ಬೇಸಿಗೆ ಆಟಗಳು – 3

ಸ್ವದೇಶೀ ಕ್ರೀಡೆ - 0 Comment
Issue Date :

ಬೇಸಿಗೆಯ ಬಿಸಿಲಿಗೆ ಸುಸ್ತಾದಾಗ ಮನೆಯೊಳಗಿನ ಆಟಗಳು ಮನಸ್ಸಿಗೆ ಮುದ ನೀಡಿ ಬುದ್ಧಿಗೆ ಚುರುಕು ನೀಡುತ್ತವೆ. ಸರಳ ಆಟಗಳನ್ನು ಎಲ್ಲ ವಯೋಮಾನದವರೂ ಆಡಬಹುದು.
ನೆನಪಿನಶಕ್ತಿ ಆಟ
ಎಲ್ಲ ಆಟಗಾರರಿಗೂ ಒಂದು ಹಾಳೆ, ಪೆನ್ನು ಕೊಡಬೇಕು. ಒಂದು ಮೇಜಿನ ಮೇಲೆ ಪಿನ್ನು, ಗುಂಡಿ, ಮೇಣದಬತ್ತಿ, ಬೀಗ, ಬೆಂಕಿ ಕಡ್ಡಿ ಈ ರೀತಿ 20-24 ವಸ್ತುಗಳನ್ನು ಹರಡಬೇಕು. ಆನಂತರ ಎಲ್ಲ ಆಟಗಾರರನ್ನು ಕರೆದು ಒಂದು ನಿಮಿಷದ ಕಾಲ ಆ ಎಲ್ಲ ವಸ್ತುಗಳನ್ನು ನೋಡಲು ಹೇಳಬೇಕು. ನಂತರ ಐದು ನಿಮಿಷ ಸಮಯ ಕೊಟ್ಟು ಅವರು ನೋಡಿದ ಸಾಮಾನುಗಳ ನೆನಪು ಮಾಡಿಕೊಂಡು ಪಟ್ಟಿಯನ್ನು ತಯಾರು ಮಾಡಬೇಕು. ಯಾರು ಹೆಚ್ಚು ಪಟ್ಟಿ ಮಾಡುತ್ತಾರೋ ಅವರು ಗೆಲ್ಲುತ್ತಾರೆ.
ಇದೇ ರೀತಿ ‘ಭಾರತ – ಭಾರತಿ’ ಮಕ್ಕಳ ಪುಸ್ತಕಗಳನ್ನು ಜೋಡಿಸಿ ನಿರ್ದಿಷ್ಟ ಸಮಯ ಅದನ್ನು ನಂತರ ಅವುಗಳ ಹೆಸರುಗಳನ್ನು (ಪುಸ್ತಕಗಳನ್ನು ನೋಡದೆ) ಬರೆಯುವ ಸ್ಪರ್ಧೆಯನ್ನು ಏರ್ಪಡಿಸಬಹುದು.
ಬದಲಾವಣೆಗಳನ್ನು ಗಮನಿಸುವುದು
ಈ ಆಟದ ವಿಶೇಷವೆಂದರೆ ಗೊತ್ತಾದ ಬದಲಾವಣೆಯನ್ನು ಗುರುತಿಸುವುದು ಮತ್ತು ಅವುಗಳನ್ನು ನೆನಪಿನಲ್ಲಿ ಇಡುವುದು. ಎಲ್ಲರೂ ಮಂಡಲದಲ್ಲಿ ನಿಂತಿರಬೇಕು. ಮಂಡಲದ ಮಧ್ಯೆ ಇರುವ ಆಟಗಾರನು ಧರಿಸಲು ಮತ್ತು ಬದಲಾಯಿಸಲು ಸೂಕ್ತವಾದ ಉಡುಗೆ ತೊಡುಗೆಗಳನ್ನು ಹಾಕಿಕೊಳ್ಳಲಿ. ಅವನು ಪೆನ್ನು, ಕನ್ನಡಕ, ಕರವಸ್ತ್ರ , ಕೀ ಗೊಂಚಲು, ಬೆಲ್ಟ್, ಟೋಪಿ, ಛತ್ರಿ, ಉಂಗುರ ಇತ್ಯಾದಿ ವಸ್ತುಗಳನ್ನು ಧರಿಸಿರಲಿ.
2 ನಿಮಿಷಗಳಲ್ಲಿ ಮಂಡಲದ ಮೇಲಿರುವ ಆಟಗಾರರು ಮಂಡಲದ ಮಧ್ಯದಲ್ಲಿರುವ ಆಟಗಾರರನ್ನು ಗಮನಿಸಬೇಕು. ನಂತರ ಎಲ್ಲರೂ ಹಿಂದಕ್ಕೆ ತಿರುಗಿ ನಿಲ್ಲಲಿ. ಮಧ್ಯದಲ್ಲಿ ಆಟಗಾರನು ಅವರೆಲ್ಲರಿಗೂ ಕಾಣದಂತೆ ತನ್ನ ಉಡುಗೆ – ತೊಡುಗೆಗಳನ್ನು ಬದಲಾಯಿಸಲಿ. ನಂತರ ಮಂಡಲದ ಮೇಲಿರುವ ಆಟಗಾರರು ವಾಪಸು ತಿರುಗಿ ಮಧ್ಯದಲ್ಲಿರುವ ಆಟಗಾರರನ್ನು ಸೂಕ್ಷ್ಮವಾಗಿ ಗಮನಿಸಿ ಅವನ ಉಡುಗೆ ತೊಡುಗೆಯಲ್ಲಿ ಆಗಿರುವ ಬದಲಾವಣೆಗಳನ್ನು ಹಾಳೆಯಲ್ಲಿ (ನಿರ್ದಿಷ್ಟ ಸಮಯದಲ್ಲಿ) ಬರೆಯಬೇಕು. ಯಾರು ಹೆಚ್ಚು ಬರೆದಿರುತ್ತಾರೋ ಅವರು ಗೆದ್ದಂತೆ.
