ಇಸ್ಕಾನ್‍ ಮತ್ತು ಆಧ್ಯಾತ್ಮಿಕ – ಸಾಮಾಜಿಕ ಸೇವೆ

ಲೇಖನಗಳು ; ಸಂದರ್ಶನಗಳು - 0 Comment
Issue Date : 16.5.2016

-ರ. ರವಿಶಂಕರ

ನಿಮ್ಮ ಬಾಲ್ಯದಲ್ಲಿ ತಾವು ವಿಶೇಷವಾದ ಎಂದರೆ ಅಧ್ಯಾತ್ಮದ, ದೈವದ ಬಗ್ಗೆ ಹೆಚ್ಚಿನ ಆಸಕ್ತಿಯುಳ್ಳವರಾಗಿದ್ದಿರಾ ?
ಎಲ್ಲಾ ಸಾಮಾನ್ಯ ಮಕ್ಕಳಂತೆ ನಾನೂ ಕೂಡ ಮುಂಬೈನ ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದೆ. ಮನೆಯಲ್ಲಿ ಸಾತ್ವಿಕ ವಾತಾವರಣ ನಮ್ಮ ತಂದೆ ತಾಯಿಯವರ ಆಶೀರ್ವಾದದಿಂದ ದೊರಕಿತ್ತು. ಮುಂಬೈನಲ್ಲೇ ವಿದ್ಯಾಭ್ಯಾಸ, ಅಯಾಚಿತವಾಗಿ ದೇವಾಲಯಗಳನ್ನು ಭೇಟಿ ಮಾಡುತ್ತಿದ್ದೆವು. ಆದರೆ ದೇವಾಲಯಕ್ಕೆ ಏಕೆ ಹೋಗುತ್ತೇವೆ ಎಂಬ ಬಗ್ಗೆ ಕೂಡ ನನಗೆ ತಿಳಿದಿರಲಿಲ್ಲ. ದೇವರ ಬಗ್ಗೆ ಅಷ್ಟೆನೂ ವಿಶೇಷ ಆಸಕ್ತಿ ಕುತೂಹಲಗಳು ಇರಲಿಲ್ಲ. ಆದರೆ ಎಲ್ಲೋ ನನ್ನಲ್ಲಿದ್ದ ಭಗವಂತನೆಡೆಗಿನ ಪ್ರೇಮದ ಕಿಡಿಯಿಂದ ನನ್ನ ಯಾವುದೇ ಪ್ರಯತ್ನಗಳಿಲ್ಲದೆ ಅವನ ಕೃಪಾ ಕಟಾಕ್ಷದಿಂದ ನಾನೂ ಇಸ್ಕಾನ್ ಸಂಪರ್ಕಕ್ಕೆ ಒಳಗಾದೆ, ಪರಮಾತ್ಮನ ಸೇವೆಯ ಅವಕಾಶ ಗಳಿಸಿದೆ.

ಇಸ್ಕಾನ್ ಸೇರುವ ಮೊದಲು ತಮ್ಮ ಜೀವನ ಶೈಲಿ ಹೇಗಿತ್ತು ? ಎಲ್ಲಿ ಮತ್ತು ಹೇಗೆ ನೀವು ಇಸ್ಕಾನ್‌ನ ಸಂಪರ್ಕಕ್ಕೆ ಬಂದಿರಿ ?
