲವು ಮತ್ತು ಬರುವ ಔಷಧಿಗಳನ್ನು ಮಕ್ಕಳಿಗೆ ನೀಡುತ್ತಾರೆ.ಹಸಿವು, ನೀರಡಿಕೆ, ಪ್ರಕೃತಿ ಕರೆಗಳು, ಕಿರಿಕಿರಿ ಈ ಯಾವುದರ ಹಂಗೂ ಇಲ್ಲದೆ ಬೆಳಗಿನಿಂದ ಸಾಯಂಕಾಲದವರೆಗೂ ಈ ಮಕ್ಕಳು ಎಚ್ಚರಗೊಳ್ಳದೇ ಮಲಗಿಯೇ ಇರುತ್ತವೆ. ಅವರ ಭಿಕ್ಷಾಟನೆಯೂ ತೊಂದರೆಗಳಿಲ್ಲದೇ ನಡೆಯುತ್ತದೆ.
 ಭಿಕ್ಷಾಟನೆಗೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಹೊಸದೇನಲ್ಲ. ಕೆಲ ತಾಯಂದಿರು ತಮ್ಮ ಹಸುಳೆಗಳನ್ನು ಭಿಕ್ಷಾಟನೆ ಮಾಡುವ ಮಹಿಳೆಯರಿಗೆ ಬಾಡಿಗೆಗೂ ಕೊಡುವ ಉದಾಹರಣೆಗಳಿವೆ. ದೊಡ್ಡ ದೊಡ್ಡ ಶಹರಗಳಲ್ಲಿ ಇದು ಸರ್ವೇಸಾಮಾನ್ಯ. ದಿನಕ್ಕೆ ಇಂತಿಷ್ಟು ದುಡ್ಡಿನ ಆಧಾರದ ಮೇಲೆ ಹಸುಳೆಗಳನ್ನು ಬಾಡಿಗೆಗೆ ಪಡೆದು ಸಾಯಂಕಾಲಕ್ಕೆ ಮತ್ತೆ ಅವುಗಳ ತಾಯಂದಿರ ಸುಪರ್ದಿಗೆ ಒಪ್ಪಿಸುತ್ತಾರೆ. ಹಿಂದೆ ಹೊಟ್ಟೆಪಾಡಿಗಾಗಿ ಮಾತ್ರವಿದ್ದ ಭಿಕ್ಷಾಟನೆ ಈಗ ವೃತ್ತಿಯ ರೂಪ ಪಡೆದುಕೊಂಡಿದೆ. ಕನಿಕರದಿಂದಲೋ, ಕಳಚಿಕೊಂಡರೆ ಸಾಕು ಎಂಬ ಭಾವನೆಯಿಂದಲೋ ನಾಣ್ಯ ವೊಂದನ್ನು ಇಂಥವರ ಕೈಯ್ಯಲ್ಲಿಟ್ಟು ಬೇರೆಡೆ ದೃಷ್ಟಿ ಹರಿಸಿಬಿ ಡುತ್ತೇವೆ. ಎಲ್ಲೋ ಒಂದು ಕಡೆ ಭಿಕ್ಷಾಟನೆಗೆ ನಾವೇ ಪ್ರೋತ್ಸಾಹ ನೀಡುತ್ತಿದ್ದೇವೆಯೇ ಎನ್ನಿಸುತ್ತದೆ.
 ಶಾಲೆಗಳಿಂದ ಹೊರಗುಳಿದ ಚಿಕ್ಕ ಚಿಕ್ಕ ಮಕ್ಕಳು ಹದಿಹರೆಯದ ಹುಡುಗರು, ಕೈಕಾಲು ಗಟ್ಟಿಮುಟ್ಟಾಗಿರುವ ವಯಸ್ಕರು ಇಂಥವರಿಗೆ ಹಣವನ್ನು ನೀಡುವುದರಿಂದ ಅವರು ಸೋಮಾರಿಗಳಾಗುವಲ್ಲಿ ನಾವು ಪರೋಕ್ಷವಾಗಿ ಕಾರಣರಾಗುತ್ತೇವೆ. ಕೆಲವೊಮ್ಮೆ ಅವರಿಗಿರುವ ದುಶ್ಚಟ ಗಳಿಗೆ ನಾವು ಸಹಕರಿಸಿದಂತಾಗುತ್ತದೆ. ಭಿಕ್ಷಾಟನೆಯ ಸಮಸ್ಯೆನ್ನು ಕಡಿಮೆ ಮಾಡುವಲ್ಲಿ ನಮ್ಮ ಪಾತ್ರವೂ ಮುಖ್ಯವಾಗಿದೆ. ಭಿಕ್ಷೆ ನೀಡುವುದು ತಪ್ಪಲ್ಲ. ಆದರೆ ಅಪಾತ್ರರಿಗೆ ಭಿಕ್ಷೆ ನೀಡುವುದು ತಪ್ಪು. ಅಂಗವಿಹೀನರಿಗೆ, ದುಡಿಯಲು ಸಾಧ್ಯವಿಲ್ಲದ ವಯಸ್ಸಾದ ಜೀವಗಳಿಗೆ ಭಿಕ್ಷೆಯನ್ನು ನೀಡುವುದರಲ್ಲಿ ನ್ಯಾಯವಿದೆ. ಇವರಿಗೆ ಹಣ ನೀಡುವ ಬದಲು ಹತ್ತಿರದಲ್ಲಿ ಹೋಟೇಲ್, ತಿಂಡಿಯ ಅಂಗಡಿಗಳಿದ್ದರೆ ಅಲ್ಲಿಂದ ತಿಂಡಿಯನ್ನು ಖರೀದಿಸಿ ಕೊಟ್ಟರೆ ಬೇಡುವವನಿಗೂ, ನೀಡುವವನಿಗೂ ಸಂತೃಪ್ತ ಮನೋಭಾವ ಮೂಡುವುದು. ಅನ್ನದಾನ ಶ್ರೇಷ್ಠದಾನ ಎಂಬ ಮಾತಿನಂತೆ ಕೊಟ್ಟದ್ದು ಅರ್ಥಪೂರ್ಣವಾಗುತ್ತದೆ.

   

Leave a Reply