1857ರ ದಲಿತ ವೀರಾಗ್ರಣಿಗಳು

ಇತಿಹಾಸ ; ಲೇಖನಗಳು - 0 Comment
Issue Date : 07.05.2016

-ಸಿ.ಎಸ್‍.ಶಾಸ್ತ್ರೀ

1857ರ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ದಲಿತರಿಗೆ ಭಾವನಾತ್ಮಕ ಬೆಸುಗೆಯಿದೆ. ಆ ಹೋರಾಟಕ್ಕೆ ಪ್ರೇರಣೆ ನೀಡಿದವರೇ ಅವರೆಂಬ ಹೆಮ್ಮೆ ಅವರಿಗಿದೆ. ಆ ದಲಿತ ನಾಯಕರ ಹೋರಾಟ ಅವರ ಯಾವುದೇ ಸ್ವಾರ್ಥಕ್ಕಾಗಿ ಆಗಿರಲಿಲ್ಲ. ಅದೊಂದು ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟವಾಗಿತ್ತೆಂಬುದನ್ನು ದಲಿತ ಸಾಹಿತ್ಯ ತೋರಿಸುತ್ತದೆ. ದಲಿತ ಹೋರಾಟಗಾರರಲ್ಲೂ ಪ್ರಾಣಾರ್ಪಣೆಗೈದ ಅಸಂಖ್ಯಾತ ಜನರ ಹೆಸರುಗಳು ದಾಖಲಾಗದೇ ಹೋಗಿವೆ. ಅದರಲ್ಲಿ ಕೆಲವೇ ಕೆಲವು ಪ್ರಮುಖ ಹೆಸರುಗಳನ್ನು ದಲಿತವೀರರಾಗಿ ಇಂದು ‘ಕೆಳಸ್ತರದ ಇತಿಹಾಸ’ ಅಧ್ಯಯನದಲ್ಲಿ (Subaltern Studies) ಕಾಣಬಹುದು. (Badri Narayan, ‘Dalit and Memories of 1857’-Article)

1857ರನ್ನು ‘ಸಿಪಾಯಿ ದಂಗೆ’ಯಾಗಿ ಅಥವಾ ‘ಸ್ವಾತಂತ್ರ್ಯ ಹೋರಾಟವಾಗಿ’ ಕಾಣುವಲ್ಲಿ ಕಾಣಸಿಗುವ ಪ್ರಥಮ ಹೆಸರೇ ‘ಮಂಗಳ್ ಪಾಂಡೆ’. 1857ರ ಮಾರ್ಚ್ 1 ರಂದು ಬೆಳಗ್ಗೆ ಸೈನಿಕ ಕವಾಯತು ನಡೆಯುತ್ತಿದ್ದಾಗ ಮಂಗಳ್ ಪಾಂಡೆ ಒಮ್ಮಿಂದೊಮ್ಮೆಗೆ ಬ್ರಿಟಿಷ್ ಮೇಲಧಿಕಾರಿಗಳ ಮೇಲೆ ಗುಂಡಿನ ದಾಳಿ ಮಾಡಿದ. ಆಮೇಲೆ ಮಂಗಳ್ ಪಾಂಡೆಯನ್ನು ಗಲ್ಲಿಗೇರಿಸಲಾಯ್ತು. ಅದರೊಂದಿಗೆ ‘ಸಿಪಾಯಿ ದಂಗೆ’ ಯ ಸ್ಫೋಟವಾಯಿತು. ಮಂಗಳ್ ಪಾಂಡೆಯ ದಾಳಿಗೆ ಪ್ರೇರಣೆ ನೀಡಿದವನೇ ಮತಾದಿನ್ ಬಾಂಗಿ. ಅದರ ನಿರೂಪಣೆಯನ್ನು ದಿನ್‌ಕರ್ ಅವರ ಕೃತಿಯಲ್ಲಿ ಕಾಣಬಹುದು. (D. C. Dinkar, “Swatantra Sangram. . . . . . 1990” – ಬರಾಕ್‌ಪುರದಲ್ಲಿ ಒಂದು ಮದ್ದುಗುಂಡು ತಯಾರಿಸುವ ಕಾರ್ಖಾನೆಯಿತ್ತು. ಅಲ್ಲಿಯ ಹೆಚ್ಚಿನ ಕೆಲಸಗಾರರು ಕೆಳವರ್ಗದವರಾಗಿದ್ದರು. ಒಂದು ದಿನ, ಓರ್ವ ಕೆಲಸಗಾರ ಅತೀ ಬಾಯಾರಿಕೆಯಿಂದ ಬಳಲಿ ಒಂದು ಲೋಟ ನೀರು ಕೇಳಿದಾಗ, ಬ್ರಾಹ್ಮಣ ಮಂಗಳ್ ಪಾಂಡೆ ಅಸ್ಪೃಶ್ಯನಾದ ಮತಾದಿನ್ ಬಾಂಗಿಗೆ ನೀರು ನೀಡಲು ನಿರಾಕರಿಸಿದ. ಕುಪಿತನಾದ ಮತಾದಿನ್ ಬಾಂಗಿ, ‘‘ನೀನು ಮರ್ಯಾದಸ್ಥ ಬ್ರಾಹ್ಮಣನೆಂದು ತಿಳಿದಿರುವೆಯಾ? ನೀನು ಹಲ್ಲಿನಿಂದ ಕಚ್ಚಿ ಉಪಯೋಗಿಸುವಂಥಹ ಕೋವಿ ತೋಟೆಗೆ ದನದ ಮತ್ತು ಹಂದಿಯ ಕೊಬ್ಬು ಸವರಿರುವುದನ್ನು ತಿಳಿದಿರುವೆಯಾ? ಆಗ ನಿನ್ನ ಬ್ರಾಹ್ಮಣತ್ವಕ್ಕೆ ಏನಾಗುವುದು? ನಿನಗೆ ಧಿಕ್ಕಾರ-ಧಿಕ್ಕಾರ’’ ಎಂದು ಬೊಬ್ಬಿರಿದ. ಆ ರೀತಿಯ ಕೊಬ್ಬು ಸವರಿದ ತೋಟೆಗಳನ್ನು ಬರಾಕ್‌ಪುರದಲ್ಲಿ ಮತಾದಿನ್ ಹಾಗೂ ಅವರ ಸಹಚರರು ತಯಾರಿಸುತ್ತಿದ್ದರು. ದಲಿತರಾದ ಅವರಿಗೆ ಕೊಬ್ಬು ಸವರುವುದು ನಿಷೇಧವಾಗಿರಲಿಲ್ಲ. ಆ ವಿಷಯ ತಿಳಿದೊಡನೆಯೇ ಬ್ರಾಹ್ಮಣ ಮಂಗಳ್ ಪಾಂಡೆಯ ಧಾರ್ಮಿಕ ಭಾವನೆಗೆ ಘಾಸಿಯಾಯಿತು. ಆತ ದಂಗೆಯೆದ್ದು
ಗುಂಡಿಟ್ಟ! ಆ ಪ್ರೇರಣೆಗೆ ಕಾರಣನಾದವನೇ ಮತಾದಿನ್ ಬಾಂಗಿ. ಮೇ 10ರಂದು ಬರಾಕ್‌ಪುರದಲ್ಲಿ ಸೈನಿಕ ದಂಗೆಯಾಯಿತು. ಅದರಲ್ಲಿ ಅನೇಕ ದಲಿತರು ಪಾಲ್ಗೊಂಡಿದ್ದರು. ಆ ದಂಗೆಯಲ್ಲಿ ಭಾಗವಹಿಸಿದ ‘ಅಪರಾಧಿ’ಗಳ ಪಟ್ಟಿಯಲ್ಲಿ ಮೊದಲನೇ ಹೆಸರೇ ಮತಾದಿನ್ ಬಾಂಗಿಯದಾಗಿತ್ತು. ನಾಥ್ ಅವರು ‘‘1987ರ ಕ್ರಾಂತಿಯ ಜನಕ ಮತಾದಿನ್ ಬಾಂಗಿ’’ ಎಂದಿದ್ದಾರೆ. ಆ ಅಸ್ಪೃಶ್ಯನಾದ ಮತಾದಿನ್ ಸ್ವಾತಂತ್ರ್ಯ ದಂಗೆಯಲ್ಲಿ ಪಾಲ್ಗೊಂಡುದುದಕ್ಕೆ ಅವರ ರಾಷ್ಟ್ರಾಭಿಮಾನವೇ ಕಾರಣವಾಗಿತ್ತು. ಶ್ರೀ ಆಚಾರ್ಯ ಭಗವಾನ್ ದೇಬ್ ಅವರು ಆ ಕ್ರಾಂತಿಕಾರಿಗಳ ಬಗ್ಗೆ ತಮ್ಮ ಗ್ರಂಥದಲ್ಲಿ ಹೇಳಿದ್ದಾರೆ. (The Immortal Revolutionaries of India) ದಲಿತ ಸಾಹಿತ್ಯ ಭಾರತೀಯ ಸಮಾಜದ ಕ್ರಮಾಗತ ವ್ಯವಸ್ಥೆಯನ್ನು (hierarchial structure) ಪ್ರಶ್ನಿಸುವುದಾಗಿದೆ. ‘ದಲಿತ್ ಕೇಸರಿ’, ‘ಅನಾರ್ಯ ಭಾರತ್’, ‘ಹಿಮಾಯತಿ’ ಮೊದಲಾದ ಪತ್ರಿಕೆಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿಯ ಮತಾದಿನ್ ಬಾಂಗಿಯ ಪಾತ್ರವನ್ನು ಪ್ರಶಂಸಿಸಲಾಗಿದೆ. ಆದರೆ ನಮ್ಮ ಇತಿಹಾಸ ಪಠ್ಯಗಳಲ್ಲಿ ಅದನ್ನು ಕಡೆಗಣಿಸಲಾಗಿದೆ.