ನಮ್ಮ ತಂದೆತಾಯಿ ನನಗೆ ಉತ್ತಮ ವಿದ್ಯಾಭ್ಯಾಸ ನೀಡಿದರು, ಅದಕ್ಕೆ ತಕ್ಕಂತೆ ವೃತ್ತಿ ಜೀವನವನ್ನೂ ಆರಂಭಿಸಿದೆ, ಆಗ ಒಮನ್ ದೇಶದ ಮಸ್ಕಟ್ ದೇಶದಲ್ಲಿದ್ದ ನನ್ನ ಸೋದರ ಸಂಬಂಧಿ ಭಾರತಕ್ಕಿಂತ ಅಲ್ಲಿ ಹೆಚ್ಚಿನ ಆದಾಯ ಬರುತ್ತದೆ ಬಹು ಬೇಗ ಶ್ರೀಮಂತಿಕೆಯನ್ನು ಗಳಿಸಬಹುದು ಇಲ್ಲಿಗೆ ಬಂದು ಬಿಡು ಎಂದು ಒತ್ತಾಯಪೂರ್ವಕವಾಗಿ ನನ್ನ ಪಾಸ್‌ಪೋರ್ಟ್ ಸಹ ಮಾಡಿಸಿ ನನ್ನನ್ನು ಅಲ್ಲಿಗೆ ಕರೆಸಿಕೊಂಡ. ಮುಂಬೈಯಲ್ಲೇ ಹುಟ್ಟಿ ಬೆಳೆದಿದ್ದರೂ ಎಂದೂ ಮುಂಬೈಯಲ್ಲಿ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿರಲಿಲ್ಲ. ಅಲ್ಲಿ ಅನೇಕ ದೇವಾಲಯಗಳನ್ನು, ಚರ್ಚ್‌ಗಳನ್ನು, ಮಸೀದಿಗಳನ್ನು ಸಹ ಭೇಟಿ ಮಾಡಿದ್ದೆ. 1988ನೇ ಇಸವಿಯಲ್ಲೇ ಇಸ್ಕಾನ್ ಬಗ್ಗೆ ತಿಳಿಯಲು ಆರಂಭಿಸಿದ್ದೆ. ನಂತರ 1990ರ ವೇಳೆಗೆ ಒಮನ್‌ನಂಥ ಮುಸ್ಲಿಂ ದೇಶಕ್ಕೆ ಹೋದ ಮೇಲೆ ಬ್ರಹ್ಮಚಾರಿಯಾಗಿಯೇ ಇದ್ದ ನಾನು ಇಸ್ಕಾನ್‌ಗೆ ಬೆಸೆದುಕೊಂಡೆ.

ಇಸ್ಕಾನ್‌ಗೆ ಸಾಮಾನ್ಯವಾಗಿ ಬ್ರಹ್ಮಚಾರಿಗಳು ಸೇರುತ್ತಾರಾ? ಇಲ್ಲಾ ಸನ್ಯಾಸ ಸ್ವೀಕರಿಸಿದವರು ಮಾತ್ರ ಸೇರುತ್ತಾರಾ?
ಹಾಗೇನೂ ಇಲ್ಲ ಮದುವೆಯಾಗಿರುವವರೂ ಸಹ ಇಸ್ಕಾನ್ ಭಕ್ತಿ ಪಂಥದಲ್ಲಿದ್ದಾರೆ, ಶ್ರೀ ಕೃಷ್ಣ ಗೀತೆಯಲ್ಲಿ ಹೇಳುವಂತೆ-
ಚಾತುರ್ವರ್ಣಂ ಮಯಾ ಸೃಷ್ಟಂ, ಗುಣಕರ್ಮವಿಭಾಗಶಃ
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ॥
ಎಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ನಾಲ್ಕು ವರ್ಣಗಳು ಹಾಗೂ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ ನಾಲ್ಕು ಆಶ್ರಮಗಳೂ ಅವನದೇ ಸೃಷ್ಟಿ. ಎಂದ ಮೇಲೆ ಅದರಲ್ಲಿ ಮೇಲು ಕೀಳುಗಳೂ ಇಲ್ಲ ಯಾವುದೂ ವರ್ಜ್ಯವೂ ಅಲ್ಲ. ಆದರೆ ಮನುಷ್ಯ ತನ್ನದೇ ಗುಣ-ಸ್ವಭಾವ, ಆಸಕ್ತಿ ಮತ್ತು ಶಕ್ತ್ಯಾನುಸಾರ ಆಯ್ಕೆಗಳನ್ನು ಮಾಡಿಕೊಂಡು ಅನುಭವಿಸುತ್ತಾನೆ. ಆದರೆ ನಾವು ಯಾವುದೇ ಆಶ್ರಮ ಯಾವುದೇ ವರ್ಣದವರಾದರೂ ಪರಮಾತ್ಮನ ಸೇವೆ ಸಲ್ಲಿಸಲು ನಿರ್ಬಂಧಗಳಿಲ್ಲ. ಎಲ್ಲರೂ ಎಲ್ಲಾ ಸಮಯದಲ್ಲೂ ಕೃಷ್ಣನ ಪ್ರಜ್ಞೆಯನ್ನು ಧರಿಸಬೇಕೆಂಬುದೇ ನಮ್ಮ ಪಂಥದ ಮೂಲ ಉದ್ದೇಶ.

ನೀವು ಯಾವಾಗ ಸನ್ಯಾಸ (ಸಾಧು) ಸ್ವೀಕಾರ ಮಾಡಿದಿರಿ ಮತ್ತು ಯಾಕೆ?
