ಸರಸ್ವತಿಪುತ್ರರನ್ನು ಸ್ನೇಹಸೂತ್ರದಲ್ಲಿ ಪೋಣಿಸಿದ ಚಕ್ರವರ್ತಿ

ವ್ಯಕ್ತಿ ಪರಿಚಯ - 0 Comment
Issue Date : 05.06.2015

ಆಸ್ಪತ್ರೆಯಲ್ಲಿ ಮರಣಾವಸ್ಥೆಯಲ್ಲಿದ್ದ ಪ್ರಿಯ ಚಕ್ರವರ್ತಿಯನ್ನು ನೋಡಿಬಂದ ಸೋದರಿಯೊಬ್ಬಳು ದೂರವಾಣಿಯಲ್ಲಿ ತಿಳಿಸಿದಳು – ‘ಜೀ ಎಲ್ಲರನ್ನೂ ನಗಿಸುತ್ತಾ ಸ್ವತಃ ಮುಗುಳ್ನಗುತ್ತಾ, ಉಳಿದವರ ನಗುವಿನಲ್ಲಿ ಸಹಜ ಸಂತೋಷವನ್ನು ಕಾಣುತ್ತಿದ್ದ ಚಕ್ರವರ್ತಿಯವರ ಪೇಲು ಮುಖ ನೋಡಿ ಕಣ್ಣೀರು ಬರುವಂತೆ ಆಗುತ್ತಿದೆ.’ ಅವಳು ಅತ್ಯಂತ ಖಿನ್ನಳಾಗಿದ್ದಳು.
ಇದು ಅಕ್ಷರಶಃ ನಿಜ. 45 ವರ್ಷಗಳಿಂದ ನನ್ನ ಒಡನಾಡಿಯಾಗಿದ್ದ ಆತ್ಮೀಯ ಚಕ್ಕಿಯ ಬಹುಮುಖೀ ವ್ಯಕ್ತಿತ್ವದ ಒಂದು ಮಿಂಚಷ್ಟೇ ಇದು. ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಆ ಪ್ರಸಿದ್ಧ ಪದ್ಯವನ್ನು ನೆನಪಿಸುವಂಥ ಹಾಸ್ಯಪ್ರಜ್ಞೆಯ ಮನುಷ್ಯ ನಮ್ಮ ಚಕ್ಕಿ. 1975 – 77ರ ತುರ್ತು ಪರಿಸ್ಥಿತಿಯ ಕೆಟ್ಟ ದಿನಗಳಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಸಂಘ ಪರಿವಾರದ ಅನೇಕ ಹಿರಿಯರು ‘ಮೀಸಾ’ ಬಂದಿಗಳಾಗಿದ್ದರು. ಕೆಲವರಂತೂ ಹತ್ತು ಹಲವು ಚಿಂತೆಗಳಿಂದಾಗಿ ನಿರುತ್ಸಾಹಿಗಳಾಗಿದ್ದರು. ಒಬ್ಬಿಬ್ಬರಂತೂ ನಕ್ಕು ಅನೇಕ ದಿನಗಳಾಗಿದ್ದಿರಬಹುದು. ಒಂದು ದಿನ ಸೊಂಟ ಬಗ್ಗಿಹೋಗಿ, ಕೋಲೂರಿಕೊಂಡು ಮೆಲ್ಲಗೆ ಕಷ್ಟಪಟ್ಟು ನಡೆದಾಡುತ್ತಿದ್ದ ಅಡಗೂಲಜ್ಜಿಯೊಬ್ಬಳು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದಳು. ಬಚ್ಚುಬಾಯಿಯ ಮಾತುಗಳಿಂದಲೇ ಎಲ್ಲರನ್ನೂ ಹೆಸರು ಹಿಡಿದು ಮಾತಾಡಿಸಿ ಹುರಿದುಂಬಿಸುತ್ತಿದ್ದಳು. ಈಕೆಯನ್ನು ನೋಡಿಯೇ ಎಲ್ಲರೂ ಅವಾಕ್ಕಾದರು. ಜೈಲರ್‌ನಂತೂ ಹೌಹಾರಿಹೋದ. ಅವನಿಗೆ ಸಿಟ್ಟು, ಭಯ, ಆಶ್ಚರ್ಯ ಎಲ್ಲವೂ ಏಕಕಾಲದಲ್ಲಿ ಉಂಟಾಗಿ ಅಜ್ಜಿಯನ್ನು ತರಾಟೆಗೆ ತೆಗೆದುಕೊಂಡ. ಕೂಡಲೇ ಅಜ್ಜಿ ತನ್ನ ಕೆಂಪು ಸೀರೆಯನ್ನು ಕಳಚಿ, ಕೊಲನ್ನು ಬಿಸಾಡಿ ಸೆಟೆದು ನಿಂತಾಗ… ನಮ್ಮ ಚಕ್ರವರ್ತಿಯ ಅಸಲೀ ಅವತಾರದ ಅನಾವರಣ! ಜೈಲರ್ ಮೊದಲ್ಗೊಂಡು ಎಲ್ಲರೂ – ಚಿಂತಿತರಾಗಿದ್ದವರೂ ಸೇರಿ – ಬಿದ್ದು ಬಿದ್ದು ನಕ್ಕಿದ್ದೇ ನಕ್ಕಿದ್ದು. ಜೈಲಿನ ಬಿಗುವಾತಾವರಣವೆಲ್ಲ ಮಂಗಮಾಯ!
