ಲೇಖನಗಳು - 0 Comment
Issue Date :

ಸಂದರ್ಶನ

  • ಡಾ. ಜಿ.ಹೆಚ್. ಪಾಂಡುರಂಗ ವಿಠಲ

ಮೈಸೂರಿನಲ್ಲಿ ನೆಲೆಸಿರುವ ಸಿದ್ಧವೈದ್ಯ ಪಿ.ಎಸ್. ನರಸಿಂಹಸ್ವಾಮಿ ಅವರು ಕಳೆದ 25 ವರ್ಷಗಳಿಂದ ಪ್ರಾಚೀನ ಸಿದ್ಧರ ಜ್ಞಾನದ ಅಧ್ಯಯನ, ರಕ್ಷಣೆ, ಪ್ರಚಾರ ಹಾಗೂ ಆಚರಣೆಯಲ್ಲಿ ತೊಡಗಿದ್ದಾರೆ.  ವಂಶಪಾರಂಪರ್ಯವಾಗಿ ಹದಿನಾಲ್ಕು ತಲೆಮಾರುಗಳಿಂದ ಸಿದ್ಧವೈದ್ಯದಲ್ಲಿ ತೊಡಗಿದ್ದ ಮನೆತನದಿಂದ ಬಂದ ಇವರು ರೋಗಿಗಳಿಗೆ ಸೇವೆ ಸಲ್ಲಿಸುವುದಲ್ಲದೆ, ವಿವಿಧ ಭಾಷೆಗಳಲ್ಲಿರುವ ಪ್ರಾಚೀನ ಸಿದ್ಧ ಸಾಹಿತ್ಯವನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸುತ್ತಿದ್ದಾರೆ.  ಅಗಸ್ತ್ಯ ಸಿದ್ಧ ಚಾರಿಟಬಲ್ ಟ್ರಸ್ಟ್’ ಮೂಲಕ ಬಡವರಿಗೆ ಔಷಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಕೆಲವು ವರ್ಷಗಳು ಇವರು ಹರ್ಬಲ್ ಹೆರಿಟೇಜ್ ಎಂಬ ತ್ರೈಮಾಸಿಕನ್ನು ಪ್ರಕಟಿಸುತ್ತಿದ್ದರು. ದೇಶ ವಿದೇಶಗಳಲ್ಲಿ ಇವರ ಔಷಧಗಳಿಂದ ಗುಣಹೊಂದಿದ ರೋಗಿಗಳಿದ್ದಾರೆ.  ಬೆಂಗಳೂರಿನಲ್ಲೂ ಇವರು ಪ್ರತಿ ಶನಿವಾರ, ಭಾನುವಾರ ತಮ್ಮ ಸೇವಾಕೇಂದ್ರವನ್ನು ನಡೆಸುತ್ತಿದ್ದು, ದೂರದ ರೋಗಿಗಳನ್ನು ನೋಡಲು ಅನುಕೂಲವಾಗಿದೆ. ಸಿದ್ಧವೈದ್ಯದ ಬಗ್ಗೆ ಕುತೂಹಲವುಳ್ಳವರು ಇವರ ವೆಬ್‌ಸೈಟ್ ಅನ್ನು ನೋಡಬಹುದಾಗಿದೆ:
http://agasthiaherbal.tripod.com 

ದೂ : 0821-2542642, 9845167119

 ಆಯುರ್ವೇದ ಹಾಗೂ ಸಿದ್ಧ ಪದ್ಧತಿಗಳ ನಡುವಿನ ವ್ಯತ್ಯಾಸವೇನು?

