ಪ್ರವಾಸ - 0 Comment
Issue Date :

ಕಳೆದ 24 ಏಪ್ರಿಲ್ 2015 ಕೇದಾರನಾಥ ದೇವಸ್ಥಾನದ ಬಾಗಿಲು ದರ್ಶನಕ್ಕೆ ತೆಗೆಯುತ್ತೆ, ಎನ್ನುವ ವಿಷಯ ತಿಳಿಯುತ್ತಿದ್ದಂತೆ, ಮನಸ್ಸು ಕೇದಾರಖಂಡಕ್ಕೆ ಎಳೆಯತೊಡಗಿತು. ತಕ್ಷಣವೇ ವಿಮಾನದಲ್ಲಿ ದೆಹಲಿಗೆ ಟಿಕೆಟ್ ತೆಗೆದು, 26ಕ್ಕೆ ಅಮ್ಮನನ್ನು ಕರೆದುಕೊಂಡು ಹೊರಟಾಗ, ಅನೇಕ ಸವಾಲುಗಳನ್ನು ಹಾಕಿ ಕೇದಾರೇಶ್ವರ ಕರೆದದ್ದು ಎನ್ನುವುದು ಗಮನಕ್ಕೆ ಬರಲೇ ಇಲ್ಲ. ಹೃಷಿಕೇಶಕ್ಕೆ ಹೋಗಿ ರಾತ್ರಿ ಕೈಲಾಸಾಶ್ರಮದಲ್ಲಿ ಉಳಿದು, ಬೆಳಿಗ್ಗೆ ರುದ್ರಪ್ರಯಾಗದ ಕಡೆ ಪ್ರಯಾಣ ಬೆಳೆಸಿದಾಗ, ಇನ್ನೇನು ಕೇದಾರೇಶ್ವರನ ಹತ್ತಿರ ಬಂದೇ ಬಿಟ್ಟೆ ಎನ್ನುವ ಭಾಸ. ಆದರೆ ಮುಂದಿನದರ ಬಗ್ಗೆ ತಿಳಿಯದೆ ವ್ಯವಸ್ಥೆ ಮಾಡಿಕೊಂಡೇ ಹೊರಟಿದ್ದೇನೆ ಎನ್ನುವ (ಅಹಂ) ವಿಶ್ವಾಸವಿದ್ದುದರಿಂದ, ನೇರ ರುದ್ರಪ್ರಯಾಗದಲ್ಲಿಳಿದು ಊಟ ಮಾಡಿ, ಜೀಪಿನಲ್ಲಿ ಹೊರಟು ಮೊದಲೇ ಮಾತನಾಡಿದ್ದಂತೆ ಗುಪ್ತಕಾಶಿ ದಾಟಿ ಇರುವ ನಾರಾಯಣಕೋಟೆಯ ಹತ್ತಿರದ ಹೆಲಿಪ್ಯಾಡ್‌ಗೆ ಬಂದು ಕೇದಾರನಾಥಕ್ಕೆ ಟಿಕೆಟ್ ತೆಗೆದುಕೊಳ್ಳಲು ಹೋದಾಗ ಇಲ್ಲ, ಇನ್ನು ನಮಗೆ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ, ನಾಳೆ ಸಂಜೆ ಬನ್ನಿ ನೋಡೋಣ; ಬೆಟ್ಟವೇ ತಲೆ ಮೇಲೆ ಬಿದ್ದಂತೆ ಅನಿಸಿತು. ಅವರ ಹತ್ತಿರ ಮಾತನಾಡಿದರೂ ಪ್ರಯೋಜನವಿಲ್ಲವೆನಿಸಿ, ಅಮ್ಮನನ್ನು ಅಲ್ಲಿಯೇ ಕೂರಿಸಿ ಕಳೆದ ಬಾರಿ ಹೋದಾಗ ನಾನು ಉಳಿದಿದ್ದ ಮನೆಗೆ ಹೋದೆ. ನೀವು ಇನ್ನೊಂದು ವಾರ ಬಿಟ್ಟು ಬರಬೇಕಿತ್ತು, ಇಲ್ಲಿಯೇ ಉಳಿದುಬಿಡಿ ಎಂದರು… ತಲೆಯೆಲ್ಲಾ ಯೋಚನೆ ಗೂಡಾಯಿತು. . ಅಲ್ಲಿಯೇ ಒಂದು ಗಂಟೆ ಕಳೆದು, ಶಿವನ ಮೇಲೆ ಮನಸ್ಸಿಟ್ಟು, ಸಿಕ್ಕ ಟ್ಯಾಕ್ಸಿ ಹಿಡಿದು, ಅಮ್ಮನನ್ನು ಕರೆದುಕೊಂಡು ಸೋನ್‌ಪ್ರಯಾಗ ಕಡೆ ಹೊರಟೆ. ಆ ದುರ್ಗಮ ರಸ್ತೆಯಲ್ಲಿ ಸಾಗಿ ಕತ್ತಲಾಗುವ ವೇಳೆಗೆ ಅಲ್ಲಿಗೆ ತಲುಪಿದೆವು. (ಈಗ ಗೌರಿಕುಂಡ ಪೂರ್ತಿ ಹಾಳಾಗಿರುವುದರಿಂದ, ಸೋನ್‌ಪ್ರಯಾಗದಿಂದ ರಸ್ತೆ ಮಾರ್ಗ ಆರಂಭವಾಗುತ್ತೆ).
ಸಂಜೆಯಾದರೂ 500-600 ಜನ ಇದ್ದರು. ರೂಮ್ ಮಾಡಲು ಜನ ಅತ್ತಿಂದಿತ್ತ ಓಡಾಡುತ್ತಿದ್ದರು. ನಾವು ನಮ್ಮ ಬಯೋಮೆಟ್ರಿಕ್ ಮಾಡಿಸಿ ಬರುವಷ್ಟರಲ್ಲಿಯೇ, ಮೆಡಿಕಲ್‌ನವರು ಮುಚ್ಚಿ ಹೊರಟಿದ್ದರು. ಬೆಳಿಗ್ಗೆ 5 ಗಂಟೆಗೆ ಬನ್ನಿ ಎಂದರು. ಅಲ್ಲಿನ ಜಿಲ್ಲಾ ಪಂಚಾಯಿತಿ ಈ ಜವಾಬ್ದಾರಿ ತೆಗೆದುಕೊಂಡಿತ್ತು, ಅವರ ಜೊತೆ ಮಾತನಾಡುತ್ತ ವಿವರಗಳನ್ನು ಕೆದಕತೊಡಗಿದೆ. ದಿನಕ್ಕೆ ಒಂದರಿಂದ ಒಂದೂವರೆ ಸಾವಿರ ಜನರ ನೋಂದಣಿ ಆಗುತ್ತೆ, ಇನ್ನೂ ರಸ್ತೆಯಲ್ಲಿ ತುಂಬಿರುವ ಹಿಮದಿಂದ ತೆರವು ಮಾಡುತ್ತಿದ್ದೇವೆ. ಗೌರಿಕುಂಡದ ರಸ್ತೆ ಹಾಳಾಗಿರುವುದರಿಂದ ಇನ್ನೊಂದು ರಸ್ತೆ 17 ಕಿ.ಮೀ. ಆದರೆ ಮೊದಲ ವಾರದಲ್ಲಿಯೇ ಯಾತ್ರಿಗಳು ಜಾಸ್ತಿಯಾಗಿದ್ದಾರೆ ಎಂದರು.