ಬರಾಕ್‌ಪುರದ ಘಟನೆಯ ಪ್ರತಿಧ್ವನಿಯಾಗಿ ವಿವಿಧೆಡೆಗಳಲ್ಲಿ ದಂಗೆಗಳಾದವು. ಒಂದು ದಂಗೆಯಲ್ಲಿ, (Soro in Eta district) 1857ರ ಮೇ 26ರಂದು ಚೇತಾರಾಮ್ ಜಟಾವ್ ಮತ್ತು ಭಲ್ಲೂರಾಮ್ ಮೆಹತರ್, ಜೀವದ ಹಂಗು ತೊರೆದು ದಂಗೆಯೆದ್ದರು. ಅದರಲ್ಲಿ ಚತುರ್ಭುಜ ವೈಶ್ ಮತ್ತು ಸದಾಶಿವ ಮೆಹ್ರ ಅವರೂ ಭಾಗಿಯಾದರು. ಆ ಹೋರಾಟವನ್ನು ಹತ್ತಿಕ್ಕಲು ಫಿಲಿಪ್ಸ್ ಅವರಿಗೆ ಬಹಳ ತ್ರಾಸವಾಯಿತು. ಆಮೇಲೆ, ಹೇಗಾದರೂ ಭಲ್ಲೂರಾಮ್‌ಮತ್ತು ಚೇತಾರಾಮ್ ಅವರನ್ನು ಮರಕ್ಕೆ ಕಟ್ಟಿ,
ಗುಂಡಿಟ್ಟು ಕೊಲ್ಲಲಾಯಿತು. ಉಳಿದವರನ್ನೆಲ್ಲಾ ಕಾಸ್‌ಗಂಜ್‌ನಲ್ಲಿ ಮರಕ್ಕೆ ನೇತುಹಾಕಿ ಕೊಲ್ಲಲಾಯಿತು!
ಬಂಕೀ ಚಾಮರ್, ಜಾನ್‌ಪುರದ ಮಾಚೀಶಹರಿಗೆ ಸೇರಿದ ದಲಿತನಾಗಿದ್ದ. ಬ್ರಿಟಿಷರ ವಿರುದ್ಧ ಅವನು ಸುಮಾರು 18 ಜನರನ್ನು ಒಂದುಗೂಡಿಸಿ ದಂಗೆ ಎದ್ದ. ಅಲ್ಪ ಸ್ವಲ್ಪ ಶಸ್ತ್ರಾಸ್ತ್ರಗಳೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡಿ ಅವರು ವಿಫಲರಾದರು. ಬ್ರಿಟಿಷರು ಅವರನ್ನು ‘‘ಭಾಗೀ’’ ಎಂದು ಘೋಷಿಸಿದರು ಮತ್ತು ಅವರನ್ನೆಲ್ಲಾ ಹತ್ಯೆಮಾಡಲಾಯಿತು.
ದಲಿತ ಹೋರಾಟಗಾರರಲ್ಲಿ ಸಾಹಸ ಪ್ರದರ್ಶಿಸಿದ ಓರ್ವ ವೀರಾಗ್ರಣಿ, ವೀರ ಪಾಸೀ. ಉತ್ತರ ಪ್ರದೇಶದ ರಾಯ್‌ಬರೇಲಿಯ ರಾಜ, ರಾಜಾ ಬೇನೀ ಮಾಧವ್ ಬ್ರಿಟಿಷರ ವಿರುದ್ಧ ದಂಗೆ ಎದ್ದ. ಅವನನ್ನು ಬಂಧಿಸಲಾಗಿ ಕಾರಾಗೃಹಕ್ಕೆ ತಳ್ಳಿದರು. ರಾಜನ ನಿಷ್ಠಾವಂತನಾದ ವೀರ ಪಾಸೀ ಹೇಗಾದರೂ, ಯಾವುದೇ ಬೆಲೆತೆತ್ತಾದರೂ ರಾಜನನ್ನು ಬಂಧಮುಕ್ತನನ್ನಾಗಿ ಮಾಡುವ ಪ್ರಯತ್ನ ಕೈಗೊಂಡನು. ಒಂದು ದಿನ ವೀರ ಪಾಸೀ ಯಾರಿಗೂ ತಿಳಿಯದಂತೆ ಕಾರಾಗೃಹದ ಆವರಣ ಪ್ರವೇಶಿಸಿದನು. ಅಲ್ಲೇ ಮರಗಳ ಮಧ್ಯೆ ಅಡಗಿ ಕುಳಿತು, ಸಮಯ ಕಾದು, ಸೆರೆಮನೆಗೆ ನುಗ್ಗಿ ರಾಜನನ್ನು ಬಿಡಿಸಿಕೊಂಡು ಹೊರನಡೆದನು! ಅದೊಂದು ಅದ್ಭುತ ಸಾಹಸವಾಗಿತ್ತು! ಬ್ರಿಟಿಷರ ಬಂದೋಬಸ್ತಿನಿಂದ, ಅದೂ ಸರ್ಪಗಾವಲಿನ ಸೆರೆಮನೆಯಿಂದ ರಾಜನನ್ನು ಬಂಧಮುಕ್ತನಾಗಿ ಮಾಡಿ ಕಣ್ಮರೆಯಾದುದು ನಂಬಲಾಗದ ಸತ್ಯವಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಅದು ಬ್ರಿಟಿಷರಿಗೆ ಆದ ಅವಮಾನವಾಗಿತ್ತು. ವೀರ ಪಾಸೀ ತಲೆಗೆ 50, 000 ರೂಪಾಯಿ ಘೋಷಿಸಲಾಯಿತು. ಪಾಸೀ ಜನರು ಅಸಾಂಪ್ರದಾಯಕ ಹೋರಾಟ ಮುಂದುವರಿಸಿದರು ಮತ್ತು ಅದನ್ನು ನಿಯಂತ್ರಿಸಲು ಬ್ರಿಟಿಷರಿಂದ ಆಗಲೇ ಇಲ್ಲ.
ಪಾಸೀ ಜನರ ನಿರಂತರ ಹೋರಾಟ ಮುಂದುವರಿಯುತ್ತಿದ್ದಾಗ, ವೀರಾಂಗನೆ ಉದಾದೇವಿಯ ಗಂಡ ಮಕ್ಲಾ ಪಾಸೀ ಅದರ ನಾಯಕತ್ವ ವಹಿಸಿದ. ಜೂನ್ 10, 1857 ರಲ್ಲಿ ಆತ ಹೆನ್ರಿ ಲಾರೆನ್ಸ್‌ನ ನೇತೃತ್ವದ ಬ್ರಿಟಿಷ್ ಸೈನ್ಯದ ಮೇಲೆ ದಾಳಿ ಮಾಡಿದ. ಬೆನ್‌ಹಟ್ ಎಂಬಲ್ಲಿ ಮಕ್ಸಾ ಪಾಸೀ 200 ಜನರೊಂದಿಗೆ ಬ್ರಿಟಿಷ್ ಸೇನೆಯ ವಿರುದ್ಧ ಹೋರಾಡಿದ. ಆ ಹೋರಾಟದಲ್ಲಿ ಅನೇಕ ಆಂಗ್ಲ ಸೈನಿಕರನ್ನು ಹೊಡೆದುರುಳಿಸಲಾಯಿತು. ಆದರೆ, ಆಧುನಿಕ ಸುಸಜ್ಜಿತ ಬ್ರಿಟಿಷ್ ಸೈನ್ಯದೆದುರು ಪಾಸೀಗಳಿಗೆ ಹೆಚ್ಚಿನ ಕಾಳಗ ಮುಂದುವರಿಸಲಾಗಲಿಲ್ಲ. ಮಕ್ಲಾ ಪಾಸೀಯ ಪರಾಕ್ರಮ ಹಾಗೂ ಪರಿಶ್ರಮ ವ್ಯರ್ಥವಾಗಿ ಅವನು ವೀರಮರಣವನ್ನಪ್ಪಿದ.
