ಹೊಣೆಗಾರಿಕೆ ನೆನಪಿಸಿದ ಕೇರಳ ರಾಲಿ

ಲೇಖಕರು - 0 Comment
Issue Date :

-ತನ್ಮಯಿ

ತಿರುವನಂತಪುರದ ರೈಲು ನಿಲ್ದಾಣ.  ಆಗಷ್ಟೇ ರೈಲು ಗಡಿಯಾರದಲ್ಲಿ ಮಧ್ಯ ರಾತ್ರಿ ಮೂರುಗಂಟೆ ಹೊಡೆದಿತ್ತು.   ಕೇರಳದ ಪೋಲಿಸ್ ವ್ಯವಸ್ಥೆ ‌ರಾಲಿಗೆ ಸುರಕ್ಷತೆ ಒದಗಿಸಲು ಸಾಧ್ಯವಿಲ್ಲ ಎಂದಿದ್ದ ಸುದ್ದಿ ತಿಳಿದು ಕಳವಳ ಶುರುವಾಗಿತ್ತು.   ನಮ್ಮೆಲ್ಲರ ಮನದಲ್ಲಿ ಅದೇನೋ ಅವ್ಯಕ್ತ ಭಯ ಆವರಿಸಿಕೊಂಡಿತ್ತು.  ಆದರೆ, ಪ್ಲಾಟ್‌ಫಾರಂನಲ್ಲಿ ಇಳಿಯುತ್ತಿದ್ದ ಹಾಗೆ ನಮಗೆಲ್ಲಾ ಹೊಸದೊಂದು ಲೋಕಕ್ಕೆ ಕಾಲಿಟ್ಟ ಅನುಭವ.  ಸ್ವಯಂಸೇವಕರ ತಂಡ ಬರಮಾಡಿಕೊಂಡಿತು.  ಕೆಲವರು ಸಂಘದ ಗಣವೇಷದಲ್ಲಿದ್ದರೆ ಕೆಲವರು ಪಂಚೆಗಳಲ್ಲಿ.  ಅಂತಹ ಸರಿಹೊತ್ತಿನಲ್ಲೂ ಬೇಸರಿಸದೆ ಸ್ವಾಗತಿಸಿದರು.  ನಿದ್ದೆಗಣ್ಣಲ್ಲೇ ಇದ್ದ ನಮಗೆ ಏನಾಗುತ್ತಿದೆ ಎಂಬ ಅರಿವಾಗುವಷ್ಟರಲ್ಲಿ ಹಿಂದೆ ಮುಂದೆ ಅಕ್ಕ ಪಕ್ಕ ಸ್ವಯಂಸೇವಕರು ಸುತ್ತುವರೆದರು.  ಅಲ್ಲಿನ ವ್ಯವಸ್ಥೆ, ಸುರಕ್ಷತೆ ಪರಿಸ್ಥಿತಿಯ ವಿವರಣೆ ನೀಡಿದರು. ಎಲ್ಲಿ ಇಡಿ ಇಡಿ ಸರಕಾರ ಹೊಂಚು ಹಾಕಿ ದಮನಿಸಲು ನಿಂತಿತ್ತೋ, ಎಲ್ಲಿ ಪೋಲಿಸ್ ಇಲಾಖೆ ಕೈಚೆಲ್ಲಿ ಕುಳಿತಿತ್ತೋ, ಎಲ್ಲಿ ಸ್ವತಃ ಅವರ ಪ್ರಾಣಗಳೇ ಪಣವಾಗಿ ನಿಂತಿದ್ದವೋ ಅಲ್ಲಿ ಅವರು ನಮಗಾಗಿ ಸುರಕ್ಷತೆ ಒದಗಿಸಿದ್ದರು.  ಆ ಕ್ಷಣಕ್ಕೆ ಮೈ ಕಂಪಿಸಿ ಒಮ್ಮೆ ರೋಮಾಂಚನವಾಗಿಬಿಟ್ಟಿತು.  ಹೆಜ್ಜೆ ಹೆಜ್ಜೆಗೆ ಬೆನ್ನ ಹಿಂದೆ ಭಗವಾಧ್ವಜ ಹಿಡಿದ ದಂಡಧಾರಿ ಸ್ವಯಂಸೇವಕರು ಸೈನಿಕರಂತೆ ಭಾಸವಾದರು.  ಅದ್ಯಾಕೋ ಸಂಘದ ಅನುಪಮ ಆದರ್ಶದ ನುಡಿಯೊಂದಕೆ ದೊರಕಿದೆ ಇಲ್ಲಿ ಉದಾಹರಣೆ, ಕ್ರಿಯಾ ಸಿದ್ಧಿಃ ಸತ್ವೇಭವತಿ ಮಹತಾಮ್‌ನೋಪಕರಣೆ ಹಾಡನ್ನು ತಂತಾನೆ ಮನಸ್ಸು ಗುನುಗಿಕೊಳ್ಳತೊಡಗಿತ್ತು.

