ಅಪ್ಪಾಸಾಹೇಬ ಜಿಗಜಿನ್ನಿ

ಅಪ್ಪಾಸಾಹೇಬ-ಜಿಗಜಿನ್ನಿ-ಲೇಖನಗಳು - 0 Comment
Issue Date : 24.10.2014

ಮಹಾಪ್ರಸ್ಥಾನ

ಪರಮ ಪೂಜನೀಯ ಶ್ರೀ ಗುರೂಜಿಯವರ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಬೆಂಗಳೂರಿನಿಂದ ವಾಪಸು ಬಂದಾಗ ಅಪ್ಪತುಂಬಾ ಖುಷಿಯಾಗಿದ್ದರು. ಆರೋಗ್ಯವು ಅತ್ಯುತ್ತಮವಾಗಿತ್ತು. ಅಷ್ಟರಲ್ಲಿ ಯುಗಾದಿಯು ಬಂದಿತು. ಹೊಸ ವರ್ಷಾರಂಭವೆಂದರೆ ಎಷ್ಟೊಂದು ಉಲ್ಲಾಸ. ಬೆಳಿಗ್ಗೆ ಎದ್ದು ಸ್ನಾನ ಪೂಜೆ ಮುಗಿಸಿಕೊಂಡು ಶಾಖೆಗೆ ಧ್ವಜವಂದನೆಗೆ ಹೋಗುವ ಸಲುವಾಗಿ ಅವರು ಎಷ್ಟೊಂದು ಆತುರ ಮಾಡುತ್ತಿದ್ದರು. ಆದರೆ ಈ ಸಲ ಅವರಿಗೆ ಮುಂಚಿನ ರಾತ್ರಿ ಕಾಲರಾ ಅಂಟಿಕೊಂಡಿತು. ಆಗಿನಿಂದಲೇ ಮೃತ್ಯುವು ಅವರನ್ನು ಬರಮಾಡಿಕೊಳ್ಳುವ ಸಿದ್ಧತೆಯಲ್ಲಿತ್ತು. ಆದರೆ ಅವರ ಬಲವಾದ ಇಚ್ಛಾಶಕ್ತಿಯ ಮೂಲಕ ಆ ಸಂಕಟದಿಂದ ಅವರು ಬದುಕಿಕೊಂಡರು. ಬೇಸಿಗೆಯ ರಜೆ ಇದ್ದುದರಿಂದ ನನ್ನ ಮೂವರೂ ಬಂಧುಗಳು ಮನೆಗೆ ಬಂದಿದ್ದರು. ಅವರ ಪ್ರೀತಿಯ ತಿಂಡಿ-ತಿನಿಸುಗಳನ್ನೆಲ್ಲ ತಂದುಕೊಟ್ಟು ಅಪ್ಪತೃಪ್ತರಾದರು. ನನ್ನ ಅಕ್ಕ ಸಹ ಏನೋ ಕಾರಣದಿಂದ ಅಕಲ್ಪಿತವಾಗಿಯೇ ಬಂದು ಅವರನ್ನು ನೋಡಿಕೊಂಡು ಹೋದಳು. ಹೀಗೆ ಕೆಲವು ದಿವಸ ಸಂತೋಷವಾಗಿ ಕಳೆದು ಕೆಲವರು ಲಗ್ನಕ್ಕೆ, ಕೆಲವರು ಇನ್ನಾವುದೋ ಕೆಲಸಕ್ಕೆ ಹೀಗೆ ಎಲ್ಲರೂ ಒಂದೊಂದು ಊರಿಗೆ ಹೊರಟುಹೋದರು. ಆನಂತರ ಒಂದು ದಿವಸ ಅಪ್ಪ ನಮ್ಮ ಮನೆಗೆ ಬಂದು, ಮಗು, ನನಗೆ ಮೈ ಸರಿಯಾಗಿಲ್ಲ. ಕೈಕಾಲು ತೀರ ಸೋತು ಹೋಗಿವೆ. ಮನೆಗೆ ಬಾ ನಾಲ್ಕು ದಿವಸ ನನ್ನ ಹತ್ತಿರ ಇರು. ಮನೆಯಲ್ಲಿ ಯಾರೂ ಇಲ್ಲ. ನೀನು ಬಂದರೆ ನನಗೆ ಧೈರ್ಯವುಂಟಾಗುವುದು ಎಂದು ಹೇಳಿದರು. ಇಷ್ಟರಲ್ಲಿಯೇ ನನ್ನ ಪರಮಪೂಜ್ಯ ಅಪ್ಪನ ಮೇಲೆ ಈ ರೀತಿ ವಿಧಿಯ ನಿಷ್ಠುರ ಆಘಾತವಾಗುವುದೆಂದು ನನಗೇನೂ ಆಗ ತೋರಲಿಲ್ಲ. ದಿ. 