 ಬಹಳಷ್ಟು ಸಾಮ್ಯತೆಗಳಿವೆ. ಮೂಲಿಕೆ, ತ್ರಿದೋಷ, ಪಂಚಭೂತ ಇತ್ಯಾದಿ ತತ್ವಗಳೆಲ್ಲ ಒಂದೇ. ದಕ್ಷಿಣ ಭಾರತದ ಸಿದ್ಧವೈದ್ಯ ಕ್ರಿ.ಪೂ. ನಾಲ್ಕನೆ ಶತಮಾನದಷ್ಟು ಹಳೆಯದಾದರೆ, ಆಯುರ್ವೇದ ಕ್ರಿ.ಶ. ಮೂರನೆ ಶತಮಾನದಲ್ಲಿ ಪ್ರಚಾರಕ್ಕೆ ಬಂದಿತು. ಲೋಹ ಭಸ್ಮಗಳ, ನವ ಪಾಷಾಣಗಳ ಉಪಯೋಗ ಸಿದ್ಧ ಪದ್ಧತಿಯ ವೈಶಿಷ್ಟ್ಯ. ಶೈವ ಸಂಪ್ರದಾಯದ ಸಿದ್ಧ ಔಷಧಗಳನ್ನು ಆರ್ಷ ಸಂಪ್ರದಾಯದ ಆಯುರ್ವೇದದವರು ಬಳಸಲು ತೊಡಗಿದರು. ಆಯುರ್ವೇದ ಕೋರ್ಸ್‌ಗಳ ತರಹ ಸಿದ್ಧ ಕೋರ್ಸ್‌ಗಳು ತಮಿಳ್ನಾಡಿನಲ್ಲಿವೆ. ಪ್ರತಿಶತ 99ರಷ್ಟು ಸಿದ್ಧ ಗ್ರಂಥಗಳು ಹಳೆ ತಮಿಳಿನ ಪದ್ಯಗ್ರಂಥಗಳಲ್ಲಿವೆ. 2-3 ರೀತಿ ಅರ್ಥೈಸಬಹುದಾದ ಇವುಗಳ ಪರಿಭಾಷೆ ಕ್ಲಿಷ್ಟ. ಕಾಯಕಲ್ಪ ಚಿಕಿತ್ಸೆ, ಪಾದರಸವೇ ಮೊದಲಾದ ನವಪಾಷಾಣಗಳನ್ನು ಶುದ್ಧೀಕರಿಸಿ, ಪರ್ಪಂ (ಭಸ್ಮ), ಚಂದುರಂ (ಸಿಂಧೂರ) ಮಾಡಿ ಔಷಧವಾಗಿ ಬಳಸುವುದು ಜೀವನ ಶೈಲಿಯ ಬಗ್ಗೆ ಒತ್ತು ಇವು ಸಿದ್ಧರ ಕೊಡುಗೆಗಳು.

 ರೋಗಿಗಳನ್ನು ನೀವು ಹೇಗೆ ಉಪಚರಿಸುತ್ತೀರಿ?

 ನಾನು ಕೊಡುವ ಎಲ್ಲ ಔಷಧಿಗಳನ್ನು ಸ್ವತಃ ತಯಾರಿಸುತ್ತೇನೆ. ಮೂಲಿಕೆಗಳನ್ನು ನಾನೇ ಸಂಗ್ರಹಿಸುತ್ತೇನೆ. ಸಸ್ಯದ ಭಾಗಗಳನ್ನು ಸಂಗ್ರಹಿಸಲು ಕೆಲವು ತಿಥಿ, ಕಾಲಗಳನ್ನು ನಿರ್ದೇಶಿಸಿದ್ದಾರೆ. ಆಯಾ ಕಾಲದಲ್ಲಿ, ಸಸ್ಯಗಳ ಆ ಭಾಗಗಳು ವಿಶೇಷ ಗುಣವನ್ನು ಹೊಂದಿರುತ್ತವೆ. ವೃಕ್ಷಾಯುರ್ವೇದ ಎಂಬ ವಿಶಿಷ್ಟ ವಿಷಯವೇ ಇದೆ. ಅದರಲ್ಲಿ ಔಷಧ ಸಸ್ಯಗಳ ಉಪಯೋಗ, ಸಂಗ್ರಹಿಸಬೇಕಾದ ಕಾಲವನ್ನಲ್ಲದೆ, ಸಂಗ್ರಹಿಸುವಾಗ ಉಚ್ಚರಿಸಬೇಕಾದ ಮಂತ್ರಗಳನ್ನೂ ಹೇಳಿದೆ. ಸಿದ್ಧರುಗಳು ಸಸ್ಯಗಳೊಡನೆ ಮಾತನಾಡುತ್ತಿದ್ದರು. ಮನುಷ್ಯ-ಸಸ್ಯಗಳ ನಡುವೆ ಹೇಳಲಾಗದ ಸಂಬಂಧ ಇರುವುದು ಸ್ಪಷ್ಟ. ಸಸ್ಯಗಳು ಪ್ರಾಣವಾಯು ತಯಾರಿಸದಿದ್ದಲ್ಲಿ ನಾವು ಎಲ್ಲಿರುತ್ತಿದ್ದೆವು? ನಾನು ಕೆಲವು ಮೂಲಿಕೆಗಳನ್ನು ಕೀಳುವ ಮೊದಲು ಆ ಗಿಡಕ್ಕೆ ಪ್ರಾರ್ಥನೆ ಮಾಡಿ, ಅನುಮತಿ ಕೇಳುತ್ತೇನೆ. ಉದಾಹರಣೆಗೆ, ಒಂದು ಸಸ್ಯವನ್ನು ಆಶ್ಲೇಷಾ ನಕ್ಷತ್ರವಿರುವ ಭಾನುವಾರ ಕೀಳಬೇಕು ಎಂದು ಬರೆದಿದೆ. ವರ್ಷದಲ್ಲಿ ಅಂತಹ ಎರಡು ಮೂರು ದಿನಗಳು ಬರಬಹುದಷ್ಟೇ. ಸಿಕ್ಕ ಗಿಡದಲ್ಲೂ ಬೆಳೆಯಲು ಬೇಕಾದಷ್ಟು ಬಿಟ್ಟು ಸ್ವಲ್ಪ ಮಾತ್ರ ಕೀಳಬೇಕು. ಹೆಚ್ಚು ಕಿತ್ತರೆ ಗಿಡವೇ ನಾಮಾವಶೇಷವಾಗುತ್ತದೆ. ಆಯುರ್ವೇದ ಕಂಪನಿಗಳ ಪೂರೈಕೆದಾರರ ಅತಿಯಾಸೆಯಿಂದ ಎಷ್ಟೋ ಮೂಲಿಕೆಗಳು ಈಗ ಸಿಗುತ್ತಿಲ್ಲ.

