ಭಾರತೀಯ ಕ್ರೀಡಾಜಗತ್ತಿಗೆ ಅವಮಾನ

ಕ್ರೀಡೆ - 0 Comment
Issue Date :

ಭಾರತ ಒಲಿಂಪಿಕ್ ಸಂಸ್ಥೆ (ಐಒಎ)ಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಮಾನತಿನಲ್ಲಿಟ್ಟಿದೆ. ಇದೊಂದು ಭಾರತೀಯ ಕ್ರೀಡಾಜಗತ್ತಿಗೆ ಆದ ಅವಮಾನವೇ ಸರಿ. ಐಒಸಿಯ ಈ ನಿರ್ಧಾರದಿಂದಾಗಿ ಭಾರತದ ಕ್ರೀಡಾಪಟುಗಳು ಒಲಿಂಪಿಕ್ ಕ್ರೀಡೆಗಳಲ್ಲಿ ಇನ್ನು ಮುಂದೆ ಭಾರತದ ಧ್ವಜದಡಿಯಲ್ಲಿ ಸ್ಪರ್ಧಿಸದೆ ಐಒಸಿ ಹೆಸರಿನಲ್ಲಿ ಸ್ಪರ್ಧಿಸಬೇಕಾಗುತ್ತದೆ. ಆದರೆ ಅಂತಾರಾಷ್ಟ್ರೀಯ ಒಲಿಂಪಿಕ್ ತತ್ತ್ವಗಳ ಪ್ರಕಾರ, ಯಾವುದೇ ರಾಷ್ಟ್ರದ ಒಲಿಂಪಿಕ್ ಸಂಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು. ಭಾರತದ ಒಲಿಂಪಿಕ್ ಸಂಸ್ಥೆ ಸರ್ಕಾರದ ಕ್ರೀಡಾ ನೀತಿಯಡಿಯಲ್ಲಿ ಚುನಾವಣೆ ನಡೆಸುತ್ತದೆ ಎಂಬುದು ಐಒಸಿ ಅಭಿಮತ.
ಐಒಸಿಯ ತೆಗೆದುಕೊಂಡ ಇಂತಹ ಅಮಾನತಿನ ಕಠಿಣ ನಿರ್ಧಾರಕ್ಕೆ ಕಾರಣಗಳೂ ಇಲ್ಲದಿಲ್ಲ. ಐಒಎ ಹಿಂದಿನಿಂದಲೂ ಭ್ರಷ್ಟಾಚಾರ ಹಾಗೂ ದುರಾಡಳಿತದಲ್ಲೇ ಮುಳುಗಿತ್ತು. ಐಒಎ ಅಧ್ಯಕ್ಷ ಸುರೇಶ್ ಕಲ್ಮಾಡಿ ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಸೇರಿದ್ದರು. ಕಲ್ಮಾಡಿಗೆ ಈ ವಿಷಯದಲ್ಲಿ ಸಾಥ್ ನೀಡಿದ ಐಒಎ ಪ್ರಧಾನ ಕಾರ್ಯದರ್ಶಿ ಲಲಿತ್ ಭಾನೊಟ್ ಕೂಡ ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಸೇರಿ ಈಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದರು. ಹೀಗಿದ್ದರೂ ಅವರು ಮತ್ತೆ ಐಒಎ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಭಾನೊಟ್ ಅವರನ್ನು ಬೆಂಬಲಿಸಿದ ಅಭಯ್‌ಸಿಂಗ್ ಚೌತಾಲಾ ಗುಂಪು ಅವಿರೋಧವಾಗಿ ಆಯ್ಕೆಯಾಗಿತ್ತು. ಈ ಅಪಸವ್ಯಗಳನ್ನು ಗಮನಿಸಿಯೇ ಐಒಸಿ ಅಮಾನತಿನಂಥ ಕಠಿಣ ನಿರ್ಧಾರ ಕೈಗೊಂಡಿದೆ.