ಅಷ್ಟರಲ್ಲಿಯೇ ಚಳಿ ಜಾಸ್ತಿಯಾಗಿದ್ದರಿಂದ, ಮೊದಲು ರೂಮು ಮಾಡಿ ಎಂದ ಆ ಅಧಿಕಾರಿ ಕೊನೆಗೆ ಇಲ್ಲಿ ರೂಮಿಗೆ ತುಂಬಾ ಡಿಮ್ಯಾಂಡ್ ಇದೆ, ಎಂದು ತಾವೇ ಎದುರುಗಡೆಯಲ್ಲಿಯೇ ಇರುವ ಮೊದಲ ಮಹಡಿಯಲ್ಲಿ ಒಂದು ರೂಮು ಮಾಡಿಕೊಟ್ಟರು. ಲಗೇಜು ಇಟ್ಟು, ಪೂರ್ತಿ ಉಣ್ಣೆ ಬಟ್ಟೆಗಳಿಂದ ಪ್ಯಾಕ್ ಅಗಿ ಕೆಳಗೆ ಬಂದು ಮತ್ತೆ ಅಲ್ಲಿ ಪಂಚಾಯಿತಿ ಕಛೇರಿಯಲ್ಲಿ ಕುಳಿತು, ಹೆಲಿಕ್ಯಾಪ್ಟರ್‌ಗೆ ಅನುಮತಿ ಸಿಕ್ಕಿದೆಯೇ? ಎಂದು ವಿಚಾರಿಸತೊಡಗಿದೆ. ರಾತ್ರಿ ಒಂಬತ್ತರವರೆಗೂ ಸಿಕ್ಕಿಲ್ಲ ಎನ್ನುವ ಉತ್ತರ ದೊರಕಿತು. ಮನೆಯಿಂದ ಅಣ್ಣ – ತಮ್ಮ ಇಬ್ಬರ ಪೋನು ಮೇಲಿಂದ ಮೇಲೆ, ಒಂದೆರೆಡು ದಿನ ಆದರೂ ಪರವಾಗಿಲ್ಲ, ರಸ್ತೆ ಮಾರ್ಗವಾಗಿ ಅಮ್ಮನನ್ನು ಕರೆದುಕೊಂಡು ಹೋಗಬೇಡ, ರಿಸ್ಕ್ ಯಾತಕ್ಕೆ ಎಂದು ಹೇಳಲು ತೊಡಗಿದಾಗ, ಗೊಂದಲದಲ್ಲಿ ಮುಳುಗಿದೆ. ಕೇದಾರೇಶ್ವರ ನಿನ್ನ ದರ್ಶನಕ್ಕೆಂದು ನೀನೇ ಕರೆಸಿಕೊಂಡೆ, ಆದರೆ ಯಾತಕ್ಕೆ ಈ ಪರೀಕ್ಷೆ? ನಿರ್ಧಾರ ಮಾಡಲು ಸಾಧ್ಯವಾಗಲಿಲ್ಲ, ಅಮ್ಮನೂ ಆಯಿತು ನಾಳೆವರೆಗೂ ಕಾಯೋಣ ಬಿಡು ಎಂದಾಗ, ಕೊನೆ ಪ್ರಯತ್ನವೆಂಬಂತೆ, ಮತ್ತೆ ಆ ಅಧಿಕಾರಿಯ ಹತ್ತಿರ (ರಾತ್ರಿ ಹತ್ತು ಗಂಟೆ) ಹೆಲಿ ಸೇವಾಗೆ ಪೋನು ಮಾಡಿಸಿದರೂ ಪ್ರಯೋಜನವಾಗಲಿಲ್ಲ, ಕೊನೆಗೆ ಅತನೇ ‘ಡೋಲಿ ಸರ್ವಿಸ್‌ಗೆ ಇನ್ನೂ ಅನುಮತಿ ಸಿಕ್ಕಿಲ್ಲ, ಆದರೆ ನಾನು ಮಾತನಾಡಿ ಬೆಳಿಗ್ಗೆ 5-30ಗೆ ಬರಲು ಹೇಳುತ್ತೇನೆ ನೀವು ಹೋಗಿಬನ್ನಿ’ ಎಂದಾಗ, ಮತ್ತೆ ಮನಸ್ಸು ಗೊಂದಲದ ಗೂಡಾಯಿತು. ಆದರೂ ಗಟ್ಟಿ ಮನಸ್ಸು ಮಾಡಿ ಹೊರಡೋಣವೇ ಎಂದು ಅಮ್ಮನನ್ನು ಕೇಳಿ, ಡೋಲಿಯವನಿಗೆ ಫೋನು ಮಾಡಿ ಬೆಳಿಗ್ಗೆ 6 ಗಂಟೆಗೆ ಬರಲು ತಿಳಿಸಿದ್ದಾಯಿತು. ನಂತರ ತಿಳಿದದ್ದು, ಡೋಲಿಯವನನ್ನು ಹಿಡಿಯಲು ಗೌರಿಕುಂಡದ ತನಕ 2 ಕಿ.ಮೀ. ನಡೆಯಲೇಬೇಕು, ಎತ್ತರದ ಬೆಟ್ಟ ಹತ್ತಲು ಸಾಧ್ಯವೇ ಎನ್ನುವ ಅನುಮಾನ ಆರಂಭವಾಯಿತು. ಶಿವನ ಮೇಲೆ ಭಾರ ಹಾಕಿ ಮಲಗಿದ್ದಾಯ್ತು,
ಶೀತ – ಥಂಡಿ ಗಾಳಿಗೆ ಅರೆಬರೆ ನಿದ್ದೆ ಮಾಡಿ, ಬೆಳಿಗ್ಗೆ 4 ಗಂಟೆಗೆ ಎದ್ದು, ಕೆಳಗಿನಿಂದ ಬಿಸಿ ನೀರು ತರಿಸಿ ಸ್ನಾನ ಮುಗಿಸಿದವರೇ ಕೆಳಗೆ ಬಂದರೆ, ಆಗಲೇ ಮೆಡಿಕಲ್ ಚೆಕಪ್‌ಗೆ ಉದ್ದನೆಯ ಸಾಲು. 5-80 ವರುಷದವರನ್ನು ನೋಡಿದ್ದು ಸೋಜಿಗವೆನಿಸಿದರೂ ಸತ್ಯ. ಆ ಶಿವನ ಮಹಿಮೆ ಬಲ್ಲವರ‌್ಯಾರು?