 ಕಾಯಿಲೆಗಳಲ್ಲಿ ಎಷ್ಟು ಬಗೆ? ಉಪಚರಿಸುವ ವಿಧಾನವೇನು?

 ಗುಣವಾಗುವುದು, ಗುಣವಾಗದ್ದು ಹಾಗೂ ಹೊಂದಿಕೊಂಡು ನಿರ್ವಹಿಸಬಹುದಾದದ್ದು ಎಂದು ಕಾಯಿಲೆಗಳನ್ನು ಪ್ರಮುಖವಾಗಿ ವಿಂಗಡಿಸಬಹುದು. ರೋಗವನ್ನು ಗುರುತಿಸುವ ಬಗೆ ಮುಖ್ಯ. ರೋಗಿಯಿಂದ ರೋಗಿಗೆ ಇದು ಬೇರೆಬೇರೆ ಆಗುತ್ತದೆ. ಹೀಗಾಗಿ ನಾನು ಸುದೀರ್ಘವಾಗಿ ರೋಗದ ಹಿನ್ನೆಲೆಯನ್ನು ಬರೆದುಕೊಳ್ಳುತ್ತೇನೆ. ಕಣ್ಣಿಗೆ ಕಾಣುವ, ಕಾಣದ ಕಾರಣಗಳನ್ನು ಊಹಿಸಿ, ಚಿಕಿತ್ಸೆ ಆರಂಭಿಸುತ್ತೇನೆ. ಸುಮ್ಮನೆ ಔಷಧಿ ಕೊಡುತ್ತ ಹೋಗುವುದರಿಂದ ರೋಗ ಉಲ್ಬಣಿಸಲೂ ಬಹುದು. ಇಲ್ಲಿಗೆ ಬರುವ ಕ್ಯಾನ್ಸರ್ ರೋಗಿಗಳು ಕೊನೆಯ ಹಂತದಲ್ಲಿ ಬರುತ್ತಾರೆ. ಅವರನ್ನು ರೋಗದಿಂದ ನರಳುತ್ತಿರುವಂತಲ್ಲ, ರೋಗದೊಡನೆ ಜೀವಿಸುವಂತೆ ಮಾಡುತ್ತೇನೆ. ಅಂದರೆ ಅವರು ಬದುಕಿರುವಷ್ಟು ದಿನ ಸಾಧಾರಣ ನೋವಿನಲ್ಲಿ ಎಲ್ಲರಂತೆ ಇರುವುದು.