15 ರಂದು ಮುಂಜಾನೆ ನಾನು ಅವರ ಹತ್ತಿರ ಹೋದೆ. ಅವರೊಟ್ಟಿಗೆ ಊಟಮಾಡಿದೆ. ರಾತ್ರಿ 9 ರವರೆಗೂ ಆ ಮಾತು ಈ ಮಾತು ಹೀಗೆ ಅವರೊಡನೆ ಮಾತನಾಡುತ್ತಲೇ ಇದ್ದೆ. ಆಮೇಲೆ ನಮ್ಮ ಮನೆಗೆ ಹೋದೆ. ಅವರ ಮನಸ್ಸಿನಲ್ಲಿ ಏನಿತ್ತೋ, ಯಾರು ಬಲ್ಲರು ? ನನಗೆ ಹೋಗಬೇಡವೆಂದು ಬಲವಂತ ಮಾಡಿದರು. ಆದರೆ ನನ್ನ ಮನೆಯಲ್ಲಿ ಅಡಚಣೆ ಇದ್ದುದರಿಂದ ನಾನು ಮತ್ತೆ ಗುರುವಾರ ಬರುವೆನೆಂದು ಹೇಳಿ ಹೊರಟುಹೋದೆ. ಆಗ ಅವರಿಗೆ ದಮ್ಮಿನ ವೇದನೆ ಆರಂಭವಾಗಿತ್ತು. ನಾನು ಗುರುವಾರ ಮುಂಜಾನೆ ಬಂದೆ. ದಮ್ಮು ಹಾಗೆಯೇ ಇತ್ತು. ನಾನು ಕಳೆದ 18-20 ವರ್ಷಗಳಿಂದ ಅವರಿಗೆ ದಮ್ಮಿನಿಂದ ಆಗುವ ವೇದನೆಗಳನ್ನು ನೋಡುತ್ತಿದ್ದೇನೆ. ಆದರೆ ಈ ಬಾರಿಯ ವೇದನೆಯನ್ನು ಕಂಡು ನನ್ನ ಉಸಿರೇ ಹೋಯಿತು. ಅಂತಹ ವೇದನೆಯಲ್ಲೂ ಅವರು ಪ್ರತಿಯೊಬ್ಬರ ವಿಷಯ ವಿಚಾರಿಸುತ್ತಿದ್ದರು. ನನಗೆ ಅವರು ಊಟ ಮಾಡಿದೆಯಾ ? ಈ ಹೊತ್ತು ಬಿಸಿಲು ಬಹಳವಿದೆ. ಐಸ್ಕ್ರೀಮ್ ತೆಗೆದುಕೋಎಂದು ಹೇಳುತ್ತಿದ್ದರು. ಸಂಜೆಗೆ ಸಂಘದ ಒಬ್ಬ ಕಾರ್ಯಕರ್ತನ ಹತ್ತಿರ ಕಾಕತಿ ಪ್ರವಾಸದ ವಿಷಯವಾಗಿ ಕೂಲಂಕುಶವಾಗಿ ವಿಚಾರಿಸಿದರು. ಮಂಗಳವಾರದ ದಿವಸ ಬೆಳಗಾಂವಿಯ ಸ್ವಯಂಸೇವಕರೆಲ್ಲಾ ಕಾಕತಿಯಲ್ಲಿ ನಡೆಸಿದ ಒಂದು ದಿವಸದ ಶಿಬಿರದ ಕಾರ್ಯಕ್ರಮಗಳನ್ನೆಲ್ಲ ಅವರು ವಿವರವಾಗಿ ಹೇಳಿದ ನಂತರವೇ ಅವನಿಗೆ ಅಲ್ಲಿಂದ ಹೋಗಗೊಟ್ಟರು. ರಾತ್ರಿ ಡಾಕ್ಟರರು ಬಂದು ಇಂಜಕ್ಷನ್ ಕೊಟ್ಟರು. ಆಕ್ಸಿಜನ್ ಕೊಡುವುದು ನಡೆದೇ ಇತ್ತು. ಇದೆಲ್ಲಾ ರಾತ್ರಿ 1 ಘಂಟೆಯವರೆಗೆ ನಡೆಯಿತು. ರಾತ್ರಿ 1 ರಿಂದ ಬೆಳಿಗ್ಗೆ 5 ರವರೆಗೆ ಅವರು ಗಾಢ ನಿದ್ರೆ ಮಾಡಿದರು. 5 ಕ್ಕೆ ಎದ್ದು ಮುಖ ತೊಳೆದುಕೊಂಡು, ಸ್ಪಂಜ್‌ನಿಂದ ಮೈ ಸ್ವಚ್ಛ ಮಾಡಿಕೊಂಡರು. ಚಹ ಕುಡಿದು ಅಡಕೆ ಬೇಡಿ ಇಸಕೊಂಡರು. ಅದಾದ ಮೇಲೆ ನಿತ್ಯದಂತೆ ಲೋಡಿಗೆ ತಲೆ ಆತುಕೊಂಡು ಕೂತರು. ಮತ್ತು ಅತ್ಯಂತ ಶಾಂತಚಿತ್ತದಿಂದ ಅವರು ತಮ್ಮ ದೇಹವನ್ನು ಬಿಟ್ಟು ತೆರಳಿದರು. ಸೌ. ಗಂಗೂತಾಯಿ ಉಪ್ಪೀನ, ಬೆಳಗಾಂವಿ.