ನಮ್ಮ ಚಕ್ರವರ್ತಿ ಹಾಸ್ಯ ಚಕ್ರವರ್ತಿಯೇ ಸರಿ!
ಚಕ್ರವರ್ತಿ 1966 – 67ರಲ್ಲಿ ಚಿಕ್ಕನಾಯಕನಹಳ್ಳಿಗೆ ಸಂಘದ ಪ್ರಚಾರಕನಾಗಿ ಬಂದಾಗ ಇನ್ನೂ ಹದಿಹರಯದವ. ಶಿಕ್ಷಣವೂ ಅಷ್ಟಕ್ಕಷ್ಟೆ. ಸರಸ್ವತಿಯ ಒಲವಂತೂ ಯಾಕೋ ಒದಗಿ ಬಂದಿರಲಿಲ್ಲ. ನೋಡಲಿಕ್ಕೂ ಮುಗ್ಧ ಮುಖದ ಕುಳ್ಳ. ನಾನು ಆಗ ತುಮಕೂರು ಜಿಲ್ಲಾ ಪ್ರಚಾರಕ್. ಮೊದಲ ನೋಟಕ್ಕೆ ನನಗನ್ನಿಸಿತ್ತು, ಇವನನ್ನು ಹೇಗೆ ಸಂಭಾಳಿಸುವುದು ಅಂತ. ಆದರೆ ಕೆಲವೇ ದಿನಗಳಲ್ಲಿ ಎಂದರಿವಾಯ್ತು – ಈ ಕುಳ್ಳ ಹುಡುಗ ಸಾಮಾನ್ಯನಲ್ಲ, ಸಂಘಕ್ಕೆ ಅಂಟಿಕೊಳ್ಳುವ ಗಟ್ಟಿ ಕುಳ. ಕೆಲವು ಸಮಯ ಕಳೆದಂತೆ ಅವನಲ್ಲಿ ಬೆಳೆದ ಕಾರ್ಯಕೌಶಲ್ಯವು ನನ್ನ ನಂಬಿಕೆಯನ್ನು ದೃಢಪಡಿಸಿತೆಂದು ಮೆಲಕು ಹಾಕಲು ಸಂತೋಷವಾಗುತ್ತೆ.
‘ಜೀವನದಲ್ಲಿ ನಾವು ಸಂಘವನ್ನು ಮನಸಾರೆ ಒಪ್ಪಿಕೊಂಡು ಅಪ್ಪಿಕೊಂಡಾಗ, ನಮ್ಮಿಂದ ತಪ್ಪುಗಳಾದಾಗಲೂ ಸಂಘ – ಜನನಿ ಆ ತಪ್ಪುಗಳನ್ನು ಕ್ಷಮಿಸುತ್ತಾ ಅಪ್ಪಿಕೊಂಡವನನ್ನು ಕೈ ಬಿಡದೆ ಅವಶ್ಯಕತೆಗೆ ತಕ್ಕಂತೆ ಅವನಲ್ಲಿ ಗುಣಗಳನ್ನು ಬೆಳೆಸುತ್ತಾ ತಾಯಿಗೆ ತಕ್ಕ ಮಗನನ್ನಾಗಿ ಬೆಳೆಸುತ್ತಾಳೆ’ – ಇದು ನನ್ನ ಹಾಗೂ ನನ್ನಂತೆಯೇ ಇನ್ನೂ ಹಲವರ ನಂಬಿಕೆ ಹಾಗೂ ಅನುಭವ. ಪ್ರಚಾರಕನಾಗಿ ಚಕ್ರವರ್ತಿಯಲ್ಲೂ ನಾನು ಇದನ್ನೇ ಕಂಡೆ.
