ಮಾನನೀಯ ಅಪ್ಪಾಸಾಹೇಬ ಜಿಗಜಿನ್ನಿ -ಶ್ರದ್ಧಾಂಜಲಿ

ಅಪ್ಪಾಸಾಹೇಬ-ಜಿಗಜಿನ್ನಿ-ಲೇಖನಗಳು - 0 Comment
Issue Date : 24.11.2014

ಕರ್ನಾಟಕದ ಶ್ರದ್ಧಾಂಜಲಿ
ಪ್ರಾಂತ ಸಂಘಚಾಲಕ ಮಾ. ಅಪ್ಪಾಸಾಹೇಬರ ಮೃತ್ಯುವಿನ ಹದಿಮೂರನೆಯ ದಿನ ಮೇ 30 ರಂದು ಕರ್ನಾಟಕದ ಎಲ್ಲ ಶಾಖೆಗಳಲ್ಲೂ ಘೋಷವಾದನನೊಂದಿಗೆ ಮಾನವಂದನೆ ಮತ್ತು ಸಂಘಚಾಲಕ ಪ್ರಣಾಮಗಳನ್ನು ಸಲ್ಲಿಸಿ ಸ್ವಯಂಸೇವಕರು ತಮ್ಮ ಶ್ರದ್ಧಾಂಜಲಿಯನ್ನು ಸಮರ್ಪಿಸಿದರು.
ಬೆಳಗಾಂನಲ್ಲಿ ಮಾನ್ಯ ಡಾ. ಕುಲಕರ್ಣಿ, ಶ್ರೀ ಭಾವೂರಾವ್ ದೇಶಪಾಂಡೆ, ಶ್ರೀ ಸದಾನಂದ ಕಾಕಡೆಯವರೂ, ಬೆಂಗಳೂರಿನಲ್ಲಿ ಶ್ರೀ ಕೊ. ಕೃಷ್ಣಪ್ಪ ಮತ್ತು ಶ್ರೀ ಸು. ನಾ. ಮಲ್ಯರೂ, ಮಂಗಳೂರಿನಲ್ಲಿ ಜಿಲ್ಲಾ ಸಂಘಚಾಲಕ ಮಾ. ಕಾರ್ಕಳ ಸದಾಶಿವರಾವ್ ಜೀಯವರೂ, ಗದುಗಿನಲ್ಲಿ ಪ್ರಾಂತ್ಯದ ನಿಧಿಪ್ರಮುಖ ಮಾ. ಮಾಮಾಸಾಹೇಬ್ ಖರೆಯವರೂ, ಮೈಸೂರಿನಲ್ಲಿ ಡಾ. ಶಾಮಾಚಾರ್ ಮತ್ತು ಡಾ. ವೆಂಕಟಾಚಾರ್ಯರೂ, ಗೋಕಾಕದಲ್ಲಿ ಶ್ರೀ ಅಠವಲೆರಾಂಭಾವೂರವರೂ, ಗಜೇಂದ್ರಗಡದಲ್ಲಿ ಶ್ರೀ ಮಲ್ಲೇಶಪ್ಪಾ ಜಾಧವ್ ಮತ್ತು ಶ್ರೀ ಮಹಾಂತೇಶ್ ಹೊನವಾಡರೂ ಮಾತನಾಡಿ ದಿವಂಗತರಿಗೆ ಗೌರವವನ್ನು ಸಲ್ಲಿಸಿದರು.
ಮಾನ್ಯ ಶ್ರೀ ಅಪ್ಪಾಸಾಹೇಬರ ಶ್ರದ್ಧಾಂಜಲಿ ವಿಶೇಷಾಂಕ. ವಿಜಯದಶಮಿ ವಿಶೇಷಾಂಕ – 1956