ಅಂತ್ಯದರ್ಶನ
ವೈಶಾಖ ಶುದ್ಧ ನವಮಿ. ಸೂರ್ಯನು ಉದಯವಾಗುತ್ತಿರುವಂತೆಯೇ ಮಾನನೀಯ ಶ್ರೀ ಅಪ್ಪಾಸಾಹೇಬರ ಪ್ರಾಣಜ್ಯೋತಿಯು ಅನಂತದಲ್ಲಿ ವಿಲೀನವಾಯಿತು ! ಬೆಳಗಾಂವಿ ನಗರದಲ್ಲೆಲ್ಲ ದುಃಖದ ಛಾಯೆ ಆವರಿಸಿತು. ಆನರು ತಂಡೋಪತಂಡವಾಗಿ ತಮ್ಮ ಪ್ರೀತಿಯ ನಾಯಕನ ಅಂತ್ಯದರ್ಶನಕ್ಕಾಗಿ ಶಹಪೂರದ ಅವರ ಮನೆಯ ಹತ್ತಿರ ಸೇರಹತ್ತಿದರು.
ಹತ್ತು ಘಂಟೆಗೆ ಬೆಳಗಾಂವಿ ನಗರ ಸಭೆಯ ಸಂತಾಪ ಸೂಚಕ ನಿರ್ಣಯವನ್ನು ಅಂಗೀಕರಿಸಿ ನಾಗರಿಕರ ದುಃಖವನ್ನು ವ್ಯಕ್ತಮಾಡಿತು. ಪ್ರಾಂತ ಸಂಘಚಾಲಕರ ಈ ಆಕಸ್ಮಿಕ ನಿಧನದ ಸುದ್ಧಿ ಸ್ವಯಂ ಸೇವಕರಿಗೆಲ್ಲ ವಜ್ರಾಘಾತವಾಗಿ ಬಂದಿತು. ಧಾರವಾಡ ಬೆಳಗಾಂವಿ ಜಿಲ್ಲೆಯೊಳಗಿನ ಸ್ವಯಂಸೇವಕರು ಬೆಳಗಾಂವಿಗೆ ಧಾವಿಸಿದರು.
ತಂತಿಗಳ ಮೂಲಕ ಈ ಶೋಕವಾರ್ತೆಯು ದೇಶದ ನಾನಾ ಮೂಲೆಗಳಲ್ಲಿನ ಸಂಘ ಕಾರ್ಯಾಲಯಗಳಿಗೆ ತಲುಪಿತು. ದೆಹಲಿಯಿಂದ ಮದ್ರಾಸಿನವರೆಗಿನ ಅನ್ಯಾನ್ಯ ಸ್ಥಾನಗಳ ಸಂಘದ ಅಧಿಕಾರಿಗಳಿಂದ ಸಂತಾಪಸೂಚಕ ತಂತಿಗಳು ಒಂದೇ ಸಮನೆ ಬರುತ್ತಿದ್ದವು. ಪುಣೆಯ ಸಂಘ ಶಿಕ್ಷಾವರ್ಗದಲ್ಲಿದ್ದ ಪ. ಪೂ. ಶ್ರೀ ಗುರೂಜಿಯವರು ಸುದ್ಧಿಯನ್ನು ಕೇಳಿ ಶೋಕವಿಹ್ವಲರಾದರು. ತಕ್ಷಣ ಎರಡು ಕಾರುಗಳಲ್ಲಿ ಅವರು ಮತ್ತು ಮಹಾರಾಷ್ಟ್ರ ಪ್ರಾಂತ ಸಂಘಚಾಲಕ ಶ್ರೀ ಕಾ. ಭಾ. ಲಿಮಯೆ, ಅ. ಭಾ. ಶಾರೀರಿಕ ಶಿಕ್ಷಣ ಪ್ರಮುಖ ಮೋರೋಪಂತ ಪಿಂಗಳೆ, ಮಹಾರಾಷ್ಟ್ರ ಪ್ರಾಂತಪ್ರಚಾರಕ ಮಾ. ಶ್ರೀ ಬಾಬಾರಾವ ಭಿಡೆ, ಡಾ॥ ಥತ್ತೆ ಆದಿ ಪ್ರಮುಖರು 11-15ಕ್ಕೆ ಹೊರಟು ಬೆಳಗಾಂವಿಗೆ ಸಾಯಂಕಾಲ 5-15ಕ್ಕೆ ಹೊರಟು ಬಾಳಗಾಂವಿಗೆ ಸಾಯಂಕಾಲ 5-15ಕ್ಕೆ ಬಂದರು.