ಕೇರಳದ ‘ಬಾಲಗೋಕುಲ’ದ ಯಶಸ್ವೀ ಪ್ರಯೋಗವನ್ನು ಕರ್ನಾಟಕದಲ್ಲಿ ಪ್ರಾರಂಭ ಮಾಡಿದಾಗ ಸಹಜವಾಗಿ ಆ ಜವಾಬ್ದಾರಿ ಬಂದಿದ್ದು ಚಕ್ರವರ್ತಿಯ ಹೆಗಲಿಗೆ. ಸಂತೋಷವಾಗಿ ಒಪ್ಪಿಕೊಂಡ ಚಕ್ರವರ್ತಿ ಅದನ್ನು ನಮ್ಮ ಪ್ರಾಂತದಲ್ಲಿ ಬೆಳೆಸಿದರು. ಇಂದು ಬಾಲಗೋಕುಲಕ್ಕೆ ಸಿಕ್ಕಿರುವ ಸ್ವೀಕಾರ್ಯತೆಗೆ ಚಕ್ರವರ್ತಿ ಕೊಡುಗೆ ಮಹತ್ವದ್ದು.
ಮಕ್ಕಳಿಗಾಗಿ ಬೇಸಿಗೆ ಶಿಬಿರ ಸುಮ್ಮನೆ ಖುಷಿಯಾಗಿ ಕಾಲ ಕಳೆಯುವ ಫ್ಯಾಶನ್ ಆಗಬಾರದು. ಅಥವಾ ಅದು ವ್ಯಾಪಾರವೂ ಆಗಬಾರದು – ಈ ಚಿಂತನೆಯನ್ನು ಮಾಡಿದ ಚಕ್ರವರ್ತಿ ಅದನ್ನು ಸಂಸ್ಕಾರದ ಪ್ರಬಲ ಮಾಧ್ಯಮ ಮಾಡುವಲ್ಲಿ ಬಹಳ ಶ್ರಮಿಸಿರುವುದು ನಮ್ಮೆಲ್ಲರಿಗೂ ತಿಳಿದೇ ಇದೆ.
ಹರಟೆ ಎಂಬುದು ಕಾಡು ಹರಟೆಯಷ್ಟೇ ಆಗಬಾರದು. ಮನರಂಜನೆಯ ಜತೆ ಮನೋವಿಕಾಸದ ಮಾಧ್ಯಮವೂ ಆಗಬೇಕೆಂಬ ಗಟ್ಟಿ ಆಲೋಚನೆ ಚಕ್ರವರ್ತಿಯವರದು. ಒಬ್ಬಿಬ್ಬ ಪ್ರತಿಭಾವಂತರನ್ನು ಜೋಡಿಸಿಕೊಂಡು ಅದಕ್ಕೊಂದು ಅರ್ಥಪೂರ್ಣ ಆಯಾಮ ನೀಡುವುದರಲ್ಲಿ ಅವರು ಸಫಲರಾ ದರು. ಇಂದು ಅವರ ಸೋದರ ಹಿರೇಮಗಳೂರು ಕಣ್ಣನ್ ಈ ನಿಟ್ಟಿನಲ್ಲಿ ಮಿಂಚುತ್ತಿರುವ ಹಿಂದೆ ಚಕ್ರವರ್ತಿಯ ಕೈವಾಡ ಇದೆ.