ಬ್ರಹ್ಮಚರ್ಯ ಪಾಲಿಸುತ್ತಿದ್ದ ನಮಗೆ ಸನ್ಯಾಸ ಸ್ವಾಭಾವಿಕವಾಗಿ ಅಯಾಚಿತವಾಗಿ ಬಂದು ಬಿಟ್ಟಿತು.
ನನಗೆ ಶ್ರೀ ಕೃಷ್ಣನ ಸೇವೆಯಲ್ಲೇ ಸಂಪೂರ್ಣ ತೊಡಗಿಕೊಳ್ಳಬೇಕು ಎಂಬ ಅದಮ್ಯ ಇಚ್ಚೆ ಉಂಟಾಗಿ ನಾನು ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡೆ. ಅಲ್ಲದೆ ಪ್ರಭುಪಾದರು ತಮ್ಮ 70ನೇ ವಯಸ್ಸಿನಲ್ಲಿ ವಿದೇಶಗಳಿಗೆ ತೆರಳಿ ಕೇವಲ 10 ವರ್ಷಗಳಲ್ಲಿ ಸಾಧಿಸಿದ ಸಾಧನೆಗಳ ಅಧ್ಯಯನ ನನ್ನನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಅವರ ಆಶಯದಂತೆ ನಾವು ಅವರ ಪುಸ್ತಕಗಳನ್ನು, ಪ್ರಸಾದವನ್ನು, ಪವಿತ್ರ ಕೃಷ್ಣ ನಾಮವನ್ನು ಹಂಚಲು ತೊಡಗಿಸಿಕೊಂಡೆವು. ಪ್ರಭುಪಾದರು ರಷ್ಯಾದಂತ ಧಾರ್ಮಿಕ ಆಚರಣೆಗಳಿಗೆ ಪ್ರಸಾರ ಪ್ರಚಾರಗಳಿಗೆ ಅವಕಾಶವೇ ಇಲ್ಲದಂಥ ಆಗಿನ ಕಾಲದ ಕಡು ಕಮ್ಯುನಿಷ್ಟರ ದೇಶದಲ್ಲೂ ಅವರು ಧರ್ಮವನ್ನು ಹರಡಿದರು. ಸಾವಿರಾರು ಅನುಯಾಯಿಗಳನ್ನು ಪಡೆದರು. ಅವರು ಸನಾತನ ಧರ್ಮವನ್ನು ಪ್ರಚಾರ ಮಾಡಿದರು.
ಧರ್ಮದ ವ್ಯಾಖ್ಯಾನ ಗ್ರಂಥಗಳಲ್ಲಿ ಹೀಗಿದೆ
ಸವೈ ಪುಂಸ್ವಾನ್ ಕರೋಧರ್ಮೋ ಯಥೋಭಕ್ತಿ ಅಧೋಕ್ಷಜ
ಧರ್ಮ ಎಂದರೆ ಸನಾತನವಾದುದು, ಅದಕ್ಕಾಗಿಯೇ ಅದಕ್ಕೆ ಸನಾತನ ಧರ್ಮ ಎಂಬುದು ಹೆಚ್ಚು ಒಪ್ಪುತ್ತದೆಯೇ ಹೊರತು ಹಿಂದೂ ಅಲ್ಲ. ಹಿಂದೂ ಪದವು ಕಾಲಾಂತರದಲ್ಲಿ ಅನ್ಯರಿಂದ ಉದ್ಭವಿಸಿದೆ. ಧರ್ಮ ಎಂಬುದು ಆದ್ಯಂತರಹಿತವಾದುದು, ಸಾರ್ವತ್ರಿಕವಾದುದು, ಕಾಲದೇಶಾತೀತವಾದುದು. ಅದು ನಮ್ಮ ಕರ್ಮದ ಅವಿಭಾಜ್ಯ ಗುಣ-ಲಕ್ಷಣ-ಸ್ವಭಾವವಾಗಿದೆ, ಅದು ಬರೀ ನಂಬಿಕೆಯಲ್ಲ, ಅದು ದಾನವೂ ಅಲ್ಲ, ದಯೆಯೂ ಅಲ್ಲ. ಈ ಎಲ್ಲವುಗಳೊಂದಿಗೆ ಯಾವುದು ಪರಮೋಚ್ಛ ಮೋಕ್ಷ ಸಾಧನೆಯೆಡೆಗೆ ಪರಮಾತ್ಮನ ಸಾಕ್ಷಾತ್ಕಾರದೆಡೆಗೆ ಕೊಂಡೊಯ್ಯುವಂಥದೂ ಆಗಿದ್ದು ತಡೆಯಿಲ್ಲದ್ದು ಆಗಿದೆಯೋ, ಯಾವುದೇ ಬಾಹ್ಯ ಪ್ರೇರಣೆಯಿಂದ ದೊರಕದ್ದು ಆಗಿದೆಯೋ ಅದು ಧರ್ಮ. ಈಗಾಗಲೇ ಅರಬ್, ಚೀನಾ, ರಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಶ್ರೀ ಕೃಷ್ಣನ ದೇವಾಲಯಗಳು ನಿರ್ಮಿಸಲ್ಪಟ್ಟಿವೆ. ಗೀತೆಯು ಅರೇಬಿಕ್ ಸೇರಿದಂತೆ ಜಗತ್ತಿನ 100ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಯಾಗಿದ್ದು ದೇಶಗಳ ಗಡಿಗಳನ್ನು ಮೀರಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದೆ. ಅದರೊಂದಿಗೆ ನಮ್ಮ ಸಂಸ್ಥೆಯ ಭಕ್ತರ ಹಲವಾರು ಸಾಹಿತ್ಯ ಕೃತಿಗಳು ತಲುಪುತ್ತಿವೆ.

