ಒತ್ತಿದ್ದಲ್ಲ, ತನ್ನೆತ್ತರಕ್ಕೆ ಎತ್ತಿದವ

ಕಥೆಗಳು - 0 Comment
Issue Date : 28.11.2015

ಅದು ನರ್ಮದೆಯ ಉತ್ತರ ತಟದ ಭೃಗುಕಚ್ಛ ಎಂಬ ಪವಿತ್ರ ಪ್ರದೇಶ. ಮಹಾಯಜ್ಞವೊಂದು ಅಲ್ಲಿ ನಡೆಯುತ್ತಿತ್ತು. ಯಜ್ಞವೆಂದರೆ ಕೇಳಬೇಕೇ ವೇದವಿದರು, ವಿದ್ವಾಂಸರು ಅಗ್ನಿಯಲ್ಲಿ ವಿವಿಧ ಮಂತ್ರಗಳ ಮೂಲಕ ಹಲವು ವಿಶಿಷ್ಟ ಹವಿಸ್ಸು ಸಮರ್ಪಣೆ ಮಾಡುತ್ತಿರುವರು; ಮತ್ತೊಂದೆಡೆ ಪುರಾಣ ಪುಣ್ಯಕಥಾ ಪ್ರವಚನ, ಭಜನೆ, ಧ್ಯಾನ; ಇನ್ನೊಂದೆಡೆ ಅನ್ನ-ಐಶ್ವರ್ಯದಾನ ಹೀಗೆ ಅಪರೂಪದ ಎಷ್ಟೋ ಸಂಗತಿಗಳು. ನೋಡಲು, ಕೇಳಲು, ಪಡೆಯಲು ಎಲ್ಲೆಡೆಯಿಂದಲೂ ಜನರು..
  ಒಂದು ದಿನ ಆ ಯಜ್ಞಮಂಟಪಕ್ಕೆ ಪುಟ್ಟ ಬಾಲಕನೊಬ್ಬ ಬಂದ. ಇಡೀ ಪ್ರದೇಶ ಉಜ್ವಲಕಾಂತಿಯಿಂದ ತುಂಬಿಹೋಯಿತು. ಒಮ್ಮೆಲೇ ಸಾವಿರ ಸೂರ್ಯರ ಬೆಳಕು. ಎಲ್ಲರ ದೃಷ್ಟಿ ಆತನತ್ತಲೇ. ತಮಗರಿವಿಲ್ಲದಂತೆಯೇ ಇದ್ದವರೆಲ್ಲ ಎದ್ದು ನಿಂತು ಗೌರವ ಸೂಚಿಸಿದರು.
  ಯಜ್ಞಕರ್ತನಿಗೆ ಆನಂದ-ಸಂಭ್ರಮ. ‘ಇಂಥ ತೇಜಸ್ವೀ ಬಾಲಕನನ್ನು ಕಂಡೇ ಇಲ್ಲ.’ ಅಪರೂಪದ ವ್ಯಕ್ತಿ, ಅನುಪಮ ವ್ಯಕ್ತಿತ್ವದ ವಟುವನ್ನು ಕಂಡು ಆತನ ಬಾಯಿಂದ ಹೊರಟ ಮಾತುಗಳು. ‘ನನ್ನ ಯಜ್ಞ ಮಾತ್ರವಲ್ಲ ಬದುಕೇ ಸಾರ್ಥಕವಾಯಿತು.. ಬಾ’ ಎನ್ನುತ್ತಾ ಅರ್ಘ್ಯ ಪಾದ್ಯ ಆಸನವಿತ್ತು ಆದರಿಸಿದ.
 ‘ದಾನ ಯಜ್ಞದ ಅವಿಭಾಜ್ಯ ಅಂಗ. ಕರೆಯದೇ ಬಂದ ನೀನು ಅತಿಥಿ. ಏನು ಬೇಕೋ ಕೇಳು ಕೊಟ್ಟು ಕೃತಾರ್ಥನಾಗುವೆ ನಾನು, ಪಡೆದು ಸಂಭ್ರಮಿಸು ನೀನು’ ಒಂದು ತೆರನ ಅಹಂಕಾರ ತುಂಬಿದ ದನಿಯಲ್ಲಿ ನುಡಿದ ಆ ಮಹಾರಾಜ.