ಇಡೀ ಭಾರತವನ್ನು ತೆಗೆದುಕೊಂಡಾಗ ಕೇರಳದ ತೂಕ ಒಂದು ಕೈ ಹೆಚ್ಚೇ.  ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ, ಆಚಾರಗಳು, ಆಹಾರ ಪದ್ಧತಿಗಳು, ಉಡುಗೆ ತೊಡುಗೆಗಳು ಕೇರಳದ ಮೆರುಗನ್ನು ಹೆಚ್ಚಿಸಿವೆ.  ನಾವು ರಾಲಿ ಹೋದ ಹದಿನೈದು ಕಿ.ಮೀ.ಗಳಲ್ಲಿ ಐವತ್ತಕ್ಕೂ ಹೆಚ್ಚು ಪುಸ್ತಕದಂಗಡಿಗಳಿದ್ದವು.  ನಮ್ಮ ಬೆಂಗಳೂರಿನ ಇಡೀ ನಗರ ಜಾಲಾಡಿದರೂ ಹತ್ತಕ್ಕಿಂತ ಹೆಚ್ಚು ಸಿಕ್ಕಲಾರವು. ಆದರೆ ದೇವರನಾಡಿನಲ್ಲಿ ಮಾನವೀಯತೆ ಸುಟ್ಟು ಬೂದಿಯಾಗಿದೆ.  ಅಭಿವ್ಯಕ್ತಿ ಸ್ವಾತಂತ್ಯದ ಬಗ್ಗೆ ಮಾತನಾಡುವ ಕಮ್ಯುನಿಸ್ಟರ ಸುಳ್ಳಿನ ಬಡಾಯಿ ಕೊನೆಹಂತ ತಲುಪಿದೆ.  ವಿದ್ಯಾರ್ಥಿ ಸಮುದಾಯ ಕೇರಳ ಚಲೋಗಾಗಿ ತಿರುವನಂತಪುರಕ್ಕೆ ಬಂದಿಳಿದಿದೆ.

 ವಿದ್ಯಾರ್ಥಿ ಪರಿಷತ್ತಿನ ಕೇರಳ ಚಲೋ ಕೇವಲ ಹತ್ತರಲ್ಲಿ ಹನ್ನೊಂದು ರ‌್ಯಾಲಿಯಾಗಿರಲಿಲ್ಲ.  ಮತ್ತು ರ‌್ಯಾಲಿ ಮಾತ್ರವೇ ಅದರ ಉದ್ದೇಶವೂ ಆಗಿರಲಿಲ್ಲ.  ದೇಶದುದ್ದಕ್ಕೂ ತಿಂಗಳಾನುಗಟ್ಟಲೆಯಿಂದ ತಯಾರಿ ಶುರುವಾಗಿತ್ತು.  ಸಣ್ಣ ಸಣ್ಣ ಹಾಸ್ಟೆಲ್ಲುಗಳಿಂದ ಹಿಡಿದು ಜೆಎನ್ಯೂನಂಥ ಕ್ಯಾಂಪಸ್ಸಿನ ತನಕ ಜಾಗೃತಿ ಕಾರ್ಯಕ್ರಮಗಳು ಜರುಗಿದ್ದವು.  ಮತ್ತು ಕೇರಳದ ಕಾರ್ಯಕರ್ತರು ಹಗಲಿರುಳು ಶ್ರಮವಹಿಸಿದ್ದರು.  ವಿದ್ಯಾರ್ಥಿ ಪರಿಷತ್ತಿನ ಬೆನ್ನಿಗೆ ಕೇರಳದ ಇಡೀ ಸಂಘ ಪರಿವಾರ ನಿಂತಿತ್ತು.  ಅವರ ಆ ಸಮಗ್ರತೆಯ ಪರಿಯೇ ಅನನ್ಯ.

