ಶ್ವಾಸಬಂಧ ಆಟಗಳು

ಸ್ವದೇಶೀ ಕ್ರೀಡೆ - 0 Comment
Issue Date : 29.05.2015


ಉಸಿರು ಬಿಡದೆ ಎಷ್ಟು ಹೊತ್ತು ಓಡಾಡಬಹುದು? ಎಷ್ಟು ಜನ ಎದುರಾಳಿಗಳನ್ನು ಮುಟ್ಟಿಬರಬಹುದು? ಇದು ಶ್ವಾಸಬಂಧ ಆಟಗಳಲ್ಲಿರುವ ಸ್ವಾರಸ್ಯ. ಕಬ್ಬಡ್ಡಿ ಆಟ ನಮ್ಮ ಪರಿಚಿತ ಆಟ. ಆದರೆ, ಇದರ ಜೊತೆ ಹುಡುತುತ್ತು, ಡೂಡು, ಗುಡುಗು, ಪಲ್ಲಿ , ಕವಡೆ ಹೀಗೆ ಬೇರೆ ಬೇರೆ ಪದಗಳನ್ನು ವಿವಿಧ ಬಳಸಿ ವಿವಿಧ ರೀತಿಯ ಶ್ವಾಸಬಂಧ ಆಟಗಳನ್ನು ಆಡಬಹುದು
ಕವಡೆ ಆಟದಲ್ಲಿ ಒಂದು ತಂಡದ ಹುಡುಗರು ಸಾಲಾಗಿ ಬಾಗಿ ನಿಂತುಕೊಳ್ಳುತ್ತಾರೆ. ಇನ್ನೊಂದು ತಂಡದವರು ಬಾಗಿರುವವರ ಬೆನ್ನಿನ ಮೇಲೆ ಕುಳಿತುಕೊಳ್ಳುತ್ತಾರೆ. ಆಟ ಪ್ರಾರಂಭದ ಶೀಟಿ ಆದ ಕೂಡಲೇ ಮೊದಲನೆಯರು ಭಾರವನ್ನು ಹೊತ್ತುಕೊಂಡು ಒಂದೇ ಉಸಿರಿನಲ್ಲಿ ‘ಕವಡೆ – ಕವಡೆ’ ಎನ್ನುತ್ತಾ ಸಾಲನ್ನು ಸುತ್ತಿಕೊಂಡು ತನ್ನ ಜಾಗಕ್ಕೆ ಬಂದು ನಿಲ್ಲಬೇಕು. ಅನಂತರ ಎರಡನೆಯವನು, ಆಮೇಲೆ ಮೂರನೆಯವನು – ಹೀಗೆ ಅನುಕ್ರಮವಾಗಿ ಆಡುತ್ತಾರೆ. ಭಾರ ಹೊತ್ತು ಬರುವಾಗ ಉಸಿರು ಬಿಟ್ಟರೆ ಆಟಗಾರರಿಬ್ಬರು ಜಾಗ ಅದಲು ಬದಲು ಮಾಡಿಕೊಳ್ಳಬೇಕು. ಯಾವ ತಂಡ ಕಡಿಮೆ ಸಮಯದಲ್ಲಿ ಪೂರ್ಣ ಆಟ ಮುಗಿಸುತ್ತದೋ ಆ ತಂಡಕ್ಕೆ ಗೆಲವು.
ಕುದುರೆ ಹುಡುತುತ್ತು ಆಟದಲ್ಲಿ ಒಂದು ತಂಡದ ಆಟಗಾರರು ವೃತ್ತಾಕಾರದಲ್ಲಿ ನಿಲ್ಲಬೇಕು. ಇನ್ನೊಂದು ತಂಡದ ಆಟಗಾರರು ಅವರ ಮೇಲೆ ಕೂಡಬೇಕು. ಮೇಲೆ ಕುಳಿತವನು ‘ತಿ.ತಿ.ತಿ’ ಎನ್ನುತ್ತಾ ಉಸಿರು ಬಿಡದೆ ಕುದುರೆಯನ್ನು ವೃತ್ತದ ಸುತ್ತಿ ಒಂದು ಸುತ್ತು – ಒಮ್ಮೆ ಎಡಕ್ಕೆ ಒಮ್ಮೆ ಬಲಕ್ಕೆ ಬಾಗುತ್ತಾ ಬರುವಂತೆ ಮಾಡುತ್ತಾನೆ. ಮೇಲೆ ಕುಳಿತವನು ಉಸಿರು ಬಿಟ್ಟರೆ ಅವನು ಕುದುರೆ ಆಗಬೇಕು. ಕುದುರೆ ಆಗಿದ್ದವನು ಉಸಿರು ಬಿಟ್ಟರೆ ಅವನು ಕುದುರೆ ಆಗಬೇಕು. ಕುದುರೆ ಆಗಿದ್ದವನು ಅವನ ಮೇಲೆ ಹತ್ತಿ ಕುಳಿತುಕೊಳ್ಳಬೇಕು. ಎಲ್ಲ ಆಟಗಾರರಿಗೂ ಮೇಲೆ ಹತ್ತಿ ಕುಳಿತುಕೊಳ್ಳುವ ಅವಕಾಶ ಸಿಗುವವರೆಗೆ ಆಟ ನಡೆಯುತ್ತೆ. ಯಾವ ಆಟಗಾರ ಹೆಚ್ಚು ಹೊತ್ತು ಉಸಿರು ಕಟ್ಟಲು ಸಮರ್ಥನಾಗಿ ಕುದುರೆ ಮೇಲೆ ಕುಳಿತುಕೊಂಡಿರುತ್ತಾನೋ ಅವನು ಗೆದ್ದಂತೆ.
