ಹೋರಾಟದ ಕಿಚ್ಚು ಹಚ್ಚಿದ ನಾಣಯ್ಯ

ಸ್ಮರಣೆ - 0 Comment
Issue Date : 30.4.2016

ಮಡಿಕೇರಿ: ಕೊಡಗಿನ ಜನತೆಯಲ್ಲಿ ದೇಶಭಕ್ತಿ ಹಾಗೂ ಹೋರಾಟದ ಕಿಚ್ಚು ಹಚ್ಚಿದ ಕೊಕ್ಕಂಡ ಡಿ.ನಾಣಯ್ಯ ಅವರು ಏ.16ರಂದು ವಿಧಿವಶರಾಗಿದ್ದಾರೆ.
ಮೂಲತಃ ದೇಶಭಕ್ತಿ, ಹೋರಾಟದ ಮನೋಭಾವದ ಕೊಡವ ಕುಟುಂಬದಲ್ಲಿ ಜನಿಸಿದ್ದ ನಾಣಯ್ಯ ಅವರು 60ರ ದಶಕದಲ್ಲಿ ಕೊಡಗಿನಲ್ಲಿದ್ದ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಸಮಾಜವಾದಿ ಹಾಗೂ ಸ್ವತಂತ್ರ ಪಕ್ಷಗಳ ಕಾರ್ಯವೈಖರಿಯಿಂದ ಬೇಸತ್ತಿದ್ದರು. ಇದೇ ಸಂದರ್ಭ ರಾಷ್ಟ್ರಮಟ್ಟದಲ್ಲಿ ಜನಸಂಘವನ್ನು ಮುನ್ನಡೆಸುತ್ತಿದ್ದ ದೀನದಯಾಳ್ ಉಪಾಧ್ಯಾಯರು ಕೇರಳದ ಕ್ಯಾಲಿಕಟ್‌ನಲ್ಲಿ ರಾಷ್ಟ್ರೀಯ ಅಧಿವೇಶನವನ್ನು ಆಯೋಜಿಸಿದ್ದರು. ಈ ಅಧಿವೇಶನಕ್ಕೆ ಕೊಡಗಿನಿಂದ ನಾಣಯ್ಯ ಅವರು ತಮ್ಮ ಕೆಲವು ಸ್ನೇಹಿತರನ್ನು ಕರೆದುಕೊಂಡು ತೆರಳಿದ್ದರು. ಮೂರು ದಿನಗಳ ಅಧಿವೇಶನದಿಂದ ಪ್ರೇರಣೆ ಪಡೆದ ನಾಣಯ್ಯ ಅವರು ಕೊನೆಯ ದಿನ ನೇರವಾಗಿ ಪಂಡಿತ ದೀನ ದಯಾಳರನ್ನು ಭೇಟಿಯಾಗಿ ಜನಸಂಘ, ನೀವು, ನಿಮ್ಮ ಕಾರ್ಯಕರ್ತರಿಗೆ ಇಂತಹ ದೇಶಭಕ್ತಿ, ಸಂಘಟನಾ ಚತುರತೆ ಹೇಗೆ ಸಾಧ್ಯವೆಂದು ವಿಚಾರಿಸಿದರು. ಆಗ ಪಂಡಿತರು ನಮಗೆ ಸಂಘ ತರಬೇತಿ ನೀಡಿದೆ. ನಾವು ಸಂಘದ ಸ್ವಯಂಸೇವಕರು ಎಂದಿದ್ದರು. ಬಳಿಕ ಅಧಿವೇಶನದಿಂದ ವಾಪಾಸಾದ ನಾಣಯ್ಯ ಅವರು ತಾವಾಗಿಯೇ ಕೊಡಗಿನ ಸಂಘದ ಸಂಪರ್ಕವನ್ನು ಸಾಧಿಸಿ ಸಂಘದ ಶಿಕ್ಷಣವನ್ನು ಪಡೆದರು. ಆರಂಭದಲ್ಲಿ ಸಂಘದ ಪ್ರಾಥಮಿಕ ಶಿಕ್ಷಾವರ್ಗ ಬಳಿಕ ಸಂಘ ಶಿಕ್ಷಾವರ್ಗದಲ್ಲಿ ತರಬೇತಿಯನ್ನು ಪಡೆದರು. ನಾಣಯ್ಯ ಅವರು ಸಂಘದ ಶಿಕ್ಷಣವನ್ನು ಪಡೆದ ಬಳಿಕ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ, ಪ್ರತಿ ಮನೆಮನೆಯಲ್ಲಿ ಸಂಘದ ಸ್ವಯಂಸೇವಕರನ್ನು ಸಂಘಟಿಸುವಲ್ಲಿ, ಸಕ್ರಿಯ ಪಾತ್ರವಹಿಸಿದ್ದರು. ದಕ್ಷಿಣ ಕೊಡಗಿನಲ್ಲಿ ಪ್ರಭಾವಶಾಲಿಯಾಗಿದ್ದ ನಾಣಯ್ಯ ಅವರ ಮಾತನ್ನು ಪ್ರತಿಯೊಬ್ಬರು ಚಾಚು ತಪ್ಪದೆ ಪಾಲಿಸುತ್ತಿದ್ದರು. ಅನೇಕ ಪ್ರಭಾವಶಾಲಿ ಕಾರ್ಯಕರ್ತರು ಹಾಗೂ ನಾಯಕರನ್ನು ರೂಪಿಸಿದ್ದರು. ಅವರಲ್ಲಿ ಪ್ರಮುಖರಾದವರು ಎ.ಕೆ. ಸುಬ್ಬಯ್ಯ, ಇವರನ್ನು ಸಂಘದ ಸಂಪರ್ಕಕ್ಕೆ ತಂದು ಒಬ್ಬ ಪ್ರಭಾವಶಾಲಿ ನಾಯಕನನ್ನಾಗಿ ರೂಪಿಸಿದ್ದರು. ರಾಜ್ಯ ವಿರೋಧ ಪಕ್ಷದ ನಾಯಕರೂ ಆಗಿದ್ದ ಅವರ ಹಿಂದಿನ ರೂವಾರಿ ಕೊಕ್ಕಂಡ ಡಿ. ನಾಣಯ್ಯ ಆಗಿದ್ದರು.
ತುರ್ತು ಪರಿಸ್ಥಿತಿಯಲ್ಲಿ ಭೂಗತ ಚಟುವಟಿಕೆ
ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಬಳಿಕ ದೇಶದಲ್ಲಿ ಜಯಪ್ರಕಾಶ್ ನಾರಾಯಣ ಅವರ ನೇತೃತ್ವದಲ್ಲಿ ಹೋರಾಟ ನಡೆಯಿತು. ಕೊಡಗಿನಲ್ಲಿ ನಾಣಯ್ಯ ಅವರು ಭೂಗತರಾಗಿ, ಸಕ್ರಿಯರಾಗಿ ಕೆಲಸ ಮಾಡಿದ್ದರು. ಅನೇಕ ಸತ್ಯಾಗ್ರಹ ಹೋರಾಟಗಳನ್ನು ರೂಪಿಸಿದ್ದರು. ಇಡೀ ದೇಶದಲ್ಲಿ ನಾಗಪುರ ಬಳಿಕ ಒಂದು ತಾಲೂಕಿನಲ್ಲಿ ಅತೀ ಹೆಚ್ಚು ಸತ್ಯಾಗ್ರಹಿಗಳು ಜೈಲಿಗೆ ಹೋಗಿದ್ದರು ಎಂದರೆ ಅದು ದಕ್ಷಿಣ ಕೊಡಗಿನ ವೀರಾಜಪೇಟೆ ತಾಲೂಕು ಎಂಬ ಹೆಗ್ಗಳಿಕೆ ಇದೆ. ಸುಮಾರು 300ಕ್ಕಿಂತಲೂ ಅಧಿಕ ಮಂದಿ ಸತ್ಯಾಗ್ರಹಿಗಳು ಜೈಲಿಗೆ ಹೋಗಿದ್ದರು. ಆದರೆ ನಾಣಯ್ಯ ಅವರು ಭೂಗತರಾಗಿಯೇ ಇದನ್ನೆಲ್ಲ ರೂಪಿಸಿದ್ದರು ಎಂಬ ಹೆಮ್ಮೆ ಈಗಲೂ ಇರುವ ಆಗಿನ ಸತ್ಯಾಗ್ರಹಿಗಳ ತಂಡ ಹೆಮ್ಮೆಪಡುತ್ತದೆ. ಕೊನೆಗೂ ನಾಣಯ್ಯ ಅವರನ್ನು ಮೀಸಾ ಕಾನೂನಿನಡಿ ಬಂಧಿಸಲಾಯಿತು. ತುರ್ತು ಪರಿಸ್ಥಿತಿ ತೆರವಾದ ಬಳಿಕ ಬಿಡುಗಡೆಯಾದರು.
ಕಿಚ್ಚು ಹಚ್ಚಿದ ನಾಣಯ್ಯ
ದಕ್ಷಿಣ ಕೊಡಗಿನ ಸಿದ್ದಾಪುರ, ಪಾಲಿಬೆಟ್ಟ, ಕುಟ್ಟ ಅಧಿಕ ಮುಸ್ಲಿಂ ಬಹುಳ್ಯವಿರುವ ಪ್ರದೇಶವಾಗಿತ್ತು. ಹಿಂದುಗಳು ದಾರಿಯಲ್ಲಿ ನಡೆಯುವುದು ಅಸಾಧ್ಯವಾಗಿತ್ತು. ಬೈಕ್‌ನಲ್ಲಿ ತೆರಳುವಾಗಲೂ ಅಡ್ಡಗಟ್ಟಿ ಹಲ್ಲೆ ಮಾಡುತ್ತಿದ್ದರು. ಮುಸಲ್ಮಾನರ ಹೊಡೆತವನ್ನು ನಾಣಯ್ಯ ಅವರ ನೇತೃತ್ವದಲ್ಲಿ ಸಮರ್ಥವಾಗಿ ಮತ್ತು ಸಂಘಟಿತವಾಗಿ ಎದುರಿಸಲಾಯಿತು. ಏಟಿಗೆ ಎದಿರೇಟು ನೀಡಲಾಯಿತು. ಬಳಿಕ ಮುಸಲ್ಮಾನರ ಉಪಟಳ ಕಡಿಮೆಯಾಯಿತು ಎಂದು ಹಿರಿಯರು ನೆನಪು ಮಾಡಿಕೊಳ್ಳತ್ತಾರೆ.
ಇತ್ತೀಚೆಗೆ ಕಾಡಿದ ಅನಾರೋಗ್ಯದಿಂದಾಗಿ ಬೆಂಗಳೂರಿನ ಬಸವನಗುಡಿ ರಂಗದೊರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ತಾ. 16 ರಂದು ಇಹಲೋಕ ತ್ಯಜಿಸಿದ್ದಾರೆ. ನಾಣಯ್ಯ ಅವರು ಪತ್ನಿ ಗಂಗಮ್ಮ, ಪುತ್ರರಾದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಪ್ರಧಾನ್ ಬೋಪಣ್ಣ, ಕೃಷಿಕರಾಗಿರುವ ಪೃಥ್ವಿ ಹಾಗೂ ಅಪಾರ ಸ್ವಯಂಸೇವಕರನ್ನು ಅಗಲಿದ್ದಾರೆ.

   

Leave a Reply