 ನಿಜಕ್ಕೂ ಅಲ್ಲಿನ ಸಂಘ ಪರಿವಾರದ ಬದ್ಧತೆ ನನ್ನನ್ನ ಪದಗಳಿಗೆ ಬಡವಳನ್ನಾಗಿಸಿದೆ.  60000 ಜನರ ವಸತಿ, ಭೋಜನ, ಸುರಕ್ಷತೆ ಕಡಿಮೆಯ ಮಾತಲ್ಲ.

 ಸಾವಿರಾರು ಕಾರ್ಯಕರ್ತರಿಗೆ ಅಚ್ಚುಕಟ್ಟಾದ ವಸತಿ, ಊಟ – ತಿಂಡಿ, ನೀರಿನ ವ್ಯವಸ್ಥೆ ಮಾಡಿದ್ದರೂ ಸ್ವಲ್ಪವೂ ಗೊಂದಲಗಳಿರಲಿಲ್ಲ. ವಸತಿಯಿಂದ ರಾಲಿಯ ಆರಂಭವಾಗುವಲ್ಲಿನ ಜಾಗಕ್ಕೆ ಹೋಗುವಾಗ ಪ್ರತಿ ಐನೂರು ಮೀಟರಿಗೆ ಇಬ್ಬರು ಸ್ವಯಂಸೇವಕರು ಗಾಡಿ ಸಂಖ್ಯೆ ಮತ್ತು ಗಾಡಿಗೆ ಕೊಟ್ಟಿದ್ದ ಕೋಡ್ ನಂಬರ್, ಅವರ ಜೊತೆಗಿದ್ದ ಕಾರ್ಯಕರ್ತರ ಹೆಸರನ್ನು ನಮೂದಿಸಿಕೊಳ್ತಿದ್ದರು.  ಇಡೀ ರ‌್ಯಾಲಿಯಲ್ಲಿದ್ದ 60000 ಜನರಲ್ಲಿ ಒಬ್ಬರೂ ರ‌್ಯಾಲಿಯನ್ನು ಬಿಟ್ಟು ಹತ್ತಡಿ ದೂರವೂ ಹೋಗಲು ಸಾಧ್ಯವಿರಲಿಲ್ಲ.

ಭದ್ರತೆಯ ಬಗೆಗೆ ಅದೆಷ್ಟು ಜವಾಬ್ದಾರಿಯಿತ್ತೆನ್ನುವುದನ್ನು ಅವರ ಸಣ್ಣ ಸಣ್ಣ ನಡೆಯೂ ಎತ್ತಿಹಿಡಿಯುತ್ತಿತ್ತು.

 ಅಲ್ಲಿನ ಒಂದಷ್ಟು ಮಂದಿ ಸ್ವಯಂಸೇವಕರೊಟ್ಟಿಗೆ ಮಾತಾಡುವಾಗ ನಿಜಕ್ಕೂ ಎದೆಯುಬ್ಬಿ ಬಂದಿತ್ತು. ಸಾಯೋದು ಯಾವಾಗಲೂ ಇರತ್ತಮ್ಮ ಹೀಗೆ ಸಾಯೋದು ಹೆಮ್ಮೆ, ಬದುಕಿಗೊಂದು ಸಾರ್ಥಕತೆ.  ಯಾರಿಗೂ ಹೆದರದೆ ನಿಂತಿದ್ದೇವೆ ನಿಲ್ಲುತ್ತೇವೆ ಕೂಡ.  ಆದರೆ ಕೊನೆ ಉಸಿರಿನವರೆಗೂ ಸ್ವಯಂಸೇವಕನಾಗಿ, ನಾನು ಗಣವೇಷದಲ್ಲೇ ಸಾಯಬೇಕು.  ಅವರ ಮಾತುಗಳು ಮುಗಿಯುವ ಹೊತ್ತಿಗೆ ನನ್ನ ಕಣ್ಣಾಲಿಗಳು ಧನ್ಯತೆಯಲ್ಲಿ ತುಂಬಿದ್ದವು.