 ನಿಮ್ಮ ಔಷಧ ತೆಗೆದುಕೊಳ್ಳುವಾಗ ಪಥ್ಯ ಹೇಳುತ್ತೀರಾ?

 ಔಷಧ ಪರಿಣಾಮ ಬೀರಲು ನಿಷಿದ್ಧ ಆಹಾರ ತೆಗೆದುಕೊಳ್ಳಬಾರದು. ಪಥ್ಯಕ್ಕಿಂತ ಅನುಪಾನ ಮುಖ್ಯ. ಔಷಧವನ್ನು ಯಾವುದರಲ್ಲಿ ತೆಗೆದುಕೊಳ್ಳುವುದು ಎಂಬುದು ಅನುಪಾನ. ಎಲ್ಲಕ್ಕೂ ಜೇನುತುಪ್ಪ ಸೇರಿಸಿ ನುಂಗುವುದಲ್ಲ. ಅನುಪಾನವು ಔಷಧದಿಂದ ಔಷಧಿಗೆ, ರೋಗಿಯಿಂದ ರೋಗಿಗೆ ಬೇರೆ ಬೇರೆ ಆಗುತ್ತದೆ. ಒಂದೇ ರೋಗ, ಒಂದೇ ಔಷಧಿಗೆ ಬೇರೆ ಬೇರೆ ಋತುಗಳಲ್ಲಿ ಬೇರೆ ಬೇರೆ ಅನುಪಾನ ಇರುತ್ತದೆ. ನಾನು ಕೊಡುವ ಔಷಧವನ್ನು ಕಾಗದದ ಪೊಟ್ಟಣಗಳಲ್ಲ್ ಅಷ್ಟು ದಿನಕ್ಕೂ ಕಟ್ಟಿ ಕೊಡುತ್ತೇನೆ.
ಸಾಧಾರಣ ಎಲ್ಲ ತಿನ್ನುವ ಪದಾರ್ಥಗಳೇ ಪಥ್ಯ. ಏನನ್ನಾದರೂ ತಿಂದ ಒಂದು ಗಂಟೆ ಬಿಟ್ಟು ಔಷಧ ತೆಗೆದುಕೊಳ್ಳಬೇಕು. ಸಿದ್ಧವೈದ್ಯದಲ್ಲಿ ಕ್ರಮಬದ್ಧ ಉಸಿರಾಟಕ್ಕೆ ಮಹತ್ವವಿದೆ. ಕೆಲವು ರೋಗಿಗಳಿಗೆ ನಮ್ಮ ಪದ್ಧತಿಯ ಉಸಿರಾಟ ಹೇಳಿಕೊಡುತ್ತೇನೆ.

  ನಿಮ್ಮ ಪಾರಂಪರಿಕ ಹಿನ್ನೆಲೆ ತಿಳಿಸಿ.