ಯಾರನ್ನು ತನ್ನ ಹತ್ತಿರ ಕರೆಸಿಕೊಳ್ಳುತ್ತಾನೋ ಗೊತ್ತಿಲ್ಲ. ಅಷ್ಟರಲ್ಲಿಯೇ ಆ ಅಧಿಕಾರಿ ಬಂದವರೇ (ಕುಶಾಲ್ ರಾವತ್) ನನ್ನನ್ನು – ಅಮ್ಮನನ್ನು ಕರೆದುಕೊಂಡು ಹೋಗಿ ಸೀದಾ ಡಾಕ್ಟರ್ ಮುಂದೆ ಕೂರಿಸಿದ್ದಾಯ್ತು, ಚೆಕಪ್ ಅಗಿ ಫಿಟ್ ಎಂಬ ಸರ್ಟಿಫೀಕೇಟ್ ಹಿಡಿದು, ಹೊರ ಬಂದ ತಕ್ಷಣ, ಅವರೇ ನಮ್ಮನ್ನು ಕರೆದುಕೊಂಡು (ಅವರ ಕಛೇರಿಯಲ್ಲಿಯೇ ಸೂಟ್‌ಕೇಸು – ಲ್ಯಾಪ್‌ಟ್ಯಾಪ್ ಇಟ್ಟು, ಕೈಬ್ಯಾಗ್ ತೆಗೆದುಕೊಂಡೆವು) ಗೌರಿಕುಂಡದ ಕಡೆ ಹೊರಡುವ ಹತ್ತಿರ ಪೊಲೀಸರಲ್ಲಿ ನಮ್ಮ ಹೆಸರನ್ನು ಬರೆಯಿಸಿ (ಮೊದಲು ಇದು ಏನೂ ಇರಲಿಲ್ಲ) ಅಲ್ಲಿಂದ ಮುಂದೆ ಸುಮಾರು 500 ಮೀಟರ್ ದೂರ ಕಚ್ಛಾ ರಸ್ತೆಯಲ್ಲಿ ಕರೆದುಕೊಂಡು ಹೋಗಿ ಅಲ್ಲಿದ್ದ ಜೀಪು ಹತ್ತಿಸಿ ಎಂದು ಹೇಳಿ ಹೋದರಾತ. ಡೋಲಿಯಲ್ಲಿ ಸಾಧ್ಯವಾದರೆ ಹೋಗಿ ಇಲ್ಲವಾದರೇ ಗೌರಿಕುಂಡ ನೋಡಿಕೊಂಡು ಬಂದು ಬಿಡಿ. ಎರಡು ದಿನ ಕಾದು ಹೆಲಿಯಲ್ಲಿ ಹೋಗಬಹುದು ಎಂದರಾತ. ಆ ಜೀಪು ನಮ್ಮನ್ನು 2 ಕಿ.ಮೀ. ಕಡಿದಾದ ರಸ್ತೆಯಲ್ಲಿ ಕರೆದುಕೊಂಡು ಇಳಿಸಿ ವಾಪಾಸ್ಸು ಹೋಯಿತು. ಅಲ್ಲಿ ಯಾವುದೋ ಡೋಲಿಯಿಲ್ಲ ಕೇಳಿದರೆ, ನೀವು ಇಲ್ಲಿಂದ ಒಂದೂವರೆ ಕಿ.ಮೀ. ನಡೆದು ಹೋದರೆ ಅಲ್ಲಿ ಡೋಲಿ ಇದೆ ಎಂದು ರಸ್ತೆ ತೋರಿಸಿದರು. ಅದನ್ನು ನೋಡಿ ಎದೆ ಝಲ್ಲೆಂದಿತು. ಕಡಿದಾದ ರಸ್ತೆ, ಬೆಟ್ಟ ಏರಬೇಕು, ವಾಪಾಸ್ಸು ಹೋಗುವುದು ಸೂಕ್ತ ಎಂದುಕೊಂಡು, ಕೇದಾರನಾಥನನ್ನು ನೆನೆಸಿಕೊಂಡು, ಡೋಲಿಯವನಿಗೊಂದು ಫೋನು ಮಾಡಿದೆ. ಕೆಳಗೆ ಡೋಲಿ ಕಳಿಸುತ್ತೇನೆ ಎಂದು ಹೇಳಿದ, ಹತ್ತು ನಿಮಿಷದಲ್ಲಿಯೇ ಡೋಲಿ ಬಂತು, ಅಮ್ಮನನ್ನು ಕೂರಿಸಿದೆ. ನೀವು ನಡೆದು ಮೇಲೆ ಬನ್ನಿ ಎಂದು ಹೇಳಿ ಹೊರಟರು. ನನ್ನ ಕಾಲಿನ ನೋವನ್ನು ಶಿವನಿಗೊಪ್ಪಿಸಿ ನಡೆದು ಹೊರಟೆ, ಸ್ವಲ್ಪ ನಡೆಯುವಷ್ಟರಲ್ಲಿಯೇ ಮತ್ತೊಂದು ಡೋಲಿಯನ್ನು ಕಳಿಸಿದ. ಅದರಲ್ಲಿ ನಾನು ಕುಳಿತು ಹೊರಟಿದ್ದಾಯ್ತು. ಅಲ್ಲಿಂದ ಮುಂದಿನದು ಅತೀ ದುರ್ಗಮ ರಸ್ತೆ, ವರ್ಣಿಸಲಸದಳ. ಅಲ್ಲಿಂದ 2 ಕಿ.ಮೀ. ಮೇಲೆ ಹತ್ತಿದ ನಂತರ ಸಿಕ್ಕಿತು ಗೌರಿಕುಂಡ. ಅಲ್ಲಿ ಒಂದು ಚೆಕ್‌ಪೋಸ್ಟ್. ಹನ್ನೊಂದು ವರುಷದ ಹಿಂದೆ ನೋಡಿದ ಸುಂದರ ಗೌರಿಕುಂಡ, ಬಿಸಿನೀರಿನ ಬುಗ್ಗೆ ನೆನಪಾಯಿತು. ಪ್ರಕೃತಿ ಮಾತೆಯ ಕೋಪಕ್ಕೆ ತುತ್ತಾದ ಕೇದಾರಖಂಡದ ಸ್ಥಿತಿ ಹೊಟ್ಟೆ ಕಲಕಿದಂತಾಯಿತು. ಆದರೆ ಆ ಶಿವನ ಲೀಲೆಯ ಮುಂದೆ ಏನೂ ಇಲ್ಲ. ಜೀವನದ ಸತ್ಯ ಅರ್ಥವಾಗುವ ಮತ್ತೇ ಮತ್ತೇ ಕೈ ಬೀಸಿ ಕರೆಯುವ ಆಧ್ಯಾತ್ಮಿಕ ಸ್ಥಳ.