ವಿನೋದಮೂರ್ತಿ ಅಪ್ಪಾಸಾಹೇಬ್
ವಿನೋದದಲ್ಲಿ ಮಾ. ಅಪ್ಪಾಸಾಹೇಬರದೇ ಒಂದು ಹಾದಿ. ನಗುವಿದ್ದರೂ ಅರ್ಥವಿತ್ತು. ಹಾಸ್ಯವಿದ್ದರೂ ಅದರಲ್ಲಿ ಸ್ನೇಹವಿತ್ತು. ಮನೆಯವರಿಂದ ಹಿಡಿದು ಸಂಘ ಸ್ವಯಂಸೇವಕರವರೆಗೆ ಅದರ ಅಭಿಷೇಕ ಆಗದೇ ಹೋದವರಿಲ್ಲ; ಅದರ ಸವಿ ಕಾಣದವರಿಲ್ಲ.
ಸಂಘ ಪ್ರಚಾರಕರ ಸೃಷ್ಠಿ ಹೇಗಾಯಿತೆಂಬುದಕ್ಕೆ ಅವರದೇ ಒಂದು ಕಥನ ! ಶಂಕರನು ಹಣೆಗಣ್ಣು ತೆರೆದು ಮದನನ್ನು ಸುಟ್ಟು ಬೂದಿಮಾಡಿದನಷ್ಟೆ. ಆದರೆ ರತಿದೇವಿ ಮತ್ತಿತರ ದೇವತೆಗಳ ಪ್ರಾರ್ಥನೆಯಿಂದ ಅವನ ಕ್ರೋಧ ಇಳಿದು ಉಃಶಾಪ ಕೊಟ್ಟನಂತೆ ಇನ್ನು ಮುಂದೆ ಮದನನು ದೇಹರಹಿತನಾಗಿ ಉಳಿಯಲಿಎಂದು. ಮದನನ ದಹನವಾದ ನಂತರ, ಪುನಃ ಅವನಿಗೆ ಉಃಶಾಪ ಸಿಗುವವರೆಗಿನ ಅವಕಾಶದಲ್ಲಿ ಹುಟ್ಟಿದ ಜೀವಿಗಳೇ ಸಾಧುಸಂತ, ಸಂನ್ಯಾಸೀ ಹಾಗೂ ಸಂಘ ಪ್ರಚಾರಕರು ! ಉಳಿದ ನಾವುಗಳೆಲ್ಲ ಮುಂಚೆಯೋ ಅಥವಾ ನಂತರವೋ ಜನ್ಮಕ್ಕೆ ಬಂದೆವು. ಅದರಿಂದಾಗಿಯೇ ಪ್ರಚಾರಕರಲ್ಲಿ ಮತ್ತು ನಮ್ಮಲ್ಲಿ ಈ ಒಂದು ವ್ಯತ್ಯಾಸ ಮಾತ್ರ ಉಳಿದುಹೋಯಿತು ಎನ್ನುತ್ತಿದ್ದರು ಅವರು ! ವಾಸ್ತವವಾಗಿ ಅವರ ಜೀವನವೂ ಅದೇ ರೀತಿ ಸಂಘದಲ್ಲಿ ಪೂರ್ತಿ ಒಂದಾಗಿ ಹೋಗಿತ್ತು.
ಅಪ್ಪಾಸಾಹೇಬರು ಪೂ॥ರಿಗೆ ಒಮ್ಮೆ ಪತ್ರ ಬರೆದರು. ಅದರಲ್ಲಿ ಒಂದು ಆನಂದದ ಸುದ್ಧಿ. ನಮ್ಮ ಹುಡುಗ ಬಸವಣ್ಣನಿಗೆ ಗಂಡು ಮಗುವಾಯಿತು. ಮತ್ತು ಆಶ್ಚರ್ಯದ ಸಂಗತಿ ಎಂದರೆ ಅಂದೇ ನಮ್ಮ ಯಮುನಾಬಾಯಿಗೆ (ನಮ್ಮ ಮನೆಯ ಎಮ್ಮೆಗೆ) ಗಂಡುಕರುವೂ ಆಯಿತು ಎಂದಿತ್ತು ! ಗುರೂಜಿಯವರೂ …………..ಸುದ್ಧಿ ತಿಳಿಯಲು ಅತ್ಯಂತ ಆನಂದವಾಯಿತು. ಆದರೆ ಆ ಎರಡನೆಯ ಹುಡುಗನಿಗೂ ನಿಮ್ಮ ಆಸ್ತಿಯಲ್ಲಿ ಯೋಗ್ಯ ಪಾಲು ಕೊಡಲು ತಪ್ಪುವುದಿಲ್ಲವೆಂದು ನಂಬಿದ್ದೇನೆ ಎಂದು ಉತ್ತರಿಸಿದ್ದರು !