ಕಾರ್ಯ ಚಟುವಟಿಕೆಗಳೇನು ?
ಯೋಜನೆಗಳನ್ನು ರೂಪಿಸುವುದು ಮತ್ತು ನಿಧಿ ಸಂಗ್ರಹ ನನಗೆ ನೀಡಿರುವ ಜವಾಬ್ದಾರಿಯಾಗಿದೆ, ಉದಾಹರಣೆಗೆ ಈಗ ಬೆಂಗಳೂರಿನ ವಸಂತಪುರದಲ್ಲಿ ಹೊಸದೊಂದು ದೇವಾಲಯ ನಿರ್ಮಾಣ ಯೋಜನೆ ಪ್ರಗತಿಯಲ್ಲಿದೆ, ಅದರೊಂದಿಗೆ ಕೃಷ್ಣಲೀಲಾ ಉದ್ಯಾನವನವೂ ಸಾಕಾರವಾಗಲಿದೆ. ಅಲ್ಲೀಗ ಅನಂತ ಶೇಷ ಸ್ಥಾಪನಾದಿ ಆರಂಭಿಕ ಕಾರ್ಯಗಳು ನೆರವೇರಿವೆ. ತಿರುಪತಿ ಬಾಲಾಜಿಯ ದೇವಾಲಯದ ಪ್ರತಿರೂಪದಲ್ಲೇ ನಿರ್ಮಾಣವಾಗುತ್ತಿರುವ ಶ್ರೀನಿವಾಸನ ಸನ್ನಿಧಿಯ ನಿರ್ಮಾಣವು ಭರದಿಂದ ಸಾಗಿದೆ. ಅದರ ಮುಖ್ಯ ಪ್ರಾಂಗಣವು ಒಂದು ಎಕರೆಗೂ ಹೆಚ್ಚಿನ ವಿಸ್ತೀರ್ಣವುಳ್ಳದ್ದಾಗಿರುತ್ತದೆ. ಅಮೇರಿಕಾದ ಸನ್ನಿವೇಲ್ ಪಶ್ಚಿಮ ತೀರದಲ್ಲಿ 80 ಎಕರೆ ಪ್ರದೇಶದಲ್ಲಿ, ವರ್ಜೀನಿಯಾ ಹಾಗೂ ಮಲೇಶಿಯಾ ದೇಶದಲ್ಲೂ ದೇವಾಲಯ ಸಮುಚ್ಛಯ ನಿರ್ಮಾಣ ಪ್ರಗತಿಯಲ್ಲಿದೆ. ಬೆಂಗಳೂರು ಈ ಎಲ್ಲಾ ಕಾರ್ ಯೋಜನೆಗಳ ಕೇಂದ್ರ ಕಛೇರಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಅದರಂತೆ ನಮ್ಮಲ್ಲಿ ನಡೆಯುತ್ತಿರುವ ಮತ್ತೊಂದು ಪ್ರಮುಖ ಕಾರ್ಯಕ್ರಮ ಅಕ್ಷಯ ಪಾತ್ರ, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವುದಾಗಿದೆ. 2001ರಲ್ಲಿ ಸುಮಾರು 1,500 ಮಕ್ಕಳಿಗೆಂದು ಬೆಂಗಳೂರಿನಲ್ಲಿ ಆರಂಭವಾದ ಯೋಜನೆ 15 ವರ್ಷದಲ್ಲಿ 15 ಲಕ್ಷ ಮಕ್ಕಳಿಗೆ ಪ್ರತಿದಿನ ಬಿಸಿಯೂಟ ಒದಗಿಸುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿದಿನ ಸರ್ಕಾರದ ಸುಮಾರು 60 ಲಕ್ಷ ಅನುದಾನದೊಂದಿಗೆ ಸಂಸ್ಥೆಯು 50 ಲಕ್ಷ ಕೊರತೆಯನ್ನು ತುಂಬುವ ಈ ಕಾರ್ಯಕ್ರಮ ಅದ್ಭುತವಾಗಿ ನಿರಾತಂಕವಾಗಿ ಸಾಗಿದೆ.