ಐಒಎ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ನಿತ್ಯದ ಆಡಳಿತದಲ್ಲಿ ಐಒಸಿ ಮೂಲ ನಿಯಮಗಳಿಗೆ ಅಡ್ಡಿಯಾಗಬಾರದು. ಸರ್ಕಾರದ ಹಸ್ತಕ್ಷೇಪ ಇರಲೇಕೂಡದು. ಇದು ಐಒಸಿಯ ತಾಕೀತು. ಆದರೆ ಐಒಎ ಮಾತ್ರ ಸರ್ಕಾರ ಹೇಳಿದಂತೆ ಬಾಲವಾಡಿಸುತ್ತ, ಅದರ ಕೃಪಾಕಟಾಕ್ಷಕ್ಕೆ ಕಾಯುತ್ತಾ ಪಾರದರ್ಶಕ ಆಡಳಿತಕ್ಕೆ ತಿಲಾಂಜಲಿ ನೀಡಿರುವುದು ಭಾರತದ ಕ್ರೀಡಾಕ್ಷೇತ್ರದ ದೊಡ್ಡ ದುರಂತ. ಐಒಎ ಈಗ ಒಡೆದ ಮನೆ. ಒಂದು ಗುಂಪು ಭಾನೊಟ್ ಪರವಾಗಿದೆ. ಕಲ್ಮಾಡಿ ಜೈಲಿಗೆ ಹೋಗಿದ್ದಾಗ ಹಂಗಾಮಿ ಅಧ್ಯಕ್ಷರಾಗಿದ್ದ ವಿ.ಕೆ.ಮಲ್ಹೋತ್ರಾ ಮೊದಲಿನಿಂದಲೂ ಕೇಂದ್ರ ಕ್ರೀಡಾ ಇಲಾಖೆಯ ಕ್ರೀಡಾ ನೀತಿ ಜಾರಿಗೆ ವಿರುದ್ಧವಾಗಿಯೇ ಇದ್ದರು. ಆರ್ಥಿಕ ನೆರವಿಗೆ ಸರ್ಕಾರವನ್ನು ನೆಚ್ಚಿಕೊಂಡಿರವ ಐಒಎ ಪಾರರ್ಶಕವಾಗಿ ಆಡಳಿತ ನಡೆಸಿದ್ದರೆ, ಕ್ರೀಡಾ ನೀತಿಯನ್ನು ಒಪ್ಪಿಕೊಳ್ಳುವಂತೆ ಸರ್ಕಾರ ಒತ್ತಡ ಹೇರುವ ಸಂದರ್ಭ ಬರುತ್ತಿರಲಿಲ್ಲ. ಐಒಸಿ ಕೈಗೊಂಡ ಕ್ರಮವನ್ನು ದೇಶದ ಹಲವು ಹಿರಿಯ ಕ್ರೀಡಾಪಟುಗಳು ಸ್ವಾಗತಿಸಿರುವುದರಲ್ಲಿ ಖಂಡಿತ ಅರ್ಥವಿದೆ. ಕ್ರೀಡೆಯಲ್ಲಿ ರಾಜಕೀಯ ಹಾಗೂ ಭ್ರಷ್ಟಾಚಾರ ಖಂಡಿತ ಇರಕೂಡದು ಎಂಬ ಅವರ ಆಶಯ ಇದರ ಹಿಂದಿದೆ.
ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಮಾತ್ರವಲ್ಲ , ಹಾಕಿ, ಕ್ರಿಕೆಟ್, ಟೆನ್ನಿಸ್ ಮುಂತಾದ ಸಂ್ಥೆಗಳಲ್ಲೂ ರಾಜಕೀಯ ಹಾಗೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದ್ದು, ಪ್ರತಿಭಾವಂತ ಆಟಗಾರರಿಗೆ ಮಿಂಚಲು ಅವಕಾಶಗಳೇ ದೊರೆಯುತ್ತಿಲ್ಲ. ಕ್ರಿಕೆಟ್ ಅಂತೂ ಭಾರತದಲ್ಲಿ ಒಂದು ಕ್ರೀಡೆ ಎನಿಸಿಕೊಳ್ಳದೆ ಅದೊಂದು ಜೂಜು ಎಂದಾಗಿರುವುದು ಈಗಲ್ಲ. ಕ್ರಿಕೆಟ್ ಅಭಿಮಾನಿಗಳಿಗೂ ಈಗೀಗ ಅದರ ಮೇಲಿನ ವ್ಯಾಮೋಹ ಕರಗತೊಡಗಿದೆ. ಭಾರತ ಪಂದ್ಯಗಳಲ್ಲಿ ಗೆದ್ದರೂ ಅದು ನಿಜವಾದ ಗೆಲುವೇ ಅಥವಾ ಮ್ಯಾಚ್ ಫಿಕ್ಸಿಂಗ್ ಇರಬಹುದೇ ಎಂಬ ಅನುಮಾನಗಳು ಅಭಿಮಾನಿಗಳ ಮನದಲ್ಲಿ ಕಾಡುತ್ತಿರುವುದು ಸಹಜವೇ. ಭಾರತದಲ್ಲಿ ಕ್ರೀಡಾಕ್ಷೇತ್ರ ಕುಂಟುತ್ತಿರುವುದಕ್ಕೆ ಇದೇ ಕಾರಣ. ಅದೇನೇ ಇರಲಿ, ಐಒಎ ಮೇಲಿನ ಅಮಾನತು ಆದೇಶವನ್ನು ತೆರವುಗೊಳಿಸುವಂತೆ ಸರ್ಕಾರವೂ ಪ್ರಯತ್ನಿಸಬೇಕಾಗಿದೆ. ಭಾರತದ ಕ್ರೀಡಾ ರಂಗಕ್ಕೆ ಇಂತಹದೊಂದು ಕಳಂಕ ಅಂಟುವುದು ಖಂಡಿತ ಬೇಡ.

   

Leave a Reply