1857ರ ಜುಲಾಯಿ 20 ರಂದು ಒಂದು ಬ್ರಿಟಿಷ್ ಪಡೆ ಲಕ್ನೋ ಹೆದ್ದಾರಿಯಲ್ಲಿ ಮಗರ್‌ವಾರಾದ ಮೂಲಕ ಹೆನ್ರಿ ಹ್ಯಾವ್‌ಲಾಕ್ ನೇತೃತ್ವದಲ್ಲಿ ಸಾಗುತ್ತಿದ್ದಾಗ ಸುಮಾರು 2000 ಪಾಸೀ ಜನರು ಹಠಾತ್ ದಾಳಿ ಮಾಡಿದರು. ಆಗ ಬ್ರಿಟಿಷರು ಕಾನ್ಪುರಕ್ಕೆ ಹಿಂದಿರುಗಿದರು. ಪುನಃ, ಅಗೋಸ್ತು 4ರಂದು ಹೆಚ್ಚಿನ ಸುಸಜ್ಜಿತ ಸೈನ್ಯದೊಂದಿಗೆ ಬ್ರಿಟಿಷರು ಮುನ್ನುಗ್ಗಿದಾಗ ಪಾಸೀ ಜನರು ಪ್ರಬಲ ಹೋರಾಟ ನೀಡಿದರು. ಅದರಲ್ಲಿ ಪಾಸೀಗಳಿಗೆ ಸೋಲಾಯಿತು. ಸುಮಾರು 2000 ಪಾಸೀಗಳು ಪ್ರಾಣಾರ್ಪಣೆಗೈದರು.
ಮಗರ್‌ವಾರಾ ಸಮೀಪದಲ್ಲಿ ಪಾಸೀ ಜನರು ವಾಸಿಸುವ ಕೆಲವು ಗ್ರಾಮಗಳಿದ್ದವು. ಒಂದು ಬಾರಿ ಆ ಪ್ರದೇಶದಲ್ಲಿ ಬ್ರಿಟಿಷ್ ಸೈನಿಕರು ಹಾದುಹೋಗುತ್ತಿದ್ದಾಗ ಪಾಸೀಗಳು ಅವರ ಮೇಲೆ ದಾಳಿ ಮಾಡಿದರು. ಬ್ರಿಟಿಷ್ ಸೇನೆ, ಆ ಪ್ರದೇಶವನ್ನು ಕೂಡಲೇ ತೊರೆಯುವಂತೆ ಪಾಸೀಗಳಿಗೆ ಹೇಳಿದರೂ ಅವರು ಕದಲಲಿಲ್ಲ. ಆಗ ಬ್ರಿಟಿಷರು ಫಿರಂಗಿ ದಾಳಿಮಾಡಿ ಇಡೀ ಗ್ರಾಮವನ್ನೇ ನಾಶಮಾಡಿದರು. ಆಮೇಲೆ, ಬ್ರಿಟಿಷರು ಆ ಸ್ಥಳವನ್ನು ಅವರ ತಂಗುದಾಣವಾಗಿ ಪರಿವರ್ತಿಸಿದರು. ಆದರೂ, ಜನರಲ್ ಹ್ಯಾವ್‌ಲಾಕ್‌ಗೆ ತೊಂದರೆ ತಪ್ಪಲಿಲ್ಲ! ಪುನಃ, ಪಾಸೀಗಳೊಡನೆ ಸಂಘರ್ಷವಾಗುತ್ತಿದ್ದಂತೆಯೇ ಹ್ಯಾವ್‌ಲಾಕ್ ಅಸೌಖ್ಯಕ್ಕೊಳಗಾಗಿ 1857ರ ನವಂಬರ್ 24 ರಂದು ಸಾವನ್ನಪ್ಪಿದ.