ಅಲ್ಲಿ ಡೋಲಿಗೆ ಒಬ್ಬೊಬ್ಬರಿಗೆ 4900 ರೂ ಕಟಿ ್ಟ(ಒಂದು ಕಡೆಗೆ)ನಮ್ಮ ಪಯಣ. ನಾಲ್ಕು ಜನರ ಒಂದು ಡೋಲಿ, ಒಟ್ಟು ಎಂಟು ಜನ ನೇಪಾಳಿಗಳು ನಮ್ಮನ್ನು ಹೊತ್ತು ಸಾಗಿದರು. ಅವರು ಒಂದೊಂದು ಹೆಜ್ಜೆ ಇಡುವಾಗಲೂ ನಮಗೆ ನೋವಾಗುತ್ತಿತ್ತು (ನಮಗದು ಅನಿವಾರ್ಯ) ಹಾಗೇ ಏರಲೇ ಕಷ್ಟ, ಅಂತಾದ್ದು, ಹೆಗಲ ಮೇಲೆ ನಮ್ಮನ್ನು ಹೊತ್ತು ಅ ಕಡಿದಾದ ಪರ್ವತ ಏರುವುದು. . ಅವರು ಹೆಗಲು ಬದಲಾಯಿಸುವುದು…ಅಬ್ಬಬ್ಬಾ ಮೇಲಕ್ಕೆ ಹೋದಂತೆಲ್ಲಾ ಉಸಿರು ಸಿಕ್ಕಿಹಾಕಿಕೊಳ್ಳುತ್ತಿತ್ತು, ನನ್ನನ್ನು ಹೊತ್ತವರು ತೀರಾ ಹುಡುಗರು(18-25 ವರುಷದವರು) ಹೊಸ ರಸ್ತೆ ಮಾಡಿದ್ದರಿಂದ 17 ಕಿ.ಮೀ. ದೂರ ಕ್ರಮಿಸಬೇಕಿತ್ತು. ಬೆಟ್ಟದಿಂದ ಬೆಟ್ಟಕ್ಕೆ ಬದಲಾಗುವಾಗ ತುಂಬಾನೇ ಕಷ್ಟವಾಗುತ್ತಿತ್ತು. ರಸ್ತೆಯುದ್ದಕ್ಕೂ ಎರಡು ವರುಷದ ಹಿಂದೆ ನಡೆದ ಆ ಪ್ರಳಯದ ಸ್ಥಿತಿ ಈಗಲೂ ಎದ್ದು ಕಾಣುತ್ತಿತ್ತು. ರಾಮಬಾಣದ ಹತ್ತಿರ ಬಂದಾಗ ಏನೂ ಕುರುಹೇ ಇಲ್ಲದಂತೆ ಇಡೀ ಊರೇ ಕೊಚ್ಚಿಹೋಗಿತ್ತು. ಅಲ್ಲಿ ನೆನಪಾದವರು ಅಲ್ಲಿ ಕೊಚ್ಚಿಹೋದ ಮಂಡ್ಯದ 13 ಜನ. ಅವರಿಗೊಂದು ನಮನ ಸಲ್ಲಿಸಿ, ಅಲ್ಲಿಂದ ನದಿ ದಾಟಿ ಬಲಗಡೆಯ ಪರ್ವತಗಳಿಗೆ ನಾವು ನಮ್ಮ ರಸ್ತೆ ಬದಲಾಯಿಸಿದೆವು. ಹೊರಟರೂ ತಿರುತಿರುಗಿ ನೋಡುತ್ತಿದ್ದೆ. ಎಷ್ಟೋ ಸಾವಿರ ಜನ ಈಗಲೂ ಅಲ್ಲಿದ್ದಾರೆ ಅನಿಸುತ್ತಿತ್ತು. ಅಲ್ಲಿಂದ ಮುಂದೆ ಇರುವುದು ಅತೀ ಕಡಿದಾದ ಮತ್ತು ಹಿಮಭರಿತ ಪ್ರದೇಶ. ದಾರಿಯಲ್ಲಿರುವ ಹಿಮ ಸರಿಸುವ ಪ್ರಯತ್ನದಲ್ಲಿ ಅನೇಕರಿದ್ದರು. ಮಧ್ಯದಲ್ಲಿ ಒಂದು ಕಡೆ ಕಾಫಿ- ಮತ್ತೊಂದು ಕಡೆ ಊಟದ ವ್ಯವಸ್ಥೆ. ಸರ್ಕಾರಿ ಬೆಲೆ 40 ರೂ.ಗೆ ಊಟ. ಒಂದೆರಡು ತುತ್ತು ಅನ್ನ ತಿನ್ನುವಷ್ಟರಲ್ಲಿ ಸಾಕೆನಿಸಿತು. ಅಮ್ಮ ಎರಡು ಕಡೆ ಇಳಿದು ಹತ್ತಲು ಸ್ವಲ್ಪ ಪ್ರಯತ್ನ ಪಟ್ಟರು. ನಾನೊಂದೆರಡು ಕಡೆ ಇಳಿದು ಸ್ವಲ್ಪ ನಡೆಯುವಷ್ಟರಲ್ಲಿಯೇ ಸಾಕಾಗಿಬಿಡುತ್ತಿತ್ತು. ಸಣ್ಣ ರಸ್ತೆಯಲ್ಲಿಯೇ ಹತ್ತುವ ಮತ್ತು ಇಳಿದು ಬರುವ ಕುದುರೆಗಳಿಗೆ, ಜನರಿಗೆ ದಾರಿ ಬಿಟ್ಟು ಹತ್ತಬೇಕಿತ್ತು. ಕುದುರೆ ಮಾಲೀಕರು ಗಡವಾಲಿಗಳು, ಡೋಲಿಯವರು ನೇಪಾಳಿಗಳು. ಗಡವಾಲಿಗಳು ನೇಪಾಳಿಗಳನ್ನು ಹೆದರಿಸುತ್ತಿದ್ದರು. ಒಂದು ಕಡೆ ಗಡವಾಲಿ ತನ್ನ ಕುದುರೆಗೆ ಜಾಗವಿಲ್ಲವೆಂದು ಡೋಲಿಯವನನ್ನು ತಳ್ಳಿಬಿಟ್ಟ. ಸ್ವಲ್ಪದರಲ್ಲಿಯೇ ಪ್ರಮಾದ ತಪ್ಪಿತು. ಇಲ್ಲದಿದ್ದರೇ ನಾವು ಐದು ಜನ ಪ್ರಪಾತ ಸೇರಬೇಕಿತ್ತು. ಒಂದು ಕಡೆ ಪ್ರಪಾತ ಇನ್ನೊಂದು ಕಡೆ ಕಡಿದಾದ ಬೆಟ್ಟ ಮಧ್ಯ 4-8 ರಸ್ತೆ. ಮೂರು ಕಡೆ ತುಂಬಾ ಉದ್ದನೆಯ ಹಿಮವನ್ನು ಕಡೆದು ರಸ್ತೆ ಮಾಡಿರುವುದು ಕಷ್ಟ ಪಟ್ಟು ದಾಟಿದ್ದಾಯ್ತು. ಒಂದು ಕಡೆಯಂತೂ ಹಿಮ ಗೋಡೆಗಳನ್ನು ಹಿಡಿದು ಹೋಗುವುದು ಅಸಾಧ್ಯವಾದಾಗ, ಇಬ್ಬರೂ ಎರಡೂ ಕೈ ಹಿಡಿದು ಕರೆದುಕೊಂಡು ಹೋದರು. ಅದಂತೂ ಮರೆಯಲು ಸಾಧ್ಯವೇ ಇಲ್ಲ. ನನಗಂತೂ ಅಮ್ಮನ ಚಿಂತೆ ಶುರುವಾಯಿತು. ಹೇಗಪ್ಪ ಮೇಲಿನತನಕ ಹೋಗುವುದು ಎನಿಸಿತು. ಆದರೆ ಆ ಡೋಲಿಯವರು ತುಂಬಾ ನಿಧಾನವಾಗಿ ಕರೆದುಕೊಂಡು ಹೋದರು. ಅಂತೂ ಇಂತೂ ಮಧ್ಯಾಹ್ನ 2-30ಕ್ಕೆ ಕುದುರೆಗಳು ನಿಲ್ಲುವ ಸ್ಥಳ 1-1/2 ಕಿ.ಮೀ ದೂರ. ಅಲ್ಲಿಗೆ ಬರುವಷ್ಟರಲ್ಲಿಯೇ, ಜೋರಾಗಿ ಮಳೆ ಶುರುವಾಯಿತು. ಅಮ್ಮನ ಡೋಲಿಯವರು ಮುಂದೆ ಸಾಗಿಬಿಟ್ಟಿದ್ದರು. ಅವರು ಈಗಾಗಲೇ ಕ್ಯಾಂಪ್ ತಲುಪಿರುತ್ತಾರೆ ಅಂದುಕೊಂಡರೂ, ಭಯ ಶುರುವಾಯಿತು. ಅಮ್ಮನ ಮೊಬೈಲ್ಗೆ ಕರೆ ಹೋಗುತ್ತಿಲ್ಲ. ಅಲ್ಲಿ ಕುದುರೆ ನಿಲ್ಲುವ ತಂಗುದಾಣದಲ್ಲಿ ನಿಂತೆವು. ಅರ್ಧ ಗಂಟೆ ಜೋರಾಗಿ ಮಳೆ ಸುರಿಯಿತು. ಸುತ್ತಲೂ ಹಿಮದ ರಾಶಿ ತುಂಬಿರುವ ಎತ್ತರೆತ್ತರ ಬೆಟ್ಟಗಳು ನೋಡಲು ಅತೀ ಸುಂದರ ಅನಿಸಿದರೂ, ಮೈ ನಡುಕ, ಗಾಭರಿ ಹುಟ್ಟಿಸುತ್ತಿತ್ತು. ಸ್ವಲ್ಪ ಹೊತ್ತಿಗೆಲ್ಲಾ ಹಿಮದ ಮಳೆ ಜೋರಾಗಿ, ಮೊದಲ ಬಾರಿಗೆ ಹಿಮಾಲಯದ ಮೇಲೆ ನಿಂತು ಹಿಮದ ಮಳೆ ನೋಡುವ ಸುಸಂದರ್ಭ. ನನ್ನ ಕ್ಯಾಮೆರಾದಲ್ಲಿ ಎಲ್ಲ ಸೆರೆಯಾಗುತ್ತಿದ್ದಂತೆ ಮಳೆ ಜೋರಾಯಿತು. ಡೋಲಿಯ ಹುಡುಗರು ಚಡಪಡಿಸತೊಡಗಿದರು. ಅವರು ಅವತ್ತೇ ವಾಪಾಸ್ಸು ಹೋಗಬೇಕಿತ್ತು. ಮತ್ತೊಂದರ್ಧ ಗಂಟೆ ಕಳೆದರೂ ಹಿಮ ಬೀಳುವುದು ಕಡಿಮೆಯಾಗಲಿಲ್ಲ, ನನಗೆ ಅಮ್ಮನ ಚಿಂತೆ ಶುರುವಾಯಿತು. ಅಮ್ಮ ಇನ್ನು ನನ್ನ ಬಗ್ಗೆ ಚಿಂತಿಸಿ ಭಯಪಡುತ್ತಾರೆ ಎಂದುಕೊಂಡು, ಹಿಮದಲ್ಲಿಯೇ ಹೋಗೋಣ ಎಂದು ಹೊರಟು ಬಿಟ್ಟೆ. ಆ ಹುಡುಗರು ಸಹ ತುಂಬಾ ಹುಷಾರಾಗಿಯೇ ಕರೆದುಕೊಂಡು ಹೋದರು. ನಾನು ಕ್ಯಾಂಪಿಗೆ ಬರುವಷ್ಟರಲ್ಲಿಯೇ (ದೇವಸ್ಥಾನದಿಂದ ಅರ್ಧ ಕಿ.ಮೀ. ದೂರ)ಅಮ್ಮನನ್ನು ಡಾಕ್ಟರ್ ಚೆಕ್ ಮಾಡಿ ಬೆಚ್ಚಗೆ ಮಾಡಿ ಕೂರಿಸಿದ್ದರು. ನಾನು ಹೋಗಿದ್ದೆ ತಡ ಶಿವ ನಾಮ ಸ್ಮರಣೆ ನಿಲ್ಲಿಸಿ ಅಮ್ಮ ನಿರಾಳವಾದರು. ಆ ಚಳಿಗೆ ಸುಸ್ತಾಗಿದ್ದರು. ಆಗಲೇ 5 ಗಂಟೆಯಾಗಿದ್ದರಿಂದ, ಡೋಲಿಯವರು ಹೊರಡಲು ಅವಸರಿಸಿದರು. ಅವರಿಗೆ ಭಕ್ಷೀಸು ಕೊಟ್ಟು ಕಳಿಸಿದೆ. ತುಂಬಾ ಸಂತೋಷದಿಂದ ಹೋದರು. ಅಲ್ಲಿ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.