 ಅಂತಿಮ ಯಾತ್ರೆ

ತಕ್ಷಣ ಅಂತಿಮಯಾತ್ರೆ ಹೊರಡಿತು. ಶೋಕಸಾಗರದಲ್ಲಿ ಮುಳುಗಿದ್ದ ಬೆಳಗಾಂವಿಯ ಜನತೆ ತನ್ನ ವ್ಯವಹಾರವನ್ನು ಸ್ವಯಂಪ್ರೇರಣೆಯಿಂದ ನಿಲ್ಲಿಸಿತು. ಶಹಾಪೂರ ಮತ್ತು ಬೆಳಗಾಂವಿಯ ಅಂಗಡಿಗಳು ಮುಚ್ಚಿದ್ದವು. ಎಲ್ಲರೂ ಅಂತ್ಯಯಾತ್ರೆಯಲ್ಲಿ ಭಾಗವಹಿಸಲು ಬಂದಿದ್ದರು. ಧಾರವಾಡ ವ್ಯಾಪಾರಿ ಸಂಘದ ಕೋಶಾಧ್ಯಕ್ಷ ಶ್ರೀ ನಾರಾಯಣರಾವ್ ಟೀಕಾರೆ, ಗೋಕಾಕ ಸಂಘಚಾಲಕ್ ಮಾ. ಶ್ರೀ ಕೇಳಕರ ವಕೀಲ, ಕರ್ನಾಟಕ ಪ್ರಾಂತದ ನಿಧಿ ಪ್ರಮುಖ ಗದುಗಿನ ಶ್ರೀ ಗ. ದಾ. ಖರೆ, ಬೆಳಗಾಂವಿಯ ಪೂಜ್ಯ ಶ್ರೀ ನಾಗನೂರ ಸ್ವಾಮಿಗಳು, ಜನಸಂಘದ ಅಧ್ಯಕ್ಷ ಶ್ರೀ ದಡ್ಡೀಕರ ವಕೀಲ, ಶ್ರೀ ಜವಳಿ ವಕೀಲ ಮೊದಲಾದ ಪ್ರಮುಖರು ಸ್ಮಶಾನ ಯಾತ್ರೆಯಲ್ಲಿ ಭಾಗವಹಿಸಿದ್ದರು. ಅಂತ್ಯಯಾತ್ರೆ ಹೊರಟಾಗ ಶಹಾಪೂರದ ಬೀದಿ ಬೀದಿಗಳಲ್ಲಿ ನಾಗರೀಕರು ದಿವಂಗತರ ಪ್ರಾರ್ಥಿವ ದೇಹಕ್ಕೆ ನೂರಾರು ಹೂಮಾಲೆಗಳನ್ನರ್ಪಿಸಿ ಅಂತಿಮ ಗೌರವ ಸಲ್ಲಿಸಿದರು. ರಾತ್ರಿ 8 ಕ್ಕೆ ಅಂತ್ಯಕ್ರಿಯೆ ಮುಗಿದ ನಂತರ ಜನರೆಲ್ಲ ಭಾರವಾದ ಹೃದಯದಿಂದ ಮನೆಗೆ ತೆರಳಿದರು.
ಕರ್ನಾಟಕ ಪ್ರಾಂತಪ್ರಚಾರಕ ಮಾ. ಶ್ರೀ ಯಾದವರಾವಜಿ ಜೋಶಿ, ಶಾರೀರಿಕ ಶಿಕ್ಷಣ ಪ್ರಮುಖ ಶ್ರೀಗೋಪಾಳರಾವ ಬಾಕರೆ, ಬೌದ್ಧಕ್ ಪ್ರಮುಖ ಶ್ರೀ ಭಾವೂರಾವ ದೇಶಪಾಂಡೆ ಇವರು ಅನಾನ್ಯ ಸ್ಥಳಗಳಿಂದ ಬರಲು ತಡವಾದ್ದರಿಂದ ಸ್ಮಶಾನ ಭೂಮಿಯಲ್ಲಿ ಅವರ ಸಮಾಧಿಯ ಹತ್ತಿರ ದಿವಂಗತರ ಪಾವನ ಸ್ಮತಿಗೆ ವಂದನೆ ಸಲ್ಲಿಸಿದರು.
ಇಂತು ಈ ಶ್ರೇಷ್ಠ ಪುರುಷನ ಜೀವನಯಾತ್ರೆಯು ಕೊನೆಗೊಂಡಿತು.

   

Leave a Reply