1857 ರ ಮೇಲಿನ ದಲಿತ ವರ್ಣನೆಗಳಲ್ಲಿ ಅವರ ನಾಯಕರನ್ನು ಬಹಳವಾಗಿ ವೈಭವೀಕರಿಸಲಾಗಿದೆ, ಮಾತ್ರವಲ್ಲದೆ, ಇತರ ಮೇಲ್ವರ್ಗದ ಮುಂದಾಳುಗಳನ್ನು ತುಚ್ಛೀಕರಿಸಲಾಗಿದೆ. ಅವರ ವರ್ಣನೆಗಳಲ್ಲಿ ಮೇಲ್ಜಾತಿಯ ನಾಯಕರನ್ನು ಸ್ವಾರ್ಥಿಗಳು, ಹೇಡಿಗಳು, ಒಳಸಂಚುಗಾರರು, ದೇಶದ್ರೋಹಿಗಳು…. ಇತ್ಯಾದಿಗಳಾಗಿ ಬಣ್ಣಿಸಲಾಗಿದೆ. ಅವರ ಪ್ರಕಾರ, ಚಿಕ್ಕ ಚಿಕ್ಕ ರಾಜರು, ಜಮೀನ್ದಾರರು, ಶ್ರೀಮಂತರು ಮೊದಲಾದವರೆಲ್ಲಾ ಬ್ರಿಟಿಷರ ಪರವಾಗಿದ್ದರೆಂದು ಹೇಳಲಾಗಿದೆ. ‘‘ನಿಜವಾದ ಸ್ವಾತಂತ್ರ್ಯ ಹೋರಾಟಗಾರರೆಂದರೆ ದೇಶಕ್ಕಾಗಿ ಬಲಿದಾನಗೈದ ದಲಿತರಲ್ಲದೆ ಬೇರಾರೂ ಅಲ್ಲ’’ ಎಂಬುದೂ ಅವರ ಅಭಿಪ್ರಾಯ. ಬಿಹಾರದ ಅನೇಕ ಕಡೆಗಳಲ್ಲಿ ಬಲಿದಾನಗೈದ ದಲಿತ ವೀರರನ್ನು ‘‘ಸ್ಥಳೀಯ ದೇವತೆ’’ಗಳಾಗಿ ಪೂಜಿಸುವ ಸಂಪ್ರದಾಯವನ್ನೂ ದಲಿತ ಸಮುದಾಯದವರು ಬೆಳೆಸಿಕೊಂಡಿದ್ದಾರೆ. ರಜೀತ್ ರಾಮ್ ಎನ್ನುವ ಓರ್ವ ಬಲಿದಾನಗೈದ ದಲಿತ ವೀರನನ್ನು ‘‘ರಜಿತ್‌ಬಾಬಾ’’ ಎಂದು ಅವತಾರ ಪುರುಷನಾಗಿ ಕಂಡು ಪೂಜಿಸಲಾಗುತ್ತಿದೆ! ದಕ್ಷಿಣ ಕನ್ನಡದಲ್ಲಿ ಜನಪದ ವೀರರಾದ ಕೋಟಿ-ಚೆನ್ನಯರನ್ನು ಆರಾಧಿಸುವಂತೆಯೇ, ದಲಿತ ವೀರರನ್ನು ಪೂಜಿಸುವ ಪದ್ಧತಿ ಅಲ್ಲಿ ರೂಢಿಯಾಗಿದೆ. ದಲಿತ ವೀರರ ಬಗ್ಗೆ, ದಾಖಲಾದ ಇತಿಹಾಸಕ್ಕಿಂತಲೂ ಹೆಚ್ಚಾಗಿ, ಮೌಖಿಕ ಸಾಹಿತ್ಯವೇ ಪ್ರಧಾನವಾಗಿದೆ. ಅದು ಅವರಿಗೆ ನ್ಯಾಯಯುತವಾಗಿ ಸ್ಥಾನ ನೀಡುವ ಪ್ರಯತ್ನದ ಭಾಗವಾಗಿದೆ. ದಲಿತ ಸಾಹಿತ್ಯದಲ್ಲಿ ಆ ವೀರರ ವೈಭವೀಕರಣ ಅತಿಯಾದರೂ, ಇತಿಹಾಸದಲ್ಲಿ ಅವರ ನಿರ್ಲಕ್ಷ್ಯವಾದರೂ, ಯಥಾರ್ಥವಾಗಿ 1857 ರಲ್ಲಿಯ ಅವರ ತ್ಯಾಗ ಹಾಗೂ ಹೋರಾಟದ ವೀರಗಾಥೆ ಇತಿಹಾಸ ಕಂಡ ಸತ್ಯ.

   

Leave a Reply