 ಇಡೀ ತಿರುವನಂತಪುರ ಅವತ್ತು ಭಾರತ ಮಾತೆಯ ಜಯಕಾರಗಳಿಂದ ತುಂಬಿತ್ತು.  ರಸ್ತೆಗಳು ಭಗವೆಯಲ್ಲಿ ಮುಳುಗೆದ್ದಿದ್ದವು.  ಸಾರ್ವಜನಿಕರಲ್ಲೂ ಒಂದಷ್ಟು ಹೊಸ ಭಾವ ಕಂಡಿತ್ತು.  ಸುಮಾರು ಹದಿನೈದು ಕಿ.ಮೀ ರಾಲಿ.  ದೇಶದುದ್ದಗಲದಿಂದ ಬಂದಿದ್ದ ಸಾವಿರಾರು ಯುವ ಜನರ ಪಡೆ.  ತಿರುವನಂತಪುರದ ಬೀದಿಗಳು ಅವತ್ತು ಹೊಸ ಪೀಳಿಗೆಯ ಭಾರತ ಎತ್ತಸಾಗುತ್ತಿದೆ ಎಂಬುದನ್ನ ಕಣ್ತುಂಬಿಕೊಂಡಿತ್ತು.  ವೇದಿಕೆಯಲ್ಲಿದ್ದ ವಿದ್ಯಾರ್ಥಿ ಪರಿಷತ್ತಿನ ಯುವ ಮುಖಂಡರು ಮತ್ತು ವಿವಿಧ ವಿಶ್ವವಿದ್ಯಾಲಯದ ಪ್ರತಿನಿಧಿಗಳ ಮಾತುಗಳು ಉತ್ಸಾಹವನ್ನೇ ಪ್ರವಹಿಸುತ್ತಿತ್ತು.  ರಾಷ್ಟೀಯ ಪ್ರಧಾನಕಾರ್ಯದರ್ಶಿ ವಿನಯ್ ಬಿದರೆಯವರ ವಾಗ್ಝರಿ ಹೊಸದೊಂದು ಚೈತನ್ಯ ತುಂಬಿತ್ತು.

 ವೇದಿಕೆಯಲ್ಲಿ ಕಮ್ಯುನಿಸ್ಟ್ ಹಿಂಸೆಯಿಂದ ಎರಡೂ ಕಾಲು ಕಳೆದುಕೊಂಡಿರುವ ಸದಾನಂದ್ ಮಾಸ್ಟರ್ ಮಾತನಾಡುತ್ತಾ ನಾನು ಕಮ್ಯುನಿಷ್ಟ್ ಕ್ರೌರ್ಯಕ್ಕೆ ಬಲಿಯಾದ ಸಂತ್ರಸ್ತನಲ್ಲ, ನಾನೊಬ್ಬ ಕಮ್ಯುನಿಷ್ಟರ ವಿರುದ್ದ ಹೋರಾಡುವ ಯೋಧ ಎನ್ನುವಾಗ ಇಡೀ ಸಭೆಯಲ್ಲೊಂದು ಮಿಂಚು ಸಂಚಾರವಾಗಿತ್ತು.

