ಭಾಷೆ ಎಂಬುದು ನಿಂತ ನೀರಲ್ಲ: ಅ.ರಾ. ಮಿತ್ರ

ಬೆಂಗಳೂರಿನ ಸುದ್ದಿಗಳು - 0 Comment
Issue Date : 02.05.2015

ಬೆಂಗಳೂರು: ‘ಕನ್ನಡ ಮತ್ತು ತೆಲುಗು ಭಾಷೆಗಳು ಒಂದು ಕಾಲಕ್ಕೆ ಒಂದೇ ಎನ್ನುವಂತಿದ್ದವು. ಆಗಿನ ಜನಕ್ಕೆ ಕನ್ನಡ ಮತ್ತು ತೆಲುಗು ಎಂಬ ಭೇದವಿರಲಿಲ್ಲ. ಶ್ರೀಕೃಷ್ಣದೇವರಾಯನ ಕಾಲದಲ್ಲಿ ಜನರು ಎರಡೂ ಭಾಷೆಗಳನ್ನು ಮಾತನಾಡುತ್ತಿದ್ದರು. ಆದರೆ ಆಡಳಿತ ಭಾಷೆ ಮಾತ್ರ ಕನ್ನಡವಾಗಿತ್ತು. ಯಾವುದೇ ಭಾಷೆಯನ್ನು ದ್ವೇಷಿಸದೆ ತನ್ನ ಭಾಷೆಯನ್ನು ಪ್ರೀತಿಸುವುದನ್ನು ಕಲಿಸುವುದು ಕರ್ನಾಟಕ’ ಎಂದು ಸಾಹಿತಿ ಹಾಗೂ ಭಾಷಾಶಾಸ್ತ್ರಜ್ಞರಾದ ಅ.ರಾ. ಮಿತ್ರರವರು ಅಭಿಪ್ರಾಯಪಟ್ಟರು.
ಕೇಶವ ಕೃಪಾ ಸಂವರ್ಧನ ಸಮಿತಿಯಿಂದ ಕೇಂದ್ರ ಕಾರ್ಯಾಲಯ ಕೇಶವ ಕೃಪಾದಲ್ಲಿ ಆಯೋಜಿಸಿದ್ದ ‘ಸ್ನೇಹ ಮಿಲನ’ ಕಾರ್ಯಕ್ರಮದಲ್ಲಿ ಸಂವಾದದಲ್ಲಿ ಭಾಗವಹಿಸಿದ್ದರು.
ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಿಗೂ ಲಿಪಿ ಸಾಮ್ಯವಿದೆ. ಹಿಂದಿನ ಕವಿಗಳಿಗೆ ಭಾಷಾ ದುರಭಿಮಾನವಿರಲಿಲ್ಲ. ಎಲ್ಲಾ ಭಾಷೆಯನ್ನು ಸಮಾನವಾಗಿ ಕಂಡು ಪ್ರೀತಿಸುತ್ತಿದ್ದರು. ಹಲವು ಭಾಷೆಗಳನ್ನು ಮಾತನಾಡುವ ಜನ ಇರುವ ಜಾಗದಲ್ಲಿ ಸಂಸ್ಕೃತಿ ಸಮೃದ್ಧವಾಗಿರುತ್ತದೆ. ಇನ್ನೊಬ್ಬರನ್ನು ಒಳಗೊಳ್ಳುವ ಸಂಸ್ಕೃತಿ ತೆಲುಗಿನಲ್ಲೂ ಇದೆ. ತೆಲುಗು, ಕನ್ನಡ ಜೊತೆಗೆ ಬೆಳೆದುಬಂದಿತು. ಆದರೆ, ಕನ್ನಡ ಪ್ರಾಚೀನ ಭಾಷೆ. ಕ್ರಿ.ಪೂ. 250ರಲ್ಲೇ ಕನ್ನಡದ ಕುರುಹುಗಳು ಸಿಗುತ್ತವೆ. ಕೋಲಾರದಂತಹ ಪ್ರದೇಶಗಳಲ್ಲಿ ತೆಲುಗು ಭಾಷಿಕರೇ ಹೆಚ್ಚಾಗಿದ್ದರೂ ಅಲ್ಲಿನವರಿಗೆ ಕನ್ನಡದ ಬಗ್ಗೆ ಅಪಾರ ಅಭಿಮಾನವಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದಲ್ಲಿ ಈ ಸಾಮರಸ್ಯ ನಮಗೆ ಏಕೋ ಕಾಣುತ್ತಿಲ್ಲ ಎಂದು ವಿಷಾದಿಸಿದರು.