1955ರ ಮಂಗಳೂರು ಶಿಬಿರದ ನಂತರ ಪೂಜನೀಯ ಗುರೂಜೀಯವರು ವಿಮಾನದಲ್ಲಿ ಬೆಳಗಾಂವಿಗೆ ಬಂದರು. ವಿಮಾನದಿಂದ ಸಾಮಾನುಗಳನಲ್ಲಿ ಇಟ್ಟ ನಂತರ ಎಂದಿನಂತೆ ಶ್ರೀ ಗುರೂಜಿಯವರು ನಡೆಯಿರಿ ಹೊರಡೋಣಎಂದು ಅವಸರಿಂದ ಹೊರಟರು. ಮಾ. ಅಪ್ಪಾಸಾಹೇಬರು ಮಾತ್ರ ಆರಾಮವಾಗಿ ವಿಮಾನದ ಕಡೆ ನೋಡುತ್ತಾ ನಿಮಗೇನು, ವಿಮಾನ ಅಭ್ಯಾಸವಾಗಿ ಹೋಗಿದೆ. ನಮ್ಮಂತಹವರು ಯಾವಾಗ ನೋಡಬೇಕು ? ವಿಮಾನ ಮೇಲೇರುವುದು ನೋಡಿಕೊಂಡು ಹೋಗೋಣ ಎಂದರು. ಗುರೂಜೀಯವರು ಮುಗುಳ್ನಗೆಯೊಂದಿಗೆ ಶಾಂತವಾಗಿ ಮೋಟಾರಲ್ಲಿ ಹೋಗಿ ಕುಳಿತರು. ವಿಮಾನ ಮೇಲೇರಿ ಹೋದನಂತರ, ಮೋಟಾರು ಹೊರಟಿತು. ಆಗ ಮಾ. ಅಪ್ಪಾಸಾಹೇಬರ ಮಾತಿನ ಮರ್ಮ ಎಲ್ಲರಿಗೂ ಸ್ಪುರಿಸಿತು. ಅಲ್ಲಿ ಪ್ರತ್ಯೇಕ ವಿಮಾನ ನಿಲ್ದಾಣವಾದ್ದರಿಂದ ವಿಮಾನ ಹೋಗಬೇಕಾಗಿದ್ದ ಹಾದಿಯಲ್ಲೇ ಮೋಟಾರುಗಳೂ ಹಾದುಹೋಗಬೇಕಾಗಿದ್ದವು. ವಿಮಾನವು ಹೋದಲ್ಲದೆ ಮೋಟಾರು ಚಲಿಸುವಂತಿರಲಿಲ್ಲ ! ಒಮ್ಮೆ ಮದುವೆ ಸಮಾರಂಭ ಒಂದನ್ನು ಅವರು ನೋಡಿ ಬಂದು ತಮ್ಮ ಪತ್ನಿಗೆ ಅದರ ವೈಭವವನ್ನೆಲ್ಲ ವರ್ಣಿಸಿದರು. ಕಡೆಗೆ ನೋಡು, ನಮ್ಮ ಕಾಲದಲ್ಲಿ ಇದೊಂದೂ ಇರಲಿಲ್ಲ. ಈ ಎಲ್ಲ ವೈಭವ, ಮೆರವಣಿಗೆ ಬ್ಯಾಂಡ್ ಸಲುವಾಗಿಯಾದರೂ ನಾವು ಇನ್ನೊಮ್ಮೆ ಲಗ್ನ ಮಾಡಿಕೊಳ್ಳೋಣ ಎಂದರು !
ಜೀವನದ ನಾನಾಮುಖ ಚಿಂತೆ, ದುಃಖ, ವಿರೋಧಗಳ ಕಡಲನ್ನೂ ನಗೆಯ ಹರಿಗೋಲಿನಲ್ಲಿ ಯಶಸ್ವಿಯಾಗಿ ದಾಟಿದ ಕುಶಲ ಕರ್ಮವೀರರು ಅವರು.
ಮಾನ್ಯ ಶ್ರೀ ಅಪ್ಪಾಸಾಹೇಬರ ಶ್ರದ್ಧಾಂಜಲಿ ವಿಶೇಷಾಂಕ. ವಿಜಯದಶಮಿ ವಿಶೇಷಾಂಕ – 1956

   

Leave a Reply