 ಸನೂಪ್‌ಜೀ ಎಂಬ ಕಾರ್ಯಕರ್ತರೊಬ್ಬರು ನಾನು ಇಲ್ಲಿ ನಿಂತು ಮಾತಾಡುವುದಿಲ್ಲ, ನಿಮಗೆಲ್ಲ ಏನೋ ತೋರಿಸಲು ಬಂದಿದ್ದೇನೆ’ ಎಂದವರೇ ತಮ್ಮ ಎಡಗಣ್ಣಿನಲ್ಲಿದ್ದ ಕೃತಕ ಕಣ್ಣು ತೆಗೆದು ತೋರಿಸಿದರು.  ಕಮ್ಯುನಿಷ್ಟರು ನನ್ನ ಕಣ್ಣನ್ನು ಕೀಳಬಹುದು,ಆದರೆ ದೇಶದ ಮೇಲೆ ನನಗಿರುವ ಪ್ರೀತಿಯನ್ನಲ್ಲ ಎಂದಾಗ ಇಡೀ ಸಭೆ ಮೂಕ ವಿಸ್ಮಿತವಾಗಿತ್ತು.

 ಕಮ್ಯುನಿಸ್ಟರ ಹಿಂಸಾಚಾರದ ಪಾಪದ ಮೂಟೆ ಪದರಪದರವಾಗಿ ಬಿಚ್ಚಿಕೊಂಡಿತ್ತು.  ಹುತಾತ್ಮರಾದವರ ಕುಟುಂಬದ ಸದಸ್ಯರಿಗೆ ಗೌರವ ಸೂಚಿಸಲಾಯಿತು.

 ನನ್ನೊಟ್ಟಿಗಿದ್ದ ಹೊಸ ಕಾರ್ಯಕರ್ತನೊಬ್ಬ ಕೇಳಿದ ಅಕ್ಕ, ಇಷ್ಟು ದೇಶಭಕ್ತಿಯಿರುವ ಇವರನ್ನು ಹಿಂಸಿಸುವಷ್ಟು ಕೊಲ್ಲುವಷ್ಟು ದ್ವೇಷವೇಕೆ? ದೇಶವನ್ನು ಪ್ರೀತಿಸೋದೇ ಇವರ ಅಪರಾಧವೇನು? ಉತ್ತರ ನನ್ನಲ್ಲೂ ಇರಲಿಲ್ಲ.

 ಇನ್ನೊಬ್ಬ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರೊಬ್ಬರೊಟ್ಟಿಗೆ ಮಾತನಾಡುವಾಗ ಆತ ಇಷ್ಟೆಲ್ಲ ದೊಡ್ಡ ರ‌್ಯಾಲಿಗಳಾಗಿ ಕಮ್ಯುನಿಸ್ಟರ ಕ್ರೌರ್ಯ ನಿಲ್ಲುವುದಿಲ್ಲ ಅನ್ನೋದು ಗೊತ್ತಿದ್ರೂ ಇಂಥ ರ‌್ಯಾಲಿಗಳೇಕೆ’  ಅಂದಾಗ, ರ‌್ಯಾಲಿ ನಮ್ಮಲ್ಲಿ ಸಾವಿರ ಪಟ್ಟು ಶಕ್ತಿ ತುಂಬುತ್ತದೆ.  ಅಷ್ಟೇ ಅಲ್ಲ, ಇಡೀ ದೇಶದಲ್ಲಿನ ಜನ ನಮ್ಮ ಬೆನ್ನಿಗೆ ನಿಂತ ಭಾವ ಮತ್ತು ಕಮ್ಯುನಿಷ್ಟರೆದುರು ನಮ್ಮ ಶಕ್ತಿ ಪ್ರರ್ದಶನ, ಸಾರ್ವಜನಿಕರೆದುರು ನಮ್ಮ ಬಲಾಬಲಗಳು ಜಾಗೃತಿ ಅನಾವರಣಗೊಳ್ಳುತ್ತವೆ’.

ರಾಲಿ ಮುಗಿಸಿ ವಾಪಸ್ಸು ಹೊರಡುವಾಗ ಎರ‌್ನಾಕುಲಮ್‌ನಲ್ಲಿ ನಮ್ಮ ಕನೆಕ್ಟಿಂಗ್ ಟ್ರೇನು ಮಿಸ್ಸಾಗಿತ್ತು.  ಇನ್ನು ಪ್ಲಾಟ್ ಫಾರಂನಲ್ಲಿ ರಾತ್ರಿ ಕಳೆಯಬೇಕಾಗಿತ್ತು.