ಯುವ ಜನರಿಗಾಗಿ ಕಾಲೇಜುಗಳಲ್ಲಿ ಫ್ರೆಂಡ್ಸ್ ಆಪ್ ಕೃಷ್ಣ ಎಂಬ ಧಾರ್ಮಿಕ ಮೌಲ್ಯಗಳನ್ನು ತಿಳಿಸಿಕೊಡುವ ಕಾರ್ಯಕ್ರಮವು ಆರಂಭವಾಗಿದ್ದು ಸಾವಿರಾರು ಯುವಜನರು ನಮ್ಮ ಸಂಸ್ಥೆಯ ಕಾರ್ಯದೆಡೆಗೆ ಆಕರ್ಷಿತರಾಗುತ್ತಿದ್ದಾರೆ, ಆ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಜೀವನದಲ್ಲಿ ಅವರು ಲೋಕಜ್ಞಾನವನ್ನು ಪಡೆಯುವ ಹಂತದಲ್ಲೇ ಜೊತೆಜೊತೆಯಲ್ಲಿ ಧರ್ಮದ ಜ್ಞಾನ ಪಡೆಯುವುದು ಅತ್ಯವಶ್ಯವಾಗಿದೆ. ವೃತ್ತಿನಿರತ ಯುವಕರಿಗೆ ಬಹಳ ಕಡಿಮೆ ವೆಚ್ಚದ ವಸತಿ ಒದಗಿಸುತ್ತೇವೆ ಅವರಿಗೆ ಇಲ್ಲಿಂದಲೇ ಪ್ರಸಾದ ಊಟವನ್ನು ಒದಗಿಸುತ್ತೇವೆ, ಹರಿನಾಮ ಪ್ರಸಾದವೂ ಅದರೊಂದಿಗೆ ಜ್ಞಾನಾರ್ಜನೆಯೂ ಆಗಿ ಅವನೊಬ್ಬ ಸಮಾಜಕ್ಕೆ ಬೇಕಾದ ಪರಿಪೂರ್ಣ ಸಮಾಜಮುಖಿ ವ್ಯಕ್ತಿಯಾಗಿ ರೂಪುಗೊಳಿಸಲು ಸಂಸ್ಥೆಯು ಕಾರ್ಯನಿರತವಾಗಿವೆ.
ನಮ್ಮ ಪುಸ್ತಕ ಪ್ರಕಟಣಾ ವಿಭಾಗ ಮತ್ತೊಂದು ಅದ್ಭುತ ಕಾರ್ಯಕ್ರಮವಾಗಿದೆ. ಗೀತೆಯನ್ನು ಸಂಸ್ಕೃತ ಶ್ಲೋಕ ಪದಗಳ ಅರ್ಥ, ಭಾವಾರ್ಥ, ನಂತರ ಪ್ರತಿಶ್ಲೋಕದ ವಿವರಣೆಯ ಪುಸ್ತಕಗಳನ್ನು ಜಗತ್ತಿನಾದ್ಯಂತ ನೀಡಲಾಗುತ್ತಿದೆ. ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಮುದ್ರಿಸಿ ನೀಡಲಾಗುತ್ತಿದೆ. ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಅವರವರ ಆಯ್ಕೆಯ ಭಾಷೆಯಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಅದರಂತೆ 100 ಭಾಷೆಯಲ್ಲಿ ಗೀತೆ ಮತ್ತು ಭಾಗವತ ಗ್ರಂಥಗಳನ್ನು ಮುದ್ರಿಸಲಾಗಿದೆ. ಜಗತ್ತಿನ ಅತ್ಯುನ್ನತ ಬೊಸ್ಟನ್ ವಿಶ್ವವಿದ್ಯಾಲಯವೂ ಸೇರಿದಂತೆ ಅನೇಕ ವಿದ್ಯಾಲಯಗಳು ನಮ್ಮ ಗ್ರಂಥಗಳನ್ನು ಪ್ರಮಾಣೀಕೃತ ಗ್ರಂಥಗಳಾಗಿ ಗುರುತಿಸಿ ತಮ್ಮ ವಿದ್ಯಾರ್ಥಿಗಳಿಗೆ ನೀಡಲು ಸ್ವೀಕರಿಸಿವೆ.