 ‘ಅಯ್ಯೊ ನಾನು ಬ್ರಹ್ಮಚಾರಿ. ತಪಗೈಯಲು ಸ್ವಲ್ಪ ಸ್ಥಳ, ಅದೂ ಮೂರು ಹೆಜ್ಜೆಯ ಭೂಮಿ. ನನಗೆ ಬೇಕಾದುದು ಇಷ್ಟೇ’ ಪುಟ್ಟ ವಟು ಸ್ಪಷ್ಟವಾಗಿ ನುಡಿದ. ಮತ್ತೆ ಮತ್ತೆ ಕೇಳಬೇಕೆನಿಸುವ ಮಾತು ಅವನದು.
  ಏನು ಕೊಟ್ಟರೂ ಸಾಲದೆ ಮತ್ತೆ ಮತ್ತೆ ಬೇಕೆನ್ನುವವರನ್ನೇ ಕಂಡಿದ್ದ ಮಹಾರಾಜನಿಗೆ ಈ ಮಾತು ಕೇಳಿ ಅಚ್ಚರಿ. ಒಮ್ಮೆ ಜೋರಾಗಿ ನಕ್ಕುಬಿಟ್ಟ.
  ‘ಏ ಹುಡುಗಾ, ನನ್ನ ಸಂಪತ್ತಿನ ಅರಿವಿಲ್ಲ ನಿನಗೆ. ಮೂರು ಲೋಕದ ಒಡೆಯನಾದ ನನ್ನಲ್ಲಿ ಮೂರು ಹೆಜ್ಜೆ ನೆಲ ಬೇಡುವುದೇ, ಸ್ವಲ್ಪ ಯೋಚಿಸು. ನಿನ್ನ ಬದುಕಿಗೆ ಏನು ಬೇಕೋ ಎಷ್ಟು ಬೇಕೋ ಎಲ್ಲಾ ಕೇಳು. ನೀನು ಕೇಳಿದ್ದಕ್ಕಿಂತ ತುಸು ಹೆಚ್ಚೇ ಕೊಡುವೆ ನಾನು?’ ತನಗೆ ಎದುರಿಲ್ಲವೆಂಬ ಅಹಂಕಾರ ಆತನ ಮಾತಿನಲ್ಲಿ ತುಂಬಿತುಳುಕುತ್ತಿತ್ತು.
 ‘ಅಯ್ಯಾ, ನಿನ್ನಲ್ಲಿ ಎಷ್ಟೂ ಇರಬಹುದು. ಇರುವುದೆಲ್ಲವೂ ನಿನ್ನದೇ ಎಂಬುದು ಭ್ರಮೆ. ನೋಡು ನನಗೆ ಬೇಕಾದುದು ಮೂರು ಹೆಜ್ಜೆಗಳ ಅವಕಾಶ ಮಾತ್ರ; ಅಷ್ಟೇ ಸಾಕು. ಇರುವುದೆಲ್ಲವನ್ನೂ ಬಯಸುವುದು ತರವಲ್ಲ…’ ಆಕರ್ಷಕ ವ್ಯಕ್ತಿತ್ವದ ಪುಟ್ಟ ಬಾಲಕನ ದಿಟ್ಟ ಉತ್ತರ.
  ಇದನ್ನೆಲ್ಲ ಗಮನಿಸುತ್ತಿದ್ದ ರಾಜಗುರು ಎಚ್ಚರ ತಪ್ಪಿದರೆ ಅನಾಹುತವಾದೀತೆಂದ. ಎಷ್ಟು ಹೇಳಿದರೂ ಕೇಳದ ರಾಜ ತನ್ನ ಮಾತಿಗೆ ಬದ್ಧನಾದ. ದಾನ ನೀಡಲು ಮುಂದಾದ. ಆಗಲೂ ದಾನ ತಡೆಯಲು ಗೋಮುಖಿಯ ನಾಳದಲ್ಲಿ ರಾಜಗುರು ತಾನೇ ನಿಂತು ನೀರು ಬರದಂತೆ ಮಾಡಿದ. ರಾಣಿ ವಿಂದ್ಯಾವಳಿ ಎಷ್ಟು ಬಗ್ಗಿಸಿದರೂ ಹನಿ ನೀರೂ ಬರಲಿಲ್ಲ. ತುಳಸಿದಳ ನೀರು ಇಲ್ಲದೇ ದಾನ ಪೂರ್ಣವಾಗದೆಂದ ವಟು, ದರ್ಬೆಯೊಂದರಿಂದ ನಾಳದಲ್ಲಿ ಏನೋ ಸಿಕ್ಕಿದೆ ಎಂದು ಬಿಡಿಸಹೊರಟ. ಸೂಕ್ಷ್ಮರೂಪದಲ್ಲಿದ್ದ ರಾಜಗುರುವಿನ ಕಣ್ಣಿಗೇ ಚುಚ್ಚಿತು. ಹೆದರಿ ಪಕ್ಕಕ್ಕೆ ಸರಿದ. ನೀರು ಹರಿದು ಬಂತು. ದಾನ ಪೂರ್ಣವಾಯಿತು.