ಅಲ್ಲಿ ಕ್ಯಾಂಪ್‌ನಲ್ಲಿ ಇರಲು ಕಷ್ಟವೆನಿಸಿ, ಕಾಟೇಜ್ ಮೊದಲೇ ಕಾಯ್ದಿ ರಿಸಿದ್ದರಿಂದ ಸ್ವಲ್ಪ ಮುಂದೆ ಇದ್ದ ಕಾಟೇಜಿಗೆ ಅ ಹಿಮದಲ್ಲಿ ನಡೆದು ಹೋಗು ವಷ್ಟರಲ್ಲಿಯೇ ಸುಸ್ತಾಗಿಬಿಟ್ಟೆವು. ಹಾಕಿಕೊಂಡ ಬಟ್ಟೆ, ಸ್ವೆಟರ್, ಶಾಲು, ಟೋಪಿ, ಗ್ಲೌಸ್, ಸಾಕ್ಸ್ ಎಲ್ಲ ಒದ್ದೆಯಾಗಿದ್ದವು. ಟೀ ಕುಡಿದು ಹೀಟರ್‌ನಲ್ಲಿ ಸ್ವಲ್ಪ ಕೈ ಬಿಸಿ ಮಾಡಿಕೊಳ್ಳುವಷ್ಟರಲ್ಲಿಯೇ ನಮ್ಮ ಕಾಟೇಜಿಗೆ ಐದಾರು ಜನ (ಸೇನೆಯ ಜವಾಬ್ದಾರಿಯಲ್ಲಿ ಕೇದಾರನಾಥವಿದೆ) ಡಾಕ್ಟರ್ 70 ವರುಷದ ಒಬ್ಬಾಕೆಯನ್ನು ಹೊತ್ತುಕೊಂಡು ಬಂದರು. ಪೂರ್ತಿ ನೆನೆದು ನಡುಗುತ್ತಿದ್ದರು. ಅರ್ಧಂಬರ್ಧ ಎಚ್ಚರ. ತಕ್ಷಣಕ್ಕೆ ಡಾಕ್ಟರ್‌ಗಳೆಲ್ಲ ಕೈ – ಕಾಲು ಉಜ್ಜಿ ಹೀಟರ್‌ನಲ್ಲಿ ಬಿಸಿ ಮಾಡಿದರೂ ಆಕೆಯ ನಡುಕ ನಿಲ್ಲುತ್ತಿಲ್ಲ, ತೆಲುಗು ಮಾತನಾಡುತ್ತಿದ್ದಾರೆ. ಅಲ್ಲಿರುವ ಯಾರಿಗೂ ತೆಲುಗು ಬರುತ್ತಿಲ್ಲ. ತಮ್ಮ ಗುಂಪಿನಿಂದ ಬೇರೆಯಾಗಿ ಒಬ್ಬರೇ ನಡೆದು ಬರುವಾಗ ಹಿಮದಲ್ಲಿ ಬಿದ್ದುಬಿಟ್ಟಿದ್ದರಂತೆ. ಅಮ್ಮ ನಿಧಾನಕ್ಕೆ ಗುಟುಕು ಗುಟುಕಾಗಿ ಟೀ ಕುಡಿಸುವಷ್ಟರಲ್ಲಿ ಇಬ್ಬರೂ ಸೇರಿ ಒದ್ದೆಯ ಎಲ್ಲ ಬಟ್ಟೆ ತೆಗೆದುಹಾಕಿ ರಗ್‌ನಲ್ಲಿ ಸುತ್ತಿ, ಮಲಗುವ ಬ್ಯಾಗ್‌ನಲ್ಲಿ ತೂರಿಸಿಬಿಟ್ಟೆವು. ಅಮ್ಮ ನೀಲಗಿರಿ ತೈಲವನ್ನು ಹಣೆ ಮೂಗು ಎದೆಗೆ ಎಲ್ಲ ಕಡೆ ಹಾಕಿ ತಿಕ್ಕಿದರು. ಸ್ವಲ್ಪ ಅಕೆಗೆ ಆರಾಮಾಯಿತು. ನಂತರ ಡಾಕ್ಟರ್‌ಗಳು ಎಲ್ಲ ಚೆಕ್ ಮಾಡಿ, ಏನೂ ತೊಂದರೆಯಿಲ್ಲ ಎಂದು ಹೇಳಿದ ಮೇಲೆ, ನಾವು ಕೈಕಾಲು ಮುಖ ತೊಳೆದು (ಐಸ್ ನೀರು- ಥಂಡಿ ಗಾಳಿ) ದೇವಸ್ಥಾನಕ್ಕೆ ಸಂಜೆ ಪೂಜೆಗೆ ಹೊರೆಟೆವು. ಆಮ್ಲಜನಕದ ಕೊರತೆ ಕಾಡಿದರೂ ಸುಧಾರಿಸಿಕೊಂಡು ದೇವಸ್ಥಾನದ ಹತ್ತಿರ ಹೋಗುವಷ್ಟರಲ್ಲಿಯೇ ಏದುಸಿರು ಬಿಡುತ್ತಿದ್ದೆವು. ದೇವಸ್ಥಾನದ ಒಳಹೊಕ್ಕಾಗ ಎಲ್ಲ ಸುಸ್ತು ಕಡಿಮೆಯಾಗಿ ಮನಸ್ಸು ನಿರಾಳವಾಯಿತು.