‘ಭಾಷೆ ಎಂಬುದು ನಿಂತ ನೀರಲ್ಲ. ಭಾಷೆ ನಿರ್ಮಾ ಣವಾಗುವುದು ಅಲ್ಲಿಯ ಜನರ ಆಯ್ಕೆಯ ಬಲ ದಿಂದ. ಚಲಾವಣೆಯಲ್ಲಿ ಇಲ್ಲದಿರುವ ಭಾಷೆ ಮಾತ್ರ ಶುದ್ಧವಾಗಿರುತ್ತದೆ! ಚಲಾವಣೆಯಲ್ಲಿರುವ ಭಾಷೆಯಲ್ಲಿ ಮಾತ್ರ ಶಬ್ಧ ವ್ಯತ್ಯಾಸಗಳಾಗುತ್ತವೆ. ವಿದ್ವಾಂಸರು ಇದನ್ನು ಪ್ರಶ್ನೆ ಮಾಡಲಾಗುವುದಿಲ್ಲ. ಇದರಲ್ಲಿ ಮಡಿವಂತಿಕೆ ಬೇಡ. ಮತ್ತೊಬ್ಬರಿಗೆ ನಮ್ಮ ಭಾಷೆ – ಹೇಳಿದ ರೀತಿಯಲ್ಲಿಯೇ ಅರ್ಥವಾದರೆ ಭಾಷೆಯ ಉದ್ದೇಶ ಸಫಲವಾದಂತೆ. ಒಂದು ಕಾಲದಲ್ಲಿ ಕನ್ನಡ ಭಾಷೆಯಲ್ಲಿ ‘ಪ’ಕಾರವೆಲ್ಲ ‘ಹ’ ಕಾರವಾಯಿತು. ಎರಡು ಅರ್ಥವಿರುವ ಅಥವಾ ಸಂಸ್ಕೃತ ಮೂಲದ ‘ಪ’ ಕಾರದ ಶಬ್ದಗಳನ್ನು ಹಾಗೇ ಉಳಿಸಿಕೊಂಡರು.
‘ಕಾವ್ಯದ ಕಾಲ ಮತ್ತು ಮನೋಧರ್ಮ ಬದಲಾದಂತೆ ಅದನ್ನು ಅರ್ಥೈಸುವ ರೀತಿಯೂ ಬದಲಾಗುತ್ತದೆ. ಇತ್ತೀಚೆಗೆ ಕಾವ್ಯದ ಅಸ್ವಾದನೆಗೆ ನಮ್ಮ ಸೈದ್ಧಾಂತಿಕ ಪಂಥಗಳು ಅಡ್ಡ ಬರುತ್ತಿವೆ. ಕಾವ್ಯದ ರಸಾಸ್ವಾದನೆಗೆ ಓದುಗರ ಮನೋಧರ್ಮ ಅತಿ ಮುಖ್ಯ ಮತ್ತು ಇದು ಕಾಲ ಕಾಲಕ್ಕೂ ಬದಲಾಗುತ್ತದೆ. ಕಾವ್ಯದ ಭಾವ ನಿಮ್ಮ ವಿವೇಚನೆಯ ಹಿನ್ನೆಲೆಯಲ್ಲಿ ಅದನ್ನು ಅರ್ಥೈಸಬೇಕು.’
‘ದೊಡ್ಡವರು ಬರೆದರು ಎಂದು ಶ್ರದ್ಧೆಯಿಂದ ಅದನ್ನು ಪ್ರಶ್ನೆ ಮಾಡಲು ಹೋಗುವುದಿಲ್ಲ. ಮನು ಧರ್ಮ ಶಾಸ್ತ್ರದಲ್ಲೂ, ಮೂಲಕ್ಕೆ ಕೃತಿಗೆ ಒಂದಷ್ಟು ವಿಚಾರಗಳನ್ನು ಸೇರಿಸಿದಂತಿದೆ. ಭಾಷಾ ಶೈಲಿಯನ್ನು ಗಮನಿಸಿ ಇದನ್ನು ತಿದ್ದಬಹುದು. ವಿದ್ವಾಂಸರು ಇದರ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಿ, ಸತ್ಯವನ್ನು ಹೊರತರಲು ಪ್ರಯತ್ನಿಸಬೇಕು. ಕೃತಿಯಲ್ಲಿ, ಇಂದಿನ ಸಮಾಜ ಒಪ್ಪದಿರುವ ವಿಚಾರವಿದ್ದರೆ ಅದನ್ನು ಬಿಟ್ಟು ಉಳಿದಿದ್ದನ್ನು ಸ್ವೀಕರಿಸಬಹುದು. ಒಂದೆರಡು ಒಪ್ಪಲಾಗದ ವಿಚಾರವಿದೆಯೆಂದ ಮಾತ್ರಕ್ಕೆ, ಕೃತಿಯನ್ನು ತಿರಸ್ಕರಿಸುವುದು ಸಾಧುವಲ್ಲ. ಸುಪ್ತಂಕರರು ಮಹಾಭಾರತದ 175 ಹಸ್ತಪ್ರತಿಗಳನ್ನು ಅಭ್ಯಸಿಸಿ ಸಂಪಾದಿಸಿದರು. ಇಂತಹ ಪ್ರಯತ್ನಗಳು ಆಗಬೇಕು’ ಎಂದು ಆಶಿಸಿದರು.
ಹಿರಿಯ ಪ್ರಚಾರಕರಾದ ಮೈ. ಚ. ಜಯದೇವ್, ಚಂದ್ರಶೇಖರ್ ಭಂಡಾರಿ, ಉತ್ಥಾನ ಸಂಪಾದಕ ಕೇಶವ ಭಟ್, ಅರುಣ್‌ಶೌರಿ ಮತ್ತು ವಾಯ್ಸ್ ಆಫ್ ಇಂಡಿಯಾದ ಸಂಪಾದಕರಾದ ಅಜ್ಜಂಪುರ ಮಂಜುನಾಥ್, ಲೇಖಕರಾದ ಟಿ.ಎ.ಪಿ. ಶೆಣೈ, ನಾಗಲಕ್ಷ್ಮಿ , ಶಾರದಾ ವಿಷ್ಣುಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

   

Leave a Reply