 ನಾನು ನಾಲ್ಕನೆಯ ತರಗತಿಯಲ್ಲಿ ಇರುವಾಗಲೇ ನನ್ನ ಅಜ್ಜಿ ನನಗೆ ಮೂಲಿಕೆ ಗುರುತಿಸಿ ತರುವುದು, ಔಷಧ ತಯಾರಿಸುವುದರಲ್ಲಿ ಸಹಾಯಕನನ್ನಾಗಿ ತೆಗೆದುಕೊಂಡಿದ್ದರು. ಅಜ್ಜಿಯಿಂದಲೇ ಕಷಾಯ, ಚೂರ್ಣ, ಲೇಹ್ಯ, ಎಣ್ಣೆ, ಘೃತ ಮೊದಲಾದುವುಗಳನ್ನು ಮಾಡಲು ಕಲಿತೆ. ಬಿ.ಎಸ್ಸಿ ನಂತರ ಸಿದ್ಧವೈದ್ಯದಲ್ಲಿ ಪದವಿ ಪಡೆದೆ. ಬೇರೆ ಬೇರೆ ಕೆಲಸ ಮಾಡಿದೆ. ನಾನು ಈ ಕ್ಷೇತ್ರಕ್ಕೆ ಬಂದ ಹೊಸದರಲ್ಲೆ ಹಿಂದೂ ಪತ್ರಿಕೆಯ ವರದಿಗಾರರೊಬ್ಬರು ಎಲ್ಲೂ ಗುಣವಾಗದ ಅಮೀಬಿಕ್ ಕೊಲೈಟಿಸ್ ಚಿಕಿತ್ಸೆಗೆ
ಬಂದರು. ವರ್ಷಗಳಿಂದ ಗುಣವಾಗದ್ದು ಮೂರು ತಿಂಗಳಲ್ಲಿ ಪೂರ್ತಿ ಗುಣವಾದಾಗ ಆಶ್ಚರ್ಯಪಟ್ಟು, ತಮ್ಮ ಪತ್ರಿಕೆಯಲ್ಲಿ ನನ್ನ ದೀರ್ಘ ಸಂದರ್ಶನವನ್ನು ಪ್ರಕಟಿಸಿದರು. ಇದನ್ನು ಗಮನಿಸಿದ ತರಂಗ ಪತ್ರಿಕೆಯ ಗುಲ್ವಾಡಿಯವರು ತಮ್ಮ ಉಪಸಂಪಾದಕ  ಶಂಸ ಐತಾಳರನ್ನು ಕಳಿಸಿ, ಹೆಚ್ಚಿನ ಸಂದರ್ಶನ ಮಾಡಿಸಿದರು. ಹೀಗಾಗಿ ನನಗೆ ಪ್ರಸಿದ್ಧಿ ಬಂತು. ನಂತರ ದೂರದೂರದ ರೋಗಿಗಳು ತೊನ್ನು, ಗ್ಯಾಂಗ್ರೀನ್, ಕ್ಯಾನ್ಸರ್ ಮುಂತಾದ ಕಾಯಿಲೆಗಳಿಗೆ ನನ್ನ ಬಳಿ ಬಂದು ಸಾರ್ಥಕ ಚಿಕಿತ್ಸೆ ಪಡೆಯಲಾರಂಭಿಸಿದರು. ನಾನು ಒಬ್ಬನೇ ಯಾರ ಸಹಾಯವಿಲ್ಲದೆ ನನ್ನಿಂದ ಆದಷ್ಟು ಔಷಧ ತಯಾರಿಸಿ, ಅದರಿಂದ ಎಷ್ಟು ಜನರಿಗೆ ಆಗುತ್ತೋ ಅಷ್ಟು ಚಿಕಿತ್ಸೆ ಕೊಡುತ್ತೇನೆ. ಹೆಚ್ಚಿನ ಆಸೆಗೆ ಹೋಗಿಲ್ಲ. ಆಧುನಿಕ ಪರೀಕ್ಷೆಗಳನ್ನು ಮಾಡಿಸಿ, ಫಲಿತಾಂಶ ನೋಡುತ್ತೇನೆ. ಅಷ್ಟಸ್ಥಳ ವಿಧಾನದಲ್ಲಿ ಪರೀಕ್ಷೆ ಮಾಡುವುದು ನಮ್ಮ ವೈದ್ಯದಲ್ಲೇ ಇದೆ.

 ಬರಹಗಾರರಾಗಿ ತಮ್ಮ ಅನುಭವ ತಿಳಿಸಿ.

 ಹಿತೈಷಿಗಳ ಒತ್ತಾಯದ ಮೇಲೆ ಮೂಲಿಕಾ ವಿಜ್ಞಾನ ಪುಸ್ತಕ ಬರೆದೆ. ಭಾರತ ಸರಕಾರದ ಅನುದಾನದಿಂದ ಪ್ರಕಟಿಸಿದೆ. ಇನ್ನು ಪತ್ರಿಕೆಗಳಲ್ಲಿ ಅನೇಕ ಲೇಖನಗಳನ್ನು ಬರೆದಿದ್ದೇನೆ. ಮುಖ್ಯವಾಗಿ ಹಳೆಯ ತಾಳೆಓಲೆ, ತಮಿಳು ಗ್ರಂಥಗಳಲ್ಲಿರುವ ಸಿದ್ಧ ವೈದ್ಯ ವಿಚಾರಗಳನ್ನು ಅನುವಾದಿಸಿ ಪ್ರಕಟಿಸುತ್ತಿದ್ದೇನೆ. ಇಂಗ್ಲಿಷ್ ಲೇಖನಗಳನ್ನು ನನ್ನ ವೆಬ್‌ಸೈಟಿನಲ್ಲಿ ಹಾಕಿರುವೆನು. ವೈದ್ಯನಿಗೆ ತನ್ನ ರೋಗಿಗಳ ಚರಿತ್ರೆ ಕುತೂಹಲಕಾರಿ. ಮೊದಲು ಗುಣವಾದ ರೋಗಿಗಳ ಅನುಭವವನ್ನು ಬರೆದಿಡುತ್ತಿದ್ದೆ. ಅವರ ಸಂಖ್ಯೆ
ಹೆಚ್ಚಾದ ಮೇಲೆ ಬಿಟ್ಟೆ. ಚಿಕಿತ್ಸೆಯ ಮೊದಲಿನ ಹಾಗೂ ಆಮೇಲಿನ ಕೆಲವು ಫೋಟೋಗಳನ್ನು ಸಂಗ್ರಹಿಸಿ ಇಟ್ಟಿದ್ದೇನೆ.

  ಸಿದ್ಧವೈದ್ಯ ಪದ್ಧತಿಗೆ ಸರಕಾರದ ಬೆಂಬಲವಿದೆಯೇ?

 ಸರಕಾರವು ಯೋಗ, ಪ್ರಕೃತಿ ಚಿಕಿತ್ಸೆ, ಆಯುರ್ವೇದಗಳಿಗೆ ಸ್ವಲ್ಪ ಬೆಂಬಲ ನೀಡುತ್ತದೆ. ಕರ್ನಾಟಕದಲ್ಲಿ ಸಿದ್ಧವೈದ್ಯ ಬಳಕೆಯಲ್ಲಿ ಹೆಚ್ಚು ಇಲ್ಲದ ಕಾರಣ, ಸರಕಾರದ ಬೆಂಬಲದ ಪ್ರಶ್ನೆಯೇ ಬಾರದು. ತಮಿಳ್ನಾಡಿನಲ್ಲಿ ಸಿದ್ಧವೈದ್ಯ ಕಾಲೇಜುಗಳು ಇದ್ದು, ವೈದ್ಯರ ಸಂಖ್ಯೆ ಹೆಚ್ಚಿದೆ. ಅಲ್ಲಿನ ಸಮಾಜದಲ್ಲಿ ಈ ವೈದ್ಯರನ್ನು ಗೌರವದಿಂದ ಕಂಡು, ಚಿಕಿತ್ಸೆ ಪಡೆದುಕೊಳ್ಳುವವರು ಹೆಚ್ಚು. ಕರ್ನಾಟಕದಲ್ಲಿ ಅಲೋಪತಿ ಬಗ್ಗೆಯೆ ಜನರ ಒಲವು. ಮನೆ ಮದ್ದು ಮಾಡುವ ರೂಢಿ ತಪ್ಪುತ್ತಿದೆ. ನಾನು ಕೆಲವು ಶಾಲೆಗಳಿಗೆ ಹೋಗಿ, ಸರಳ ಔಷಧಿಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಪ್ರಯತ್ನಿಸುತ್ತಿರುತ್ತೇನೆ. ಪಠ್ಯದಲ್ಲಿ ಸರಳ ಮೂಲಿಕೆಗಳ ಬಗ್ಗೆ ಅರಿವು ಮೂಡಿಸುವ ಪಾಠಗಳು ಇದ್ದರೆ ಚೆನ್ನ. ನಾಲ್ಕೈದು ಸಾವಿರ ವರ್ಷಗಳಿಂದ ಪರಿಣಾಮಕಾರಿ ಎಂದು ಸಿದ್ಧಗೊಂಡ ವೈದ್ಯ ಪದ್ಧತಿಯ ಬಗ್ಗೆ ಜನರಲ್ಲಿ ತಾತ್ಸಾರವಿದ್ದು; ಕೇವಲ ಐದುನೂರು ವರ್ಷಗಳಷ್ಟು ಚರಿತ್ರೆಯುಳ್ಳ ಅಲೋಪತಿಯಲ್ಲಿನ ಕೊರತೆಗಳನ್ನು ನೋಡಿಯೂ ಅದಕ್ಕೇ ಜೋತುಬೀಳುವುದನ್ನು ನೋಡಿ ಸಂಕಟವಾಗುತ್ತದೆ.

 

   

Leave a Reply