ಮೇಲಿನ ಆಟಗಳಿಂದ ಬೇರೆಯಾದ ಉಸಿರು, ಬಿಟ್ಟು ಬಿಟ್ಟು ಆಡುವ ಆಟ ಒಂದಿದೆ. ಇದರಲ್ಲಿ ಸುಮಾರು 12 -15 ಮೀ. ಚೌಕ ಸ್ಥಳದಲ್ಲಿ ಒಂದೊಂದು ಕಡೆ ಒಂದೊಂದು ತಂಡ ನಿಲ್ಲಬೇಕು. ಒಂದು ತಂಡದ ಒಬ್ಬ ಆಟಗಾರ ಮಧ್ಯದ ಗೆರೆ ದಾಟಿ ಪಕ್ಷ ಪ್ರವೇಶಿಸಿ ‘ಪಲ್ಲಿ ಪಲ್ಲಿ’ ಎಂದು ಹೇಳುತ್ತಾ ಅವರನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಹಾಗೆ ಹೇಳುವಾಗ ಉಸಿರು ಬಿಡಬಹುದು. ಎದುರು ಪಕ್ಷದವರು ಇವನನ್ನು ಮುಟ್ಟಲು ಪ್ರಯತ್ನಿಸುತ್ತಾರೆ. ಆಗ ಅವನು ತಪ್ಪಿಸಿಕೊಂಡು ತನ್ನ ಜಾಗಕ್ಕೆ ಹಿಂತಿರುಗಿದರೆ, ಬಂಧಿಸಲು ಯತ್ನಿಸಿದವರು ಆಟದಿಂದ ಹೊರಗೆ ತಪ್ಪಿಸಿಕೊಂಡು ಬರಲು ಆಗದಿದ್ದರೆ ‘ಉಪ್ಪಳಿಗೊ, ನಾನು ಸೋತೆ’ ಎಂದು ಕೂಗಬೇಕು. ಆಗ ಅವನು ಆಟದಿಂದ ಹೊರಗೆ.
ಒಂದೊಂದು ಪಕ್ಷದವರು ಒಂದೊಂದು ಸಲ ಸರದಿಯ ಪ್ರಕಾರ ತಮ್ಮ ಕಡೆಯ ಒಬ್ಬೊಬ್ಬ ಆಟಗಾರರನ್ನು ಕಳುಹಿಸುತ್ತಿ ರಬೇಕು. ನಿಶ್ಚಿತ ಅವಧಿಯ ನಂತರ ಯಾವ ತಂಡದಲ್ಲಿ ಆಟದಿಂದ ಹೊರಗಾಗದೆ ಹೆಚ್ಚು ಜನ ಇರುತ್ತಾರೋ ಅವರು ಜಯಶಾಲಿಗಳು.
‘ಟವಲ್ ಹುತ್ತುತ್ತು’ ಆಟದಲ್ಲಿ ಪ್ರತಿಯೊಬ್ಬ ಆಟಗಾರನ ಬಳಿಯೂ ಒಂದೊಂದು ವಸ್ತ್ರವಿರುತ್ತದೆ. ಉದ್ದನೆಯ ವಸ್ತ್ರವಿದ್ದರೆ ಉತ್ತಮ. ಒಬ್ಬನು ಉಸಿರು ಕಟ್ಟಿ ‘ಹುತ್ತುತ್ತು’ ಎನ್ನುತ್ತ ತನ್ನ ವಸ್ತ್ರವನ್ನು ಅವರಿವರ ಮೇಲೆ ಬೀಸಿಕೊಂಡು ಅಂಗಣದಲ್ಲಿ ಓಡಾಡುತ್ತಾನೆ. ಅವನು ಯಾರಾನ್ನಾದರೂ ವಸ್ತ್ರದಿಂದ ತಾಗಿಸಿದರೆ ಅವನು ಆಟದಿಂದ ಹೊರ ಹೋಗುತ್ತಾನೆ. ಹೀಗೆ ಆಟ ಮುಂದುವರೆಯುತ್ತದೆ.
ಹಿಂದಿನ ವಾರದ ಹತ್ತು ಒಗಟುಗಳಿಗೆ ಉತ್ತರ
 1. ನಯನ 2. ಲೇಖನಿ 3. ಅನಾನಸ್ 4. ಕುಂಬಾರ 5. ದ ಮತ್ತು ‘ಪ’ ಇವುಗಳ ಮಧ್ಯ (ಧ/ಧನ/ಪ) 6. ಕುಂಭಕರ್ಣ 7. ತೆಂಗಿನಕಾಯಿ 8. ವಿಮಾನ 9. ಅಂಗಿ 10. ಪತ್ರ.

– ಶಿ.ನಾ.ಚಂದ್ರಶೇಖರ

   

Leave a Reply