  ಪುಟ್ಟ ಆಸನದಲ್ಲಿ ಕುಳಿತು ದಾನ ಪಡೆದ ವಟು ಎದ್ದು ನಿಂತ. ಯಾವ ಸ್ಥಳ ಬೇಕೆಂದು ಕೇಳಹೊರಟ ಮಹಾರಾಜನ ಬಾಯಲ್ಲೇ ಮಾತುಗಳು ಉಳಿದವು. ಆಗಲೇ ಈ ವಟು ಭೂಮಿವ್ಯೋಮ ಒಂದಾಗುವಂತೆ ಬೆಳೆದು ನಿಂತಿದ್ದ ! ಇದ್ದವರಿಗೆಲ್ಲಾ ಬೆರಗು.
  ಒಂದು ಹೆಜ್ಜೆಗೆ ಭೂಲೋಕ, ಮತ್ತೊಂದರಿಂದ ದ್ಯುಲೋಕ ಅಳೆದುಬಿಟ್ಟ! ಆ ಮಹಾರಾಜನ ಸಾಮ್ರಾಜ್ಯದ ವ್ಯಾಪ್ತಿ ಮುಗಿಯಿತು. ‘ಎಲ್ಲಿಡಲಿ ಇನ್ನೊಂದು ಹೆಜ್ಜೆ’ ಗಂಭೀರವಾಗಿ ಕೇಳಿದ ವಟು.
  ‘ಇಗೋ ಇಲ್ಲಿ’ ಎಂದು ತನ್ನ ತಲೆಯನ್ನೇ ತೋರಿದ ಆ ಮಹಾರಾಜ. ಕೊಟ್ಟ ಮಾತು ಉಳಿಸಿಕೊಂಡ ಆತನ ಭಕ್ತಿಗೆ ಒಳಗೊಳಗೇ ಮೆಚ್ಚುಗೆ ಸೂಚಿಸಿದ ವಟು ಹೊರಗೆ ತೋರಗೊಡದೆ ಆತನ ತಲೆಯ ಮೇಲೆ ಕಾಲಿಟ್ಟ. ಪಾತಾಳಕ್ಕೆ ಒತ್ತಿಬಿಟ್ಟ.
  ಆತ್ಮ ಸಮರ್ಪಣೆಗೈದ ಆತನ ಹಿರಿಮೆಯನ್ನು ಕೊಂಡಾಡಿದ. ಪಾತಾಳದ ಅಧಿಪತ್ಯ ನೀಡಿದ. ಪ್ರತಿವರುಷ ಆಶ್ವಯುಜ ಅಮಾವಾಸ್ಯೆಯಿಂದ ನಾಲ್ಕು ದಿನ ಭೂಲೋಕ ಸಂದರ್ಶಿಸುವ ವರನೀಡಿದ. ತಾನೇ ಆತನ ಅರಮನೆಯ ಬಾಗಿಲು ಕಾಯ್ದ.
  ಈ ತ್ರಿವಿಕ್ರಮನೆನಿಸಿದ ವಟು ವಾಮನ. ಕಶ್ಯಪ ಅದಿತಿಯರ ಪುತ್ರ. ಇಂದ್ರ ಪದವಿಗಾಗಿ ಆ ಯಜ್ಞ ಮಾಡಿದ  ಮಹಾರಾಜ ಬಲಿ. ಆತನ ರಾಜಗುರು ಆಚಾರ್ಯ ಶುಕ್ರ.
  ಒಂದು ಕಲ್ಪದ ಆಯಸ್ಸು ಮುಂದಿನ ಸಾವರ್ಣಿಕ ಮನ್ವಂತರದಲ್ಲಿ ಇಂದ್ರ ಪದವಿ ನಿನಗೆ ಎಂದು ಭವಂತ ಆತನನ್ನು ಹರಸಿದ. ನಿಯಮ ಮೀರಿ ಬಯಸಿದ ಕಾರಣ ಬಲಿಯನ್ನು ಪಾತಾಳಕ್ಕೆ ಆಗ ಒತ್ತಿದರೂ ನಿರ್ಮಲ ಭಕ್ತಿಗೆ ಮೆಚ್ಚಿ ತನ್ನೆತ್ತರಕ್ಕೆ ಎತ್ತಿಕೊಂಡ!

   

Leave a Reply