6ನೇ ಪುಟದಿಂದ…
ನಮ್ಮನ್ನು ಅವನು ಕರೆಸಿಕೊಂಡ ರೀತಿ ತ್ರಾಸಾದರೂ ಅದಕ್ಕೆ ಸಿಕ್ಕ ಆ ಅನುಭೂತಿಗೆ ಸಾಟಿ ಏನೂ ಇಲ್ಲವೆನಿಸಿತು. ಹೊರಗೆ ಬಂದು ಒಂದು ಸುತ್ತು ಹಾಕುವಷ್ಟರಲ್ಲಿಯೇ ಮನಸ್ಸು ಖಾಲಿಯೆನಿಸಿತು. ದೇವಸ್ಥಾನದ ಹಿಂದೆ ಮುಂದೆ ಅಕ್ಕ ಪಕ್ಕ ನಾನು ಎರಡು ವರುಷದ ಹಿಂದೆ ಬಂದಾಗ ಇದ್ದದಕ್ಕೂ ಈಗಲೂ ಏನೇನೂ ಇಲ್ಲವೆನಿಸಿದಾಗ ಅನಿಸಿದ್ದು ಬಹುಶಃ ಆ ಶಿವನಿಗೆ ತನ್ನ ಸ್ಥಾನ ಹೀಗೆ ಇರಬೇಕು ಎಂದೆನಿಸಿದೆ, ಅದಕ್ಕೆ ತಾನೇ ಹೀಗೆ ನಿರ್ಮಿಸಿಕೊಂಡನೇನೋ?ಎಂಬ ಭಾಸ. ಮಂದಿರದ ಪಕ್ಕದಲ್ಲಿ ಕಲ್ಲಿನ ಸಣ್ಣ ದೇವಸ್ಥಾನ ಹೇಳ ಹೆಸರೇ ಇಲ್ಲ. ಮಂದಿರದ ಸ್ವಲ್ಪ ಮುಂದಿದ್ದ ನೀರ ಚಿಲುಮೆ, ಹಿಂದಿದ್ದ ಶ್ರೀ ಶಂಕರಾಚಾರ್ಯರ ಸಮಾಧಿಸ್ಥಳ, ಅನೇಕ ಸಣ್ಣಪುಟ್ಟ ಮಂದಿರಗಳು ಏನೂ ಇಲ್ಲ. ಎಲ್ಲ ಕಡೆ ಒಮ್ಮೆ ಸುತ್ತಾಡುವ ಆಸೆಯಾದರೂ, ಆಳೆತ್ತರದ ಹಿಮದಲ್ಲಿ ಕಾಲಿಡುವ ಹಾಗಿಲ್ಲ, ಹಿಮದ ತೆರವು ಕಾರ್ಯ ಸತತವಾಗಿ ನಡೆಯುತ್ತಿದೆ. ಪಕ್ಕದಲ್ಲಿಯೇ ಇರುವ ಕನ್ನಡದ ಮುಖ್ಯ ಅರ್ಚಕರಾದ ಶ್ರೀ ರಾಜಶೇಖರ ಸ್ವಾಮಿಯವರನ್ನು ಮಾತನಾಡಿಸಿಕೊಂಡು ಬಂದೆ. ನಂತರ ರಾತ್ರಿಯ ಆರತಿಯಲ್ಲಿ ಅಮ್ಮ ನಾನು ಒಂದು ಗಂಟೆ ಅ ಕೇದಾರೇಶ್ವರನ ಮುಂದೆ ಕುಳಿತುಕೊಂಡೆವು. ನಿಜಕ್ಕೂ ಆ ದಿವ್ಯ ಪೂಜೆ ಒತ್ತಡದ ಮನಸ್ಸನ್ನು ಹಗುರಗೊಳಿಸಿತು. ಅರ್ಚಕರ ರೂಮಿನಲ್ಲಿಯೇ ಅಮ್ಮ ನಾನು ಪುಲ್ಕ ತಿಂದು ಬಿಸಿ ನೀರು ಕುಡಿದು, ನಮ್ಮ ಕಾಟೇಜಿಗೆ ಬರುವ ದಾರಿಯಲ್ಲಿ ನಾನು ಐಸ್‌ನ ಮೇಲೆ ಕಾಲಿಟ್ಟು ಬಿದ್ದೆ, ಇಬ್ಬರು ಸೇನೆಯವರು ಬಂದು ಎಬ್ಬಿಸಿ ಕಾಟೇಜಿನತನಕ ಬಿಟ್ಟು ಹೋದರು. ಮತ್ತೇ ಅಮ್ಮ – ನಾನು ಹೀಟರ್‌ನಲ್ಲಿ ಮೈ-ಕೈ ಬಿಸಿ ಮಾಡಿಕೊಂಡು ರಾತ್ರಿ ಹನ್ನೊಂದರ ತನಕ ಎದ್ದಿದ್ದು ಬೀಸುತ್ತಿದ್ದ ಸುಳಿರ್ಗಾಳಿಗೆ ನಡುಗುತ್ತ ಮಲಗುವ ಬ್ಯಾಗ್‌ನಲ್ಲಿ ತೂರಿಕೊಂಡು ಅದರ ಮೇಲೆ ರಜಾಯಿ ಹಾಕಿಕೊಂಡು ಮಲಗಿದೆವು. ಬೆಳಿಗ್ಗೆ 5-30ಕ್ಕೆ ಎದ್ದು ಬಿಸಿ ನೀರು ಬರದೇ ಇದ್ದುದರಿಂದ ನಾನು ಆ ನೀರನ್ನೇ ಮೈ ಮೇಲೆ ಸುರಿದುಕೊಳ್ಳುವಷ್ಟಲ್ಲಿಯೇ ಒಂದರ್ಧ ಬಕೇಟು ಸ್ವಲ್ಪ ಬೆಚ್ಚನೆಯ ನೀರು ತಂದುಕೊಟ್ಟರು. ಅಮ್ಮ ಅದರಲ್ಲಿ ಸ್ನಾನ ಮಾಡಿ, ದೇವಸ್ಥಾನಕ್ಕೆ ಹೋಗುವಷ್ಟರಲ್ಲಿಯೇ 7 ಗಂಟೆ. ಸರಸರನೇ ಒಳ ಹೋಗಿ ಮೊದಲೇ ಹೇಳಿದ್ದರಿಂದ ಅಲ್ಲಿನ ಅರ್ಚಕರು ನಮ್ಮಿಬ್ಬರನ್ನು ಕೂರಿಸಿ ಜಲಾಭಿಷೇಕ ಮಾಡಿಸಿ ಪೂಜೆ ಮಾಡಿಸಿದರು. ಮನಸ್ಸು ತೃಪ್ತಿಯಾಯಿತು. ಕೇದಾರೇಶ್ವರ ಮುಂದೆ ಮನಸ್ಸಿನ ದುಗುಡ ದುಮ್ಮಾನ ದುಃಖ ಎಲ್ಲ ಹೊರಹಾಕಿ ಎಲ್ಲ ಹಗುರಮಾಡಿಕೊಂಡು ಹೊರಬರುವಷ್ಟರಲ್ಲಿಯೇ ಬಿಸಿಲು ಬಂದಿತ್ತು, ಸುತ್ತಮುತ್ತಲಿನ ಪರಿಸರ, ಹಿಮದ ಬೆಟ್ಟಗಳನ್ನು ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ಅರ್ಚಕರಿಗೆ ಹೇಳಿ ಹೊರಟಾಗ 9 ಗಂಟೆ. ಇನ್ನು ಕೆಳಗಿಳಿಯುವ ಚಿಂತೆ. ಅಂತೂ ಇಂತೂ ನನ್ನ ಆರೋಗ್ಯ ಹದಗೆಡಲು ಅರಂಭಿಸಿದ್ದರಿಂದ ಡಾಕ್ಟರಿಗೆ ಹೇಳಿ ಚೀಟಿ ತೆಗೆದುಕೊಂಡು ಸಾಮಾನು ಸರಬರಾಜು ಮಾಡುತ್ತಿದ್ದ ಸರ್ಕಾರಿ ಹೆಲಿಕ್ಯಾಪ್ಟರ‌್ನಲ್ಲಿ ನಾನು ಅಮ್ಮ ಕೆಳಗೆ (ಐದು ನಿಮಿಷದಲ್ಲಿ) ಗುಪ್ತಕಾಶಿಗೆ ಬಂದೆವು. ಅಲ್ಲಿಂದ ಒಂದು ಟ್ಯಾಕ್ಸಿ ಮಾಡಿಕೊಂಡು, ಸೋನ್‌ಪ್ರಯಾಗ್‌ಗೆ ಹೋಗಿ ನಮ್ಮ ಲಗೇಜ್ ತೆಗೆದುಕೊಂಡು, ಅಲ್ಲಿಂದ 12 ಕಿ.ಮೀ. ಮೇಲೆ ತ್ರಿಯೋಗಿನಾರಾಯಣ ಶಿವ-ವಿವಾಹ ಸ್ಥಳ, ನೋಡಿ, ಅಲ್ಲಿಂದ ಗುಪ್ತಕಾಶಿಯ ಅರ್ಧನಾರೀಶ್ವರ, ವಿಶ್ವನಾಥನನ್ನು ದರ್ಶಿಸಿ, ಅಲ್ಲಿಂದ ಇನ್ನೂ ಮೇಲೆ ಬೆಟ್ಟದಲ್ಲಿರುವ ಅತೀ ಪುರಾತನ ಕಾಳೀಮಠಕ್ಕೆ ಹೋದೆವು. ತುಂಬಾ ದುರ್ಗಮ ಮತ್ತು ಕೊನೆಯ ಹಳ್ಳಿ. ಅಲ್ಲಿ ನಾವು ರಸ್ತೆಯಲ್ಲಿ ಟ್ಯಾಕ್ಸಿ ನಿಲ್ಲಿಸಿ, ನದಿಯಲ್ಲಿ ಪಾತ್ರಕ್ಕೆ ಅಲ್ಲಿ ಕಟ್ಟಿರುವ ಹಗ್ಗದ ಸೇತುವೆ ದಾಟಿ, ದೇವಸ್ಥಾನಕ್ಕೆ ಹೋದೆವು. ತುಂಬಾ ಶಕ್ತಿಯುಳ್ಳ ಮತ್ತು ಪುರಾತನ ದೇವಸ್ಥಾನವದು. ಅಲ್ಲಿ ಕಾಳಿಮಾತೆಯು ರೂಪದಲ್ಲಿಲ್ಲ, ಆದರೆ ನೆಲೆಸಿರುವ ಸ್ಥಳವದು ಎನ್ನುತ್ತಾರೆ. ಅಲ್ಲಿಂದ ಹೊರಟಲ್ಲಿ ಮಳೆ ಶುರುವಾಯಿತು. ರಾತ್ರಿ ಎಂಟಕ್ಕೆ ರುದ್ರಪ್ರಯಾಗ ತಲುಪಿ ಅಲ್ಲಿನ ಪ್ರವಾಸಿ ಮಂದಿರದಲ್ಲಿ ಉಳಿದು ಬೆಳಿಗ್ಗೆ 6ಕ್ಕೆ ಬದರೀನಾಥದ ದರ್ಶನಕ್ಕೆ ಹೊರೆಟೆವು. ಅದರ ಯಾತ್ರೆಯೊಂದು ಇದೇ ತರಹದ್ದು. ಆದರೆ ಜೋಶಿಮಠದ ಜೋತಿರ್ಮಠದಲ್ಲಿ ಉಳಿದು, ಆ ಬದರೀನಾರಾಯಣನ ಕೃಪೆ ಯಿಂದ ಅದನ್ನು ದರ್ಶಿಸಿ ಯಾತ್ರೆಯನ್ನು ಸುಗಮ ಮಾಡಿಕೊಂಡು ವಾಪಾಸ್ಸು ಹೃಷಿಕೇಶಕ್ಕೆ ಬಂದು ಅಲ್ಲಿ ಉಳಿದು, ಬೆಂಗಳೂರಿಗೆ ಬಂದೆವು. ಅಮ್ಮನನ್ನು ಯಾತ್ರೆ ಮಾಡಿಸಿ ತಂದ ತೃಪ್ತಿ ನನಗಿದ್ದರೆ, ಅಮ್ಮನ ಮುಖದಲ್ಲಿ ಯಶಸ್ವಿಯಾಗಿ ಯಾತ್ರೆ ಮಾಡಿ ಬಂದ ತೃಪ್ತಿ ಇತ್ತು. ಮತ್ತೊಮ್ಮೆ ಮಗದೊಮ್ಮೆ ಆ ಕೇದಾರನಾಥನ ದರ್ಶನ ಮಾಡುವ ಸುಸಂದರ್ಭ ನನಗೊದಗಲಿ ಎಂದೇ ನನ್ನ ಆಸೆ. ಜೈ ಕೇದಾರನಾಥ.

– ಶೋಭಾ ಹೆಚ್.ಜಿ., ಬೆಂಗಳೂರು

 

   

Leave a Reply