ಇಸ್ಕಾನ್ ದೇವಾಲಯಗಳನ್ನು ಭಾರತದಲ್ಲಿ ಆಜೀವ ಸದಸ್ಯತ್ವಗಳ ಮೂಲಕ ನಿರ್ಮಿಸಲಾಗಿದೆ. ಹಾಗೇ ಜಗತ್ತಿನ ಇತೆರೆಡೆಗಳಲ್ಲಿ ನಮ್ಮ ಪುಸ್ತಕಗಳನ್ನು ನೀಡಿ ಸಂಗ್ರಹಿಸುವ ವಂತಿಗೆ-ನಿಧಿಗಳ ಸಂಗ್ರಹದಿಂದ ನಿರ್ಮಿಸಲಾಗುತ್ತಿದೆ. ಅಮೆರಿಕೆಯ ಯಾವುದೇ ವಿಮಾನ ನಿಲ್ದಾಣ ರೈಲು ನಿಲ್ದಾಣಗಳಿಗೆ ಹೋದರೂ ನಮ್ಮಂತೆ ಕೇಸರಿ ಧರಿಸಿದ ಇಸ್ಕಾನ್ ಭಕ್ತರು ಅಧ್ಯಾತ್ಮದ ಪುಸ್ತಕಗಳನ್ನು ಕೊಡುತ್ತಾರೆ ಮತ್ತು ಪ್ರತಿಫಲವಾಗಿ ಕೊಟ್ಟಷ್ಟನ್ನು ಸಂಗ್ರಹ ಮಾಡುತ್ತಾರೆ. ವಿದೇಶಗಳಲ್ಲಿ ಓದುವ ಹವ್ಯಾಸ ಉಳ್ಳ ಜನ ಕೃಷ್ಣನ ಸಂಕಲ್ಪದಂತೆ ಬಹಳ ಖುಷಿಯಿಂದ ನಮಗೆ ಹೆಚ್ಚುವರಿ ಹಣವನ್ನೇ ನೀಡುವ ಮೂಲಕ ಧನಸಂಗ್ರಹವಾಗುತ್ತದೆ. ಆದರೆ ಅಲ್ಲೆಲ್ಲಾ ಭಾರತೀಯರಂತೆ ಸ್ವಪ್ರೇರಣೆಯಿಂದ ವಂತಿಗೆಗಳನ್ನು ನೀಡುವುದಿಲ್ಲ, ಅಲ್ಲಿ ಆ ರೀತಿಯ ಸಂಸ್ಕೃತಿ ಇಲ್ಲ.

ಪ್ರಭುಪಾದರ ಸಂಕಲ್ಪವೇನು ?