ಟಿ.ಸಿ.ಯ ಮೂಲಕ ವಿಷಯ ಗೊತ್ತಾಗಿ ಸ್ವಯಂಸೇವಕರೊಬ್ಬರು ಬಂದವರೇ ಏನು ಎತ್ತ ವಿಚಾರಿಸಿ  ಅರ್ಧಗಂಟೆಯೊಳಗೆ ಸುಮಾರು ಮುನ್ನೂರಷ್ಟಿದ್ದ ನಮಗೆ ಊಟ ವಸತಿ ವ್ಯವಸ್ಥೆ ಮಾಡಿದರು.   ಅದೇನು ಪವಾಡವೋ ನಿಜವೋ ಅನ್ನುವ ಪರಿಸ್ಥಿತಿ ನಮ್ಮದು.

 ನಾವೆಲ್ಲಾ ಇನ್ನೂ ಮನೆ ತಲುಪಿರಲಿಲ್ಲ, ಆಗಲೇ ತ್ರಿಶೂರಿನಲ್ಲಿ ಸ್ವಯಂಸೇವಕರೊಬ್ಬರ ಕೊಲೆಯಾದ ವಾರ್ತೆ ಕಿವಿಗಪ್ಪಳಿಸಿತ್ತು.

ಕಮ್ಯುನಿಸ್ಟರ ಕ್ರೌರ್ಯಕ್ಕೆ ಇನ್ನೆಷ್ಟು ಬಲಿ ಬೇಕೋ?

ಕೇರಳದಿಂದ ಕಲಿಯಬೇಕಾದ ವಿಷಯಗಳು ಮೂಟೆಯಷ್ಟಿವೆ.  ಸಂಘಟನಾತ್ಮಕವಾಗಿ ಅವರ ಶಕ್ತಿ, ಅವರ ವ್ಯವಸ್ಥೆ, ಶಿಸ್ತು, ಬದ್ಧತೆ ಮತ್ತು ಅವುಗಳಿಗೆಲ್ಲ ಮಿಗಿಲಾಗಿ ತಮ್ಮ ಜೀವವನ್ನೂ ಅಪಾಯದಲ್ಲಿರಿಸಿ ಲೋಕಕ್ಕೆ

ನೆಮ್ಮದಿ ಬಯಸುವ ಅವರ ತ್ಯಾಗ ಗುಣ ನಮಗೆಲ್ಲ ಹೊಸ ಹುರುಪು ನೀಡಿದೆ ಮತ್ತು ರಾಷ್ಟ್ರದೆಡೆಗಿನ, ವೈಚಾರಿಕತೆಯಡೆಗಿನ ನಮ್ಮ ಬದ್ಧತೆಯನ್ನ ಹೊಸ ಮಜಲಿಗೆ ತಂದು ನಿಲ್ಲಿಸಿದೆ.

 ತನ್ ಸಮರ್ಪಿತ ಮನ್ ಸಮರ್ಪಿತ, ಔರ್ ಯಹೆ ಜೀವನ್ ಸಮರ್ಪಿತ. . .  ಎಂಬ ಸಾಲುಗಳನ್ನ ಅಕ್ಷರಶಃ ಬದುಕಿ ತೋರಿಸುತ್ತಿರುವ ರಾಷ್ಟ್ರಸೇವಕರಿಗೆ ಕೋಟಿ ವಂದನೆಗಳನ್ನು ಅರ್ಪಿಸಿ, ಅವರ ಸ್ಪೂರ್ತಿ ಸಾಹಸ ಧ್ಯೇಯನಿಷ್ಠೆಗಳನ್ನ ಧರಿಸಿ ಬಂದಿದ್ದೇವೆ.

 ದೇವರನಾಡು, ದೇವರನಾಡೇ ಆಗಿರಲೆಂಬ ಪ್ರಾರ್ಥನೆ ಮಾಡುವುದರೊಂದಿಗೆ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ನೆರವೇರಿಸುವ ಹೊಣೆಗಾರಿಕೆ ಪುನಃ ನೆನಪಾಗುತ್ತಿದೆ.

 

 

   

Leave a Reply