ಚಕ್ರವರ್ತಿ ಸರಸ್ವತಿಪುತ್ರನಲ್ಲ. ಆದರೆ ಸರಸ್ವತಿಪುತ್ರರನ್ನು ಹಿಡಿದು ಅವರನ್ನು ತನ್ನ ಸ್ನೇಹದ ಸೂತ್ರದ ಮೂಲಕ ಸಮಾಜ ಕಾರ್ಯಗಳಿಗೆ ಜೋಡಿಸಿದ ಪ್ರತಿಭೆ ಚಕ್ರವರ್ತಿಯ ಒಂದು ‘ಪಹಚಾನ್’ (Identity). ಅಮೋಘ ಕಲಾವಿದ ಬಿ.ಕೆ.ಎಸ್. ವರ್ಮ, ಅದ್ಭುತ ವಿದ್ವಾಂಸ ಶತಾವಧಾನಿ ಗಣೇಶ್, ಉತ್ತಮ ವಾಗ್ಮಿ ಚಕ್ರವರ್ತಿ ಸೂಲಿಬೆಲೆ – ಹೀಗೆ ಹತ್ತು ಹಲವು ಪಟುಗಳನ್ನು ಒಂದು ವೇದಿಕೆಯ ಮೇಲೆ ತಂದರು ನಮ್ಮ ವಾಮನಪಟು ಚಕ್ರವರ್ತಿ. ಚಕ್ರವರ್ತಿಯ ಸ್ನೇಹಕ್ಕೆ ಅವರುಗಳು ಮಣಿದರು. ಇಂದು ಪ್ರಸಿದ್ಧವಾಗಿರುವ ಚಿತ್ರ, ಕಾವ್ಯಗಳ ಸುಂದರ ಸಮನ್ವಯದ ‘ಯುನಿಕ್’ ಕಾರ್ಯಕ್ರಮಗಳನ್ನು ನೂರಾರು ಸಂಖ್ಯೆಯಲ್ಲಿ ಮೇಲ್ಕಂಡ ಮಹಾನುಭಾವರು ನಡೆಸಿಕೊಟ್ಟಿದ್ದಾರೆ.
ಮಕ್ಕಳ ಬೇಸಿಗೆ ಶಿಬಿರ, ಕುಟುಂಬ ಮಿಲನ ಕಾರ್ಯಕ್ರಮಗಳಿಗೆ ಹೊಸ ಹೊಸ ಆಯಾಮಗಳನ್ನು ಜೋಡಿಸಿ ಅವುಗಳನ್ನು ಸಮಾಜಮುಖಿ ಮಾಡಿದ ಶ್ರೇಯಸ್ಸು ಕೂಡ ಚಕ್ರವರ್ತಿಯದು.
ಸಂಘ ಪ್ರಚಾರಕ ಜೀವನಯಾತ್ರೆಯಲ್ಲಿ ಸಂಸ್ಕಾರ ಭಾರತಿಯ ಜವಾಬ್ದಾರಿ ಹೊತ್ತ ನಂತರ ವಿಶೇಷವಾಗಿ ನಮ್ಮ ಪ್ರಾಂತದಲ್ಲಿ ಸಂಸ್ಕಾರ ಭಾರತಿಯ ಕಾರ್ಯವನ್ನು ಬೆಳೆಸುವುದರಲ್ಲಿ ಚಕ್ರವರ್ತಿ ತಮ್ಮ ಶಕ್ತಿ ಸುರಿದಿದ್ದಾರೆ. ಕರ್ನಾಟಕದಲ್ಲಿ ಹಲವಾರು ಕಲಾವಿದರನ್ನು ಸಂಸ್ಕಾರ ಭಾರತಿಗೆ ಜೋಡಿಸಿ ಮರೆತುಹೋಗುತ್ತಿದ್ದ ರಂಗವಲ್ಲಿಯಂತಹ ಕಲೆಗಳ ಜೀರ್ಣೋದ್ಧಾರ ಮಾಡುವಲ್ಲಿ ಅವರು ತಮ್ಮ ಶಕ್ತಿಯನ್ನು ಸುರಿದರು. ಕುಟುಂಬ ಪ್ರಬೋಧನ್ ಕೆಲಸದಲ್ಲಿಯೂ ಚಕ್ರವರ್ತಿಯ ಸಹಾಯಹಸ್ತ ಸ್ಮರಣೀಯ.
ಇನ್ನಷ್ಟು ಕಾಲ ಬದುಕಿ, ಒಪ್ಪಿಕೊಂಡಿರುವ ಕಾರ್ಯಕ್ಕೆ ಮತ್ತಷ್ಟು ರಭಸವನ್ನು ಕೊಡಬಲ್ಲವರಾಗಿದ್ದ ಆತ್ಮೀಯ ಚಕ್ರವರ್ತಿಯನ್ನು ವಿಧಿ ಕ್ರೂರವಾಗಿ ಸೆಳೆದುಕೊಂಡು ಬಿಟ್ಟಿದೆ. ಭಾರವಾದ ಹೃದಯದಿಂದ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ.

– ಸು. ರಾಮಣ್ಣ, ಹುಬ್ಬಳ್ಳಿ

   

Leave a Reply