 ಸಂಕ್ಷಿಪ್ತವಾಗಿ ಹೇಳುವುದಾದರೆ ಜಗತ್ತಿನ ಜನವೆಲ್ಲಾ ಸಂತೋಷದಿಂದ ಬದುಕಬೇಕು, ಅದೇ ರೀತಿ ಇಡೀ ಪ್ರಪಂಚವೇ ವಾಸಿಸುವಂಥ ಮನೆಯನ್ನು ನಿರ್ಮಿಸಬೇಕೆಂಬುದಾಗಿದೆ ಅಷ್ಟೇ. ನಾವು ಈ ಪರಂಧಾಮದಲ್ಲಿ ಆತಂಕಗಳಿಲ್ಲದೆ ಜೀವಿಸುತ್ತಿದ್ದೇವೆ. ನೋಡಿ, ಅಕ್ಷಯಪಾತ್ರ ಯೋಜನೆಗೆ ಪ್ರತಿದಿನ 50 ಲಕ್ಷ ಹಣ ಕೊರತೆಯನ್ನು ತುಂಬಬೇಕು. ಆದರೆ ನಾವು ಅದರ ಬಗ್ಗೆ ಕಾರ್ಯನಿರತರಾಗಿದ್ದೇವೆಯೇ ಹೊರತು ಆತಂಕಪಡುವುದಿಲ್ಲ. ಏಕೆಂದರೆ ಅದಕ್ಕಾಗಿ ಬಹು ದೊಡ್ಡ ತಂಡವೇ ಕೆಲಸ ಮಾಡುತ್ತಿದೆ ಎನ್ನುವುದಕ್ಕಿಂತ ಮಿಗಿಲಾಗಿ ಅದು ಪರಮಾತ್ಮನ ಕೆಲಸ ಅವನ ಈ ಕೆಲಸಕ್ಕೆ ನಾವೆಲ್ಲಾ ಉಪಕರಣಗಳು. 9 ರಾಜ್ಯಗಳ 23 ಅಡುಗೆ ಮನೆಗಳಲ್ಲಿ 5,000 ಜನಕ್ಕೆ ನೇರ ಉದ್ಯೋಗ ಒದಗಿಸಿರುವ ಈ ಕಾರ್ಯಕ್ರಮವು ನಿರಂತರ ಬೆಳೆಯುತ್ತಲೇ ಸಾಗಿದೆ. ಜಗತ್ತಿನ ಅತಿ ದೊಡ್ಡ ಮಧ್ಯಾಹ್ನದ ಬಿಸಿಊಟ ನೀಡುವ ಕಾರ್ಯಕ್ರಮವಾಗಿರುವ ಬೆಂಗಳೂರಿನ ಕೇಂದ್ರಕ್ಕೆ ಮಾನ್ಯ ರಾಷ್ಟ್ರಪತಿಗಳು ಕೆಲವೇ ದಿನಗಳಲ್ಲಿ ಭೇಟಿ ನೀಡುವ ನಿರೀಕ್ಷೆಯಲ್ಲಿದ್ದೇವೆ.

ಕನ್ನಡ ನುಡಿ, ಕನ್ನಡನಾಡು, ಹಾಗು ಈಗ ಸಂಕಷ್ಟಕ್ಕೆ ಕಾರಣವಾಗಿರುವ ಬರಪರಿಸ್ಥಿತಿಯ ಸುಧಾರಣೆಯಲ್ಲಿ ಇಸ್ಕಾನ್ ಯಾವರೀತಿ ಸ್ಪಂದಿಸುತ್ತಿದೆ ?
ನಾವು ಅಕ್ಷಯ ಪಾತ್ರದ ಮೂಲಕ ಉತ್ತರ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಬಿಸಿಯೂಟವನ್ನು ಒದಗಿಸುತ್ತಿದ್ದೇವೆ, ಜೊತೆಗೆ ವಿಶೇಷ ಪೂಜಾ ಹವನ ಪ್ರಾರ್ಥನಾದಿಗಳನ್ನು ನಿರಂತರ ಏರ್ಪಡಿಸಿದ್ದೇವೆ. ಇಸ್ಕಾನಿನ ಎಲ್ಲಾ ಪುಸ್ತಕ ನಿಯತಕಾಲಿಕೆಗಳನ್ನು ಕಾಲಿಕೆಗಳನ್ನು ಕನ್ನಡದಲ್ಲಿ ಮುದ್ರಿಸುತ್ತಿದ್ದೇವೆ. ಕನ್ನಡದಲ್ಲಿ ಮುದ್ರಿತವಾಗಿರುವ ಭಗವದ್ಗೀತೆಯು 2,50,000ಕ್ಕೂ ಹೆಚ್ಚು ಪ್ರತಿ ಜನರಿಗೆ ತಲುಪಿದೆ, ಅಷ್ಟಲ್ಲದೆ ಕನ್ನಡದ ಪುಸ್ತಕಗಳು ಕರ್ನಾಟಕದ ಆಚೆಗೂ ದೇಶದ ಆಚೆಗೂ ದೊರೆಯುವಂತೆ ನಮ್ಮ ಎಲ್ಲಾ ದೇವಾಲಯಗಳಲ್ಲೂ ವಿಶ್ವಾದ್ಯಂತ ಕನ್ನಡ ಮುಟ್ಟುವಂತೆ ವ್ಯವಸ್ಥೆ ಮಾಡಿದ್ದೇವೆ. ಅನೇಕ ಕನ್ನಡ ಲೇಖಕರಿಗೆ ಲೇಖನ, ಅನುವಾದ ಇತ್ಯಾದಿ ಕೆಲಸಗಳಲ್ಲಿ ತೊಡಗಿಸಿಕೊಂಡು ಅವರಿಗೆ ನೆರವು ನೀಡುತ್ತಿದ್ದೇವೆ. ಬಾಬು ಕೃಷ್ಣಮೂರ್ತಿಯವರು ಪ್ರಭುಪಾದರ ಬಗ್ಗೆ ಬರೆದಿರುವ ಮಹಾಸಾಧಕ ಕನ್ನಡ ಕೃತಿಯನ್ನು ಹೊರತಂದಿದ್ದೇವೆ. ಬೆಂಗಳೂರು ಮೈಸೂರು ಧಾರವಾಡ ಸೇರಿದಂತೆ ಹಲವೆಡೆ ಆಗಾಗ ವಿಚಾರ ಸಂಕಿರಣಗಳನ್ನು ಸಹ ನಡೆಸಿದ್ದು ಕನ್ನಡದ ಹಲವಾರು ಪ್ರಕಾಶನ ಸಂಸ್ಥೆಗಳಿಗೂ ಸಹಕಾರ ನೀಡುವ ಮೂಲಕ ಸಹಾಯ ಒದಗಿಸಿದ್ದೇವೆ. ಪೊಲೀಸರ, ಪೌರಕಾರ್ಮಿಕರ, ಆಟೋಚಾಲಕರ ಮುಂತಾದ ಆರ್ಥಿಕವಾಗಿ ಹಿಂದುಳಿದ ವೃತ್ತಿನಿರತರ ಮಕ್ಕಳಿಗೆ ಕನ್ನಡ ಸಂಘಸಂಸ್ಥೆಗಳ ಮೂಲಕ ಅರ್ಜಿಗಳನ್ನು ವಿತರಿಸಿ ಅವರು ಸೂಚಿಸುವ ಮಕ್ಕಳಿಗೆ ವಿದ್ಯಾರ್ಥಿವೇತನ, ವೈದ್ಯಕೀಯ ನೆರವು ಕಾರ್ಯಗಳನ್ನೂ ಮಾಡುತ್ತಿದ್ದು ವರ್ಷಂಪ್ರತಿ ಇಸ್ಕಾನ್ ಸುಮಾರು 70 ಲಕ್ಷ ರೂ.ಗಳನ್ನು ಇದಕ್ಕಾಗಿ ವ್ಯಯಮಾಡುತ್ತಿದೆ.

ಭಕ್ತರಿಗೆ ನಿಮ್ಮ ಸಂದೇಶವೇನು ?
ಭಗವದ್ಗೀತೆಯ ಸಂದೇಶ ಬಹಳ ಸರಳವಾಗಿದೆ ನಮ್ಮ ಬದುಕನ್ನು ಸುಲಭವಾಗಿಸಲು ಕೃಷ್ಣ ಹೇಳಿರುವುದಿಷ್ಟೆ :
ಮನ್ಮಮನಃ ಎಂದರೆ ನನ್ನನ್ನು ಕುರಿತು ಚಿಂತಿಸು, ನಾನು ನಿನ್ನನ್ನೇ ನನ್ನಲ್ಲಿಗೆ ಕರೆದುಕೊಳ್ಳುತ್ತೇನೆ ಖಂಡಿತವಾಗಿ ನನ್ನವನನ್ನಾಗಿಸಿಕೊಳ್ಳುತ್ತೇನೆ ಎಂದಿದ್ದಾನೆ ಮತ್ತು ಅದಕ್ಕಾಗಿ ಅವನು ಹೇಳಿರುವ ಮಾರ್ಗವೂ ಬಹಳ ಸರಳವಾಗಿದೆ
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಚತಿ
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ॥
ಎಂದರೆ ಭಕ್ತಿ ಪೂರ್ವಕವಾಗಿ ಕೇವಲ ಒಂದು ಎಲೆಯನ್ನೋ, ಹೂವನ್ನೋ, ಹಣ್ಣನ್ನೋ ಕಡೆಗೆ ನೀರನ್ನಾದರೂ ಸಮರ್ಪಿಸು ಅದನ್ನು ಖಂಡಿತವಾಗಿಯೂ ಸ್ವೀಕರಿಸುತ್ತೇನೆ. ಎಂಬುದಾಗಿದೆ. ಜೈ ಶ್ರೀ ಕೃಷ್ಣ.

   

Leave a Reply