ಶಬ್ದಗ್ರಹಿಕೆಯ ಆಟ
ಒಂದು ಮಂಡಲದಲ್ಲಿ ಎಲ್ಲರೂ ಮಂಡಲದ ಮೇಲೆ ನಿಲ್ಲಬೇಕು. ಅವರೆಲ್ಲರಿಗೂ ಕಣ್ಣು ಕಟ್ಟಿರಬೇಕು. ಆಟ ಆಡಿಸುವವನು ಆಯ್ದ ಸಾಮಗ್ರಿ ಗಳೊಂದಿಗೆ ಮಂಡಲದೊಳಗೆ ಪ್ರವೇಶ ಮಾಡಬೇಕು. ಉದಾಹರಣೆಗೆ ಉಪ್ಪು ಕಾಗದದಿಂದ ಶಬ್ದ ಮಾಡುವುದು, ಗಿಲಕಿಯ ಶಬ್ದ, ಪುಸ್ತಕ ನೆಲಕ್ಕೆ ಹಾಕುವುದು, ಗಡಿಯಾರಕ್ಕೆ ಕೀ ಕೊಡುವುದು… ಹೀಗೆ ಇತರೆ ಶಬ್ದಗಳನ್ನು ಉಂಟು ಮಾಡುವ ಸಾಮಗ್ರಿಗಳೊಂದಿಗೆ ಮಂಡಲದೊಳಗೆ ಶಬ್ದ ಹೊರಡಿಸಬೇಕು. ಮಂಡಲದ ಮೇಲೆ ನಿಂತಿರುವ ಆಟಗಾರರು ಈ ಶಬ್ದಗಳನ್ನು ಆಲಿಸಬೇಕು. ನಂತರ ಆ ಸಾಮಗ್ರಿಗಳನ್ನು ಮುಚ್ಚಿ ಆಟಗಾರರು ಕೇಳಿದ ಶಬ್ದದ ಆಧಾರದ ಮೇಲೆ ಸಾಮಗ್ರಿಗಳ ಪಟ್ಟಿಯನ್ನು ಬರೆಯಬೇಕು. ಹೆಚ್ಚು ಬರೆಯುವ ಆಟಗಾರ ವಿಜಯಿ.
ಸ್ಪರ್ಶದ ಆಟ
ಆಟ ಆಡಿಸುವವನು 7-10 ಸಾಮಾನುಗಳನ್ನು ಒಂದು ಚೀಲದಲ್ಲಿ ತುಂಬಬೇಕು. ಆಟಗಾರರು ಒಂದು ಸಾಲಿನಲ್ಲಿ ನಿಲ್ಲಲಿ. 5 ಸೆಕೆಂಡುಗಳ ಕಾಲ ಒಬ್ಬರಾದ ಮೇಲೆ ಒಬ್ಬರು ಆ ಚೀಲವನ್ನು ಮುಟ್ಟಬೇಕು. ನಂತರ ಅದರ ಸ್ಪರ್ಶದ ಅನುಭವವ ಆಧಾರದ ಮೇಲೆ ಚೀಲದ ಒಳಗಿರುವ ವಸ್ತುಗಳ ಪಟ್ಟಿ ಮಾಡಬೇಕು. ಹೀಗೆ ಯಾರು ಹೆಚ್ಚು ಪಟ್ಟಿ ಮಾಡುತ್ತಾರೋ ಅವರು ವಿಜಯಿ.
ಕತ್ತೆಯ ಬಾಲ
ಸಾಮಾನ್ಯವಾಗಿ ಈ ಆಟವನ್ನು ಮಕ್ಕಳು ಆಡಬಹುದು. ಕಪ್ಪು ಹಲಗೆಯ ಮೇಲೆ ಬಾಲವಿಲ್ಲದ ಕತ್ತೆಯ ಚಿತ್ರವನ್ನು ಬಿಳಿಯ ಸೀಮೆಸುಣ್ಣದಲ್ಲಿ ಬರೆಯಬೇಕು. ಎಲ್ಲ ಆಟಗಾರರಿಗೂ ಕಣ್ಣು ಕಟ್ಟಿ ಪ್ರತಿಯೊಬ್ಬರಿಗೂ ಬೇರೆ ಬೇರೆ ಬಣ್ಣದ ಸೀಮೆ ಸುಣ್ಣದ ಕಡ್ಡಿಯನ್ನು ಕೊಡಬೇಕು. ಅವರೆಲ್ಲರೂ ಒಬ್ಬರಾದ ಮೇಲೆ ಒಬ್ಬರಂತೆ ಕಪ್ಪು ಹಲಗೆಯ ಬಳಿ ಸಾಗಿ ಕತ್ತೆಯ ಬಾಲ ಬರೆಯಬೇಕು. ಯಾರು ಸರಿಯಾಗಿ ಬಾಲ ಬರೆಯುವರೋ ಅವರು ವಿಜಯಿ.
ಹಿಂದಿನ ಒಗಟುಗಳಿಗೆ ಉತ್ತರ
(1) ಕೆಂಡ (2) ತುಟಿ
ಈ ವಾರದ ಒಗಟುಗಳು
(1) ಹಿಂದುಗಡೆ ಐನೂರು ದಂಡು, ಮುಂದುಗಡೆ ಮುತ್ತಿನ ಚೆಂಡು
(2) ಅಂಕುಡೊಂಕಿನ ಚಕ್ರದೊಳಗೆ ಸಿಹಿನೀರು ತುಂಬಿಕೊಂಡಿದೆ

   

Leave a Reply